ಉಲ್ಲಾಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮಾನವನ ಸಂತುಷ್ಟ ಭಾವಗಳ ಪೈಕಿ ಒಂದು, ಪ್ರಸನ್ನತೆ, ಹಿಗ್ಗು, ಬೀಗು- ಎಂದೂ ಕರೆಯುವುದಿದೆ. ಮಕ್ಕಳು ಹುಟ್ಟಿದ ಕೂಡಲೇ ಅವುಗಳಲ್ಲಿ ಉಲ್ಲಾಸ ಕಾಣಿಸಿಕೊಳ್ಳುವುದಿಲ್ಲವೆಂಬುದು ಮನುಷ್ಯನ ಭಾವಜೀವನದ ಬೆಳೆವಣಿಗೆಯನ್ನು ಅಭ್ಯಸಿಸಿದ ಮನೋವಿಜ್ಞಾನಿಗಳ ತೀರ್ಮಾನವಾಗಿದೆ. ಹುಟ್ಟಿದ ಮಗು ಯಾವುದೇ ಬಗೆಯ ಪ್ರಚೋದನೆಗೆ ಒಳಪಟ್ಟರೂ ಶರೀರೋದ್ರೇಕದ ಮೂಲಕ ಮಾತ್ರ ಪ್ರತಿಕ್ರಿಯೆ ತೋರಿಸಬಲ್ಲುದು. ಆದರೆ ಮಗು ಬೆಳೆದಂತೆ, ಹೆಚ್ಚು ಹೆಚ್ಚು ಕಲಿಯತೊಡಗಿದಂತೆ ಬೇರೆ ಬೇರೆ ಭಾವಗಳನ್ನು ಅನುಭವಿಸುವ ಶಕ್ತಿ ಪಡೆಯುತ್ತದೆ. ಕ್ರಮೇಣ ಸಾಮಾನ್ಯ ಶರೀರೋದ್ರೇಕ ಸಂಕಟ (ಡಿಸ್ಟ್ರೆಸ್) ಮತ್ತು ಆನಂದ (ಡಿಲೈಟ್) ಎಂಬೆರಡು ಭಾವಗಳು ತಲೆದೋರುತ್ತವೆ. ಮುಂದೆ ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಕಂಡು ಬರುವ ಎಲ್ಲ ಭಾವಗಳಿಗೂ ಇವು ತಳಹದಿಯಾಗುತ್ತವೆ ಬೆಳೆವಣಿಗೆ ಮತ್ತು ಕಲಿಕೆ ಮುಂದುವರಿದಂತೆ ಆನಂದ ಭಾವದಿಂದ ಕವಲೊಡೆದುಕೊಂಡು ಬೇರೊಂದು ಸ್ವತಂತ್ರ ಭಾವ ಎನ್ನಿಸಿಕೊಳ್ಳುವುದೇ ಉಲ್ಲಾಸ. ಅನೇಕ ಮನೋವಿಜ್ಞಾನಿಗಳ ಪ್ರಕಾರ ಉಲ್ಲಾಸವನ್ನು ಸುಮಾರು ಹನ್ನೆರಡು ತಿಂಗಳಿನ ಮಗುವಿನಲ್ಲಿ ಗುರುತಿಸಬಹುದು. ಉಲ್ಲಾಸ ಬೇರೆ ಯಾವ ವಿಶಿಷ್ಟ ಭಾವಕ್ಕೂ ಎಡೆ ಮಾಡಿಕೊಡುವಂತೆ ಕಂಡುಬರುವುದಿಲ್ಲ. ಇದು ಹೆಚ್ಚು ಸಂಕೀರ್ಣವಾಗಬಹುದು. ಅಷ್ಟೇ.

ವಯಸ್ಸು ಮತ್ತು ಉಲ್ಲಾಸ[ಬದಲಾಯಿಸಿ]

ಶಾರೀರಿಕ ದೃಷ್ಟಿಯಿಂದ ದೊಡ್ಡವರಲ್ಲಿ ಎಲ್ಲ ಭಾವಗಳೂ ನರಮಂಡಲದ ಅತಿ ಎಚ್ಚರದ (ಅರೌಸಲ್) ಸ್ಥಿತಿಗಳು. ಆದರೆ ಆರು ತಿಂಗಳಿಗಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ನರಮಂಡಲ ಎಚ್ಚರದ ಎರಡೇ ಅವಸ್ಥೆಗಳನ್ನು ತೋರಿಸುತ್ತದೆ; ನೋವು, ಚಳಿ, ಹಸಿವೆ ಇತ್ಯಾದಿ ಅನಾನುಕೂಲ ಸ್ಥಿತಿಯಲ್ಲಿ ನರಮಂಡಲ ಅತಿ ಎಚ್ಚರದ ಸ್ಥಿತಿಗೆ ಹೋಗುತ್ತದೆ: ಎತ್ತಿಕೊಂಡಾಗ, ಹಾಲೂಡುವಾಗ, ಒಟ್ಟಿನಲ್ಲಿ ಮಗು ಸಂತೃಪ್ತವಾದಾಗ ನರಮಂಡಲದ ಎಚ್ಚರ ಕನಿಷ್ಠಮಟ್ಟಕ್ಕೆ ಇಳಿಯುತ್ತದೆ. ಅಂದರೆ ಆರು ತಿಂಗಳವರೆಗೂ ಮಕ್ಕಳಲ್ಲಿ ಸಂತುಷ್ಟ ಭಾವ ಕಡಿಮೆ ಎಚ್ಚರದ ಸ್ಥಿತಿಯಲ್ಲೂ ಅಸಂತುಷ್ಟ ಭಾವ ಅತಿ ಎಚ್ಚರದ ಸ್ಥಿತಿಯಲ್ಲೂ ಇರುತ್ತದೆ. ಆದರೆ ಒಂದು ವರ್ಷದ ಹೊತ್ತಿಗೆ ಅನಂತರ ಸಂತುಷ್ಟಸ್ಥಿತಿಯಲ್ಲೂ ನರಮಂಡಲ ಅತಿಯಾಗಿ ಎಚ್ಚರಗೊಳ್ಳುತ್ತದೆ. ಅಂದರೆ ಬೆಳೆವಣಿಗೆ ಮುಂದುವರಿದಂತೆಲ್ಲ ಆನಂದ, ಸಂತೋಷ, ಉತ್ಸಾಹ, ಕೋಪ, ತಾಪ, ಸಂಕಟ, ನೋವು ಇತ್ಯಾದಿ ಎಲ್ಲ ಭಾವಗಳನ್ನು ಅನುಭವಿಸುವಾಗಲೂ ನರಮಂಡಲ ಉದ್ರೇಕಗೊಳ್ಳುತ್ತದೆ. ಹೀಗೆ ಉಲ್ಲಾಸ ಕೂಡ ನರಮಂಡಲದ ಎಚ್ಚರಸ್ಥಿತಿಗಳಲ್ಲಿ ಒಂದು, ವ್ಯಕ್ತಿಯೊಬ್ಬ ಉಲ್ಲಾಸ, ಆನಂದಗಳನ್ನು ಅನುಭವಿಸುತ್ತಿದ್ದಾನೊ ಅಥವಾ ಸಂಕಟ, ಕೋಪಗಳನ್ನು ಅನುಭವಿಸುತ್ತಿದ್ದಾನೊ ಎಂಬುದು ಮುಖ್ಯವಾಗಿ ಯಾವ ಪ್ರಚೋದನೆಗಳು, ಸನ್ನಿವೇಶಗಳು ನರಮಂಡಲವನ್ನು ಚುರುಕುಗೊಳಿಸುತ್ತಿವೆ-ಎಂಬುದನ್ನು ಅವಲಂಬಿಸುತ್ತದೆ. ಜೀವದ ಬೆಳವಣಿಗೆ ಮತ್ತು ಪರಿಸರದ ತರಬೇತಿ-ಇವುಗಳ ಪರಿಣಾಮದಿಂದ ಕೆಲವು ತರದ ಪ್ರಚೋದನೆಗಳು ಆನಂದ ಮತ್ತು ಉಲ್ಲಾಸದಾಯಕವಾಗಿಯೂ ಕೆಲವು ತರದ ಪ್ರಚೋದನೆಗಳು ಸಂಕಟ ಮತ್ತು ತಾಪದಾಯಕವಾಗಿಯೂ ತೋರುತ್ತವೆ.

ಮನೋವಿಕೃತ ನಡವಳಿಕೆ ಮತ್ತು ಉಲ್ಲಾಸ[ಬದಲಾಯಿಸಿ]

ಆರೋಗ್ಯಕರವಾದ ಮತ್ತು ಹೆಚ್ಚು ಸಾಮಾನ್ಯವಾದ ಉಲ್ಲಾಸ ಭಾವದ ಬಗ್ಗೆ ದುರದೃಷ್ಟವಶಾತ್ ಹೆಚ್ಚು ಮನೋವೈಜ್ಞಾನಿಕ ಸಂಶೋಧನೆ ಆಗಿಲ್ಲ. ಆಗಿರುವ ಹೆಚ್ಚಿನ ಸಂಶೋಧನೆ ಉನ್ಮಾದದ-ಅಂದರೆ ವಿಷಾದ ಮನೋವಿಕೃತಿಯಲ್ಲಿ ಕಾಣಿಸಿಕೊಳ್ಳುವ ಅತಿ ಉಲ್ಲಾಸದ-ಬಗ್ಗೆ ಮಾತ್ರ. ಗಂಭೀರ ಸ್ವರೂಪ ಪಡೆಯುವ ಈ ಮನೋರೋಗದಲ್ಲಿ ರೋಗಿ ಒಮ್ಮೆ ಉನ್ಮತ್ತನಾಗಿ ಇನ್ನೊಮ್ಮೆ ವಿಷಣ್ಣನಾಗಿ ವರ್ತಿಸುತ್ತಾನೆ. ಈ ರೋಗಿ ಉನ್ಮತ್ತಸ್ಥಿತಿಯಲ್ಲಿರುವಾಗ ಅನುಭವಿಸುವ ಮುಖ್ಯವಾದ ಭಾವವೆಂದರೆ ಅವಾಸ್ತವಿಕವಾದ ಉಲ್ಲಾಸ. ಉನ್ಮತ್ತರೋಗಿ ಈ ಅತಿಯಾದ ಉಲ್ಲಾಸ, ಕಾರಣವಿಲ್ಲದ ಖುಷಿ, ಅರ್ಥವಿಲ್ಲದ ಆನಂದ, ಹಿಡಿತಡೆ ಇಲ್ಲದ ಉತ್ಸಾಹ, ಅಪಾರವಾದ ಹೆಮ್ಮೆ, ಹುಚ್ಚುಧೈರ್ಯ, ಕೆಟ್ಟ ಶಕ್ತಿಸಾಮಥ್ರ್ಯ-ಇವುಗಳಿಂದಾಗಿ ತನಗೂ ಜನರಿಗೂ ಅಪಾಯಕಾರಿಯಾಗುತ್ತಾನೆ. ಪರಿಣಾಮವಾಗಿ ಈ ರೋಗಿಗಳನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. (ನೋಡಿ- ಉನ್ಮಾದರೋಗ) ಕೆಲವು ರಾಸಾಯನಿಕ ದ್ರವ್ಯಗಳು, ಔಷಧಿಗಳು ಆರೋಗ್ಯವಂತರಲ್ಲೂ ಕೃತಕವಾಗಿ ಉಲ್ಲಾಸವನ್ನು ಉಂಟುಮಾಡುತ್ತವೆ. ಮಧ್ಯಮ ಅಂತಿಮ ಪರಿಣಾಮ ನರಮಂಡಲವನ್ನು ಹತ್ತಿಕ್ಕುವಂಥದಾದರೂ ಸ್ವಲ್ಪ ಪ್ರಮಾಣದಲ್ಲಿ ಸ್ವೀಕರಿಸಿದ ಮೊದಲ ಹಂತದಲ್ಲಿ ಉಲ್ಲಾಸ ಉಂಟಾಗುತ್ತದೆ. ಹಾಗೆಯೇ ಕೊಕೇನ್, ಗಾಂಜ, ಅಫೀಮು, ಮಾರ್ಫೀನ್, ಇತ್ಯಾದಿ ದ್ರವ್ಯಗಳು ಉಲ್ಲಾಸಕಾರಿಗಳು. (ನೋಡಿ- ಆಲ್ಕೊಹಾಲ್-ಪಾನೀಯಗಳು) : (ನೋಡಿ- ಕುಡುಕತನ).

ಅಭೀಷ್ಟಸಿದ್ಧಿಯಾದಾಗ, ಹಿರಿದನ್ನು ಸಾಧಿಸಿದಾಗ, ಪುರಸ್ಕಾರ ಪಡೆದಾಗ, ಪ್ರಶಂಸೆಗೆ ಪಾತ್ರನಾದಾಗ, ತನ್ನನ್ನು ಎಲ್ಲ ಪ್ರೀತಿಸುತ್ತಾರೆ, ಗೌರವಿಸುತ್ತಾರೆ ಎಂಬ ಭಾವ ಪುಷ್ಟಿಗೊಂಡಾಗ ಮನುಷ್ಯ ಉಲ್ಲಾಸಗೊಳ್ಳುತ್ತಾನೆ. ಸಹಜವಾದ ಆರೋಗ್ಯಕರವಾದ ಉಲ್ಲಾಸ ಒಳ್ಳೆಯ ವ್ಯಕ್ತಿತ್ವದ ಲಕ್ಷಣ. ವಾಸ್ತವಿಕತೆಗೆ ಹೊಂದಿಕೊಂಡಾಗ ಈ ಭಾವ ಅನೇಕ ಸಾಧನೆಗಳಿಗೆ ಮೂಲವಾಗಬಹುದು. ಮಕ್ಕಳಲ್ಲಿ ಉಲ್ಲಾಸ ಭಾವವನ್ನು ಉತ್ತೇಜಿಸುವುದು ಒಳ್ಳೆಯದು. ಸದಾಕಾಲವೂ ಅವರನ್ನು ಉಲ್ಲಾಸಿತರನ್ನಾಗಿಟ್ಟಲ್ಲಿ ಅವರ ವ್ಯಕ್ತಿತ್ವ ಸರ್ವತೋಮುಖವಾಗಿ ಬೆಳೆಯುತ್ತದೆ.

ಉಲ್ಲೇಖಗಳು[ಬದಲಾಯಿಸಿ]

[೧]

  1. http://www.prajavani.net/news/article/2015/08/12/344130.html[ಶಾಶ್ವತವಾಗಿ ಮಡಿದ ಕೊಂಡಿ]
"https://kn.wikipedia.org/w/index.php?title=ಉಲ್ಲಾಸ&oldid=1065796" ಇಂದ ಪಡೆಯಲ್ಪಟ್ಟಿದೆ