ನೋವು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನೋವು ಸಂವೇದನವಾಹಕ ನರಗಳ ಮೂಲಕ ಪ್ರವಹಿಸಿ ಅನುಭವಕ್ಕೆ ಬರುವ ಅಹಿತಕರ ಅನುಭವ; ದೇಹಕ್ಕೆ ಒದಗಿರುವ ಯಾವುದೊ ಅಪಾಯವನ್ನು ತಿಳಿಸುವ ಸಂಕೇತ. ನೋವು ಎಡವಿ ಕಾಲ್ಬೆರಳನ್ನು ತಾಕಿಸಿಕೊಳ್ಳುವುದು, ಕೈಬೆರಳನ್ನು ಸುಟ್ಟುಕೊಳ್ಳುವುದು, ಒಂದು ಗಾಯಕ್ಕೆ ಆಯೋಡಿನ್‌ನಂತಹ ನಂಜುನಿವಾರಕವನ್ನು ಹಚ್ಚುವುದು, ಮತ್ತು ನಗಿಸುವ ಮೂಳೆಗೆ (ಫನಿ ಬೋನ್) ತಾಕಿಸಿಕೊಳ್ಳುವಂತಹ ಅನುಭವಗಳಲ್ಲಿ ಸಾಮಾನ್ಯವಾದ ಅಪ್ರಿಯವಾದ ಅನಿಸಿಕೆ. ಇಂಟರ್‌ನ್ಯಾಶನಲ್ ಅಸೋಸಿಯೇಶನ್ ಫಾರ್ ದ ಸ್ಟಡಿ ಆಫ್ ಪೆಯ್ನ್ ನೋವನ್ನು "ವಾಸ್ತವಿಕ ಅಥವಾ ಸಂಭಾವ್ಯಸಾಧ್ಯ ಅಂಗಾಂಶ ಹಾನಿಗೆ ಸಂಬಂಧಿಸಿದ, ಅಥವಾ ಅಂತಹ ಹಾನಿಗೆ ಸಂಬಂಧಿಸಿದಂತೆ ವರ್ಣಿಸಲಾಗುವ ಒಂದು ಅಪ್ರಿಯವಾದ ಸಂವೇದನಶೀಲ ಮತ್ತು ಭಾವುಕ ಅನುಭವ" ಎಂದು ವ್ಯಾಖ್ಯಾನಿಸುತ್ತದೆ. ನೋವು ನಮ್ಮನ್ನು ಅಪಾಯದ ಅಥವಾ ಅಪಾಯದ ಸಾಧ್ಯತೆಯಿರುವ ಸನ್ನಿವೇಶಗಳಿಂದ ಹಿಮ್ಮೆಟ್ಟುವಂತೆ, ವಾಸಿಯಾಗುವವರೆಗೆ ಹಾನಿಗೊಳಗಾದ ದೇಹಭಾಗವನ್ನು ಸಲಹುವಂತೆ, ಮತ್ತು ಭವಿಷ್ಯದಲ್ಲಿ ಅಂತಹ ಸಂದರ್ಭಗಳಿಂದ ದೂರವಾಗಿರುವಂತೆ ಪ್ರೇರಿಸುತ್ತದೆ. ನೋವಿನಿಂದ ಮುಕ್ತಿಹೊಂದಲು ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಮದ್ದು, ಔಷಧಗಳು ದೊರೆಯುತ್ತವೆ.ದೈಹಿಕ ನೋವಿಗೆ ಚಿಕಿತ್ಸೆ ಪಡೆಯಬಹುದು ಆದರೆ ಮಾನಸಿಕ ನೋವಿಗೆ ಯಾವ ಚಿಕಿತ್ಸೆಯೂ ಇಲ್ಲ. ಅಪಾಯ ನಿವಾರಣೆಗೆ ತಕ್ಕ ಪ್ರತಿಕ್ರಿಯೆಯನ್ನು ಏರ್ಪಡಿಸಿಕೊಳ್ಳಲು ಸಾಧನವಾಗಿ ನೋವು ಉಪಯುಕ್ತ ಸಂವೇದನೆ ಆಗಿದ್ದರೂ ಅದು ಮನಸ್ಸಿನ ನೆಮ್ಮದಿಯನ್ನು ಕೆದಕಿ ಶಾಂತಿಯನ್ನು ಹಾಳುಮಾಡುತ್ತದೆ. ಅದರ ತೀವ್ರತೆ ಹೆಚ್ಚಾದಂತೆಲ್ಲ ಮನಸ್ಸಿನ ಕಾತರ. ದುಗುಡ, ಕಳವಳ ಕೂಡ ಹೆಚ್ಚಾಗಿ ಮುಖದ ಮಾಂಸಖಂಡಗಳು ಸಂಕೋಚಿಸಿ ಕಣ್ಣುಗಳು ಕೋರೈಸುವುದು. ಬೆವರುವುದು, ರಕ್ತದ ಒತ್ತಡ ಹೆಚ್ಚಾಗುವುದು. ಅಲ್ಲದೆ ಹೃದಯ ಬಡಿತದ ದರ ತೀವ್ರವಾಗುವುದು ಕಂಡುಬರುತ್ತವೆ. ಕೆಲವು ಸಂದರ್ಭಗಳಲ್ಲಿ ಮಲಮೂತ್ರ ವಿಸರ್ಜನೆ ಆಗುವುದೂ ಉಂಟು. ಈ ಗೌಣ ಪರಿಣಾಮಗಳಿಂದ ನೋವು ದೇಹಕ್ಕೆ ಅನುಕೂಲ ಸಂವೇದನೆಯಾಗಿರುವ ಬದಲು ಅನೇಕ ವೇಳೆ ಅನಾನುಕೂಲ ಸಂವೇದನೆಯಾಗಿ ಪರಿಣಮಿಸುತ್ತದೆ.

ದೈಹಿಕ ವಿವರಗಳು[ಬದಲಾಯಿಸಿ]

ನೋವನ್ನು ಸಂವಹನಿಸುವ ನರಗಳು ಚರ್ಮದ ಒಳಪದರದಲ್ಲೆಲ್ಲ ಹರಡಿರುತ್ತವೆ, ನರಾಗ್ರಗಳಿಗೆ ಯಾವ ಕವಚವೂ ಇರುವುದಿಲ್ಲ. ಎಲ್ಲೊ ಕೆಲವು ಸಂದರ್ಭಗಳಲ್ಲಿ ಮಾತ್ರ ಈ ನರತಂತುಗಳು ಚರ್ಮದ ಹೊರಪದರದವರೆಗೂ ಬಂದಿರುವುದುಂಟು. ಕಣ್ಣಿನ ಹೊರಪೊರೆ, ಜಠರ, ಕರುಳು, ಪುಪ್ಪುಸದ ಕವಚ (ಪಕ್ಕೆಪರೆ). ಮೂತ್ರಕೋಶ. ಮೂತ್ರನಾಳಗಳು, ಪಿತ್ರಕೋಶ ಇವುಗಳಲ್ಲಿಯೂ ನೋವನ್ನು ಅನುಭವಕ್ಕೆ ತರುವ ನರತಂತುಗಳಿವೆ. ದೇಹದ ಭಾಗಗಳಿಂದ ನೋವನ್ನು ಸಂವಹನಿಸುವ ನರತಂತುಗಳು ಮುಂಡ ಹಾಗೂ ರುಂಡನರಗಳ ಮೂಲಕ ಮಿದುಳನ್ನು ಸೇರುತ್ತವೆ. ಒಳಅಂಗಗಳಿಂದ ನೋವನ್ನು ಸಂವಹನಿಸುವ ನರಗಳು ಅನೈಚ್ಚಿಕ (ಆಟೊನಾಮಿಕ್) ನರವಿನ್ಯಾಸದ ಮೂಲಕ ಮಿದುಳನ್ನು ಸೇರುತ್ತವೆ. ನೋವು ಅನುಭವಕ್ಕೆ ಬಂದಕೂಡಲೇ ಆ ನೋವನ್ನು ಪ್ರಚೋದಿಸಿದಂತಹ ಯಾವುದೇ ಉದ್ರೇಕವನ್ನು ನಿವಾರಿಸಲು ದೇಹ ಮೊದಲು ಶ್ರಮಪಡುತ್ತದೆ. ಇಂಥ ಸಂದರ್ಭಗಳಲ್ಲಿ ಉದ್ರೇಕವನ್ನು ನಿವಾರಿಸುವ ಕಾರ್ಯಕ್ಕೆ ಹೆಚ್ಚಿನ ಪ್ರಾಮುಖ್ಯ ಬಂದು ಉಳಿದ ಐಚ್ಚಿಕ ಕಾರ್ಯಗಳು ಸ್ಥಗಿತಗೊಳ್ಳುತ್ತವೆ. ನೋವು ಸಾಮಾನ್ಯವಾಗಿ ಒಂದು ರೀತಿಯ ವಿಶಿಷ್ಟ ಪ್ರಚೋದನೆಯಿಂದ ಉಂಟಾಗುತ್ತದೆ. ಶಾಖ, ಬೆಳಕು, ಒತ್ತಡ, ಶಬ್ದ, ರಾಸಾಯನಿಕ ವಸ್ತುಗಳು ಇವುಗಳಿಂದ ಸಂಭವಿಸುವ ಪ್ರಚೋದನೆಗಳು ಅತಿರೇಕವಾದಾಗಲೂ ನೋವು ಉಂಟಾಗುತ್ತದೆ. ಇಂಥ ವಿಶೇಷ ಪ್ರಚೋದನೆಗಳ ಅಧಿಕ್ಯ ಸ್ವಲ್ಪವೇ ಇದ್ದಾಗ ನೋವು ಸಹನೀಯವಾಗಿದ್ದು ಪ್ರಚೋದನೆಯ ಅಧಿಕ್ಯ ಇನ್ನೂ ತೀವ್ರವಾದಾಗ ನೋವು ಅಸಹನೀಯವಾಗುತ್ತದೆ. ಪ್ರಚೋದನೆ ಎಷ್ಟು ತೀವ್ರತರ ಮಟ್ಟದ್ದಾದರೆ ನೋವು ಅಷ್ಟು ಅಸಹನೀಯವಾಗುತ್ತದೆ. ಅನ್ಯಪ್ರಚೋದನೆಗಳು ತಮ್ಮ ಯಾವ ಮಟ್ಟದಲ್ಲಿ ನೋವಿನ ಅನುಭವವನ್ನು ಕೊಡುತ್ತವೆ ಎನ್ನುವುದನ್ನು ಹಲವಾರು ಪ್ರಯೋಗಗಳಿಂದ ಅಳೆದು ನೋಡಬಹುದು. ಉದಾಹರಣೆಗೆ ಎಷ್ಟು ಡಿಗ್ರಿ ಉಷ್ಣತೆಯಲ್ಲಿರುವ ಶಾಖ ಅಥವಾ ಎಷ್ಟು ಒತ್ತಡ ಚರ್ಮದ ಮೇಲೆ ಬಿದ್ದಾಗ ನೋವಿನ ಅನುಭವವಾಗುತ್ತದೆ ಎನ್ನುವುದನ್ನು ಗಣಿಸಬಹುದು. ದೇಹದ ಮೇಲೆ ಉಂಟಾಗುವ ಪ್ರತ್ಯಕ್ಷ ನೋವು ಚುಚ್ಚುವ ಅಥವಾ ಉರಿಯುವ ಅನುಭವವನ್ನು ಕೊಡುತ್ತದೆ. ಆದರೆ ದೇಹದೊಳಗೆ ಉಂಟಾಗುವ ಪ್ರತ್ಯಕ್ಷ ನೋವು ಯಾತನೆಯಿಂದ ಹಿಂಡಿದಂತೆ ಇರುತ್ತದೆ. ಈ ಯಾತನೆಯ ಗುಣಮಟ್ಟ ಅದು ಉಂಟಾಗುವ ಜಾಗ, ತೀವ್ರತೆ ಮತ್ತು ವೇಳೆಯನ್ನು ಅವಲಂಬಿಸಿದೆ. ಅದು ತುಡಿಯುತ್ತಿರುವಂತೆಯೋ ಅಲೆಗಳಂತೆಯೋ ಇದ್ದು ಒಂದೇ ಸಮನಾಗಿರಬಹುದು ಅಥವಾ ಬಿಟ್ಟು ಬಿಟ್ಟು ತೀವ್ರತೆಯಲ್ಲಿ ಬದಲಾವಣೆ ಹೊಂದಿ ಇರಬಹುದು. ನೋವು ಒಂದು ಜಾಗಕ್ಕೆ ಸೀಮಿತವಾಗಿರದೆ ನೆರೆಹೊರೆಯ ಜಾಗವನ್ನೂ ಆಕ್ರಮಿಸಬಹುದು. ನೋವಿಗೆ ಕಾರಣವಾದ ಪ್ರಚೋದನೆ ಇರುವ ತನಕ ನರಗಳು ವೇದನೆಯ ಸಂವೇದನೆಯನ್ನು ಸಂವಹನಿಸುತ್ತಲೇ ಇರುತ್ತವೆ. ಆದ್ದರಿಂದಲೇ ನೋವಿಗೆ ಹೊಂದಿಕೊಳ್ಳುವುದು (ಅನುಗೊಳಿಕೆ) ಸಾಧ್ಯವಿಲ್ಲ. ಈ ಅನುಗೊಳಿಕೆ ಸ್ಪರ್ಶಜ್ಞಾನದಲ್ಲಿ ಬಲು ಬೇಗನೆ ಉಂಟಾಗುತ್ತದೆ (ಅದಕ್ಕೇ ತೊಟ್ಟಬಟ್ಟೆಯ ಅನುಭವ ನಮ್ಮ ಮನಸ್ಸಿಗೆ ಸಾಮಾನ್ಯವಾಗಿ ಹತ್ತುವುದಿಲ್ಲ). ಶಾಖದ (ಬಿಸಿ ಮತ್ತು ತಣ್ಣಗಿನ) ಪ್ರಚೋದನೆಗಿರುವ ಗುಣ ನೋವಿಗಿಲ್ಲ. ಶಾಖದ ಪ್ರಚೋದನೆಗೆ ಒಳಗಾದ ಜಾಗ ಹೆಚ್ಚಿದಂತೆಲ್ಲ ಅದರ ತೀವ್ರತೆಯೂ ಹೆಚ್ಚಾಗುತ್ತ ಕೊನೆಗೆ ಬಿಸಿ ಅನುಭವ ನೋವಾಗಿ ಮಾರ್ಪಾಡಾಗುತ್ತದೆ. ನೋವಿನ ಪ್ರಚೋದನೆ ದೇಹದ ಎರಡು ಭಾಗದಲ್ಲಾದಾಗ ಅದರ ತೀವ್ರತೆ ಎಲ್ಲಿ ಹೆಚ್ಚಾಗಿರುತ್ತದೋ ಅಲ್ಲಿ ನೋವಿನ ಅನುಭವ ನಿರ್ದಿಷ್ಟವಾಗಿರುತ್ತದೆ. ಈ ಅಂಶವನ್ನು ಹಿಪ್ಪೊಕ್ರಿಟಸ್ (ಕ್ರಿ.ಪೂ.ಸು. 5-4 ಶತಮಾನ) ಅರಿತಿದ್ದನಂತೆ, ನೋವಿಗೊಳಗಾದವರು-ಉದಾಹರಣೆಗೆ ಹೆರಿಗೆನೋವು. ತಲೆನೋವು ಇತ್ಯಾದಿ-ಅದು ಅಸಹನೀಯವಾದಾಗ ತುಟಿಕಚ್ಚುವುದರಿಂದಲೋ ನೋವಿನ ಜಾಗದಲ್ಲಿ ಒತ್ತಡವನ್ನು ಉಂಟು ಮಾಡುವುದರಿಂದಲೋ ಸ್ವಲ್ಪವಾಗಿ ಉಪಶಮನ ಪಡೆಯುತ್ತಾರೆ. ನೋವನ್ನು ಸಂವಹನಿಸುವ ನರಗಳು ಎರಡು ಬಗೆಯವು; ಪ್ರಚೋದನೆಯನ್ನು ತೀವ್ರಗತಿಯಿಂದ ಒಯ್ಯುವವು. ತೀವ್ರಗತಿಯಲ್ಲಿ ನೋವನ್ನು ಸಂವಹನಿಸುವ ನರಗಳು ಂ ಗುಂಪಿಗೆ ಸೇರಿದವು. ಮಂದಗತಿಯ ನೋವನ್ನು ಸಂವಹನಿಸುವವು ಅ ಗುಂಪಿಗೆ ಸೇರಿದವು. ನರತಂತುಗಳ ವ್ಯಾಸ 2ರಿಂದ 5 ಮೈಕ್ರಾನಿನಷ್ಟಿದ್ದು ಅವು ಸಂವಹನಿಸುವ ಪ್ರಚೋದನೆಯ ದರ ಸೆಕೆಂಡಿಗೆ 12 ರಿಂದ 30 ಮೀಟರುಗಳಷ್ಟೇರುತ್ತದೆ. ಅ- ನರತಂತುಗಳ ವ್ಯಾಸ 0.4 ರಿಂದ 1.2 ಮೈಕ್ರಾನಿನಷ್ಟಿದ್ದು ಅವು ಸಂವಹನಿಸುವ ಪ್ರಚೋದನೆಯ ದರ ಸೆಕೆಂಡಿಗೆ 0.5ರಿಂದ 2 ಮೀಟರುಗಳಷ್ಟಿರುತ್ತದೆ. ನೋವು ಸಹನೀಯವಾಗಿದ್ದಾಗ ಗೌಣ ಪ್ರತಿಕ್ರಿಯೆಗಳು ವ್ಯಕ್ತಪಡದೆ ನೋವಿಗೆ ಕಾರಣವಾದ ಪ್ರಚೋದಕ ಪ್ರಭಾವವನ್ನು ತೊಡೆದು ಹಾಕಲು ಪ್ರಯತ್ನ ಮಾಡುವಂಥ ಪ್ರತಿಕ್ರಿಯೆಗಳು ಮಾತ್ರ ಉಂಟಾಗುತ್ತವೆ. ನೋವನ್ನು ಉಂಟುಮಾಡುವ ಪ್ರಚೋದಕದ ದೇಹ ತೀವ್ರತೆಯನ್ನು (ಥ್ರೆಶೋಲ್ಡ್ ಇಂಟೆನ್ಸಿಟಿ) ಅಳೆಯಲು ಸಾಧ್ಯ. ತೀವ್ರತೆ ಎಷ್ಟೇ ಕಡಿಮೆ ಇದ್ದರೂ ನೋವಿನ ಅನುಭವ ಉಂಟಾದದ್ದೇ ಆದರೆ ಅದರ ನರಕೋಶಗಳಿಗೆ ಗಾಸಿಯಾಗಿಯೇ ಆಗಿರುತ್ತದೆ. ಈ ರೀತಿ ಕೋಶಗಳು ಗಾಸಿಗೊಂಡಾಗ ಬಿಡುಗಡೆ ಆದ ರಾಸಾಯನಿಕಗಳಿಂದ ನೋವನ್ನುಂಟು ಮಾಡುವ ನರತಂತುಗಳ ಕೊನೆಗಳು ಉದ್ರೇಕಗೊಂಡು ನೋವಿನ ನರಗಳಲ್ಲಿ ನರಪ್ರಚೋದನೆ ಉತ್ಪತ್ತಿ ಆಗಿ ಮಿದುಳಿನೆಡೆಗೆ ಹರಿಯುತ್ತದೆ.

ನರಮಂಡಲ[ಬದಲಾಯಿಸಿ]

ಮುಂಡ, ಕೈಕಾಲುಗಳಲ್ಲಿ ಉದ್ಬವವಾದ ಪ್ರಚೋದನೆಗಳು ಮೊದಲು ಮಿದುಳುಬಳ್ಳಿಯ ಹಿಂಬದಿಯ ಬುಡವನ್ನು ಸೇರಿ ಅಲ್ಲಿಯ ನರಗಂಟನ್ನು ಹೊಕ್ಕು ನರಸಮೂಹವನ್ನು ಸೇರುತ್ತವೆ. ಅಲ್ಲಿಂದ ಎರಡನೆಯ ಪಂಗಡದ ನರತಂತುಗಳು ಪ್ರಾರಂಭವಾಗಿ ಅವು ಮಿದುಳು ಬಳ್ಳಿಯ ಮತ್ತೊಂದು ಕಡೆಯ ಜಾಗವನ್ನು ಸೇರಿ ಮಿದುಳುಬಳ್ಳಿಯಲ್ಲಿ ಶಿರೋಮುಖವಾಗಿ ಹೊರಡುತ್ತವೆ, ಈ ಗುಂಪಿಗೆ ಮಿದುಳುಬಳ್ಳಿಯ ಪಕ್ಕದ ಶಿರಗುಳಿಯ ವಾಹಿಕಟ್ಟು (ಲ್ಯಾಟರಲ್ ಸ್ಟೈನೊತಾಲ್ಮಿಕ್ ಟ್ರಾಕ್ಟ್) ಎಂದು ಹೆಸರು. ಇದು ಶಿರಗುಳಿಯನ್ನು ಸೇರಿ ಅನಂತರ ಶಿರಗುಳಿ ಮಹಾಮಸ್ತಿಷ್ಕ ವಾಹಿಕಟ್ಟಾಗಿ (ಥೆಲಾಮಾಕಾರ್ಟಿಕಲ್ ಟ್ರಾಕ್ಟ್) ಮುಂದುವರಿದು ಮಹಾಮಸ್ತಿಷ್ಕದ ಸಂವೇದನ ಮಂಡಲವನ್ನು (ಸೆನ್ಸರಿ ಕಾರ್ಟೆಕ್ಸ್) ಸೇರುತ್ತದೆ. ಸ್ಥೂಲವಾದ ನೋವಿನ ಅನುಭವ ಶಿರಗುಳಿಯಲ್ಲೆ (ತಾಲಮಸ್) ಆಗುತ್ತದೆ; ಆದರೆ ಸೂಕ್ಷ್ಮ ತರಹದ ನೋವಿನ ಅನುಭವ ಸಂವೇದನಮಂಡಲದಲ್ಲಿ ಆಗುವುದು. ಉರಿ ಹಾಗೂ ತಿಡಿತದ ನೋವೂ ಚುಚ್ಚು ನೋವೂ ಬೇರೆ ಬೇರೆ ವಾಹಿಕಟ್ಟುಗಳಲ್ಲಿ ಪ್ರವಹಿಸುತ್ತವೆ. ನೋವಿನ ನಿರ್ದಿಷ್ಟ ಅನುಭವ ಉಂಟಾಗಬೇಕಾದರೆ ಆ ಸಂವೇದನೆಯನ್ನು ಗ್ರಹಿಸುವ ಅಭಿಗ್ರಾಹಕ (ರಿಸೆಪ್ಟರ್) ನರಸಮೂಹ, ವಾಹಿಕಟ್ಟು ಮತ್ತು ಕಾರ್ಟಿಕ್ಸ್ ಎಲ್ಲವೂ ಸರಪಣಿಯ ಕೊಂಡಿಗಳಂತೆ ಒಂದಕ್ಕೊಂದು ಜಂಟಿಯಾಗಿ ಸರಿಯಾದ ಸ್ಥಿತಿಯಲ್ಲಿ ಇರಬೇಕು. ಇವುಗಳ ಮಾರ್ಗದಲ್ಲಿ ಎಲ್ಲಾದರೂ ಅಡೆತಡೆಗಳುಂಟಾದರೆ ನೋವಿನ ಅನುಭವದಲ್ಲಿ ವ್ಯತ್ಯಾಸವಾಗುತ್ತದೆ. ನೋವಿಗೆ ಕಾರಣವಾದ ಪ್ರತಿಯೊಂದು ಪ್ರಚೋದಕದಲ್ಲೂ ಅದಕ್ಕೆ ತಕ್ಕಂಥ ಪ್ರತಿಕ್ರಿಯೆಗಳಿದ್ದೇ ಇರುತ್ತದೆ, ಆದರೆ ಇಂಥ ಪ್ರಚೋದನೆಗೆ ಇಂಥದೇ ಪ್ರತಿಕ್ರಿಯೆ ಉಂಟಾಗುತ್ತದೆ ಎಂದು ನಿರ್ದಿಷ್ಟವಾಗಿ ಹೇಳುವುದು ಕಷ್ಟ. ಉದಾಹರಣೆಗೆ ಕೈಬೆರಳನ್ನು ಸೂಜಿಯಿಂದ ಚುಚ್ಚಿದಾಗ ಕೊಡಲೇ ಕೈಯನ್ನು ಹಿಂದಕ್ಕೆ ತೆಗೆದುಕೊಳ್ಳುತ್ತೇವೆ. ಅದೇ ಜಾಗವನ್ನು ಒಂದು ಸೊಳ್ಳೆಕಚ್ಚಿದಾಗ ಇನ್ನೊಂದು ಕೈಯಿಂದ ಆ ಸೊಳ್ಳೆಯನ್ನು ಹೊಡೆಯಲು ಪ್ರಯತ್ನಿಸುತ್ತೇವೆ. ಅಭ್ಯಾಸ ಬಲದಿಂದ ಆಯಾ ಅನುಭವಕ್ಕೆ ಬೆಳೆದು ಬಂದಿರುವ ಪ್ರತಿಕ್ರಿಯೆಯೇ ಇದರ ಕಾರಣ. ಅಭ್ಯಾಸವಿಲ್ಲದಿರುವಾಗ ಪ್ರತಿಕ್ರಿಯೆಗಳಲ್ಲೂ ವ್ಯತ್ಯಾಸಗಳಿರುತ್ತವೆ, ಎಂದೇ ತೀವ್ರತೆಯ ಪ್ರಚೋದನೆಯಿಂದ ದೇಹದ ಅನೇಕ ಭಾಗಗಳನ್ನು ಕೆಣಕಿದಾಗ ಯಾವ ಜಾಗದಲ್ಲಿ ಹೆಚ್ಚು ನೋವು ಉಂಟಾಗುತ್ತಿದೆ ಎಂದು ಸುಲಭವಾಗಿ ಹೇಳಬಹುದು. ಆ ಭಾಗದಲ್ಲಿ ನೋವನ್ನು ಗ್ರಹಿಸುವ ನರಗಳ ವಿನ್ಯಾಸ ಮತ್ತು ಅವು ಎಷ್ಟು ಅಳದಲ್ಲಿವೆ ಎಂಬುದೇ ಇದರ ಮುಖ್ಯಕಾರಣ. ನೋವು ಅನುಭವಿಸುತ್ತಿರುವವರು ಅದನ್ನು ಉರಿಯುತ್ತಿರುವ ಮೀಟುತ್ತಿರುವ ಹಿಂಡುತ್ತಿರುವ ನೋವೆಂದು ವಿವರಿಸುತ್ತಾರೆ. ಪ್ರಚೊದನೆಗೆ ತುತ್ತಾಗಿರುವ ಅಂಗಕೋಶಗಳು ಮತ್ತು ಪ್ರಚೋದನೆಯ ತೀವ್ರತೆಯೇ ಇದರ ಕಾರಣ. ಕೆಲವು ವೇಳೆ ಪ್ರಚೋದನೆ ಒಳಗಿನ ಒಂದು ಭಾಗದಲ್ಲಾಗುತ್ತಿದ್ದರೆ ಆ ನೋವು ಹೊರಗೆ ಬೇರೆ ಭಾಗದಿಂದ ಉಂಟಾದಂತೆ ಭಾಸವಾಗುತ್ತದೆ. ಇದಕ್ಕೆ ಸೂಚಿತ ನೋವು ಎಂದು ಹೆಸರು. ಇದರ ಕಾರಣ ದೇಹದ ಬೆಳವಣಿಗೆಯ ಕಾಲದಲ್ಲಿ ಒಳಗಿನ ಅಂಗಗಳು ಅವಕ್ಕೆ ಸರಿಸಮಾನವಾದ ಹೊರಭಾಗಗಳಿಗೆ ಪೂರೈಕೆ ಆಗುವ ನರತಂತುಗಳ ಸಂಪರ್ಕವನ್ನೇ ಓದಿ ಬೆಳವಣಿಗೆಯನ್ನು ಮುಂದುವರಿಸಿರುವುದು. ಉದಾಹರಣೆಗೆ ವಪೆ ಭ್ರೂಣದ ಬೆಳವಣಿಗೆಯ ಮೊದಲ ಹಂತಗಳಲ್ಲಿ ಕತ್ತಿನ ಜಾಗದಲ್ಲಿರುತ್ತದೆ; ಮತ್ತು ಕತ್ತಿಗೆ ಪೂರೈಕೆ ಆಗುವ ನರವೇ ವಪೆಗೂ ಪೂರೈಕೆ ಆಗುತ್ತದೆ. ಭ್ರೂಣದ ಬೆಳವಣಿಗೆ ಪರಿಪೂರ್ಣವಾದಾಗ ವಪೆ ಹೊಟ್ಟೆಗೂ ಎದೆಗೂ ನಡುವಿನ ಜಾಗಕ್ಕೆ ಬಂದಿರುತ್ತದೆ. ಪಿತ್ತಕೋಶದಲ್ಲಿ ಉಂಟಾದ ನೋವು ಅದರ ಮೇಲಿನ ವಪೆ ಭಾಗಕ್ಕೆ ಪಸರಿಸಿ ಸೂಚಿತ ನೋವಾಗಿ ಭುಜಭಾಗದಲ್ಲಿ ಅನುಭವವಾಗಬಹುದು; ಇದೇ ರೀತಿ ಹೃದಯದಲ್ಲಿ ಉಂಟಾದ ನೋವು ಎಡ ತೋಳಿನ ಒಳ ಭಾಗದಲ್ಲಿ ಅನುಭವವಾಗಬಹುದು. ಕೆಲವು ಸಂದರ್ಭಗಳಲ್ಲಿ ಸಾಮಾನ್ಯ ಇಲ್ಲವೆ ಸೂಕ್ಷ್ಮತರಹದ ನೋವಿಗೆ ಕಾರಣವಾದ ಪ್ರಚೋದನೆ ತೀವ್ರ ತರಹನೋವಿಗೇ ಕಾರಣವಾಗಬಹುದು. ಇದಕ್ಕೆ ಕಟ್ಟರಿ ನೋವು ಎಂದು ಹೆಸರು. ಆ ಕ್ಷೇತ್ರದಲ್ಲಿ ಕಂಡುಬರುವ ಸುತ್ತಂಚಿನ ನರದುರಿತವೇ (ನ್ಯೂರೈಟಿಸ್) ಇದರ ಕಾರಣ, ಸಕ್ಕರೆ ರೋಗ, ಜೀವಸತ್ತ್ವಗಳ ಕೊರತೆ ಅಥವಾ ಕೆಲವು ಔಷಧಗಳ ದುರುಪಯೋಗದಿಂದ ನರದುರಿತ ಉಂಟಾಗುತ್ತದೆ. ಕೈಯನ್ನೋ ಕಾಲನ್ನೋ ಕೆಲವು ಕಾರಣಗಳಿಂದಾಗಿ ಕತ್ತರಿಸಿ ತೆಗೆದುಹಾಕಿದಾಗ ಮುಂದೆ ಕೆಲವು ದಿನಗಳ ತರುವಾಯ ಆ ವ್ಯಕ್ತಿಗೆ ಕೈಕಾಲುಗಳ ನಿರ್ದಿಷ್ಟ ಭಾಗದಲ್ಲಿ ನೋವಾಗುತ್ತಿದೆ ಎಂದು ಭಾಸವಾಗಬಹುದು. ಆ ಭಾಗವನ್ನು ಕತ್ತರಿಸಿ ತೆಗೆದು ಹಾಕಿದ್ದರೂ ಆ ಕೈ ಅಥವಾ ಕಾಲು ಸಹಜವಾಗಿ ಇರುವಂತೆಯೂ ಕತ್ತರಿಸಿದ ಜಾಗದಿಂದ ನೋವು ಉಂಟಾಗುತ್ತಿರುವಂತೆಯೂ ಅನುಭವವಾಗುತ್ತದೆ. ಈ ಸ್ಥಿತಿಗೆ ಚಿತ್ತಭ್ರಾಂತಿ ಸ್ಥಿತಿ (ಫ್ಯಾನ್‍ಟಮ್ ಲಿಂಬ್) ಎಂದು ಹೆಸರು. ಆ ಭಾಗದ ನರತಂತುಗಳ ಮತ್ತು ಮಿದುಳುಬಳ್ಳಿಯ ವಾಹಿಕಟ್ಟಿನ ಸಂಪರ್ಕಗಳೇ ಕಾರಣ. ಕಾಲು ಅಥವಾ ಕೈಯ ಭಾಗವನ್ನು ಕತ್ತರಿಸಿ ತೆಗೆದುಹಾಕಿದ್ದರೂ ಆ ಭಾಗದ ನರತಂತುಗಳ ಹಾಗು ವಾಹಿಕಟ್ಟಿನ ಸಂಪರ್ಕ ಮಿದುಳಿನಿಂದ ಕಡಿದು ಹೋಗಿರುವುದಿಲ್ಲ. ಆದ್ದರಿಂದ ಚಿತ್ರಭ್ರಾಂತಿಯ ಕೈಕಾಲು ಉಂಟಾಗುತ್ತದೆ.

ತೀವ್ರತೆ[ಬದಲಾಯಿಸಿ]

ನೋವನ್ನು ಸಹಿಸಿಕೊಳ್ಳುವ ತ್ರಾಣ ಎಲ್ಲರಿಗೂ ಒಂದೇ ಮಟ್ಟದಲ್ಲಿ ಇರುವುದಿಲ್ಲ. ಕೆಲವು ಪ್ರಾಣಿಗಳು ತೀವ್ರತರದ ವೇದನೆಯನ್ನು ತಡೆದುಕೊಳ್ಳಬಲ್ಲವು. ಇನ್ನೂ ಕೆಲವು ತಡೆದುಕೊಳ್ಳಲಾರವು. ಮನುಷ್ಯರಲ್ಲಿ ಸ್ತ್ರೀಯರಿಗೆ ನೋವನ್ನು ತಡೆದುಕೊಳ್ಳುವ ತ್ರಾಣ ಹೆಚ್ಚು ಎಂದು ನಂಬಲಾಗಿದೆ. ಆದರೆ ಇದಕ್ಕೆ ನಿರ್ದಿಷ್ಟವಾದ ಕಾರಣ ಗೊತ್ತಾಗಿಲ್ಲ. ಸ್ತ್ರೀಯರಲ್ಲೇ ಆಗಲಿ ಪುರುಷರಲ್ಲೇ ಆಗಲಿ ಎಲ್ಲರಲ್ಲೂ ನೊವನ್ನು ಸಹಿಸುವ ತ್ರಾಣ ಒಂದೇ ಮಟ್ಟದಲ್ಲಿ ಇರುವುದಿಲ್ಲ. ಒಂದು ತರಹದ ಪ್ರಚೋದನೆ ಒಬ್ಬರಲ್ಲಿ ಅಷ್ಟು ವಿಶೇಷ ಪ್ರತಿಕ್ರಿಯೆಯನ್ನು ಉಂಟುಮಾಡದಿದ್ದರೆ ಅದೇ ಪ್ರಚೋದನೆ ಇನ್ನೊಬ್ಬರಲ್ಲಿ ತೀವ್ರತರ ಪ್ರತಿಕ್ರಿಯೆಗಳನ್ನು ಉಂಟುಮಾಡುತ್ತದೆ. ನೋವಿಗೆ ಅನುಗೊಳಿಕೆ ಸಾಧ್ಯವಿಲ್ಲದಿದ್ದರೂ ಕೆಲವರು ನೋವನ್ನು ಸಹಿಸಿಕೊಳ್ಳುವ ತ್ರಾಣವನ್ನು ಅಭ್ಯಾಸಬಲದಿಂದ ಬೆಳೆಸಿಕೊಂಡಿರುತ್ತಾರೆ. ಸಾಧು ಸನ್ಯಾಸಿಗಳು ಮುಳ್ಳಿನ ಮೇಲೆ ನಿಂತುಕೊಳ್ಳುವುದು, ಮೈಮೇಲೆಲ್ಲ ಗಾಯ ಮಾಡಿಕೊಳ್ಳುವುದು. ಕೆನ್ನೆ ನಾಲಗೆ ಚುಚ್ಚಿಕೊಳ್ಳುವುದು. ಬಾಯಿಬೀಗ ಹಾಕಿಕೊಳ್ಳುವುದು, ಇತ್ಯಾದಿ ಉದಾಹರಣೆಗಳು. ಬಹುಶಃ ಇಂಥವರಲ್ಲಿ ಸತತವಾಗಿ ಪ್ರಚೋದನೆಗೊಳಗಾಗಿ ಆ ಜಾಗದ ನರತಂತುಗಳು ಮರಗಟ್ಟಿದಂತಾಗುತ್ತವೆ ಎಂದು ಕಾಣುತ್ತದೆ.

ಪಾರ್ಶ್ವ ಪರಿಣಾಮಗಳು[ಬದಲಾಯಿಸಿ]

ನೋವಿಗೆ ಕಾರಣವಾದ ಪ್ರಚೋದನೆ ದೇಹಕ್ಕೆ ಆದಾಗ ಆ ಭಾಗದಲ್ಲಿ ಕೋಶಗಳು ಗಾಸಿಗೊಂಡು ಕೆಲವು ರಾಸಾಯನಿಕ ವಸ್ತುಗಳು ಉತ್ಪತ್ತಿಯಾಗುತ್ತವೆ ಎಂದು ಮೇಲೆ ಹೇಳಿದೆ. ಇವು ಹಿಸ್ಟಮಿನ್ ಅಥವಾ ಬ್ರ್ಯಾಡಿಕೈನಿನ್ ಅಥವಾ ಅದರಂತಿರುವ ಪಾಲಿಪೆಪ್ಟೈಡುಗಳು ಯಾವುವೋ ಇರಬಹುದೆಂದು ನಂಬಲಾಗಿದೆ. ಇವನ್ನು ಒಟ್ಟಿನಲ್ಲಿ ನೋವು ಉಂಟುಮಾಡುವ ಕಾರಕ ಎನ್ನುತ್ತಾರೆ. ಮಾಂಸಖಂಡಗಳಲ್ಲಿ ಅಥವಾ ಹೃದಯದಲ್ಲಿ ರಕ್ತಸಂಚಾರಕ್ಕೆ ಕೊರೆ ಉಂಟಾದಾಗ ಆ ಜಾಗದಲ್ಲಿ ಉತ್ಪತ್ತಿ ಆಗುವ ಲೂಯಿಸ್‍ನ P ಕಾರಕ ಅಲ್ಲಿ ಉಂಟಾಗುವ ನೋವಿಗೆ ಕಾರಣ ಎಂದು ನಂಬಲಾಗಿದೆ. ಈ ಅಂಶ ಪೊಟ್ಯಾಸಿಯಮ್ ಅಯಾನ್ ಇದ್ದರೂ ಇರಬಹುದು ಎಂದು ಶಂಕಿಸಲಾಗಿದೆ. ಹೀಗೆ ಉತ್ಪತ್ತಿಯಾದ ರಾಸಾಯನಿಕ ವಸ್ತುಗಳು ನರತಂತುಗಳ ಕೊನೆಯನ್ನು ಉದ್ರೇಕಿಸಿ ಈ ಉದ್ರೇಕತೆ ವಾಹಿನಾಳದಲ್ಲಿ ಸಂದೇಶವಾಗಿ ಪ್ರವಹಿಸಿ ಮಿದುಳನ್ನು ಸೇರಿ ನೋವಿನ ಅನುಭವ ಆಗುವಂತೆ ಮಾಡುತ್ತವೆ.

ಔಷಧಗಳು[ಬದಲಾಯಿಸಿ]

ನೋವನ್ನು ನಿವಾರಿಸಿಕೊಳ್ಳಲು ಹಲವಾರು ಔಷಧಿಗಳನ್ನು ಉಪಯೋಗಿಸುತ್ತಾರೆ. ಮುಖ್ಯವಾಗಿ ಆಸ್ಪಿರಿನ್, ಅಮೈಡೋಪೈರಿನ್ ಮತ್ತು ಸ್ಟೀರಾಯಿಡ್ ಅಲ್ಲದ ಉರಿಯೂತ ವಿರೋಧಿವಸ್ತುಗಳು. ಇವು ರಕ್ತಗತವಾಗಿ, ಉದ್ರೇಕಗೊಂಡ ನರಗಳನ್ನು ಸಮೀಪಿಸಿ, ವಾಹಿಕಟ್ಟಿನಲ್ಲಿ ಸಾಗುವ ಸಂದೇಶದ ನೀವ್ರತೆಯನ್ನು ಮತ್ತು ಆ ಕಾರಣದಿಂದ ನೋವಿನ ತೀವ್ರತೆಯನ್ನು ಕಡಿಮೆಮಾಡುತ್ತವೆ. ನೋವಿಗೆ ಕಾರಣವಾದ ಮೂಲ ಪ್ರಚೋದನೆಯನ್ನು ಶಾಂತಗೊಳಿಸದ ಹೊರತು ಸಂಪೂರ್ಣ ಗುಣ ಸಿಗಲಾರದು. ಇನ್ನು ಕೆಲವು ನೋವುಗಳಿಗೆ (ತಲೆನೋವು, ಮೈಕೈ ನೋವು ಇತ್ಯಾದಿ) ಮೆಂತಾಲ್, ಕರ್ಪೂರ, ಮಿತೈಲ್ ಸ್ಯಾಲಿಸಿಲೇಟ್ ಇರುವ ಮುಲಾಮುಗಳನ್ನು ಉಪಯೋಗಿಸಿ ಆ ಜಾಗದಲ್ಲಿ ಚುಮುಚುಮು ಎಂದು ಉರಿಯುವ ಅನುಭವವಾಗುವುದರಿಂದ ನೋವಿನ ತೀವ್ರತೆ ಕಡಿಮೆಯಾದಂತೆ ಭಾಸವಾಗುತ್ತದೆ. ಇವುಗಳಿಗೆ ಎದುರು ಕೆರಳಿಕೆಗಳೆಂದು ಹೆಸರು. ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭಗಳಲ್ಲಿ ಕೂಡ ಅರಿವಳಿಕೆ ವಸ್ತುಗಳನ್ನು ಉಪಯೋಗಿಸಿ ಶಸ್ತ್ರಚಿಕಿತ್ಸೆಯಿಂದ ಉಂಟಾಗುವ ನೋವು ಗೊತ್ತಾಗದಂತೆ ಮಾಡುತ್ತಾರೆ, ಇವು ಸಂವೇದನ ವಾಹಿನಿಯನ್ನಾಗಲಿ ಸಂವೇದನವಾಹಿನಿ ಮತ್ತು ಕ್ರಿಯಾವಾಹಿನಿಗಳನ್ನಾಗಲಿ ನಿಷ್ಕ್ರಿಯಗೊಳಿಸಿ ಆ ವಾಹಿಕಟ್ಟುಗಳಲ್ಲಿ ಸಂದೇಶ ಸಾಗದಂತೆ ತಡೆಹಿಡಿಯುತ್ತವೆ.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

  •  "Pain" . Encyclopædia Britannica. Vol. 20 (11th ed.). 1911. {{cite encyclopedia}}: Cite has empty unknown parameters: |separator= and |HIDE_PARAMETER= (help)
  • ನೋವು ಓಪನ್ ಡೈರೆಕ್ಟರಿ ಪ್ರಾಜೆಕ್ಟ್
  • Pain Stanford Encyclopedia of Philosophy
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ನೋವು&oldid=849522" ಇಂದ ಪಡೆಯಲ್ಪಟ್ಟಿದೆ