ನಗರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿರಾಯಿಸ್ ,ಅಥೆನ್ಸ್ ನಗರದ ಬಂದರು ನಗರದ ನಕ್ಷೆಯನ್ನು ತೋರಿಸುವ ೧೯೦೮ರ ಚಿತ್ರ
ನವೋದಯ ಕಾಲದ "ಆದರ್ಶ ನಗರ" ಫ್ರಾ ಕಾರ್ನ್‍ ವೇಲ್ರ ತೈಲವರ್ಣಚಿತ್ರ (c1480). Panel in the Walters Art Museum


ನಗರವು ತುಲನಾತ್ಮಕವಾಗಿ ಒಂದು ದೊಡ್ಡ ಮತ್ತು ಶಾಶ್ವತವಾದ ವಾಸಸ್ಥಳ. ಒಂದು ನಗರವನ್ನು ಒಂದು ಪಟ್ಟಣದಿಂದ ಭೇದ ಮಾಡುವ ಯಾವುದೇ ಅಂಗೀಕೃತ ಅಥವಾ ಪಾರಿಭಾಷಿಕ ವ್ಯಾಖ್ಯಾನಗಳಿಲ್ಲವಾದರೂ, ಹಲವು ನಗರಗಳು ಸ್ಥಳೀಯ ಕಾನೂನಿನ ಮೇಲೆ ಆಧಾರಿತವಾದ ಒಂದು ವಿಶಿಷ್ಟ ಆಡಳಿತಾತ್ಮಕ, ಕಾನೂನುಬದ್ಧ, ಅಥವಾ ಐತಿಹಾಸಿಕ ಮಾನ್ಯತೆಯನ್ನು ಹೊಂದಿರುತ್ತವೆ —ಉದಾಹರಣೆಗೆ ಮ್ಯಾಸಚೂಸಿಟ್ಸ್‌ನಲ್ಲಿ ಸ್ಥಳೀಯ ಗುರುತಿನ (ರಾಜ್ಯ) ಶಾಸಕಾಂಗದಿಂದ ಅನುಮೋದನೆಗೊಂಡ ಏಕೀಕರಣದ ಒಂದು ನಿಯಮವು ಪಟ್ಟಣಗಳನ್ನು ನಗರ ಸರ್ಕಾರದ ಪ್ರಕಾರಗಳು, ಹಕ್ಕುಗಳು, ಕರ್ತವ್ಯಗಳು ಮತ್ತು ಸವಲತ್ತುಗಳಿಂದ ಬೇರ್ಪಡಿಸುತ್ತವೆ —ಇದೇ ವಿಧದ ವ್ಯತ್ಯಾಸಗಳನ್ನು ವಿಶ್ವಾದ್ಯಂತ ಮಾಡಲಾಗುತ್ತದೆ, ವಿಶೇಷವಾಗಿ ಬ್ರಿಟನ್‌ನ ಹಿಂದಿನ ವಸಾಹತುಗಳಲ್ಲಿ. ಐತಿಹಾಸಕವಾಗಿ, ಯೂರಪ್‌ನಲ್ಲಿ, ನಗರವು ಒಂದು ಕಥೀಡ್ರಲ್ಅನ್ನು ಹೊಂದಿದ ವಾಸಸ್ಥಳವೆಂದು ತಿಳಿಯಲಾಗಿತ್ತು; ನಂತರದ ಬಳಕೆಗಳಲ್ಲಿ, ವಿಶೇಷವಾಗಿ ಬ್ರಿಟನ್ ಮತ್ತು ಕಾಮನ್‌ವೆಲ್ತ್ ಒಕ್ಕೂಟದ ಭಾಗಗಳಲ್ಲಿ, ನಗರವು ರಾಜಶಾಸನವನ್ನು ಹೊಂದಿದ ಒಂದು ವಾಸಸ್ಥಳ.

ಅರ್ಥ ವ್ಯಾಪ್ತಿ[ಬದಲಾಯಿಸಿ]

ನಗರ - ನಗರ ಮತ್ತು ನಾಗರಿಕತೆ ಇವೆರಡರ ಅರ್ಥವೂ ಒಂದೇ. ಒಂದು ಊರು ಹುಟ್ಟಿ ಬೆಳೆದರೆ, ಅದು ಆ ಸಮಾಜದ ಕೆಲವು ಮಂದಿ ವ್ಯವಸಾಯವನ್ನು ಬಿಟ್ಟು ಇತರ ಕಸಬುಗಳಿಗೆ ತಮ್ಮ ಗಮನವನ್ನು ಕೊಡಲು ಸಮರ್ಥರಾಗಿದ್ದಾರೆ ಎಂಬುದನ್ನು ತೋರಿಸುತ್ತದೆಯಲ್ಲದೆ ಒಂದು ಪರಿಮಿತಿ ಪ್ರದೇಶದಲ್ಲಿ ವಿಶಿಷ್ಟ ವಿದ್ಯೆಗಳನ್ನು ಕಲಿತವರು ನೆರೆಯುವುದರ ಪರಿಣಾಮವಾಗಿ ಮನುಷ್ಯ ಹೇಗೆ ಒಂದು ಸಂಕೀರ್ಣ ಸಮಾಜವನ್ನು ರಚಿಸಲು ಸಮರ್ಥನಾದನೆಂಬುದನ್ನೂ ಸೂಚಿಸುತ್ತದೆ.

ನಗರ ಎಂಬ ಭಾವನೆ ಅರ್ಥವೇನು? ಅಗ್ರಾಮ್ಯ ಎಂಬುದಕ್ಕೆ ಸಮಾನಾರ್ಥವಾಗಿ ಪದೇ ಪದೇ ಪ್ರಯುಕ್ತವಾಗುವ ಈ ಶಬ್ದವನ್ನು ಸಮಾಜಶಾಸ್ತ್ರಜ್ಞರೂ ಮಾನವಶಾಸ್ತ್ರಜ್ಞರೂ ಕಡೆಪಕ್ಷ ಎರಡು ಬೇರೆ ರೀತಿಗಳಲ್ಲಾದರೂ ಉಪಯೋಗಿಸುತ್ತಾರೆ. ಮೊದಲನೆಯದರಲ್ಲಿ ಅದರ ಗಾತ್ರವನ್ನು ನೋಡಿ ಎಂದರೆ ಒಂದು ಭೂಪ್ರದೇಶದಲ್ಲಿ ಎಷ್ಟು ಮಂದಿ ವಾಸ ಮಾಡುತ್ತಾರೆ ಎಂಬುದನ್ನು ಪರಿಗಣಿಸಿ, ನಗರಕ್ಕೆ ಲಕ್ಷಣವನ್ನು ಹೇಳುತ್ತಾರೆ. ಈ ಲಕ್ಷಣ, ಮುಖ್ಯವಾಗಿ ಬೇರೆ ಬೇರೆ ದೇಶಗಳಲ್ಲಿನ ಜನಗಣತಿಗಳಿಂದ ಲಭಿಸುವ ಲೆಕ್ಕಗಳ ಅಂಶಗಳನ್ನು ವಿಶ್ಲೇಷಿಸುವುದರಲ್ಲಿ ಉಪಯುಕ್ತವಾಗಿದ್ದರೂ ಇದಕ್ಕೆ ಕೆಲವು ಮಿತಿಗಳುಂಟು. ಒಂದು ಯಾವುವೆಂದರೆ, ಒಂದೇ ಗಾತ್ರದ ನಗರಗಳು ತಮ್ಮ ಸಾಮಾಜಿಕ ರಚನೆಯಲ್ಲಿ ಒಂದೇ ತರವಾಗಿಲ್ಲ. ಅದರಲ್ಲೂ ಒಂದು ಸಂಸ್ಕøತಿಯಿಂದ ಮತ್ತೊಂದು ಸಂಸ್ಕøತಿಗೆ ನಾವು ಚಲಿಸಿದ್ದೇ ಆದರೆ ಈ ವ್ಯತ್ಯಾಸ ಎದ್ದು ಕಾಣುತ್ತದೆ. ಉದಾಹರಣೆಗೆ ಭಾರತದಲ್ಲಿನ 50000 ಜನರಿರುವ ಊರುಗಳು ಅಷ್ಟೇ ಜನವುಳ್ಳ ಈಗಿನ ಯೂರೋಪು ಅಥವಾ ಉತ್ತರ ಅಮೆರಿಕದ ಊರುಗಳಿಗಿಂತ ಕೆಲವು ವಿಷಯಗಳಲ್ಲಿ ವಿಶೇಷವಾಗಿ ಬೇರೆ ತರದವಾಗಿವೆ. ಜನಸಂಖ್ಯೆಯೊಂದರಿಂದಲೇ ನಗರದ ಲಕ್ಷಣ ಹೇಳ ಹೊರಡುವುದರಲ್ಲಿ ಮಿತಿಗಳಿರುವುದರಿಂದ ಬಹಳ ಮಂದಿ ಸಮಾಜಶಾಸ್ತ್ರಜ್ಞರೂ ಮಾನವಶಾಸ್ತ್ರಜ್ಞರೂ ಅನೇಕ ಮಾನದಂಡಗಳನ್ನು ಗ್ರಾಮ ಮತ್ತು ನಗರಗಳ ನಡುವಣ ವೈಲಕ್ಷಣವನ್ನು ಹೇಳುವುದಕ್ಕೆ ಉಪಯೋಗಿಸುತ್ತಾರೆ. ಗಾತ್ರದ ಜತಗೆ, ಅವರು ಸಾಂದ್ರತೆ ಮತ್ತು ಮುಖ್ಯವಾಗಿ ವ್ಯವಸಾಯೇತರ ಕಸುಬುಗಳಲ್ಲಿ (ಓದುಬರಹವನ್ನು ಬಲ್ಲ ಜನರನ್ನೂ ಸೇರಿಕೊಂಡು) ಶೇಕಡವಾರು ಎಷ್ಟೆಷ್ಟು ಜನ ನಿಯುಕ್ತರಾಗಿದ್ದಾರೆ ಎಂಬುದನ್ನೂ ಪರಿಗಣಿಸುತ್ತಾರೆ.

ಒಂದು ನಗರಕ್ಕೆ ಯಾವ ಲಕ್ಷಣವನ್ನು ಹೇಳಬೇಕೆಂಬ ಬಗ್ಗೆ ವಿವಾದವಿದ್ದರೂ, ಸಮಾಜವಿಜ್ಞಾನಿಗಳು ಗ್ರಾಮೀಣ ಸಮಾಜಗಳಿಗಿಂತ ನಗರಗಳು ಅನೇಕ ಗಮನಾರ್ಹವಾದ ರೀತಿಗಳಲ್ಲಿ ಭಿನ್ನವಾಗಿದೆ ಎಂಬುದನ್ನು ಒಪ್ಪುತ್ತಾರೆ.

ಪ್ರಾಚ್ಯನಗರ[ಬದಲಾಯಿಸಿ]

ನಮಗೆ ತಿಳಿದಿರುವ ಮಟ್ಟಿಗೆ, ಸಮೀಪ ಪ್ರಾಚ್ಯದ ಮೆಸಪೊಟೇಮಿಯ ನದಿಪ್ರದೇಶದಲ್ಲಿ ಮೊದಲು ಆ ಬಳಿಕ ನೈಲ್ ನದಿಯ ಕಣಿವೆಯಲ್ಲಿ ನಗರಗಳು ಹುಟ್ಟಿಕೊಂಡವು. ಪ್ರಾಚೀನತಮ ನಗರಗಳು ಹುಟ್ಟಿದ ಕಾಲ ಯಾವುದು ಎಂಬುದರ ಬಗ್ಗೆ ವಿವಾದವೆದ್ದಿದೆ; ಪಂಡಿತರು ಈ ವಿಷಯದಲ್ಲಿ ಭಿನ್ನಾಭಿಪ್ರಾಯವುಳ್ಳವರಾಗಿರುವ ಕಾರಣವೇನೆಂದರೆ, ಅವರು ನಗರಕ್ಕೆ ಲಕ್ಷಣ ಹೇಳುವುದರಲ್ಲೇ ತುಂಬ ವ್ಯತ್ಯಾಸವಿದೆ. ಮೆಸಪೊಟೇಮಿಯ ನಗರಗಳ ಕಾಲ ಸುಮಾರು ಕ್ರಿ.ಪೂ. ಮೂರು ಸಾವಿರ ವರ್ಷಗಳಿಂದ ಆರುಸಾವಿರ ವರ್ಷಗಳವರೆಗೆ ಹರಡಿದೆ. ನಗರಕ್ಕೆ ಹಲವಾರು ನಿರ್ಧಾರಕಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಲಕ್ಷಣವನ್ನು ನಿರೂಪಿಸುವವರು ಹೇಳುವ ಕಾಲಕ್ಕಿಂತಲೂ ಇನ್ನೂ ಮುಂಚೆಯೇ ಉದಿಸಿದವೆಂದು, ಜನವಸತಿ ಹೆಚ್ಚಾಗಿರುವುದೇ ನಗರದ ಲಕ್ಷಣವೆಂದು ಹೇಳುವವರು ಅಭಿಪ್ರಾಯಪಡುತ್ತಾರೆ. (ಈ ಹಲವಾರು ನಿರ್ಧಾರಕಗಳಲ್ಲಿ ನಾವು ಇಲ್ಲಿ ಗಣನೆಗೆ ತೆಗೆದುಕೊಳ್ಳುವ ಓದುಬರಹ ಬಲ್ಲವರ ಪಂಗಡವೂ ಸೇರಿದೆ).

Ancient Ur of Sumer in present-day Tell el-Mukayyar in Iraq, one of the world's earliest cities

ಈಗಿನ ಪೌರಪ್ರದೇಶಗಳಿಗಿಂತಲೂ ಆಗಿನ ನಗರಗಳು ತುಂಬ ಚಿಕ್ಕವಾಗಿದ್ದವೆಂಬ ವಿಷಯದಲ್ಲಿ ಪಂಡಿತರೆಲ್ಲರೂ ಒಮ್ಮತವುಳ್ಳವರಾಗಿದ್ದಾರೆ. ಆ ಕಾಲದ ನಗರದ ಜನಸಂಖ್ಯೆ 5,000-10,000 ಇದ್ದಿರಬಹುದು. ಇವುಗಳಲ್ಲೂ ಊರಂಚಿನಲ್ಲಿರುವ ಜನಗಳು ವ್ಯವಸಾಯ ಪಶುಪಾಲನೆ ಮಾಡಿಕೊಂಡಿದ್ದಿರಬಹುದು.

ಅದೂರಪ್ರಾಚ್ಯದಿಂದ ಸಿಂಧೂನದಿಯ ಕಣಿವೆಗೆ ನಗರಗಳು ಹರಡುವ ವೇಳೆಗೆ ಅನೇಕ ಶತಮಾನಗಳು ಉರುಳಿದವು. ಹರಪ್ಪ ಮತ್ತು ಮೊಹೆಂಜೋದಾರೋ ಎಂಬ ಪ್ರಖ್ಯಾತ ನಗರಗಳೂ ಸುಮಾರು ಕ್ರಿ.ಪೂ. 2500ರಲ್ಲಿ ಹುಟ್ಟಿಕೊಂಡವು. ಇದಾದ ಬಳಿಕ ಕ್ರಿ.ಪೂ. 1200ರ ಹೊತ್ತಿಗೆ ಚೀನದ ಹ್ವಾಂಗ್ ಹೋ ನದೀಪ್ರಾಂತ್ಯದಲ್ಲಿ ಪಟ್ಟಣಗಳು ಪ್ರಾದುರ್ಭವಿಸಿದವು. ಏಷ್ಯದ ಇತರ ಕೇಂದ್ರಗಳಲ್ಲಿ ನಗರಗಳು ತಲೆದೋರಿದ್ದು ಇನ್ನೂ ಬಹಳ ಕಾಲವಾದ ಮೇಲೆ.

ಇಂಡೊನೇಷಿಯಾದಲ್ಲಿ ಐದನೆಯ ಶತಮಾನದಾಚೆಗಿನವರೆಗೂ ಪಟ್ಟಣಗಳು ಬೆಳೆಯಲಿಲ್ಲವೆಂದು ತಿಳಿದುಬಂದಿದೆ; ಜಪಾನಿನಲ್ಲಿ ಮೊದಲ ಊರುಗಳು ಕ್ರಿ.ಶ.4000 ಹೊತ್ತಿಗೆ ಹುಟ್ಟಿಕೊಂಡವು.

ಪರಂಪರೆಯಾಗಿ ಬಂದಿರುವ ಪ್ರಾಚ್ಯನಗರಗಳು ಈಚೆಗಿನವರೆಗೂ ಕೈಗಾರಿಕಾ ತಂತ್ರವಿದ್ಯೆಯ ಹಿಂದಿನ ಪರಿಸರದ ಫಲಗಳು. ಅಲ್ಲಿನ ಉದ್ಯೋಗತಂತ್ರಗಳು ಜೀವಂತ ಪ್ರಾಣಿಗಳ ಶಕ್ತಿಯ ಮೇಲೂ ಸರಳವಾದ ಉಪಕರಣಗಳ ಮೇಲೂ ಅವಲಂಬನೆಗೊಂಡಿದ್ದವಲ್ಲದೆ ಅವುಗಳ ನಿರ್ವಹಣೆಯಲ್ಲಿ ವೈಜ್ಞಾನಿಕ ತಿಳುವಳಿಕೆಯ ಅಭಾವವಿತ್ತು.

Mohenjo-daro, a World Heritage site that was part of the Indus Valley Civilization
ಚಿತ್ರ:Multan map.jpg
A map dating 1669 showing the location of Multan, Pakistan

ಚೀನ, ಇಂಡಿಯ, ಮಧ್ಯಪ್ರಾಚ್ಯ ಇತ್ಯಾದಿ ಪ್ರದೇಶಗಳ ನಗರಗಳಲ್ಲಿ ಒಂದಕ್ಕೊಂದಕ್ಕೆ ತುಂಬ ವ್ಯತ್ಯಾಸವಿದ್ದರೂ ಅವುಗಳೆಲ್ಲಕ್ಕೂ ಸಾಮಾನ್ಯವಾದ ಕೆಲವು ಲಕ್ಷಣಗಳು ಇದ್ದವು. ಪ್ರಾಚ್ಯನಗರವೊಂದರ ಜೀವನ ಪರಿಸ್ಥಿತಿಯ ಚಿತ್ರ ಹೀಗಿದೆ, ಅದರ ಮಧ್ಯಭಾಗವೇ ಸಕಲ ಸೇನಾತಂತ್ರಗಳ ಕಾರ್ಯಕ್ಷೇತ್ರ. ಈ ಭಾಗದಲ್ಲಿ ಮುಖ್ಯವಾದ ಸರ್ಕಾರಿ ಕಟ್ಟಡಗಳೂ ಮತೀಯ ಮಂದಿರಗಳೂ ಮತ್ತು ವಿದ್ಯಾಶಾಲೆಗಳೂ ಇರುತ್ತಿದ್ದರೂ ಇಲ್ಲಿ ಸಮಾಜದ ಉಚ್ಚವರ್ಗದ ಜನ ವಾಸಿಸುತ್ತಿದ್ದರು. ಸಂಚಾರವ್ಯವಸ್ಥೆ ಇನ್ನೂ ದರಿದ್ರಾವಸ್ಥೆಯಲ್ಲೇ ಇದ್ದುದರ ಪ್ರಯುಕ್ತ ನಗರದ ಈ ಭಾಗ ವಾಸಕ್ಕೆ ತುಂಬ ಪ್ರಶಸ್ತವೆನಿಸಿತ್ತು. ಮುಖ್ಯಕಾರ್ಯಗಳು ಜರಗುವ ಎಡೆಗಳಿಗೆ ಸಮೀಪವಾಗಿಯೇ ಇರುವ ಸೌಕರ್ಯ ಈ ಭಾಗದಲ್ಲಿ ನೆಲಸಿರುವವರಿಗೆ ಒದಗುತ್ತಿತ್ತು. ಆದುದರಿಂದ ಊರ ಮಧ್ಯದಲ್ಲಿ ವಾಸಮಾಡುವುದರಿಂದ ಉಚ್ಚ ವರ್ಗದ ಜನ ಪರಸ್ಪರವಾಗಿ ಕಲೆತು ಮಾತನಾಡಬಹುದಿತ್ತು; ಇದರಿಂದ ಅವರು ತಮ್ಮ ಮುಖಂಡತ್ವವನ್ನು ಉಳಿಸಿಕೊಳ್ಳಲೂ ಸಮರ್ಥರಾಗುತ್ತಿದ್ದರು; ಇದಕ್ಕೆ ವಿರುದ್ಧವಾಗಿ, ಉಚ್ಚವರ್ಗದವರ ಸೇವಕರ ಹೊರತು, ಮಿಕ್ಕ ಕೆಳವರ್ಗದ ಕಾರ್ಮಿಕ ಜನ ಈ ಕೇಂದ್ರಭಾಗಕ್ಕೆ ದೂರವಾಗಿ ಊರಿನ ಹೊರವಲಯದಲ್ಲಿ ವಾಸಿಸುತ್ತಿದ್ದರು.

ಪ್ರಾಚ್ಯನಗರದಲ್ಲಿ ಮತ್ತೊಂದು ವಿಶೇಷ ಲಕ್ಷಣವಿದೆ. ಅಲ್ಲಿ ಜಾತಿ ಮತ್ತು ವೃತ್ತಿಗಳನ್ನು ಆಧರಿಸಿ ಪಂಗಡಗಳು ಹರಡಿರುವುದರಲ್ಲಿ ವ್ಯತ್ಯಾಸಗಳು ಎದ್ದು ಕಾಣುತ್ತವೆ. ಉದಾಹರಣೆ, ಚೀನ, ಭಾರತ ಮತ್ತು ಮಧ್ಯಪ್ರಾಚ್ಯಗಳ ನಗರಗಳಲ್ಲಿ ಒಂದು ವಿಶಿಷ್ಟ ವೃತ್ತಿಯ ಜನ ಯಾವುದೋ ಒಂದು ಬೀದಿಯಲ್ಲಿ ಸಾಧಾರಣವಾಗಿ ವಾಸಿಸುತ್ತಿರುವುದು ಕಂಡುಬರುತ್ತದೆ. ಕೆಲವು ವಿಶಿಷ್ಟ ಪ್ರದೇಶಗಳು ಒಂದು ವಿಶಿಷ್ಟ ದರ್ಜೆಯ ಅಥವಾ ಜಾತಿಯ ಜನಗಳಿಗೆ ಮೀಸಲಾಗಿದೆ.

ಅಲ್ಲದೆ ಈ ನಗರಗಳಲ್ಲಿ ಇಂಥ ಭೂಮಿ ಈ ಕೆಲಸಕ್ಕೇ ವಿನಿಯೋಗವಾಗಬೇಕೆಂಬ ನಿಯಮ ಅಷ್ಟು ಕಟ್ಟುನಿಟ್ಟಾಗಿಲ್ಲ. ಇದರ ಪರಿಣಾಮವಾಗಿ ಒಂದು ನೆಲವನ್ನು ಅನೇಕ ಕಾರ್ಯಗಳಿಗೆ ಉಪಯೋಗಿಸುವುದು ಕಂಡುಬರುತ್ತದೆ. ಅನೇಕ ವೇಳೆ ಒಂದು ಕಸಬಿನವನ ಅಂಗಡಿ ಆತ ವಾಸಮಾಡುವ ಮನೆಯ ಮುಂಭಾಗಕ್ಕೆ ಒತ್ತಿಕೊಂಡಿದೆ; ಪೂಜಾಮಂದಿರಗಳಲ್ಲಿ ಪಾಠಶಾಲೆಗಳು ತಮಗೆ ವಿಶಿಷ್ಟವಾದ ಕೆಲಸವನ್ನು ಜರುಗಿಸುತ್ತವೆ.

The Round city of Baghdad, the capital of Iraq
Extent and major sites of the Indus Valley Civilization of ancient India

ಈ ನಗರಗಳ ಸಾಮಾಜಿಕ ವ್ಯವಸ್ಥೆ ಹೀಗಿದೆ. ಸಮಾಜದ ಶ್ರೇಷ್ಠ ಮುಖಂಡರೆಲ್ಲ ಭೂಮಾಲೀಕರನ್ನೂ ಸೇರಿಸಿಕೊಂಡು ನಗರ ಕೇಂದ್ರಗಳಲ್ಲಿ ವಾಸಮಾಡುತ್ತಿದ್ದರೇ ಹೊರತು ಹಳ್ಳಿಗಳಲ್ಲಲ್ಲ ಎಂಬುದನ್ನು ನೆನಪಿನಲ್ಲಿಡಬೇಕು. ಅಖಿಲ ಸಮಾಜದ ಆಡಳಿತ, ವಿದ್ಯೆ ಮತ್ತು ಮತ ಇವುಗಳಿಗೆ ಸಂಬಂಧಿಸಿದ ಮುಖ್ಯ ಸಂಸ್ಥೆಗಳೆಲ್ಲ ಇವರ ವಶದಲ್ಲಿದ್ದವು. ಅಲ್ಲದೆ, ಈ ಶ್ರೇಷ್ಠವರ್ಗ ಸಮಾಜದ ಧ್ಯೇಯಗಳಿಗೂ ಆಕರವಾಗಿದ್ದಿತು. ಮತದ ಮತ್ತು ಕುಟುಂಬದ ಮೇಲ್ಪಂಕ್ತಿಗಳಿಗೂ ಮತ್ತು ವಿದ್ಯೆಯ ಪ್ರಕಾರಗಳಿಗೂ ಇವರೇ ಆಧಾರ. ಎಷ್ಟಾದರೂ ತಮ್ಮ ಮಕ್ಕಳನ್ನು, ಮುಖ್ಯವಾಗಿ ವಿದ್ಯೆ ಕಲಿಯಲು ಗಂಡು ಹುಡುಗರನ್ನು ಕಳುಹಿಸುವುದಕ್ಕೆ ಈ ಪಂಗಡಕ್ಕೆ ಸಾಧ್ಯವಾಗಿತ್ತು, ಮತ್ತು ಈ ನಗರಗಳಲ್ಲಿ ಪ್ರಾಶಸ್ತ್ಯವನ್ನು ಪಡೆದ ಬಹುವಿಸ್ತಾರವಾದ ಧಾರ್ಮಿಕೋತ್ಸವಗಳನ್ನು ನಡೆಸಲು ಇವರಿಗೆ ಹಣದ ಸೌಕರ್ಯವೂ ಇತ್ತು.

ಕೈಗಾರಿಕಾ ಯುಗಕ್ಕೆ ಮುಂಚೆ ಈ ನಗರಗಳಲ್ಲಿ ವಾಸಮಾಡುತ್ತಿದ್ದವರ ಪೈಕಿ ಬಹುಸಂಖ್ಯಾತರು ಕೆಳವರ್ಗದ ಜನ-ಕಸಬುದಾರರು, ಕೂಲಿ ಮುಂತಾದವರು ಅಥವಾ ಕೆಲವು ಬಹಿಷ್ಕøತ ಪಂಗಡಗಳವರು. ಈ ಜನಕ್ಕೆ ಸಮಾಜದ ಉಚ್ಚಧ್ಯೇಯಗಳಿಗೆ ಅನುಸಾರವಾಗಿ ಜೀವನವನ್ನು ನಡೆಸಲು ತಕ್ಕ ಸೌಕರ್ಯಗಳಿರಲಿಲ್ಲ. ಉದಾಹರಣೆಗೆ, ಒಂದೇ ಮನೆಯಲ್ಲಿ ದೊಡ್ಡ ಕುಟುಂಬಗಳು ಬಾಳನ್ನು ನಡೆಸುವ ವ್ಯವಸ್ಥೆಯನ್ನು ಉಚ್ಚವರ್ಗದ ಜನ ಮಾತ್ರ ಕಲ್ಪಿಸಿಕೊಂಡಿದ್ದಾರೆ. ಕೆಳವರ್ಗದ ಜನರ ಮನೆಯಲ್ಲಿ ಸಾಮಾನ್ಯವಾಗಿ ಗಂಡ ಹೆಂಡತಿ ಮಕ್ಕಳು ಒಬ್ಬಿಬ್ಬರು ಮುದುಕರು ಇಷ್ಟು ಜನ ಸಾಮಾನ್ಯವಾಗಿ ಕಂಡುಬರುತ್ತಾರೆ.

ಮೇಲೆ ಹೇಳಿರುವ ಮಾದರಿಗಳನ್ನು ತೋರುವ ದೇಶೀಯ ನಗರಗಳ ಜತೆಗೆ, ಕಳೆದ ಒಂದೆರಡು ಶತಮಾನಗಳಿಂದೀಚೆಗೆ ಮತ್ತೊಂದು ಮಾದರಿಯ ನಗರಗಳು ಪ್ರಾಚ್ಯದಲ್ಲಿ ಹುಟ್ಟಿಕೊಂಡಿವೆ. ಇದು ಯೂರೋಪಿನವರು ಹುಟ್ಟುಹಾಕಿದ ಉಪನಿವೇಶೀನಗರ. ಮದರಾಸು ಕಲ್ಕತ್ತ ಇಂಥ ನಗರಗಳನ್ನೊಳಗೊಂಡು ಕೆಲವು ಮುಖ್ಯ ನಗರಗಳೂ ಮತ್ತು ಚೀನ ಮತ್ತು ಆಗ್ನೇಯ ಏಷ್ಯಗಳ ಕೆಲವು ದೊಡ್ಡ ಪಟ್ಟಣಗಳೂ ವಸಾಹತು ಆಡಳಿತದ ಫಲವಾಗಿ ಹುಟ್ಟಿಕೊಂಡಿವೆ. ಯೂರೋಪಿನ ಪ್ರಭುತ್ವಗಳು ತಮ್ಮ ಆಡಳಿತವನ್ನು ನಡೆಸುವುದಕ್ಕೆ ಇಲ್ಲಿ ಮೂಲಸ್ಥಾನಗಳನ್ನು ಏರ್ಪಡಿಸಿಕೊಂಡವು. ಇವುಗಳ ಮೂಲಕವೇ ಸಾಮ್ರಾಜ್ಯದ ಐಶ್ವರ್ಯವೆಲ್ಲ ಅವರ ತಾಯಿನಾಡಿಗೆ ಹರಿದುಹೋಗುತ್ತಿತ್ತು. ಇತ್ತೀಚಿನವರೆಗೆ ಏಷ್ಯ ಖಂಡದ ದೇಶಗಳು ತಮ್ಮ ರಾಜಕೀಯ ಸ್ವಾತಂತ್ರ್ಯವನ್ನು ಗಳಿಸಿಕೊಳ್ಳುವ ಪರ್ಯಂತ, ಈ ಉಪನಿವೇಶೀ ನಗರಗಳ ಮುಖ ಯೂರೋಪಿನ ಕಡೆಗಿತ್ತೇ ಹೊರತು ಸ್ಥಳೀಯ ಸಮಾಜದತ್ತ ಅಲ್ಲ.

ಈಗ ದೇಶೀಯ ನಗರಗಳೂ ಉಪನಿವೇಶೀ ನಗರಗಳೂ ಜತೆಗೆ ಹೊಸದಾಗಿ ನಿರ್ಮಿತವಾಗಿರುವ ನಗರಗಳೂ ಸಹ ಕೈಗಾರಿಕಾಕರಣ ಮತ್ತು ಪಾಶ್ಚಾತ್ಯೀಕರಣದ ದೆಸೆಯಿಂದ ತುಂಬ ಮಾರ್ಪಾಟು ಹೊಂದುತ್ತಿವೆ. ಹಳ್ಳಿಗಳಿಗಿಂತ ಪಟ್ಟಣಗಳಲ್ಲಿ ವಾಸಮಾಡುವ ಜನ ಹೆಚ್ಚುತ್ತಿದ್ದಾರೆ.

ಪಾಶ್ಚಾತ್ಯ ನಗರ[ಬದಲಾಯಿಸಿ]

ಏಷ್ಯದಲ್ಲಿ ಔದ್ಯೋಗೀಕೃತವಾಗುತ್ತಿರುವ ನಗರವನ್ನು ಅರಿಯಬೇಕಾದರೆ ಯೂರೋಪಿನಲ್ಲೂ ಉತ್ತರ ಅಮೆರಿಕಾದಲ್ಲೂ ಮೈದೋರಿರುವ ನಗರಗಳ ಮಾದರಿಗಳನ್ನು ಸಮೀಕ್ಷಿಸುವುದು ಸೂಕ್ತ. ಜರ್ಮನಿಯ ಮಹಾಸಮಾಜಶಾಸ್ತ್ರ ವಿಜ್ಞಾನಿ ಮಾಕ್ಸ್ ವೇಬರ್ ಎಂಬಾತ ಪಾಶ್ಚಾತ್ಯ ಮತ್ತು ಪೌರಸ್ತ್ಯ ನಗರಗಳಿಗಿರುವ ವ್ಯತ್ಯಾಸಗಳ ಪ್ರಾಮುಖ್ಯವನ್ನು ಒತ್ತಿಹೇಳಿದ್ದಾನೆ. ಆತ ಮಾಡಿರುವ ಈ ವ್ಯತ್ಯಾಸಗಳಲ್ಲಿ ಕೆಲವು ಅತಿಯೆನಿಸಿದರೂ (ಎಷ್ಟು ಹೇಳಿದರೂ ಪಾಶ್ಚಾತ್ಯ ಔದ್ಯೋಗಪೂರ್ವ ನಗರಗಳ ಮಾದರಿಗಳು ಪೌರಸ್ತ್ಯ ಔದ್ಯೋಗಪೂರ್ವ ನಗರಗಳಂತೆಯೇ ಇವೆ) ಆತ ಇವುಗಳಲ್ಲಿ ವಿಶಿಷ್ಟವಾದ ಕೆಲವಕ್ಕೆ ನಮ್ಮ ಗಮನವನ್ನು ಸೆಳೆದಿದ್ದಾನೆ.

ಪಾಶ್ಚಾತ್ಯ ಮತ್ತು ಪೌರಸ್ತ್ಯ ನಗರಗಳಿಗಿಂತ ಒಂದು ಮುಖ್ಯ ವ್ಯತ್ಯಾಸವೇನೆಂದರೆ ಪಾಶ್ಚಾತ್ಯ ನಗರ ಒಂದು ತರದ ಸ್ವಯಮಾಡಳಿತವನ್ನು ಬೆಳೆಸಿಕೊಂಡಿತು. ಇದರಿಂದ ಅದು ಬೃಹತ್ ಸಮಾಜದ ಅಧೀನಕ್ಕೆ ಒಳಗಾಗದೆ ಸ್ವ-ನಿರ್ದೇಶನ ಮತ್ತು ಸ್ವ-ನಿಯಮವನ್ನು ಗಳಿಸಿಕೊಳ್ಳುವಂತಾಯಿತು. ಪಾಶ್ಚಾತ್ಯ ಔದ್ಯೋಗಿಕ ಕ್ರಾಂತಿಯನ್ನು ನಗರದ ಈ ಮಾದರಿ ಉತ್ತೇಜಿಸಿ ಒತ್ತಾಸೆಕೊಟ್ಟಿತೆನ್ನಬಹುದು. ಕೈಗಾರಿಕಾಕರಣ ಹೇಗಾಯಿತೆಂಬ ವಿಷಯದಲ್ಲಿ ಚರ್ಚೆಗೆ ಆಸ್ಪದವಿದ್ದರೂ ಈ ಹೊಸ ತಂತ್ರದ ಪ್ರಭಾವ ವಿಶದವಾಗಿದೆ. ಮೊದಲು ಇಂಗ್ಲೆಂಡಿನಲ್ಲಿ ಬಳಿಕ ಫ್ರಾನ್ಸ್ ಮತ್ತು ಇತರ ಕಡೆಗಳಲ್ಲಿ ಪ್ರಾದುರ್ಭವಿಸಿದ ಕೈಗಾರಿಕಾ ಕ್ರಾಂತಿ ನಗರಗಳ ಪಾರಿಸ್ಥಿತಿಕ ಮತ್ತು ಸಾಮಾಜಿಕ ರಚನೆಗಳನ್ನು ಬುಡಮಟ್ಟ ಬದಲಾಯಿಸಲು ನೆರವಾಗಿದೆ. ಪ್ರಾಣಿಜನ್ಯವಲ್ಲದ ಶಕ್ತಿಸಂಪತ್ತನ್ನು ಅಧಿಕವಾಗಿ ಒದಗಿಸಿಕೊಳ್ಳುವುದು, ಸಂಕೀರ್ಣ ರಚನೆಯ ಉಪಕರಣಗಳನ್ನು ಬಳಸುವುದು, ವೈಜ್ಞಾನಿಕ ವಿಧಾನಕ್ಕೆ ಹೆಚ್ಚು ಪ್ರಾಶಸ್ತ್ಯವನ್ನು ಕೊಡುವುದು-ಇವೇ ಮೊದಲಾದವು ಒಂದು ವಿಶಿಷ್ಟವಾದ ನಗರಭಾವನೆಯನ್ನು ಹುಟ್ಟುಹಾಕಿವೆ.

ಕೈಗಾರಿಕಾಕರಣದ ಮುಖ್ಯ ಫಲಗಳಲ್ಲಿ ಒಂದಾವುದೆಂದರೆ, ನಗರಗಳ ಸಂಖ್ಯೆ ಮತ್ತು ವಿಸ್ತೀರ್ಣ ಹೆಚ್ಚುತ್ತಿರುವುದು. ಕೈಗಾರಿಕಾಕರಣಕ್ಕೆ ಮೊದಲಿನ ನಾಗರಿಕ ಸಮಾಜದಲ್ಲಿ ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇಕಡ ಐದರಷ್ಟೋ ಹತ್ತರಷ್ಟೋ ಮಂದಿ ನಗರಗಳಲ್ಲಿರುತ್ತಿದ್ದರು. ಕೈಗಾರಿಕಾಕರಣವಾದ ಮೇಲೆ ನಾಗರಿಕ ಸಮಾಜಗಳಲ್ಲಿ ಶೇಕಡ ಐವತ್ತಕ್ಕಿಂತ ಹೆಚ್ಚು ಜನ ನಗರಗಳಲ್ಲಿ ವಾಸಮಾಡುತ್ತಾರೆ; ದಶಲಕ್ಷ ಜನಸಂಖ್ಯೆಯ ನಗರಗಳು ಸಾಧಾರಣವಾಗುತ್ತಿವೆ.

Glasgow slum in 1871

ಇಂಥ ಜನಸಂಖ್ಯೆ ವ್ಯತ್ಯಾಸಗಳ ಜತೆಗೆ, ನಗರಗಳಲ್ಲಿನ ಸ್ಥಳಾವಕಾಶಗಳಲ್ಲಿ ತೋರಿಬರುವ ವ್ಯತ್ಯಾಸಗಳಿಗೂ ಕೈಗಾರಿಕಾ ಕ್ರಾಂತಿ ಸಂಬಂಧಿಸಿದೆ. ಸಾಮಾನು ಸರಂಜಾಮುಗಳ ಸಾಗಾಣಿಕೆಯಲ್ಲಿ ಹೊಸ ರೀತಿ, ಮುಖ್ಯವಾಗಿ ರೈಲುರಸ್ತೆ ಮತ್ತು ಸ್ವಯಂಚಾಲಿತ ವಾಹನಗಳು ಸಮಾಜದ ಶ್ರೇಷ್ಠವರ್ಗದ ಜನ ನಗರದ ಮಧ್ಯದಲ್ಲಿರದೆ ಅದರ ಹೊರವಲಯದಲ್ಲಿ ವಾಸಮಾಡಲು ಅನುಕೂಲವನ್ನು ಮಾಡಿಕೊಟ್ಟಿವೆ; ಅವರು ಈ ಪ್ರದೇಶದಲ್ಲಿ ಮಾತ್ರ ಈಗ ಜೀವಿಸುವುದಿಲ್ಲ. ಕೈಗಾರಿಕಾಕರಣಕ್ಕೆ ಹಿಂದಿದ್ದ ಸಾಂಪ್ರದಾಯಿಕ ನಗರಗಳ ಹಾಗೆ ಈಗಿನ ನಗರಗಳಲ್ಲಿ ವೃತ್ತಿ ಮತ್ತು ಜಾತಿಗಳ ಪಂಗಡಗಳು ಪ್ರತ್ಯೇಕವಾಗಿ ಜೀವಿಸುವುದು ಕಂಡುಬರುವುದಿಲ್ಲ. ಆಧುನಿಕ ವಾಹನಸೌಕರ್ಯಗಳಿಂದಾಗಿ ಈ ಪ್ರತ್ಯೇಕತೆ ಮಸಕಾಗುತ್ತಿವೆ, ಮತ್ತು ಕೈಗಾರಿಕಾಕರಣದಿಂದ ಭೂಮಿ ಹೆಚ್ಚುಹೆಚ್ಚಾಗಿ ವಿಶಿಷ್ಟವೃತ್ತಿಗಳಿಗೆ ಮೀಸಲಾಗುತ್ತಿವೆ. ಕೈಗಾರಿಕಾಕರಣಕ್ಕೊಳಗಾದ ನಗರಗಳಲ್ಲಿ ಒಂದೇ ಒಂದು ಕೆಲಸಕ್ಕಾಗಿ ಒಂದು ಜಾಗವನ್ನು ಬಳಸಿಕೊಳ್ಳುವ ಪ್ರವೃತ್ತಿ ಮೂಡಿದೆ. ಈ ಪ್ರಕಾರವಾಗಿ, ಉದಾಹರಣೆಗೆ, ತಮ್ಮ ಕಸಬಿನ ಸ್ಥಳಕ್ಕಿಂತ ದೂರವಾಗಿ ಆ ವೃತ್ತಿಯ ಜನ ಬಹುಶಃ ವಾಸಮಾಡುತ್ತಾರೆ.

ಕೈಗಾರಿಕೆ ಬೆಳೆದ ನಗರಗಳ ಪಾರಿಸ್ಥಿತಿಕ ರಚನೆಯಲ್ಲಿನ ಬದಲಾವಣೆಗಳು ಆ ಜನದ ವರ್ಗವ್ಯವಸ್ಥೆ ಮತ್ತು ಸಾಮಾಜಿಕ ರಚನೆಗಳಲ್ಲಿನ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತವೆ. ಇಂಥ ಸಮಾಜದಲ್ಲಿ ಸಾಮಾನ್ಯವಾಗಿ ಕಟ್ಟುಪಾಡುಗಳ ಶೈಥಿಲ್ಯ ಕಂಡುಬರುತ್ತದೆ. ಇದರ ಫಲವಾಗಿ ಕುಟುಂಬ ಮತ್ತು ಧಾರ್ಮಿಕ ವ್ಯವಸ್ಥೆಗಳು ಸಾಂಪ್ರದಾಯಿಕ ನಗರಗಳವಕ್ಕಿಂತ ತೀರ ಭಿನ್ನವಾಗಿವೆ. ಉದಾಹರಣೆಗೆ, ಕೈಗಾರಿಕೆ ಬೆಳೆದ ನಾಗರಿಕ ಸಮಾಜದಲ್ಲಿ ಗಂಡಹೆಂಡಿರ ಸಂಸಾರ ಶ್ರೇಷ್ಠಮಾದರಿಯದಾಗಿದೆಯೇ ಹೊರತು ಒಂದೇ ಮನೆಯಲ್ಲಿ ವಾಸಿಸುವ ಎಲ್ಲ ಜ್ಞಾತಿಗಳ ಬೃಹತ್ ಕುಟುಂಬವಲ್ಲ. ಶಾಸ್ತ್ರ ನಿರ್ದಿಷ್ಟಕರ್ಮಗಳ ಆಚರಣೆ ಮತ್ತು ಆದರ್ಶಗಳು ಕೈಗಾರಿಕೆ ಬೆಳೆದಲ್ಲಿನ ನಾಗರಿಕತೆಯ ಹಿನ್ನೆಲೆಯಲ್ಲಿ ತಮ್ಮ ಪ್ರಭಾವವನ್ನು ಕಳೆದುಕೊಳ್ಳುತ್ತಿವೆ.

ನವ್ಯ ನಗರಗಳ ಉದಯ ಮತ್ತು ತತ್ಸಬಂಧಿಯಾದ ಸಾಮಾಜಿಕ-ಸಾಂಸ್ಕøತಿಕ ವ್ಯತ್ಯಾಸಗಳು ದೊಡ್ಡ ದೊಡ್ಡ ನಗರಗಳು ಹೀಗೆ ಹುಟ್ಟಿಕೊಳ್ಳುವುದರ ಉಪಯುಕ್ತತೆಯ ಬಗ್ಗೆ ಅನೇಕ ಚರ್ಚೆಗಳನ್ನೆಬ್ಬಿಸಿವೆ. ಕೆಲವರು ಮೇಧಾವಿಗಳು ಇಂಥ ಸಮಾಜಗಳಿಂದ ಮನುಷ್ಯನ ನೆಮ್ಮದಿಗೂ ಅವನ ಪರಮಸುಖಕ್ಕೂ ಆತಂಕವೊದಗುತ್ತದೆಯೆಂದು ಭಾವಿಸುತ್ತಾರೆ; ಮತ್ತಿತರರು ಜನಸಾಮಾನ್ಯಕ್ಕೆ ಇಂಥ ನಗರಗಳಿಂದ ಹೆಚ್ಚು ಉಪಕಾರವಾಗುವುದೆಂದೂ ಇಂಥ ಕೈಗಾರಿಕಾಕರಣ ಅಭಿವೃದ್ಧಿಯಾಗಬೇಕಾದರೆ ಇಂಥ ಬೃಹನ್ನಗರಗಳು ಬೆಳೆಯಬೇಕೆಂದೂ ವಾದಿಸುತ್ತಾರೆ. ಈ ವಿಷಯದಲ್ಲಿ ಯಾರೊಬ್ಬರ ದೃಷ್ಟಿ ಹೇಗಿದ್ದರೂ ಮುಂದಿನ ವರ್ಷಗಳಲ್ಲಿ ನಗರಗಳು ಸಂಖ್ಯೆಯಲ್ಲೂ ಗಾತ್ರದಲ್ಲೂ ಹೆಚ್ಚುತ್ತವೆ ಎಂಬುದರಲ್ಲಿ ಸಂಶಯವಿಲ್ಲ. ಈ ರೀತಿಯಲ್ಲಿ, ಉದಾಹರಣೆಗೆ ಕಿಂಗ್ಸ್‍ಲಿ ಡೇವಿಸ್ ಎಂಬಾತ ಕಲ್ಕತ್ತ ನಗರ ಕ್ರಿ.ಶ.2000 ಹೊತ್ತಿಗೆ 660 ಲಕ್ಷ ಜನಸಂಖ್ಯೆಯುಳ್ಳದ್ದಾಗಬಹುದೆಂದು ಊಹಿಸಿದ್ದಾನೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

"https://kn.wikipedia.org/w/index.php?title=ನಗರ&oldid=1001834" ಇಂದ ಪಡೆಯಲ್ಪಟ್ಟಿದೆ