ವಿಜಯ್ ತೆಂಡೂಲ್ಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಜಯ್ ತೆಂಡೂಲ್ಕರ್

ವಿಜಯ್ ಧೋಂಡೋಪಂತ್ ತೆಂಡೂಲ್ಕರ್ (ಜನವರಿ ೬, ೧೯೨೮-ಮೇ ೧೯, ೨೦೦೮)

ಮರಾಠಿ ರಂಗಭೂಮಿಯ ಪ್ರಸಿದ್ಧ ನಾಟಕಕಾರ, ಚಿತ್ರ ಮತ್ತು ಕಿರುಚಿತ್ರ ಲೇಖಕ , ರಾಜಕೀಯ ಪತ್ರಿಕೋದ್ಯಮಿ ಮತ್ತು ಸಾಮಾಜಿಕ ವಿಶ್ಲೇಷಕ. ಮರಾಠಿಯ ಶಾಂತತಾ ಕೋರ್ಟ್ ಚಾಲೂ ಆಹೆ(೧೯೬೭), ಘಾಶೀರಾಮ ಕೋತ್ವಾಲ್ (೧೯೭೨) ಮತ್ತು ಸಖಾರಾಮ್ ಬೈಂಡರ್ (೧೯೭೨) ನಾಟಕಗಳ ಮೂಲಕ ಬಹಳ ಪ್ರಸಿದ್ಧಿಯನ್ನು ಪಡೆದರು. ಇವರ ಅನೇಕ ನಾಟಕಗಳು ನಿಜಜೀವನದ ಘಟನೆಗಳಿಂದ ಪ್ರೇರಿತವಾಗಿವೆ. ಸುಮಾರು ಐದು ದಶಕಗಳ ಕಾಲ ಮಹಾರಾಷ್ಟ್ರದ ಅತ್ಯಂತ ಪ್ರಭಾವೀ ನಾಟಕಕಾರರಾಗಿದ್ದರು.

ಜನನ ಹಾಗೂ ಬಾಲ್ಯ[ಬದಲಾಯಿಸಿ]

ಜನವರಿ ೬, ೧೯೨೮ರಂದು ಕೊಲ್ಲಾಪುರದಲ್ಲಿ ಜನಿಸಿದರು. ತಂದೆ ಧೋಂಡೋಪಂತ್ ತೆಂಡೂಲ್ಕರ್ ಗುಮಾಸ್ತರಾಗಿ ಕೆಲಸಮಾಡುತ್ತಿದ್ದರು.ಜೊತೆಗೆ ಪುಸ್ತಕ ಪ್ರಕಾಶನದ ವ್ಯವಸಾಯವೂ ಇತ್ತು.ಮನೆಯಲ್ಲಿ ಸಾಹಿತ್ಯಿಕ ವಾತಾವರಣವಿತ್ತು. ೧೯೪೨ ರಲ್ಲಿ , ೧೪ ವರ್ಷ ಪ್ರಾಯದಲ್ಲಿ, ಶಾಲೆ ಬಿಟ್ಟು ಬ್ರಿಟಿಷರ ವಿರುದ್ಧದ "ಭಾರತ ಬಿಟ್ಟು ತೊಲಗಿ" ಚಳುವಳಿಗಳಲ್ಲಿ ಭಾಗವಹಿಸಿದ್ದರು. ಇದರಿಂದಾಗಿ ವಿಜಯ್ ತಮ್ಮ ಕುಟುಂಬದ ಮತ್ತು ಮಿತ್ರರ ಅಸಮಾಧಾನಕ್ಕೆ ಪಾತ್ರರಾದರು. ಆಗಿನಿಂದ ಬರವಣಿಗೆ ಅವರ ಮುಖ್ಯ ಸಂವಹನಾ ಮಾಧ್ಯಮವಾಯಿತು.

ಪಾಶ್ಚಿಮಾತ್ಯ ನಾಟಕಗಳನ್ನು ನೋಡುತ್ತಾ ಬೆಳೆದ ಅವರಿಗೆ ತಾವೇ ನಾಟಕ ಬರೆಯಬೇಕೆಂಬ ಹುಮ್ಮಸ್ಸು ಉಂಟಾಯಿತು. ತಮ್ಮ ಮೊದಲ ಕಥೆ ಬರೆದಾಗ ಅವರ ವಯಸ್ಸು ಆರು ವರ್ಷ. ಹನ್ನೊಂದರಲ್ಲಿ ನಾಟಕವೊದನ್ನು ಬರೆದು, ನಿರ್ದೇಶಿಸಿದ್ದಲ್ಲದೇ , ಅದರಲ್ಲಿ ಅಭಿನಯವನ್ನೂ ಮಾಡಿದರು.

ಪ್ರಾರಂಭಿಕ ಜೀವನ[ಬದಲಾಯಿಸಿ]

ತೆಂಡೂಲ್ಕರ್ ಪತ್ರಿಕೆಗಳಿಗೆ ಬರೆಯುವುದರ ಮೂಲಕ ತಮ್ಮ ಉದ್ಯೋಗವನ್ನು ಶುರುಮಾಡಿದರು. ನವಭಾರತ್, ಮರಾಠಾ, ಲೋಕ್ ಸತ್ತಾ, ನವ್ ಯುಗ್, ಪತ್ರಿಕೆಗಳಲ್ಲಿ ಅವರ ಅಂಕಣಗಳು ಅಚ್ಚಾಗಿ ಬರುತ್ತಿದ್ದವು. ೧೯೫೦ ರಲ್ಲಿ ವಸುಧಾ ಮತ್ತು ದೀಪಾವಳಿ ಪತ್ರಿಕೆಗಳಿಗೆ ಕಾರ್ಯಕಾರಿ ಸಂಪಾದಕರಾಗಿದ್ದರು.

ಈಗಾಗಲೇ ಅವರು ಅಮಚ್ಯಾವರ್ ಕೋಣ್ ಪ್ರೇಮ್ ಕರಣಾರ್ ಎಂಬ ನಾಟಕ ಬರೆದಾಗಿತ್ತು. ಇಪ್ಪತ್ತರ ಹರೆಯದಲ್ಲಿ ಗೃಹಸ್ಥ ಎಂಬ ನಾಟಕ ಬರೆದರು. ಇದಕ್ಕೆ ಪ್ರೇಕ್ಷಕರಿಂದ ಉತ್ತೇಜನಕಾರೀ ಪ್ರತಿಕ್ರಿಯೆ ಬರದೆ, ಇನ್ನು ಮುಂದೆ ಬರೆಯುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡರು. ಶಿಕ್ಷಣ ಮೆಟ್ರಿಕ್ ವರೆಗಾಗಿತ್ತು. ಅನಂತರ ಪುಣೆ ಮತ್ತು ಮುಂಬೈಗಳಲ್ಲಿ ಹೆಚ್ಚಿನ ವಾಸ್ತವ್ಯ ಮಾಡಿದರು.೧೯೬೬ ರಲ್ಲಿ ಅವರು ಮುಂಬಯಿಯಲ್ಲಿ ನೆಲೆ ನಿಂತರು. ಚೌಗುಲೆ ಇಂಡಸ್ಟ್ರೀಸ್ ನಲ್ಲಿ ಜನಸಂಪರ್ಕ ಅಧಿಕಾರಿಯಾಗಿ ಕೆಲಕಾಲ ಕೆಲಸಮಾಡಿದ್ದರು. ೧೯೫೬ರಲ್ಲಿ ತಮ್ಮ ನಿರ್ಧಾರವನ್ನು ಬದಲಿಸಿ "'ಶ್ರೀಮಂತ್'" ಬರೆದರು . ಅದು ಅವರನ್ನು ಒಬ್ಬ ಒಳ್ಳೆಯ ಬರಹಗಾರ ಎಂದು ಸಿದ್ಧಮಾಡಿತು . ಅದು ಅಂದಿನ ಸಂಪ್ರದಾಯಸ್ಥ ಸಮಾಜವನ್ನು ತನ್ನ ಕ್ರಾಂತಿಕಾರಕ ಕತೆಯಿಂದ ತಲ್ಲಣಗೊಳಿಸಿತು. ಅದರಲ್ಲಿ ಮದುವೆಯಾಗದ ತರುಣಿ ಒಬ್ಬಳು, ತನ್ನ ಸಾಮಾಜಿಕ ಗೌರವ ಉಳಿಸಿಕೊಳ್ಳಲು ಅವಳಿಗೆ ಒಬ್ಬ ಗಂಡನನ್ನು "ಕೊಳ್ಳಲು" ಅವಳ ತಂದೆಯು ಯತ್ನಿಸುತ್ತಿರುವಾಗ, ತನ್ನ ಮಗುವನ್ನು ಉಳಿಸಿಕೊಳ್ಳಲು ನಿಶ್ಚಯಿಸುವ ಕತೆಯಿತ್ತು.

ಮುಂಬಯಿಯ ಚಾಳಿನಲ್ಲಿ ಕಳೆದ ಕೆಲವು ವರ್ಷಗಳು, ಹಾಗೂ ಜೀವನೋಪಾಯಕ್ಕಾಗಿ ಪಟ್ಟ ಕಷ್ಟ ಇವುಗಳಿಂದ ತೆಂಡೂಲ್ಕರರಿಗೆ ಮುಂಬಯಿಯ ಕೆಳ ಮಧ್ಯಮ ವರ್ಗದವರ ಜೀವನ ಶೈಲಿಯ ಪ್ರತ್ಯಕ್ಷ ಅನುಭವ ದೊರಕಿತು. ಆ ದಟ್ಟ ಅನುಭವದಿಂದ ಪರಿಪಾಕಗೊಂಡ ಚಿತ್ರಣವನ್ನು ಅವರ ಮರಾಠಿ ನಾಟಕಗಳಲ್ಲಿ ನೋಡಬಹುದು. ೫೦-೬೦ರ ದಶಕಗಳಲ್ಲಿ ತೆಂಡೂಲ್ಕರರ ಬರವಣಿಗೆಗಳು , ರಂಗಾಯಣದಂತಹ ಪ್ರಯೋಗಾತ್ಮಕ ನಾಟಕಗಳು , ಇವುಗಳಿಂದ ಮರಾಠಿ ನಾಟಕರಂಗದ ಕಥಾವಸ್ತುಗಳು ತ್ವರಿತವಾಗಿ ಬದಲಾಗತೊಡಗಿದವು. ಶ್ರೀರಾಮ ಲಾಗೂ , ಮೋಹನ್ ಆಗಾಶೆ ಮತ್ತು ಸುಲಭಾ ದೇಶಪಾಂಡೆ ಇತ್ಯಾದಿ ನಟನಟಿಯರು ತಮ್ಮ ನಟನೆಯಿಂದ ತೆಂಡೂಲ್ಕರರ ನಾಟಕಗಳಿಗೆ ಹೊಸ ಶಕ್ತಿ ಮತ್ತು ನೈಜತೆಯನ್ನು ತಂದುಕೊಟ್ಟು ಮರಾಠಿ ನಾಟಕಗಳಲ್ಲಿ ಹೊಸ ಸಂವೇದನೆಗಳನ್ನು ಪರಿಚಯಿಸಿದರು.

೧೯೬೧ರಲ್ಲಿ ತೆಂಡೂಲ್ಕರ್‍ ಗಿಧಾಡೆ ( ಹದ್ದುಗಳು) ನಾಟಕವನ್ನು ಬರೆದರು. ಇದು ರಂಗಮಂಚಕ್ಕೆ ಬಂದದ್ದು ೧೯೭೦ರಲ್ಲಿ. ನೈತಿಕ ಅಧಃಪತನದ ಕೌಟುಂಬಿಕ ಹಿನ್ನೆಲೆಯಲ್ಲಿ ಹಿಂಸೆಯ ಪಾತ್ರವನ್ನು ಈ ನಾಟಕ ವಿಶ್ಲೇಷಿಸುತ್ತದೆ. ತಮ್ಮ ಮುಂದಿನ ಕೃತಿಗಳಲ್ಲಿಯೂ ತೆಂಡೂಲ್ಕರ್‍ ಹಿಂಸೆಯ ವಿವಿಧ ಮುಖಗಳನ್ನು  : ಕೌಟುಂಬಿಕ, ಲೈಂಗಿಕ , ಸಾರ್ವಜನಿಕ ಮತ್ತು ರಾಜಕೀಯ, ಕುರಿತು ಬರೆದರು. ಹೀಗಾಗಿ , ತೆಂಡೂಲ್ಕರರ ಬರವಣಿಗೆಯ ಕಾಲಾವಧಿಯಲ್ಲಿ, ತಮ್ಮದೇ ಶೈಲಿಯನ್ನು ರೂಪಿಸಿಕೊಂಡ ಮುಖ್ಯ ಘಟ್ಟ ಎಂದು ಗಿಧಾಡೆಯನ್ನು ಗುರುತಿಸಲಾಗುತ್ತದೆ. ೧೯೫೬ರ ಫ್ರೆಡರಿಕ್ ಡುರೆನ್ಮಾಟನ ಫ್ರೆಂಚ್ ಸಣ್ಣ ಕಥೆ "Die Panne" ("ಬೋನುಗಳು ") ಆಧರಿಸಿ ತೆಂಡೂಲ್ಕರ್‍ ಶಾಂತತಾ! ಕೋರ್ಟ್ ಚಾಲೂ ಆಹೆ ( ಸದ್ದು ! ವಿಚಾರಣೆ ನಡೆಯುತ್ತಿದೆ ) ನಾಟಕವನ್ನು ಬರೆದರು. ಇದನ್ನು ರಂಗಭೂಮಿಯ ಮೇಲೆ ೧೯೬೭ರಲ್ಲಿ ತರಲಾಯಿತು. ಇದು ತೆಂಡೂಲ್ಕರರ ಅತಿಶ್ರೇಷ್ಠ ಕೃತಿಗಳಲ್ಲಿ ಒಂದೆಂದು ಪರಿಗಣಿತವಾಗಿದೆ. ೧೯೭೧ರಲ್ಲಿ ನಾಟಕಕಾರ ಸತ್ಯದೇವ್ ದುಬೆ ಇದನ್ನು , ತೆಂಡೂಲ್ಕರರ ಚಿತ್ರಕಥೆಯೊಂದಿಗೆ , ಚಲನಚಿತ್ರವಾಗಿ ಹೊರತಂದರು.

೭೦,೮೦ರ ದಶಕಗಳು[ಬದಲಾಯಿಸಿ]

೧೯೭೨ರಲ್ಲಿ ಹೊರಬಂದ ಸಖಾರಾಮ್ ಬೈಂಡರ್‍ ನಲ್ಲಿ ತೆಂಡೂಲ್ಕರ್‍ ಪುರುಷಪ್ರಧಾನ ವ್ಯಸ್ಥೆಯನ್ನು ಎತ್ತಿಕೊಂಡರು. ಸಮಾಜದ ನೈತಿಕತೆಯಲ್ಲಿ , ವಿವಾಹ ವ್ವಸ್ಥೆಯಲ್ಲಿ ವಿಶ್ವಾಸವಿಲ್ಲದ ಕಥಾನಾಯಕ ಸಖಾರಾಮ , ಸಮಾಜವನ್ನು ತನ್ನ ಭೋಗಕ್ಕಾಗಿ ಬಳಸಿಕೊಳ್ಳುತ್ತಾನೆ. ಆಶ್ರಯವಿಲ್ಲದ, ಮದುವೆಯಾದ ಹೆಂಗಸರಿಗೆ ಆಶ್ರಯ ಕೊಡುವ ನೆಪದಿಂದ ಅವರನ್ನು ಲೈಂಗಿಕವಾಗಿ ಶೋಷಿಸುತ್ತಾನೆ. ತನ್ನ ಕಾರ್ಯಗಳನ್ನು ಪೊಳ್ಳು ಆಧುನಿಕತೆ , ಅಸಾಂಪ್ರದಾಯಿಕ ವಿಚಾರಗಳ ಆಧಾರದ ಮೇಲೆ ಸಮರ್ಥಿಸಿಕೊಳ್ಳುತ್ತಾನೆ. ಅವನಿಂದ ಶೋಷತರಾದ ಕೆಲ ಮಹಿಳೆಯರು, ಅವನಿಂದ ಪಾರಾಗುವ ಉತ್ಕಟ ಹಂಬಲವಿದ್ದರೂ, ಅವನ ವಿಚಾರಗಳನ್ನು ಒಪ್ಪುವ ದುರಂತವೂ ಇಲ್ಲಿ ಕಾಣಬರುತ್ತದೆ.

ಅದೇ ವರ್ಷ (೧೯೭೨), ಘಾಶೀರಾಮ ಕೊತ್ವಾಲ್ (ಪೋಲೀಸ್ ಪೇದೆ ಘಾಶೀರಾಮ) ಎಂಬ ನಾಟಕ ಬರೆದರು. ೧೮ನೆಯ ಶತಮಾನದ ಪೇಶ್ವೆಗಳ ಕಾಲದ ಪುಣೆಯ ಹಿನ್ನೆಲೆಯ ಇದರಲ್ಲಿ ರಾಜಕೀಯ ಹಿಂಸೆಯ ಚಿತ್ರಣವಿತ್ತು. ಮರಾಠಿ ಜನಪದ ಸಂಗೀತ ಮತ್ತು ನಾಟಕಶೈಲಿ ಸಮ್ಮಿಳಿತವಾಗಿದ್ದ ಇದು ಮರಾಠಿ ರಂಗಭೂಮಿಯಲ್ಲಿ ಹೊಸ ಆಯಾಮವನ್ನು ಪ್ರಾರಂಭಿಸಿತು. ಎಷ್ಟರಮಟ್ಟಿಗೆ ಅಂದರೆ, ಇದನ್ನು ಮಹಾರಾಷ್ಟ್ರ ರಾಜ್ಯ ಪ್ರಶಸ್ತಿಗಾಗಿ ಪರಿಶೀಲಿಸುತ್ತಿದ್ದಾಗ , ತೀರ್ಪುಗಾರರಿಗೆ ಇದು ನಾಟಕವೂ, ಸಂಗೀತವೋ ಎಂದು ಗೊಂದಲವುಂಟಾಯಿತು. ಜನ ಸಮೂಹದ ಮನಃಶಾಸ್ತ್ರ , ಪ್ರತಿಕ್ರಿಯೆಗಳ ಆಳವಾದ ಅವರ ತಿಳುವಳಿಕೆ ಇದರಲ್ಲಿ ಸ್ಪಷ್ಟವಾಗಿದೆ. ಇದರ ಪರಿಣಾಮವಾಗಿ " ಸಮಾಜದಲ್ಲಿ ಹೆಚ್ಚುತ್ತಿರುವ ಹಿಂಸೆಯ ಸ್ವರೂಪ ಮತ್ತು ಸಮಕಾಲೀನ ರಂಗಭೂಮಿಯ ಮೇಲೆ ಅದರ ಪರಿಣಾಮ" ಎಂಬ ವಿಷಯದ ಮೇಲೆ ಅಧ್ಯನಮಾಡಲು ಅವರಿಗೆ ಟಾಟಾ ಪ್ರತಿಷ್ಠಾನದಿಂದ ಜವಹರಲಾಲ್ ನೆಹರೂ ಫೆಲೋಶಿಪ್ ಸಿಕ್ಕಿತು (೧೯೭೪-೭೫). ಒಟ್ಟು ಮರಾಠಿ ಹಾಗು ಇನ್ನಿತರ ಭಾಷೆಗಳಲ್ಲಿ ಆರು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡಿರುವ ಇದು ಭಾರತೀಯ ರಂಭೂಮಿಯ ಇತಿಹಾಸದಲ್ಲಿಯೇ ಅತಿ ಹೆಚ್ಚು ಕಾಲ ನಡೆದ ನಾಟಕಗಳಲ್ಲಿ ಒಂದಾಗಿದೆ.

ನಿಶಾಂತ್ (೧೯೭೪), ಆಕ್ರೋಶ್ (೧೯೮೦), ಅರ್ಧಸತ್ಯ (೧೯೮೪) ಹಿಂದಿ ಚಿತ್ರಗಳಿಗೆ ಚಿತ್ರ ಕಥೆ ಬರೆದ ತೆಂಡೂಲ್ಕರ್‍ ಸದ್ಯದ ಜಗತ್ತಿನಲ್ಲಿ ಹಿಂಸೆಯ ದಾಖಲುಕಾರ ಎಂದೇ ಗುರುತಿಸಲಾಗುತ್ತಿತ್ತು. ಒಟ್ಟು ಹನ್ನೊಂದು ಹಿಂದಿ ಮತ್ತು ಎಂಟು ಮರಾಠಿ ಚಿತ್ರಗಳಿಗೆ ಅವರು ಕಥೆ ಬರೆದಿದ್ದಾರೆ. ಇವುಗಳಲ್ಲಿ ಸಾಮನಾ (೧೯೭೫) , ಸಿಂಹಾಸನ (೧೯೭೯) ಮತ್ತು ಉಂಬರ್ಟಾ (೧೯೮೧) ಕೂಡಾ ಸೇರಿವೆ. ಉಂಬರ್ಟಾ (ಹೊಸ್ತಿಲು) ಸ್ತ್ರೀ ವಾದದ ಚಟುವಟಿಕೆಗಳ ಬಗ್ಯೆ ಒಂದು ಮಹತ್ವದ ಚಿತ್ರ. ಜಬ್ಬಾರ್‍ ಪಟೇಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಗಿರೀಶ್ ಕಾರ್ನಾಡ್ ಮತ್ತು ಸ್ಮಿತಾ ಪಾಟೀಲ ಮುಖ್ಯ ಪಾತ್ರದಲ್ಲಿದ್ದರು.

ಅವರ ಕೆಲವು ನಾಟಕಗಳು ವಾದಗ್ರಸ್ತವಾಗಿ ಟೀಕೆಗೆ ಗುರಿಯಾಗಿದ್ದು, ಆ ಕಾರಣದಿಂದ ವಿಜಯ್ ನ್ಯಾಯಾಲಯದ ಮೆಟ್ಟಿಲನ್ನೂ ಏರಿ ಸಂಘರ್ಷಮಾಡಬೇಕಾಗಿ ಬಂತು.ಮಾನವನ ವೃತ್ತಿ ಜೀವನದ ಕುರೂಪತೆ, ಹಿಂಸಾಚಾ ರಗಳನ್ನು ಪ್ರತಿಭಟಿಸಿ ಬರೆದ ಅವರ ನಾಟಕಗಳು, ವಿವಾದಾಸ್ಪದವಾದಾಗ್ಯೂ ಯಶಸ್ಸನ್ನು ಕಂಡವು.

ತೊಂಭತ್ತರ ದಶಕ ಹಾಗೂ ತರುವಾಯ[ಬದಲಾಯಿಸಿ]

೧೯೯೧ರಲ್ಲಿ ತೆಂಡೂಲ್ಕರ್‍ ಸಫರ್‍ ಎಂಬ ರೂಪಕವನ್ನು ಬರೆದರು. ೨೦೦೧ರಲ್ಲಿ "The Masseur" ಎಂಬ ನಾಟಕ ಹೊರಬಂದಿತು. ಮುಂದೆ ಕಾದಂಬರಿ : ಒಂದು ಮತ್ತು ಕಾದಂಬರಿ:ಎರಡು ಎಂಬ ಎರಡು ಕಾದಂಬರಿಗಳನ್ನು ಬರೆದರು. ಇದರಲ್ಲಿ ವಯಸ್ಸಾದ ಗಂಡಸಿನ ಲೈಂಗಿಕ ಭ್ರಮಾಲೋಕವನ್ನು ಚಿತ್ರಿಸಿದ್ದಾರೆ. ೨೦೦೪ರಲ್ಲಿ ತಮ್ಮ ಮೊದಲ ಇಂಗ್ಲೀಷ್ ನಾಟಕ "'His Fifth Woman" ಎಂಬ ಏಕಾಂಕವನ್ನು ಬರೆದರು. ಇದನ್ನು ನ್ಯೂಯಾರ್ಕ್ ನಲ್ಲಿ ೨೦೦೪ರ "ವಿಜಯ್ ತೆಂಡೂಲ್ಕರ್‍ ಫೆಸ್ಟಿವಲ್" ನಲ್ಲಿ ಮೊದಲಬಾರಿ ಪ್ರದರ್ಶಿಸಲಾಯಿತು.

೯೦ರ ದಶಕದಲ್ಲಿ ತೆಂಡೂಲ್ಕರ್‍ ಬರೆದ ಸ್ವಯಂಸಿದ್ಧ ಎಂಬ ಟಿವಿ ಸರಣಿ ಪ್ರಸಿದ್ಧವಾಯಿತು. ಇದರಲ್ಲಿ ಅವರ ಮಗಳು ಪ್ರಿಯಾ ತೆಂಡೂಲ್ಕರ್ ಮುಖ್ಯ ಪಾತ್ರದಲ್ಲಿದ್ದರು.

ಅವರ ಮಗ ರಾಜಾ ಮತ್ತು ಪತ್ನಿ ನಿರ್ಮಲಾ ಇಬ್ಬರೂ ೨೦೦೧ರಲ್ಲಿ ಮರಣ ಹೊಂದಿದರು. ಮರುವರ್ಷವೇ ಅವರ ಮಗಳು ಹೆಸರಾಂತ ನಟಿ ಪ್ರಿಯಾ ತೆಂಡೂಲ್ಕರ್ ತೀರಿಕೊಂಡರು.

ಕೊಡುಗೆ[ಬದಲಾಯಿಸಿ]

ತಮ್ಮ ಐದು ದಶಕಗಳ ಸಾಹಿತ್ಯಿಕ ಜೀವನದಲ್ಲಿ ಅವರು ಬರೆದದ್ದು ೨೭ ನಾಟಕಗಳು, ೨೫ ಏಕಪಾತ್ರಾಭಿನಯದ ನಾಟಕಗಳು, ೫ ಮಕ್ಕಳ ನಾಟಕಗಳು, ೪ ಲೇಖನಗಳ ಸಂಗ್ರಹ, ೨ ಕಾದಂಬರಿಗಳು, ೧೮ ಚಲನಚಿತ್ರಕಥೆ .ಅವರ ಅನೇಕ ನಾಟಕಗಳು ಮರಾಠಿ ರಂಗಭೂಮಿಯ ಹೊಸ ಪರಂಪರೆಯನ್ನೇ ಸೃಷ್ಟಿಸಿದವು. ಅವರ ಅನೇಕ ಕೃತಿಗಳು ಭಾರತದ ಅನೇಕ ಭಾಷೆಗಳಿಗೆ ತರ್ಜುಮೆಯಾಗಿ, ನಾಟಕ ಪ್ರದರ್ಶನಗಳೂ ಆಗಿವೆ. ಮಹತ್ವದ ಸಾಮಾಜಿಕ ಘಟನೆಗಳು ಮತ್ತು ರಾಜಕೀಯ ಏರುಪೇರು ಗಳಿಗೆ ತಮ್ಮದೇ ವಿಶಿಷ್ಟ ಒಳನೋಟವನ್ನು ನೀಡಿದ ಅವರು ಸಮಕಾಲೀನ ಮಹಾರಾಷ್ಟ್ರದ ಪ್ರಬಲ ವ್ಯವಸ್ಥಾ ವಿರುದ್ಧ ರಾಜಕೀಯ ಧ್ವನಿಗಳಲ್ಲಿ ಒಬ್ಬರಾಗಿದ್ದರು . ಅವರ ಜೊತೆಯ ಸಾಹಿತಿಗಳು ಸಾಮಾಜಿಕ ನೈಜತೆಯ ಗಡಿಗಳನ್ನು ಎಚ್ಚರದಿಂದ ದಾಟುವ ಪ್ರಯತ್ನ ಮಾಡುತ್ತಿರುವ ಸಂದರ್ಭದಲ್ಲಿ ಅವರು ರಾಜಕೀಯ ವ್ಯವಸ್ಥಾವಿರುದ್ಧತೆಗೆ ನೇರವಾಗಿ ಧುಮುಕಿ ರಾಜಕೀಯ ಪಟ್ಟಭದ್ರತೆಗಳನ್ನೂ , ಸಾಮಾಜಿಕ ಆಷಾಢಭೂತಿ ಮನೋವೃತ್ತಿಯನ್ನೂ ಮುಲಾಜಿಲ್ಲದೆ ಹೊರತೋರಿಸಿದರು. ಅವರ ಈ ಶಕ್ತಿಶಾಲೀ ಚಿತ್ರಣದಿಂದ ಅವರಿಗೆ ಅಪಾರ ಜನಪ್ರಿಯತೆ ಸಿಕ್ಕಿದರೂ, ಸನಾತನ ಮತ್ತು ರಾಜಕೀಯ ವರ್ಗಗಳಿಂದ ತೀವ್ರ ಪ್ರತಿಭಟನೆಯನ್ನೂ ಎದುರಿಸಬೇಕಾಯಿತು.

ಅವರ ಅನೇಕ ನಾಟಕಗಳು ನಿಜ ಜೀವನದಿಂದ ಆಧಾರಿತವಾಗಿದ್ದವು. ೭೦ರ ದಶಕದಲ್ಲಿ ಶಿವಸೇನೆ ತಲೆ ಎತ್ತುತ್ತಿದ್ದ ಹಿನ್ನೆಲೆಯಲ್ಲಿ ಅವರ ಘಾಶೀರಾಮ ಕೋತ್ವಾಲ್ ಹೊರಬಂತು. ಗ್ರಾಮೀಣ ಭಾರತದಲ್ಲಿ ನಡೆಯುತ್ತಿರುವ ಹೆಣ್ಣುಮಕ್ಕಳ ಮಾರಾಟವನ್ನು ಬಯಲಿಗೆಳೆಯಲು , ಪತ್ರಕರ್ತನೊಬ್ಬ ಅಂತಹಾ ಹೆಣ್ಣೊಬ್ಬಳನ್ನು ಕೊಂಡುಕೊಂಡು , ಸುದ್ದಿ ಮಾಡಿ, ತನ್ನ ಕಾರ್ಯವಾದ ಮೇಲೆ ಆಕೆಯನ್ನು ತ್ಯಜಿಸಿದ ನಿಜಜೀವನದ ಕಥೆಯಿಂದ ಅವರ ಕಮಲಾ ಕೃತಿ ಆಧರಿತವಾಗಿದೆ. ನಟಿಯೊಬ್ಬಳ ಸಲಿಂಗ ಚಟುವಟಿಕೆಗಳು ಬಯಲಿಗೆ ಬಂದು ಅವಳ ನಟನಾ ಭವಿ಼ಷ್ಯವೇ ಕುಸಿದುಬಿದ್ದ ನೈಜ ಘಟನೆಯ ಮೇಲೆ ಅವರು ಮಿತ್ರಾಚಿ ಗೋಷ್ಟ ಎಂಬ ಕೃತಿ ಬರೆದರು.

ತೆಂಡೂಲ್ಕರ್‍ ೯ ಕಾದಂಬರಿಗಳು, ಎರಡು ಜೀವನಕಥೆಗಳು, ಮತ್ತು ಐದು ನಾಟಕಗಳನ್ನು ಇತರೆ ಭಾಷೆಗಳಿಂದ ಅನುವಾದಿಸಿದ್ದಾರೆ. ಇದರಲ್ಲಿ ಗಿರೀಶ್ ಕಾರ್ನಾಡ್ ಬರೆದ ತುಘಲಕ್ ನಾಟಕವೂ ಸೇರಿದೆ.

ಇವಲ್ಲದೇ ತೆಂಡೂಲ್ಕರ್‍ ಕೃತಿಗಳಲ್ಲಿ ಜೀವನಚರಿತ್ರೆ, ಎರಡು ಕಾದಂಬರಿಗಳು, ಸಣ್ಣಕಥೆಗಳ ಐದು ಸಂಕಲನಗಳು , ೧೬ ಮಕ್ಕಳ ನಾಟಕಗಳು, ಸಾಹಿತ್ಯಿಕ ಪ್ರಬಂಧ ಮತ್ತು ಸಾಮಾಜಿಕ ವಿಮರ್ಶಾ ಲೇಖನಗಳ ಐದು ಸಂಕಲನಗಳು ಇವೂ ಸೇರಿವೆ. ಒಟ್ಟಿನಲ್ಲಿ ತೆಂಡೂಲ್ಕರರ ಬರವಣಿಗೆಗಳು ಆಧುನಿಕ ಮರಾಠಿ ಮತ್ತು ಇತರ ಭಾರತೀಯ ಭಾಷೆಗಳ ಸಾಹಿತ್ಯದ ಹರಹುಗಳನ್ನು ಬದಲಾಯಿಸುವುದರಲ್ಲಿ ಗಣನೀಯ ಕಾಣಿಕೆಯನ್ನು ನೀಡಿವೆ.

"ತೆಂಡೂಲ್ಕರ್‍ ಆಣಿ ಹಿಂಸಾ: ಆಜ್ ಆಣಿ ಕಾಲ್" (ತೆಂಡೂಲ್ಕರ್‍ ಮತ್ತು ಹಿಂಸೆ :ಇಂದು ಮತ್ತು ನಿನ್ನೆ) ಎಂಬ ಸಾಕ್ಷ್ಯ ಚಿತ್ರವೂ, “ಅನ್ಕಹೀನ್” ಎಂಬ ಕಿರು ಚಿತ್ರವೂ ೨೦೦೭ರಲ್ಲಿ ಬಿಡುಗಡೆಯಾದವು.

ಪ್ರಮುಖ ಕೃತಿಗಳು[ಬದಲಾಯಿಸಿ]

ಕಾದಂಬರಿಗಳು

  • ಕಾದಂಬರಿ : ಭಾಗ ಒಂದು (೧೯೯೬)
  • ಕಾದಂಬರಿ : ಭಾಗ ಎರಡು (೨೦೦೫)

ಸಣ್ಣ ಕಥಾ ಸಂಕಲನಗಳು

  • ದ್ವಂದ್ವ (೧೯೬೧)
  • ಫುಲಾಪಾಖರೆ ( ಚಿಟ್ಟೆಗಳು) (೧೯೭೦)

ನಾಟಕಗಳು

  • ಅಮಚ್ಯಾವರ್ ಪ್ರೇಮ್ ಕೋಣ್ ಕರಣಾರ್-೧೯೪೮ ಬರೆದ ಮೊದಲ ಕಥೆ.
  • ’ರಾತ್ರ್ರ್’ ಬರೆದ ಏಕಪಾತ್ರಾಭಿನಯ್ ನಾಟಕ.
  • ಗೃಹಸ್ಥ -೧೯೪೭.ನಂತರ ಈ ನಾಟಕವನ್ನು ಅವರು, 'ಕಾವ್ ಲ್ಯಾಂಚಾ ಶ್ಯಾಳಾ' ಎಂಬ ಹೊಸಹೆಸರನ್ನಿಟ್ಟು ಮತ್ತೆ ಪ್ರಕಟಿಸಿದರು.
  • ಶ್ರೀಮಂತ್-೧೯೫೬ ರಂಗಮಂಚದ ಮೇಲೆ ಪ್ರಪ್ರಥಮವಾಗಿ ಪ್ರದರ್ಶಿಸಲ್ಪಟ್ಟ ನಾಟಕ.
  • ಮಾಣೂಸ್ ನಾವಾಚಾ ಬೇಟ್ -೧೯೫೮
  • ಗಿಧಾಡೆ-೧೯೬೧. ಇದೇ ಚಿತ್ರವಾಗಿ ತಯಾರಾಯಿತು-೧೯೭೦ ರಲ್ಲಿ.
  • ಶಾಂತತಾ ಕೋರ್ಟ್ ಚಾಲು ಆಹೆ-೧೯೬೭. ಇದರದ್ದೇ ಹಿಂದಿ ರೂಪ ಖಾಮೋಶ್, ಅದಾಲತ್ ಜಾರಿ ಹೈ
  • ಸಖಾರಾಮ್ ಬೈಂಡರ್-೧೯೭೨
  • ಕಮಲಾ-೧೯೮೧
  • ಮಧ್ಲ್ಯಾ ಭಿಂತಿ
  • ಸರಿ ಗ ಸರೀ
  • ಏಕ್ ಹಟ್ಟಿ ಮುಲ್ಗಿ
  • ಆಶೀ ಪಾಖರೆ ಏತಿ
  • ಕನ್ಯಾದಾನ್-೧೯೮೩
  • ಸಫರ್-೧೯೯೧
  • ದ ಮಸ್ಸೇರ್-೨೦೦೧
  • His fifth woman-೨೦೦೪
  • Thief! Police!
  • ಬಾಳೇ ಮಿಳತಾತ್ (೧೯೬೦)
  • ಪಾಟಿಲಾಚೇ ಪೋರೀಚೆ ಲಗೀನ್ (೧೯೬೫) ( ಪಾಟೀಲನ ಮಗಳ ಮದುವೆ)
  • ಅಜಗರ್‍ ಆಣಿ ಗಂಧರ್ವ ( ಹೆಬ್ಬಾವು ಮತ್ತು ಗಂಧರ್ವ)
  • ಕಮಲಾ (೧೯೮೧)
  • ಮಾಡಿ ( ಹಿಂದಿಯಲ್ಲಿ)
  • ಅಂಜಿ ಡಾಂಬದ್ವೀಚಾ ಮುಕಾಬಲಾ
  • ಕುಠೇ ಪಾಹಿಜೇ ಜಾತೀಚೆ
  • ಜಾತ್ ಹೀ ಪೂಛೋ ಸಾಧೂ ಕಿ
  • ಮಾಝಿ ಬಹಿಣ್ ( ನನ್ನ ಸಹೋದರಿ)
  • ಝಾಲಾ ಅನಂತ ಹನುಮಂತ
  • ಫುಟ್ಪಾಯರೀಚಾ ಸಾಮ್ರಾಟ್ ( ಫುಟ್ ಪಾತಿನ ದೊರೆ)
  • ಮಿತ್ರಾಚಿ ಗೋಷ್ಟ (೨೦೦೧)
  • ಆನಂದ್ ಓವಾರಿ ( ಡಿ.ಬಿ.ಮೊಕಾಶಿ ವಿರಚಿತ ಕಾದಂಬರಿ ಆಧಾರಿತ)
  • ಭಾವೂ ಮುರಾರರಾವ್ ಭಾಲ್ಯಾಕಾಕಾ
  • ಮೀ ಜಿಂಕ್ಲೋ ಮೀ ಹರ್‍ಲೋ

ಗೀತ ನಾಟಕಗಳು

  • ಘಾಶೀರಾಮ್ ಕೊತ್ವಾಲ್-೧೯೭೨

ಭಾಷಾಂತರಗಳು

  • ಅಧೇ ಅಧೂರೆ ( ಮೋಹನ್ ರಾಕೇಶ್ -ಮೂಲ ಹಿಂದಿ)
  • ತುಘಲಕ್ (ಗಿರೀಶ್ ಕಾರ್ನಾಡ್ - ಮೂಲ ಕನ್ನಡ)
  • A Streetcar Named Desire (Tennessee Williams - ಮೂಲ ಇಂಗ್ಲೀಷ್)

ಚಲನಚಿತ್ರ ಸಾಹಿತ್ಯ[ಬದಲಾಯಿಸಿ]

ಚಿತ್ರ ಕಥೆ

  • ಶಾಂತತಾ ಕೋರ್ಟ್ ಚಾಲೂ ಆಹೆ (೧೯೭೨)
  • ನಿಶಾಂತ್ (೧೯೭೫)
  • ಸಾಮನಾ (೧೯೭೫)
  • ಮಂಥನ್ (೧೯೭೬)
  • ಸಿಂಹಾಸನ್ (೧೯೭೯)
  • ಗೆಹರಾಯೀ (೧೯೮೦)
  • ಆಕ್ರೋಶ್ (೧೯೮೦)
  • ಆಕ್ರಿಯೆತ್ (೧೯೮೧)
  • ಉಂಬರ್ಟಾ (೧೯೮೧)
  • ಅರ್ಧ ಸತ್ಯ (೧೯೮೩)
  • ಕಮಲಾ (೧೯೮೪)
  • ಸರ್ದಾರ್ (೧೯೯೩)
  • ಯೆ ಹೈ ಚಕ್ಕಡ್ ಬಕ್ಕಡ್ ಬಂಬೇ ಬೋ (೨೦೦೩)
  • ಈಶ್ವರ್ ಮೈಮ್ ಕೋ. (೨೦೦೫)

ಸಂಭಾಷಣೆ

  • ಅರವಿಂದ್ ದೇಸಾಯಿ ಕಿ ಅಜೀಬ್ ದಾಸ್ತಾನ್ (೧೯೭೮)

ಇಂಗ್ಲೀಷಿನಲ್ಲಿ ಲಭ್ಯವಿರುವ ಕೃತಿಗಳು[ಬದಲಾಯಿಸಿ]

  • Silence! The Court Is in Session (Three Crowns).
  • Ghashiram Kotwal, Sangam Books, 1984
  • The Churning, Seagull Books, India, 1985
  • The Threshold: (Umbarthā - Screenplay), Sangam Books Ltd.,1985
  • Five Plays (Various Translators), Bombay, Oxford University Press, 1992.
  • The Last Days of Sardar Patel and The Mime Players: Two Screen Plays New Delhi, Permanent Black, 2001
  • Modern Indian Drama: An Anthology Sāhitya Akademi, India, 2001
  • A Friend’s Story: A Play in Three Acts , Oxford University Press, 2001
  • Kanyādān, Oxford University Press, 2002
  • Collected Plays in Translation , Oxford University Press,2003.
  • The Cyclist and His Fifth Woman: Two Plays ,Oxford India Paperbacks ,2006

ಪ್ರಶಸ್ತಿಗಳು[ಬದಲಾಯಿಸಿ]

ಕುಟುಂಬ[ಬದಲಾಯಿಸಿ]

ತೆಂಡುಲ್ಕರ್ ಗೆ ಇಬ್ಬರು ಹೆಣ್ಣುಮಕ್ಕಳು ಸುಷ್ಮಾ ಮತ್ತು ತನುಜಾ. ಇನ್ನೊಬ್ಬ ಮಗಳು, ಖ್ಯಾತ ಟೆಲಿವಿಷನ್ ತಾರೆ , ಪ್ರಿಯಾ ೨೦೦೨ರಲ್ಲಿ ತೀರಿಕೊಂಡಳು. ಇಬ್ಬರು ಸೋದರರು, ಮಂಗೇಶ್ ಮತ್ತು ಸುರೇಶ್, ಮೊಮ್ಮಗ ಆದಿತ್ಯ. ಇನ್ನೊಬ್ಬ ಮಗ ರಾಜ, ಹೆಂಡತಿ ನಿರ್ಮಲ ೨೦೦೧ ರಲ್ಲಿ ಮೃತರಾದರು. 'ಆಯುಷ್ಯ ಸಿಗುವುದು ಒಂದೇ ಬಾರಿ ಎಂದು ಹೇಳುತ್ತಿದ್ದ ತೆಂಡುಲ್ಕರ್ ಇಂಗ್ಲೀಷ್ ಅಕ್ಷರದಲ್ಲಿ ಟಿ ಎಂದು ಸಹಿಹಾಕುತ್ತಿದ್ದರು.ಮನೆಯಲ್ಲಿನ ದುರಂತಗಳನ್ನೂ ಸಹಿಸಿ, ಜೀವನವನ್ನು ಎದುರಿಸಿದರು.

ಮರಣ[ಬದಲಾಯಿಸಿ]

ಐದುವಾರ ಮಯಸ್ಥೇನಿಯಾ ಗ್ರೇವಿಸ್ ಎಂಬ ಕಾಹಿಲೆಗಾಗಿ ಶುಶ್ರೂಷೆಯಲ್ಲಿದ್ದ ತೆಂಡೂಲ್ಕರ್‍ ಪುಣೆಯ ಪ್ರಯಾಗ್ ಆಸ್ಪತ್ರೆಯಲ್ಲಿ ಮೇ ೧೯, ೨೦೦೮ರಂದು ಕೊನೆಯುಸಿರೆಳೆದರು. ಅವರ ಅಂತಿಮ ಇಚ್ಛೆಯಂತೆ, ಯಾವುದೇ ಧಾರ್ಮಿಕ ವಿಧಿಗಳಿಲ್ಲದೆ ಅಂತ್ಯಸಂಸ್ಕಾರ ನಡೆಯಿತು. ಈ ಸಂದರ್ಭಗಳಲ್ಲಿ ಅವರ ಇಬ್ಬರು ಪುತ್ರಿಯರು, ಸೋದರ ಸುರೇಶ್, ಮತ್ತು ಮರಾಠಿ ರಂಗಭೂಮಿ ಮತ್ತು ಹಿಂದಿ ಚಲನಚಿತ್ರ ರಂಗದ ಸಾವಿರಾರುಜನ ಹಾಜರಿದ್ದರು.

ಇತರೆ[ಬದಲಾಯಿಸಿ]

  • ವಿಜಯ್ ರ ಮಿತ್ರರು ಅವರಿಗೆ ನೀಡುತ್ತಿದ್ದ ಪುಸ್ತಕಗಳಲ್ಲಿ "ಪ್ರಿಯ ವಿಜಯ್ ತೆಂಡೂಲ್ಕರ್" ಎಂದು ಬರೆದಿರುತ್ತಿತ್ತು. ಅದನ್ನು ಅವರ ಮಗಳು ಪ್ರಿಯಾ ತೆಂಡೂಲ್ಕರ್, "ಪ್ರಿಯಾ ವಿಜಯ್ ತೆಂಡೂಲ್ಕರ್" ಎಂದು ಮಾಡಿಕೊಳ್ಳುತ್ತಿದ್ದರು.
  • ಹಿಂದೂ ಮೂಲಭೂತವಾದವನ್ನು ವಿರೋಧಿಸುತ್ತಿದ್ದ ವಿಜಯ್, ಈ ಕಾರಣದಿಂದ ಶಿವಸೇನೆ ಮತ್ತು ಇತರ ಸಂಘಟನೆಗಳ ವಿರೋಧ ಎದುರಿಸಬೇಕಾಯಿತು.[೧]
  1. http://www.dnaindia.com/mumbai/report-thackeray-pays-tributes-to-vijay-tendulkar-1165493