ರಾಜೇಶ್ವರಿ ಚಟರ್ಜಿ
ರಾಜೇಶ್ವರಿ ಚಟರ್ಜಿ | |
---|---|
Born | ನಂಜನಗೂಡು, ಮೈಸೂರು | ೨೪ ಜನವರಿ ೧೯೨೨
Died | 3 September 2010 ಮಲ್ಲೇಶ್ವರ, ಬೆಂಗಳೂರು | (aged 88)
Nationality | ಭಾರತೀಯ |
Alma mater | ಸೆಂಟ್ರಲ್ ಕಾಲೇಜು, ಬೆಂಗಳೂರು ಭಾರತೀಯ ವಿಜ್ಞಾನ ಮಂದಿರ, ಮಿಚಿಗನ್ ವಿಶ್ವವಿದ್ಯಾಲಯ |
Occupation(s) | ಪ್ರಾಧ್ಯಾಪಕಿ, ವಿಜ್ಞಾನಿ |
ರಾಜೇಶ್ವರಿ ಚಟರ್ಜಿ ಒಬ್ಬ ಕನ್ನಡತಿ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆಯಾಗಿದ್ದರು. ಅವರು ಕರ್ನಾಟಕದ ಮೊತ್ತಮೊದಲ ಮಹಿಳಾ ಎಂಜಿನಿಯರ್, ಮಾತ್ರವಲ್ಲ ಭಾರತೀಯ ವಿಜ್ಞಾನ ಮಂದಿರದ ಇಂಜಿನೀಯರಿಂಗ್ ವಿಭಾಗಕ್ಕೆ ನೇಮಕವಾದ ಮೊತ್ತಮೊದಲ ಮಹಿಳಾ ಉದ್ಯೋಗಿಯಾಗಿದ್ದರು.[೧]
ಕುಟುಂಬ
[ಬದಲಾಯಿಸಿ]ರಾಜೇಶ್ವರಿಯವರ ಅಜ್ಜಿ ಕಮಲಮ್ಮ ದಾಸಪ್ಪ ಅಂದಿನ ಮೈಸೂರು ರಾಜ್ಯದ ಮೊತ್ತಮೊದಲ ಮಹಿಳಾ ಪದವೀಧರೆ . ತಂದೆ ಬಿ ಎಂ ಶಿವರಾಮಯ್ಯ[೨], ನಂಜನಗೂಡಿನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರ ಅಣ್ಣ (ರಾಜೇಶ್ವರಿಯವರ ದೊಡ್ಡಪ್ಪ) ಕನ್ನಡದ ಕಣ್ವ ಎಂದೇ ಹೆಸರು ಪಡೆದ, ಖ್ಯಾತ ಕವಿ ಮತ್ತು ಸಾಹಿತಿ ಬಿ ಎಂ ಶ್ರೀಕಂಠಯ್ಯನವರು ಪತಿ ಸಿಸಿರ್ ಕುಮಾರ್ ಚಟರ್ಜಿ (ಮರಣ- ೧೯೯೪). ರಾಜೇಶ್ವರಿ ಚಟರ್ಜಿಯವರ ಮಗಳು ಇಂದಿರಾ ಚಟರ್ಜಿ (ಪ್ರಸ್ತುತ ನೆವಾಡಾ ಯುನಿವರ್ಸಿಟಿಯಲ್ಲಿನ, ಎಲೆಕ್ಟ್ರಿಕಲ್ ಮತ್ತು ಬಯೋಮೆಡಿಕಲ್ ವಿಭಾಗದಲ್ಲಿ) ಪ್ರಾಧ್ಯಾಪಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಜನನ ಮತ್ತು ಶಿಕ್ಷಣ
[ಬದಲಾಯಿಸಿ]ರಾಜೇಶ್ವರಿಯವರು ಜನಿಸಿದ್ದು ೨೪ ಜನವರಿ ೧೯೨೨ರಂದು ಮೈಸೂರಿನ ಹತ್ತಿರದ ನಂಜನಗೂಡಿನಲ್ಲಿ. ಅವರ ತಂದೆ ಬಿ ಎಮ್ ಶಿವರಾಮಯ್ಯ ನಂಜನಗೂಡಿನಲ್ಲಿ ವಕೀಲರಾಗಿ ಕೆಲಸ ಮಾಡುತ್ತಿದ್ದರು. ರಾಜೇಶ್ವರಿಯವರು ಪ್ರಾಥಮಿಕ ಶಾಲಾ ಶಿಕ್ಷಣವನ್ನು ಸ್ವತಃ ಅವರ ಅಜ್ಜಿ (ಕಮಲಮ್ಮ ದಾಸಪ್ಪ) ಸ್ಥಾಪಿಸಿದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪೂರೈಸಿದರು. ನಂತರ, ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಯನವನ್ನು ಮುಂದುವರಿಸಿ ಬಿಎಸ್ಸಿ (ಆನರ್ಸ್) ಮತ್ತು ಎಂಎಸ್ಸಿ (ಗಣಿತ ಮತ್ತು ಭೌತಶಾಸ್ತ್ರ) ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದು ಉತ್ತೀರ್ಣರಾದರು.[೩] ಮಾತ್ರವಲ್ಲ, ಮುಮ್ಮಡಿ ಕೃಷ್ಣರಾಜ ಒಡೆಯರ್ ಪಾರಿತೊಷಕ, ಎಂ ಟಿ ನಾರಾಯಣ ಅಯ್ಯಂಗಾರ್ ಬಹುಮಾನ ಮತ್ತು ವಾಲ್ಟರ್ಸ್ ಸ್ಮಾರಕ ಪಾರಿತೋಷಕ- ಈ ಮೂರೂ ಬಹುಮಾನಗಳನ್ನು ತನ್ನದಾಗಿಸಿಕೊಂಡರು. ಶಿಕ್ಷಣವೆನ್ನುವುದು ಮಹಿಳೆಯರಿಗೆ ಗಗನಕುಸುಮವಾಗಿದ್ದ ಆ ಕಾಲದಲ್ಲಿಯೂ ರಾಜೇಶ್ವರಿಯವರ ಸಾಧನೆಯು ಮೆಚ್ಚುವಂತಹುದು. ಅಲ್ಲದೆ, ಅವರು ಉನ್ನತ ಶಿಕ್ಷಣವನ್ನು ಪಡೆಯುವಲ್ಲಿ, ಅವರ ಕುಟುಂಬದ ಹಿರಿಯರು ರಾಜೇಶ್ವರಿಯವರಿಗೆ ನೀಡಿದ ಪ್ರೋತ್ಸಾಹವೇ ಕಾರಣವೆನ್ನಬಹುದು.
ಸ್ನಾತಕ ಮತ್ತು ಸ್ನಾತಕೋತ್ತರ ಪದವಿಯನ್ನು ೧೯೪೨ರಲ್ಲಿ ಪಡೆದ ಮೇಲೆ, ರಾಜೇಶ್ವರಿಯವರು ಭಾರತೀಯ ವಿಜ್ಞಾನ ಮಂದಿರದಲ್ಲಿ ಸಂಶೋಧನಾ ವಿದ್ಯಾರ್ಥಿನಿಯಾಗಿ ಸೇರಲು ಅರ್ಜಿ ಹಾಕಿದರು. ಒಂದು ಹಂತದಲ್ಲಿ ಇವರನ್ನು ವಿದ್ಯಾರ್ಥಿನಿಯಾಗಿ ಸ್ವೀಕರಿಸಬೇಕೆ ಬೇಡವೆ ಎಂಬ ಬಗ್ಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಅಧಿಕಾರಿಗಳ ನಡುವೆ ದೊಡ್ಡ ಚರ್ಚೆಯೇ ನಡೆಯಿತಂತೆ. ಯಾಕೆಂದರೆ, ಸಂಸ್ಥೆಯ ಇತಿಹಾಸದಲ್ಲಿ ಅರ್ಜಿ ಹಾಕಿದ ಅಷ್ಟೂ ವಿಧ್ಯಾರ್ಥಿಗಳಲ್ಲಿ ಇವರು ಮೊದಲ ಮಹಿಳಾ ವಿಧ್ಯಾರ್ಥಿನಿಯಾಗಿದ್ದರು ! ಸುಧೀರ್ಘ ಚರ್ಚೆಯ ನಂತರ, ಸಂಸ್ಥೆಯ ಆಗಿನ ಅಧ್ಯಕ್ಷರಾದ ಸರ್ ಸಿ ವಿ ರಾಮನ್ ಅವರು ರಾಜೇಶ್ವರಿಯವರನ್ನು ವಿದ್ಯಾರ್ಥಿನಿಯಾಗಿ ಸೇರಿಸಿಕೊಂಡರು. ೧೯೪೬ರಲ್ಲಿ ದೆಹಲಿ ಸರಕಾರವು ಇವರನ್ನು ಅತ್ಯುತ್ತಮ ವಿದ್ಯಾರ್ಥಿನಿ ಎಂದು ಆಯ್ಕೆ ಮಾಡಿತು ಮತ್ತು ವಿದೇಶದಲ್ಲಿ ಉನ್ನತ ವಿದ್ಯಾಭ್ಯಾಸವನ್ನು ಪಡೆಯಲು ಧನಸಹಾಯವನ್ನು ಮಾಡಿತು. ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಮೂರು ವರ್ಷ ಸ್ವದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯವಾಗಿತ್ತು. ಈ ಸಂದರ್ಭವನ್ನು ಸಮರ್ಥವಾಗಿ ಬಳಸಿಕೊಂಡ ರಾಜೇಶ್ವರಿಯವರು, ಉನ್ನತ ಶಿಕ್ಷಣಕ್ಕಾಗಿ ಅಮೇರಿಕಾದ ಮಿಚಿಗನ್ ವಿಶ್ವವಿದ್ಯಾಲಯಕ್ಕೆ ತೆರಳಿದರು. ೧೯೫೩ರಲ್ಲಿ ಪ್ರೊಪೆಸರ್ ವಿಲಿಯಮ್ ಗೌಲ್ಡ್‌ಡವ್ ಅವರ ಮಾರ್ಗದರ್ಶನದಲ್ಲಿ ಎಲೆಕ್ಟ್ರಾನಿಕ್ ಇಂಜಿನೀಯರಿಂಗಿನಲ್ಲಿ ಪಿಎಚ್ ಡಿ ಪದವಿಯನ್ನು ಪಡೆದರು.[೪][೫]
ವೈಯಕ್ತಿಕ ಮತ್ತು ವೃತ್ತಿ ಜೀವನ
[ಬದಲಾಯಿಸಿ]ಪಿಎಚ್‌ಡಿ ಪದವಿಯನ್ನು ಪಡೆದ ನಂತರ ೧೯೫೩ರಲ್ಲಿ ಭಾರತಕ್ಕೆ ಮರಳಿದ ರಾಜೇಶ್ವರಿಯವರು, ಭಾರತೀಯ ವಿಜ್ಞಾನ ಮಂದಿರದ ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಉದ್ಯೋಗಿ ಸದಸ್ಯರಾಗಿ ಸೇರ್ಪಡೆಯಾದರು. ಮತ್ತು ಅಲ್ಲಿ ಸಹೋದ್ಯೋಗಿಯಾಗಿದ್ದ ಸಿಸಿರ್ ಕುಮಾರ್ ಚಟರ್ಜಿಯವರನ್ನು ಅದೇ ವರ್ಷದಲ್ಲಿ ವಿವಾಹ ಆದರು. ವಿವಾಹದ ನಂತರ ಚಟರ್ಜಿ ದಂಪತಿಗಳು, ಮೈಕ್ರೋವೇವ್ ಇಂಜಿನಿಯರಿಂಗ್ ವಿಭಾಗದಲ್ಲಿ ಸಂಶೋಧನೆಯನ್ನು ಪ್ರಾರಂಭಿಸಿದರು. ಭಾರತದಲ್ಲಿ ಈ ರೀತಿಯ ಸಂಶೋಧನೆಯು ಅದೇ ಮೊದಲನೆಯದಾಗಿತ್ತು. ಅಲ್ಲದೆ, ಭಾರತದಲ್ಲಿಯೇ ಮೊತ್ತಮೊದಲ ಮೈಕ್ರೋವೇವ್ ಸಂಶೋಧನಾ ಕೇಂದ್ರವನ್ನು ಸಹ ಸ್ಥಾಪಿಸಿದರು. ಈ ಸಂದರ್ಭದಲ್ಲಿ ಅವರು ಪ್ರಾಧ್ಯಾಪಕರಾಗಿ ನೇಮಕವಾದರು. ಜೊತೆಗೆ, ಎಲೆಕ್ಟ್ರಿಕಲ್ ಕಮ್ಯುನಿಕೇಶನ್ ಇಂಜಿನಿಯರಿಂಗ್ ಇಲಾಖೆಯ ಅಧ್ಯಕ್ಷರಾಗಿಯೂ ಆಯ್ಕೆಯಾದರು.[೬]
ಕೃತಿಗಳು
[ಬದಲಾಯಿಸಿ]- ಎಲಿಮೆಂಟ್ಸ್ ಆಫ್ ಮೈಕ್ರೋವೇವ್ ಇಂಜಿನಿಯರಿಂಗ್- ರಾಜೇಶ್ವರೀ ಚಟರ್ಜಿ .[೭]
- ಡೈಎಲೆಕ್ಟ್ರಿಕ್ ಮತ್ತು ಡೈಎಲೆಕ್ಟ್ರಿಕ್ ಲೋಡೆಡ್ ಆಂಟೆನಾಗಳು ,ರಾಜೇಶ್ವರಿ ಚಟರ್ಜಿ.
- ಸುಧಾರಿತ ಮೈಕ್ರೋವೇವ್ ಎಂಜಿನಿಯರಿಂಗ್: ವಿಶೇಷ ಸುಧಾರಿತ ವಿಷಯಗಳು, ರಾಜೇಶ್ವರಿ ಚಟರ್ಜಿ.
- ವಸುಧೈವ ಕುಟುಂಬಕಮ್: ಇಡೀ ಪ್ರಪಂಚವು ಒಂದೇ ಕುಟುಂಬ: ಭಾರತದ ಕೆಲವು ಮಹಿಳೆಯರು ಮತ್ತು ಪುರುಷರ ನೈಜ ಕಥೆಗಳು ,ರಾಜೇಶ್ವರಿ ಚಟರ್ಜಿ.
- ಮಾಹಿತಿ ಸೂಪರ್ ಸ್ಕೈವೇಸ್‌ಗಾಗಿ ಆಂಟೆನಾಗಳು: ಹೊರಾಂಗಣ ಮತ್ತು ಒಳಾಂಗಣ ವೈರ್‌ಲೆಸ್ ಆಂಟೆನಾಗಳ ಕುರಿತು ಒಂದು ಪ್ರದರ್ಶನ, ಪೆರಂಬೂರ್ ಎಸ್. ನೀಲಕಂಠ, ರಾಜೇಶ್ವರಿ ಚಟರ್ಜಿ.
ಪ್ರಶಸ್ತಿ
[ಬದಲಾಯಿಸಿ]- ಜಗದೀಶ್ಚಂದ್ರ ಭೋಸ್ ಸ್ಮಾರಕ ಪ್ರಶಸ್ತಿ- ಇನ್‌ಸ್ಟಿಟ್ಯೂಟ್ ಆಫ್ ಇಂಜಿನೀಯರ್ಸ್
- ಮೌಂಟ್ ಬ್ಯಾಟನ್ ಬಹುಮಾನ- ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ರೇಡಿಯೋ ಇಂಜಿನೀಯರಿಂಗ್ - ಯುಕೆ
- ಅತ್ಯುತ್ತಮ ಸಂಶೋಧನೆ ಮತ್ತು ಉತ್ತಮ ಬೋಧನಾಕ್ರಮಕ್ಕಾಗಿ ರಾಮ್‌ಲಾಲ್ ವಾಧ್ವಾ ಪ್ರಶಸ್ತಿ - ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಾನಿಕ್ಸ್ ಮತ್ತು ಟೆಲಿಕಮ್ಯೂನಿಕೇಶನ್ ಇಂಜಿನಿಯರ್ಸ್
- ಮೇಘನಾದ ಸಹಾ ಪಾರಿತೋಷಕ.[೮]
ನಿವೃತ್ತಿಯ ನಂತರ
[ಬದಲಾಯಿಸಿ]ರಾಜೇಶ್ವರಿ ಚಟರ್ಜಿಯವರು ೧೯೮೦ರಲ್ಲಿ ಸೇವೆಯಿಂದ ನಿವೃತ್ತಿ ಹೊಂದಿದರು. ನಿವೃತ್ತಿಯ ನಂತರವೂ ಸಹ ರಾಜೇಶ್ವರಿ ಚಟರ್ಜಿಯವರು ಸಾಮಾಜಿಕ ಕೆಲಸಗಳಲ್ಲಿ ಬಹಳ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದರು. ಭಾರತೀಯ ಮಹಿಳಾ ಅಧ್ಯಯನ ಸಂಘದಲ್ಲಿ ತನ್ನನ್ನು ತೊಡಗಿಸಿಕೊಂಡು, ಮಹಿಳಾ ಶಿಕ್ಷಣದಲ್ಲಿನ ತೊಡಕುಗಳು, ಜಾತಿ ವ್ಯವಸ್ಥೆ, ಬಡತನ, ಲಿಂಗ ಅಸಮಾನತೆಯ ಬಗ್ಗೆ ಧ್ವನಿ ಎತ್ತಿದರು.
ನಿಧನ
[ಬದಲಾಯಿಸಿ]ತಮ್ಮ ೮೦ನೆಯ ವಯಸ್ಸಿನವರೆಗೂ ತುಂಬು ಜೀವನ ನಡೆಸಿದ ರಾಜೇಶ್ವರಿ ಚಟರ್ಜಿಯವರು, ೩ ಸೆಪ್ಟೆಂಬರ್ ೨೦೧೦ ರಂದು, ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.[೯]
ಛಾಯಾಂಕಣ
[ಬದಲಾಯಿಸಿ]-
ಪ್ರಯೋಗದಲ್ಲಿ ಮಗ್ನರಾಗಿರುವ ರಾಜೇಶ್ವರಿ ಚಟರ್ಜಿಯವರು ತಮ್ಮ ಪತಿ ಸಿಸಿರ್ ಕುಮಾರ್ ಚಟರ್ಜಿಯವರೊಂದಿಗೆ
-
ಇನ್‌ಸ್ಟಿಟ್ಯೂಟ್ ಆಫ್ ಎಲೆಕ್ಟ್ರಿಕಲ್ ಮತ್ತು ರೇಡಿಯೋ ಇಂಜಿನೀಯರಿಂಗ್ - ಯುಕೆ ಇವರು ಪ್ರದಾನ ಮಾಡಿದ ಒಂದು ಪ್ರಮಾಣಪತ್ರ
ಗಮನಿಸಿ: ಈ ಎಲ್ಲಾ ಛಾಯಾಚಿತ್ರಗಳನ್ನು ಭಾರತೀಯ ವಿಜ್ಞಾನ ಮಂದಿರದ ಅಧೀಕೃತ ಜಾಲತಾಣದ ಪುಟದಿಂದ ತೆಗೆದುಕೊಳ್ಳಲಾಗಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ https://connect.iisc.ac.in/2017/05/remembering-rajeswari-chatterjee-iiscs-first-woman-engineer/
- ↑ "The nuts and bolts of a superachiever". The Hindu (in Indian English). 18 April 2002. Retrieved 12 January 2020.
- ↑ https://www.shiksha.com/banking-finance-insurance/articles/commerce-students-can-go-for-bsc-h-maths-blogId-2022
- ↑ Gupta, D. p Sen (1 October 2010). "On her own terms". The Hindu (in Indian English). Retrieved 19 March 2020.
- ↑ "Remembering Rajeswari Chatterjee, IISc's First Woman Engineer – Connect with IISc". Retrieved 19 March 2020.
- ↑ "The nuts and bolts of a superachiever". The Hindu (in Indian English). 18 April 2002. Retrieved 19 March 2020.
- ↑ "Elements Microwave Engineering by Rajeswari Chatterjee - AbeBooks". www.abebooks.com (in ಇಂಗ್ಲಿಷ್). Retrieved 12 January 2020.
- ↑ http://logingender.wiscomp.org/stories-of-courage-22-rajeshwari-chatterjee/
- ↑ https://www.thehindu.com/news/cities/bangalore/posthumous-honour-for-pioneer-researcher-rajeshwari-chatterjee/article19364956.ece
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Pages using the JsonConfig extension
- CS1 Indian English-language sources (en-in)
- CS1 ಇಂಗ್ಲಿಷ್-language sources (en)
- Articles with hCards
- ವಿಜ್ಞಾನಿಗಳು
- ಭಾರತದ ವಿಜ್ಞಾನಿಗಳು
- ಕರ್ನಾಟಕದ ವಿಜ್ಞಾನಿಗಳು
- ಭಾರತದ ಮಹಿಳಾ ವಿಜ್ಞಾನಿಗಳು
- ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೫-೧೬
- ಪ್ರೋಜೆಕ್ಟ್ ಟೈಗರ್-೨ ಸ್ಪರ್ಧೆಗಾಗಿ ವಿಸ್ತರಿಸಿದ ಲೇಖನ
- ವಿಕಿ ಲವ್ಸ್ ವಿಮೆನ್ ದಕ್ಷಿಣ ಏಷ್ಯಿಯಾ ಸ್ಪರ್ಧೆಗೆ ವಿಸ್ತರಿಸಿದ ಲೇಖನ
- ವಿಕಿಕ್ಲಬ್ ಕ್ರೈಸ್ಟ್ ಯೂನಿವರ್ಸಿಟಿ ರಚಿಸಿದ ಲೇಖನಗಳು