ಗುಣಭದ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಣಭದ್ರ ಆದಿಪುರಾಣಕಾರರಾದ ಜಿನಸೇನರ ಶಿಷ್ಯ; ಉತ್ತರಪುರಾಣದ ಕರ್ತೃ.

ತ್ರಿಷಷ್ಟಿಶಲಾಕಾಪುರುಷರ ಚರಿತ್ರೆಯನ್ನು ವಿಸ್ತಾರವಾಗಿ ವರ್ಣಿಸಬೇಕೆಂಬ ಬಯಕೆಯಿಂದ ಗುರು ಜಿನಸೇನರು ಮಹಾಪುರಾಣವನ್ನು ಆರಂಭಿಸಿದರು. ರಾಷ್ಟ್ರಕೂಟ ಅರಸನಾದ ನೃಪತುಂಗನ (ಪ್ರ.ಶ. 9ನೆಯ ಶತಮಾನ) ಆಶ್ರಯದಲ್ಲಿ. ಆದರೆ 42 ಪರ್ವಗಳ 15000 ಶ್ಲೋಕಗಳನ್ನು ಅವರು ರಚಿಸಿದರೂ ಮರಣಕಾಲಕ್ಕೆ ಮೊದಲನೆಯ ತೀರ್ಥಂಕರನಾದ ಆದಿನಾಥನ ಚರಿತ್ರೆಯೇ ಇನ್ನೂ ಮುಗಿದಿರಲಿಲ್ಲ; ಅಷ್ಟು ಬೃಹತ್ತಾದ ಕಲ್ಪನೆ ಜಿನಸೇನರದು. ಗುರುಗಳು ಆರಂಭಿಸಿದ ಮಹಾಕಾರ್ಯವನ್ನು ಸಮರ್ಥವಾಗಿ ಮುಗಿಸಿದ ಮಹಾಕೀರ್ತಿ ಶಿಷ್ಯ ಗುಣಭದ್ರನದು.

ಗುಣಭದ್ರನ ರಚನೆ[ಬದಲಾಯಿಸಿ]

  • 23 ತೀರ್ಥಂಕರರ ಚರಿತ್ರೆಯನ್ನೂ ಜೀವಂಧರನೇ ಮುಂತಾದವರ ವೃತ್ತಾಂತವನ್ನೂ ಶಲಾಕಾಪುರುಷರ ಜೀವನವನ್ನೂ ಸಂಕ್ಷಿಪ್ತವಾದರೂ ಸಮಗ್ರವಾಗಿ ನಿರೂಪಿಸಿ, ಮುಂದಿನ ಜೈನಪುರಾಣಕಾರರೆಲ್ಲರಿಗೂ ಏಕಮಾನ್ಯ ಆಕರಗ್ರಂಥವೆನಿಸಿದ ಉತ್ತರಪುರಾಣವನ್ನು ಈತ ಕರ್ನಾಟಕ ಅಂದರೆ ಕನ್ನಡಭಾಷೆಯಲ್ಲಿಯೇ ಬರೆದು ಮುಗಿಸಿದ. ಮುನಿಸುವ್ರತನ ಚರಿತ್ರೆಯ ಅಂಗವಾಗಿ ಜೈನ ರಾಮಾಯಣದ ಕಥಾಭಾಗವೂ ಇಲ್ಲಿಯೇ ಬರುತ್ತದೆ. ಪ್ರಹೀಣಕಾಲದ ಅಭಿರುಚಿಯನ್ನು ಗಮನಿಸಿ, ಈತ ಅತಿ ವಿಸ್ತಾರಕ್ಕೆ ಹೋಗಿಲ್ಲ. ಆದಿಪುರಾಣದ ಕಡೆಯ 4 ಪರ್ವ (ಮತ್ತು ಮೂರು ಶ್ಲೋಕಗಳು), ಮತ್ತು ಉತ್ತರಪುರಾಣದ ಸುಮಾರು 8,000 ಶ್ಲೋಕಗಳು ಗುಣಭದ್ರನ ರಚನೆ. ಈತನಿಗೆ ಗುರುಭಕ್ತಿ ಅಪಾರ; ಕಬ್ಬಿನಂತೆ ಪೂರ್ವಾರ್ಧವು ರಸವತ್ತಾಗಿರುತ್ತದೆ; ಅದರಂತೆಯೆ ಉತ್ತರಾರ್ಧವು ಆಗಿರಲಿ; ನನ್ನ ಮಾತು ಸವಿಯಾಗಿದ್ದರೆ ಅದಕ್ಕೆ ಗುರುಗಳ ಮಹಿಮೆಯೇ ಕಾರಣ-ಎನ್ನುತ್ತಾನೆ.
  • ಗುಣಭದ್ರ. ಉತ್ತರಪುರಾಣದಲ್ಲಿ ಕಥಾಭಾಗಕ್ಕೆ, ಘಟನಾಬಾಹುಲ್ಯಕ್ಕೆ, ಪ್ರಾಧಾನ್ಯವಿದ್ದರೂ ವರ್ಣನಾಚಮತ್ಕಾರ ಕಡಿಮೆಯಾಗಿಲ್ಲ. ಜಿನಸೇನರ ಸಮಕ್ಕೆ ಬಾರದಿದ್ದರೂ ಕವಿತಾಗುಣದಲ್ಲಿ ಪ್ರಸನ್ನತೆ, ಮಾಧುರ್ಯಗಳಿವೆ. ಹೀಗೆ ಧಾರ್ಮಿಕ ಪುರಾಣವೆಂಬ ದೃಷ್ಟಿಯಿಂದ ಇದು ಪುಜ್ಯ ಗ್ರಂಥವಾಗಿ ರುವುದಷ್ಟೇ ಅಲ್ಲ, ಕಥಾಗಾತ್ರದ ದೃಷ್ಟಿಯಿಂದ ಗೌರವಾಸ್ಪದವಾಗಿದೆ. ಕಾವ್ಯಸೌಂದರ್ಯದ ದೃಷ್ಟಿಯಿಂದಲೂ ಆದರಣೀಯ ವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಈ ಗ್ರಂಥ ಸಂಸ್ಕೃತ, ಪ್ರಾಕೃತ, ಅಪಭ್ರಂಶ, ಕನ್ನಡ, ತಮಿಳು, ಗುಜರಾತಿ ಮುಂತಾದ ಭಾರತೀಯ ಭಾಷೆಗಳಲ್ಲೆಲ್ಲ ಮುಂದಿನ ಜೈನ ಕಾವ್ಯಕಾರರಿಗೆ ಉಪಜೀವ್ಯವಾದ ಆಧಾರಗ್ರಂಥವೆಂಬ ಅದ್ವಿತೀಯ ಪುರಸ್ಕಾರಕ್ಕೆ ಪಾತ್ರವಾಗಿದೆ.
  • ಉತ್ತರಪುರಾಣವಲ್ಲದೆ ಗುಣಭದ್ರ ಆತ್ಮಾನುಶಾಸನವೆಂಬ ಮತ್ತೊಂದು ಧರ್ಮ-ನೀತಿ-ವೈರಾಗ್ಯಪರ 272 ಸಂಸ್ಕೃತ ವಿವಿಧ ವೃತ್ತದಲ್ಲಿಯ ಪದ್ಯಗಳುಳ್ಳ ಚಿಕ್ಕ ಗ್ರಂಥವನ್ನು ರಚಿಸಿದ್ದಾನೆ. ಇದರ ಮೇಲೆ ಪ್ರಭಾಚಂದ್ರನ ಸಂಸ್ಕೃತ ಟೀಕೆಯು ಉಪಲಬ್ಧವಿದೆ ಮತ್ತು ಹಲವು ಭಾಷೆಗಳಲ್ಲಿದು ಅನುವಾದಿ ತವಾಗಿದೆ. ಉತ್ತರಪುರಾಣದ ಪ್ರಶಸ್ತಿಯಲ್ಲಿ ಶಕ ವರ್ಷ 820 (ಪ್ರ.ಶ. 898)ರಲ್ಲಿ ಸಮಾಪ್ತವಾದ ಉಲ್ಲೇಖವಿದೆ. ಮುಂದೆ ರಾಷ್ಟ್ರಕೂಟ ಅರಸ ಅಕಾಲವರ್ಷ ಕೃಷ್ಣ II (878-914), ಬಂಕಾಪುರದ ಅವನ ಸಾಮಂತ ಲೋಕಾದಿತ್ಯರ ಪ್ರಶಂಸೆಯಿದೆ. ಈ ಕಾಲನಿರ್ದೇಶ ಪುರಾಣರಚನಾ ಕಾಲಕ್ಕೆ ಅನ್ವಯಿಸುವುದೋ ಇಲ್ಲವೆ ಲಿಪಿಕರಣದ ಸಮಾಪ್ತಿಕಾಲಕ್ಕೆ ಅನ್ವಯಿಸುವುದೋ ಸ್ಪಷ್ಟವಿಲ್ಲ.
"https://kn.wikipedia.org/w/index.php?title=ಗುಣಭದ್ರ&oldid=865029" ಇಂದ ಪಡೆಯಲ್ಪಟ್ಟಿದೆ