ಕದಂಬ ರಾಜವಂಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕದಂಬರು ಇಂದ ಪುನರ್ನಿರ್ದೇಶಿತ)
ಕರ್ನಾಟಕದ ಇತಿಹಾಸ
 - 
ಕರ್ನಾಟಕದ ಹೆಸರಿನ ಮೂಲ
ಕದಂಬ ಸಾಮ್ರಾಜ್ಯ ಮತ್ತು ಗಂಗ ಸಾಮ್ರಾಜ್ಯ
ಚಾಲುಕ್ಯ ಸಾಮ್ರಾಜ್ಯ
ರಾಷ್ಟ್ರಕೂಟ ಸಾಮ್ರಾಜ್ಯ
ಕಲ್ಯಾಣಿಯ ಚಾಲುಕ್ಯ ಸಾಮ್ರಾಜ್ಯ
ವೆಂಗಿಯ (ಪೂರ್ವ) ಚಾಲುಕ್ಯರು ಸಾಮ್ರಾಜ್ಯ
ಹೊಯ್ಸಳ ಸಾಮ್ರಾಜ್ಯ
ವಿಜಯನಗರ ಸಾಮ್ರಾಜ್ಯ
ಬಹಮನಿ ಸುಲ್ತಾನರ ಆಳ್ವಿಕೆ
ಬಿಜಾಪುರದ ಬಹಮನಿ ಸುಲ್ತಾನರ ಆಳ್ವಿಕೆ
ಮೈಸೂರು ಸಂಸ್ಥಾನ
ಕರ್ನಾಟಕದ ಏಕೀಕರಣ
ವಾಸ್ತು ಶಿಲ್ಪ    ಕೋಟೆಗಳು    ರಾಜ ಮಹಾರಾಜರು

'ಕದಂಬ' ವಂಶವು ಕನ್ನಡದ ಮೊಟ್ಟ ಮೊದಲ ರಾಜ ವಂಶ. ಕನ್ನಡದಲ್ಲಿ ದೊರೆತಿರುವ ತುಂಬಾ ಹಳೆಯ ಕಲ್ಬರಹವಾದ ತಾಳಗುಂದ ಕಲ್ಬರಹ ವು (ಇದು ಹಲ್ಮಿಡಿ ಶಾಸನ ಕ್ಕಿಂತಲೂ ಹಳೆಯದು) ಕದಂಬರ ಆಳ್ವಿಕೆಯ ಕಾಲಕ್ಕೆ ಸೇರಿದ್ದಾಗಿದೆ.[೧]

ಕದಂಬರು (ಕ್ರಿ.ಶ.೩೪೫-೫೪೦) ಇಂದಿನ ಉತ್ತರ ಕನ್ನಡ ಜಿಲ್ಲೆಯ ಬನವಾಸಿಯಿಂದ ಆಳುತ್ತಿದ್ದ ಕರ್ನಾಟಕದ ಒಂದು ಪುರಾತನ ರಾಜವಂಶ. ಮುಂದೆ ಚಾಲುಕ್ಯ ಮತ್ತು ರಾಷ್ಟ್ರಕೂಟ ಸಾಮ್ರಾಜ್ಯಗಳ ಸಾಮಂತರಾಗಿ ಆಳ್ವಿಕೆ ಮುಂದುವರಿಸಿದ ಕದಂಬರರ ರಾಜ್ಯ ಗೋವಾ ಮತ್ತುಹಾನಗಲ್ ಗಳಲ್ಲಿ ಶಾಖೆಗಳನ್ನು ಹೊಂದಿತು. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕದಂಬರ ರಾಜ್ಯ ಕರ್ನಾಟಕದ ಅನೇಕ ಭಾಗಗಳನ್ನೊಳಗೊಂಡಿತ್ತು. ಕದಂಬರ ಪೂರ್ವದ ರಾಜ ವಂಶಗಳಾದ ಮೌರ್ಯರು, ಶಾತವಾಹನರು ಮೂಲತಃ ಕರ್ನಾಟಕದ ಹೊರಗಿನವರಾಗಿದ್ದು, ಅವರ ರಾಜ್ಯದ ಕೇಂದ್ರಬಿಂದು ಕರ್ನಾಟಕದ ಹೊರಗಿತ್ತು. ಕನ್ನಡವನ್ನು ರಾಜ್ಯಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ಪ್ರದೇಶದ ಬೆಳವಣಿಗೆಯ ಅಧ್ಯಯನದಲ್ಲಿ , ಬಹಳ ಕಾಲ ಬಾಳಿದ ಸ್ಥಳೀಯ ರಾಜಕೀಯ ಶಕ್ತಿಯಾಗಿ ಮತ್ತು ಕನ್ನಡ ಒಂದು ಪ್ರಮುಖ ಪ್ರಾದೇಶಿಕ ಭಾಷೆಯಾಗಿ ಬೆಳೆದ ಈ ಕಾಲಮಾನ, ಕರ್ನಾಟಕದ ಇತಿಹಾಸದಲ್ಲಿ,ಸರಿಸುಮಾರು ಐತಿಹಾಸಿಕ ಪ್ರಾರಂಭದ ಕಾಲವಾಗಿದೆ. ಕ್ರಿ.ಶ. ೩೪೫ರಲ್ಲಿ ಮಯೂರಶರ್ಮನಿಂದ ಸ್ಥಾಪಿಸಲಾದ ಈ ರಾಜ್ಯವು, ಬೃಹತ್ ಸಾಮ್ರಾಜ್ಯವಾಗಿ ಬೆಳೆಯುವ ಲಕ್ಷಣವನ್ನು ಆಗಾಗ ತೋರಿಸುತ್ತಿತ್ತು. ಆಗಿನ ರಾಜರುಗಳ ಬಿರುದು ಬಾವಲಿಗಳೂ ಈ ವಿಷಯಕ್ಕೆ ಪುಷ್ಟಿ ಕೊಡುತ್ತವೆ.ಇದೇ ವಂಶದ ಕಾಕುಸ್ಥವರ್ಮನು ಬಲಾಢ್ಯ ಅರಸನಾಗಿದ್ದು, ಉತ್ತರದ ಗುಪ್ತ ಮಹಾಸಾಮ್ರಾಜ್ಯದ ದೊರೆಗಳು ಇವನೊಂದಿಗೆ ಲಗ್ನ ಸಂಬಂಧ ಇಟ್ಟುಕೊಂಡದ್ದು ಈ ರಾಜ್ಯದ ಘನತೆಯನ್ನು ಸೂಚಿಸುತ್ತದೆ. ಇದೇ ಪೀಳಿಗೆಯ ರಾಜ ಶಿವಕೋಟಿ ಪದೇಪದೇ ನಡೆಯುತ್ತಿದ್ದ ಯುದ್ಧ , ರಕ್ತಪಾತಗಳಿಂದ ಬೇಸತ್ತು ಜೈನ ಧರ್ಮಕ್ಕೆ ಮತಾಂತರಗೊಂಡ.ಕದಂಬರು, ಹಾಗೂ ಅವರ ಸಮಕಾಲೀನರಾಗಿದ್ದ ತಲಕಾಡು ಪಶ್ಚಿಮ ಗಂಗರು ಸಂಪೂರ್ಣ ಸ್ವತಂತ್ರ ರಾಜ್ಯಸ್ಥಾಪನೆ ಮಾಡಿದ ಸ್ಥಳೀಯರಲ್ಲಿ ಮೊದಲಿಗರು.[೧]

ಇತಿಹಾಸ[ಬದಲಾಯಿಸಿ]

ಕದಂಬ ರಾಜರುಗಳು (೩೪೫ -೫೨೫)
(ಬನವಾಸಿ ರಾಜರುಗಳು)
ಮಯೂರಶರ್ಮ (೩೪೫ - ೩೬೫)
ಕಂಗವರ್ಮ (೩೬೫ - ೩೯೦)
ಬಗೀತಾರ್ಹ (೩೯೦ -೪೧೫)
ರಘು (೪೧೫ - ೪೩೫)
ಕಾಕುಸ್ಥವರ್ಮ (೪೩೫ - ೪೫೫)
ಶಾಂತಿವರ್ಮ (೪೫೫ - ೪೬೦)
ಮೃಗೇಶವರ್ಮ (೪೬೦ - ೪೮೦)
ಶಿವಮಾಂಧಾತಿವರ್ಮ (೪೮೦ – ೪೮೫)
ರವಿವರ್ಮ (೪೮೫ – ೫೧೯)
ಹರಿವರ್ಮ (೫೧೯ – ೫೩೦)
(ತ್ರಿಪರ್ವತ ಶಾಖೆ)
ಒಂದನೆಯ ಕೃಷ್ಣ ವರ್ಮ (೪೩೦-೪೬೦)
ವಿಷ್ಣುವರ್ಮ (೪೬೦-೪೯೦)
ಸಿಂಹವರ್ಮ (೪೯೦-೫೧೬)
ಎರಡನೆಯ ಕೃಷ್ಣವರ್ಮ (೫೧೬-೫೨೬)
ಎರಡನೆಯ ಅಜವರ್ಮ () (ಹಾನಗಲ್ ಕದಂಬ ಶಾಖೆ)
ಆದ್ಯ ಚಟ್ಟಯ್ಯ ದೇವ ಅಥವಾ ಚಟ್ಟ ಅಥವಾ ಚಟ್ಟಿಗ (೯೭೨-೧೦೧೫)
ಕೀರ್ತಿವರ್ಮ (೧೦೬೮-೧೦೮೨)
ತೈಲ (೧೦೮೨-೧೧೩೦)
ಮಯೂರವರ್ಮ (೧೧೩೦-೧೧೩೨)
ಮಲ್ಲಿಕಾರ್ಜುನ (೧೧೩೨-೧೧೪೬)
ಒಂದನೆಯ ಪುಲಿಕೇಶಿ
(ಚಾಲುಕ್ಯ)
(೫೪೩ - ೫೬೬)

ಕದಂಬರ ಮೂಲದ ಬಗ್ಗೆ ಹಲವಾರು ಐತಿಹ್ಯಗಳಿವೆ. ಒಂದು ಕಥೆಯ ಪ್ರಕಾರ ಈ ವಂಶದ ಮೂಲಪುರುಷ ತ್ರಿಲೋಚನ ಕದಂಬ (ಹಲಸಿ ಮತ್ತು ದೇಗಾಂವಿಯ ದಾಖಲೆಗಳ ಪ್ರಕಾರ ಇವನ ಹೆಸರು ಜಯಂತ). ಇವನಿಗೆ ಮೂರು ಕಣ್ಣುಗಳೂ ನಾಲ್ಕು ಕೈಗಳೂ ಇದ್ದವು. ಶಿವನ ಬೆವರು ಕದಂಬ ವೃಕ್ಷದ ಕೆಳಗೆ ಬಿದ್ದಾಗ ಹುಟ್ಟಿದವನು ಇವನು (ಎಂದೇ ಕದಂಬ ಎಂಬ ಹೆಸರು). ಇನ್ನೊಂದು ಕಥೆಯ ಪ್ರಕಾರ ಮಯೂರವರ್ಮನೇ ಶಿವ ಮತ್ತು ಭೂದೇವಿಯ ಮಗನಾಗಿ ಹುಟ್ಟಿ ಕದಂಬ ವಂಶವನ್ನು ಸ್ಥಾಪಿಸಿದ. ಇವನಿಗೂ ಮೂರು ಕಣ್ಣುಗಳಿದ್ದವು. ಕನ್ನಡ ಬ್ರಾಹ್ಮಣರ ಇತಿಹಾಸ ವಿವರಿಸುವ ಗ್ರಾಮ ಪದ್ಧತಿ ಎಂಬ ಕನ್ನಡ ಪುಸ್ತಕದ ಪ್ರಕಾರ, ಮಯೂರವರ್ಮನು ಶಿವಪಾರ್ವತಿಗೆ ಸಹ್ಯಾದ್ರಿ ಪರ್ವತಶ್ರೇಣಿಯ ಕದಂಬ ವೃಕ್ಷದ ಕೆಳಗೆ ಹುಟ್ಟಿದವನಾಗಿದ್ದ. ಇದೇ ವಂಶದ ಕುಡಿಯಾದ ನಾಗರಖಾಂಡ ಕದಂಬರೆಂಬ ವಂಶದ ಒಂದು ಶಾಸನದ ಪ್ರಕಾರ, ಈ ವಂಶದ ಮೂಲ ನಂದ ಸಾಮ್ರಾಜ್ಯದವರೆಗೂ ಹೋಗುತ್ತದೆ. ಮಕ್ಕಳಿಲ್ಲದ ರಾಜಾ ನಂದನು , ಮಕ್ಕಳಿಗಾಗಿ ಕೈಲಾಸದಲ್ಲಿ ಶಿವನನ್ನು ಪ್ರಾರ್ಥಿಸಲು, ಅವನಿಗೆ ಎರಡು ಮಕ್ಕಳಾಗುವುದಾಗಿಯೂ, ಅವರಿ ಕದಂಬ ಕುಲ ಎಂಬ ಹೆಸರು ಬರುವುದಾಗಿಯೂ, ಹಾಗೂ ಅವರಿಗೆ ಶಸ್ತ್ರ ವಿದ್ಯೆಯನ್ನು ಕಲಿಸಬೇಕೆಂದೂ ನಭೋವಾಣಿಯಾಯಿತು.[೧]

ಕದಂಬರ ಮೂಲದ ಬಗ್ಗೆ ಎರಡು ಸಿದ್ಧಾಂತಗಳಿವೆ. ಒಂದು ಕನ್ನಡ ಮೂಲ ಇನ್ನೊಂದು ಉತ್ತರ ಭಾರತ ಮೂಲ. ಆದರೆ ಉತ್ತರ ಭಾರತದ ಮೂಲದ ಬಗ್ಗೆ ಆ ವಂಶಪರಂಪರೆಯ ನಂತರದ ದಾಖಲೆಗಳಲ್ಲಿ ಮಾತ್ರ ಉಲ್ಲೇಖವಿದ್ದು, ಅದನ್ನು ಬರಿಯ ದಂತಕಥೆ ಎಂದು ಪರಿಗಣಿಸಲಾಗುತ್ತದೆ. ಇದರ ಮೊದಲ ಉಲ್ಲೇಖ ೧೦೫೩ ಮತ್ತು ೧೦೫೫ರ ಹರಿಕೇಸರಿ ದೇವನ ಶಾಸನಗಳಲ್ಲಿ ದೊರಕಿದ್ದು , ಮುಂದಿನ ಶಾಸನಗಳು ಇದನ್ನೇ ಮತ್ತೆ ಉಲ್ಲೇಖಿಸಿ, ಮಯೂರಶರ್ಮನು ಹಿಮಾಲಯದ ಮೇಲೆ ಅಧಿಪತ್ಯ ಸ್ಥಾಪಿಸಿದನು ಎಂದು ಬಣ್ಣಿಸುತ್ತವೆ. ಇದನ್ನು ಸಮರ್ಥಿಸುವ ಮತ್ತಾವುದೇ ದಾಖಲೆಗಳು ಕಂಡುಬರದೇ ಇದ್ದಕಾರಣ , ಈ ವಾದ ಹೆಚ್ಚು ವಿಶ್ವಾಸಾರ್ಹವಾಗಿಲ್ಲ. ಕೇವಲ ದಕ್ಷಿಣ ಭಾರತದಲ್ಲಿಯೇ ಕಂಡುಬರುವ ಕದಂಬ ವೃಕ್ಷದ ಹೆಸರು ಈ ವಂಶದ ದಕ್ಷಿಣ ಭಾರತ ಮೂಲವನ್ನು ಸೂಚಿಸುತ್ತದೆ.

ಕದಂಬರ ಜಾತಿಯ ಬಗ್ಗೆಯೂ ವಿದ್ವಾಂಸರಲ್ಲಿ ಭಿನ್ನಾಭಿಪ್ರಾಯವಿದೆ. ತಾಳಗುಂದ ಶಾಸನದ ಪ್ರಕಾರ ಕದಂಬರು ಮೂಲತಃ ಬ್ರಾಹ್ಮಣರಾದರೆ, ಅವರು ಆದಿವಾಸಿ ಜನಾಂಗಕ್ಕೆ ಸೇರಿದವರಾಗಿದ್ದರು ಎಂಬ ಅಭಿಪ್ರಾಯವೂ ಇದೆ. ಕದಂಬರು , ಇಂದಿನ ಕೇರಳ, ತಮಿಳುನಾಡುಪ್ರದೇಶದಲ್ಲಿ ರಾಜ್ಯವಾಳುತ್ತಿದ್ದ ಚೇರ ರಾಜರೊಂದಿಗೆ ಸಂಘರ್ಷದಲ್ಲಿದ್ದ, ಕಡಂಬು ಎಂಬ ಬುಡಕಟ್ಟಿಗೆ ಸೇರಿದವರು ಎಂಬ ಅಭಿಪ್ರಾಯವನ್ನೂ ಮಂಡಿಸಲಾಗಿದೆ. ಸುಬ್ರಹ್ಮಣ್ಯ ಮತ್ತು ಕದಂಬ ವೃಕ್ಷವನ್ನು ಮನೆದೇವರಾಗಿ ಪೂಜಿಸುವವರಾಗಿ ಕಡಂಬುಗಳ ಉಲ್ಲೇಖ ತಮಿಳಿನ ಸಂಗಮ ಸಾಹಿತ್ಯದಲ್ಲಿ ದೊರಕುತ್ತದ[೧]

ಕೆಲ ಇತಿಹಾಸಕಾರರು ಕದಂಬರ ಬ್ರಾಹ್ಮಣ ಮೂಲ, ಅವರನ್ನು ಉತ್ತರಭಾರತದ ಬೇರನ್ನು ಸೂಚಿಸುತ್ತದೆ ಎಂದು ವಾದಿಸಿದರೂ, ಅದಕ್ಕೆ ಪ್ರತಿಯಾಗಿ ಮಧ್ಯಯುಗದ ಮೊದಮೊದಲು ದ್ರಾವಿಡರನ್ನು ಬ್ರಾಹ್ಮಣ ಪಂಗಡಕ್ಕೆ ಸೇರಿಸಿಕೊಳ್ಳುವ ಪ್ರಕ್ರಿಯೆ ಇತ್ತು ಎಂಬ ವಾದವೂ ಇದೆ.

ಅದೇನೇ ಇದ್ದರೂ, ಸ್ಥಳೀಯ ಕನ್ನಡಿಗರಾಗಿದ್ದ ಕದಂಬರು ತಮ್ಮ ರಾಜ್ಯದ ಆಡಳಿತ ಮತ್ತು ರಾಜಕೀಯದಲ್ಲಿ ಕನ್ನಡಕ್ಕೆ ಪ್ರಧಾನ ಸ್ಥಾನ ಕೊಟ್ಟರು. ಇದನ್ನು ಗಮನಿಸಿದರೆ ಕದಂಬರು ಬ್ರಾಹ್ಮಣ ಕುಲಕ್ಕೆ ಬರಮಾಡಿಕೊಂಡ ಕನ್ನಡ ಭಾಷಿಕರಾಗಿದ್ದರು ಎಂದು ಸಿದ್ಧವಾಗುತ್ತದೆ ಎಂದು ಕೆಲ ವಿದ್ವಾಂಸರ ಅಭಿಮತ. ರಾಜಾ ಕೃಷ್ಣವರ್ಮನ ಮೊದಮೊದಲ ಶಾಸನಗಳಲ್ಲಿ ಕಂಡುಬರುವ ಕದಂಬರು ನಾಗರ ಪೀಳಿಗೆಯವರು ಎಂಬ ಉಲ್ಲೇಖ ಕೂಡಾ ಕದಂಬರು ಕರ್ನಾಟಕದವರಾಗಿದ್ದರು ಎಂದು ಖಚಿತಪಡಿಸುತ್ತದೆ.

ಕದಂಬರ ಇತಿಹಾಸದ ಮೂಲ ಆಕರಗಳೆಂದರೆ ಕನ್ನಡ ಮತ್ತು ಸಂಸ್ಕೃತದ ಶಾಸನಗಳು. ಮುಖ್ಯವಾಗಿ ತಾಳಗುಂದ, ಗುಂಡನೂರು, ಚಂದ್ರವಳ್ಳಿ, ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಅವರು ಮಾನವ್ಯಗೋತ್ರದವರೂ, ಹರಿತಿಪುತ್ರ ಪೀಳಿಗೆಯವರೂ ಆಗಿದ್ದು, ಬನವಾಸಿಯ ಚುಟು ಎಂಬ ಶಾತವಾಹನರ ಜಹಗೀರುದಾರರ ಸಂಬಂಧಿಕರಾಗಿದ್ದರು.

ಕದಂಬರ ನಾಣ್ಯಗಳಲ್ಲಿ ಕನ್ನಡ, ನಾಗರಿ ಮತ್ತು ಗ್ರಂಥ ಲಾಂಛನ ಮತ್ತು ಭಾಷೆಗಳಿವೆ.

ಕನ್ನಡದಲ್ಲಿ ದೊರಕಿರುವ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ ೪೫೦) ಕದಂಬರು ಆಡಳಿತಾತ್ಮಕ ಭಾಷೆಯಾಗಿ ಕನ್ನಡವನ್ನು ಉಪಯೋಗಕ್ಕೆ ತಂದುದಕ್ಕೆ ಸಾಕ್ಷಿಯಾಗಿದೆ. ಅವರ ಆಳ್ವಿಕೆಯ ಮೊದಲ ಭಾಗದ ಮೂರು ಶಾಸನಗಳು ಪತ್ತೆಯಾಗಿವೆ. ಸತಾರಾ ಕಲೆಕ್ಟೋರೇಟಿನಲ್ಲಿ ಕದಂಬರ ಆಳ್ವಿಕೆಯ ಮೊದಮೊದಲಲ್ಲಿ ಟಂಕಿಸಿದ ವಿರ ಮತ್ತು ಸ್ಕಂದ ಎಂಬ ಕನ್ನಡ ಲಿಪಿಯಿರುವ ನಾಣ್ಯಗಳು ದೊರಕಿವೆ.[೧] ರಾಜಾ ಭಗೀರಥ (ಕ್ರಿ.ಶ. ೩೯೦-೪೧೫) ನ ಕಾಲದ , ಶ್ರೀ ಮತ್ತು ಭಾಗಿ ಎಂಬ ಕನ್ನಡ ಶಬ್ದಗಳಿರುವ ಬಂಗಾರದ ನಾಣ್ಯವೂ ದೊರಕಿದೆ. ಈಚೆಗೆ ಬನವಾಸಿಯಲ್ಲಿ ದೊರಕಿದ ಐದನೆಯ ಶತಮಾನದ ತಾಮ್ರದ ನಾಣ್ಯದಲ್ಲಿಯೂ ಶ್ರೀಮಾನರಾಗಿ ಎಂಬ ಕನ್ನಡ ಶಬ್ದವಿದ್ದು ಕದಂಬರ ಕಾಲದಲ್ಲಿ ಕನ್ನಡ ಆಡಳಿತ ಭಾಷೆಯಾಗಿತ್ತು ಎಂಬುದನ್ನು ಇನ್ನಷ್ಟು ಪುಷ್ಟಿಗೊಳಿಸುತ್ತದೆ.

ರಾಜಾ ಶಾಂತಿವರ್ಮನ (ಕ್ರಿ.ಶ. ೪೫೦) ಕಾಲದ ತಾಳಗುಂದದ ಶಾಸನ ಕದಂಬರ ಸಾಮ್ರಾಜ್ಯದ ಹುಟ್ಟಿನ ಬಗ್ಗೆ ಸಂಭವನೀಯ ವಿವರಗಳನ್ನು ನೀಡುತ್ತದೆ. ಅದರ ಪ್ರಕಾರ , ತಾಳಗುಂದ ( ಇಂದಿನ ಶಿವಮೊಗ್ಗ ಜಿಲ್ಲೆಯಲ್ಲಿದೆ)ದ ನಿವಾಸಿ ಮಯೂರವರ್ಮನು , ತನ್ನ ಅಜ್ಜ ಮತ್ತು ಗುರು , ವೀರವರ್ಮನೊಂದಿಗೆ ಕ್ರಿ.ಶ. ೩೪೫ರಲ್ಲಿ ವೈದಿಕ ವಿದ್ಯಾರ್ಜನೆಗೋಸ್ಕರ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಪವಾಗಿ , ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತಗೊಂಡು , ಪ್ರತೀಕಾರದ ಪ್ರತಿಜ್ಞೆಗೈದು, ಕಂಚಿಯನ್ನು ಬಿಟ್ಟು ವಾಪಸು ಬರುತ್ತಾನೆ. ತನ್ನ ಬ್ರಾಹ್ಮಣತ್ವಕ್ಕೆ ತಿಲಾಂಜಲಿ ನೀಡಿ ಶಸ್ತ್ರಾಭ್ಯಾಸ ಪ್ರಾರಂಭಿಸುತ್ತಾನೆ. ತನ್ನ ಬಂಟರೊಂದಿಗೆ ಸೈನ್ಯ ಕಟ್ಟಿ ಶ್ರೀಶೈಲದ ಯುದ್ಧದಲ್ಲಿ ಪಲ್ಲವರನ್ನು ಸೋಲಿಸುತ್ತಾನೆ.

ಪಲ್ಲವರು ಮತ್ತು ಕೋಲಾರದ ಬೃಹತ್ ಬಾಣರು ಮುಂತಾದ ಕಿರುಆರಸರೊಂದಿಗೆ ದೀರ್ಘಕಾಲದ ಕಿರುಕುಳ ಯುದ್ಧದ ನಂತರ ಕದಂಬರು ಸ್ವತಂತ್ರ ರಾಜ್ಯವನ್ನು ಘೋಷಿಸಿದರು. ಅವರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ಅಂತಸ್ತನ್ನು ಒಪ್ಪಬೇಕಾಗಿ ಬಂತು. ಹೀಗೆ ಅಪಮಾನದ ಸೇಡು ತೀರಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಕರ್ನಾಟಕದ ಮೊಟ್ಟ ಮೊದಲ ರಾಜ್ಯ ಸ್ಥಾಪನೆಯಾಯಿತು. ಮಯೂರವರ್ಮ ವೈದಿಕ ವಿದ್ಯಾಭ್ಯಾಸಕ್ಕಾಗಿ ದೂರದ ಕಂಚಿಗೆ ತೆರಳಿದ್ದು ಆ ಕಾಲದಲ್ಲಿ ಆ ಪ್ರದೇಶದಲ್ಲಿ ವೈದಿಕ್ ಶಿಕ್ಷಣ ಹೆಚ್ಚು ಅಭಿವೃದ್ಧಿವಯಾಗಿರಲಿಲ್ಲ ಎಂಬುದನ್ನು ಸೂಚಿಸುತ್ತದೆ. ಗುಡ್ನಾಪುರದಲ್ಲಿ ಈಚೆಗೆ ಸಿಕ್ಕಿದ ಶಾಸನದ ಪ್ರಕಾರ ಮಯೂರವರ್ಮನ ಅಜ್ಜ ವೀರಶರ್ಮನು ಅವನಿಗೆ ಗುರುಸಮಾನನಾಗಿದ್ದು, ಅವನ ತಂದೆ ಬಂಧುಸೇನನು ಕ್ಷತ್ರಿಯ ವಂಶವನ್ನು ಸ್ವೀಕಾರ ಮಾಡಿದನು.

ಮಯೂರವರ್ಮನ ಮಗ ಕಂಗವರ್ಮ ೩೬೫ರಲ್ಲಿ ಪಟ್ಟವೇರಿದ. ವಾಕಟಕ ಪೃಥ್ವೀಸೇನನಿಂದ ಯುದ್ಧದಲ್ಲಿ ಪರಾಜಿತನಾದರೂ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದ. ಇವನ ಮಗ ಭಗೀರಥನು ತಂದೆ ಕಳೆದುಕೊಂಡ ಪ್ರದೇಶಗಳನ್ನು ಮರಳಿ ಪಡೆದುಕೊಂಡ ಎಂದು ಹೇಳಲಾದರೂ, ವಾಕಟಕ ಶಾಸನಗಳಲ್ಲಿ ಇದರ ಬಗ್ಗೆ ಉಲ್ಲೇಖವಿಲ್ಲ. ಭಗೀರಥನ ಪುತ್ರ ರಘು ಪಲ್ಲವರೊಂದಿಗಿನ ಯುದ್ಧದಲ್ಲಿ ಮಡಿದನು.ಅವನ ನಂತರ ಪಟ್ಟಕ್ಕೆ ಬಂದವನೇ, ಕದಂಬ ವಂಶದಲ್ಲೇ ಅತಿ ಬಲಿಷ್ಟ ಮತ್ತು ಉಗ್ರ ರಾಜ ಎಂದು ಹೆಸರಾದ, ಕಾಕುಸ್ಥವರ್ಮ . ಇವನ ಒಬ್ಬಳು ಮಗಳನ್ನು ಗುಪ್ತ ಸಾಮ್ರಾಜ್ಯದ ಸ್ಕಂದಗುಪ್ತನಿಗೆ ಕೊಟ್ಟು ಮದುವೆಮಾಡಲಾಗಿತ್ತು. ಇನ್ನೊಬ್ಬ ಮಗಳು ವಾಕಟಕ ರಾಜ ನರೇಂದ್ರಸೇನನನ್ನು ವಿವಾಹವಾಗಿದ್ದಳು. ತಾಳಗುಂದ ಶಾಸನದ ಪ್ರಕಾರ ಕಾಕುಸ್ಥವರ್ಮನು ಇದೇ ರೀತಿಯ ವಿವಾಹಸಂಬಂಧಗಳನ್ನು ಭಟಾರಿ, ದಕ್ಷಿಣ ಕನ್ನಡದ ಅಳೂಪರು ಮತ್ತು ಗಂಗವಾಡಿಯ ಪಶ್ಚಿಮ ಗಂಗ ಮನೆತನಗಳೊಂದಿಗೂ ಇಟ್ಟುಕೊಂಡಿದ್ದನು. ಮಹಾಕವಿ ಕಾಳಿದಾಸನು ಇವನ ಆಸ್ಥಾನಕ್ಕೆ ಭೇಟಿ ಕೊಟ್ಟಿದ್ದನು.

ಕಾಕುಸ್ಥವರ್ಮನ ನಂತರ ಬಂದವರಲ್ಲಿ, ೪೮೫ರಲ್ಲಿ ಪಟ್ಟವೇರಿದ ರವಿವರ್ಮ ಒಬ್ಬನೇ ಸಾಮ್ರಾಜ್ಯವನ್ನು ವಿಸ್ತರಿಸುವುದರಲ್ಲಿ ಯಶಸ್ವಿಯಾದ. ಅವನ ರಾಜ್ಯಭಾರದ ಕಾಲದಲ್ಲಿ , ಪಲ್ಲವರು ಮತ್ತು ಗಂಗರೊಂದಿಗೆ ಯುದ್ಧಗಳೂ , ಅಂತಃಕಲಹಗಳೂ ಗಮನಾರ್ಹವಾದವುಗಳು. ನರ್ಮದಾ ನದಿಯ ದಂಡೆಯವರೆಗೂ ಹಬ್ಬಿದ್ದ ವಾಕಟಕರನ್ನು ಸೋಲಿಸಿದ್ದು ಇವನ ಹೆಗ್ಗಳಿಕೆ. ಕದಂಬ ರಾಜ್ಯ ಇಂದಿನ ಬಹುತೇಕ ಕರ್ನಾಟಕ, ಗೋವಾ ಮತ್ತು ಇಂದಿನ ಮಹಾರಾಷ್ಟ್ರದ ದಕ್ಷಿಣ ಭಾಗಗಳನ್ನು ಒಳಗೊಂಡಿತ್ತು. ಅಂತಃಕಲಹದಿಂದಾಗಿ , ಇವನ ನಂತರ ಈ ರಾಜವಂಶ ಅವನತಿಯ ಹಾದಿ ಹಿಡಿಯಿತು. ಕದಂಬರ ವಿಷ್ಣುವರ್ಮನ ಬೀರೂರಿನ ಫಲಕದಲ್ಲಿ ಶಾಂತಿವರ್ಮನನ್ನು "ಸಮಸ್ತ ಕರ್ನಾಟಕದ ಒಡೆಯ" ಎಂದು ಸಂಬೋಧಿಸಲಾಗಿದೆ. ಮುಖ್ಯ ಧಾರೆಯಿಂದ ೪೫೫ರಲ್ಲಿ ಬೇರೆಯಾದ ತೃಪಾವರ್ತ ಎಂಬ ಶಾಖೆಯು ಬೆಳಗಾವಿಯ ಹತ್ತಿರದ ಮುರೋಡ್ ಎಂಬಲ್ಲಿ ಸ್ವಲ್ಪಕಾಲ ಆಳಿ ನಂತರ ಹರಿವರ್ಮನ ಕಾಲದಲ್ಲಿ ಬನವಾಸಿಯ ಪ್ರಧಾನ ರಾಜ್ಯದೊಂದಿಗೆ ವಿಲೀನವಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯದ ಪತನವಾಯಿತು.ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರ , ಅದರನಂತರ ರಾಷ್ಟ್ರಕೂಟರ ಮತ್ತು ಕಲ್ಯಾಣಿ ಚಾಲುಕ್ಯರ ಸಾಮಾಂತರಾಗಿ ಈ ವಂಶ ಮುಂದುವರಿಯಿತು. ಮಯೂರಶರ್ಮನ ಉತ್ತರಾಧಿಕಾರಿಗಳು ತಮ್ಮ ಕ್ಷತ್ರಿಯ ವಂಶ ಸೂಚಕವಾಹಗಿ "ವರ್ಮ' ಎಂಬ ಹೆಸರನ್ನು ಸ್ವೀಕರಿಸಿದರು.

ಆಡಳಿತ[ಬದಲಾಯಿಸಿ]

ಶಾತವಾಹನರಾಜರುಗಳಂತೆ ಕದಂಬರೂ ತಮ್ಮನ್ನು "ಧರ್ಮಮಹಾರಾಜ" ಎಂದು ಕರೆದುಕೊಳ್ಳುತ್ತಿದ್ದರು. ಶಾಸನಗಳ ಅಧ್ಯಯನದಿಂದ ಆ ಕಾಲದ ಅನೇಕ ಹುದ್ದೆಗಳ ಪತ್ತೆ ಹಚ್ಚಲಾಗಿದೆ. ಪ್ರಧಾನ (ಪ್ರಧಾನ ಮಂತ್ರಿ), ಮನೆವೆರ್ಗಡೆ (ಪರಿಚಾರಕ) , ತಂತ್ರಪಾಲ ಅಥವಾ ಸಭಾಕಾರ್ಯ ಸಚಿವ (ಕಾರ್ಯದರ್ಶಿ), ವಿದ್ಯಾವೃದ್ಧ (ವಿದ್ವಾಂಸ ವೃದ್ಧರು), ದೇಶಾಮಾತ್ಯ (ವೈದ್ಯ), ರಹಸ್ಯಾಧ್ಯಕ್ಷ (ಖಾಸಗೀ ಕಾರ್ಯದರ್ಶಿ ), ಸರ್ವಕಾರ್ಯಕರ್ತ (ಮುಖ್ಯ ಕಾರ್ಯದರ್ಶಿ), ಧರ್ಮಾಧ್ಯಕ್ಷ ( ಮುಖ್ಯ ನ್ಯಾಯಾಧೀಶ),ಭೋಜಕ ಮತ್ತು ಆಯುಕ್ತ ( ಇತರ ಅಧಿಕಾರಿಗಳು)ಇತ್ಯಾದಿ. ಸೇನೆಯಲ್ಲಿ ಜಗದಾಲ, ದಂಡನಾಯಕ ಮತ್ತು ಸೇನಾಪತಿ ಎಂಬ ಹುದ್ದೆಗಳಿದ್ದವು.

ರಾಜವಂಶದ ಪಟ್ಟದ ರಾಜಕುಮಾರ ರಾಜನಿಗೆ ಆಡಳಿತದಲ್ಲಿ ನೆರವು ನೀಡುತ್ತಿದ್ದ. ಇತರ ರಾಜಕುಮಾರರುಗಳು ವಿವಿಧ ಪ್ರಾಂತಗಳ ರಾಜ್ಯಪಾಲರುಗಳಾಗಿ ನೇಮಕವಾಗುತ್ತ್ಫಿದ್ದರು. ಕಾಕುಸ್ಥವರ್ಮನು ತನ್ನ ಮಗ ಕೃಷ್ಣನನ್ನು ತ್ರಿಪರ್ವತಾಹ ಎಂಬ ಪ್ರದೇಶದ ರಾಜ್ಯಪಾಲನನ್ನಾಗಿ ನೇಮಿಸಿದ್ದನು. ಮುಂದೆ ಇದು ರಾಜ ವಂಶ ಬೇರೆ ಬೇರೆ ಕವಲುಗಳಾಗಿ ಒಡೆಯಲು ಕಾರಣೀಭೂತವಾಯಿತು.

ರಾಜ್ಯವನ್ನು ಮಂಡಲ ಮತ್ತು ದೇಶ ಎಂದು ವಿಭಾಜಿಸಲಾಗಿತ್ತು. ಅನೇಕ ವಿಷಯ( ಜಿಲ್ಲೆ) ಗಳಿಂದ ಒಂದು ಮಂಡಲವಾಗುತ್ತಿತ್ತು. ಒಟ್ಟು ಒಂಭತ್ತು ವಿಷಯಗಳನ್ನು ಗುರುತಿಸಲಾಗಿದೆ. ಮಹಾಗ್ರಾಮ ( ತಾಲೂಕು) ಮತ್ತು ದಶಗ್ರಾಮ ( ಹೋಬಳಿ) ಇತರ ಉಪ ವಿಭಾಗಗಳಾಗಿದ್ದವು. ಕೃಷಿ ಉತ್ಪನ್ನದ ಆರರಲ್ಲೊಂದು ಭಾಗವನ್ನು ಸುಂಕವೆಂದು ವಸೂಲಿಮಾಡಲಾಗುತ್ತಿತ್ತು . ಸುಂಕವನ್ನು ಪೆರ್ಜುಂಕ ( ಹೊರೆಯ ಮೇಲಿನ ಸುಂಕ) , ವಡ್ಡರಾವುಲ ( ರಾಜಮನೆತನದ ಸುರಕ್ಷೆಗಾಗಿ ಸಾಮಾಜಿಕ ಸುಂಕ), ಬಿಲ್ಕೋಡ (ಮಾರಾಟ ತೆರಿಗೆ), ಕಿರುಕುಳ ( ಭೂ ಕಂದಾಯ) , ಪಣ್ಣಾಯ ( ಅಡಿಕೆಯ ಮೇಲಿನ ಸುಂಕ) , ವ್ಯಾಪಾರಿಗಳೇ ಮತ್ತಿತರರ ಮೇಲೆ ವೃತ್ತಿ ಸುಂಕ ಇತ್ಯಾದಿಗಳ ರೂಪದಲ್ಲಿ ವಸೂಲು ಮಾಡಲಾಗುತ್ತಿತ್ತು.

ಸಂಸ್ಕೃತಿ[ಬದಲಾಯಿಸಿ]

ಧರ್ಮ[ಬದಲಾಯಿಸಿ]

ಕದಂಬರು ವೈದಿಕ ಹಿಂದೂ ಧರ್ಮದ ಅನುಯಾಯಿಗಳಾಗಿದ್ದರು. ಮಯೂರಶರ್ಮ , ಬಹುಶಃ, ಹುಟ್ಟಿನಿಂದ ಬ್ರಾಹ್ಮಣನಾಗಿದ್ದರೂ ಅವರ ಮುಂದಿನವರು , ತಮ್ಮ ಕ್ಷತ್ರಿಯ ಕುಲದ ಲಾಂಛನವಾಗಿ "ವರ್ಮ" ಎಂಬ ಹೆಸರನ್ನು ಧರಿಸಿದರು. ಕೃಷ್ಣವರ್ಮ ಮೊದಲಾದ ಕೆಲ ಕದಂಬ ರಾಜರು ಅಶ್ವಮೇಧ ಯಾಗವನ್ನು ಮಾಡಿದ್ದರು. ಅವರ ತಾಳಗುಂದದ ಶಾಸನವು ಶಿವನ ಪ್ರಾರ್ಥನೆಯೊಂದಿಗೆ ಮೊದಲಾದರೆ, ಹಲ್ಮಿಡಿ ಮತ್ತು ಬನವಾಸಿಗಳಲ್ಲಿ ವಿಷ್ಣುವಿನ ಹೆಸರು ಕಾಣಬರುತ್ತದೆ. ಅವರ ಕುಲದೇವರೆನ್ನಲಾದ ಮಧುಕೇಶ್ವರ ದೇವಾಲಯವನ್ನು ಕಟ್ಟಿದರು. ಕುಡಲೂರು, ಸಿರ್ಸಿ ಇತ್ಯಾದಿಗಳಲ್ಲಿ ಸಿಕ್ಕಿರುವ ಅನೇಕ ದಾಖಲೆಗಳು ವಿದ್ವಜ್ಜನರಿಗೆ ಉಂಬಳಿ ಬಿಟ್ಟ ವಿಷಯವನ್ನು ಹೇಳುತ್ತವೆ. ಬೌದ್ಧ ವಿಹಾರಗಳಿಗೂ ಉಂಬಳಿ ಬಿಡಲಾಗುತ್ತಿತ್ತು.

ಜೈನ ಧರ್ಮವನ್ನೂ ಪ್ರೋತ್ಸಾಹಿಸಿದ ಕದಂಬರು ಬನವಾಸಿ, ಬೆಳಗಾವಿ, ಮಂಗಳೂರು ಮತ್ತು ಗೋವಾ ಸುತ್ತಮುತ್ತ ಅನೇಕ ಜೈನ ದೇವಾಲಯಗಳನ್ನು ಕಟ್ಟಿಸಿದರು. ಸಾಹಿತ್ಯ, ಕಲೆಗಳ ಪ್ರೋತ್ಸಾಹಕ್ಕೆ ಹೆಸರಾಗಿದ್ದ ಕದಂಬ ರಾಜ ಮತ್ತು ರಾಣಿಯರು ದೇವಾಲಯ ಮತ್ತು ವಿದ್ಯಾಸಂಸ್ಥೆಗಳಿಗೆ ಧಾರಾಳ ಉಂಬಳಿಯನ್ನು ಬಿಟ್ಟದ್ದಲ್ಲದೆ, ಧನಸಹಾಯವನ್ನೂ ಮಾಡಿದರು. ಆದಿಕವಿ ಪಂಪನು ತನ್ನ ಕೃತಿಗಳಲ್ಲಿ ಕದಂಬರನ್ನು ಹಾಡಿ ಹೊಗಳಿದ್ದಾರೆ. ಅವರ ನುಡಿಗಳಾದ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ” ಮತ್ತು “ ಮರಿದುಂಬಿಯಾಗಿ ಮೇಣ್ ಕೋಗಿಲೆಯಾಗಿ ಪುಟ್ಟುವುದು ನಂದನದೋಳ್ ಬನವಾಸಿ ದೇಶದೊಳ್" ಇಂದಿಗೂ ಕನ್ನಡಿಗರ ಮನೆಮಾತಾಗಿದೆ.

ಶಿಲ್ಪಕಲೆ[ಬದಲಾಯಿಸಿ]

ಕದಂಬರು ಕರ್ನಾಟಕದ ಶಿಲ್ಪಕಲಾ ಪರಂಪರೆಗೆ ಗಮನಾರ್ಹ ಕೊಡಿಗೆ ನೀಡಿದರು. ಚಾಲುಕ್ಯ ಮತ್ತು ಪಲ್ಲವ ಶೈಲಿಯನ್ನು ಕೆಲವು ವಿಷಯಗಳಲ್ಲಿ ಹೋಲುವ ಕದಂಬ ಶಿಲ್ಪಕಲೆ ತನ್ನದೇ ಛಾಪನ್ನು ಹೊಂದಿದೆ. ಕದಂಬರು ಶಾತವಾಹನರ ಶಿಲ್ಪಕಲಾ ಶೈಲಿಯನ್ನೂ ಅಳವಡಿಸಿಕೊಂಡರು. ಕದಂಬರ ಶಿಲ್ಪಕಲೆಯ ಮೂಲ ಲಕ್ಷಣ ಕದಂಬ ಶಿಖರ ಎಂದೇ ಕರೆಯಲಾಗುವ ಶಿಖರ. ಮೆಟ್ಟಿಲು ಮಟ್ಟಿಲಾಗಿ ಪಿರಮಿಡಿನಂತೆ ಮೇಲೇರಿ ಕಳಶ (ಅಥವಾ ಸ್ತೂಪಿಕಾ) ದಲ್ಲಿ ಕೊನೆಗೊಳ್ಳುವ ಈ ಶಿಖರದಲ್ಲಿ ಮತ್ತೆ ಯಾವುದೇ ಅಲಂಕಾರಗಳಿಲ್ಲ. ಅನೇಕ ಶತಮಾನಗಳ ನಂತರ ಇದೇ ಶೈಲಿಯ ಶಿಖರಗಳ ಉಪಯೋಗ ದೊಡ್ಡಗದ್ದವಳ್ಳಿಯ ಹೊಯ್ಸಳ ದೇವಾಲಯಮತ್ತು ಹಂಪೆಯ ಮಹಾಕೂಟ ದೇವಾಲಯದಲ್ಲಿ ಕಂಡುಬರುತ್ತದೆ. ಕೆಲ ದೇವಾಲಯಗಳಲ್ಲಿ ಕಲ್ಲಿ ಜಾಲಂಧ್ರಗಳೂ ಕಾಣಸಿಗುತ್ತವೆ. ಮುಂದೆ ಚಾಲುಕ್ಯ- ಹೊಯ್ಸಳ ಶಿಲ್ಪಕಲೆ ಎಂದು ಹೆಸರಾದ ಶೈಲಿಗೆ ಅಡಿಪಾಯ ಕದಂಬರ ಕಾಲದಲ್ಲಿ ಹಾಕಲಾಯಿತು ಎಂದು ನಂಬಲಾಗಿದೆ. ಕದಂಬರ ಕಾಲದ, ಹತ್ತನೆಯ ಶತಮಾನದ , ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯವನ್ನು ಇಂದಿಗೂ ಬನವಾಸಿಯಲ್ಲಿ ನೋಡಬಹುದು. ಇಲ್ಲಿನ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು.

ಕದಂಬರ ನೆನಪಿನಲ್ಲಿ[ಬದಲಾಯಿಸಿ]

ಕದಂಬರ ನೆನಪಿನಲ್ಲಿ ಕರ್ನಾಟಕ ಸರ್ಕಾರವು ಪ್ರತಿವರ್ಷ ಬನವಾಸಿಯಲ್ಲಿ ಕದಂಬೋತ್ಸವವೆಂಬ ಸಾಂಸ್ಕೃತಿಕ ಉತ್ಸವವನ್ನು ನಡೆಸುತ್ತದೆ.[೨][೩] ಮಯೂರಶರ್ಮನ ಕಥೆಯನ್ನು ಆಧರಿಸಿದ "ಮಯೂರ" ಕನ್ನಡ ಚಲನಚಿತ್ರ ಎಪ್ಪತ್ತರ ದಶಕದಲ್ಲಿ ತೆರೆಕಂಡಿತ್ತು. ಇದರಲ್ಲಿ ಡಾ. ರಾಜಕುಮಾರ್ ರವರು ನಾಯಕ ಪಾತ್ರ ವಹಿಸಿದ್ದರು. ೨೦೦೫ರಲ್ಲಿ ಕಾರವಾರದಲ್ಲಿ ಉದ್ಘಾಟಿತವಾದ , ಭಾರತದ ಅತ್ಯಾಧುನಿಕ ಮಿಲಿಟರಿ ನೌಕಾನೆಲೆಗೆ INS ಕದಂಬ ಎಂದು ಹೆಸರಿಡಲಾಗಿದೆ.

ಹೆಚ್ಚಿಗೆ ಓದಲು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ ೧.೨ ೧.೩ ೧.೪ "ಕನ್ನಡದ ಮೊಟ್ಟ ಮೊದಲ ರಾಜ ವಂಶ ಲಿಕದಂಬಳಿ".
  2. "ಕದಂಬೋತ್ಸವ?". Archived from the original on 2016-03-25. Retrieved 2014-02-03.
  3. "ಜ.18ರಿಂದ ಕದಂಬೋತ್ಸವ".[ಶಾಶ್ವತವಾಗಿ ಮಡಿದ ಕೊಂಡಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]