ಕಾಮದುಘಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
{{{name}}}
ಗುರುಶ್ರೀ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು, ರಾಮಚಂದ್ರಾಪುರ ಮಠ

ಕಾಮದುಘಾ - ಭಾರತೀಯ ಗೋವು ತಳಿಗಳ ಪ್ರೋತ್ಸಾಹ ಮತ್ತು ಸಂರಕ್ಷಣೆಗಾಗಿ ಹೊಸನಗರದ ಶ್ರೀ ರಾಮಚಂದ್ರಾಪುರ ಮಠವು ಕೈಗೊಂಡ ಮಹತ್ವಾಕಾಂಕ್ಷಿ ಯೋಜನೆ. ೨೦೦೪ ನವೆಂಬರ್ ೬ ರಂದು ರಾಮಚಂದ್ರಾಪುರಮಠದ ಶೀಗಳಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಈ ಯೋಜನೆಗೆ ಚಾಲನೆಯನ್ನಿತ್ತರು. ಕಾಮ-ದುಘಾ ಎಂದರೆ ಬಯಸಿದ್ದನ್ನು ಕೊಡುವ ಎಂದರ್ಥ. ಗೋಮಾತೆಗೆ ಅನ್ವರ್ಥನಾಮವಾಗಿ ಯೋಜನೆಗೆ ಆ ಹೆಸರನ್ನೇ ಇಡಲಾಗಿದೆ.

ಉದ್ದೇಶ[ಬದಲಾಯಿಸಿ]

ಭಾರತೀಯ ದೇಶೀ ಗೋ ತಳಿಗಳ ಮಹತ್ವದ ಬಗ್ಗೆ ಭಾರತದ ರೈತರಲ್ಲಿ ಜಾಗೃತಿ ಉಂಟುಮಾಡುವುದೇ ಕಾಮದುಘಾ ಯೋಜನೆಯ ಮೂಲ.

ಹಿನ್ನೆಲೆ[ಬದಲಾಯಿಸಿ]

ಗಾವೋ ವಿಶ್ವಸ್ಯ ಮಾತರಃ – ಎಂಬ ಮಾತಿನಂತೆ ಭಾರತದ ಸಂಸ್ಕೃತಿಯಲ್ಲಿ ಗೋವುಗಳಿಗೆ ಪ್ರಧಾನ ಪಾತ್ರವಿದೆ. ದೇಶದ ಉದ್ದಗಲಕ್ಕೂ ಹಲವಾರು ರೀತಿಯಲ್ಲಿ ವಿಧದ ತಳಿಗಳ ಗೋವುಗಳು ಪೂಜಿಸಲ್ಪಡುತ್ತಿದ್ದವು. ಪ್ರತಿ ತಳಿಯಲ್ಲಿಯೂ ಒಂದೊಂದು ವೈಶಿಷ್ಟ್ಯತೆಗಳಿದ್ದವು. ಉದಾಹರಣೆಗೆ, ಕರ್ನಾಟಕದ ಮಲೆನಾಡು ಪರಿಸರದಲ್ಲಿರುವ ಮಲೆನಾಡುಗಿಡ್ಡ ಹೊಲಗಳಲ್ಲಿ ಹೆಚ್ಚಿನ ದುಡಿಮೆಗೆ ಪ್ರಸಿದ್ಧಿ, ಹಳ್ಳಿಕಾರ ತಳಿಯು ಗಾಡಿಯ ದುಡಿಮೆಗೆ ಹೆಸರುವಾಸಿ, ಕರಾವಳಿ ಪ್ರದೇಶದಲ್ಲಿ ಕಾಣಸಿಗುವ ಕಾಸರಗೋಡುತಳಿಯು ಔಷಧೀಯ ಗುಣದ ಹಾಲಿಗೆ ಪ್ರಸಿದ್ಧಿ, ರಾಜಸ್ಥಾನದ ಗೀರ್ ತಳಿಯು ಹೈನುಗಾರಿಕೆಗೆ ಪ್ರಸಿದ್ಧಿ. ಇವೆಲ್ಲವೂ ನಮ್ಮ ಭಾರತದ ಹವಾಗುಣಕ್ಕೆ ಹೊಂದಿಕೊಂಡು ಬದುಕುವ ಸಾಮರ್ಥ್ಯವನ್ನು ಹೊಂದಿರುತ್ತದೆ. ಆದರೆ, ಪ್ರಸ್ತುತ ಭಾರತದಲ್ಲಿ ಮೂಲತಳಿಗಳ ಬಗ್ಗೆ ನಿರಾಸಕ್ತಿ ತುಂಬಿ, ಪಾಶ್ಚಾತ್ಯ ತಳಿಗಳ ಬಗ್ಗೆ ಹೆಚ್ಚಿನ ಪ್ರೀತಿಯುಂಟಾಗುತ್ತಿದೆ. ಇದರಿಂದಾಗಿ ತಳಿಸಂಕರ ಅವ್ಯಾಹತವಾಗಿ ನಡೆಯುತ್ತಿದೆ. ರೈತರ ಮೇಲೆ ಕಸಾಯಿ ಖಾನೆಗಳ ಹಿಡಿತವೂ ಬಲವಾಗಿದ್ದು, ಹೋರಿಗಳನ್ನು ಮಾಂಸಕ್ಕಾಗಿ ಸಾಗಾಟ ಮಾಡಲಾಗುತ್ತಿದೆ.ಇವೆಲ್ಲ ದೇಶೀ ತಳಿಗಳ ನಾಶಕ್ಕೆ ಮೂಲ ಕಾರಣಗಳಾಗಿವೆ.

ಈ ನಾಶಗಳಿಗೆ ತಿಳುವಳಿಕೆಯ ಕೊರತೆಯೇ ಕಾರಣವಾಗಿದ್ದು, ದೇಶೀ ದನಗಳ ಬಗ್ಗೆ ಅರಿವಿನ ಆಂದೋಲನ ನಡೆಯುವ ಮೂಲಕ ಇವುಗಳನ್ನು ನಿಲ್ಲಿಸಬಹುದಾಗಿದೆ. ಕಾಮದುಘಾ ಯೋಜನೆಯು ಈ ಅರಿವಿನ ಆಂದೋಲನೆ ಕಾರ್ಯವನ್ನು ಕೈಗೆತ್ತಿಕೊಂಡಿದೆ.

ಸ್ವರೂಪ[ಬದಲಾಯಿಸಿ]

ಸಂರಕ್ಷಣೆ, ಸಂವರ್ಧನೆ, ಸಂಶೋಧನೆ, ಸಂಬೋಧನೆ – ಎಂಬ ನಾಲ್ಕು ಧ್ಯೇಯೋದ್ದೇಶಗಳನ್ನು ಕಾಮದುಘಾ ಒಳಗೊಂಡಿದೆ.

ಸಂರಕ್ಷಣೆ[ಬದಲಾಯಿಸಿ]

ಭಾರತ ದೇಶದಲ್ಲಿ ಸುಮಾರು ನೂರಕ್ಕೂ ಹೆಚ್ಚು ಗೋತಳಿಗಳು ಇದ್ದ ಉಲ್ಲೇಖಗಳು ಇದ್ದರೂ, ಈಗ ಅವುಗಳಲ್ಲಿ ಹೆಚ್ಚಿನವೂ ನಿರ್ನಾಮಗೊಂಡಿವೆ. ಮೂಲ ತಳಿಗಳ ನಿರ್ನಾಮಕ್ಕೆ ಕಾರಣ - ತಳಿಸಂಕರ, ಅಪೌಷ್ಟಿಕತೆ, ಬರ-ನೆರೆ ಪ್ರಾಕೃತಿಕ ವಿಕೋಪಗಳು, ರೈತರ ಮೇಲೆ ಕಸಾಯಿಖಾನೆಗಳ ಹಿಡಿತ - ಇತ್ಯಾದಿ. ಈಗ ಭಾರತದಲ್ಲಿ ಲಭ್ಯವಿರುವ ಒಟ್ಟು ಮೂವತ್ತೆರಡು ಪ್ರಭೇದದ ದೇಶೀ ಗೋವುಗಳನ್ನು ಸಂರಕ್ಷಿಸಿಡುವುದು, ಹಾಗೂ ಆ ದನಕರುಗಳ ಮಹತ್ವವನ್ನು ದೇಶದೆಲ್ಲೆಡೆ ಪ್ರಸಾರ ಮಾಡುವುದು ಸಂರಕ್ಷಣೆಯ ವಿಭಾಗದ ಉದ್ದೇಶ. ಇದಕ್ಕಾಗಿ ಕಾಮದುಘಾ ಯೋಜನೆಯ ಮೂಲಕ ಹಲವಾರು ಗೋಶಾಲೆಗಳನ್ನು ತೆರೆಯಲಾಗಿದೆ.

ಸಂಶೋಧನೆ[ಬದಲಾಯಿಸಿ]

ಭಾರತೀಯ ದೇಶೀಯ ಗೋವುಗಳ ಹಿರಿಮೆಯನ್ನು ಸಾರುವಂತಹ ವೈಜ್ಞಾನಿಕ], ಧಾರ್ಮಿಕ, ಆಧ್ಯಾತ್ಮಿಕ ಸಂಶೋಧನೆಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾಮದುಘಾ ವಿಶೇಷವಾಗಿ ಕಾರ್ಯನಿರ್ವಹಿಸುತ್ತಿದೆ. ದೇಶೀಯ ದನಗಳ ಹಾಲಿಗೆ ಪಾಶ್ಚಾತ್ಯ ದನಗಳ ಅಥವಾ ತಳಿಸಂಕರಗೊಂಡ ದನಗಳ ಹಾಲಿನದ್ದಕ್ಕಿಂತ ವಿಶೇಷ ಸತ್ವಗಳು ಹೆಚ್ಚಿವೆ ಎಂಬುದನ್ನು ಈಗಾಗಲೇ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ. ಇದಲ್ಲದೇ, ಗೋಮೂತ್ರ, ಗೋಮಯ, ಗೋ ಅರ್ಕಗಳನ್ನು ಸಂಶೋಧಿಸಿ ಅವುಗಳಲ್ಲಿರುವ ಉಪಕಾರಿ ಅಂಶಗಳನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಸಂಶೋಧನೆ ವಿಭಾಗವು ಕಾರ್ಯನಿರ್ವಹಿಸುತ್ತಿದೆ. ಕಾಮದುಘಾವು ಸಂಶೋಧನೆಯ ಮೂಲಕ ಗೋ ಗಂಗಾ ಎಂಬ ಮಾಲಿಕೆಯಲ್ಲಿ ಗವ್ಯೋತ್ಪನ್ನಗಳನ್ನು ತಯಾರಿಸಿ ಸಮಾಜಕ್ಕೆ ತಲುಪಿಸುತ್ತಿದೆ.

ಸಂಬೋಧನೆ[ಬದಲಾಯಿಸಿ]

ಭಾರತೀಯ ಗೋವಂಶ, ಗೋತಳಿಗಳ ಬಗ್ಗೆ ವಿಷಯಗಳ ಪ್ರಚಾರ - ಪ್ರಸಾರವನ್ನು ಸಂಬೋಧನೆ ವಿಭಾಗ ನಿರ್ವಹಿಸುತ್ತದೆ. ರೈತರಿಗೆ ಭಾರತೀಯ ಗೋವುಗಳ ಬಗ್ಗೆ, ಅವುಗಳ ಬಹುಪಯೋಗಿ ಗುಣಗಳ ಬಗ್ಗೆ ವಿಷಯಗಳನ್ನು ತಿಳಿಸುವ ಮೂಲಕ ಗೋವುಗಳ ರಕ್ಷಣೆ ನಡೆಸುವಲ್ಲಿ ಸಂಬೋಧನೆಯು ವಿಶೇಷ ಪಾತ್ರ ವಹಿಸುತ್ತಿದೆ. ಭಾರತೀಯ ಗೋವುಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಒಳಗೊಂಡ ಗೋ ವಿಶ್ವಕೋಶ ಎಂಬ ಸಮಗ್ರ ಗ್ರಂಥವನ್ನು ಹೊರತರಲಾಗಿದೆ.

ಮುಖ್ಯ ಕಾರ್ಯಕ್ರಮಗಳು[ಬದಲಾಯಿಸಿ]

ದತ್ತಶಂಕರ ಗೋಯಾತ್ರೆ[ಬದಲಾಯಿಸಿ]

ಉತ್ತರದ ಪಥಮೇಡಾ ಆಶ್ರಮದಿಂದ ದಕ್ಷಿಣದ ರಾಮಚಂದ್ರಾಪುರ ಮಠಕ್ಕೆ ಗೋವುಗಳನ್ನು ತರುವುದರ ಮೂಲಕ ಸಂಬಂಧ ಸೃಷ್ಟಿ.

ಭಾರತೀಯ ಗೋಯಾತ್ರೆ[ಬದಲಾಯಿಸಿ]

ಭಾರತದ ಗೋತಳಿಗಳ ಹಿರಿಮೆಯನ್ನು ಕರ್ನಾಟಕ ಹಾಗೂ ದಕ್ಷಿಣ ಕೇರಳಗಳಲ್ಲಿ ಪ್ರಚಾರ – ರಥಯಾತ್ರೆ. ಕರ್ನಾಟಕದ ರೈತರಿಂದ ಅಭೂತಪೂರ್ವ ಪ್ರತಿಕ್ರಿಯೆ

ಗೋ ಸಂಸತ್ತು[ಬದಲಾಯಿಸಿ]

ಕರ್ನಾಟಕದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಗೋವಿನ ಆರ್ಥಿಕ-ಆರೋಗ್ಯ-ಆಹಾರ ವಿಚಾರಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಿಂದ ಸಂವಾದ-ಕಾರ್ಯಾಗಾರ.

ವಿಶ್ವ ಗೋ ಸಮ್ಮೇಳನ – ಜಗಜ್ಜನನಿಯ ಜಾಗತಿಕ ಹಬ್ಬ[ಬದಲಾಯಿಸಿ]

ಗೋ ಸಂಸತ್ತಿನ ಪರಿಸಮಾಪ್ತಿ ಕಾರ್ಯಕ್ರಮ. ೨೦೦೭ರಲ್ಲಿ ರಾಮಚಂದ್ರಾಪುರ ಮಠ, ಹೊಸನಗರದಲ್ಲಿ ನಡೆದ ಸಮ್ಮೇಳನಕ್ಕೆ ಸುಮಾರು ಹದಿನೆಂಟು ದೇಶಗಳಿಂದ, ಒಟ್ಟು ಎಪ್ಪತ್ತು ಲಕ್ಷ ಗೋಭಕ್ತರು ಭಾಗವಹಿಸಿದ್ದಾರೆ. ಭಾರತೀಯ ಗೋಮಾತೆಯ ಮಹಿಮೆಯನ್ನು ಪ್ರಪಂಚಕ್ಕೆ ಪಸರಿಸುವಲ್ಲಿ ಈ ವಿಶ್ವ ಗೋ ಸಮ್ಮೇಳನವು ಪ್ರಮುಖ ಪಾತ್ರ ವಹಿಸಿದೆ.

ಗೋ ಸಂಧ್ಯಾ[ಬದಲಾಯಿಸಿ]

ಬೆಂಗಳೂರಿನ ಹನ್ನೊಂದು ಕೇಂದ್ರಗಳಲ್ಲಿ ಸಂಧ್ಯಾಕಾಲದಲ್ಲಿ ಗೋವಿನ ಬಗ್ಗೆ ಜನಜಾಗೃತಿ ಅಭಿಯಾನ – ರಥಯಾತ್ರೆ – ಸಭಾಸಮಾರಂಭ. ಪಟ್ಟಣವಾಸಿಗಳಲ್ಲಿ ಗೋಪ್ರೇಮವನ್ನು ಸ್ಫುರಿಸುವ ಕಾರ್ಯಕ್ರಮ.

ಕೋಟಿ ನೀರಾಜನ[ಬದಲಾಯಿಸಿ]

ಗೋಸಂಧ್ಯಾ ಕಾರ್ಯಕ್ರಮದ ಪರಿಸಮಾಪ್ತಿ. ನೀರಾಜನ ಎಂದರೆ ಆರತಿ ಎಂದು ಅರ್ಥ. ಮಹಿಳೆಯರಿಂದ ದೇಶೀಯ ಗೋವಿಗೆ ಕೋಟಿ ಆರತಿಯ ಕಾರ್ಯಕ್ರಮ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಸಂಧ್ಯಾಕಾಲದಲ್ಲಿ ನಡೆದ ಅಭೂತಪೂರ್ವ ಕಾರ್ಯಕ್ರಮ.

ಅಭಯಧಾಮ[ಬದಲಾಯಿಸಿ]

ಧಾರವಾಡ ಜಿಲ್ಲೆಯ ರೈತರ ಮನೆಗಳನ್ನು ಸಂಪರ್ಕಿಸಿ ಗೋವಿನ ಬಗ್ಗೆ ಜಾಗೃತಿ ಮೂಡಿಸುವ ಜನಜಾಗೃತಿ ಕಾರ್ಯಕ್ರಮ. ಹುಬ್ಬಳ್ಳಿ –ಧಾರವಾಡ ಅವಳಿ ನಗರದ ಎಲ್ಲಾ ಮನೆಗಳಲ್ಲಿ ಅಭೂತಪೂರ್ವ ಪ್ರತಿಕ್ರಿಯೆ.

ದೀಪಗೋಪುರ[ಬದಲಾಯಿಸಿ]

ಅಭಯಧಾಮ ಜನಜಾಗೃತಿ ಕಾರ್ಯಕ್ರಮದ ಪರಿಸಮಾಪ್ತಿ ಕಾರ್ಯಕ್ರಮ. ಗೋವಿಗೆ ನಾವಿದ್ದೇವೆ ಎಂದು ತೋರಿಸುವ ಈ ಕಾರ್ಯಕ್ರಮವು ೨೦೦೯ರಲ್ಲಿ ಹುಬ್ಬಳ್ಳಿಯಲ್ಲಿ ನಡೆಯಿತು.

ಗೋ ತುಲಾಭಾರ[ಬದಲಾಯಿಸಿ]

ಗೋವಿನ ತೂಕದ ಫಲವಸ್ತುಗಳನ್ನು ತಕ್ಕಡಿಯಲ್ಲಿ ಸಮರ್ಪಣೆ ಮಾಡಿ ಗೋವನ್ನೂ ದೇವರೆಂದು ಕಾಣುವ ವಿಶೇಷ ಕಾರ್ಯಕ್ರಮವು ವಿಶ್ವ ಗೋ ಸಮ್ಮೇಳನದಲ್ಲಿ ಮೊತ್ತಮೊದಲಿಗೆ ನಡೆಯಿತು. ಅದಾಗಿ, ಬಾರಿ ಹಲವು ಕಡೆಗಳಲ್ಲಿ ಗೋ ತುಲಾಭಾರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಗೋ ಕಥಾ ಕಿರಣ – ಜನಜನನಿ[ಬದಲಾಯಿಸಿ]

ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳ ಪ್ರಸಿದ್ಧ ರಾಮಕಥಾ ಕಾರ್ಯಕ್ರಮದ ರೂಪದಲ್ಲೇ, ಗೋವಿನ ಬಗ್ಗೆ ಪ್ರವಚನ, ಸಂಗೀತ, ರೂಪಕ, ಚಿತ್ರ, ಇತ್ಯಾದಿಗಳ ಸಮ್ಮಿಲನ ಕಾರ್ಯಕ್ರಮ. ಹಲವಾರು ಕಡೆ ಈ ಕಾರ್ಯಕ್ರಮ ನಡೆದಿದ್ದು ಜನಮನ ಸೂರೆಗೊಂಡಿದೆ. ಜನನಿಗಾಗಿ ಜನರು – ಎಂಬರ್ಥದಲ್ಲಿ ಕಾರ್ಯಕ್ರಮದ ಹೆಸರು ಜನಜನನೀ ಎಂಬುದಾಗಿದೆ.

ಅನಂತ ಗೋ ಯಾತ್ರೆ[ಬದಲಾಯಿಸಿ]

ಅನಂತ ಪದ್ಮನಾಭನ ಮೂಲಸ್ಥಾನ - ಕಾಸರಗೋಡಿನ ಅನಂತಪುರದಿಂದ ದಕ್ಷಿಣದ ತುದಿ ತಿರುವನಂತಪುರದ ಅನಂತ ಸ್ವಾಮಿ ಕ್ಷೇತ್ರಕ್ಕೆ ಕಾಸರಗೋಡು ತಳಿಯ ಸಮರ್ಪಣೆಗಾಗಿ ಮಾಡಿದ ಯಾತ್ರೆ. ಕೇರಳದ ದಕ್ಷಿಣ ತುದಿಯಿಂದ ಉತ್ತರದ ತುದಿಯ ವರೆಗೆ ಈ ಯಾತ್ರೆಯು ಸಾಗಿತು. ಕಾರ್ಯಕ್ರಮದ ಕೊನೆಯಲ್ಲಿ ಕಾಸರಗೋಡು ತಳಿಯ ದನ-ಕರುವನ್ನು ತಿರುವನಂತಪುರದ ಅರಸರಿಗೆ ಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಹಸ್ತಾಂತರಿಸಿದರು.

ಧೇನು ದರ್ಶನ[ಬದಲಾಯಿಸಿ]

ರೈತಜನರಲ್ಲಿ ದೇಶೀಯ ಗೋವುಗಳ ಬಗ್ಗೆ ಜನಜಾಗೃತಿ ಕಾರ್ಯಕ್ರಮವು ಹೊಸಾಡದಲ್ಲಿ ಆಯೋಜನೆಗೊಂಡಿತ್ತು. ಕಾಮಧೇನುವಿನ ವಿವಿಧ ಉಪಯೋಗಗಳ ದರ್ಶನವನ್ನು ಸಮಾಜಕ್ಕೆ ಕೊಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು.

ವಿಶ್ವಮಂಗಲ ಗೋಗ್ರಾಮ ಯಾತ್ರೆ[ಬದಲಾಯಿಸಿ]

ಗೋವಿನ ಮಹತ್ವವನ್ನು ಇಡಿಯ ಭಾರತದಾದ್ಯಂತ ಸಾರುವ ಮಹತ್ತರ ಯೋಜನೆ ಇದಾಗಿತ್ತು. ಈ ಬೃಹತ್ ಕಾರ್ಯದಲ್ಲಿ ಮೂರು ಹಂತಗಳಿದ್ದವು:

ಪೂರ್ವ ಸಿದ್ಧತಾ ಯಾತ್ರೆ[ಬದಲಾಯಿಸಿ]

ಇಡಿಯ ಭಾರತದಾದ್ಯಂತ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳು ಸಂಚರಿಸಿ ಜಾಗೃತಿಗಾಗಿ, ಗೋ ಯಾತ್ರೆಗಾಗಿ ಸಂಪರ್ಕಿಸಿದ ಯಾತ್ರೆ.

ಯಾತ್ರೆ[ಬದಲಾಯಿಸಿ]

ಭಾರತದ ಹಳ್ಳಿ ಹಳ್ಳಿಗಳಲ್ಲಿ ಗೋವಿನ ಬಗ್ಗೆ ಜಾಗೃತಿ ಮೂಡಿಸಿ, ರಥಯಾತ್ರೆಯು ಸಾಗಿ, ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ರ್ಯಾಬಲಿಗಳು ನಡೆಸಲ್ಪಟ್ಟಿತು. ದಕ್ಷಿಣೋತ್ತರ ರಾಜ್ಯಗಳ ಎಲ್ಲ ಪಟ್ಟಣಗಳಲ್ಲಿ ಈ ಕಾರ್ಯಕ್ರಮ ನಡೆದಿತ್ತು, ಈ ಯಾತ್ರೆಯು ಕೋಟ್ಯಂತರ ರೈತರನ್ನು ತಲುಪಿದೆ.

ಸಹಿಸಂಗ್ರಹ ಅಭಿಯಾನ - ಸಮರ್ಪಣೆ[ಬದಲಾಯಿಸಿ]

ಭಾರತದಲ್ಲಿ ಗೋಹತ್ಯೆ ನಿಷೇಧವನ್ನು ತರುವಂತೆ ಕೋರಿ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ನಡೆಸಲಾಯಿತು. ಸುಮಾರು ಹದಿನಾಲ್ಕು ಕೋಟಿ ಸಹಿಗಳನ್ನು ಸಂಗ್ರಹಿಸಿ ಗೋಭಕ್ತ ಮಂಡಳಿಯ ಮೂಲಕ ಭಾರತದ ಘನ ರಾಷ್ಟ್ರಪತಿಗಳಿಗೆ ಹಸ್ತಾಂತರಿಸಲಾಯಿತು.

ಯೋಜನೆಗಳು[ಬದಲಾಯಿಸಿ]

ಸಾವಿರದ ಗೋದಾನ[ಬದಲಾಯಿಸಿ]

ಗೋ ಪ್ರಿಯರಿಗೆ, ಗೋ ಸಾಕಣೆಯ ಇಚ್ಛೆಯುಳ್ಳವರಿಗೆ ದಾನವಾಗಿ ಗೋವುಗಳನ್ನು ಕೊಟ್ಟು, ಗೋಸಂತತಿಯ ಅಭಿವೃದ್ಧಿಗೆ ಕೈಜೋಡಿಸುವ ಕಾರ್ಯಕ್ರಮವನ್ನು ಕಾಮದುಘಾ ನಡೆಸುತ್ತದೆ. ಸಾವಿರಾರು ಸತ್ಪಾತ್ರರಿಗೆ ಗೋದಾನವನ್ನು ಮಾಡಲಾಗಿದೆ.

ಗೋಬ್ಯಾಂಕ್[ಬದಲಾಯಿಸಿ]

ಅಶಕ್ತ ರೈತರ ಕೈಯಿಂದ ಗೋವುಗಳನ್ನು ತಂದು ಸಾಕುವುದು ಹಾಗೂ ಆಸಕ್ತ ರೈತರಿಗೆ ಸಾಕಲು ಕೊಡುವ ಬ್ಯಾಂಕ್ ವ್ಯವಸ್ಥೆಯನ್ನು ಕಾಮದುಘಾ ನಡೆಸುತ್ತದೆ. ಅನಾಥ ಗೋವುಗಳ ರಕ್ಷಣೆ ಈ ಯೋಜನೆಯ ಮೂಲ ಉದ್ದೇಶ.

ಗೋ ಸಂಜೀವಿನೀ[ಬದಲಾಯಿಸಿ]

ಕಸಾಯಿಖಾನೆಗೆ ಅಕ್ರಮವಾಗಿ ಸಾಗಿಸಲ್ಪಡುವ ದನಗಳನ್ನು ರಕ್ಷಿಸುವ ಯೋಜನೆ. ಸಾವಿರಾರು ಆರೋಗ್ಯವಂತ ದನಗಳನ್ನು ಈ ಯೋಜನೆಯಡಿ ಸಂರಕ್ಷಿಸಿ ಗೋಬ್ಯಾಂಕ್ ಮೂಲಕ ಯೋಗ್ಯ ರೈತರಿಗೆ ದಾನ ಮಾಡಲಾಗಿದೆ.

ಗೋಬಂಧು[ಬದಲಾಯಿಸಿ]

ಭಾರತೀಯ ಗೋ ತಳಿಗಳ ದತ್ತುಸ್ವೀಕಾರ ಕಾರ್ಯಕ್ರಮ. ಪಟ್ಟಣದ ಜಂಜಡದಲ್ಲಿ ಗೋ ಸಾಕಣೆಯ ವ್ಯವಸ್ಥೆ ಕಷ್ಟಸಾಧ್ಯವಾದಲ್ಲಿ ವಾಸಿಸುತ್ತಿರುವ ಗೋಭಕ್ತರು ಈ ಕಾರ್ಯಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ.

ಗೋಪುಷ್ಠಿ ಮಹಾಭಿಯಾನ[ಬದಲಾಯಿಸಿ]

ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳಿಗೆ ಕಾಮದುಘಾ ಕಾರ್ಯಕ್ರಮಕ್ಕೆ ಮೂಲಪ್ರೇರಣೆಯಾಗಿದ್ದ ಮಠದ ಮಹಾನಂದಿಯ ಸ್ಮರಣಾರ್ಥ, ಇಡಿಯ ಕರ್ನಾಟಕಕ್ಕೆ ಗೋವಿನ ಬಗ್ಗೆ ಪ್ರಸಾರದ ಮಹಾ ಅಭಿಯಾನ. ಸಹಸ್ರಾರು ಗೋಸೇವಕರ ಸಹಯೋಗದಲ್ಲಿ ಹೊಸನಗರ ಶ್ರೀ ರಾಮಚಂದ್ರಾಪುರ ಮಠದಲ್ಲಿ “ಮಹಾನಂದಿ ಗೋಲೋಕ”, “ಗೋ ಗ್ರಂಥ ಭಂಡಾರ” ವಸ್ತು ಸಂಗ್ರಹಾಲಯ ಇತ್ಯಾದಿಗಳ ಸ್ಥಾಪನೆಯ ಉದ್ದೇಶವಿದೆ.

ಗೋಶಾಲೆಗಳು[ಬದಲಾಯಿಸಿ]

ಕಾಮದುಘಾ ಯೋಜನೆಯ ಮೂಲಕ ಕರ್ನಾಟಕ-ಕೇರಳ-ಮಹಾರಾಷ್ಟ್ರಗಳಲ್ಲಿ ಒಟ್ಟು ಹದಿನಾಲ್ಕು ಮುಖ್ಯ ಗೋಶಾಲೆಯು ಕಾರ್ಯನಿರ್ವಹಿಸುತ್ತಿದ್ದು, ಸಹಸ್ರಾರು ಗೋವುಗಳಿಗೆ ಆಶ್ರಯತಾಣವಾಗಿದೆ. ಕಾಮದುಘಾ ಯೋಜನೆಯ ಮೂಲಕ ನಡೆಯುವ ಗೋಶಾಲೆಗಳು:

  • ಮಹಾನಂದಿ ಗೋಲೋಕ, ಹೊಸನಗರ
  • ಅಮೃತಧಾರಾ ಗೋಲೋಕ, ಕನಕಪುರ ರಸ್ತೆ, ಬೆಂಗಳೂರು
  • ಅಮೃತಧಾರಾ ಗೋಶಾಲಾ, ಮಾಲೂರು
  • ಅಮೃತಧಾರಾ ಗೋಲೋಕ, ಕೋಲಾಡ
  • ಅಮೃತಧಾರಾ ಗೋಶಾಲಾ, ಮುಳಿಯ
  • ಕಾವೇರಮ್ಮ ಅಮೃತಧಾರಾ ಗೋಶಾಲ, ವೇಣೂರು
  • ಅಮೃತಧಾರಾ ಗೋಶಾಲೆ, ಮಾಣಿ – ಪೆರಾಜೆ
  • ಅಮೃತಧಾರಾ ಗೋಬ್ಯಾಂಕ್, ಹೊಸಾಡ
  • ಅಮೃತಧಾರಾ ಗೋಶಾಲೆ, ಕೈರಂಗಳ
  • ಅಮೃತಧಾರಾ ಗ್ಗೋಶಾಲಾ, ರಾಣೆಬೆನ್ನೂರು
  • ಅಮೃತಧಾರಾ ಗೋಶಾಲಾ, ಸಿದ್ಧಾಪುರ
  • ಅಮೃತಧಾರಾ ಗೋಶಾಲಾ, ಬಜಕ್ಕೂಡ್ಳು
  • ಅಮೃತಧಾರಾ ಗೋಶಾಲಾ, ಬೋಗಾದಿ - ಮೈಸೂರು
  • ನಂದಿನಿ ಗೋಶಾಲೆ, ಗಿರಿನಗರ, ಬೆಂಗಳೂರು

ಗವ್ಯೋತ್ಪನ್ನ ಘಟಕಗಳು[ಬದಲಾಯಿಸಿ]

ಗೋವಿನಿಂದ ದೊರೆಯುವ ವಸ್ತುಗಳು ಗವ್ಯೋತ್ಪನ್ನಗಳು. ಅವುಗಳಲ್ಲಿಯೂ ಮುಖ್ಯವಾಗಿ ಗೋಮೂತ್ರ, ಗೋಮಯಗಳನ್ನು ಬಳಸಿಕೊಂಡು ಹಲವಾರು ಉತ್ಪನ್ನಗಳನ್ನು ತಯಾರಿಸಿ ಅವುಗಳಿಗೆ ಸೂಕ್ತ ಮಾರುಕಟ್ಟೆಯನ್ನು ಕಲ್ಪಿಸುವುದು ಯೋಜನೆಯ ಉದ್ದೇಶ. ಗೋ ಮೂತ್ರದಿಂದ ಗೋ ಅರ್ಕ, ಸೆಗಣಿಯಿಂದ ಗೋಮಯ ಖಂಡ, ಫಿನಾಯಿಲ್, ಸೊಳ್ಳೆ ಬತ್ತಿ – ಇವುಗಳು ರಾಜ್ಯದಾದ್ಯಂತ ಉತ್ತಮ ಬೇಡಿಕೆಯನ್ನು ಹೊಂದಿವೆ.

ಗವ್ಯ ಚಿಕಿತ್ಸಾಲಯಗಳು[ಬದಲಾಯಿಸಿ]

ಗೋ ಜನ್ಯ ವಸ್ತುಗಳಾದ ಹಾಲು, ಮೊಸರು, ಬೆಣ್ಣೆ, ಗೋಮೂತ್ರ, ಗೋಮಯ – ಪಂಚಗವ್ಯಗಳಲ್ಲಿ ಅಡಕವಾಗಿರುವ ಆಯುರ್ವೇದೀಯ ಗುಣಗಳಿಂದ ರೋಗನಿವಾರಣಾ ಔಷಧಿಗಳನ್ನು ಬಳಸಿ ನಡೆಸುವ ಚಿಕಿತ್ಸಾಲಯ. ಬೆಂಗಳೂರು, ಮೈಸೂರು, ಹೊಸನಗರ, ಕಾಸರಗೋಡು ಮುಂತಾದ ಪ್ರದೇಶಗಳಲ್ಲಿ ಗವ್ಯ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿವೆ. ಜನರ ಸುಲಭಸಾಧ್ಯತೆಗಾಗಿ ಅಲ್ಲಲ್ಲಿ ಗವ್ಯ ಚಿಕಿತ್ಸಾ ಶಿಬಿರಗಳನ್ನೂ ಆಯೋಜಿಸಲಾಗುತ್ತಿದೆ.

ಮೇವು ಬ್ಯಾಂಕ್[ಬದಲಾಯಿಸಿ]

ಬರಪೀಡಿತ ಪ್ರದೇಶಗಳಲ್ಲಿ ದನಗಳಿಗೆ ಉಚಿತವಾಗಿ ಮೇವುಗಳು ಸಿಗುವಂತೆ ಸಹಕರಿಸುವ ಯೋಜನೆ. ಉತ್ತರ ಕರ್ನಾಟಕದ ಬರಪ್ರದೇಶದಲ್ಲಿ ಸಹಸ್ರಾರು ಗೋವುಗಳು ಇದರ ಸದುಪಯೋಗವನ್ನು ಪಡೆದುಕೊಂಡಿದೆ.

ಐಟಿ-೪-ಕೌ (IT For Cow)[ಬದಲಾಯಿಸಿ]

ಕಾಮದುಘಾ ಯೋಜನೆಯಲ್ಲಿ ಗೋಪ್ರೇಮಿ ತಂತ್ರಜ್ಞರನ್ನು ಸಂಘಟಿಸಲಾಗಿದೆ. ಐಟಿ-ಬಿಟಿ ವಿಭಾಗದಲ್ಲಿದ್ದು ಗೋವುಗಳ ಬಗೆಗೆ ವಿಶೇಷ ಸೇವೆಗೈಯುವ ಯುವ ಇಂಜಿನಿಯರುಗಳ ಮೂಲಕ ಹಲವಾರು ಗೋಸೇವಾ ಚಟುವಟಿಕೆಗಳು ನಡೆಯುತ್ತಿವೆ.

ಗೋವಿಶ್ವ[ಬದಲಾಯಿಸಿ]

ಐಟಿ ತಂತ್ರಜ್ಞರ ಮೂಲಕ ಭಾರತೀಯ ಗೋತಳಿಗಳ ಬಗ್ಗೆ ಪರಿಚಯಿಸುವ ಅಂತರಜಾಲ ಪತ್ರಿಕೆ. ನೂರಾರು ತಂತ್ರಜ್ಞರು, ಸಾಹಿತಿಗಳು, ಚಿಂತಕರ ಲೇಖನಗಳು ಪತ್ರಿಕೆಯಲ್ಲಿ ಬರುತ್ತಿದೆ. ಡಾ. ಯು.ಬಿ.ಪವನಜ ಗೋವಿಶ್ವ ಪತ್ರಿಕೆಯ ಸಂಪಾದಕರಾಗಿದ್ದಾರೆ.

ಒಟ್ಟಿನಲ್ಲಿ, ಗೋ ಸಾಕಣೆ ಕೇವಲ ಹಾಲಿಗಾಗಿ ಅಲ್ಲ. ಅದೊಂದು ಸೇವೆ, ಅದು ನಮ್ಮ ಕರ್ತವ್ಯ – ಎಂಬುದನ್ನು ಎಲ್ಲರಿಗೆ ತಿಳಿಯಪಡಿಸುವುದು ಇಂದಿನ ಕಾಲದ ಅಗತ್ಯ. ಗೋವುಗಳನ್ನು ಕೇವಲ ಲಾಭದ ದೃಷ್ಟಿಯಿಂದ ಮಾತ್ರಾ ನೋಡದೆ, ನಮ್ಮ ಜೀವನದ ಅವಿಭಾಜ್ಯ ಅಂಗ – ಎಂಬ ಉದ್ದೇಶದಲ್ಲಿ ಸಾಕುವ ಮನೋ ಚಿಂತನೆಗಳನ್ನು ರೈತರಲ್ಲಿ ಬಿತ್ತುವುದು ಕಾಮದುಘಾ ಯೋಜನೆಯ ಮುಖ್ಯ ಉದ್ದೇಶಗಳಲ್ಲಿ ಒಂದು.

ನೋಡಿ[ಬದಲಾಯಿಸಿ]

ಭಾರತದ ಗೋತಳಿಗಳು

ಆಕರಗಳು[ಬದಲಾಯಿಸಿ]

"https://kn.wikipedia.org/w/index.php?title=ಕಾಮದುಘಾ&oldid=1212458" ಇಂದ ಪಡೆಯಲ್ಪಟ್ಟಿದೆ