ಬ್ರಹ್ಮಪುತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬ್ರಹ್ಮಪುತ್ರ ನದಿಯ ನಕಾಶೆ

ಹಲವು ರಾಷ್ಟ್ರಗಳ ಎಲ್ಲೆಯನ್ನು ಮೀರಿ ಹರಿಯುವ ಬ್ರಹ್ಮಪುತ್ರ ಏಷ್ಯಾದ ಪ್ರಮುಖ ನದಿಗಳಲ್ಲಿ ಒಂದು. ನೈಋತ್ಯ ಟಿಬೆಟ್ಮಾನಸಸರೋವರದ"ಚೆಮಯಂಗ್ ಡಂಗ್" ಬಳಿ ಉಗಮಿಸುವ ಈ ನದಿ ಅಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ಎಂಬ ಹೆಸರಿನಿಂದ ಕರೆಯಲ್ಪಡುತ್ತದೆ. ಮುಂದೆ ದಕ್ಷಿಣ ಟಿಬೆಟ್ ನಲ್ಲಿ ಹರಿಯುವಾಗ ಡಿಯಾಂಗ್ ಎಂದು ಕರೆಸಿಕೊಳ್ಳುವುದು. ಆ ನಂತರ ಹಿಮಾಲಯವನ್ನು ದಾಟಿ ಭಾರತದ ಅರುಣಾಚಲ ಪ್ರದೇಶ ಮತ್ತು ಅಸ್ಸಾಮ್ ರಾಜ್ಯಗಳಲ್ಲಿ ನೈಋತ್ಯಾಭಿಮುಖವಾಗಿ ಹರಿಯುವುದು.

ಬ್ರಹ್ಮಪುತ್ರ ನದಿಯ ವಿಶೇಷತೆ[ಬದಲಾಯಿಸಿ]

ಟಿಬೆಟ್ ನಲ್ಲಿ ಯಾರ್ಲುಂಗ್ ಟ್ಸಾಂಗ್ಪೋ ನದಿ.
ಬ್ರಹ್ಮಪುತ್ರ
ಗುವಾಹಾಟಿಯ ಸುಕ್ಲೇಶ್ವರ್ ಸ್ನಾನಘಟ್ಟದಲ್ಲಿ ಬ್ರಹ್ಮಪುತ್ರ ನದಿಯ ಒಂದು ನೋಟ.

ಭಾರತದಲ್ಲಿ ಇದರ ಹೆಸರು ಬ್ರಹ್ಮಪುತ್ರ. ಮುಂದೆ ಬಾಂಗ್ಲಾದೇಶವನ್ನು ಪ್ರವೇಶಿಸುವ ಈ ಮಹಾನದಿ ಅಲ್ಲಿ ಜಮುನಾ ಎಂಬ ಹೆಸರಿನಿಂದ ಗುರುತಿಸಲ್ಪಡುವುದು. ಬಾಂಗ್ಲಾದೇಶದ ಸರಿಸುಮಾರು ಮಧ್ಯಭಾಗದಲ್ಲಿ ಈ ನದಿಯು ಗಂಗಾ ನದಿಯನ್ನು ( ಬಾಂಗ್ಲಾದೇಶದಲ್ಲಿ ಗಂಗಾ ನದಿಗೆ ಪದ್ಮಾ ಎಂಬ ಹೆಸರು) ಕೂಡಿಕೊಳ್ಳುವುದು. ಈ ಸಂಗಮವು ಆ ಪ್ರದೇಶದಲ್ಲಿ ಭಾರೀ ವಿಸ್ತಾರದ ಮುಖಜಭೂಮಿಯನ್ನು ಸೃಷ್ಟಿಸಿದೆ.

ಸುಮಾರು ೧೮೦೦ ಮೈಲಿ (೨೯೦೦ ಕಿ.ಮೀ.) ಉದ್ದನಾದ ಈ ನದಿಯು ಕೃಷಿ ಮತ್ತು ಒಳನಾಡ ನೌಕಾಯಾನಕ್ಕೆ ಮುಖ್ಯ ಆಧಾರ. ೧೮೮೪ ರವರೆಗೆ ಈ ನದಿಯ ಭಾರತದ ಹೊರಗಿನ ಹರಿವಿನ ಪಾತ್ರವು ತಿಳಿದಿರಲಿಲ್ಲ. ಈ ನದಿಯನ್ನು ಟ್ಸಾಂಗ್ಪೋ-ಬ್ರಹ್ಮಪುತ್ರ ಎಂದು ಸಹ ಕರೆಯಲಾಗುತ್ತದೆ. ಭಾರತ ಮತ್ತು ಬಾಂಗ್ಲಾದೇಶದ ಹೆಚ್ಚಿನ ನದಿಗಳಿಗೆ ಸ್ತ್ರೀ ನಾಮಧೇಯಗಳಿದ್ದರೆ ಈ ನದಿಗೆ ಮಾತ್ರ ಪುರುಷ ನಾಮಧೇಯ. ಸಂಸ್ಕೃತ ಭಾಷೆಯಲ್ಲಿ ಬ್ರಹ್ಮಪುತ್ರ ಎಂದರೆ ಬ್ರಹ್ಮನ ಮಗ.[೧]

ಬ್ರಹ್ಮಪುತ್ರ ನದಿಯ ಹೆಚ್ಚಿನ ಭಾಗದಲ್ಲಿ ನೌಕಾಯಾನ ಸಾಧ್ಯ. ಭಾರತದಲ್ಲಿ ಬ್ರಹ್ಮಪುತ್ರ ಒಂದು ಪವಿತ್ರ ನದಿಯಾಗಿ ಮಾನ್ಯತೆ ಪಡೆದಿದೆ. ಹಿಮಾಲಯದಲ್ಲಿ ಹಿಮ ಕರಗುವ ಕಾಲದಲ್ಲಿ ಬ್ರಹ್ಮಪುತ್ರ ನದಿಯಲ್ಲಿ ಭಾರೀ ಪ್ರಮಾಣದ ಪ್ರವಾಹ ಉಂಟಾಗುತ್ತದೆ. ಈ ವಿದ್ಯಮಾನ ಸಾಮಾನ್ಯ. ಅಲ್ಲದೇ ಕೆಲವೊಮ್ಮೆ ಈ ನದಿಯಲ್ಲಿ ಪ್ರಳಯಸದೃಶ ಅಲೆಗಳು ಸಹ ಏಳುವುದುಂಟು. ವಿಶ್ವದ ಕೆಲವೇ ಮಹಾನದಿಗಳಲ್ಲಿ ಇಂತಹ ವಿದ್ಯಮಾನ ಘಟಿಸುತ್ತದೆ.ಈ ನದಿ ಗೆ ದೇಶದ ಅತ್ಯಂತ ಉದ್ದದ ರೈಲು ಮತ್ತು ರಸ್ತೆ ಸೇತುವೆಯನ್ನು ದಿನಾಂಕ ೨೫ ಡಿಸೆಂಬರ್ ೨೦೧೮ ರಂದು ಮಂಗಳವಾರ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ಇದರ ಉದ್ದ ೪.೯ ಕಿ.ಮೀ. ಇದರ ವೆಚ್ಚ ೫೯೦೦ ಕೋಟಿ. ಇದನ್ನು ೧೯೯೭ ರಲ್ಲಿ ದೇವೇಗೌಡರು ಪ್ರಧಾನಿ ಆಗಿದ್ದಾಗ ಅಡಿಗಲ್ಲು ಹಾಕಲಾಗಿತ್ತು.

ನದಿಯ ಹರಿವಿನ ಪಾತ್ರ[ಬದಲಾಯಿಸಿ]

ಟಿಬೆಟ್ ನಲ್ಲಿ[ಬದಲಾಯಿಸಿ]

ಯಾರ್ಲುಂಗ್ ಟ್ಸಾಂಗ್ಪೋ ( ಬ್ರಹ್ಮಪುತ್ರ ) ಉತ್ತರ ಹಿಮಾಲಯದ ಕೈಲಾಸಪರ್ವತದ ಬಳಿ ಜೀಮಾ ಯಾಂಗ್ಜಾಂಗ್ ಹಿಮನದಿಯಲ್ಲಿ ಉಗಮಿಸುತ್ತದೆ. ಅಲ್ಲಿಂದ ಸುಮಾರು ೧೭೦೦ ಕಿ.ಮೀ. ವರೆಗೆ ಈ ನದಿಯು ಟಿಬೆಟ್ ನಲ್ಲಿ ಪೂರ್ವಾಭಿಮುಖವಾಗಿ ಹರಿಯುವುದು. ಇಲ್ಲಿ ಇದು ಸರಾಸರಿ ಸಮುದ್ರಮಟ್ಟದಿಂದ ಸುಮಾರು ೪೦೦೦ ಮೀ. ಎತ್ತರದಲ್ಲಿ ಹರಿಯುವುದು. ಹೀಗೆ ಬ್ರಹ್ಮಪುತ್ರ ವಿಶ್ವದಲ್ಲಿ ಅತ್ಯಂತ ಎತ್ತರದ ಪ್ರದೇಶದಲ್ಲಿ ಹರಿಯುವ ಮಹಾನದಿಯಾಗಿದೆ. ತನ್ನ ಪಾತ್ರದ ಅತ್ಯಂತ ಪೂರ್ವದ ಅಂಚಿನಲ್ಲಿ ಈ ನದಿಯು ನಮ್ಚಾ ಬರ್ವಾ ಪರ್ವತವನ್ನು ಬಳಸಿ ಮುಂದೆ ಯಾರ್ಲುಂಗ್ ಟ್ಸಾಂಗ್ಪೋ ಕೊಳ್ಳವನ್ನು ಸೃಷ್ಟಿಸಿದೆ. ಈ ಕೊಳ್ಳವು ಜಗತ್ತಿನ ಅತಿ ಆಳದ ಕೊಳ್ಳವೆನ್ನಲಾಗುತ್ತದೆ.

ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ[ಬದಲಾಯಿಸಿ]

ಟಿಬೆಟ್‌ನಲ್ಲಿ ಬ್ರಹ್ಮಪುತ್ರ ಉಪ ನದಿಗೆ ಅಡ್ಡಲಾಗಿ ಚೀನಾವು ಅಣೆಕಟ್ಟೆ ನಿರ್ಮಿಸಿ ಭಾರಿ ವೆಚ್ಚದ ಜಲ ವಿದ್ಯುತ್‌ ಯೋಜನೆ ಕಾರ್ಯಗತ ಮಾಡುತ್ತಿರುವುದರಿಂದ ನೀರಿನ ಹರಿವು ಕಡಿಮೆ ಆಗಲಿದೆ ಎಂದು ಭಾರತ ಆತಂಕ ವ್ಯಕ್ತಪಡಿಸಿದೆ.

ಯಾರ್ಲುಂಗ್ ಝಾಂಗ್ಬೊ (ಬ್ರಹ್ಮಪುತ್ರ ನದಿಗೆ ಟಿಬೇಟ್ ಹೆಸರು) ನದಿಯ ಉಪ ನದಿಯಾದ ಕ್ಸಿಯಾಬ್ಕುಗೆ ಟಿಬೇಟಿನ ಕ್ಸಿಗಝೆ ಎಂಬಲ್ಲಿ ಜಲ ವಿದ್ಯುತ್ ಯೋಜನೆಯನ್ನು ಚೀನಾ ಆರಂಭಿಸಿದೆ. ಇದಕ್ಕೆ ರೂ.೪೯೦೦ ಕೋಟಿ ವೆಚ್ಚವಾಗುವ ಅಂದಾಜು ಇದೆ ಎಂದು ಯೋಜನೆಯ ಆಡಳಿತ ನಿರ್ವಹಣಾ ವಿಭಾಗದ ಮುಖ್ಯಸ್ಥ ಝಾಂಗ್ ಯೂನಬಾವೊ ತಿಳಿಸಿದ್ದಾರೆ. ಕ್ಸಿಗಝೆಯು ಸಿಕ್ಕಿಂಗೆ ಸನಿಹದಲ್ಲಿದೆ. ಕ್ಸಿಗಝೆಯಿಂದ ಬ್ರಹ್ಮಪುತ್ರಾ ನದಿಯು ಅರುಣಾಚಲ ಪ್ರದೇಶಕ್ಕೆ ಹರಿಯುತ್ತದೆ. ಭಾರೀ ವೆಚ್ಚದ ಲಾಲ್ಹೊ ಜಲವಿದ್ಯುತ್‌ ಯೋಜನೆ ೨೦೧೪ರ ಜೂನ್‌ ನಲ್ಲಿ ಆರಂಭಗೊಂಡಿದ್ದು ೨೦೧೯ಕ್ಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.[೨]


ಕಳೆದ ವರ್ಷ ಚೀನಾವು ಟಿಬೆಟ್‌ನ ಅತ್ಯಂತ ದೊಡ್ಡ ಝಾಮ್‌ ಜಲವಿದ್ಯುತ್‌ ಯೋಜನೆಯನ್ನು ಬ್ರಹ್ಮಪುತ್ರ ನದಿ ಮೂಲಕ ಕಾರ್ಯಾರಂಭಗೊಳಿಸಿತ್ತು. ಈ ಯೋಜನೆಗೆ ರೂ.೯೯೦೦ ಕೋಟಿ ವೆಚ್ಚ ತಗುಲಿದೆ ಎನ್ನಲಾಗಿದೆ. ಭಾರತದ ಆತಂಕವನ್ನು ನಿರಾಕರಿಸಿರುವ ಚೀನಾ, ನೀರಿನ ಹರಿವಿಗೆ ಅಡ್ಡಿಯಾಗದ ರೀತಿಯಲ್ಲಿ ಅಣೆಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ ಎಂದು ಹೇಳಿದೆ.[೩]

ಭಾರತದಲ್ಲಿ ಬ್ರಹ್ಮಪುತ್ರ[ಬದಲಾಯಿಸಿ]

ಬ್ರಹ್ಮಪುತ್ರ ಭಾರತವನ್ನು ಅರುಣಾಚಲ ಪ್ರದೇಶದಲ್ಲಿ ಪ್ರವೇಶಿಸುತ್ತದೆ. ಅಲ್ಲಿ ಈ ನದಿಗೆ ಸಿಯಾಂಗ್ ಎಂಬ ಹೆಸರು. ಟಿಬೆಟ್ ನಲ್ಲಿ ಅತಿ ಎತ್ತರದಲ್ಲಿ ಹರಿಯುವ ಈ ನದಿ ಅರುಣಾಚಲ ಪ್ರದೇಶದಲ್ಲಿ ಕೆಳ ಮಟ್ಟಕ್ಕೆ ತೀವ್ರ ಗತಿಯಲ್ಲಿ ಇಳಿಯಲಾರಂಭಿಸಿ ಕೊನೆಗೆ ಬಯಲು ಪ್ರದೇಶವನ್ನು ತಲುಪುವುದು. ಈ ಪ್ರದೇಶದಲ್ಲಿ ನದಿಗೆ ಡಿಹಾಂಗ್ ಎಂಬ ಹೆಸರು. ಸುಮಾರು ೩೫ ಕಿ.ಮೀ. ಹರಿದ ನಂತರ ಡಿಬಾಂಗ್ ಮತ್ತು ಲೋಹಿತ್ ಎಂಬೆರಡು ದೊಡ್ಡ ನದಿಗಳು ಈ ನದಿಯನ್ನು ಕೂಡಿಕೊಳ್ಳುತ್ತವೆ.

ಈ ಸಂಗಮ ಸ್ಥಾನದಿಂದ ಮುಂದೆ ನದಿಯ ಅಗಲವು ಅಗಾಧವಾಗಿ ಹೆಚ್ಚಿ ಬ್ರಹ್ಮಪುತ್ರ ಎಂದು ಕರೆಯಿಸಿಕೊಳ್ಳುವುದು. ಅಸ್ಸಾಮಿನ ಸೋನಿತ್ ಪುರದ ಬಳಿ ಬ್ರಹ್ಮಪುತ್ರವನ್ನು ಜಿಯಾ ಭೊರೇಲಿ (ಕಾಮೆಂಗ್) ನದಿ ಸೇರಿಕೊಳ್ಳುತ್ತದೆ. ಅಸ್ಸಾಮ್ ರಾಜ್ಯದುದ್ದಕ್ಕೂ ಹರಿಯುವ ಈ ಮಹಾನದಿಯ ಅಗಲ ಕೆಲವು ಕಡೆ ೧೦ ಕಿ.ಮೀ. ಗೂ ಹೆಚ್ಚು. ಡಿಬ್ರೂಗಢದಿಂದ ಮುಂದಕ್ಕೆ ಬ್ರಹ್ಮಪುತ್ರ ಎರಡು ಕವಲುಗಳಾಗಿ ಒಡೆಯುವುದು.

ಇವೆಂದರೆ ಉತ್ತರದ ಖೇರ್ಕುಟಿಯಾ ಕವಲು ಮತ್ತು ದಕ್ಷಿಣದ ಬ್ರಹ್ಮಪುತ್ರ ಕವಲು. ೧೦೦ ಕಿ.ಮೀ. ಮುಂದೆ ಈ ಕವಲುಗಳೆರಡೂ ಮತ್ತೆ ಒಂದುಗೂಡುತ್ತವೆ. ಗುವಾಹಾಟಿಯ ಬಳಿ ಹಾಜೋ ಎಂಬಲ್ಲಿ ಬ್ರಹ್ಮಪುತ್ರ ಷಿಲ್ಲಾಂಗ್ ಪ್ರಸ್ಥಭೂಮಿಯ ಶಿಲಾಪದರಗಳನ್ನು ಭೇಧಿಸುತ್ತದೆ. ಈ ಸ್ಥಳದಲ್ಲಿ ನದಿಯ ಅಗಲ ಕೇವಲ ೧ ಕಿ.ಮೀ. ಸಮೀಪದ ಸರಾಯ್ ಘಾಟ್ ಬಳಿ ಬ್ರಹ್ಮಪುತ್ರ ನದಿಗೆ ಮೊತ್ತ ಮೊದಲ ರೈಲು-ರಸ್ತೆ ಸೇತುವೆ ನಿರ್ಮಿಸಲಾಗಿ ೧೯೬೨ರಲ್ಲಿ ಸಂಚಾರಕ್ಕೆ ತೆರೆಯಲ್ಪಟ್ಟಿತು.

ಬ್ರಹ್ಮಪುತ್ರ ನದಿಯ ಪ್ರಾಚೀನ ಸಂಸ್ಕೃತ ಹೆಸರು ಲೌಹಿತ್ಯ. ಅಸ್ಸಾಮಿನ ಸ್ಥಳೀಯ ಹೆಅಸು ಲೂಯಿತ್. ಅಸ್ಸಾಮಿನ ಮೂಲನಿವಾಸಿಗಳಾದ ಬೋಡೋ ಜನರು ಇದನ್ನು ಭುಲ್ಲಮ್-ಬುಥೂರ್ ಎಂದು ಕರೆದರು. ಭಾರತದ ಇತರ ಪ್ರಮುಖ ನದಿಗಳಿಗೆ ಹೋಲಿಸಿದರೆ ಬ್ರಹ್ಮಪುತ್ರ ಹೆಚ್ಚು ಕಲುಷಿತವಾಗಿಲ್ಲ. ಆದರೆ ಈ ನದಿಯು ತನ್ನದೇ ಆದ ಸಮಸ್ಯೆಗಳನ್ನು ಎದುರಿಸುತ್ತಿದೆ.

ಪೆಟ್ರೋಲಿಯಮ್ ಸಂಸ್ಕರಣಾ ಘಟಕಗಳು ದೊಡ್ಡ ಪ್ರಮಾಣದಲ್ಲಿ ನದಿಯನ್ನು ಮಲಿನಗೊಳಿಸುತ್ತಿವೆ. ನದಿಯ ಇನ್ನೊಂದು ದೊಡ್ಡ ಸಮಸ್ಯೆಯೆಂದರೆ ಪದೇ ಪದೇ ಉಂಟಾಗುವ ಪ್ರವಾಹ. ಅರಣ್ಯನಾಶವು ಹೆಚ್ಚುತ್ತಿದ್ದಂತೆ ನದಿಯಲ್ಲಿ ಪ್ರವಾಹದ ಸಾಧ್ಯತೆಯೂ ಹೆಚ್ಚುತ್ತಿದೆ.

ಬಾಂಗ್ಲಾದೇಶದಲ್ಲಿ ಜಮುನಾ[ಬದಲಾಯಿಸಿ]

ಬಾಂಗ್ಲಾದೇಶದಲ್ಲಿ ಬ್ರಹ್ಮಪುತ್ರ ಎರಡು ಶಾಖೆಗಳಾಗಿ ಒಡೆದು ಹಿರಿದಾದ ಶಾಖೆಯು ಜಮುನಾ ಎಂಬ ಹೆಸರನ್ನು ಹೊಂದಿ ನೇರ ದಕ್ಷಿಣಕ್ಕೆ ಹರಿದು ಮುಂದೆ ಗಂಗಾ ನದಿಯನ್ನು ಕೂಡುತ್ತದೆ. ಕಿರಿಯ ಶಾಖೆಯು ಬ್ರಹ್ಮಪುತ್ರ ಎಂಬ ಹೆಸರಿನಿಂದ ಆಗ್ನೇಯಕ್ಕೆ ಹರಿದು ಮೇಘನಾ ನದಿಯನ್ನು ಸೇರುತ್ತದೆ. ಮುಂದೆ ಚಾಂದ್ ಪುರದ ಬಳಿ ಈ ಎರಡೂ ಒಗ್ಗೂಡಿ ಬಂಗಾಳ ಆಖಾತವನ್ನು ತಲುಪುತ್ತವೆ. ಹೀಗೆ ಹಲವು ನದಿಗಳ ಸಂಗಮಗಳುಂಟಾಗಿ ಬಾಂಗ್ಲಾದೇಶದ ದಕ್ಷಿಣ ಭಾಗದಲ್ಲಿ ವಿಶ್ವದಲ್ಲಿ ಅತಿ ಹಿರಿದಾದ ಮುಖಜಭೂಮಿ ಸೃಷ್ಟಿಯಾಗಿದೆ. ಇದಕ್ಕೆ ಗಂಗಾ ಡೆಲ್ಟಾ ಎಂಬ ಹೆಸರು.

ಸಾಗಾಣಿಕೆ ಮತ್ತು ನೌಕಾಯಾನ[ಬದಲಾಯಿಸಿ]

The BrahMos missile, developed jointly by India and Russia, is partly named after the Brahmaputra river.>> ಭಾರತ ಮತ್ತು ರಷ್ಯಾ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಭಾಗಶಃ ಬ್ರಹ್ಮಪುತ್ರ ನದಿಯ ಹೆಸರಿಡಲಾಗಿದೆ.

ಬ್ರಿಟಿಷರ ಕಾಲದಲ್ಲಿ ಬ್ರಹ್ಮಪುತ್ರ ನದಿಯು ಪ್ರಮುಖ ಒಳನಾಡ ಜಲಮಾರ್ಗವಾಗಿ ಬಳಕೆಯಾಗುತ್ತಿತ್ತು. ೧೯೯೦ರ ದಶಕದಲ್ಲಿ ಅಸ್ಸಾಮಿನ ಸದಿಯಾ ಮತ್ತು ಧುಬ್ರಿಗಳ ನಡಿವಿನ ಬ್ರಹ್ಮಪುತ್ರ ನದಿಯ ಪಾತ್ರವನ್ನು ರಾಷ್ಟ್ರೀಯ ಜಲಮಾರ್ಗವೆಂದು ಘೋಷಿಸಲಾಯಿತು. ಇಲ್ಲಿ ಸರಕು ಸಾಗಾಣಿಕೆಗೆ ವಿಪುಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈಚೆಗೆ ನದಿಯಲ್ಲಿ ವಿಹಾರಯಾನ ಕೂಡ ಜನಪ್ರಿಯಗೊಳ್ಳುತ್ತಿದೆ. ಒಂದು ವಿಹಾರನೌಕೆಯು ನದಿಯಲ್ಲಿ ಸಂಚಾರ ಆರಂಭಿಸಿದೆ.

ಉಲ್ಲೇಖ[ಬದಲಾಯಿಸಿ]

  1. "Brahmaputra - Meaning in sanskrit - Shabdkosh". www.shabdkosh.com. Retrieved 11 January 2020.
  2. "ಬ್ರಹ್ಮಪುತ್ರಾ ಉಪನದಿಗೆ ಅಣೆಕಟ್ಟು ನಿರ್ಮಾಣ ಭಾರತಕ್ಕೆ ತೊಂದರೆಯಿಲ್ಲ: ಚೀನಾ". Varthabharati. Retrieved 11 January 2020.
  3. "ಬ್ರಹ್ಮಪುತ್ರ ಉಪನದಿಗೆ ಚೀನಾ ಅಣೆಕಟ್ಟೆ: ಭಾರತ ಆತಂಕ". Archived from the original on 2016-10-02. Retrieved 2016-10-03.