ಗೌಪ್ಯವಚನಕಾರ್ತಿಯರು
ವಚನ ಸಾಹಿತ್ಯದಲ್ಲಿ ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಈ ಕಾಲಘಟ್ಟದಲ್ಲಿ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಹೆಚ್ಚಾಗಿ ಪ್ರಚುರ ಪಡಿಸದೆ ಇರುವುದು ಅಚ್ಚರಿ ಯನ್ನುಂಟು ಮಾಡುತ್ತದೆ. ಇಂತಹವರನ್ನು 'ಅಪ್ರಸಿದ್ದ ಶರಣೆಯರು/ವಚನಕಾರ್ತಿಯರು' ಅಥವಾ 'ಗೌಪ್ಯವಚನಕಾರ್ತಿಯರೆಂದು 'ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಅವರಲ್ಲಿ ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ.
ಪ್ರವೇಶಿಕೆ
[ಬದಲಾಯಿಸಿ]ಕನ್ನಡ ಸಾಹಿತ್ಯದ ಪರ್ವಕಾಲ, ಸುವರ್ಣಯುಗ 'ವಚನ ಸಾಹಿತ್ಯ ಕಾಲ'. ಹಾಗಾಗಿ ಕರ್ನಾಟಕ ಸಾಹಿತ್ಯ ಚರಿತ್ರೆಯಲ್ಲಿ ೧೨ನೇ ಶತಮಾನಕ್ಕೆ ವಿಶಿಷ್ಟ ಸ್ಥಾನವಿದೆ. ವೇದಗಳ ಕಾಲದಿಂದಲೂ ಸಾಹಿತ್ಯ ಪಂಡಿತರ, ವಿದ್ವಾಂಸರ ಸ್ವತ್ತಾಗಿ, ಸಂಸ್ಕೃತ ಭೂಯಿಷ್ಠವಾಗಿತ್ತು. ಶ್ರೀಸಾಮಾನ್ಯರಿಗೆ ಅವರ ರಚನೆಗಳೊಂದು ಅರ್ಥವಾಗುತ್ತಿರಲಿಲ್ಲ. ಭಾರತೀಯ ಮಹಿಳೆಯರ ಪಾಲಿಗೆ ಪುರಾಣ ಹಾಗೂ ಧರ್ಮಶಾಸ್ತ್ರಗಳ ಕಾಲ 'ಕಗ್ಗತ್ತಲ ಯುಗ'ವಾಗಿತ್ತು. ಹಾಗೆ ನೋಡಿದರೆ ಆರ್ಯ ಸಂಸ್ಕೃತಿಯ ಪೂರ್ವ ಕಾಲದಲ್ಲಿ ಮಹಿಳೆಯರು ಸ್ವತಂತ್ರರಾಗಿದ್ದರು. ವೇದಗಳ ಕಾಲದಲ್ಲಿ ಗಾರ್ಗಿ, ಮೈತ್ರೇಯಿ ಯಂತಹ ಮಹಿಳಾ ವಿದ್ವಾಂಸರು ಪಂಡಿತರೊಂದಿಗೆ ಆಧ್ಯಾತ್ಮಿಕ ಚರ್ಚೆಗಳಲ್ಲಿ ಪಾಲ್ಗೊಂಡಿರುವುದಕ್ಕೆ ಅಲ್ಲಲ್ಲಿ ನಿದರ್ಶನಗಳಿವೆ. ಅಲ್ಲಿಂದ ಹೆಣ್ಣು ಮತ್ತೆ ಸ್ವತಂತ್ರಳಾಗಲು ಹಲವಾರು ಶತಮಾನಗಳವರೆವಿಗೂ ಕಾಯಬೇಕಾಯಿತು. ಶತ ಶತಮಾನಗಳಿಂದಲೂ ಸಮಾಜದಲ್ಲಿ ಹೆಣ್ಣಿನ ಬಗೆಗಿದ್ದ ಪೂರ್ವಾ ಗ್ರಹಪೀಡಿತ ದೃಷ್ಠಿ ದೋಷವನ್ನು ಸರಿಪಡಿಸಿದ ಕೀರ್ತಿ ವಚನಕಾರರಿಗೆ ಸಲ್ಲುತ್ತದೆ. ಬಸವಯುಗದ ವಚನಕಾರ್ತಿಯರಂತೆ ಕೊಡುಗೆಯಿತ್ತವರನ್ನು ಬಹುಶ: ಯಾವ ಶತಮಾನವೂ ಕಂಡಿರಲಿಲ್ಲ. ಆ ಕಾಲ ಘಟ್ಟದಲ್ಲಿ ಜಾತಿ, ಮತಗಳ ಬೇಧ ವಿಲ್ಲದೆ ಹೆಣ್ಣು-ಗಂಡು ಸಂಯುಕ್ತವಾಗಿ 'ಅನುಭವ ಮಂಟಪ'ದಲ್ಲಿ ಸೇರಿ ವಾದ-ಸಂವಾದ, ಚರ್ಚೆಗಳಲ್ಲಿ ಪಾಲ್ಗೊಂಡಿರುವುದು ಕಂಡು ಬರುತ್ತದೆ. ವಚನಕಾರ್ತಿಯರೆಂದೊಡನೆ ತಟ್ಟನೆ ನೆನಪಿಗೆ ಬರುವವರು ಅಕ್ಕಮಹಾದೇವಿ ಮತ್ತು ಮುಕ್ತಾಯಕ್ಕ. ಇವರಿಬ್ಬರೂ ಪ್ರಸಿದ್ದ ವಚನಕಾರ್ತಿಯರೆನಿಸಿದ್ದಾರೆ. ಆದರೆ ಇವರ ಕಾಲದಲ್ಲೇ ಹಲವಾರು ಶರಣೆಯರು ಮುಕ್ತ ಮನಸ್ಸಿನಿಂದ ವಚನಗಳನ್ನು ರಚಿಸಿರುವುದನ್ನು ಯಾರು ಪ್ರಚುರ ಪಡಿಸದೆ ಇರುವುದು ಅಚ್ಚರಿಯನ್ನುಂಟು ಮಾಡುತ್ತದೆ. ಇಂತಹವರನ್ನು 'ಅಪ್ರಸಿದ್ದ ವಚನಕಾರ್ತಿಯರು' ಅಥವಾ 'ಗೌಪ್ಯವಚನ ಕಾರ್ತಿಯರೆಂದು 'ಕರೆಯ ಬಹುದಾಗಿದೆ. ವಚನಯುಗವು ಮಹಿಳೆಯರ ಆಂತರ್ಯದಲ್ಲಿ ನವ ಜಾಗೃತಿ, ನವ ಸಾಕ್ಷರತೆಯ ಅರಿವು ಮೂಡಿಸಿ, ಎಲ್ಲಾ ವರ್ಗದ ಮಹಿಳೆ ಯರಿಗೂ ವಿದ್ಯಾಭ್ಯಾಸ ಕಲಿಸಿ ೩೬ಕ್ಕೂ ಹೆಚ್ಚು ಜನ ಶರಣೆಯರು ವಚನ ರಚನೆ ಮಾಡುವ ಅವಕಾಶ ಕಲ್ಪಿಸಿ ಕೊಟ್ಟಿತು. ಇವರಲ್ಲಿ ಬಹುಪಾಲು ಶರಣೆಯರು ಸಂಸಾರದ ಸತ್ಯವನ್ನು ಅರಿತು, ಬದುಕಿನ ಶುದ್ದತೆಗಾಗಿ ಹಂಬಲಿಸಿ, ಸಂಸಾರವೆಂಬುದು ಆಧ್ಯಾತ್ಮಕ್ಕೆ ಬಾಧಕವಲ್ಲ, ಪ್ರೇರಕ, ಪೋಷಕವೆಂಬುದನ್ನು ಶ್ರುತ ಪಡಿಸಿದರು. ಇವರು ವ್ರತಾಚರಣೆ, ಜಾತೀಯತೆ, ಕುಲ ಭೇಧ, ಭಕ್ತಿ, ಜ್ಞಾನ, ಆಚರಣೆ,ನೀತಿ-ನಿಯಮಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದರು. ಇವರಲ್ಲಿ ಬಹಳಷ್ಟು ಜನ ಶರಣೆಯರು ತಮ್ಮ ಗಂಡನ ಕಾಯಕವೆಂಬ ಹಣತೆಯಲ್ಲಿ ಎಣ್ಣೆಯಾಗಿ, ಬತ್ತಿಯಾಗಿ ಪತಿಗೆ ಮಾರ್ಗಜ್ಯೋತಿಯಾಗಿದ್ದಾರೆ. ಅವರಲ್ಲೆ ಕೆಲವರು ಎಚ್ಚರ ತಪ್ಪಿದ ತಮ್ಮ ಗಂಡನನ್ನು ಸರಿದಾರಿಗೆ ತರಲು ಶ್ರಮಿಸಿ ಯಶಸ್ವೀಯಾಗಿದ್ದಾರೆ. ಕೆಲವು ಶರಣೆಯರು ತಮ್ಮ ಗಂಡನ ಹೆಸರನ್ನೇ ವಚನದ ಅಂಕಿತವಾಗಿಟ್ಟು ಕೊಂಡರೆ, ಮತ್ತೆ ಕೆಲವರು ತಮ್ಮ ಇಷ್ಟದೈವವನ್ನು ವಚನದ ಅಂಕಿತವಾಗಿಟ್ಟು ಕೊಂಡಿದ್ದಾರೆ. ಶರಣೆಯರು ತಮ್ಮ ವಚನಗಳಲ್ಲಿ- ಪ್ರಚಲಿತ ವಿದ್ಯಮಾನಗಳ ವಿಮರ್ಶೆ, ಕಾಯಕ ಪ್ರೀತಿ, ಧರ್ಮನಿಷ್ಠೆ, ಕರುಣೆ, ಮಾನವೀಯತೆ, ವಿಶ್ವಮಾನವ ಪರಿಕಲ್ಪನೆ, ನೇರನುಡಿ, ಆತ್ಮವಿಶ್ವಾಸದಿಂದ ವಚನಗಳನ್ನು ರಚಿಸಿರುವುದು ಕಂಡು ಬರುತ್ತದೆ.
ಬಸವಣ್ಣನವರ ಕಾಲದಲ್ಲಿ ಹೆಣ್ಣು
[ಬದಲಾಯಿಸಿ]ಸುಮಾರು ೮೦೦ವರ್ಷಗಳ ಹಿಂದೆ ಅಂದರೆ ೧೨ನೇ ಶತಮಾನದ ಮಧ್ಯಭಾಗದಲ್ಲಿದ್ದ ಬಸವಣ್ಣ ಜಗತ್ತಿನ ಪ್ರ ಪ್ರಥಮ ವಿಚಾರವಾದಿ, ಕ್ರಾಂತದರ್ಶಿ, ವಿಭೂತಿಪುರುಷ,ದಾರ್ಶನಿಕ, ಅನುಭಾವಿ, ಕ್ರಿಯಾಶೀಲ ಹೋರಾಟಗಾರ, ದೂರಗಾಮಿ ಚಿಂತಕ, ಮಹಿಳಾವಾದಿ, ಸತ್ಯ ಸಾಮ್ರಾಜ್ಯದ ಸಾರ್ವ ಭೌಮ. ತಾವು ಬೆಳೆಯುವುದು ಮಾತ್ರವಲ್ಲದೆ, ಲೋಕವು ತಮ್ಮೊಡನೆ ಬೆಳೆಯಬೇಕೆಂಬ ಸಂಕಲ್ಪ ತೊಟ್ಟ ವಿಶ್ವಕುಟುಂಬಿ. ವಿಶ್ವದಲ್ಲಿ ಎಲ್ಲಾ ಜಾತಿ-ಜನಾಂಗಗಳ ನಿಜ ಸಂಸ್ಕೃತಿಯ ತಾಯಿ ಬೇರು ಅಂತ:ಕರಣದಿಂದ ಕೂಡಿದ ಜೀವನ ಪ್ರೀತಿ. ಈ ಲೋಕ ಮಾನವ ಕೇಂದ್ರಿತವಲ್ಲ, ಜೀವ ಕೇಂದ್ರಿತವಾದುದು. ಅಹಿಂಸೆ, ನಿಸ್ವಾರ್ಥ ಪ್ರೇಮದಿಂದ ಕೂಡಿದ ಪ್ರಪಂಚವನ್ನು ಸೃಷ್ಠಿಸುವುದೇ ಬಸವಣ್ಣನವರ ಕನಸಾಗಿತ್ತು. ಅವರ ದೃಷ್ಟಿಯಲ್ಲಿ ಹೆಣ್ಣು ಪ್ರತಿಭೆಯಲ್ಲಿ, ಬೌದ್ಧಿಕತೆಯಲ್ಲಿ ಪುರುಷನಷ್ಟೇ ಸರಿ ಸಮಾನಳು. ಜೀವನದ ಸಕಲ ವ್ಯವಹಾರದಲ್ಲಿ ಅವಳಷ್ಟು ಕುಶಾಗ್ರಮತಿ ಬೇರ್ಯಾರಿಲ್ಲ. ಬಸವಣ್ಣ ಮಹಿಳೆಯರ ಅಂತ:ಕರಣವನ್ನು ಓರೆಗಚ್ಚಿ ನೋಡಿದರು. ಹಾಗಾಗಿ 'ಗೌಪ್ಯ ವಚನಕಾರ್ತಿಯರು' ವಚನ ಸಾಹಿತ್ಯ ರಚನೆಯಲ್ಲಿ ಉತ್ಸುಕರಾಗಿ ವಚನಗಳನ್ನು ರಚಿಸಿದರು. ಅವರಲ್ಲಿ ಪ್ರಮುಖರಾದವರೆಂದರೆ-ಅಮುಗೆ ರಾಯಮ್ಮ, ಅಕ್ಕಮ್ಮ, ಆಯ್ದಕ್ಕಿ ಲಕ್ಕಮ್ಮ, ಕೇತಲದೇವಿ, ಕದಿರ ರೆಮ್ಮವ್ವೆ, ಕಾಳವ್ವೆ, ಕಾಮವ್ವೆ, ಗಂಗಮ್ಮ, ಗೊಗ್ಗವ್ವೆ, ಬೊಂತಾದೇವಿ, ನೀಲಾಂಬಿಕೆ, ಲಿಂಗಮ್ಮ, ಮಸಣಮ್ಮ, ವೀರಮ್ಮ, ಲಕ್ಷಮ್ಮ, ರೆಮ್ಮವ್ವೆ, ರೇಕಮ್ಮ, ಸತ್ಯಕ್ಕ, ವೊದಲಾದವರು. ಇನ್ನು ಇರುವ ಬಹುತೇಕ ವಚನಕಾರ್ತಿಯರ ಹೆಸರಿದ್ದರೂ ಅವರ ವಚನಗಳು ಸಿಕ್ಕಿಲ್ಲ. ಉದಾ: ಕಲ್ಯಾಣಮ್ಮ, ಕದಿರ ಕಾಳವ್ವೆ ಮುಂತಾದವರು. ವಚನ ಸಾಹಿತ್ಯವು ಕನ್ನಡ ದೇಸಿಯ ಪದ್ಯಜಾತಿ. ವಚನಕಾರರು ಅಚ್ಚ ಕನ್ನಡ ಕೃಷಿಕರು.
ಗೌಪ್ಯ ವಚನಕಾರ್ತಿಯರ ಸಂಕ್ಷಿಪ್ತ ಪರಿಚಯ/ವಚನಗಳು
[ಬದಲಾಯಿಸಿ]ಅಮುಗೆರಾಯಮ್ಮ
[ಬದಲಾಯಿಸಿ]ಈಕೆ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ಇವಳ ವಚನಗಳಲ್ಲಿ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ರಾಯಮ್ಮನ ಅಂಕಿತ "ಅಮುಗೇಶ್ವರ".
'ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು'.
ಅಕ್ಕಮ್ಮ
[ಬದಲಾಯಿಸಿ]ಈಕೆ 'ರೆಮ್ಮವ್ವೆ' ಎಂದೂ ಗುರ್ತಿಸಲ್ಪಟ್ಟಿದ್ದಾಳೆ. ಅಕ್ಕಮಹಾದೇವಿಯ ಪ್ರಭಾವಕ್ಕೆ ಒಳಗಾಗಿ ಸಂಸಾರ ಬಂಧನಕ್ಕೆ ಸಿಲುಕದೆ, ಸ್ವತಂತ್ರವಾಗಿ ಬದುಕಲು ಹಂಬಲಿಸಿ ವೈವಾಹಿಕ ಜೀವನವನ್ನು ಧಿಕ್ಕರಿಸಿದವಳು. ವ್ರತಾಚರಣೆಗೆ ಸಂಬಂಧಿಸಿದಂತೆ ಕೆಲವು ವಚನಗಳನ್ನು ಸರಳ, ಸುಂದರ, ಸ್ಪಷ್ಟ ವಾಗಿ ಪ್ರೌಢಭಾಷೆಯಲ್ಲಿ ನಿರೂಪಿಸಿರುವಳು. ಇವಳ ಅಂಕಿತನಾಮ "ಆಚಾರ ವೇ ಪ್ರಾಣವಾದ ರಾಮೇಶ್ವರಲಿಂಗ".
'ಬತ್ತಲೆಯಿದ್ದವರೆಲ್ಲ ಕತ್ತೆಯ ಮರಿಗಳು
ತಲೆ ಬೋಳಾದವರೆಲ್ಲ ಮುಂಡೆಯ ಮಕ್ಕಳು
ತಲೆ ಜೆಡೆಗಟ್ಟಿದವರೆಲ್ಲ ಹೊಲೆಯರ ಸಂತಾನ
ಆವ ಪ್ರಕಾರವಾದಡೇನು, ಅರಿವೆ ಮುಖ್ಯವಯ್ಯಾ
ಆಚಾರವೇ ಪ್ರಾಣವಾದ ರಾಮೇಶ್ವರಲಿಂಗದಲ್ಲಿ'.
ಅಕ್ಕನಾಗಮ್ಮ
[ಬದಲಾಯಿಸಿ]ಅಕ್ಕನಾಗಮ್ಮನು ಬಸವಣ್ಣನವರ ಸಹೋದರಿ, ಚನ್ನಬಸವಣ್ಣನ ತಾಯಿ, ಶಿವದೇವ/ಶಿವಸ್ವಾಮಿ ಎಂಬುವರ ಪತ್ನಿ. ಈಕೆಗೆ ನಾಗಮ್ಮ, ನಾಗಲಾಂಬಿಕೆ, ನಾಗಾಂಬಿಕೆ, ನಾಗಾಯಿ ಮುಂತಾದ ಹೆಸರುಗಳಿವೆ. ಇವಳು ಧಿರೋದಾತ್ತ ಶರಣೆ. ಮಹಾ ಮನೆಯ ಸೂತ್ರಧಾರಿಣಿಯಾಗಿ, ಮಹಾ ಶಕ್ತಿಯಾಗಿ, ಅನ್ನಪೂರ್ಣೆಯಾಗಿ 'ಅನುಭವ ಮಂಟಪದ' ಜ್ಞಾನ ಹಾಗೂ ಅನುಭಾವ ದಾಸೋಹದಲ್ಲಿ ಭಾಗಿಯಾಗಿ ತಮ್ಮನ ಅಭ್ಯುದಯಕ್ಕೆ ನೆರವಾದವಳು. ನಾಗಮ್ಮನ ವಚನಗಳ ವಸ್ತು-ಬಸವಭಾವ, ವ್ರತಾಚಾರ, ಶರಣಸತಿ, ಲಿಂಗಪತಿ ಮನೋಧರ್ಮ, ಅದರೊಂದಿಗೆ ಜೀವನದಲ್ಲಿ ಎದುರಿಸಿದ ಎಡರು-ತೊಡರುಗಳು. ತನ್ನ ಸಮಕಾಲೀನ ಶಿವಶರಣ, ಶಿವಶರಣೆಯರನ್ನು ಕುರಿತು ಪ್ರಸ್ತಾಪಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಬಸವಣ್ಣ ಪ್ರಿಯ ಚನ್ನಸಂಗಣ್ಣ".
ಗುರು ಸಂಬಂಧಿ ಗುರುಭಕ್ತಯ್ಯನು
ಲಿಂಗ ಸಂಬಂಧಿ ಪ್ರಭುದೇವರು
ಜಂಗಮ ಸಂಬಂಧಿ ಸಿದ್ಧರಾಮನು
ಪ್ರಸಾದ ಸಂಬಂಧಿ ಮರುಳ ಶಂಕರದೇವರು
ಪ್ರಾಣಲಿಂಗ ಸಂಬಂಧಿ ಅನಿಮಿಷದೇವರು
ಶರಣ ಸಂಬಂಧಿ ಘಟ್ಟಿವಾಳಯ್ಯನು
ಐಕ್ಯ ಸಂಬಂಧಿ ಅಜಗಣ್ಣಯ್ಯನು
ಸರ್ವಾಚಾರ ಸಂಬಂಧಿ ಚನ್ನಬಸವಣ್ಣನು
ಇಂತಿವರ ಸಂಬಂಧ ಎನ್ನ ಸರ್ವಾಂಗದಲಿ ನಿಂದು
ಬಸವಣ್ಣಪ್ರಿಯ ಚನ್ನಸಂಗಣ್ಣಯ್ಯನ
ಹೃದಯ ಕಮಲದಲಿ ನಿಜ ನಿವಾಸಿಯಾಗಿದ್ದೆನು
ಆಯ್ದಕ್ಕಿ ಲಕ್ಕಮ್ಮ
[ಬದಲಾಯಿಸಿ]ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೋಕಿನ 'ಅಮರೇಶ್ವರ ಗ್ರಾಮ'ದವಳು. ದಲಿತ ಕುಟುಂಬದ ಸ್ವಾಭಿಮಾನಿ ಹೆಣ್ಣು. ಅವಳ ಪತಿ 'ಮಾರಯ್ಯ'. 'ಬಡತನ'ವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ, 'ಅಮರೇಶ್ವರ ಗ್ರಾಮ'ದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕ ಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಲಕ್ಕಮ್ಮ 'ಹಿಡಿಯಕ್ಕಿ'ಯಿಂದಲೇ ಒಂದು ಲಕ್ಷದ ತೊಂಬತ್ತಾರು ಸಾವಿರದ ಜಂಗಮರಿಗೆ ಊಟ ನೀಡಿ ಬಸವಣ್ಣನವರಿಂದ "ಸೈ"ಎನಿಸಿಕೊಂಡವಳು. ಶರಣರೆಲ್ಲ ಆಕೆಯ ಪವಾಡಕ್ಕೆ ಮೂಕ ವಿಸ್ಮಿತ ರಾಗಿ 'ಭಕ್ತಿಯ ಮುಂದೆ ಎಲ್ಲವೂ ಮಿಥ್ಯ'ವೆಂದು ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ಒಮ್ಮೆ ಸಾಕ್ಷಾತ್ ಶಿವನೇ ಜಂಗಮ ರೂಪದಲ್ಲಿ ಬಂದು, ಅಸಾಧ್ಯ ಚಳಿಯನ್ನೂ ಸೃಷ್ಠಿಸಿ ನಡುಗುತ್ತಾ, ಶಿವಭಕ್ತರಾದ ಇವರಿಬ್ಬರು ಉಟ್ಟ ಬಟ್ಟೆಯೇ ಬೇಕೆಂದು ಕೇಳಿ ತೊಟ್ಟುಕೊಂಡು ಅವರ ಭಕ್ತಿಗೆ ಮೆಚ್ಚುಗೆ ಸೂಚಿಸಿದನಂತೆ. ಆಯ್ದಕ್ಕಿ ಲಕ್ಕಮ್ಮನ ವಚನಗಳಲ್ಲಿ ಆತ್ಮೋದ್ಧಾರ, ಲೋಕೋ ದ್ಧಾರಗಳೆಂಬ ದ್ವಿಮುಖ ಆಶಯ, ಕಾಯಕತತ್ವ , ನಿಶ್ಚಲ ನಿಲುವು, ಜ್ಞಾನದ ಅರಿವು, ಸಮತಾಭಾವ, ಇತರರ ಒಳ್ಳೆತನವನ್ನೇ ಪ್ರಶ್ನಿಸುವ ದಿಟ್ಟತನ, ಅತಿಯಾಸೆ ಒಳ್ಳೆಯದಲ್ಲವೆಂಬ ನಿಲುವು, ಆಕೆಯ ಅಚಲ ಆತ್ಮವಿಶ್ವಾಸ, ನಿರ್ಮಲ ವ್ಯಕ್ತಿತ್ವದ ಅನಾವರಣವಿದೆ. ಆಕೆಯ ಅಂಕಿತನಾಮ 'ಮಾರಯ್ಯಾ ಪ್ರಿಯ ಅಮರೇಶ್ವರಲಿಂಗ'.
'ಕಾಯಕ ನಿಂದಿತ್ತು ಹೋಗಯ್ಯಾ ಎನ್ನಾಳ್ದನೆ
ಭಾವ ಶುದ್ಧವಾಗಿ ಮಹಾ ಶರಣರ ತಿಪ್ಪೆಯ
ತಪ್ಪಲು ಅಕ್ಕಿಯ ತಂದು ನಿಶ್ಚೈಸಿ ಮಾಡಬೇಕು
ಮಾರಯ್ಯಾಪ್ರಿಯ ಅಮರೇಶ್ವರಲಿಂಗಕ್ಕೆ
ಬೇಗ ಹೋಗು ಮಾರಯ್ಯಾ ಅಂಗವರಿತ
ಅರುವೆಯ ಅಂಗದಲ್ಲಿ ಕಟ್ಟಿ ಬಯಕೆಯರಿತ
ಕೈಯಲ್ಲಿ ತಂಡುಲವನಾಯ್ದುಕೊಂಡು ಬನ್ನಿರಿ'
ಕದಿರ ರೆಮ್ಮವ್ವೆ
[ಬದಲಾಯಿಸಿ]ನೂಲುವ ಕಾಯಕದವಳು. ತನ್ನ ಕಾಯಕದೊಂದಿಗೆ ಆಧ್ಯಾತ್ಮವನ್ನು ಸಮನ್ವಯಗೊಳಿಸಿ ಪ್ರೌಢವೆನಿಸುವ 'ಬೆಡಗಿನ ವಚನ'ಗಳನ್ನೂ ರಚಿಸಿದ್ಧಾಳೆ. ತನಗೆ ಜೀವನ ರೂಪಿಸಿ ಕೊಳ್ಳಲು, ಸ್ವತಂತ್ರವಾಗಿ ಬದುಕಲು ಅವಕಾಶ ಕಲ್ಪಿಸಿಕೊಟ್ಟ ಶರಣರನ್ನು ಕೃತಜ್ಞತೆಯಿಂದ ಸ್ಮರಿಸಿರುವಳು. ಸೃಷ್ಠಿ, ಸ್ಥಿತಿ ,ಲಯಕಾರರಾದ ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳನ್ನು ತನ್ನ ಕದಿರ ಕಾಯಕದ ದೃಷ್ಟಾಂತಗಳೊಂದಿಗೆ ಅಂತರ್ಗತಗೊಳಿಸಿರುವಳು. ಈಕೆಯ ವಚನಗಳ ಅಂಕಿತ "ಗುಮ್ಮೇಶ್ವರ".
ನಾ ತಿರುಗುವ ರಾಟೆಯ ಕುಲ-ಜಾತಿ ಕೇಳಿರಣ್ಣಾ
ಅಡಿಯ ಹಲಗೆ ಬ್ರಹ್ಮ, ತೋರಣ ವಿಷ್ಣು
ನಿಂದ ಬೊಂಬೆ ಮಹಾರುದ್ರ
ರುದ್ರನ ಬೆಂಬಳಿಯವೆರಡು ಸೂತ್ರಕರ್ಣ
ಅರಿವೆಂಬ ಕದಿರು ಭಕ್ತಿಯೆಂಬ ಕೈಯಲ್ಲಿ
ತಿರುಹಲಾಗಿ ಸುತ್ತಿತು ನೂಲು
ಕದಿರು ತುಂಬಿತ್ತು ರಾಟೆಯ ತಿರುಹಲಾರೆ
ಎನ್ನ ಗಂಡ ಕುಟ್ಟಿಹ ಇನ್ನೇವೆ
ಕದಿರರೆಮ್ಮಿಯೊಡೆಯ ಗುಮ್ಮೇಶ್ವರ ?
ಕನ್ನಡಿ ಕಾಯಕದ ರೇಮವ್ವ
[ಬದಲಾಯಿಸಿ]ಈಕೆ ಸಾಮಾನ್ಯ ಜನವರ್ಗದಿಂದ ಬಂದವಳು. ಲಿಂಗಾಯತಧರ್ಮದಲ್ಲಿ ಇವಳಿಗಿದ್ದ ನಿಷ್ಠೆ, ಶ್ರದ್ಧೆ, ನೇರ ನಡೆ-ನುಡಿ, ನಿಷ್ಠುರ ಮನೋಭಾವ ಅವಳ ವಚನಗಳಲ್ಲಿ ವ್ಯಕ್ತಗೊಂಡಿವೆ. ಕೆಲವೆಡೆ ಈಕೆ ಅಹಂಕಾರಿಗಳ ವರ್ತನೆಯ ವಿಡಂಬನೆ ಮಾಡಿದ್ದಾಳೆ. ಇವಳ ವಚನಗಳ ಅಂಕಿತ "ನಿರಂಗಲಿಂಗ".
ಕೈಯಲ್ಲಿ ಕನ್ನಡಿಯಿರಲು ತನ್ನ ತಾ ನೋಡಬಾರದೆ ?
ಲಿಂಗ-ಜಂಗಮದ ಪ್ರಸಾದಕ್ಕೆ ತಪ್ಪದಲ್ಲಿ ಕೊಲ್ಲಬಾರದೆ ?
ಕೊಂದಡೆ ಮುಕ್ತಿಯಿಲ್ಲವೆಂಬುವರ ಬಾಯಲ್ಲಿ
ಪಡಿಹಾರನ ಪಾದರಕ್ಷೆಯನಿಕ್ಕುವೆ
ಮುಂಡಿಗೆಯನೆತ್ತಿರೊ ಭ್ರಷ್ಟ ಭವಿಗಳಿರಾ!
ಎತ್ತಲಾರದಡೆ ಸತ್ತ ಕುನ್ನಿ ನಾಯ ಬಾಲವ
ನಾಲಗೆಯ ಮುರುಟಿರೊ ಸದ್ಗುರುಸಂಗ ನಿರಂಗಲಿಂಗದಲ್ಲಿ
ಉರಿಲಿಂಗ ಪೆದ್ದಿಗಳ ಪತ್ನಿ ಕಾಳವ್ವೆ
[ಬದಲಾಯಿಸಿ]ಈ ದಂಪತಿಗಳು ಮಹಾರಾಷ್ಟೃದ ಕಡೆಯಿಂದ ಬಂದವರು. ಒಂದೆಡೆ ಕಿತ್ತು ತಿನ್ನುವ ಬಡತನ, ಮತ್ತೊಂದೆಡೆ ಕಳ್ಳನಾಗಿದ್ದ ಗಂಡನೊಡನೆ ಕಾಳವ್ವೆ ಪ್ರಯಾಸದ ಜೀವನ ನಡೆಸುತ್ತಿರುತ್ತಾಳೆ. ಒಂದು ದಿನ ಕಳ್ಳತನ ಮಾಡಲು ಹೋದ ಉರಿಲಿಂಗಪೆದ್ದಿ ಮನ: ಪರಿವರ್ತನೆಗೊಂಡು, 'ಉರಿಲಿಂಗ ದೇವರೆಂಬ' ಗುರುವಿನಿಂದ ಗುರುದೀಕ್ಷೆ ಪಡೆದು ಶರಣನಾಗುವನು. ಇದರಿಂದ ಸಂತಸಗೊಂಡ ಕಾಳವ್ವೆ ತಾನೂ ಪತಿಯ ಹಾದಿಯಲ್ಲೆ ಮುನ್ನಡೆದಳು. ದೈವಗಳನ್ನು ಒಲಿಸಿಕೊಳ್ಳುವ ನೆಪದಲ್ಲಿ ಪ್ರಾಣಿಗಳನ್ನು ಬಲಿಕೊಡುವಂತಹ ಘೋರ ಕೃತ್ಯವನ್ನು ,ಜಾತೀಯತೆಯನ್ನು ತನ್ನ ವಚನಗಳ ಮೂಲಕ ಉಗ್ರವಾಗಿ ಖಂಡಿಸಿ, ವ್ರತಾಚರಣೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದಾಳೆ. ಈಕೆಯ ವಚನಗಳ ಅಂಕಿತ "ಉರಿಲಿಂಗಪೆದ್ದಿ ಗಳರಸ".
ಕುರಿ-ಕೋಳಿ ಕಿರಿಮೀನು ತಿಂಬವರೆಲ್ಲ
ಕುಲಜ ಕುಲಜರೆಂದೆಂಬರು!
ಶಿವಗೆ ಪಂಚಾಮೃತವ ಕರೆವ ಪಶುವ
ತಿಂಬ ಮಾದಿಗ ಕೀಳುಜಾತಿಯೆಂಬರು
ಅವರೆಂತು ಕೀಳುಜಾತಿಯಾದರು ?
ಜಾತಿಗಳೇ ನೀವೇಕೆ ಕೀಳಾದಿರೊ ?
ಬ್ರಾಹ್ಮಣನುಂಡುದು ಪುಲ್ಲಿಗೆ ಶೋಭಿತವಾಗಿ
ನಾಯಿ ನೆಕ್ಕಿ ಹೋಯಿತು
ಮಾದಿಗರುಂಡುದು ಪುಲ್ಲಿಗೆ ಬ್ರಾಹ್ಮಣಂಗೆ
ಶೋಭಿತವಾಯ್ತು ಅದೆಂತೆಂದಡೆ-
ಸಿದ್ಧಲಿಕೆಯಾಯ್ತು, ಸಗ್ಗಳೆಯಾಯ್ತು
ಸಿದ್ಧಲಿಕೆಯ ತುಪ್ಪವನು ಸಗ್ಗಳೆಯ ನೀರನು
ಶುದ್ಧವೆಂದು ಕುಡಿದ ಬುದ್ಧಿಗೇಡಿ ವಿಪ್ರರಿಗೆ
ನಾಯಕ ನರಕ ತಪ್ಪದಯ್ಯ!
ಉರಿಲಿಂಗಪೆದ್ದಿಗಳರಸ ಇದನೊಲ್ಲನವ್ವಾ
ಕಾಲಕಣ್ಣಿ ಕಾಮವ್ವ
[ಬದಲಾಯಿಸಿ]ಈಕೆಯ ವೈಯಕ್ತಿಕ ಪೂರ್ವಪರಗಳೊಂದೂ ತಿಳಿದು ಬರುವುದಿಲ್ಲ. "ಕಾಲಕಣ್ಣಿ" ಎಂಬುದು ಸ್ಥಳನಾಮ ವಿಶೇಷಣವೂ, ಕಾಯಕ ಸೂಚಕವೂ ಸ್ಪಷ್ಟವಾಗಿಲ್ಲ. ಆದರೆ ಈಕೆಯ ಕೆಲವು ವಚನಗಳಲ್ಲಿ ಕರಣೇಂದ್ರಿಯಗಳನ್ನು ಲಿಂಗದಲ್ಲಿ ಕಟ್ಟುವ ನಿಷ್ಠೆ, ಗುರು-ಲಿಂಗ-ಜಂಗಮರ ಕಾಲ ಕಟ್ಟುವ ಶ್ರದ್ಧೆ, ಹೆಣ್ಣು-ಗಂಡೆಂಬ ಭೇಧವಿಲ್ಲದೆ ತನು ಮನಗಳ ಪಾವಿತ್ರತೆಯನ್ನು ಎತ್ತಿ ಹಿಡಿಯುವ ಪ್ರಾಮಾಣಿಕತೆ, ಡಾಂಬಿಕ ಭಕ್ತರ ಬಗೆಗಿರುವ ರೊಚ್ಚು ದಂಗು ಬಡಿಸುತ್ತದೆ. ಈಕೆಯ ವಚನಗಳ ಅಂಕಿತ "ನಿರ್ಭೀತಿ ನಿಜಲಿಂಗ".
ಎನ್ನ ಕರಣಂಗಳ ಲಿಂಗದಲ್ಲಿ ಕಟ್ಟುವೆ
ಗುರು ಲಿಂಗ ಜಂಗಮರ ಕಾಲ ಕಟ್ಟುವೆ
ವ್ರತಭ್ರಷ್ಟರ ನಿಟ್ಟೊರಸುವೆ
ಸುಟ್ಟು ತುರತುರನೆ ತೂರುವೆ
ನಿರ್ಭೀತಿ ನಿಜಲಿಂಗದಲ್ಲಿ!
ಬಸವಯ್ಯನವರ ಧರ್ಮಪತ್ನಿ ಕಾಳವ್ವೆ
[ಬದಲಾಯಿಸಿ]ಈ ದಂಪತಿಗಳಿಬ್ಬರೂ ಬಾಚಿ ಕಾಯಕ ಮಾಡಿ ಕೊಂಡಿರುತ್ತಾರೆ. ಕಾಳವ್ವೆ ಗಂಡನ ಕಾಯಕ ದೃಷ್ಟಾಂತದೊಂದಿಗೆ ತನ್ನ ಕಾಯಕ ನಿಷ್ಠೆ ಹಾಗೂ ವ್ರತಗಳ ಮಹತ್ವವನ್ನು ಈಕೆ ತನ್ನ ವಚನಗಳಲ್ಲಿ ಪ್ರತಿಪಾದಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಕರ್ಮಹರ ಕಾಳೇಶ್ವರ".
ಕೈ ತಪ್ಪಿ ಕೆತ್ತಲು ಕಾಲಿಗೆ ಮೂಲ
ಮಾತ ತಪ್ಪಿ ನುಡಿಯಲು ಬಾಯಿಗೆ ಮೂಲ
ವ್ರತಹೀನನ ನೆರೆವುದು ನರಕಕ್ಕೆ ಮೂಲ
ಕರ್ಮಹರ ಕಾಳೇಶ್ವರಾ!
ಸಿದ್ಧಬುದ್ಧಯ್ಯನವರ ಧರ್ಮಪತ್ನಿ ಕಾಳವ್ವೆ
[ಬದಲಾಯಿಸಿ]ಈಕೆಯ ಬಗೆಗಿನ ವೈಯಕ್ತಿಕ ವಿವರಗಳು ಹೆಚ್ಚು ಲಭ್ಯವಾಗಿಲ್ಲ. ಆದರೂ ಈಕೆ ಲಿಂಗ ವಿಹಿತರನ್ನು, ವ್ರತ ಭ್ರಷ್ಟರನ್ನು ದೂರ ಇಡಬೇಕೆಂದು ಲಿಂಗದ ಬಗ್ಗೆ ತನಗಿರುವ ನಿಷ್ಠೆಯನ್ನು ವ್ಯಕ್ತ ಪಡಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಭೀಮೇಶ್ವರ".
ವ್ರತಭ್ರಷ್ಟನ ಲಿಂಗ ಬಾಹ್ಯವ
ಕಂಡಡೆ ಸತ್ತ ನಾಯ, ಕಾಗೆಯ
ಕಂಡಂತೆ ಅವರೊಡನೆ ನುಡಿಯಲಾಗದು
ಭೀಮೇಶ್ವರಾ!
ಕೇತಲದೇವಿ
[ಬದಲಾಯಿಸಿ]ಬೀದರ ಜಿಲ್ಲೆಯ 'ಬಾಲ್ಕಿ' ಗ್ರಾಮದವಳು. ಪತಿ ಕುಂಬಾರ ಗುಂಡಯ್ಯ. ದಂಪತಿಗಳಿಬ್ಬರೂ ಕಾಯಕದಲ್ಲೇ ಕೈಲಾಸ ಕಂಡವರು. ಈಕೆಯೂ ಸಹ ಕಾಯಕ ದೃಷ್ಟಾಂತದೊಂದಿಗೆ ವ್ರತಾಚರಣೆಯ ಮಹತ್ವವನ್ನು ಸೌಮ್ಯವಾಗಿ ಎತ್ತಿ ಹಿಡಿಯುವ ಶರಣೆ. ಈಕೆಯ ಶಿವ ಭಕ್ತಿ ಅಪಾರವಾದುದು. ಒಮ್ಮೆ ಶಿವಲಿಂಗಕ್ಕೆ ಪಾವಡ ದೊರೆಯದಿದ್ದಾಗ ತನ್ನ ಚರ್ಮವನ್ನೇ ಪಾವಡವಾಗಿ ನೀಡಿದ ದಂತಕಥೆಯೊಂದು ವೀರಶೈವ ಪುರಾಣಗಳಲ್ಲಿ ಪ್ರಚಲಿತದಲ್ಲಿದೆ. ಈಕೆಯ ವಚನಗಳ ಅಂಕಿತ "ಕುಂಭೇಶ್ವರಾ".
ಹದ ಮಣ್ಣಲ್ಲದೆ ಮಡಕೆಯಾಗಲಾರದು
ವ್ರತಹೀನನ ಬೆರೆಯಲಾಗದು
ಬೆರೆದಡೆ ನರಕ ತಪ್ಪದು
ನಾನೊಲ್ಲೆ ಬಲ್ಲೆನಾಗಿ ಕುಂಭೇಶ್ವರಾ!
ಕೊಟ್ಟಣದ ಸೋಮಮ್ಮ
[ಬದಲಾಯಿಸಿ]ಕೊಟ್ಟಣ ಕುಟ್ಟುವ ಕಾಯಕದವಳು. ಸಾಮಾನ್ಯ ವರ್ಗದ ವ್ರತಾಚಾರ ನಿಷ್ಠೆಯ ಶಿವಶರಣೆ. ಅಪಾರ ಧೈರ್ಯವಂತೆ, ಕಾಯಕದಲ್ಲಿ ಕೈಲಾಸ, ನೆಮ್ಮದಿ ಯನ್ನು ಕಂಡವಳು. ಈಕೆಯು ತನ್ನ ಕಾಯಕ ದೃಷ್ಟಾಂತ ಬಳಸಿ ತಾನು ಹೇಳಬೇಕಾದುದನ್ನು ಧ್ವನಿಪೂರ್ಣವಾಗಿ ಹೇಳಿದ್ದಾಳೆ. ಈಕೆಯ ವಚನಗಳ ಅಂಕಿತ "ನಿರ್ಲಜ್ಜೇಶ್ವರ".
ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ
ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ
ಅರಿಯದುದು ಹೋಗಲಿ ಅರಿದು ಬೆರೆದೆನಾದೊಡೆ
ಕಾದಕತ್ತಿಯಲಿ ಕಿವಿಯ ಕೊಯ್ವರಯ್ಯಾ!
ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರ
ಗಂಗಾದೇವಿ/ಮೋಳಿಗೆ ಮಹಾದೇವಿ
[ಬದಲಾಯಿಸಿ]ಬಸವಣ್ಣನವರ ನಿರ್ಮಲ ವ್ಯಕ್ತಿತ್ವ ಕೇವಲ ಕರ್ನಾಟಕದ ಜನರನ್ನಷ್ಟೇ ಆಕರ್ಷಿಸಲಿಲ್ಲ. ದೇಶದ ಮೂಲೆ ಮೂಲೆಗಳಿಂದ ಅನೇಕ ಜನರು ಕಲ್ಯಾಣಕ್ಕೆ ಬಂದು ಶರಣದೀಕ್ಷೆ, ಶರಣತ್ವ ಸ್ವೀಕರಿಸಿದರು. ಅಂತಹವರಲ್ಲಿ ಕಾಶ್ಮೀರದ ದೊರೆ ಮಹದೇವರಸ ಮತ್ತು ಆತನ ಪಟ್ಟ ಮಹಿಷಿ ಗಂಗಾದೇವಿ ಪ್ರಮುಖರು. ಇವರು ತಮಗಿದ್ಧ ರಾಜ ವೈಭವವನ್ನು ತೊರೆದು, ಸಾಮಾನ್ಯರಂತೆ ಕಟ್ಟಿಗೆ ಮಾರುವ ಕಾಯಕವನ್ನು ಕೈಗೆತ್ತಿಕೊಂಡು ಬದುಕ ನಡೆಸಿದವರು. ಈ ಸಂದರ್ಭದಲ್ಲಿ ಅವರು ತಮ್ಮ ಮೂಲ ಹೆಸರನ್ನು ಬದಲಾಯಿಸಿ, ಮಹದೇವರಸ ಮೋಳಿಗೆ ಮಾರಯ್ಯನಾದರೆ, ರಾಣಿ ಗಂಗಾದೇವಿ ಮೋಳಿಗೆ ಮಹಾದೇವಿಯಾಗುತ್ತಾಳೆ. ಈಕೆಯ ವಚನಗಳ ಅಂಕಿತ- "ನಿ:ಕಳಂಕ ಮಲ್ಲಿಕಾರ್ಜುನಯ್ಯಾ".
ಊರ್ವಶಿ ಕರ್ಪೂರವ ತಿಂದು ಎಲ್ಲರಿಗೂ
ಮುತ್ತು ಕೊಟ್ಟರೆ ಮೆಚ್ಚುವರಲ್ಲದೆ
ಹಂದಿ ಕರ್ಪೂರವ ತಿಂದು ಎಲ್ಲರಿಗೂ
ಮುತ್ತು ಕೊಟ್ಟರೆ ಮೆಚ್ಚುವರೇ!
ಹುಡು ಹುಡು ಎಂದಟ್ಟುವರಲ್ಲದೆ
ಮಾಡಿದ ಭಕ್ತಿಗೆ ಕೈಲಾಸಕ್ಕೆ ಹೋಹೆನೆಂಬುದು
ಕೈಕೂಲಿ ಇಂತಿ ಉಭಯದಲಿ ಲಕ್ಷಿತವಾದವರಿಗೆ
ಮರ್ತ್ಸ ಕೈಲಾಸವೆಂಬುದು ತನ್ನರಿವು
ನಿಶ್ವಯವಾದಲ್ಲಿ ಅದೇ ಲಕ್ಷ್ಯ ಎನ್ನಯ್ಯ
ಪ್ರಿಯ ಇಮ್ಮಡಿ ನಿ:ಕಳಂಕ ಮಲ್ಲಿಕಾರ್ಜುನಯ್ಯಾ
ಗಂಗಮ್ಮ
[ಬದಲಾಯಿಸಿ]ವೃತ್ತಿಗೌರವ ವಚನ ಸಾಹಿತ್ಯ ಕಾಲದ ಅಪೂರ್ವ ಕೊಡುಗೆ. ಗಂಗಮ್ಮ ಹಾದರದ ಕಾಯಕ ಮಾಡುತ್ತಿದ್ದವಳು. ಅವಳ ದೃಷ್ಟಿಯಲ್ಲಿ ವ್ಯಕ್ತಿ ಸಮಾಜದಲ್ಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ಮೈಗಳ್ಳನಾಗದೆ ಬದುಕುವುದು ಮುಖ್ಯವೆ ಹೊರತು, ಅವನದು ಮೇಲು ಕಾಯಕ, ನನ್ನದು ಕೀಳು ಕಾಯಕವೆಂಬ ಕೀಳರಿಮೆ ಹೊಂದಬಾರದು. ತನ್ನ ವೃತ್ತಿಯ ಬಗ್ಗೆ ಅಭಿಮಾನ,ಗೌರವವನ್ನು ವಚನಗಳಲ್ಲಿ ವ್ಯಕ್ತಪಡಿಸಿದ್ದಾಳೆ. ನಂತರ ಬಸವಣ್ಣನವರ ಮಾರ್ಗದರ್ಶನದಂತೆ ತನ್ನ ಕಾಯಕವನ್ನು ಬಿಟ್ಟು 'ಮಾರಯ್ಯ' ಎಂಬುವನನ್ನು ವರಿಸಿ ಗೃಹಿಣಿ ಯಾಗುತ್ತಾಳೆ. ಈಕೆಯ ವಚನಗಳ ಅಂಕಿತ "ಗಂಗೇಶ್ವರಲಿಂಗ".
ಆವ ಕಾಯಕ ಮಾಡಿದರೂ ಒಂದೇ ಕಾಯಕವಯ್ಯಾ
ಆವ ವ್ರತ ಮಾಡಿದರೂ ಒಂದೇ ವ್ರತವಯ್ಯಾ
ಆಯ ತಪ್ಪಿದಡೆ ಸಾವಿಲ್ಲ,
ವ್ರತ ತಪ್ಪಿದಡೆ ಕೂಡಲಿಲ್ಲ
ಕಾಕ-ಪಿಕದಂತೆ ಕೂಡಲು
ನಾಯಕ ನರಕ ಗಂಗೇಶ್ವರಲಿಂಗದಲ್ಲಿ
ಗೊಗ್ಗವ್ವೆ
[ಬದಲಾಯಿಸಿ]ಬಾಲ್ಯದಿಂದಲೂ ಈಕೆ ವಿಶಿಷ್ಟ ಶಿವಭಕ್ತೆ. ಇವಳ ಜೀವನ ಒಂದು ಬಗೆಯ ಹೋರಾಟದಿಂದ ಕೂಡಿದೆ. ಹೆತ್ತವರು ಈಕೆಗೆ ವಿವಾಹ ಮಾಡಲು ಬಯಸಿದಾಗ, ಮದುವೆ ಬಗ್ಗೆ ಆಸಕ್ತಿ ಇರದ ಈಕೆ 'ಗೊಗ್ಗಳೇಶ್ವರ' ದೇಗುಲದಲ್ಲಿ ಅಡಗಿ ಕುಳಿತು ವಿವಾಹ ಆಗುವ ಸಂದರ್ಭವನ್ನು ತಪ್ಪಿಸಿಕೊಂಡ ಳಂತೆ. ಇವಳು ಗೊಗ್ಗಳೇಶ್ವರ ದೇವಾಲಯದಲ್ಲಿ ಧೂಪದ ಕಾಯಕ ಮಾಡುತ್ತಿದ್ದುದರಿಂದ ಈಕೆಯನ್ನು 'ಧೂಪದ ಗೊಗ್ಗವ್ವೆ'ಯೆಂದೂ ಕರೆಯುವರು. ಈಕೆಯ ವಚನಗಳ ಅಂಕಿತ 'ನಾಸ್ತಿನಾಥಾ'.
ಅನಲಕೊಂಡ ಭೋಗಕ್ಕೆ ಪರಿ ಪ್ರಕಾರವುಂಟೇ ?
ಶರಧಿಕೊಂಡ ಸಾಗರಕ್ಕೆ ಕುರುಹಿನ ತಲೆಯೇ ?
ಲಿಂಗ ಮುಟ್ಟಿದ ಅಂಗಕ್ಕೆ ಮತ್ತೆ
ಪುಣ್ಯವುಂಟೇ ? ಹುಸಿ ನಾಸ್ತಿನಾಥಾ!
ಗಂಗಾಂಬಿಕೆ
[ಬದಲಾಯಿಸಿ]ಬಸವೇಶ್ವರರ ಹಿರಿಯ ಪತ್ನಿ, ಮಂತ್ರಿ ಬಲದೇವ ಎಂಬುವರ ಮಗಳು. ಗುರು ಘನಲಿಂಗ ರುದ್ರಮುನಿಗಳ ಶಿಷ್ಯೆ. ಬಸವಣ್ಣನವರ ಎಲ್ಲಾ ಕಾರ್ಯಗಳಲ್ಲೂ ಚೈತನ್ಯದಾಯಕ ಸ್ಪೂರ್ತಿಯ ಸೆಲೆಯಾದವಳು. ಈಕೆ ಪತಿಯ ಇಚ್ಛಾನುಸಾರಿಣಿ, ದಾಸೋಹ ನಿರತೆ, ಲಿಂಗನಿಷ್ಠೆಯುಳ್ಳ ಆಧ್ಯಾತ್ಮ ಸಾಧಕಿ. ಇವಳ ವಚನಗಳಲ್ಲಿ ಅಂತರಂಗದ ಅಭಿವ್ಯಕ್ತಿ, ವೈಯಕ್ತಿಕ ಬದುಕಿನ ನೋವು, ಅಗಲಿಕೆ, ದು:ಖ, ದುಮ್ಮಾನಗಳ ಚಿತ್ರಣವಿದೆ. ಈಕೆಯ ವಚನಗಳ ಅಂಕಿತ " ಗಂಗಾಪ್ರಿಯ ಕೂಡಲಸಂಗ".
ಅವಳ ಕಂದ ಬಾಲಸಂಗ ನಿನ್ನ ಕಂದ
ಚನ್ನಲಿಂಗ ಎಂದು ಹೇಳಿದರಮ್ಮಾ
ಎನ್ನ ಒಡೆಯರು ಫಲವಿಲ್ಲದ
ಕಂದನಿರ್ಪನವಳಿಗೆ ಎನಗೆ ಫಲವಿಲ್ಲ
ಕಂದನಿಲ್ಲ ಇದೇನೊ ದು:ಖದಂದುಗ
ಗಂಗಾಪ್ರಿಯ ಕೂಡಲಸಂಗಮದೇವಾ ?
ಗಜೇಶ ಮಸಣಯ್ಯರ ಪತ್ನಿಯ ವಚನಗಳು
[ಬದಲಾಯಿಸಿ]ಗಜೇಶ ಮಸಣಯ್ಯ ಅಕಲಕೋಟೆ ತಾಲ್ಲೋಕಿನ ಕಂಜಿಗೆ ಗ್ರಾಮದ ನಿವಾಸಿ. ಬಸವಾದಿ ಶರಣರ ಸಮಕಾಲೀನ. ಈತನ ಪತ್ನಿಯೇ ಈ ಗೌಪ್ಯವಚನಕಾರ್ತಿ. ಇಂತಹ ಒಂದೆರಡು ಪ್ರಸಂಗಗಳು ವಚನ ಸಾಹಿತ್ಯಯುಗದಲ್ಲಿ ದಾಖಲಾಗಿವೆ. ಈಕೆಯ ೯ವಚನಗಳು ಹಸ್ತಪ್ರತಿಯಲ್ಲಿ ಲಭ್ಯವಾಗಿವೆ. ಅವೆಲ್ಲವೂ ಷಟ್ಸ್ಥಲಸಿದ್ದಾಂತದ ವಿವರಗಳನ್ನು, ಆತ್ಮಜ್ಞಾನದ ತಿಳುವಳಿಕೆಯನ್ನು ಒಳಗೊಂಡಿವೆ. ಈಕೆಯ ವಚನಗಳ ಅಂಕಿತ " ಮಸಣಯ್ಯ ಗಜೇಶಪ್ರಿಯ".
ಪರದಿಂದಲಾಯಿತು ಪರಶಕ್ತಿ
ಪರಶಕ್ತಿಯಿಂದಲೊದಗಿದ ಭೂತಂಗಳು
ಭೂತಂಗಳಿಂದಲೊದಗಿದ ಅಂಗ
ಅಂಗಕ್ಕಾದ ಕರಣೇಂದ್ರಿಯಂಗಳು
ಕರಣೇಂದ್ರಿಯಂಗಳಿಂದಲೊದಗಿದ ವಿಷಯಂಗಳು
ಆ ವಿಷಯಂಗಳ ಪರಮುಖಕ್ಕೆ ತಾ ಶಕ್ತಿಯಾಗಿ
ಭೋಗಿಸಲ್ಪಡೆ ಆತ ನಿರ್ಲೇಪ ಮಸಣಯ್ಯ ಗಜೇಶಪ್ರಿಯ
ದುಗ್ಗಳೆ
[ಬದಲಾಯಿಸಿ]ದೇವರದಾಸಿಮಯ್ಯ ದುಗ್ಗಳೆಯನ್ನು ಮದುವೆಗೆ ನೋಡಲು ಹೋದಾಗ ಆತ ಅವಳಿಗೆ ಮರಳಿನಲ್ಲಿ ಪಾಯಸ ಮಾಡಲು ಹೇಳಿ ಪರೀಕ್ಷಿಸಿದನಂತೆ. ದುಗ್ಗಳೆ ರೂಪ, ಹಣದಿಂದ ಶ್ರೀಮಂತೆಯಾಗದೆ, ತನ್ನ ಆಂತರಿಕ ಗುಣ-ನಡವಳಿಕೆ, ಹೊಂದಾಣಿಕೆಯ ಸ್ವಭಾವದಿಂದ ತನ್ನ ಆಂತರ್ಯ ಸಿರಿ ಹೆಚ್ಚಿಸಿ ಕೊಂಡವಳು. ನೇಯ್ಗೆ ಕಾಯಕದಲ್ಲಿ ಪತಿಗೆ ಸಹಕರಿಸಿ, ವಸ್ತ್ರದಿಂದ ಮಾರಿ ಬಂದ ಹಣದಿಂದ ದಾಸೋಹತತ್ವ ಅಳವಡಿಸಿಕೊಂಡು ಗಂಡನಿಂದ ಸೈ ಎನ್ನಿಸಿ ಕೊಂಡವಳು. ಈಕೆಯ ವಚನಗಳ ಅಂಕಿತ " ದಾಸಯ್ಯ ಪ್ರಿಯ ರಾಮನಾಥ".
ಬಸವಣ್ಣ ಭಕ್ತ, ಪ್ರಭುದೇವ ಜಂಗಮ
ಸಿದ್ದರಾಮಯ್ಯ ಯೋಗಿ, ಚೆನ್ನಬಸವಣ್ಣ ಭೋಗಿ
ಅಜಗಣ್ಣ ಐಕ್ಯನಾದವನು ಇಂತಹವರ
ಕರುಣ ಪ್ರಸಾದವ ಕೊಂಡು ಸತ್ತ ಹಾಗಿರಬೇಕಲ್ಲದೆ
ತತ್ವದ ಮಾತು ತನಗೇಕೆ ದಾಸಯ್ಯ ಪ್ರಿಯ ರಾಮನಾಥ
ನೀಲಾಂಬಿಕೆ/ನೀಲಲೋಚನೆ
[ಬದಲಾಯಿಸಿ]ಮೇಲ್ಮಟ್ಟದ ಶಿವ ಶರಣೆ. ಬಸವಣ್ಣನವರ ಧರ್ಮಪತ್ನಿ. ಈಕೆ ಬಸವಣ್ಣನವರ ಲೌಕಿಕ ಮತ್ತು ಅಲೌಕಿಕ ಜೀವನಕ್ಕೆ ಪೂರಕವಾಗಿ ನಿಂತು ಅವರ ದಾಸೋಹ ಕಾರ್ಯದಲ್ಲಿ ಸಮರ್ಪಣಾಭಾವದಿಂದ ಸಹಕರಿಸಿದವಳು. ಕಲ್ಯಾಣದ ಕ್ರಾಂತಿಯಾಗಿ ಶಿವಶರಣರು ಚದುರಿದಾಗ ಇವಳು ತನ್ನ ಶುದ್ಧ ನಡೆ -ನುಡಿಯಿಂದ ಎಲ್ಲರ ಮೆಚ್ಚುಗೆ, ಗೌರವಕ್ಕೆ ಪಾತ್ರಳಾದಳು. ಈಕೆಯ ಭಕ್ತಿ, ತಾಳ್ಮೆ, ಕಾಯಕನಿಷ್ಠೆ, ಜ್ಞಾನ, ವೈರಾಗ್ಯಗಳು ಅವಳ ವಚನಗಳಲ್ಲಿ ಮೈದಾಳಿವೆ. ಈಕೆಯ ವಚನಗಳ ಅಂಕಿತ "ಸಂಗಯ್ಯಾ".
ಮಡದಿ ಎನ್ನಲಾಗದು ಬಸವಂಗೆ ಎನ್ನನು
ಪುರುಷನೆನಲಾಗದು ಬಸವನ ಎನಗೆ
ಉಭಯ ಕುಳವ ಹರಿದು ಬಸವಂಗೆ
ಶಿಶುವಾನಾದೆನು ಬಸವನೆನ್ನ ಶಿಶುವಾದನು
ಪ್ರಮಥರು ಪುರಾತನರು ಸಾಕ್ಷಿಯಾಗಿ
ಸಂಗಯ್ಯನಿಕ್ಕಿದ ದಿಬ್ಯವ ಮೀರದೆ ಬಸವನೊಳಾನಡಗಿದೆ
ಬೊಂತಾದೇವಿ
[ಬದಲಾಯಿಸಿ]ಇವಳ ಮೂಲ ಹೆಸರು ನಿಜದೇವಿ. ದಿಗಂಬರೆಯಾಗಿದ್ದ ಶ್ರೇಷ್ಠ ಶಿವ ಭಕ್ತೆ. ಶಿವ ಈ ನಿಷ್ಠಾವಂತ ಶಿವಶರಣೆಯನ್ನು ಪರೀಕ್ಷಿಸಲು ಬಂದು ಅವಳಿಗೆ ಒಂದು ಬೊಂತೆ(ಕೌದಿ) ಕೊಟ್ಟು ಇದನ್ನು ಹೊದೆದು ಹೋಗು ಎನ್ನುತ್ತಾನೆ. ಶಿವನು ಕೊಟ್ಟ ಬೊಂತೆಯನ್ನು ಹೊದ್ದವಳನ್ನು ಅಂದಿನ ಜನ 'ಬೊಂತಾದೇವಿ' ಎಂದು ಕರೆದರು. ಈಕೆ ತನ್ನ ವಚನಗಳಲ್ಲಿ ವೇದ, ಪುರಾಣ, ಆಗಮಗಳನ್ನು ತ್ರಿಮೂರ್ತಿಗಳಿಗೆ ಹೋಲಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ಬಿಡಾಡಿ".
ಅಂತಾಯಿತು ಇಂತಾಯಿತ್ತೇನಬೇಡ
ಅನಂತ ನಿಂತಾತ್ಮನೆಂದರಿಯಯಾ ! ಬಿಡಾಡಿ
ಕರೆದಾಕೆ ಓ ಎಂಬುದು
ನಾದವೂ, ಬಿಂದುವೂ, ಪ್ರಾಣವೂ ?
ಇದಾವುದ ಬಲ್ಲಡೆ ನೀ ಹೇಳ ! ಬಿಡಾಡಿ
ನಾಲ್ಕು ವೇದ, ಹದಿನೆಂಟು ಪುರಾಣ
ಇಪ್ಪತ್ತೆಂಟು ಆಗಮ ಇದ ಪ್ರತಿ ಬಿಡಾಡಿ
ಶಬ್ದವೇ ಬ್ರಹ್ಮ, ಶಬ್ದವೇ ಸಿದ್ಧ , ಶಬ್ದವೇ ಶುದ್ಧ
ಕಾಣಿರೋ ಬಿಡಾಡಿ ಲಿಂಗೇಶ್ವರನಲ್ಲಿ
ಮಸಣಮ್ಮ
[ಬದಲಾಯಿಸಿ]ಎಡೆಮಠದ ನಾಗಿದೇವಯ್ಯ ಎಂಬುವರ ಧರ್ಮಪತ್ನಿ. ತಮಿಳುನಾಡಿನ 'ಕಂಚಿಪಟ್ಟಣ'ದಿಂದ ಬಂದು ಬಸವಣ್ಣನ ಒಡನಾಡಿಯಾಗಿ 'ಚಿಮ್ಮಲಿಗೆ'ಯಲ್ಲಿ ನೆಲೆಸಿ ಅಲ್ಲಿನ ಸ್ವಾಮೀಜಿಗಳಾದ ನಿಜಗುಣರಿಂದ ನಿಜೋಪದೇಶ ಪಡೆದು ಪತಿಯೊಂದಿಗೆ ಧರ್ಮ ಪ್ರಚಾರದ ಕಾರ್ಯದಲ್ಲಿ ತೊಡಗಿ ಕೊಂಡಿದ್ದ ವಳು. ವ್ರತಹೀನರಿಗೆ ಶಿವಬೋದೆ ಲಭಿಸದು, ವ್ರತಾಚರಣೆ ಎಲ್ಲರಿಗೂ ದಕ್ಕದೆಂಬ ನಿಲುವು ಆಕೆಯದು. ಈಕೆಯ ವಚನಗಳ ಅಂಕಿತ "ನಿಜಗುಣೇಶ್ವರಲಿಂಗ".
ಕಾಗೆಯ ನಾಯ ತಿಂದವರಿಲ್ಲ
ವ್ರತಭ್ರಷ್ಟರ ಕೂಡಿದವರಿಲ್ಲ
ನಾಯಿಗೆ ನಾರುನವ ಇಕ್ಕುವುದೇ?
ಲೋಕದ ನರಂಗೆ ವ್ರತವ ಇಕ್ಕುವುದೇ?
ಶಿವ ಬೀಜಕ್ಕಲ್ಲದೆ ನೀವೇ ಸಾಕ್ಷಿ
ನಿಜಗುಣೇಶ್ವರಲಿಂಗದಲ್ಲಿ
ರೇಕಮ್ಮ
[ಬದಲಾಯಿಸಿ]ರೇವಣಸಿದ್ದಯ್ಯ ಎಂಬುವವರ ಧರ್ಮಪತ್ನಿ. ಈಕೆಯ ಊರು ಸುಮನಸಪುರ. ಹೂ ಕಟ್ಟ್ವುವ ಕಾಯಕದವಳು. ಇವಳು ದೇವಾಲಯವೂಂದರಲ್ಲಿ ಹಲವು ಬಗೆಯ ಹೂಗಳಿಂದ ಶಿವಾರ್ಚನೆ ಮಾಡುತ್ತಿದ್ದಳು. ಈಕೆ ನಿತ್ಯವೂ ಹೂ ದಂಡೆಯ ಮಧ್ಯೆ ಕೆಂಪು ಸೇವಂತಿಗೆ ಹೂವನ್ನು ಸೇರಿಸುವ ಪದ್ದತಿ ಇಟ್ಟು ಕೊಂಡಿದ್ದಳು. ಭಕ್ತ ಪರೀಕ್ಷಕನಾದ ಶಿವ ಒಮ್ಮೆ ಬೇಕೆಂದೇ ಇವಳಿಗೆ ಕೆಂಪು ಸೇವಂತಿಗೆ ಹೂ ಸಿಗದಂತೆ ಮಾಡುತ್ತಾನೆ. ಇದರಿಂದ ವಿಚಲಿತಗೊಳ್ಳದ ಈಕೆ ಆಗ ತನ್ನ ದೇಹದ ಮಾಂಸವನ್ನೇ ಕೊಯ್ದು ಕೆಂಪು ಸೇವಂತಿಗೆ ಹೂವಿಗೆ ಬದಲಾಗಿ ದಂಡೆ ಕಟ್ಟಿ ಶಿವನಿಗೆ ಅರ್ಪಿಸಿ ದಾಗ ಶಿವ ಸಖೇದಾಶ್ಚರ್ಯಗೊಂಡನಂತೆ. ಹೀಗೆ ಇವಳು ತನ್ನ ಉಗ್ರ ಭಕ್ತಿಯಿಂದ ಶಿವನನ್ನು ಒಲಿಸಿಕೊಂಡು ಶರಣರ ಮೆಚ್ಚುಗೆ ಪಡೆದವಳಾಗಿ ದ್ದಾಳೆ. ಈಕೆಯ ವಚನಗಳ ಅಂಕಿತ " ಶ್ರೀಗುರು ಸಿದ್ದೇಶ್ವರ".
ಲಿಂಗ ಬಾಹ್ಯನ ಆಚಾರ ಭ್ರಷ್ಟನ
ವ್ರತ ತಪ್ಪುಕನ ಗುರು ಲಿಂಗ ಜಂಗಮರ
ಕೊಂದವನ ಪಾದೋದಕ ಪ್ರಸಾದ ದೂಷಕನ
ವಿಭೂತಿ ರುದ್ರಾಕ್ಷಿ ನಿಂದಕನ ಕಂಡಡೆ
ಶಕ್ತಿಯುಳ್ಳಡೆ ಸಂಹಾರವ ಮಾಡುವುದು
ಶಕ್ತಿಯಿಲ್ಲದಿದ್ದೆಡೆ ಕಣ್ಣು ಕರ್ಣವ
ಮುಚ್ಚಿಕೊಂಡು ಶಿವ ಮಂತ್ರವ ಜಪಿಸುವುದು
ಅಷ್ಟು ಆಗದಿದ್ದಡೆ ಆ ಸ್ಥಳವ ಬಿಡುವುದು
ಅದಲ್ಲದಿದ್ದರೆ ಕುಂಬೀ ಪಾತಕ ನಾಯಕ
ನರಕದಲಿಕ್ಕುವ ಶ್ರೀಗುರು ಸಿದ್ದೇಶ್ವರ!
ಲಕ್ಷ್ಮಮ್ಮ
[ಬದಲಾಯಿಸಿ]ಕೊಂಡೆ ಮಂಚಣ್ಣ ಎಂಬುವವರ ಧರ್ಮಪತ್ನಿ. ವೊದಲು ಹರಿಭಕ್ತಿಯಲ್ಲಿ ತಲ್ಲೀನಳಾಗಿದ್ದವಳೂ ನಂತರ ಶಿವಭಕ್ತಿಯೆಡೆಗೆ ತನ್ನ ಚೇತನವನ್ನು ಹರಿಯ ಬಿಡುತ್ತಾಳೆ.ಮತಾಂತರ ಹೊಂದಿದ ಶರಣೆಯೆಂದು ಈಕೆಯನ್ನು ಗುರ್ತಿಸಲಾಗುತ್ತದೆ. ಇವಳಿಗೆ ವ್ರತಾಚರಣೆಯ ಬಗ್ಗೆ ಅಪಾರ ಗೌರವವಿದ್ದರೂ ಇತರರಂತೆ ವ್ರತಹೀನರನ್ನೂ ಉಗ್ರವಾಗಿ ಖಂಡಿಸಿಲ್ಲ. ಈಕೆಯ ವಚನಗಳ ಅಂಕಿತ "ಅಗಜೇಶ್ವರಲಿಂಗ".
ಆಯುಷ್ಯ ತೀರಲು ಮರಣ
ವ್ರತ ತಪ್ಪಲು ಶರೀರ ಕಡೆ
ಮೇಲುವ್ರತವೆಂಬ ತೂತರ ಮೆಚ್ಚ
ನಮ್ಮ ಅಗಜೇಶ್ವರಲಿಂಗವು
ಲಿಂಗಮ್ಮ
[ಬದಲಾಯಿಸಿ]ಹಡಪದ ಅಪ್ಪಣ್ಣ ಎಂಬುವವರ ಧರ್ಮಪತ್ನಿ. ವ್ಯಕ್ತಿಯ ಹುಟ್ಟಿಗೂ ಅವನು ಸಾಧಿಸುವ ಸಿದ್ಧಿಗೂ ಏನೇನು ಸಂಬಂವಿಲ್ಲ ಎಂಬುದನ್ನು ನಿರೂಪಿಸಿದವಳು. ಈಕೆಯ ವಚನಗಳಲ್ಲಿ ಬೋಧೆಯ ಧಾಟಿ ,ಕಂಡ ದರ್ಶನ, ಬೀರಿದ ಬೆಳಕು, ಏರಿದ ನಿಲುವು, ಸಾಧಕರಿಗೂ, ಸಾಮಾನ್ಯರಿಗೂ, ಶರಣ ರಿಗೂ ಇರುವ ವ್ಯತ್ಯಾಸವನ್ನು ತಿಳಿಸಿದ್ದಾಳೆ. ಎಲ್ಲ ಸಾಧನೆಗೂ ಮೂಲವಾದ ಮನಸ್ಸನ್ನು ಸ್ವೇಚ್ಛೆಯಾಗಿ ಹರಿದಾಡಲು ಬಿಡದೆ ಬಯಲಿನೊಳಗೆ ಓಲಾಡುವ ಶರಣರ ಪಾದದಲ್ಲಿ ಬೆರೆಯಬೇಕೆನ್ನುವಳು. ಈಕೆಯ ವಚನಗಳ ಅಂಕಿತ "ಅಪ್ಪಣ್ಣಪ್ರಿಯ ಚನ್ನಬಸವಣ್ಣ".
ಕನಿಷ್ಠದಲ್ಲಿ ಹುಟ್ಟಿದೆ, ಉತ್ತಮರಲ್ಲಿ ಬೆಳೆದೆ
ಸತ್ಯಶರಣರ ಪಾದವಿಡಿದೆ, ಆ ಶರಣರ
ಪಾದವಿಡಿದು ಗುರುವ ಕಂಡೆ, ಲಿಂಗವ ಕಂಡೆ
ಜಂಗಮವ ಕಂಡೆ, ಪಾದೋದಕವ ಕಂಡೆ
ಪ್ರಸಾದವ ಕಂಡೆ, ಇಂತಿವರ ಕಂಡೆನ್ನ ಕಂಗಳ
ಮುಂದಣ ಕತ್ತಲೆ ಹರಿಯಲೊಡನೆ ಮಂಗಳದ
ಮಹಾಬೆಳಗಿನೊಳೊಗೋಲಾಡಿ ಸುಖಿಯಾದೆನಯ್ಯಾ
ಅಪ್ಪಣ್ಣಪ್ರಿಯ ಚನ್ನಬಸವಣ್ಣ
ವೀರಮ್ಮ
[ಬದಲಾಯಿಸಿ]ದಯಾವೀರನೆಂಬ ಖ್ಯಾತಿಗೆ ಪಾತ್ರನಾಗಿದ್ದ ದಸರಯ್ಯ ಎಂಬುವವರ ಧರ್ಮಪತ್ನಿ. ಇವರಿಬ್ಬರು ಕಾಮಗೊಂಡಕ್ಕೆ ಸೇರಿದವರು. ಈಕೆ ಶಿವಾನುಭವಿ, ಸಾತ್ವಿಕಳು, ಅಹಿಂಸೆಯನ್ನು ತನ್ನ ಜೀವನ ಮೌಲ್ಯವಾಗಿಸಿಕೊಂಡು, ಅಷ್ಟಾವರಣಗಳ ಮಹತ್ವ, ಶರಣರ ನಿಲುವು, ಭಕ್ತರ ಡಾಂಬಿಕ ರೀತಿ-ನೀತಿ, ಮನದ ಚಾಂಚಲ್ಯವನ್ನು ಖಂಡಿಸಿದ್ದಾಳೆ. ಈಕೆಯ ವಚನಗಳ ಅಂಕಿತ "ನಿಜಗುರು ಶಾಂತೇಶ್ವರ".
ಪರಿಪೂರ್ಣನಲ್ಲ ಪ್ರದೇಶಿಕನಲ್ಲ
ನಿರತಿಶಯದೊಳತಿಶಯ ತಾ ಮುನ್ನಲ್ಲ
ಶರಣನಲ್ಲ ಐಕ್ಯನಲ್ಲ ಪರಮನಲ್ಲ
ಜೀವನಲ್ಲ ನಿರವಯನಲ್ಲ ಸಾವಯನಲ್ಲ
ಪರವಿಹವೆಂಬ ಭಯದೊಳಿಲ್ಲದವನು
ನಿರಾಲಯ ನಿಜಗುರು ಶಾಂತೇಶ್ವರನ
ಶರಣರ ನಿಲುವು ಉಪಮೆಗೆ ತಾನನುಪಮ
ಸತ್ತಕ್ಕ
[ಬದಲಾಯಿಸಿ]ಒಬ್ಬ ಪ್ರಾಮಾಣಿಕ ಸತ್ಯ ಸಾಧಕಿ. ಅವಿವಾಹಿತೆಯಾಗಿಯೇ ಉಳಿದು ಆಧ್ಯಾತ್ಮ ಸಾಧನೆಗೈದ ಶಿವಶರಣೆ. ತಾನು ಲಂಚ-ವಂಚನೆಗಳಿಗೆ ಕೈಯೊಡ್ಡದವಳೆಂದೂ,ದಾರಿಯಲ್ಲಿ ಬಿದ್ದ ಅನ್ಯರ ಒಡವೆ, ವಸ್ತುಗಳನ್ನು ಮುಟ್ಟುವುದಿಲ್ಲವೆಂದು ತನಗೆ ತಾನೇ ನಿರ್ಬಂಧ ವಿಧಿಸಿ ಕೊಂಡವಳು. ಈಕೆಯ ವಚನಗಳ ಅಂಕಿತ "ಶಂಭುಜಕೇಶ್ವರ".
ಅರ್ಚನೆ ಪೂಜೆ ನೇಮವಲ್ಲ
ಮಂತ್ರ-ತಂತ್ರ ನೇಮವಲ್ಲ
ಧೂಪ-ದೀಪದಾರತಿ ನೇಮವಲ್ಲ
ಪರಸ್ತೀ-ಪರದೈವಗಳಿಗೆರಗದಿಪ್ಪುದೇ ನೇಮ
ಶಂಭುಜಕೇಶ್ವರನಲ್ಲಿ ಇವನ್ನು ಕಾಣಿರಣ್ಣಾ!
ಇವೇ ನಿತ್ಯನೇಮ
===ಸೂಳೆ ಸಂಕವ್ವ===
ವಚನಾಂಕಿತ ಸಮಾಜದ ಬಹಿಷ್ಕೃತ ಸಮೂಹದ ಶ್ರೇಷ್ಠ ಶರಣೆ. ಮನುಷ್ಯ ಸಮಾಜದಲ್ಲಿ ಕೆಲಸ ಮಾಡದೆ ಜೀವಿಸುವುದು ಮಾತ್ರ ಅವಮಾನಕರ. ವೇಶ್ಯಾವೃತ್ತಿಯನ್ನು ಕೀಳಾಗಿ ಪರಿಗಣಿಸಬಾರದು. ಆ ವೃತ್ತಿಗೂ ಅದರದೇ ಆದ ಗೌರವ, ಮಾನ್ಯತೆ, ಕುರುಹುಗಳಿವೆಯೆಂದು ತನ್ನ ವೃತ್ತಿಯ ರೀತಿ-ನೀತಿಗಳನ್ನು ಯಾವ ಮುಚ್ಚು ಮರೆಯಿಲ್ಲದೆ ನಿರ್ಭಿಡೆಯಿಂದ ಹೇಳಿಕೊಂಡಿದ್ದಾಳೆ. ಇವಳ ವಚನಗಳಲ್ಲಿ ಆತ್ಮವಿಶ್ವಾಸ, ದಿಟ್ಟ ನಿಲುವು, ಅಚಲ ಎದೆಗಾರಿಕೆ, ಕಾಯಕ ನಿಷ್ಠೆಯಿದೆ. ಈಕೆಯ ವಚನಗಳ ಅಂಕಿತ "ನಿರ್ಲಜ್ಜೇಶ್ವರಾ".
<poem>
ಒತ್ತೆಯ ಹಿಡಿದು ಮುತ್ತೊತ್ತೆಯ ಹಿಡಿಯೆ
ಹಿಡಿದೆಡೆ ಬತ್ತಲೆ ನಿಲಿಸಿ ಕೊಲ್ಲುವರಯ್ಯಾ
ವ್ರತಹೀನನರಿದು ಬೆರೆದಡೆ
ಕಾದ ಕತ್ತಿಯಲ್ಲಿ ಕೈಕಿವಿ ಮೂಗ
ಕೊಯ್ವರಯ್ಯಾ ಒಲ್ಲೆನೊಲ್ಲೆ ಬಲ್ಲೆನಾಗಿ
ನಿಮ್ಮಾಣೆ ನಿರ್ಲಜ್ಜೇಶ್ವರಾ
ಇವರದೇ ಅಂಕಿತನಾಮ ಕೊಟ್ಟಣದ ಸೋಮಮ್ಮನವರ ಅಂಕಿತನಾಮವೆಂದು ಪ್ರಕಟಗೊಂಡಿದೆ. ದಯವಿಟ್ಟು ಸರಿಪಡಿಸಲು ವಿನಂತಿ.
ಕೊಟ್ಟಣದ ಸೋಮಮ್ಮ ಸಂಪಾದಿಸಿ
ಕೊಟ್ಟಣ ಕುಟ್ಟುವ ಕಾಯಕದವಳು. ಸಾಮಾನ್ಯ ವರ್ಗದ ವ್ರತಾಚಾರ ನಿಷ್ಠೆಯ ಶಿವಶರಣೆ. ಅಪಾರ ಧೈರ್ಯವಂತೆ, ಕಾಯಕದಲ್ಲಿ ಕೈಲಾಸ, ನೆಮ್ಮದಿ ಯನ್ನು ಕಂಡವಳು. ಈಕೆಯು ತನ್ನ ಕಾಯಕ ದೃಷ್ಟಾಂತ ಬಳಸಿ ತಾನು ಹೇಳಬೇಕಾದುದನ್ನು ಧ್ವನಿಪೂರ್ಣವಾಗಿ ಹೇಳಿದ್ದಾಳೆ. ಈಕೆಯ ವಚನಗಳ ಅಂಕಿತ "ನಿರ್ಲಜ್ಜೇಶ್ವರ".
ಹದ ತಪ್ಪಿ ಕುಟ್ಟಲು ನುಚ್ಚಲ್ಲದೆ ಅಕ್ಕಿಯಿಲ್ಲ ವ್ರತಹೀನನ ನೆರೆಯೆ ನರಕವಲ್ಲದೆ ಮುಕ್ತಿಯಿಲ್ಲ ಅರಿಯದುದು ಹೋಗಲಿ ಅರಿದು ಬೆರೆದೆನಾದೊಡೆ ಕಾದಕತ್ತಿಯಲಿ ಕಿವಿಯ ಕೊಯ್ವರಯ್ಯಾ! ಒಲ್ಲೆಬಲ್ಲೆನಾಗಿ ನಿಮ್ಮಾಣೆ ನಿರ್ಲಜ್ಜೇಶ್ವರ
ಉಪಸಂಹಾರ
[ಬದಲಾಯಿಸಿ]- ಅದುವರೆವಿಗೂ ರಾಜಾಶ್ರಯದಲ್ಲಿ ಪಂಡಿತರ, ವಿದ್ವಾಂಸರ ಸ್ವತ್ತಾಗಿದ್ದ ಕನ್ನಡ ಸಾಹಿತ್ಯಕ್ಕೆ ,ಅನುಭವ ಶ್ರೀಮಂತರಾದ ಶ್ರೀ ಸಾಮಾನ್ಯರಿಂದ ಕಾವ್ಯ ಸೃಷ್ಠಿಯಾದದ್ದು ಆಕಸ್ಮಿಕ ಕ್ರಾಂತಿಯ ಫಲ ವಲ್ಲ. ಜಾತಿ, ಧರ್ಮ, ಸಂಘರ್ಷಗಳು ತಾಂಡವವಾಡು ತ್ತಿರುವ ಸಮಾಜದಲ್ಲಿ ಈ ಬಗೆಯ ವೈಚಾರಿಕ ನಿಲುವು ಮತೀಯ ಸಾಮರಸ್ಯದ ಸೂತ್ರದಂತಿದೆ. ಗಂಡು-ಹೆಣ್ಣಿನ ಸರ್ವಾಂಗೀಣ ಸಮಾನತೆಯನ್ನು ವಚನಕಾರರು ಸಾರಿದ್ದಾರೆ.
- ಎಂ.ಆರ್.ಶ್ರೀನಿವಾಸಮೂರ್ತಿಯವರು- "ವಚನಗಳು ಉಪನಿಷತ್ತಿನಂತೆ, ವಚನಕಾರರು ರಸಋಷಿ"ಗಳು ಎಂದಿರುವುದು ಉಲ್ಲೇಖ ನಾರ್ಹ. ವಚನಕಾರರ ಹೃದಯ ಚಿಂತನೆಗೆ ಅಂದಿನ ಸಮಾಜದ ಅಸ್ತವ್ಯಸ್ತ್ಯ ಜನ ಜೀವನ, ಶೋಷಣೆಯ-ಶೋಚನೀಯ ಬದುಕು, ವರ್ಗತಾರತಮ್ಯ, ಅಸಮಾನತೆ, ಅಜಾಗೃತತೆ, ಬತ್ತಿದ ಜೀವನೋತ್ಸಾಹ ಕಾರಣವಾಗಿದ್ದುವು.
- ವಚನಕಾರ್ತಿಯರು ಅವೆಲ್ಲವನ್ನು ಮೀರಿ ಬೆಳೆದುದು ಎಲ್ಲಾ ಕಾಲಕ್ಕೂ ಹೆಮ್ಮೆ ಪಡುವಂತಹ ವಿಷಯ. ಈ ಕಾಲದಲ್ಲೂ ಅಂತಹ ಪರಂಪರೆ ಪುನರ್ಸೃಷ್ಠಿಯಾಗಲಿ. ೧೨ನೇ ಶತಮಾನದಲ್ಲಿ ಬಸವಣ್ಣನವರು ಕಂಡ ವಿಶ್ವಮಾನವ ಪರಿಕಲ್ಪನೆ, ಜಾತ್ಯಾತೀತ ಮನೋಭಾವ ೨೧ನೇ ಶತಮಾನದ ಸಹೃದಯರಿಗೂ ಬರಲಿ.
ಗ್ರಂಥ ಬಳಕೆ
[ಬದಲಾಯಿಸಿ]- ೧.ಶಿವಶರಣೆಯರ ಸಮಗ್ರ ಸಂಪುಟ - ಸಂ.ಡಾ.ಆರ್.ಸಿ.ಹಿರೇಮಠ
- ೨.ಶಿವಶರಣೆಯರ ಜೀವನ ಸಾಧನೆ - ಪ್ರೊ.ಎಚ್.ಎಂ.ಬೀಳಗಿ
- ೩.ಇಪ್ಪತೈದು ವಚನಕಾರ್ತಿಯರ ಜೀವನ ಹಾಗೂ ಸಾಧನೆ - ಜಗದಾಂಬ ಮಲ್ಲೇದೇವರು
- ೪.ಮನನ - ಪ್ರೊ.ಸ.ನ.ಗಾಯತ್ರಿ
- ೫.ವಚನ ಸಾಹಿತ್ಯದಲ್ಲಿ ಕೆಳವರ್ಗದ ಆಶಯ ಮತ್ತು ಅಭಿವ್ಯಕ್ತಿ -ಪ್ರ.ಕನ್ನಡ ಸಾಹಿತ್ಯ ಅಕಾಡೆಮಿ