ಬನವಾಸಿ
| ಬನವಾಸಿ | |
| ಬನವಾಸಿಯ ಮಧುಕೇಶ್ವರ ದೇವಸ್ಥಾನ | |
| ರಾಜ್ಯ - ಜಿಲ್ಲೆ |
ಕರ್ನಾಟಕ - ಉತ್ತರ ಕನ್ನಡ ಜಿಲ್ಲೆ |
| ನಿರ್ದೇಶಾಂಕಗಳು | |
| ವಿಸ್ತಾರ | km² |
| ಸಮಯ ವಲಯ | IST (UTC+5:30) |
| ಜನಸಂಖ್ಯೆ (2001) - ಸಾಂದ್ರತೆ |
- /ಚದರ ಕಿ.ಮಿ. |
| ಕೋಡ್‍ಗಳು - ಪಿನ್ ಕೋಡ್ - ಎಸ್.ಟಿ.ಡಿ. - ವಾಹನ |
- 581 318 - +08384 - |
ಬನವಾಸಿ ಪಟ್ಟಣವು ವರದಾ ನದಿಯ ಎಡದಂಡೆಯ ಮೇಲಿರುವ ಪಟ್ಟಣ. ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯ ಶಿರಸಿ ತಾಲೂಕಿನಲ್ಲಿದೆ. ಬನವಾಸಿಯ ಅಕ್ಷಾಂಶ : ೧೪೦ ೩೨’ ೧೦’’ (ಉ) ಹಾಗು ರೇಖಾಂಶ : ೭೫೦ ೦೦’ ೫೮”(ಪಶ್ಚಿಮ) . ಸಮುದ್ರ ಮಟ್ಟದಿಂದ ಎತ್ತರ : ೫೭೦.೮೯ ಮೀಟರುಗಳು. ಬನವಾಸಿಯು ಶಿರಸಿಯಿಂದ ಸೊರಬಕ್ಕೆ ಹೋಗುವ ದಾರಿಯಲ್ಲಿ ಸುಮಾರು ೩೦ ಕಿ.ಮಿ.ಅಂತರದಲ್ಲಿದೆ.
ಪರಿವಿಡಿ |
ಪೌರಾಣಿಕ[ಬದಲಾಯಿಸಿ]
ಪುರಾಣ ಕಾಲದಲ್ಲಿ ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಹಾಗು ಕೈಟಭ ಎಂಬ ದೈತ್ಯರನ್ನು ಮಹಾವಿಷ್ಣುವು ಸಂಹರಿಸಿದನಂತೆ. ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಹಾಗು ವರದಾ ನದಿಯ ಇನ್ನೊಂದು ದಡದಲ್ಲಿರುವ ಆನವಟ್ಟಿಯಲ್ಲಿ ಕೈಟಭೇಶ್ವರ ದೇವಾಲಯಗಳು ಅನಂತರದಲ್ಲಿ ನಿರ್ಮಾಣವಾದವು.
ಧರ್ಮರಾಜನ ಅಶ್ವಮೇಧಯಾಗದ ಸಂದರ್ಭದಲ್ಲಿ ಸಹದೇವನು ದಕ್ಷಿಣ ಭಾರತದ ದಿಗ್ವಿಜಯ ಸಮಯದಲ್ಲಿ ವನವಾಸಿಕಾ ಎಂದರೆ ಬನವಾಸಿ ನಗರವನ್ನು ಗೆದ್ದನೆಂದು ಮಹಾಭಾರತದಲ್ಲಿ ಉಲ್ಲೇಖವಿದೆ.
ಐತಿಹಾಸಿಕ[ಬದಲಾಯಿಸಿ]
ಕದಂಬ ರಾಜ್ಯವನ್ನು ಕರ್ನಾಟಕದ ಪ್ರಥಮ ರಾಜ್ಯವೆಂದು ವರ್ಣಿಸಲಾಗುತ್ತಿದೆ. ಈ ರಾಜ್ಯದ ಸ್ಥಾಪಕ ಮಯೂರವರ್ಮ ( ಕ್ರಿ.ಶ. ೩೨೫-೩೪೫). ಈತನ ರಾಜಧಾನಿ ಬನವಾಸಿ.
ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷು ರಖ್ಖಿತನು ಬನವಾಸಿ ಪ್ರಾಂತಕ್ಕೆ ಬಂದಿದ್ದನೆಂದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತಿದೆ.
ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಬೌದ್ಧ ಭಿಕ್ಷುಗಳು ಧರ್ಮಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರಂತೆ.
ಕ್ರಿ.ಶ. ೧ನೆಯ ಶತಮಾನದಲ್ಲಿ ಭಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು “ಬನೌಸಿ” ಎಂದು ಕರೆದಿದ್ದಾನೆ.
ಕನ್ನಡ ಸಾಹಿತ್ಯದಲ್ಲಿ[ಬದಲಾಯಿಸಿ]
ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ “ ಆರಂಕುಶವಿಟ್ಟೊಡಂ ನೆನೆವುದೆನ್ನ ಮನಂ ಬನವಾಸಿ ದೇಶಮಂ ” ಎಂದು ಹೇಳಿದ್ದಾನೆ.
ಕವಿ ಚಾಮರಸ ಬರೆದ ಪ್ರಭುಲಿಂಗಲೀಲೆ ಕಾವ್ಯದ ರಂಗಸ್ಥಳವೇ ಬನವಾಸಿ.
ಪ್ರೇಕ್ಷಣೀಯ[ಬದಲಾಯಿಸಿ]
ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.
ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.
ಪಂಪ ವರ್ಣಿಸಿದ ಬನವಾಸಿಯ ನಿಸರ್ಗಸಿರಿ ತಕ್ಕಮಟ್ಟಿಗೆ ಉಳಿದುಕೊಂಡಿದೆ.
ಕದಂಬೋತ್ಸವ[ಬದಲಾಯಿಸಿ]
ಪ್ರತಿ ವರ್ಷವೂ ಕರ್ನಾಟಕ ಸರಕಾರ ಬನವಾಸಿಯಲ್ಲಿ ಕದಂಬೋತ್ಸವವನ್ನು ಆಚರಿಸುತ್ತದೆ. ಈ ಸಮಯದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಮೊದಲಾದ ಕಾರ್ಯಕ್ರಮಗಳು ಇಲ್ಲಿ ನಡೆಯುತ್ತವೆ.
ಇತರ[ಬದಲಾಯಿಸಿ]
ಬನವಾಸಿಯಲ್ಲಿ ಒಂದು ಚಿಕ್ಕ ಸರಕಾರಿ ಪ್ರವಾಸಿ ಬಂಗಲೆ ಇದ್ದು, ಕಾರ್ಯನಿರ್ವಾಹಕ ಇಂಜನಿಯರರು, ಶಿರಸಿ ವಿಭಾಗ, ಲೋಕೋಪಯೋಗಿ ಇಲಾಖೆ, ಶಿರಸಿ ಇವರ ಮುಖಾಂತರ ವಸತಿಗೆ ರಿಜರ್ವೇಶನ್ ಪಡೆಯಬಹುದು.ಬನವಾಸಿಯಲ್ಲಿ ನಡೆಯುವ ಕದಂಬೋತ್ಸವದಲ್ಲಿ ಸಾಹಿತ್ಯ ಸಾಧಕರಿಗೆ ಪಂಪ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಗುತ್ತದೆ.
ಬಾಹ್ಯಕೊಂಡಿಗಳು[ಬದಲಾಯಿಸಿ]
- ಬನವಾಸಿಯ ಮಧುಕೇಶ್ವರ ಹೇಳಲಿಲ್ಲ ಇತಿಹಾಸ - http://nimmolagobba.blogspot.in/2012/10/10.html