ಹಲ್ಮಿಡಿ ಶಾಸನ
ಹಲ್ಮಿಡಿ ಶಾಸನ ಕನ್ನಡ ಲಿಪಿಯಲ್ಲಿ ರಚಿಸಲ್ಪಟ್ಟಿರುವ ಮೊಟ್ಟ ಮೊದಲ ಶಾಸನ ಎಂದು ೨೦೧೭ವರೆಗೂ ದಾಖಲಾಗಿತ್ತು (ಭಾರತೀಯ ಸರ್ವೇಕ್ಷಣಾ ಇಲಾಖೆ ತಾಳಗುಂದದ ಶಾಸನ ಕನ್ನಡದ ಮೊಟ್ಟಮೊದಲ ಶಾಸನ ಎಂದು ಘೋಷಿಸಿತು). ಇದು ಹಾಸನ ಜಿಲ್ಲೆಯ ಬಳಿಯಲ್ಲಿರುವ ಹಲ್ಮಿಡಿ ಎಂಬ ಸ್ಥಳದಲ್ಲಿ ೧೯೩೬ರಲ್ಲಿ ಡಾ. ಎಂ. ಎಚ್. ಕೃಷ್ಣ ಎಂಬುವವರಿಂದ ಸಂಶೋಧಿಸಲ್ಪಟ್ಟಿತು. ಇದು ಹದಿನಾರು ಸಾಲುಗಳನ್ನು ಹೊಂದಿದ್ದು, ಮರಳ ಶಿಲ್ಪದ ಮೇಲೆ ಕೆತ್ತಲ್ಪಟ್ಟಿದೆ. ಇದು ಹಳಗನ್ನಡ ಹಾಗೂ ಬ್ರಾಹ್ಮೀ ಲಿಪಿಗಳನ್ನು ಹೋಲುವಂತಹ ಕನ್ನಡ ಲಿಪಿಯಲ್ಲಿದೆ. ಕದಂಬ ವಂಶದ ಕಾಕುಸ್ಥವರ್ಮ ಬರೆಸಿದ ದತ್ತಿಶಾಸನ ಇದಾಗಿದೆ. ಶತೃರಾಜರ ಮೇಲೆ ಹೋರಾಡಿ ಗೆದ್ದ ವಿಜಯರಸ ಎಂಬ ಯೋಧನಿಗೆ, ಪಲ್ಮಿಡಿ ಮತ್ತು ಮೂಳಿವಳ್ಳಿಯನ್ನು ದತ್ತಿಯಾಗಿ ಬಿಟ್ಟ ರಾಜಾಜ್ಞೆಯನ್ನು ಈ ಶಾಸನ ನಿರೂಪಿಸುತ್ತದೆ. ಹಲ್ಮಿಡಿ ಶಾಸನ ಸಂಸ್ಕೃತ ಪ್ರಭಾವಕ್ಕೆ ಒಳಗಾಗಿದ್ದರೂ, ಆ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರೌಢ ಕನ್ನಡವನ್ನು ನಿರೂಪಿಸುತ್ತದೆ.ಕೆತ್ತಿದವರು ಕವಿಕುಬ್ಜ.
ಕನ್ನಡದ ಪ್ರಥಮ ಶಿಲಾ ಶಾಸನ
[ಬದಲಾಯಿಸಿ]- ಕನ್ನಡಕ್ಕೆ ಶಾಸ್ತ್ರೀಯ ಗರಿಮೆ ದೊರಕಿಸಿಕೊಡುವಲ್ಲಿ ಕನ್ನಡದ ಹಲವು ಸಾಹಿತ್ಯ ಪ್ರಥಮಗಳು ಮುನ್ನುಡಿಯಾಗಿವೆ. ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ ವಡ್ಡಾರಾಧನೆ ಕನ್ನಡದ ಮೊದಲ ಗದ್ಯವಾದರೆ, ಕವಿರಾಜಮಾರ್ಗ ಕನ್ನಡದ ಮೊದಲ ಕಾವ್ಯ ಅಥವಾ ಛಂದಸ್ಸು (ವ್ಯಾಕರಣ) ಎನ್ನುವ ಹಿರಿಮೆಗೆ ಪಾತ್ರವಾಗಿದೆ. ಇತಿಹಾಸವು ಹೇಳುವಂತೆ ಶಾತವಾಹನ ರಾಜ ವಂಶದ ನಂತರ ಪಟ್ಟಕ್ಕೆ ಬಂದ ಕದಂಬರು ಕನ್ನಡವನ್ನು ನಾಡು ನುಡಿಯನ್ನಾಗಿಸಲು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈಗಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿ ಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡ ನಂತರ ತಮ್ಮ ಆಳ್ವಿಕೆಯನ್ನು ದಕ್ಷಿಣ ಒಳನಾಡಿನವರೆಗೂ ವಿಸ್ತರಿಸಿ ಅಲ್ಲಲ್ಲಿ ಸಾಮಂತರನ್ನೂ, ಅಧಿಕಾರಿಗಳನ್ನೂ ನೇಮಿಸಿ ತಮ್ಮ ರಾಜ್ಯವ್ಯಾಪ್ತಿಯನ್ನು ಹೆಚ್ಚಿಸಿಕೊಂಡು ಕನ್ನಡ ನುಡಿಯ ಬೆಳವಣಿಗೆಗಾಗಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದಾರೆ.
ಕದಂಬರ ಕಾಲದ ಕನ್ನಡವನ್ನು ಪೂರ್ವ ಹಳಗನ್ನಡವೆಂದು ತಿಳಿಯಲಾಗಿದೆ. ಕದಂಬರ ಕಾಲದ ಕನ್ನಡ ಲಿಪಿ ಹಳಗನ್ನಡದ ಲಿಪಿಗಿಂತಲೂ ವಿಭಿನ್ನವಾಗಿ ಕಂಡುಬರುತ್ತದೆ . ಇಲ್ಲಿಯವರೆಗಿನ ಸಂಶೋಧನೆಗಳ ಪ್ರಕಾರ ಇಂತಹ ಲಿಪಿಯಲ್ಲಿ ದೊರೆತಿರುವ ಕನ್ನಡದ ಅಂತ್ಯಂತ ಹಳೆಯ ಶಿಲಾ ಶಾಸನ "ಹಲ್ಮಿಡಿ ಶಾಸನ" . ಈ ಶಾಸನದ ಕಾಲವನ್ನು ಕ್ರಿ.ಶ. ೪೫೦ ಎಂದು ಅಂದಾಜಿಸಲಾಗಿದೆ. ಶಾಸನದಲ್ಲಿ ದೊರೆತಿರುವ ಕೆಲವು ಮಾಹಿತಿಗಳ ಆಧಾರದಲ್ಲಿ ಈ ಕಾಲವನ್ನು ಹೇಳಲಾಗಿದ್ದು , ಇದು ಕನ್ನಡದ ಪ್ರಥಮ ಶಿಲಾ ಶಾಸನವೆಂಬ ಹಿರಿಮೆಗೂ ಪಾತ್ರವಾಗಿದೆ.
ಊರಿನ ಪರಿಚಯ
[ಬದಲಾಯಿಸಿ]ಹಲ್ಮಿಡಿ ಎಂಬುದು ಒಂದು ಊರಿನ ಹೆಸರಾಗಿದ್ದು, ಈ ಊರು ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನಲ್ಲಿದೆ. ಹಾಸನ-ಬೇಲೂರು-ಚಿಕ್ಕಮಗಳೂರು ಹೆದ್ದಾರಿಯಲ್ಲಿ ಬಂದರೆ, ಬೇಲೂರಿನಿಂದ ೧೩ ಕಿ.ಮೀ ಅಂತರದಲ್ಲಿ ಹಲ್ಮಿಡಿ ಗೆ ಹೋಗುವ ದಾರಿಯ ದೊಡ್ಡ ಫಲಕ ಕಾಣುತ್ತದೆ. ಅಲ್ಲಿಂದ ಒಳಗೆ ೬ ಕಿ.ಮೀ. ತೆರಳಿದರೆ, ಹಲ್ಮಿಡಿಯನ್ನು ತಲುಪಬಹುದು. ಶಾಸನದ ಸ್ಥಳವನ್ನು ಸ್ಥಳೀಯರು ತೋರಬಲ್ಲರು. ಇಲ್ಲಿ ದೊರೆತಿರುವ ಈ ಶಿಲಾ ಶಾಸನ, ಇದೇ ಪ್ರದೇಶದ ವಿವರಗಳನ್ನು ಒಳಗೊಂಡಿರುವುದರಿಂದ ಈ ಊರಿಗೂ ಪ್ರಾಮುಖ್ಯತೆ ಬಂದಿದೆ.
ಹಿನ್ನೆಲೆ
[ಬದಲಾಯಿಸಿ]ಕ್ರಿ.ಶ. ೪೫೦ ನೆಯ ಇಸವಿಯಲ್ಲಿ ಕೆತ್ತಲ್ಪಟ್ಟಿರುವ ಈ ಶಾಸನವು ಕದಂಬರ ರಾಜ ’ಕಾಕುಸ್ಥ(ತ್ಸ)ವರ್ಮನ ಅಧಿಪತ್ಯವನ್ನು ಹೇಳುತ್ತದೆ. ಈ ಶಾಸನ ’ವೀರಗಲ್ಲು’ (Hero Stone) ಎಂದೂ ಪರಿಗಣಿಸಲ್ಪಟ್ಟಿದೆ. ಚಿತ್ರದಲ್ಲಿ ಕಾಣುವಂತೆ ಕನ್ನಡ ಲಿಪಿಯು ’ಪಲ್ಲವ ಗ್ರಾಂಥಿಕ’ (elongated sricpts) ರಚನೆಯನ್ನು ಹೋಲುವಂತಿದ್ದು, ಇದು ಕದಂಬರ ಕಾಲದ ಕನ್ನಡ ಲಿಪಿಯೆಂದು ಹೇಳಲಾಗಿದೆ. ಲಿಪಿಯು ವಿಭಿನ್ನವಾಗಿದ್ದರೂ ಸಹ ಶಾಸನದಲ್ಲಿರುವ ವಿಷಯ ಮತ್ತು ನುಡಿಯು ಕನ್ನಡ ನಾಡಿನ ಹಿರಿಮೆಯನ್ನು ತಿಳಿಸುತ್ತದೆ. ಈ ಶಾಸನದ ತಿರುಳನ್ನು ಹೊಸ ಗನ್ನಡ ನುಡಿಯಲ್ಲಿ ಕೆತ್ತಿಸಿ ಇಲ್ಲಿ ಸಂರಕ್ಷಿಸಿಡಲಾಗಿದೆ. ಮೂಲ ಶಾಸನವನ್ನು ಬೆಂಗಳೂರಿನ ರಾಜ್ಯ ಪುರಾತತ್ವ ಸರ್ವೇಕ್ಷಣದ ವಸ್ತುಸಂಗ್ರಹಾಲಯದಲ್ಲಿ ರಕ್ಷಿಸಿಡಲಾಗಿದೆ. ಈ ಶಾಸನ ದೊರೆತದ್ದು ಇದೇ ಊರಿನ ವೀರಭದ್ರೇಶ್ವರ ದೇವಾಲಯದ ಆವರಣದಲ್ಲಾದ್ದರಿಂದ ಈ ದೇವಾಲಯದ ಪಕ್ಕದಲ್ಲಿ ಜಿಲ್ಲಾ ಸಾಹಿತ್ಯ ಪರಿಷತ್ತು ಮತ್ತು ಸಂಘ-ಸಂಸ್ಥೆಗಳ ನೆರವಿನಿಂದ ಒಂದು ಸ್ಮಾರಕವನ್ನು ನಿರ್ಮಿಸಿ ಶಾಸನ ದೊರೆತ ಸ್ಥಳಕ್ಕೆ ಕಾಯಕಲ್ಪ ನೀಡಲಾಗಿದೆ. ಈ ಊರು ಇನ್ನೂ ಸಾಕಷ್ಟು ಮೂಲ ಸೌಕರ್ಯಗಳನ್ನು ಕಾಣಬೇಕಿದೆ. ಹಲ್ಮಿಡಿ ಎಂಬ ಹೆಸರು ಪಲ್ಮಿಡಿ ಎಂಬುದರ ರೂಪಾಂತರವೆಂಬುದನ್ನು ಶಾಸನದಿಂದಲೇ ತಿಳಿಯಬಹುದು.
ಶಾಸನ ಪಠ್ಯ
[ಬದಲಾಯಿಸಿ]೧.ಜಯತಿ ಶ್ರೀ ಪರಿಷ್ವರ್ಙ್ಗ ಶ್ಯಾರ್ಙ್ಗ [ವ್ಯಾ]ನತಿರ್ ಅಚ್ಯುತಃ ದಾನಕ್ಷೆರ್ ಯುಗಾನ್ತಾಗ್ನಿಃ [ಶಿಷ್ಟಾನಾನ್ತು ಸುದರ್ಶನಃ ನಮಃ ೨.ಶ್ರೀಮತ್ ಕದಂಬಪನ್ ತ್ಯಾಗ ಸಂಪನ್ನನ್ ೩.ಕಲಭೋg[ನಾ] ಅರಿ ಕಕುಸ್ಥಭಟ್ಟೋರನ್ ಆಳೆ ೪.ನರಿದಾವಿ[ಳೆ] ನಾಡುಳ್ ಮೃಗೇಶನಾಗೇನ್ದ್ರಾಭೀಳರ್ ೫.ಭ್ಭಟಹರಪ್ಪೋರ್ ಶ್ರೀ ಮೃಗೇಶ ನಾಗಾಹ್ವಯರ್ ೬.ಇರ್ವ್ವರಾ ಬಟರಿ ಕುಲಾಮಲ ವ್ಯೋಮತಾರಾಧಿನಾಥನ್ ೭.ಅಳಪ ಗಣ ಪಶುಪತಿಯಾ ದಕ್ಷಿಣಾಪಥ ೮.ಬಹುಶತಹವನಾಹವದು[ಳ್] ಪಶುಪ್ರದಾನ ೯.ಶೌರ್ಯ್ಯೋದ್ಯಮ ಭರಿತೋ[ನ್ದಾನ]ಪಶುಪತಿಯೆನ್ದು ೧೦.ಪೊಗೞೆಪ್ಪೊಟ್ಟಣ ಪಶುಪತಿ ನಾಮಧೇಯನ್ ೧೧.ಆಸರಕ್ಕೆಲ್ಲಭಟರಿಯಾ ಪ್ರೇಮಾಲಯಸುತನ್ಗೆ ಸೇನ್ದ್ರಕ ೧೨.ಬಣೋಭಯ ದೇಶದಾ ವೀರಪುರುಷಸಮಕ್ಷದೆ ೧೩.ಕೇಕಯ ಪಲ್ಲವರಂ ಕಾದೆಱದು ಪೆತ್ತಜಯನಾ ವಿಜ ೧೪.ಅರಸಂಗೆ ಬಾಳ್ಗೞ್ಚು ಪಲ್ಮಡಿಉಂ ಮೂೞುವಳ್ಳಿಉಂ ೧೫.ಕೊಟ್ಟಾರ್ ಬಟಾರಿ ಕುಲದೊನಳ ಕದಂಬನ್ ೧೬.ಕೞ್ದೋನ್ ಮಹಾಪಾತಕನ್ ಸ್ವಸ್ತಿ ಭಟ್ಟರ್ಗ್ಗೀಗೞ್ದೆ ಒಡ್ಡಲಿ ಆ ಪತ್ತೊನ್ದಿ ವಿಟ್ಟಾರಕ[೧]
ಶಾಸನದ ತಿರುಳು
[ಬದಲಾಯಿಸಿ]ಹಲ್ಮಿಡಿ ಶಾಸನದ ತಿರುಳು ಹೀಗಿದೆ- ಮೊದಲೆರಡು ಸಾಲುಗಳಲ್ಲಿ ಅಚ್ಯುತನ ಧ್ಯಾನವನ್ನು ಹೇಳಲಾಗಿದೆ. "ಲಕ್ಷ್ಮಿಯೊಡನಿರುವ ಅಚ್ಯುತನು ಶ್ಯಾಙ್ಗ ವೆಂಬ ಬಿಲ್ಲನ್ನು ಬಗ್ಗಿಸಿ ಹಿಡಿದಿದ್ದು ದಾನವರಿಗೆ ಪ್ರಳಯ ಕಾಲದ ಅಗ್ನಿಯಂತೆಯೂ ಸಜ್ಜನರಿಗೆ ಸುದರ್ಶನ ಚಕ್ರದಂತೆಯೂ ತೋರುತ್ತಾನೆ " . ನಂತರದ ಸಾಲುಗಳು ರಾಜನಿಗೆ ನಮನಗಳನ್ನು ಸಲ್ಲಿಸಿ, ಅಲ್ಲಿ ನಡೆದ ಘಟನಾವಳಿಯನ್ನು ತೆರೆದಿಡುತ್ತದೆ. " ಕದಂಬರಾಜ, ತ್ಯಾಗಸಂಪನ್ನ, ಕಲಭೋರನ ಶತ್ರು ಎಂದೆನಿಸಿರುವ ಕಕುಸ್ಥ(ತ್ಸ) ಭಟ್ಟೋರಕನು ಆಳುತ್ತಿದ್ದ ಕಾಲ. ಅವನ ಅಧೀನದಲ್ಲಿ ’ನರಿದಾವಿಳೆ ನಾಡಿನಲ್ಲಿ’ ( ಇಲ್ಲಿಯ ಸುತ್ತಲಿನ ಒಟ್ಟು ಪ್ರದೇಶ) ಮೃಗೇಶ ಮತ್ತು ನಾಗ ಎಂಬ ಅಧಿಕಾರಿಗಳಿದ್ದರು. ಅವರು ಮೃಗರಾಜ ಮತ್ತು ಸರ್ಪರಾಜರಂತೆ ವೈರಿಗಳಿಗೆ ಭಯಂಕರರೆನಿಸಿದ್ದರು. ಇವರ ಅಧೀನದಲ್ಲಿ ’ಕೀರ್ತಿಗೊಂಡ ಭಟರಿ’ ವಂಶವೆಂಬ ನಿರ್ಮಲಆಕಾಶಕ್ಕೆ ಚಂದ್ರನಂತೆ ಹೊಳೆಯುವ ಪಶುಪತಿ ಎಂಬ ಹೆಸರಿನವನಿದ್ದ. ಅಳೂಪ ವಂಶ ಸಮೂಹಕ್ಕೆ ಇವನು ಶಿವ (ಪಶುಪತಿ) ನಂತಿದ್ದ. ಪ್ರಸಿದ್ದವಾದ ದಕ್ಷಿಣಾ ಪಥದಲ್ಲಿ ನೂರಾರು ಯುದ್ಧಗಳೆಂಬ ಯಙ್ಞ ಮಾಡಿ ಬಲಿದಾನ ಮಾಡಿ ಶೌರ್ಯ ತೋರಿದ್ದ. ದಾನ ಪಶುಪತಿ ಎಂದು ಹೊಗಳಲ್ಪಟ್ಟಿದ್ದ. ಅವನು ’ಸೇಂದ್ರಕರು’ ಮತ್ತು ’ಬಾಣರ’ ಸೈನ್ಯವನ್ನು ಸೇರಿಸಿಕೊಂಡು ಕೇಕಯ ಪಲ್ಲವರೆದುರು ಕದಂಬರ ಪರವಾಗಿ ಯುದ್ದಮಾಡಿ ಜಯ ತಂದುಕೊಟ್ಟ. ಅದಕ್ಕಾಗಿ ’ಸೇಂದ್ರಕ’ ಮತ್ತು ’ಬಾಣ’ ದೇಶದ ಜನರ ಸಮ್ಮುಖದಲ್ಲಿ ಪಲ್ಮಡಿ(ಹಲ್ಮಿಡಿ) ಯನ್ನೂ ಮೂಳಿವಳ್ಳಿ ( ಇಂದಿನ ಮುಗುಳುವಳ್ಳಿ) ಯನ್ನೂ ಅವನ ಅಧೀನಕ್ಕೆ ಪ್ರೀತಿ ಪೂರ್ವಕವಾಗಿ ಕೊಡಲಾಯಿತು. ಇದು ವೀರನ ಕತ್ತಿ ತೊಳೆದು ವೀರದಾನ ಕೊಡುವ ಸಮಾರಂಭವಾಗಲು ನಾಡ ಅಧಿಕಾರಿಗಳಾದ ಶ್ರೀ ಮೃಗೇಶ ಮತ್ತು ನಾಗ ಅವರುಗಳು ಹಾಜರಿದ್ದು ಆ ಗ್ರಾಮಗಳನ್ನು ವಿಜಯಿಗೆ ನೀಡಿದರು. ಈ ದಾನವನ್ನು ಕದ್ದವನಿಗೆ ಪಾಪ ಬರುತ್ತದೆ. ಸೈನ್ಯದ ತೆರಿಗೆ ಅಧಿಕಾರಿಗಳಾಗಿದ್ದ ಮೃಗೇಶ ಮತ್ತು ನಾಗರು ಹಲ್ಮಿಡಿಯ ’ಕುರುಬ’ರಿಗೆ ಪ್ರೀತಿಯಿಂದ ತೆರಿಗೆ ವಿನಾಯಿತಿಯಾದ ’ಕುರುಂಬಿಡಿ’ ಯನ್ನು ಬಿಟ್ಟರು. ಇದನ್ನು ಕೆಡಿಸಿದವನಿಗೆ ಮಹಾಪಾತಕವು ಉಂಟಾಗುತ್ತದೆ. " ಎಂದು ಬರೆಸಲಾಗಿದೆ. ಮುಂದೆ ಎಡಪಕ್ಕದಲ್ಲಿ ಇನ್ನೊಂದು ಸಾಲನ್ನು ಬರೆದಿದ್ದಾರೆ. ಅದು ಹೀಗಿದೆ.. " ಇಲ್ಲಿನ ಗದ್ದೆಯ ಉತ್ಪನ್ನದಲ್ಲಿ ಭಟ್ಟರಿಗೆ (ಬ್ರಾಹ್ಮಣರಿಗೆ) ಹತ್ತನೆಯ ಒಂದು ಭಾಗದ ತೆರಿಗೆ ವಿನಾಯಿತಿಯನ್ನು ಕೊಟ್ಟರು " . ಇದು ಈ ಶಾಸನದ ತಿರುಳು.
ಹೆಚ್ಚಿನ ಮಾಹಿತಿ
[ಬದಲಾಯಿಸಿ]ಉಲ್ಲೇಖ
[ಬದಲಾಯಿಸಿ][೧] classicalkannada Archived 2013-05-06 ವೇಬ್ಯಾಕ್ ಮೆಷಿನ್ ನಲ್ಲಿ.