ಜಾಫ್ನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
( ಪಕ್ಕದ ಚಿತ್ರದಲ್ಲಿ   ಅಪ್ರದಕ್ಷಿಣಾಕಾರವಾಗಿ  ಮೇಲಿನಿಂದ ಕೆಳಕ್ಕೆ Jaffna Public Library, the Jaffna-Pannai-Kayts highway, Nallur Kandaswamy temple, Jaffna Fort, Sangiliyan Statue, Jaffna Palace ruins)

ಜಾಫ್ನ ಶ್ರೀಲಂಕಾದ ಎರಡನೆಯ ಅತ್ಯಂತ ದೊಡ್ಡ ನಗರ ; ಜಾಫ್ನ ಜಿಲ್ಲೆಯ ಆಡಳಿತ ಕೇಂದ್ರ.

ಜಾಫ್ನ ಪರ್ಯಾಯ ದ್ವೀಪದ ತೀರದಲ್ಲಿ ಕೊಲಂಬೋದ ಉತ್ತರಕ್ಕೆ 190 ಮೈ.ದೂರದಲ್ಲಿದೆ. ಜನಸಂಖ್ಯೆ (ತಾತ್ಕಾಲಿಕ) 1,07,663 (1971). ಜಾಫ್ನ ಪರ್ಯಾಯದ್ವೀಪ ಮತ್ತು ಸಮೀಪದ ದ್ವೀಪಗಳಿಗೆ ಇದೊಂದು ಮುಖ್ಯ ವಾಣಿಜ್ಯ ಕೇಂದ್ರ. ಹಲವು ಶತಮಾನಗಳ ಕಾಲ ಇದು ತಮಿಳರ ರಾಜ್ಯದ ರಾಜಧಾನಿಯಾಗಿತ್ತು. 1617ರಲ್ಲಿ ಇದನ್ನು ಪೋರ್ಚುಗೀಸರು ವಶಪಡಿಸಿಕೊಂಡರು. 1658ರಲ್ಲಿ ಇದು ಡಚ್ಚರ ಅಧೀನವಾಯಿತು. ಆ ಕಾಲದಲ್ಲಿ ಇದು ಆಡಳಿತ ಮತ್ತು ವಾಣಿಜ್ಯ ಕೇಂದ್ರವಾಗಿತ್ತು. ಇದರ ಮೂಲಕ ಆನೆ, ಮೆಣಸು ಮುಂತಾದ ಸರಕುಗಳ ರಫ್ತಾಗುತ್ತಿದ್ದುವು. 1795ರಲ್ಲಿ ಬ್ರಿಟಿಷರು ಇದನ್ನು ಆಕ್ರಮಿಸಿಕೊಂಡರು. ಶ್ರೀಲಂಕಾ ಸ್ವತಂತ್ರವಾಗುವವರೆಗೂ ಇದು ಬ್ರಿಟಿಷರ ವಶದಲ್ಲೇ ಇತ್ತು. ಈಗ ಜಾಫ್ನ ಪ್ರಮುಖ ಬಂದರೇನೂ ಅಲ್ಲ. ಅದರ ಬಳಿಯ ಕಡಲು ಆಳವಿಲ್ಲವಾದ್ದರಿಂದ ದೊಡ್ಡ ಹಡಗುಗಳ ಸಂಚಾರ ಅಸಾಧ್ಯ. ಚಿಕ್ಕ ಹಡಗುಗಳ ಮೂಲಕ ಭಾರತದೊಂದಿಗೆ ವ್ಯಾಪಾರ ಈಗಲೂ ಹೆಚ್ಚಾಗಿ ನಡೆಯುತ್ತದೆ. ಇಲ್ಲಿಂದ ಶ್ರೀಲಂಕಾದ ಇತರ ಭಾಗಗಳಿಗೆ ರೈಲ್ವೆ ಮತ್ತು ರಸ್ತೆ ಸಂಪರ್ಕವುಂಟು. ಜಾಫ್ನದ ಸುತ್ತ ಹೊಗೆಸೊಪ್ಪು ಹೆಚ್ಚಾಗಿ ಬೆಳೆಯುತ್ತದೆ. ಈ ಬಂದರಿನ ಮುಖಾಂತರ ಧಾನ್ಯ, ತಂಬಾಕು, ತೆಂಗು, ಪನಾಯಿ ನಾರು ಮತ್ತು ಮಾವಿನಹಣ್ಣು ರಫ್ತಾಗುತ್ತವೆ. ಇಲ್ಲಿಯ ಸ್ಥಳೀಯ ಜಲಪ್ರದೇಶಗಳಲ್ಲಿ ಕಡಲಾಮೆ, ಶಂಖಪ್ರಾಣಿ ಮತ್ತು ತ್ರಿಪಾದಿಗಳನ್ನು ಹಿಡಿಯುತ್ತಾರೆ. ಜಾಫ್ನ ಆಕರ್ಷಕವೂ ವೈಶಿಷ್ಟ್ಯಪೂರ್ಣವೂ ಆದ ನಗರ. ಇಲ್ಲಿ ತಮಿಳು ಸಂಸ್ಕೃತಿ ಪ್ರಧಾನವಾಗಿ ಎದ್ದು ಕಾಣುತ್ತದೆ. ಪೋರ್ಚುಗೀಸ್ ಮತ್ತು ಡಚ್ ಸಂಪರ್ಕದ ಪ್ರಭಾವವೂ ಇಲ್ಲದಿಲ್ಲ. ಪೋರ್ಚುಗೀಸ್ ಕಾಲದ ಚರ್ಚ್‍ಗಳು ಮತ್ತು ಇತರ ಕಟ್ಟಡಗಳು ಈಗಲೂ ಇವೆ. ರೋಮನ್ ಕ್ಯಾತೋಲಿಕ್ ಬಿಷಪ್ ಇದ್ದಾರೆ. ಶಾಲಾ ಕಾಲೇಜುಗಳೂ ಕಚೇರಿಗಳೂ ಇವೆ. ಜಾಫ್ನ ಜಿಲ್ಲೆಯಲ್ಲಿ ಜಾಫ್ನ ಪರ್ಯಾಯ ದ್ವೀಪವೇ ಅಲ್ಲದೆ ನೆರೆಯ ದ್ವೀಪಗಳೂ ಸೇರಿವೆ. ಪರ್ಯಾಯ ದ್ವೀಪ ಜನಸಾಂದ್ರಪ್ರದೇಶ, ಜಿಲ್ಲೆಯ ಜನಸಂಖ್ಯೆ 4,91,849 (1953).

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಜಾಫ್ನ&oldid=1060685" ಇಂದ ಪಡೆಯಲ್ಪಟ್ಟಿದೆ