ವಿಷಯಕ್ಕೆ ಹೋಗು

ಕೈವಾರ ತಾತಯ್ಯ ಯೋಗಿನಾರೇಯಣರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕೈವಾರ ತಾತಯ್ಯ ಇಂದ ಪುನರ್ನಿರ್ದೇಶಿತ)
ಶ್ರೀ ಯೋಗಿನಾರೇಯಣ ಯಂತೀಂದ್ರರು.

ಕೈವಾರ ಕರ್ನಾಟಕ ಚಿಕ್ಕಬಳ್ಳಾಪುರ ಜಿಲ್ಲೆಯ ಒಂದು ಪುಣ್ಯಕ್ಷೇತ್ರ. ದ್ವಾಪರಯುಗದಲ್ಲಿ ಇದು ಏಕಚಕ್ರನಗರ.

ಪಾಂಡವರು ವನವಾಸದಲ್ಲಿದ್ದಾಗ ಇಲ್ಲಿಗೆ ಬಂದಿದ್ದರು. ಇಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನ ಭಿಮಸೇನ ಸ್ಥಾಪಿಸಿದನೆಂದು ಐತಿಹ್ಯವಿದೆ. ಇದಕ್ಕೆ "ಕೈವಾರನಾಡು" ಎಂಬ ಹೆಸರೂ ಇತ್ತೆಂಬ ಉಲ್ಲೇಖವಿದೆ. ಮಹಾನ್ ಸಂತ ಕಾಲಜ್ಞಾನ-ಭವಿಷ್ಯವಾಣಿ ನುಡಿದ ಶ್ರೀ ಯೋಗಿನಾರೇಯಣ ಯತೀಂದ್ರರು ಜನ್ಮವೆತ್ತಿದ ಸ್ಥಳವಿದು.

ಐತಿಹ್ಯ

[ಬದಲಾಯಿಸಿ]

೧೭೨೬ ರಲ್ಲಿ ಬಲಿಜ ಜನಾಂಗಕ್ಕೆ ಸೇರಿದ ಮುದ್ದಮ್ಮ ಕೊಂಡಪ್ಪ ದಂಪತಿಗಳಿಗೆ ಹುಟ್ಟಿದ ಯೋಗಿನಾರೇಯಣರ ಜನ್ಮನಾಮ ನಾರಾಣಪ್ಪ. ತಂದೆ ತಾಯಿ ದೈವಭಕ್ತರು. ಕುಲದೇವರಾದ ಅಮರನಾರಾಯಣನ ಕೃಪೆಯಿಂದ ಗರ್ಭವತಿಯಾದಳು ಮುದ್ದಮ್ಮ. ಸೋದರತ್ತೆ ಆಸ್ತಿಯ ದುರಾಸೆಯಿಂದ ಮುದ್ದಮ್ಮ ಗರ್ಭವತಿ ಇದ್ದಾಗಲೇ ವಿಷಕೊಟ್ಟು ಗರ್ಭಪಾತ ಮಾಡಲೆತ್ನಿಸಿದಾಗ, ಸರ್ಪ ಆದಿಶೇಷನೇ ಬಂದು ಕಾಪಾಡುತ್ತಾನೆ. ಹೀಗೆ ಜನ್ಮ ತಳೆದ ನಾರಾಣಪ್ಪನ ತಂದೆ ಬಳೆ ವ್ಯಾಪಾರಿಗಳು. ಅವರ ದುಡಿಮೆಲ್ಲೇ ಸಂತೃಪ್ತ ಜೀವನ ಕಂಡವರು. ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡ ಹುಡುಗ ನಾರಾಣಪ್ಪ ಅಮರನಾರಾಯಣ ದೇವಸ್ಥಾನದ ಅರ್ಚಕರ ಆಶ್ರಯಲ್ಲಿ ಬೆಳೆದನು. ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲದೇ ಯಾವಾಗಲೂ ಆಧ್ಯಾತ್ಮದಲ್ಲಿ ಚಿಂತನ ಮಂಥನ ನಡೆಸುವುದರಲ್ಲಿ ಮಗ್ನನಾಗಿರುತ್ತಿದ್ದನು. ಸಾಕು ತಂದೆ ತಾಯಿಗಳು ಹೇಳುತ್ತಿದ್ದ ಪುರಾಣಗಳು, ಪುಣ್ಯಪುರುಷರ ಕಥೆಗಳಿಂದ ಸ್ಫೂರ್ತಿಪಡೆದ ನಾರಾಣಪ್ಪನಿಗೆ ವಿಷಯೋಪ ಭೋಗಗಳೆಂದರೆ ವಿರಕ್ತಭಾವವೇ. ಊರಿನ ಕೂಲಿಮಠದಲ್ಲಿ ಸಂಸ್ಕೃತ, ಕನ್ನಡ, ತೆಲುಗು ಭಾಷೆಗಳನ್ನು ಕಲಿತು ಪಾರಂಗತನಾಗಿ ಪ್ರೌಢ ವಯಸ್ಕನಾದಾಗ, ಹಿರಿಯರು ಮುಂದೆ ನಿಂತ ಸೋದರತ್ತೆಯ ಮಗಳು ಮುನಿಯಮ್ಮ(ಲಕ್ಷ್ಮಮ್ಮ)ನನ್ನು ಕೊಟ್ಟು ವಿವಾಹ ನೆರವೇರಿಸಿ ಗೃಹಸ್ಥಾಶ್ರಮ ಸ್ವೀಕಾರ ಮಾಡಿಸಿದ್ದರು. ಮುದ್ದಮ, ಪೆದ್ದಕೊಂಡಪ್ಪ, ಚಿಕ್ಕಕೊಂಡಪ್ಪ ಎಂಬ ಮೂವರು ಮಕ್ಕಳಾದರು. ಸಂಸಾರ ದೊಡ್ಡದಾಗಿತ್ತು. ಜೀವನ ನಿರ್ವಹಣೆ ಕಷ್ಟವಾಗಿ ಗಂಡ ದುಡಿಮೆಸ್ತನಲ್ಲ ಸದಾ ಮೂಗು ಹಿಡಿದು ದೇವರ ಧ್ಯಾನ ಮಾಡುತ್ತ ಕುಳಿತರೆ ಹೊಟ್ಟೆ ತುಂಬುವುದಾದರೂ ಹೇಗೆ..? ಹೆಂಡತಿ ಮುನಿಯಮ್ಮನ ವರಾತ ಹೆಚ್ಚಿತ್ತು. ಬಳೆಮಲಾರ ಕೈಗಿತ್ತು ವ್ಯಾಪಾರಕ್ಕೆ ಹೋಗಿ ದಿನಕ್ಕಿಷ್ಟು ತರಲೇ ಬೇಕೆಂದು ತಾಕೀತು ಮಾಡುತ್ತಿದ್ದಳು. ಲೋಕದ ಸ್ತ್ರೀಯರೆಲ್ಲ ತಾಯಿ ಸಮಾನರೆಂದು ಭಾವಿಸತೊಡಗಿದ್ದ ನಾರಾಣಪ್ಪ ಹೆಣ್ಣುಮಕ್ಕಳಿಗೆ, ಸುಮಂಗಲಿಯರಿಗೆಲ್ಲ ಶುದ್ಧಭಾವದಿಂದ ಬಳೆತೊಡಿಸುತ್ತಿದ್ದರು. ಅವರು ಕಾಸುಕೊಟ್ಟಷ್ಟೇ.. ಕೊಡದೇ ತಾತಯ್ಯ ಕಾಸಿಲ್ಲವೆಂದರೆ ಎಲ್ಲ ಅವನಿಚ್ಛೆ ಎಂದು ಮುನ್ನಡೆದು ಸಂಜೆ ವೇಳೆಗೆ ಬಳೆಯಲ್ಲ ಮಾರಿ ಬರಿಗೈಲಿ ಮನೆಸೇರುತ್ತಿದ್ದರು. ಹೆಂಡತಿ ಮುನಿಯಮ್ಮ ಶುದ್ಧ ಮುಠ್ಠಾಳ ಗಂಡ ದೊರೆತನೆಂದು ಗೊಣಗುತ್ತ ಹೇಗೋ ಸಂಸಾರ ನೀಚುವುದಾಗಿತ್ತು.. ದಾಂಪತ್ಯದಲ್ಲಿ ವಿರಸವೇರ್ಪಟ್ಟಿತ್ತು.

ಭಗವದ್ ಸಾಕ್ಷಾತ್ಕಾರ

[ಬದಲಾಯಿಸಿ]

-ಅದೊಂದು ದಿನ ನಾರಾಣಪ್ಪ ಬಳೆಮ ಲಾರ ಹೆಗಲಿಗೇರಿಸಿ ಮೂಗೊಳಿ ವೆಂಕಟಗಿರಿ ಕಣಿವೆಯಲ್ಲಿ ಸಾಗುತ್ತಿರುವಾಗ ದಿವ್ಯ ತೇಜಸ್ಸಿನ ಪ್ರಖರತೆಯಲ್ಲಿ ಸ್ವಾಮಿಗಳೊಬ್ಬರಿಂದ ’ಓಂ ನಮೋ ನಾರಾಯ” ಎಂಬ ಬೀಜಾಕ್ಷರಿ ಮಂತ್ರೋಪದೇಶ ಪಡೆದಿದ್ದರು. ಬಾಯಲ್ಲಿ ಬೆಣಚು ಕಲ್ಲು ಇಟ್ಟುಕೊಂಡು ಅದು ಕಲ್ಲು ಸಕ್ಕರೆಯಾಗುವವರೆಗೂ ಈ ಮಂತ್ರವನ್ನು ಜಪಿಸು ನೀನು ಶ್ರೀಹರಿಯ ಕೃಪಾಕಟಾಕ್ಷದಿಂದ ದೈವಾಂಶಸಂಭೂತನಾಗಿ ಯೋಗಸಿದ್ಧಿ ಹೊಂದುವೆ ಎಂದು ಹರಸಿದ್ದರು. ಅನಂತರ, ತಪಸ್ಸಿಗೆ ಪ್ರಶಸ್ತವೆನಿಸಿದ ನರಸಿಂಹ ಗುಹೆಯಲ್ಲಿ ಕುಳಿತು ಬೀಜಾಕ್ಷರಿ ಮಂತ್ರ ಜಪಿಸುವಾಗ ಅದು ಬೆಣಚುಕಲ್ಲಿದ್ದ ಬಾಯಲ್ಲಿ “ಓಂ ನಮೋ ನಾರೇಯಣಾಯ” ಎಂಬ ಉಚ್ಛಾರವಾದಾಗ ಗಾಬರಿಯಿಂದ ಮತ್ತೆ ಧ್ಯಾನಮಗ್ನರಾಗುತ್ತಿದ್ದಂತೆ ಅದನ್ನೇ ಮುಂದುವರೆಸು "ನೀನು ಯೋಗಿ ನಾರೇಯಣ" ಎಂದೇ ಹೆಸರಾಗುವೆ ಎಂಬ ಅಶರೀರವಾಣಿಯಾಯಿತು. ಮೂರುವರುಷಗಳ ಕಠಿಣ ತಪದ ಫಲವಾಗಿ ಬೆಣಚು ಕಲ್ಲು ಸಕ್ಕರೆಯಾಗಿತ್ತು. ಅಮರ ನಾರಾಯಣನ ಪರಮ ಭಕ್ತರಾದರು. ಆಧ್ಯಾತ್ಮಿರಹಸ್ಯಗಳನ್ನು ಅನುಭವವೇದ್ಯ ಸತ್ಯಸಂಗತಿಗಳನ್ನು ಅರಿತು ಜನತೆಗೆ ವೇದಾಂತದ ವಿಷಯಗಳನ್ನು ಬೋಧಿಸುತ್ತಾ ದೈವಿಕ ಪವಾಡಗಳನ್ನೆ ಮಾಡಿದರು. ಭಕ್ತಿಭಾವದ ಮೂಲಕ ಜ್ಞಾನಮಾರ್ಗ ಎಂಬಂತೆ ಜನಮಾನಸದಲ್ಲಿ ಭಕ್ತಿಭಾವ ಬಿತ್ತುವಂಥ ಭಕ್ತಿಗೀತೆಗಳನ್ನು ರಚಿಸಿದರು. ಸನ್ಮಾರ್ಗ ತೋರುತ್ತ ಮಹಾನ್ ಭವಿಷ್ಯತ್ ಜ್ಞಾನಿಗಳಾಗಿ ಕಾಲಜ್ಞಾನವನ್ನು ರಚಿಸಿದರು. ಅದು ಇಂದಿನ ಕಾಲಕ್ಕೆ ಪ್ರಸ್ತುತವೆನಿಸುತ್ತದೆ. ಕೈವಾರ ತಾತಯ್ಯ ಯೋಗಿನಾರೇಯಣ ಯತೀಂದ್ರರೆಂದೇ ಪ್ರಖ್ಯಾತರಾದರು. ತಾತಯ್ಯನವರು ೧೧೦ ವರುಷಗಳಷ್ಟು ಸುದೀರ್ಘ ಕಾಲ (೧೭೨೬-೧೮೩೬) ಇಲ್ಲಿ ನೆಲೆಸಿದ್ದರು.

ಒಂದೆರಡು ಕೀರ್ತನೆಗಳ ಸಾರ

[ಬದಲಾಯಿಸಿ]

   ದೇಹಮು ದೇವಳ ಮಾಯೆಯನು ಜೀವುಡ
   ಬ್ರಹ್ಮಸ್ವರೂಪ, ದೇವುಂಡರಾಯನಾ
   ಅನುದಿನಮು ಆತ್ಮಾರಾಮುನಿ ಮಂದಿರಮುನ
   ಚೇರಿ ಸೇತುನು ಮಾನಸ ಪೂಜಾ

ದೇಹವೇ ದೇಗುಲ, ಜೀವವೇ ಬ್ರಹ್ಮ. ಅನುದಿನವು ಆತ್ಮಾರಾಮನ ಮಂದಿರದಲ್ಲಿ ಮಾನಸ ಪೂಜೆ ಮಾಡುತ್ತೇನೆಂದು ನುಡಿಯುತ್ತಾರೆ.

   ಕಲ್ಲುಕಡವವದ್ದ ಸಂದಡಿಗಾ ಉಂಡು
   ಚೆಲ್ಲು ಕಡವವದ್ದ ಯವರು ಲೇರು
   ಕಲ್ಲು ಮುಖ್ಯಮಾಯ – ಚಲ್ಲು ಚವುಕೌಯರಾ
   ನಾದಬ್ರಹ್ಮಾನಂದ ನರೇಯಣ ಕವಿ

ಹೆಂಡದ ಮಡಿಕೆ ಇರುವ ಹೆಂಡದಂಗಡಿಯಲ್ಲಿ ಜನರ ಗುಂಪು ಗದ್ದಲವಿರುವುದು. ಮೊಸರಿನ ಮಡಕೆಯ ಹತ್ತಿರ ಯಾರೂ ಸುಳಿಯುವುದಿಲ್ಲ. ಲೋಕದಲ್ಲಿ ಒಳ್ಳೆಯ ವಸ್ತು ತಿರಸ್ಕಾರಕ್ಕೆ, ಕೆಟ್ಟ ವಸ್ತು ಮುಖ್ಯವಸ್ತುವಾಯಿತಲ್ಲ ಎಂದು ನುಡಿದಿದ್ದಾರೆ. ಇಂದು ಸಂಜೆ ಬೀರು ಬ್ರಾಂಡಿ ಬಾರ್ ಗಳಿಗೆ ಜನ ಮುತ್ತಿಕೊಂಡಿರುವುದನ್ನು ಕಾಣುತ್ತಿದ್ದೇವೆ. ಮೊಸರು ಮಜ್ಜಿಗೆ ಮಾರುವವರೇ ಅತಿವಿರಳ.

   ಕರಣಮುಕುಂಟೈ ಕಾಪುಲಂದರಿ ಚೆರಚು
   ಕುಲಹೀನ ಕುಚಿತೊಡು ಕುಲ ಮೆಲ್ಲಾ ಚೆರಚುರಾ
   ನಾದಬ್ರಹ್ಮ ನಾರೇಯಣ

ಗ್ರಾಮದ ಲೆಕ್ಕಪತ್ರಗಳನ್ನು ಬರೆಯುವ ಗ್ರಾಮಲೆಕ್ಕಿಗನು ದುಷ್ಟನಾದರೆ ಗ್ರಾಮಸ್ತರನ್ನೆಲ್ಲ ಕೆಡಿಸುವನು. ಮನೆಯಲ್ಲಿ ಗೃಹಿಣಿ ಕೆಟ್ಟವಳಾದರೆ ಇಡೀ ಕುಟುಂಬವನ್ನೇ ಹಾಳು ಮಾಡುತ್ತಾಳೆ. ಒಳ್ಳೆಯ ಕುಲಾಚಾರಗಳನ್ನು ಆಳವಡಿಸಿಕೊಳ್ಳದ ನೀಚನು ಇಡೀ ಕುಲಕ್ಕೆ ದ್ರೋಹ ಎಸಗವನು ಎಂದಿದ್ದಾರೆ.

ಸದ್ಗುರುವಿನ ಪವಾಡಗಳು

[ಬದಲಾಯಿಸಿ]
  • ಬೆಣಚುಕಲ್ಲನ್ನು ಸಿಹಿಯಾದ ಕಲ್ಲುಸಕ್ಕರೆಯಾಗಿಸಿ ದನಕಾಯುವ ಹುಡುಗರಿಗೆ ಊರಿನ ಮಕ್ಕಳಿಗೆ ನೀಡಿ ಸಂತೋಷಪಡುತ್ತಿದ್ದರು
  • ಆಲೆಮನೆಯಲ್ಲಿ ಕಾದ ಕುದಿಯುವ ಕೊಪ್ಪರಿಗೆಯಿಂದ ಕೈಹಾಕಿ ಬೆಲ್ಲವ ತೆಗೆದು ಹಸಿದ ಕುರಿಕಾಯುವವರಿಗೆ ನೀಡುತ್ತಿದ್ದರು.
  • ಭಕ್ತರು ನಶ್ಯ ತಯಾರಿಸುವ ಸಂಬಂಧ ಬೇಕಾಗುವ ನೀರನ್ನು ಸರ್ಪದಿಂದ ಕೊಡಿಸುವರು.
  • ಪ್ರತಿದಿವಸ ಮುಂಜಾಣೆ ಗರುಡ ದರ್ಶನ ಮಾಡಿ ಕೈ ಮುಗಿಯುತ್ತಿದ್ದ ತಾತಯ್ಯನವರನ್ನು ಅವಮಾನಿಸಲು ಮಹಮದೀಯರು ಕೃತಕ ಮಣ್ಣಿನ ಗರುಡ ಪಕ್ಷಿಯನ್ನು ಮಾಡಿ ಮರದ ಮೇಲೆ ಇಟ್ಟಾಗ ತಾತಯ್ಯನವರು ಆ ಮಣ್ಣಿನ ಕೃತಕ ಪಕ್ಷಿಗೆ ಜೀವ ಬರಿಸಿ ಹಾರುವಂತೆ ಮಾಡಿದರು.
  • ತಮ್ಮ ಬಳಿ ಬಂದು ಘಟಸರ್ಪಗಳಂತೆ ಹೆಡೆಆಡಿಸುತ್ತಾ ವೇದಾಂತ ವಿಚಾರಗಳ ಬಗ್ಗೆ ಬೇಧವಾದಮಾಡಿ ಜಯಿಸಬೇಕೆಂದಿದ್ದವರನ್ನು ಮಣಿಸಿದರು.
  • ಕುರುಡ ಮಲಯ್ಯ ಶ್ರೀ ವೆಂಕಟರಮಣನನ್ನು ಪ್ರಾರ್ಥಿಸಿ ಒಂದು ಕಣ್ಣು ಪಡೆದು, ಇನ್ನೊಂದು ಕಣ್ಣನ್ನು ಯೋಗೀಂದ್ರರಲ್ಲಿ ಬೇಡಿದಾಗ ಕಣ್ಣನ್ನು ಕರುಣಿಸಿದರು.
  • ಶಿಷ್ಯ ಪೂವಯ್ಯ ನನ್ನು ನೋಡಲು ವಡಿಗೇನ ಹಳ್ಳಿಗೆ ಹೋಗಿದ್ದಾಗ ಅನಾವೃಷ್ಟಿಗೆ ತುತ್ತಾಗಿದ್ದ ಜನರು ತಾತಯ್ಯನವರನ್ನು ಮಳೆಬರಿಸಲು ಪ್ರಾರ್ಥಿಸಿದಾಗ ಅಷ್ಟದಿಕ್ಪಾಲಕರನ್ನು ಪ್ರಾರ್ಥಿಸಿ ಮಳೆ ಸುರಿಸಿದರು.
  • ಪೂಜಾರಿಗಳ ತಪ್ಪನ್ನು ಮನ್ನಿಸಿ ತಿರುಪತಿಯಲ್ಲಿ ಬಾಲಾಜಿಯ ರಥ ಚಲಿಸುವಂತೆ ಮಾಡಿದರು.
  • ಒಮ್ಮೆ ತಾತಯ್ಯನವರು ಶಿಷ್ಯರ ಸಮ್ಮುಖದಲ್ಲಿ ಕೈಯನ್ನು ಉಜ್ಜಿಕೊಂಡಾಗ ಹೊಗೆ ಏಳುತ್ತಿತ್ತು. ಅದನ್ನು ನೋಡಿ ಶಿಷ್ಯರು ಏಕೆಂದು ಕೇಳಿದಾಗ ತಿರುಪತಿಯಲ್ಲಿ ಶ್ರೀನಿವಾಸನ ಪೀತಾಂಬರಕ್ಕೆ ಬೆಂಕಿ ಹತ್ತಿಕೊಂಡಿತ್ತು ಆರಿಸಿದೆ ಎಂದರು. ತಿರುಪತಿಯಲ್ಲೂ ಬೆಂಕಿಯ ಆರಿಸುವುದನ್ನು ನೋಡಿದ್ದ ಅರ್ಚಕರು ಯತೀಂದ್ರರ ಮಹಿಮೆಯನ್ನು ಕೊಂಡಾಡಿ ಪ್ರಚಾರ ಮಾಡಿದರು.
  • ಮಠದ ಆವರಣದಲ್ಲಿರುವ ಕೊಳದಲ್ಲಿ ಬಹಳ ಹೊತ್ತು ಮುಳುಗಿ ಮೇಲಕ್ಕೆ ಬರುತ್ತಿದ್ದರು. ಪಾದ್ರಿಯೊಬ್ಬರು ಇಷ್ಟು ಹೊತ್ತು ನೀರಿನಲ್ಲಿ ಏನು ಮಾಡುತ್ತಿದ್ದಿರೆಂದು ಕಾರಣ ಕೇಳಿದಾಗ ತಿರುಪತಿಗೆ ಪೂಜಾ ಸಮಯದಲ್ಲಿ ಅಲ್ಲಿಗೆ ಹೋಗಿ ಬರುತ್ತಿರುವೆನೆಂದು ಹೇಳಿದರು. ಇದನ್ನು ಖಾತ್ರಿ ಪಡಿಸಿಕೊಳ್ಳಲೆಂದು ತಿರುಪತಿ ಧರ್ಮಾದಿಕಾರಿಗಳಿಗೆ ಪತ್ರ ಬರೆದ ಪಾದ್ರಿ, ಅದು ಸತ್ಯವೆಂದು ತಿಳಿದು ತಾತಯ್ಯನವರ ಅಪಾರ ಮಹಿಮೆಯನ್ನು ಕೊಂಡಾಡಿದರು.
  • ಪರಾಕಾಯ ಪ್ರವೇಶಮಾಡಿ ಸಜೀವರಾಗಿ ಸಮಾಧಿಯಾದರು(೧೮೩೬)

ಕೈವಾರದಲ್ಲಿ ನಡೆಯುವ ಸಮಾರಂಭಗಳು

[ಬದಲಾಯಿಸಿ]
  • ಫಾಲ್ಗುಣ ಶುದ್ಧ ಹುಣ್ಣಿಮೆಯಂದು ಜರಗುವ ಶ್ರೀ ಅಮರನಾರೇಯಣ ಸ್ವಾಮಿ ರಥೋತ್ಸವ.
  • ಫಾಲ್ಗುಣ ಬಹುಳ ಪಾಡ್ಯಮಿಯಂದು ಶ್ರೀ ಗುರುದೇವ ನಾರಾಯಣ ಯೋಗೀಂದ್ರರ ರಥೋತ್ಸವ
  • ಜೇಷ್ಠಮಾಸದ ಶುದ್ಧ ತದಿಗೆಯಂದು ನಡೆಯುವ ಶ್ರೀ ಯೋಗಿನಾರೇಯಣರ ಆರಾಧನೆಯೊಂದಿಗೆ ಸಾಧು ಸಂತರ ಸಮಾಗಮ. ಉಚಿತ ಸಾಮೂಹಿಕ ವಿವಾಹ ಮಹೋತ್ಸವ.
  • ಕಾರ್ತೀಕ ಹುಣ್ಣಿಮೆಯಂದು ಶ್ರೀ ಭೀಮಲಿಂಗೇಶ್ವರ ಲಕ್ಷದೀಪೋತ್ಸವ.
  • ಶ್ರಾವಣ ಎರಡನೆಯ ಶನಿವಾರದಂದು ಶ್ರೀ ವರಮಹಾಲಕ್ಷ್ಮಿ ಮತ್ತು ಸತ್ಯನಾರಾಯಣ ವ್ರತಾಚರಣೆಗಳು.

ಶ್ರೀ ಕೈವಾರ ಕ್ಷೇತ್ರ

[ಬದಲಾಯಿಸಿ]

ಶ್ರೀ ಯೋಗಿನಾರೇಯಣ ಯತೀಂದ್ರ ಆಶ್ರಮ ಟ್ರಸ್ಟ್ ಅನೇಕ ಅಭಿವೃದ್ಧಿಕಾರ್ಯಗಳಾಗಿವೆ. ಯತೀಂದ್ರರ ಸಮಾಧಿ ಸ್ಥಾನ ಎರಡು ಅಂತಸ್ತುಗಳ ಭವನದಲ್ಲಿ ಬೃಂದಾವನವಾಗಿದೆ. ತಾತಯ್ಯನವರ ಲೋಹದ ಪ್ರತಿಮೆ ಸುಂದರ ಪೀಠದ ಮೇಲೆ ಪ್ರತಿಷ್ಠಾಪನೆ. ಸಾಮೂಹಿಕ ವಿವಾಹಕ್ಕೆ ವಿಶಾಲವಾದ ಕಲ್ಯಾಣ ಮಂದಿರ. ಧರ್ಮಚತ್ರಗಳು ವಸತಿಗೃಹಗಳು,ಅನ್ನದಾಸೋಹ ಭೋಜನ ಮಂದಿರ. ಶಿಲ್ಪಕಲೆಯಿಂದ ಅಮರ ನಾರೇಯಣ ಸ್ವಾಮಿ ದೇಗುಲದ ಜೀರ್ಣೋದ್ಧಾರ. ತಾತಯ್ಯನವರ ಜೀವನ ಚರಿತ್ರೆಯ ಚಿತ್ರ ಕಲಾಕೃತಿಗಳು. ಅಲಂಕರಣಗೊಂಡ ಸ್ವಾಮಿ ನರಸಿಂಹ ಗುಹೆ. ಯೋಗಿನಾರೇಯಣ ಪ್ರೌಢಶಾಲೆ,ಅನಾಥಾಲಯ. ಯತೀಂದ್ರರ ಕುರಿತು ಪ್ರಕಟಣೆಗೆ ವ್ಯವಸ್ಥೆ. ಆರಂಭದಲ್ಲಿ ಧರ್ಮಾಧಿಕಾರಿಗಳು ಮತ್ತು ಅಧ್ಯಕ್ಷರಾಗಿದ್ದ ಎಂ.ಎಸ್.ರಾಮಯ್ಯನವರು ಮತ್ತು ಅವರ ಕುಟುಂಬದವರ ಶ್ರದ್ಧಾ ಕೇಂದ್ರವಾಗಿದ್ದು, ಪ್ರಸ್ತುತ ಡಾ.ಎಂ.ಆರ್.ಜಯರಾಂ Archived 2013-10-12 ವೇಬ್ಯಾಕ್ ಮೆಷಿನ್ ನಲ್ಲಿ. ಧರ್ಮಾಧಿಕಾರಿಗಳಾಗಿದ್ದು ಇವರ ನೇತೃತ್ವದಲ್ಲಿ ಶ್ರೀ ಕ್ಷೇತ್ರವು ಸರ್ವಾಂಗೀಣ ಅಭಿವೃದ್ಧಿ ಕಾರ್ಯಗಳಲ್ಲಿ ಮನ್ನಡೆದಿದೆ. ಡಾ.ರಾಜಕುಮಾರ್ ಅಭಿನಯದ "ಕೈವಾರ ಮಹಾತ್ಮೆ" ಚಲನಚಿತ್ರವಲ್ಲದೇ, ಡಾ. ಎಂ. ಆರ್. ಜಯರಾಂ ರವರ ಶ್ರದ್ಧೆಯ ಫಲವಾಗಿ "ಕೈವಾರ ತಾತಯ್ಯ" ಚಲನಚಿತ್ರ ನಿರ್ಮಾಣವಾಗಿದೆ.(ಹಿರಿಯ ನಟ ಸಾಯಿ ಕುಮಾರ್ ಮತ್ತು ರಾಷ್ಟ್ರ ಪಶಸ್ತಿ ವಿಜೇತೆ ತಾರಾ ಪ್ರಮುಖ ಪಾತ್ರಗಳಲ್ಲಿದ್ದು ಚಿತ್ರ ಹೃದಯಂಗಮವಾಗಿದೆ). ಇತರ ದಾನಿಗಳಲ್ಲಿ ಈಡಿಗರ ನಾಗಮ್ಮ, ಸೊಣಪ್ಪ ನಾರಾಯಣ ಸಿಂಗ್, ಕೈಪು ಲಕ್ಷ್ಮಿ ನರಸಿಂಹ ಶಾಸ್ತ್ರಿ, ಇನ್ನು ಮುಂತಾದ ಕೊಡುಗೈ ದಾನಿಗಳಿದ್ದಾರೆ.

ಕೈವಾರಕ್ಕೆ ಹೋಗುವ ಮಾರ್ಗ

[ಬದಲಾಯಿಸಿ]

ಶ್ರೀ ಕ್ಷೇತ್ರ ಕೈವಾರಕ್ಕೆ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಿವೆ. ಬೆಂಗಳೂರುಮತ್ತು ಹೊಸಕೋಟೆ ಮಾರ್ಗವಾಗಿ ಕೈವಾರಕ್ಕೆ ೬೦ ಕಿ.ಮೀ. ಇದೆ. ಕೈವಾರ ಬೆಟ್ಟ ಹತ್ತಲು ಮೆಟ್ಟಿಲುಗಳನ್ನು ವ್ಯವಸ್ಥಿತಗೊಳಿಸಲಾಗಿದೆ.

ಚಿತ್ರಗಳೊಂದಿಗೆ ಇತರ ಕೊಂಡಿಗಳು