ವಿಷಯಕ್ಕೆ ಹೋಗು

ದೇವಿಕಾ ರಾಣಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇವಿಕಾ ರಾಣಿ
ಜನನ
ದೇವಿಕಾ ರಾಣಿ ಚೌಧುರಿ

ಮಾರ್ಚ್ ೩೦, ೧೯೦೮
ವಿಶಾಖಪಟ್ಟಣದ ಬಳಿಯ ವಾಲ್ಟೈರ್
ಮರಣಮಾರ್ಚ್ ೯, ೧೯೯೪
ಬೆಂಗಳೂರು
ವೃತ್ತಿ(ಗಳು)ಚಲನಚಿತ್ರ ನಟಿ, ನಿರ್ಮಾಪಕಿ

ದೇವಿಕಾ ರಾಣಿ (ಮಾರ್ಚ್ ೩೦, ೧೯೦೮ಮಾರ್ಚ್ ೯, ೧೯೯೪¬) ಭಾರತೀಯ ಚಿತ್ರರಂಗದ ಪ್ರತಿಷ್ಟಿತ ಗೌರವವಾದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಮೊಟ್ಟಮೊದಲು ಸ್ವೀಕರಿಸಿದ ಕೀರ್ತಿವಂತರು. ಅವರು ಮಹಾನ್ ಕಲಾವಿದೆಯಾಗಿ ಹಾಗೂ ತಮ್ಮ 'ಮುಂಬಯಿ ಟಾಕೀಸ್' ಚಿತ್ರ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಿಸಿದ ಶ್ರೇಷ್ಠ ಚಿತ್ರಗಳಿಂದ ಭಾರತದಲ್ಲಷ್ಟೇ ಅಲ್ಲದೆ ಹೊರ ದೇಶಗಳಲ್ಲೂ ಪ್ರಸಿದ್ಧಿ ಪಡೆದವರು. .

ಭಾರತೀಯ ಚಿತ್ರರಂಗದ ಪ್ರಥಮ ಸಾಲಿನ ಮಹಿಳಾಮಣಿಗಳಲ್ಲಿ ‘’’ದೇವಿಕಾ ರಾಣಿ’’’ಯವರ ಹೆಸರು ಶಾಶ್ವತವಾಗಿರುವಂತದ್ದು. ದೇವಿಕಾ ರಾಣಿಯವರು ಮಾರ್ಚ್ ೩೦, ೧೯೦೮ರಲ್ಲಿ ವಿಶಾಕಪಟ್ಟಣದ ಬಳಿಯ ವಾಲ್ಟೈರ್ ಎಂಬಲ್ಲಿ ಜನಿಸಿದರು. ದೇವಿಕಾರಾಣಿಯವರು ರಬೀಂದ್ರನಾಥ ಠಾಗೂರರ ವಂಶದವರು. ಅವರ ತಂದೆ ಎಂ. ಎನ್. ಚೌಧುರಿಯವರು ಮದ್ರಾಸ್ ರಾಜ್ಯದ ಪ್ರಥಮ ಸರ್ಜನ್ ಜನರಲ್ ಎಂದು ಪ್ರಖ್ಯಾತರಾದವರು. ಅವರ ತಾಯಿ ಲೀಲಾ.

ಇಪ್ಪತ್ತರ ದಶಕದಲ್ಲಿ ತಮ್ಮ ಪ್ರಾರಂಭಿಕ ಶಿಕ್ಷಣವನ್ನು ಪೂರೈಸಿದ ದೇವಿಕಾ ರಾಣಿ, ಲಂಡನ್ನಿನ ರಾಯಲ್ ಅಕಾಡೆಮಿ ಆಫ್ ಡ್ರಾಮಾಟಿಕ್ ಆರ್ಟ್ಸ್ ಮತ್ತು ರಾಯಲ್ ಅಕಾಡೆಮಿ ಆಫ್ ಮ್ಯೂಸಿಕ್ ಸಂಸ್ಥೆಗಳಲ್ಲಿ ವಿದ್ಯಾರ್ಥಿವೇತನ ಪಡೆದು ರಂಗಭೂಮಿಯ ಶಿಕ್ಷಣ ಪಡೆದರು. ರಂಗಭೂಮಿಯ ಅಧ್ಯಯನದ ಜೊತೆಗೆ ಆರ್ಕಿಟೆಕ್ಚರ್, ಟೆಕ್ಸ್ಟೈಲ್ ಮತ್ತು ಡೆಕೊರ್ ಡಿಸೈನ್ ಮುಂತಾದ ಕ್ಷೇತ್ರಗಳಲ್ಲಿ ಪರಿಣತಿ ಸಾಧಿಸಿದ ದೇವಿಕಾರಾಣಿಯವರು ಎಲಿಜಬೆತ್ ಆರ್ಡೆನ್ ಅವರ ಮಾರ್ಗದರ್ಶನ ಗಳಿಸಿದವರಾಗಿದ್ದರು. ಬ್ರಹ್ಮಸಮಾಜದ ಚಟುವಟಿಕೆಗಳಲ್ಲಿ ಅವರಿಗೆ ಪರಿಚಿತರಾದ ನಿರಂಜನ್ ಪಾಲ್ ಅವರು ಮುಂದೆ ಅವರ ಬಹುತೇಕ ಚಲನಚಿತ್ರಗಳ ಪಾತ್ರಗಳನ್ನು ಸೃಷ್ಟಿಸಿದವರೆನಿಸಿದರು.

ಅಂತರರಾಷ್ಟ್ರೀಯ ಮಟ್ಟದ ಸಾಧನೆ

[ಬದಲಾಯಿಸಿ]

ದೇವಿಕಾರಾಣಿ ಅವರು ೧೯೨೯ರ ವರ್ಷದಲ್ಲಿ ಹಿಮಾಂಶು ರೇ ಅವರನ್ನು ವಿವಾಹವಾದರು. ಹಿಮಾಂಶುರಾಯ್ ಅವರು ಅಂದಿನ ದಿನಗಳಲ್ಲಿ ‘ದಿ ಲೈಟ್ ಆಫ್ ಏಷಿಯಾ’, ‘ಶಿರಾಜ್’, ‘ಎ ಥ್ರೋ ಆಫ್ ಡೈಸ್’ ಮುಂತಾದ ಚಿತ್ರಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ನಿರ್ಮಿಸಿದ್ದರು. ಹಿಮಾಂಶು ರೈ ಜರ್ಮನಿಯ ಬರ್ಲಿನ್ ನಗರದಲ್ಲಿದ್ದ ಪ್ರಸಿದ್ಧ ಯು.ಎಫ್. ಎ ದಲ್ಲಿ ಪವೇಶ ಪಡೆದಿದ್ದವರು. ಹಿಮಾಂಶು ರೇ ಅವರೊಂದಿಗೆ ಜರ್ಮನಿಯಲ್ಲಿ ಕೆಲವು ವರ್ಷ ನೆಲೆಸಿದ ದೇವಿಕಾರಾಣಿ ಅಲ್ಲಿ ಚಲನಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಅಪೂರ್ವ ಅನುಭವ ಸಾಧಿಸಿದರು. ಅಲ್ಲಿ ಈ ದಂಪತಿಗಳು ಜೋಡಿಯಾಗಿ ನಟಿಸಿದ್ದ ರಂಗ ಪ್ರಯೋಗಗಳು ಅವರನ್ನು ಸ್ವಿಡ್ಜರ್ಲ್ಯಾಂಡ್ ಮತ್ತು ಸ್ಕಾಂಡಿನೇವಿಯನ್ ದೇಶಗಳಲ್ಲೂ ಪ್ರಖ್ಯಾತರನ್ನಾಗಿಸಿತ್ತು.

ಮುಂಬಯಿ ಟಾಕೀಸ್

[ಬದಲಾಯಿಸಿ]

ಹಿಮಾಂಶು ರೈ ಮತ್ತು ದೇವಿಕಾರಾಣಿ ೧೯೩೩ರಲ್ಲಿ ‘ಕರ್ಮ’ ಎಂಬ ಚಿತ್ರವನ್ನು ನಿರ್ಮಿಸಿ ಜೊತೆಯಾಗಿ ನಟಿಸಿದರು. ಭಾರತದಂತಹ ಅಂದಿನ ಮಡಿವಂತಿಕೆಯ ಸಮಾಜದಲ್ಲಿ, ಆ ಚಿತ್ರದ ಚುಂಬನಯುಕ್ತ ಪ್ರೇಮ ದೃಶ್ಯಗಳು ದೊಡ್ಡ ಸುದ್ಧಿಯನ್ನೇ ಸೃಷ್ಟಿಸಿದ್ದವು. ಇಬ್ಬರೂ ಕೂಡಿ ಮುಂಬಯಿ ಟಾಕೀಸ್ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನು ಹುಟ್ಟು ಹಾಕಿದರು. ಇವರ ಜೊತೆಗೆ ನಿರಂಜನ್ ಪೈ ಮತ್ತು ಫ್ರಾನ್ ಆಸ್ಟನ್ ಅವರು ಕೂಡಾ ಜೊತೆಗಿದ್ದರು.

ದೇವಿಕಾ ರಾಣಿಯವರ ಜೊತೆ ಅಂದು ಪ್ರಖ್ಯಾತರಾಗಿದ್ದು ಅವರ ನಿರ್ಮಾಣ ಸಂಸ್ಥೆ ಮುಂಬಯಿ ಟಾಕೀಸ್ ನೀಡಿದ ಕೊಡುಗೆಗಳಲ್ಲಿ ಅಶೋಕ್ ಕುಮಾರ್ ಮತ್ತು ಮಧುಬಾಲಾ ಪ್ರಮುಖರು. ದೇವಿಕಾ ರಾಣಿ ಮತ್ತು ಅಶೋಕ್ ಕುಮಾರ್ ಜೋಡಿ ೧೯೩೬ರ ವರ್ಷದಲ್ಲಿ ‘ಅಛೂತ ಕನ್ಯಾ’ ಚಿತ್ರದಲ್ಲಿ ನಟಿಸಿದರು. ಈ ಚಿತ್ರ ಅಂದಿನ ಜಾತಿಪದ್ಧತಿಯನ್ನು ಪ್ರಶ್ನಿಸುವ ದಿಟ್ಟತನವನ್ನು ತೋರಿತ್ತು.

ದೇವಿಕಾ ರಾಣಿಯವರು ನಟಿಸಿದ ಇತರ ಪ್ರಮುಖ ಚಿತ್ರಗಳೆಂದರೆ ಜವಾನಿ ಕಿ ಹವಾ, ಜೀವನ್ ನಯಾ, ಸಾವಿತ್ರಿ, ಜೀವನ್ ಪ್ರಭಾತ್, ದುರ್ಗಾ, ವಚನ್, ನಿರ್ಮಲ, ಇಜ್ಜತ್ ಮುಂತಾದವು.

ಏಕಾಂಗಿಯಾಗಿ ಚಿತ್ರ ನಿರ್ಮಾಣ

[ಬದಲಾಯಿಸಿ]

೧೯೪೦ರಲ್ಲಿ ವೈದವ್ಯ ಅನುಭವಿಸಿದ ದೇವಿಕಾರಾಣಿಯವರು ಮುಂಬಯಿ ಟಾಕೀಸಿನ ಮುಖ್ಯಸ್ಥರಾಗಿ ಪುನರ್ಮಿಲನ್, ಕಂಗನ್, ಬಂಧನ್, ಕಿಸ್ಮತ್, ಹಮಾರಿ ಬಾತ್ ಮುಂತಾದ ಉತ್ತಮ ಗುಣಮಟ್ಟದ ಪ್ರಖ್ಯಾತ ಚಲನಚಿತ್ರಗಳನ್ನು ನಿರ್ಮಿಸಿದರು. ಈ ದಿನಗಳಲ್ಲಿ ದೇವಿಕಾ ರಾಣಿಯವರು ಲೀಲಾ ಚಿಟ್ನಿಸ್, ದಿಲೀಪ್ ಕುಮಾರ್, ಮಧುಭಾಲಾ, ಮಮ್ತಾಜ್, ಶಾಂತಿ ಅಂತಹ ಮುಂಬೈನ ಹಲವಾರು ಪ್ರತಿಷ್ಠಿತ ತಾರೆಯರನ್ನು ರೂಪಿಸಿದ್ದೇ ಅಲ್ಲದೆ ಹಲವಾರು ಶ್ರೇಷ್ಠ ತಂತ್ರಜ್ಞರು, ಬರಹಗಾರರು, ಮುಂತಾದ ಅಸಾಮಾನ್ಯ ಪ್ರತಿಭೆಗಳು ಹೊರಬರಲು ಕಾರಣರಾದರು. ಆದರೆ ಮುಂದಿನ ದಿನಗಳಲ್ಲಿ ಅವರು ಮುಂಬಯಿ ಟಾಕೀಸಿನ ಮಾಲೀಕತ್ವಕ್ಕೆ ಶಶಧರ್ ಮುಖರ್ಜಿಯೊಂದಿಗೆ ಹೋರಾಟ ನಡೆಸಬೇಕಾಯಿತು. ೧೯೪೩ರಲ್ಲಿ ಶಶಧರ ಮುಖರ್ಜಿ, ಅಶೋಕ್ ಕುಮಾರ್ ಮತ್ತು ಹಲವಾರು ಪ್ರಮುಖ ಕಲಾವಿದರು ಮುಂಬಯಿ ಟಾಕೀಸ್ ತೊರೆದು ಫಿಲಂಸ್ಥಾನ್ ಎಂಬ ಸಂಸ್ಥೆಯನ್ನು ಸ್ಥಾಪಿಸಿಕೊಂಡರು. ನಂತರದಲ್ಲಿ ಮುಂಬಯಿ ಟಾಕೀಸ್ ನೇಪಥ್ಯಕ್ಕೆ ಸರಿಯುವಂತಾಯಿತು.

ಮಹಾನ್ ಕಲಾವಿದ ರೋರಿಚ್ ಅವರೊಂದಿಗೆ ಬೆಂಗಳೂರಿನಲ್ಲಿ

[ಬದಲಾಯಿಸಿ]

ಮುಂದೆ ೧೯೪೫ರ ವರ್ಷದಲ್ಲಿ ದೇವಿಕಾರಾಣಿಯವರು ರಷ್ಯಾದ ಚಿತ್ರಕಾರ ಸ್ವೇವೆಟ್ಸಲೋ ರೋರಿಚ್ ಅವರ ಸಂಗಾತಿಯಾದರು. ಸಿನಿಮಾರಂಗವನ್ನು ತೊರೆದ ದೇವಿಕಾರಾಣಿಯವರು ಬೆಂಗಳೂರಿನಲ್ಲಿದ ತಮ್ಮ ಪತಿಯೊಡನೆ ನೆಲೆಸಿದರು. ಈ ದಂಪತಿಗಳು ಕನಕಪುರ ರಸ್ತೆಯಲ್ಲಿ ನಿರ್ಮಿಸಿದ್ದ ಬೃಹತ್ ‘ತಾತಗುಣಿ’ ಎಸ್ಟೇಟಿನಲ್ಲಿ ೧೯೯೪ರಲ್ಲಿ ನಿಧನರಾಗುವವರೆಗೆ ದೇವಿಕಾರಾಣಿಯವರು ನೆಲೆಸಿದ್ದರು. ಹಾಗಾಗಿಯೂ ಅವರಿಗೆ ಚಲನಚಿತ್ರ ಜಗತ್ತಿನೊಡನೆ ಸಂಪರ್ಕಉಳಿದಿತ್ತು.

ಮಹಾನ್ ಸಾಧಕಿಗೆ ಸಂದ ಶ್ರೇಷ್ಠ ಗೌರವಗಳು

[ಬದಲಾಯಿಸಿ]

೧೯೫೮ರ ವರ್ಷದಲ್ಲಿ ದೇವಿಕಾರಾಣಿಯವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಲಾಯಿತು. 19೬೯ರ ವರ್ಷದಲ್ಲಿ ‘ದಾದಾಸಾಹೇಬ್ ಪ್ರಶಸ್ತಿ’ ಸಂಸ್ಥಾಪನೆಯಾದ ವರ್ಷದಲ್ಲಿ ಆ ಗೌರವವನ್ನು ಸ್ವೀಕರಿಸಿದ ಪ್ರಪ್ರಥಮರೆಂಬ ಕೀರ್ತಿ ದೇವಿಕಾರಾಣಿಯವರಿಗೆ ಸಂದಿದೆ. ೧೯೮೯ರ ವರ್ಷದಲ್ಲಿ ಅವರಿಗೆ ಸೋವಿಯತ್ ಲ್ಯಾಂಡ್ ಪ್ರಶಸ್ತಿ ಗೌರವ ಸಹಾ ಲಭಿಸಿತು.

ವಿದಾಯ

[ಬದಲಾಯಿಸಿ]

ಮಾರ್ಚ್ ೯, ೧೯೯೪ರಲ್ಲಿ ದೇವಿಕಾರಾಣಿಯವರು ಈ ಲೋಕವನ್ನಗಲಿದರು. ರೋರಿಚ್, ದೇವಿಕಾರಾಣಿಯಂತಹ ಕಲಾವಿದರು ಸೃಷ್ಟಿಸಿದ ಕಲೆಯನ್ನು ಸೃಷ್ಟಿಸಲಾಗದ ಈ ವಿಶ್ವ ಅವರು ನಿರ್ಮಿಸಿದ ಅಪಾರ ಶ್ರೀಮಂತಿಕೆಗಾಗಿ ಕಿತ್ತಾಟ ಮಾಡುವತ್ತ ಹೊಸ ಇತಿಹಾಸವನ್ನು ಬರೆಯತೊಡಗಿತು.