ಶ್ರೀನಿವಾಸ ಹಾವನೂರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶ್ರೀನಿವಾಸ ಹಾವನೂರು ಇಂದ ಪುನರ್ನಿರ್ದೇಶಿತ)
ಡಾ.ಶ್ರೀನಿವಾಸ ಹಾವನೂರ
ಜನನ೧೯೨೯ ಜನವರಿ ೧೨
ಹಾವನೂರಿ, ಹಾವೇರಿ ಜಿಲ್ಲೆ
ಮರಣಏಪ್ರಿಲ್ ೫, ೨೦೧೦
ಬೆಂಗಳೂರು
ವೃತ್ತಿಸಾಹಿತಿ,ಸಂಶೋಧಕ, ಗ್ರಂಥಪಾಲಕ, ಶಿಕ್ಷಕ, ವಾಕ್ಪಟು, ಸಂಘಟಕ, ನಟ
ರಾಷ್ಟ್ರೀಯತೆಭಾರತೀಯ

ಡಾ. ಶ್ರೀನಿವಾಸ ಹಾವನೂರರು ಕನ್ನಡ ಸಾಹಿತ್ಯ ಲೋಕದಲ್ಲಿ ಬಹಳ ಹೆಸರುಮಾಡಿದವರು.ಅವರೊಬ್ಬ ವಿದ್ವಾಂಸರು, ಸಾಹಿತಿ, ಸಂಶೋಧಕರಲ್ಲದೆ, ಗ್ರಂಥಪಾಲಕ, ಶಿಕ್ಷಕ, , ಸಂಘಟಕ, ನಟ-ನಿರ್ಧೇಶಕರಾದವರು. [೧]. ಅನೇಕ ಸಂಶೋಧನಾ ಗ್ರಂಥಗಳನ್ನು, ಲೇಖನಗಳನ್ನು ಪ್ರಕಟಿಸಿದರು.. [೨]

ಜನನ[ಬದಲಾಯಿಸಿ]

ಶ್ರೀನಿವಾಸ ಹಾವನೂರರು ಹಾವೇರಿ ಜಿಲ್ಲೆಯ 'ಹಾವನೂರಿ'ನಲ್ಲಿ ೧೯೨೯ ಜನವರಿ ೧೨ ರಂದು ಜನಿಸಿದರು [೧]. ತಂದೆಯ ಹೆಸರು ನರಸಿಂಹಾಚಾರ್ಯ ಗಲಗಲಿ, ತಾಯಿ ರಮಾಬಾಯಿ. ಸಂಪ್ರದಾಯಸ್ಥ ಮನೆತನ. ಅವರ ದೊಡ್ಡ ಕುಟುಂಬ ಅದರ ಹಣಕಾಸಿನ ಸ್ಥಿತಿ ಅಷ್ಟಕ್ಕಷ್ಟೆ. ಮೊದಲ ಶಾಲೆ ತಮ್ಮ ಊರಿನಲ್ಲಿಯೇ. ಶ್ಯಾಣ್ಯಾ ಎಂಬ ಹೊಗಳಿಕೆ. ಕೆಲಕಾಲ ತಂದೆಯ ಗಾವಠಿ ಶಾಲೆಗೂ ಹೋದರು. ಹಾವೇರಿಯಲ್ಲಿ ಮೊದಲ ಶಿಕ್ಷಣ. ಅಲ್ಲಿ ವಾರಾನ್ನದ ಊಟ. ನಂತರ ಧಾರವಾಡದ ಕರ್ನಾಟಕ ಹೈಸ್ಕೂಲಿನಲ್ಲಿ ಓದು ಮುಂದುವರಿಸಿದರು. ಅಲ್ಲಿಯೂ ವಾರಾನ್ನದಲ್ಲಿಯೇ ದಿನ ನೂಕುತಿದ್ದರು, ಮುಂದೆಯೂ ಕರ್ನಾಟಕ ಹೈಸ್ಕೂಲಿನಲ್ಲಿದ್ದಾಗಲೇ ಅವರ ಮೊದಲ ಕಥೆ ಪ್ರಕಟವಾಯಿತು.

ಕರ್ನಾಟಕ ಕಾಲೇಜಿನಲ್ಲಿ ಬಿ. ಎ. ಕಲಿಯುವಾಗ ಶ್ರೀರಂಗ, ಕೆ.ಟಿ. ಪಾಂಡುರಂಗಿ, ಮಳಗಿಯವರು ಗುರುಗಳು. ಪ್ರಥಮದರ್ಜೆ ಬಾರದ್ದರಿಂದ ವಿದ್ಯಾರ್ಥಿ ವೇತನ ದೊರೆಯಲಿಲ್ಲ. ಗುರುಗಳಾದ ಶ್ರೀರಂಗರು ತಾವು ಅಧ್ಯಕ್ಷರಾಗಿದ್ದ ವಿದ್ಯಾವರ್ಧಕ ಸಂಘದಲ್ಲಿ ಅರೆಕಾಲಿಕ ಗ್ರಂಥಾಪಾಲಕನ ಕೆಲಸ ಕೊಡಿಸಿದರು. ವೇತನ ಕಡಿಮೆ, ಆದರೆ ಖುಷಿಯ ವಿಷಯವೆಂದರೆ ಬೇಕಾದಾಗ. ಬೇಕಾದಷ್ಟು ಪುಸ್ತಕಗಳನ್ನು ಓದಬಹುದು. ಜೊತೆಗೆ ಉದ್ದಾಮ ಸಾಹಿತಿಗಳ ಪರಿಚಯದ ಲಾಭ. ಬಿ. ಎ. ಎರಡನೆ ವರ್ಷದಲ್ಲಿ ಇದ್ದಾಗಿ ಸಾಂಗ್ಲಿಯಿಂದ ರಂ. ಶ್ರೀ ಮುಗಳಿಯವರು ಉಪನ್ಯಾಸ ನೀಡಲು ಧಾರವಾಡಕ್ಕೆ ಬಂದಿದ್ದರು. ಅವರ ಮಾತಿನ ಮೋಡಿಗೆ ಶ್ರೀನಿವಾಸರು ಮರುಳಾದರು. ಅವರು ವಿದ್ಯಾವರ್ಧಕ ಸಂಘಕ್ಕೆ ಬಂದಾಗ ಅವರಿಗೆ ಬೇಕಿದ್ದ ಪುಸ್ತಕ ಹುಡುಕಿಕೊಟ್ಟು , ಅವರಿಂದ ಕನ್ನಡ ಪಾಠ ಕೇಳಬೇಕೆಂಬ ಹಂಬಲ ತೋಡಿಕೊಂಡರು. ಮುಗಳಿಯವರದು ಬಹು ಉದಾರ ಮನಸ್ಸು. ಅಂತಿಮ ಬಿ.ಎ. ಗೆ ತಮ್ಮ ಕಾಲೇಜಿಗೆ ಬರಲು ತಿಳಿಸಿದರು. ಶ್ರೀನಿವಾಸರಿಗೆ ಇನ್ನಿಲ್ಲದ ಸಂತೋಷ. ರಜೆ ಮುಗಿದೊಡನೆ ಹಾಗೂ ಹೀಗೂ ಸುಮಾರು ೨೦೦ ರುಪಾಯಿ ಹಣ ಹೊಂದಿಸಿ ಕೊಂಡು ಸಾಂಗ್ಲಿಗೆ ಹೋಗಿ ಅದನ್ನು ಗುರುಗಳ ಕೈಗೆ ಹಾಕಿ ಶಿಕ್ಷಣದ ವ್ಯವಸ್ಥೆ ಮಾಡಲುಕೋರಿದರು. ಮುಗಳಿಯವರದು ಬಹು ಮೃದು ಮನಸ್ಸು. ಬರಿ ಕನ್ನಡ ವಿದ್ಯಾರ್ಥಿಗಳಿಗೆ ಮಾತ್ರವಲ್ಲ ಕರ್ನಾಟಕದಿಂದ ಬರುವ ವಿದ್ಯಾರ್ಥಿಗಳಿಗೆ ಮುಕ್ತ ಹಸ್ತದಿಂದ ಸಹಾಯ ಮಾಡುತಿದ್ದರು. ಹೊಸ ಶಿಷ್ಯನ ಹಣಕಾಸಿನ ಸ್ಥಿತಿ ಅವರಿಗೆ ಗೊತ್ತಾಗಿ ಅವನ ಓದಬೇಕೆಂಬ ಹಂಬಲವನ್ನು ಮೆಚ್ಚಿ ಪ್ರವೇಶ ಶುಲ್ಕವನ್ನು ತಾವೇ ತುಂಬಿದರು. ಕಾಲೇಜು ಫೀ ಮಾಫಿ ಮಾಡಿಸಿದರು. ಹಾಸ್ಟಲಿನ ರೆಕ್ಟರ್‌ ಆದ್ದರಿಂದ ಅಲ್ಲಿನ ಅತಿಥಿ ಕೋಣೆಯಲ್ಲಿ ತತ್ಕಾಲದ ವಸತಿ ವ್ಯವಸ್ಥೆ ಮಾಡಿ, ಹತ್ತಿರದ ಖಾನಾವಳಿಯಲ್ಲಿ ಆರುದಿನ ಊಟ ಮತ್ತು ತಮ್ಮ ಮನೆಯಲ್ಲಿ ಒಂದು ದಿನದ ಊಟಕ್ಕೆ ವ್ಯವಸ್ಥೆ ಮಾಡಿದರು.. ಜೊತೆಗೆ ಅವರ ಮನೆಗ ಬರುತಿದ್ದ ಊಟ ತಿಂಡಿಯ ಡಬ್ಬಿಗಳಲ್ಲಿ ಪಾಲು.. ಎರಡನೆಯ ವರ್ಷ ಹಾಸ್ಟಲಿನ ಉಸ್ತುವಾರಿ ಹೊಣೆ ಸಿಕ್ಕಿತು. ಊಟದ ಸಮಸ್ಯೆ ತನ್ನಿಂದ ತಾನೇ ಪರಿಹಾರವಾಯಿತು. ವಿದ್ಯಾರ್ಥಿ ಜೀವನದಲ್ಲಿ ಮೊದಲ ಬಾರಿಗೆ ಹೊಟ್ಟೆ ತುಂಬ ಊಟ ಸಿಗತೊಡಗಿತು. ಜೊತೆಗೆ ಇಂಗ್ಲಿಷ್ ಟ್ಯೂಟರ್‌ ಆಗಿಯೂ ಕೆಲಸ ನಿರ್ವಹಿಸಬೇಕಾಯಿತು. ಅವರು ೧೯೪೭ ರಲ್ಲಿ ಪದವಿ ಪಡೆದರು.ಕಾಲೇಜು ಬಿಟ್ಟರೂ ಕೊನೆತನಕ ಮಾರ್ಗದರ್ಶನ ಪಡೆಯುತಿದ್ದರು. ರಂ ಶ್ರೀ. ಮುಗಳಿಯವರೂ "ಶ್ರೀನಿವಾಸ ನನ್ನ ಮಾನಸಪುತ್ರ" ಎಂದೇ ಹೇಳುತಿದ್ದರು.

ಹಾವೇರಿ, ಧಾರವಾಡ, ಸಾಂಗ್ಲಿಯಲ್ಲಿ ಶಿಕ್ಷಣ ಮುಗಿಸಿ, ಕೆಲವು ಕಾಲ ಸೇಲ್ಸ್ ಟ್ಯಾಕ್ಸ್ ಇನ್ಸ್‌ಪೆಕ್ಟರ್ ಆಗಿದ್ದ ಅವರು ಮುಂಬಯಿನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ೨೧ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಆ ವೇಳೆಗೆ ಕನ್ನಡದಲ್ಲಿ ಎಂ ಎ ಮಾಡಿ ಪಿ.ಎಚ್‌ಡಿ ಗಳಿಸಿದ್ದ ಅವರು, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮೊಟ್ಟ ಮೊದಲ ಪ್ರಾಧ್ಯಾಪಕ'ರಾಗಿ ಎರಡು ವರ್ಷ, ನಂತರ ಮುಂಬಯಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದ ಮುಖ್ಯಸ್ಥ'ರಾಗಿ ಮೂರು ವರ್ಷ ಸೇವೆ ಸಲ್ಲಿಸಿದವರು. ನಿವೃತ್ತಿಯ ನಂತರ ಸಂಶೋಧನೆ ಬರವಣಿಗೆಗಳಲ್ಲಿ ತೊಡಗಿಸಿಕೊಂಡರು.

ವೃತ್ತಿ ಜೀವನ[ಬದಲಾಯಿಸಿ]

ಡಾ.ಶ್ರೀನಿವಾಸ ಹಾವನೂರರು ತಮ್ಮ ವೃತ್ತಿಜೀವನದ ಬಹಳಷ್ಟು ವರ್ಷಗಳನ್ನು ಮುಂಬಯಿನಲ್ಲಿ ಕಳೆದರು.ನಿವೃತ್ತರಾದ ಮೇಲೆ ತಮ್ಮ ಜೀವನದ ಕೊನೆಯ ವಿಶ್ರಾಂತ ದಿನಗಳನ್ನು ಮಂಗಳೂರಿನಲ್ಲಿ ಕಳೆದರು. ಮೊದಲನೆಯ ಪೀಳಿಗೆಯ ಗಣಕ ಯಂತ್ರಗಳನ್ನು ಬಳಸಿ, ಗ್ರಂಥಾಲಯ ಗಣಕೀಕರಣ, ಗ್ರಂಥಸೂಚಿ ಅಭಿವೃದ್ಧಿ, ಹೀಗೆ ಗ್ರಂಥಾಲಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದಾರೆ ಮತ್ತು 'ಈ ಕ್ಷೇತ್ರದಲ್ಲಿ ತಜ್ಞ'ರೆಂದು ಗೌರವಿಸಲ್ಪಡುತ್ತಾರೆ. ಪ್ರ ಪ್ರಥಮ ಕನ್ನಡ ಗಣಕ ಸಮ್ಮೇಳನದಲ್ಲಿ ಇವರಿಗೆ ಸನ್ಮಾನ ಮಾಡಾಲಾಯಿತು. ಹರ್ಮನ್ ಮೊಗ್ಲಿಂಗ್, ರೆವರೆಂಡ್ ಕಿಟ್ಟೆಲ್ ಮೊದಲಾದ ಹಿರಿಯರು, ಕನ್ನಡಕ್ಕೆ ನೀಡಿರುವ ಕೊಡುಗೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲ ಛಾತಿಯುಳ್ಳವರಾಗಿದ್ದ 'ಶ್ರೀನಿವಾಸ ಹಾವನೂರರು ಕನ್ನಡದ ಮೊದಲ ಪತ್ರಿಕೆ 'ಮಂಗಳೂರು ಸಮಾಚಾರ' ಕುರಿತು ಸಂಶೋಧನೆ ನಡೆಸಿದ್ದಾರೆ. ಕನ್ನಡ ಪತ್ರಿಕೋದ್ಯಮಕ್ಕೂ ಇವರ ಸಂಶೋಧನೆಯಿಂದ ಸಾಕಷ್ಟು ಲಾಭವಾಗಿತ್ತು.

ನಿರ್ವಹಿಸಿದ ಹುದ್ದೆಗಳು[ಬದಲಾಯಿಸಿ]

  • ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಲ್ಲಿ ಗ್ರಂಥಪಾಲಕರಾಗಿ ಕಾರ್ಯನಿರ್ವಹಣೆ.
  • 1984 ರಲ್ಲಿ ಮಂಗಳ ಗಂಗೋತ್ರಿ ವಿಶ್ವವಿದ್ಯಾಲಯದಲ್ಲಿ ಕನ್ನಡ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರು.
  • 1986ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾದರು.
  • ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನಲ್ಲಿ ಬಾಸೆಲ್ ಮಿಷನ್ ಸಂಶೋಧನೆ.
  • ಗ್ರಂಥಪಾಲಕ, ಪ್ರಾಧ್ಯಾಪಕ, ಸಂಶೋಧಕರಾಗಿ ಮುಂಬಯಿ, ಮಂಗಳೂರು, ಪುಣೆ, ಬೆಂಗಳೂರುಗಳಲ್ಲಿ ದೀರ್ಘ ಕಾಲದ ವಾಸ್ತವ್ಯ

ದಣಿವರಿಯದ ಸಂಶೋಧಕ[ಬದಲಾಯಿಸಿ]

ಕನ್ನಡ ಸಾಹಿತ್ಯ ಚರಿತ್ರೆಯ ಅರುಣೋದಯ ಕಾಲಘಟ್ಟವನ್ನು ಹೊಸ ದೃಷ್ಟಿಕೋನದಿಂದ ನೋಡುವುದಕ್ಕೆ, ಆಮೂಲಾಗ್ರವಾಗಿ ಸಂಶೋಧಿಸಿ, ಅಗತ್ಯವಾದ ಆಧಾರಗಳನ್ನು ಒದಗಿಸುವುದಕ್ಕೆ ಮತ್ತು ಹೆಚ್ಚಿನ ಆಧಾರಗಳು ಬೇಕೆನಿಸಿದಾಗ, ಅವುಗಳ ಬೆನ್ನುಹತ್ತಿ, ದೇಶ ವಿದೇಶಗಳಿಗೆ ಸಂಚರಿಸುವುದಕ್ಕೆ ಡಾ. ಶ್ರೀನಿವಾಸ ಹಾವನೂರರಿಗೆ ಸಾಧ್ಯವಾದುದು ಅವರ ಅಸಾಧಾರಣ ತಾಳ್ಮೆ, ಚಿಕಿತ್ಸಕ ದೃಷ್ಟಿಕೋನ, ದಣಿವರಿಯದ ದುಡಿಮೆ ಹಾಗೂ ಬತ್ತದ ಜ್ಞಾನದಾಹ.

ಅವರ ಮಹಾಪ್ರಬಂಧ "ಹೊಸಗನ್ನಡ ಅರುಣೋದಯ"[ಬದಲಾಯಿಸಿ]

  • ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೊಟ್ಟ ಮೊದಲ ಬಾರಿಗೆ ಸಮಗ್ರವಾಗಿ ರೂಪಿಸಿದ ರಂ.ಶ್ರೀ. ಮುಗಳಿ ಅವರ ಮಾರ್ಗದರ್ಶನದಲ್ಲಿ ಹಾವನೂರರು, ಸಲ್ಲಿಸಿದ ಪ್ರೌಢ ಪ್ರಬಂಧ "ಹೊಸಗನ್ನಡ ಅರುಣೋದಯ" ಎಲ್ಲ ಕಾಲದ ಸಾಹಿತ್ಯ ವ್ಯಾಸಂಗಿಗಳಿಗೆ ಮಹತ್ವದ ಆಕರ ಗ್ರಂಥ.
  • "ಹೊಸಗನ್ನಡ ಅರುಣೋದಯ" ಪಿ.ಎಚ್‌ಡಿ ಪ್ರಬಂಧದ ಮೌಲ್ಯಮಾಪನ ನಡೆಸಿದ ಹಿರಿಯ ವಿದ್ವಾಂಸ ಡಾ.ಹಾ.ಮಾ.ನಾಯಕರು ಸಂದರ್ಶನವನ್ನು ಮಾಡದೆಯೇ 'ಪಿ.ಎಚ್‌ಡಿ ('ಪುಣೆ ವಿಶ್ವವಿದ್ಯಾಲಯದಿಂದ ಗಳಿಸಿದರು), ನೀಡಬಹುದೆಂದು ಶಿಫಾರಸು ಮಾಡಿದ್ದರೆಂಬುದು, ಹಾವನೂರರ ಸಂಶೋಧನಾ ವಿದ್ವತ್ತಿಗೆ ಸಾಕ್ಷಿ.
  • ಇಂಗ್ಲಿಷ್ ಸಾಹಿತ್ಯದ ಪ್ರಭಾವ ಕನ್ನಡ ಸಾಹಿತ್ಯವನ್ನು ಗಾಢವಾಗಿ ಆವರಿಸಿದ ಸಮಯದಲ್ಲಿ ಕನ್ನಡ ಸಾಹಿತ್ಯಲೋಕದಲ್ಲಿ ಆದ ವೈವಿಧ್ಯಮಯ ಹಾಗೂ ವೈಶಿಷ್ಟ್ಯಮಯ ಬದಲಾವಣೆಗಳು ಮತ್ತು ಅದರ ಪರಿಣಾಮವಾಗಿ ರೂಪುಗೊಂಡ ಹೊಸಗನ್ನಡ ಸಾಹಿತ್ಯರೂಪ-ಸ್ವರೂಪಗಳನ್ನು ಕೂಲಂಕಷವಾಗಿ ತಿಳಿಸುವ ಆಧಾರಗ್ರಂಥವೊಂದರ ಕೊರತೆಯನ್ನು ನೀಗಿಸಿದ್ದು ಹಾವನೂರರ ಈ ಕೃತಿ.
  • ೧೯ ನೇ ಶತಮಾನದಲ್ಲಿ ಕಂಡ ಹೊಸಗನ್ನಡ ಸಾಹಿತ್ಯದ ಅರುಣೋದಯ ಕಾಲದ ಸಾಧನೆ, ಸಿದ್ಧಿ ಮತ್ತು ಲೋಪದೋಷಗಳನ್ನು ಪ್ರಮಾಣಭೂತವಾಗಿ ಅಭಿವ್ಯಕ್ತಿಸುವ ಈ ಕೃತಿಯ ಮೂಲಕ, ದೊಡ್ಡದೊಂದು ನಿಧಿಯ ಬಾಗಿಲನ್ನು ಸಾಹಿತ್ಯಾಭ್ಯಾಸಿಗಳಿಗೆ ತೆರೆದಿಟ್ಟರು ಹಾವನೂರರು. ಈ ಕೃತಿ ಹಾವನೂರರ ಅಪಾರ ಅಧ್ಯಯನಕ್ಕೆ, ವಿಶ್ಲೇಷಣಾ ಪ್ರಜ್ಞೆಗೆ, ಇತಿಹಾಸನಿಷ್ಠ ಪ್ರಾಮಾಣಿಕತೆಗೆ ಹಾಗೂ ಖಚಿತ ಮತ್ತು ಉಚಿತ ನಿರೂಪಣಾ ವಿಶೇಷತೆಗೆ ಜ್ವಲಂತ ಸಾಕ್ಷಿಯಾಗಿದೆ. ಸೃಜನಶೀಲ ಬರವಣಿಗೆಯಂತೆ ಓದಿಸಿಕೊಳ್ಳುವ ಗುಣ ಈ ಕೃತಿಯ ವಿಶೇಷ.

ಕೃತಿಗಳು[ಬದಲಾಯಿಸಿ]

ಹಾವನೂರರು ೬೦ ಕ್ಕೂ ಹೆಚ್ಚು ಮೌಲಿಕ ಕೃತಿಗಳ ಲೇಖಕರು. ಅವುಗಳಲ್ಲಿ ಪ್ರಮುಖವಾದವುಗಳೆಂದರೆ [೩]-

  • ಕನ್ನಡದಲ್ಲಿ ಕ್ರೈಸ್ತ ಸಾಹಿತ್ಯ
  • ಕರ್ನಾಟಕ
  • ಗಳಗನಾಥ ಮಾಸ್ತರರು
  • ಒಂದಿಷ್ಟು ಲಘು, ಒಂದಿಷ್ಟು ಗಂಭೀರ
  • ಪಾವೆಂ ಆಚಾರ್ಯರ ಸಮಗ್ರ ಕೃತಿಗಳ ಸಂಪಾದನೆ
  • ಹಟ್ಟಿಯಂಗಡಿ ನಾರಾಯಣರಾಯರ ಸಾಹಿತ್ಯವಾಚಿಕೆ
  • ಎಪಿಗ್ರಾಫಿಕಲ್ ಸ್ಟಡೀಸ್
  • ಮ.ಪ್ರ.ಪೂಜಾರರ ಹಳಗನ್ನಡ ಕವಿ ಕಾವ್ಯ ಮಹೋನ್ನತಿ,
  • ಕಾದಂ ಕಥನಗಳು (ಭೈರಪ್ಪನವರ ಕಾದಂಬರಿಗಳಿಂದ) ಹೊಸ ರೀತಿಯ ಬರವಣಿಗೆ
  • ಫರ್ಡಿನಂಡ್ ಕಿಟೆಲ್ (40 ವರ್ಷಗಳಿಂದ, ರೆ.ಫಾ.ಕಿಟೆಲರ ಜೀವನ, ಸಾಧನೆಯ ಬಗ್ಗೆ ಬರೆಯುತ್ತಲೇ ಬಂದವರು ಅವರು. ಕಿಟೆಲ್ ಕುರಿತ ಕೃತಿ, ಜರ್ಮನ್ ಭಾಷೆಯಲ್ಲಿಯೂ ಪ್ರಕಟವಾಗಿದೆ)

ವಿದೇಶಗಳ ಭೇಟಿ[ಬದಲಾಯಿಸಿ]

ಕನ್ನಡ ಸಂಶೋಧನೆಗೆ ಉಪಯುಕ್ತವಾದ ಮಾಹಿತಿಗೆ, ವಿದೇಶಕ್ಕೆ ಭೇಟಿಕೊಟ್ಟಿದ್ದರು. ಹಾವನೂರರು 'ಬಾಸೆಲ್ ಮಿಷನ್‌'ನಲ್ಲಿ ಹುದುಗಿದ್ದ ಕನ್ನಡ ಸಂಬಂಧಿ ಆಕರ ಸಾಮಗ್ರಿಯ ಅಧ್ಯಯನಕ್ಕಾಗಿ ನಾಲ್ಕು ಸಲ, ಇಂಗ್ಲೆಂಡ್ ಮತ್ತು ಬಾಸೆಲ್‌ಗೆ ಭೇಟಿ ನೀಡಿದ್ದರು.

ಸಂಶೋಧನೆಗೆ ಕಂಪ್ಯೂಟರ್ ಬಳಕೆ[ಬದಲಾಯಿಸಿ]

  • ಕರ್ನಾಟಕದ ಇತಿಹಾಸ ಸಾಹಿತ್ಯಗಳ ಸಂಶೋಧನೆಗಾಗಿ ಕಂಪ್ಯೂಟರ್‌ ನ್ನು ಬಳಸಿದವರಲ್ಲಿ ಹಾವನೂರರು ಮೊದಲಿಗರು, ಮುದ್ದಣನ, ಶಬ್ದಪ್ರತಿಭೆ ಅವರು ಮಾರ್ಗದರ್ಶನದಲ್ಲಿ ರೂಪುಗೊಂಡಿದ್ದ ಸಂಶೋಧನಾ ಪ್ರಬಂಧ. ಎರಡು ಇತಿಹಾಸ ಸಮ್ಮೇಳನಗಳಿಗೆ ಅಧ್ಯಕ್ಷರಾಗಿದ್ದರು. ಕರ್ನಾಟಕ ರಾಜ್ಯೋತ್ಸವ, ನಾಡೋಜ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳಿಗೆ ಭಾಜನರಾಗಿದ್ದರು.
  • ಮುಂಬಯಿನಲ್ಲಿ ಗ್ರಂಥಪಾಲಕರಿದ್ದಾಗಲೇ ಬೆಳೆಸಿಕೊಂಡಿದ್ದ ಜ್ಞಾನದಾಹ. ತಾನಷ್ಟೇ ಕಲಿಯುವುದಲ್ಲ; ಇತರರನ್ನು ಕಲಿಯುವಂತೆ ಪ್ರೇರೇಪಿಸುವುದು. ವಿದೇಶದ ವಿಜ್ಞಾನಿಗಳ ಜೊತೆ ಏಗುತ್ತ ಅವರ ಜ್ಞಾನದಾಹವನ್ನು ಕ್ಷಣಕ್ಷಣಕ್ಕೂ ಈಡೇರಿಸುತ್ತ ಪರಿಣತಿ ಪಡೆದ ಹಾವನೂರರದು ತನ್ನಂತೆ ಪರರ ಬಗೆವ ಸಜ್ಜನಿಕೆಯ ವ್ಯಕ್ತಿತ್ವ. ಸದಾ ಹೊಸ ಅಂಶಗಳ ಕಡೆಗೆ ಬೆಳಕು ಚೆಲ್ಲುತ್ತಿರಬೇಕೆಂಬುದು ಅವರ ಹೆಬ್ಬಯಕೆಗಳಲ್ಲೊಂದು. ಆದ್ದರಿಂದಲೇ ಅವರು ನಾಡು ಕಂಡ ಅಸಾಧಾರಣ ಸಂಶೋಧಕರಲ್ಲಿ ಒಬ್ಬರು. ವಿದ್ವತ್ತಿಗೆ ಸಂಬಂಧಿಸಿ ಎಲ್ಲ ವಯೋಮಾನದ ಲೇಖಕರೊಂದಿಗೆ ಆಪ್ತ-ಸಂಬಂಧ ಇಟ್ಟುಕೊಂಡಿದ್ದವರು.
  • ಅವರ ಬರಹಗಳು ಹದಿನಾಲ್ಕು ವಿವಿಧ ಪ್ರಕಾರಗಳಿಗೆ ವಿಸ್ತರಿಸಿವೆ. ಸಣ್ಣ ಕತೆಗಳು, ಇತಿಹಾಸ ಸಂಶೋಧನೆ, ಸಾಮಾಜಿಕ ವಿಷಯಗಳು, ಕಾದಂಬರಿ ಕಥನಗಳು, ಲಲಿತ ಪ್ರಬಂಧಗಳು, ಸಾಹಿತ್ಯಕ ವಿಶ್ಲೇಷಣೆ, ಕಂಪ್ಯೂಟರ್ ಕನ್ನಡ, ಸಂಶೋಧನಾ ಪ್ರಕ್ರಿಯೆ, ಪತ್ರಿಕೋದ್ಯಮ, ಗಣ್ಯವ್ಯಕ್ತಿಗಳು, ಧಾರ್ಮಿಕ ಹಾಗೂ ದಾಸ ಸಾಹಿತ್ಯ, ಕ್ರೈಸ್ತಸಾಹಿತ್ಯ, ಪುಸ್ತಕೋದ್ಯಮ, ಇಂಗ್ಲಿಷ್ ಬರಹಗಳು- ಹೀಗೆ ವಿಷಯ ವೈವಿಧ್ಯ ವಿಸ್ತಾರದ 'ಆಡುಂಬೊಲ' ಅವರದು. ಹಾವನೂರರು ಕನ್ನಡದ ಅಪರೂಪದ ಸವ್ಯಸಾಚಿಗಳಾಗಿ ಶೋಭಿಸಿದರು.

ಮಂಗಳೂರು ವಿಶ್ವವಿದ್ಯಾಲಯದ ಜೊತೆಗೆ ನಿಕಟತೆ[ಬದಲಾಯಿಸಿ]

  • ೧೯೮೪ ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆಯನ್ನು ಸಲ್ಲಿಸಿ, ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಶಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು.
  • ಮುಂದೆ ೧೯೮೬ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ಕ್ಕೆ ಪ್ರಮುಖರಾಗಿ ಸೇರಿಕೊಂಡರು. ಮಂಗಳೂರಿನ ನಂಟು ಅವರಿಗೆ ಬಲು ಪ್ರಿಯವಾಗಿತ್ತು. ಅಲ್ಲಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜ್ ನ ಚಾರಿತ್ರ್ಯಿಕ ಬೇಸಿಲ್ ಮಿಶನ್ ಅವರನ್ನು ತೀವ್ರವಾಗಿ ಸೆಳೆಯಿತು.
  • ಭಾರತದಲ್ಲಿ ಕನ್ನಡ-ಇಂಗ್ಲೀಷ್ ನಿಘಂಟನ್ನು ರಚಿಸಿ,ಕನ್ನಡವನ್ನು ಜನಸಾಮಾನ್ಯರಿಗೆಲ್ಲಾ ಪ್ರಸಿದ್ಧಿಪಡಿಸಿದ ಆಗಿನ ಕಾಲದ ಕ್ರೈಸ್ತಪಾದ್ರಿಗಳಾಗಿದ್ದ, ರೆವರೆಂಡ್ ಫಾ. ಕಿಟ್ಟೆಲ್, ಮುಂತಾದ ಪಾದ್ರಿಗಳ ಮೌಲ್ಯಯುತ ಕನ್ನಡ ಸಾಹಿತ್ಯ ಕಾರ್ಯಗಳ ಬಗ್ಗೆ, ಸಂಶೋಧನೆಯನ್ನು ನಡೆಸಿದರು.

ಪ್ರಶಸ್ತಿ ಮತ್ತು ಗೌರವಗಳು[ಬದಲಾಯಿಸಿ]

೮೦ ನೇ ವಯಸ್ಸಿನಲ್ಲಿ, ಕನ್ನಡದ ಜನತೆ, ಹಾವನೂರರ ಅಮೂಲ್ಯ ಸಾಹಿತ್ಯ ಸಾಧನೆಗಳನ್ನು ಗುರುತಿಸಿ, ಗೌರವ, ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಆ ಶುಭ ಸಮಯದಲ್ಲಿ, ಅವರ ಸಮಗ್ರ ಕೃತಿಗಳನ್ನೆಲ್ಲಾ ಕ್ರೋಡೀಕರಿಸಿ, “ಸಂಕಥನ " ವೆಂಬ ಕೃತಿಯನ್ನು ಬಿಡುಗಡೆ ಮಾಡಿತು [ಸಾಕ್ಷ್ಯಾಧಾರ ಬೇಕಾಗಿದೆ].

ಮರಣ[ಬದಲಾಯಿಸಿ]

ಕನ್ನಡ ಸಾರಸ್ವತ ಲೋಕದ ಹೆಸರಾಂತ ವಿದ್ವಾಂಸರೂ, ಸಂಶೋಧಕರೂ ಆದ ಡಾ.ಶ್ರೀನಿವಾಸ ಹಾವನೂರರು ಅವರು ಬೆಂಗಳೂರಿನಲ್ಲಿ ಸೋಮವಾರ, ೨೦೧೦ ರ ಏಪ್ರಿಲ್ ತಿಂಗಳ, ೫ ನೇ ತಾರೀಖು ಹೃದಯಾಘಾತದಿಂದ ನಿಧನರಾದರು. ಅವರಿಗೆ ೮೩ ವರ್ಷವಾಗಿತ್ತು [೪]. ಅವರು ಪತ್ನಿ, ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬ ಮಗಳನ್ನು ಅಗಲಿದ್ದಾರೆ.[೫]

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯಕೊಂಡಿಗಳು[ಬದಲಾಯಿಸಿ]