ಕಾರ್ಯಾಂಗ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜನೀತಿ ಶಾಸ್ತ್ರದಲ್ಲಿ ದೇಶದ ದೈನಂದಿನ ಆಡಳಿತವನ್ನು ನಡೆಸುವ ಸರ್ಕಾರದ ವಿಭಾಗವು ಕಾರ್ಯಾಂಗವೆಂದು ಕರೆಯಲ್ಪಡುತ್ತದೆ. ಅದು ಒಂದು ರಾಜಕೀಯ ವ್ಯವಸ್ಥೆಯ ಅಂಗಗಳಲ್ಲೊಂದು (ಎಕ್ಸಿಕ್ಯೂಟಿವ್).

ಕಾರ್ಯಾಂಗದ ಹೊಣೆ[ಬದಲಾಯಿಸಿ]

ತಾಂತ್ರಿಕವಾಗಿ ಈ ಅಂಗವು ಕಾನೂನುಗಳನ್ನು ನಿಶ್ಚಯಿಸುವಂತಿಲ್ಲ (ಅದು ಶಾಸಕಾಂಗದ ಕರ್ತವ್ಯ) ಅಥವಾ ನಿಯಮಿತ ಕಾನೂನುಗಳನ್ನು ವ್ಯಾಖ್ಯಾಯಿಸುವಂತಿಲ್ಲ (ಅದು ನ್ಯಾಯಾಂಗದ ಕರ್ತವ್ಯ). ಆದರೆ ಸಾಮಾನ್ಯವಾಗಿ ಈ ವಿಭಜನೆ ಕಟ್ಟುನಿಟ್ಟಾಗಿ ಪಾಲಿತವಾಗುವುದಿಲ್ಲ. ಕಾರ್ಯಾಂಗದ ಮುಖ್ಯಸ್ಥರೆ ಸರಕಾರದ ಅಧ್ಯಕ್ಷರು.

ಸರ್ಕಾರದ ಅಧಿಕಾರಗಳು ಸಾಮಾನ್ಯವಾಗಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂದು ಮೂರು ವಿಭಾಗಗಳಲ್ಲಿ ವಿಂಗಡವಾಗಿರುತ್ತವೆ. ಮೂರೂಪರಸ್ಪರವಾಗಿ ಬಹಳಮಟ್ಟಿಗೆ ಸ್ವತಂತ್ರವಾಗಿರುತ್ತವೆ. ಆಳ್ವಿಕೆಗೆ ಸಂಬಂಧಿಸಿದಂತೆ ಕಾನೂನುಗಳನ್ನು ರಚಿಸುವುದು ಶಾಸಕಾಂಗ ಕಾರ್ಯಭಾರ, ನ್ಯಾಯಾಂಗ ಕಾನೂನುಗಳನ್ನು ಅರ್ಥೈಸುತ್ತದೆ, ಅನ್ವಯಿಸುತ್ತದೆ. ಇವನ್ನು ಜಾರಿಗೆ ಕೊಡುವುದು ಅಥವಾ ಇವು ಕಾರ್ಯಗತವಾಗುವಂತೆ ಮಾಡುವುದು ಕಾರ್ಯಾಂಗದ ಹೊಣೆ, ರಾಯಭಾರ ಪ್ರಾತಿನಿಧ್ಯ, ಸಶಸ್ತ್ರ ಪಡೆಗಳ ಮಹಾದಂಡ ನಾಯಕತ್ವ, ಕಾನೂನುಗಳ ಜಾರಿಯ ಮೇಲ್ವಿಚಾರಣೆ ಅಧಿಕಾರಿಗಳ ನೇಮಕ ಇವೆಲ್ಲ ಕಾರ್ಯಾಂಗಮುಖ್ಯನ ಅಧಿಕಾರಗಳು. ಶಾಸನಾಕಾರ್ಯವನ್ನು ತೊಡಗಿಸುವುದು, ವಿಧಾನ ಮಂಡಲವನ್ನು (ಲೆಜಿಸ್ಲೇಚರ್) ವಿಸರ್ಜಿಸುವುದು ಮುಂತಾದವುಗಳ ಬಗ್ಗೆ ಆಯಾದೇಶಗಳ ಸಂವಿಧಾನಗಳಲ್ಲಿ ಮಾಡಿರುವ ವಿಧಿಗಳಿಗೆ ಅನುಗುಣವಾಗಿ ಹೆಚ್ಚು ಅಥವಾ ಕಡಿಮೆ ಅಧಿಕಾರಿಗಳು ಕಾರ್ಯಾಂಗಮುಖ್ಯನಿಗೆ ಇರುತ್ತವೆ. ಫಾನ್ಸ್ ಜರ್ಮನಿ ಮತ್ತು ಅಮೆರಿಕಗಳಲ್ಲಿ ಕಾರ್ಯಾಪಾಲಿಕಾಧಿಕಾರಗಳು (ಎಕ್ಸಿಕ್ಯೂಟಿವ್ ಪವರ್ಸ್) ಅಧ್ಯಕ್ಷನಲ್ಲೂ ಬ್ರೀಟನ್ನಿನಲ್ಲಿ ದೊರೆಯಲ್ಲೂ (ಅಥವಾ ರಾಣಿ) ನಿಹಿತವಾಗಿರುತ್ತವೆ. ಭಾರತದಲ್ಲಿ ಇವು ನೆಲಸಿರುವುದು ರಾಷ್ಟ್ರಪತಿಯಲ್ಲಿ. ರಾಷ್ಟ್ರಪತಿ ನೇರವಾಗಿ ಅಥವಾ ತನಗೆ ಅಧೀನರಾದ ಪದಾಧಿಕಾರಿಗಳ ಮೂಲಕ ಇವನ್ನು ಚಲಾಯಿಸುತ್ತಾನೆ. ರಾಜ (ರಾಣಿ), ಅಧ್ಯಕ್ಷ, ಅಥವಾ ರಾಷ್ಟ್ರಪತಿಯಾದಾತ ತನ್ನ ಅಧೀನದಲ್ಲಿ ಕಾರ್ಯಾನಿರ್ವಾಹಕ ಮಂಡಲ ಅಥವಾ ಮಂತ್ರಿ ಮಂಡಲವನ್ನು ರಚಿಸಬಹುದು. ಆಡಳಿತ ನಿರ್ವಹಣೆ ಇದರ ಹೊಣೆ.

ರಾಜ್ಯದ ಆಡಳಿತಾಂಗ ಕಾರ್ಯಾಂಗಗಳೆರಡೂ ಒಂದೇ ಎಂಬಂತೆನಿಸಿದರೂ ಇವೆರಡರ ಕಾರ್ಯಾಭಾರಗಳನ್ನೂ ಪ್ರತ್ಯೇಕಿಸುವುದು ಸಾಧ್ಯ ಮತ್ತು ಅವಶ್ಯ. ಸರ್ಕಾರ ಸುಗುಮವಾಗಿ ಕೆಲಸ ಮಾಡುವಂತೆ ನೋಡಿಕೂಳ್ಳುವುದು ಕಾರ್ಯಾಂಗದ ಹೊಣೆ.

 ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಎಲ್ಲ ಪ್ರಜಾಪ್ರಭುತ್ವಗಳಲ್ಲೂ ಕಾರ್ಯಾಂಗದ ಅಧಿಕಾರ ಹೆಚ್ಚುತ್ತಿದೆ. ಕೆಲವು ಸಂದರ್ಭಗಳಲ್ಲಿ ಅದು ಶಾಸಕಾಂಗದ ಅಧಿಕಾರವನ್ನು ವಹಿಸಿಕೊಳ್ಳುತ್ತದೆ. ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ ಪ್ರಜಾಭಿಪ್ರಾಯವನ್ನು ಪ್ರತಿನಿಧಿಸುವ ಅಂಗವಾಗಿದ್ದು, ದೇಶದ ಎಲ್ಲ ಚಟುವಟಿಕೆಗಳ ಮೇಲೆ ಅದರ ಪ್ರಭಾವ ಬೀರುವ ಹಾಗಿದ್ದರೂ ಕಾರ್ಯಾಂಗ ಅದನ್ನು ಕೆಲವು ಸಾರಿ ನಿಸ್ತೇಜವನ್ನಾಗಿ ಮಾಡುತ್ತದೆ. ಕಾರ್ಯಾಂಗದ ಕರ್ತವ್ಯಗಳನ್ನು ರಾಜಕೀಯ ಮತ್ತು ಆಡಳಿತಕ್ಕೆ ಸಂಬಂಧಿಸಿದಂತೆ ಎರಡು ವಿಧಗಳಾಗಿ ವಿಂಗಡಿಸಬಹುದು. ಸರ್ಕಾರದ ಇತರ ಅಂಗಗಳೊಡನೆ ಕಾರ್ಯಾಂಗ ಇಟ್ಟುಕೊಂಡಿರುವ ಸಂಬಂಧ, ಸರ್ಕಾರದ ಸಾಮಾನ್ಯ ನೀತಿ ಇವಕ್ಕೆ ಸಂಬಂಧಿಸಿದ ಪ್ರಶ್ನೆಗಳ ನಿರ್ಧಾರ-ಇವನ್ನು ಕಾರ್ಯಾಂಗಕ್ಕೆ ಸೇರಿಸಬಹುದು. ದೇಶದ ಆಡಳಿತದ ಎಲ್ಲ ವಿಚಾರಗಳೂ ಆಡಳಿತಾಂಗಕ್ಕೆ ಸೇರುತ್ತವೆ. ವಿದೇಶಾಂಗನೀತಿ, ರಕ್ಷಣೆ, ಕಾನೂನುರಚನೆ, ನ್ಯಾಯನಿರ್ವಹಣೆ, ಆಡಳಿತ ಮತ್ತು ಹಣಕಾಸು ಇವೆಲ್ಲ ಕರ್ತವ್ಯಗಳ ನಿರ್ವಹಣೆಯೂ ಸರಿಯಾಗಿ ಆಗಬೇಕಾದರೆ ಕಾರ್ಯಾಂಗದ ನಾಯಕತ್ವ ದಕ್ಷವಾದದ್ದಾಗಿರಬೇಕು. 

ಕಾರ್ಯಾಂಗಗಳ ವಿಂಗಡಣೆ[ಬದಲಾಯಿಸಿ]

  • ಕಾರ್ಯಾಂಗಗಳನ್ನು ನಾನಾ ಬಗೆಯಾಗಿ ವಿಂಗಡಿಸಬಹುದು. ಅವು ಆನುವಂಶಿಕ ಅಥವಾ ಚುನಾಯಿತವಾಗಿರಬಹುದು. ಇಂಗ್ಲೆಂಡಿನ ದೇಶದ ರಾಜ ಅಥವಾ ರಾಣಿ ಆನುವಂಶಿಕ ಕಾರ್ಯಾಂಗಕ್ಕೆ ನಿದರ್ಶನ ಜನಗಳಿಂದ ಪ್ರತ್ಯಕ್ಷವಾಗಿಯಾಗಲಿ ಪರೋಕ್ಷವಾಗಿಯಾಗಲಿ ಚುನಾವಣೆಯಾಗಿದ್ದಲ್ಲಿ ಅದು ಚುನಾಯಿತ ಕಾರ್ಯಾಂಗವಾಗುತ್ತದೆ. ಚುನಾಯಿತ ಕಾರ್ಯಾಂಗ ಗೊತ್ತಾದ ಅವಧಿಯ ವರೆಗೆ ಮಾತ್ರ ಅಧಿಕಾರದಲ್ಲಿರುತ್ತದೆ. ಈಗಿನ ಪ್ರಜಾಪ್ರಭುತ್ವ ಯುಗದಲ್ಲಿ ಚುನಾಯಿತ ಕಾರ್ಯಾಂಗ ಬಹು ಜನಾದರಣೀಯವಾಗಿದೆ. ಅಮೆರಿಕ, ಫ್ರಾನ್ಸ್ಸ್ ಮತ್ತು ಭಾರತಗಳ ಕಾರ್ಯಾಂಗಗಳು ಈ ಗುಂಪಿಗೆ ಸೇರಿವೆ.
  • ಕಾರ್ಯಾಂಗಗಳನ್ನು ಏಕವ್ಯಕ್ತಿ ಮತ್ತು ಬಹುವ್ಯಕ್ತಿ ಕಾರ್ಯಾಂಗಗಳೆಂದೂ ವಿಂಗಡಿಸುವುದು ಸಾಧ್ಯ. ಕಾರ್ಯಾಂಗದ ಅಧಿಕಾರ ಒಬ್ಬ ವ್ಯಕ್ತಿಯಲ್ಲಿ ನಿಹಿತವಾಗಿದ್ದರೆ ಅದು ಏಕವ್ಯಕ್ತಿ ಕಾರ್ಯಾಂಗ ಏಕವ್ಯಕ್ತಿ ಕಾರ್ಯಾಂಗದಲ್ಲಿ ಮತಭೇದಕ್ಕೆ ಕಾರಣವಿಲ್ಲ. ಅಂತಿಮ ತೀರ್ಮಾನ ಒಬ್ಬ ವ್ಯಕ್ತಿಯದು. ಅಧಿಕಾರ ಅವನಲ್ಲೆ ಇರುತ್ತದೆ. ಕ್ಷಿಪ್ರವಾಗಿ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುವುದಕ್ಕೆ ಇದರಿಂದ ಅನುಕೂಲ. ಇದರಿಂದ ಕಾರ್ಯಾಂಗ ಭದ್ರತೆಯೂ ಸಾಧ್ಯ. ಅಮೆರಿಕದ ಅಧ್ಯಕ್ಷತೆ ಏಕವ್ಯಕ್ತಿ ಕಾರ್ಯಾಂಗಕ್ಕೆ ಉದಾಹರಣೆ. ಕೆಲವು ವ್ಯಕ್ತಿಗಳಲ್ಲಿ ಅಥವಾ ಒಂದು ಸಂಸ್ಥೆಯಲ್ಲಿ ಅಧಿಕಾರವಿದ್ದರೆ ಅದು ಬಹುವ್ಯಕ್ತಿ ಕಾರ್ಯಾಂಗ. ಸ್ಟಿಟ್ಜರ್ಲೆಂಡಿನಲ್ಲಿ ಕಾರ್ಯ ನಿರ್ವಾಹಕ ಪರಿಷತ್ತು (ಎಕ್ಸಿಕ್ಯೂಟಿವ್ ಕೌನ್ಸಿಲ್) ಬಹುವ್ಯಕ್ತಿ ಕಾರ್ಯಾಂಗವಾಗಿ ಕೆಲಸ ಮಾಡುತ್ತಿದೆ. ಸಂಯುಕ್ತ ಪರಿಷತ್ತು (ಫೆಡರಲ್ ಕೌನ್ಸಿಲ್) ಎಂದು ಅದರ ಅಭಿಧಾನ. ಈ ವ್ಯವಸ್ಥೆಯಲ್ಲಿ ಕೆಲವು ಸಂದರ್ಭಗಳಲ್ಲಿ ಕಾರ್ಯಾಂಗದ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಬಂದು ಸರ್ಕಾರ ಸುಗಮವಾಗಿ ಕೆಲಸ ಮಾಡಲು ಅಡಚಣೆಯಾಗುವ ಸಂಭವವುಂಟು.
  • ಕಾರ್ಯಾಂಗಗಳನ್ನು ನಾಮಮಾತ್ರ ಮತ್ತು ವಾಸ್ತವ ಕಾರ್ಯಾಂಗ ಎಂದು ವಿಂಗಡಿಸುವುದು ಇನ್ನೊಂದು ವಿಧಾನ. ಕಾರ್ಯಾಂಗಮುಖ್ಯ ಹೆಸರಿಗೆ ಮಾತ್ರ ಮುಖ್ಯನಾಗಿದ್ದರೆ ಅಂಥದು ನಾಮಮಾತ್ರ ಕಾರ್ಯಾಂಗ. ಕಾರ್ಯಾಂಗದ ಹೆಸರಿನಲ್ಲಿ ಅದರ ಅಧಿಕಾರವನ್ನು ಬೇರೆ ಅಂಗ ನಡೆಸುತ್ತಿರುತ್ತದೆ. ಅದೇ ನಿಜವಾದ ಅಥವಾ ವಾಸ್ತವ ಕಾರ್ಯಾಂಗವಾಗುತ್ತದೆ. ಇಂಗ್ಲೆಂಡ್ ದೇಶದಲ್ಲಿ ದೊರೆತನ ಅಥವಾ ರಾಜತ್ವ (ಕ್ರೌನ್) ನಾಮಮಾತ್ರ ಕಾರ್ಯಾಂಗ. ಸಚಿವಮಂಡಲ (ಕೌನ್ಸಿಲ್ ಆಫ್ ಮಿನಿಸ್ಟರ್) ಅಥವಾ ಸಂಪುಟ (ಕ್ಯಾಬಿನೆಟ್) ವಾಸ್ತವ ಕಾರ್ಯಾಂಗ. ಅಲ್ಲಿ ಸಚಿವ ಮಂಡಲಿ ದೊರೆಯ ಹೆಸರಿನಲ್ಲಿ ಕೆಲಸ ಮಾಡುತ್ತದೆ.  ಅಮೆರಿಕ ಸಂಯುಕ್ತಸಂಸ್ಥಾನದ ಅಧ್ಯಕ್ಷ ರಾಷ್ಟ್ರಮುಖ್ಯನೂ ವಾಸ್ತವ ಅಧಿಕಾರಿಯೂ ಹೌದು. ಸರ್ಕಾರದ ಕಾರ್ಯನಿರ್ವಹಣೆಯಲ್ಲಿ ನಾಮಮಾತ್ರ ಮುಖ್ಯಸ್ಥರಿದ್ದರೆ ಎಲ್ಲ ವಿಚಾರಗಳಿಗೂ ವಾಸ್ತವ ಕಾರ್ಯಾಂಗವೇ ಹೊಣೆಯಾಗಿರುತ್ತದೆ.
  • ಸಂಸದೀಯ (ಪಾರ್ಲಿಮೆಂಟರಿ) ಮತ್ತು ಅಸಂಸದೀಯ (ನಾನ್ ಪಾರ್ಲಿಮೆಂಟರಿ) ಕಾರ್ಯಾಂಗ-ಎಂಬುದು ಇನ್ನೊಂದು ರೀತಿಯ ವಿಂಗಡಣೆ. ಕಾರ್ಯಾಂಗ ನೇರವಾಗಿ ಅಥವಾ ಪ್ರತ್ಯಕ್ಷವಾಗಿ ಶಾಸಕಾಂಗದಿಂದ ಆಯ್ಕೆಯಾಗಿದ್ದರೆ ಅದು ಸಂಸದೀಯ. ಎಲ್ಲಿಯವರೆಗೆ ಇದು ಶಾಸಕಾಂಗದ ವಿಶ್ವಾಸ ಗಳಿಸಿಕೊಂಡಿರುವುದೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತದೆ. ಈ ಪದ್ದತಿಯಲ್ಲಿ ಮಂತ್ರಿಮಂಡಲ ಅಥವಾ ಸಂಪುಟ ಅಧಿಕಾರ ನಡೆಸುತ್ತಿರುತ್ತದೆ. ಇದು ಶಾಸಕಾಂಗ ಮತ್ತು ಕಾರ್ಯಾಂಗಗಳ ನಡುವಣ ಕೊಂಡಿ. ಇದು ಶಾಸಕಾಂಗಕ್ಕೆ, ಅದರ ಮೂಲಕ ಪ್ರಜೆಗಳಿಗೆ, ಹೊಣೆ. ಮಂತ್ರಿಗಳು ವಿಧಾನಮಂಡಲ ಅಥವಾ ಸಂಸತ್ತಿನ ಸದಸ್ಯರಾಗಿರುತ್ತಾರೆ: ಅದರ ಕಲಾಪಗಳಲ್ಲಿ ಭಾಗವಹಿಸುತ್ತಾರೆ. ವೈಯಕ್ತಿಕವಾಗಿಯೂ ಸಾಮೂಹಿಕವಾಗಿಯೂ ಅದಕ್ಕೆ ಅವರು ಜವಾಬ್ದಾರರಾಗಿರುತ್ತಾರೆ. ಮಂತ್ರಿಮಂಡಲ ಪ್ರಧಾನಮಂತ್ರಿ ಅಥವಾ ಮುಖ್ಯಮಂತ್ರಿಯ ಮೇಲ್ವಿಚಾರಣೆಗೆ ಒಳಪಟ್ಟು, ಅವನ ನಾಯಕತ್ವದಲ್ಲಿ ಕೆಲಸ ಮಾಡುತ್ತದೆ. ಅದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಅವನದು. ಆದ್ದರಿಂದ ಸಂಸದೀಯ ಕಾರ್ಯಾಂಗದಲ್ಲಿ ಪ್ರಧಾನ ಮಂತ್ರಿಯ ಸ್ಥಾನ ಮಹತ್ತರವಾದ್ದು. ಆದರೆ ಇದನ್ನು ಪದಚ್ಯುತಿಗೊಳಿಸುವುದು ಬಹು ಸುಲಭ. ಆದ್ದರಿಂದ ಸರ್ಕಾರದಲ್ಲಿ ಇದರ ಮುಂದುವರಿಕೆ ಅನಿಶ್ಚಿತತೆಯಿಂದ ಕೂಡಿರುವುದುಂಟು. ರಾಜಕೀಯ ಪಕ್ಷಗಳ ಕೈವಾಡಕ್ಕೆ ಅವಕಾಶವಿರುತ್ತದೆ. ಇಂಗ್ಲೆಂಡ್, ಫ್ರಾನ್ಸ್ ಮತ್ತು ಭಾರತದ ಮಂತ್ರಿಮಂಡಲಗಳು ಇದಕ್ಕೆ ನಿದರ್ಶನಗಳು. ಕಾರ್ಯಾಂಗದ ಆಯ್ಕೆ ನೇರವಾಗಿ ಶಾಸಕಾಂಗದಿಂದ ಆಗದಿದ್ದರೆ ಅದು ಅಸಂಸದೀಯ ಕಾರ್ಯಾಂಗ. ಇದರಲ್ಲಿ ಅಧ್ಯಕ್ಷಸ್ಥಾನ ಮುಖ್ಯವಾದ್ದು. ಅಧ್ಯಕ್ಷೀಯ ಕಾರ್ಯಾಂಗವೆಂದು ಇದನ್ನು ಕರೆಯಲಾಗುತ್ತದೆ. ಅಧ್ಯಕ್ಷ ಸಾಮಾನ್ಯವಾಗಿ ಒಂದು ಗೊತ್ತಾದ ಕಾಲದವರೆಗೂ ಅಧಿಕಾರದಲ್ಲಿರುತ್ತಾನೆ. ಆದ್ದರಿಂದ ಇದು ಸ್ಥಿರ (ಫಿಕ್ಸೆಡ್) ಕಾರ್ಯಾಂಗ. ಅಧ್ಯಕ್ಷನ ಅಧಿಕಾರಾವಧಿ ಸಂವಿಧಾನದಲ್ಲಿ ನಿರೂಪಿತವಾಗಿರುತ್ತದೆ. ಇದರಲ್ಲಿ ಅಧ್ಯಕ್ಷ ಶಾಸನಸಭೆಯ ಸದಸ್ಯನಾಗಿರಬೇಕಾಗಿಲ್ಲ. ಶಾಸನಸಭೆ ಅಧ್ಯಕ್ಷನ ಮೇಲೆ ನೇರವಾದ ಹತೋಟಿ ಹೊಂದಿರುವುದಿಲ್ಲ. ಆದ್ದರಿಂದ ಅಧ್ಯಕ್ಷನ ಅಧಿಕಾರಾವಧಿ ಶಾಸಕಾಂಗದ ಇಚ್ಛೆಗೆ ಅನುಗುಣವಾಗಿರಬೇಕಾದ ಆವಶ್ಯಕತೆಯಿಲ್ಲ. ಅಮೆರಿಕದ ಅಧ್ಯಕ್ಷತೆ ಇದಕ್ಕೆ ಉದಾಹರಣೆ.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: