ಆರ್ಟಿಕಲ್ 15 (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆರ್ಟಿಕಲ್ 15
ಚಿತ್ರಮಂದಿರ ಬಿಡುಗಡೆಯ ಭಿತ್ತಿಪತ್ರ
ನಿರ್ದೇಶನಅನುಭವ್ ಸಿನ್ಹಾ
ನಿರ್ಮಾಪಕಅನುಭವ್ ಸಿನ್ಹಾ
ಜ಼ೀ ಸ್ಟೂಡಿಯೋಸ್
ಲೇಖಕಗೌರವ್ ಸೋಲಂಕಿ
ಅನುಭವ್ ಸಿನ್ಹಾ
ಪಾತ್ರವರ್ಗಆಯುಷ್ಮಾನ್ ಖುರಾನಾ
ನಾಸರ್
ಮನೋಜ್ ಪಾಹ್ವಾ
ಕುಮುದ್ ಮಿಶ್ರಾ
ಇಶಾ ತಲ್ವಾರ್
ಸಯಾನಿ ಗುಪ್ತಾ
ಮೊಹಮ್ಮದ್ ಜ಼ೀಶಾನ್ ಅಯೂಬ್
ಸಂಗೀತಹಾಡುಗಳು:
ಅನುರಾಗ್ ಸೈಕಿಯಾ
ಪೀಯುಷ್ ಶಂಕರ್
ಡೆವಿನ್ ಪಾರ್ಕರ್
ಜಿಂಜರ್ ಶಂಕರ್
ಹಿನ್ನೆಲೆ ಸಂಗೀತ:
ಮಂಗೇಶ್ ಧಾಕಡೆ
ಛಾಯಾಗ್ರಹಣಎವಾನ್ ಮುಲಿಗನ್
ಸಂಕಲನಯಶಾ ರಾಮ್‍ಚಂದಾನಿ
ಸ್ಟುಡಿಯೋಬನಾರಸ್ ಮೀಡಿಯಾ ವರ್ಕ್ಸ್
ಜ಼ೀ ಸ್ಟೂಡಿಯೋಸ್
ವಿತರಕರುಜ಼ೀ ಸ್ಟೂಡಿಯೋಸ್
ಬಿಡುಗಡೆಯಾಗಿದ್ದು
  • 28 ಜೂನ್ 2019 (2019-06-28)[೧]
ಅವಧಿ130 ನಿಮಿಷಗಳು[೨]
ದೇಶಭಾರತ
ಭಾಷೆಹಿಂದಿ
ಬಂಡವಾಳ29 ಕೋಟಿ[೩][better source needed]
ಬಾಕ್ಸ್ ಆಫೀಸ್ಅಂದಾಜು 93.08 ಕೋಟಿ[೪]

ಆರ್ಟಿಕಲ್ 15 ೨೦೧೯ರ ಒಂದು ಹಿಂದಿ ಅಪರಾಧ ನಾಟಕೀಯ ಚಲನಚಿತ್ರ. ಇದನ್ನು ಅನುಭವ್ ಸಿನ್ಹಾ ನಿರ್ಮಿಸಿ ನಿರ್ದೇಶಿಸಿದ್ದಾರೆ.[೫] ಇವರು ಗೌರವ್ ಸೋಲಂಕಿ ಜೊತೆ ಇದರ ಸಹ ಬರಹಗಾರರಾಗಿದ್ದಾರೆ. ಜ಼ೀ ಸ್ಟೂಡಿಯೋಸ್ ಕೂಡ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರದಲ್ಲಿ ಆಯುಷ್ಮಾನ್ ಖುರಾನಾ, ನಾಸರ್, ಮನೋಜ್ ಪಾಹ್ವಾ, ಕುಮುದ್ ಮಿಶ್ರಾ, ಇಶಾ ತಲ್ವಾರ್, ಸಯಾನಿ ಗುಪ್ತಾ, ವೀನ್ ಹರ್ಶ್ ಮತ್ತು ಸುಂಬುಲ್ ತೌಕೀರ್ ನಟಿಸಿದ್ದಾರೆ. ಈ ಚಿತ್ರವು ಒಂದು ಸಣ್ಣ ಹಳ್ಳಿಯಿಂದ ಮೂರು ಹದಿಹರೆಯದ ಹುಡುಗಿಯರು ಕಾಣೆಯಾದ ನಂತರ ಆರಂಭವಾಗುವ ಪೋಲಿಸ್ ತನಿಖೆಯನ್ನು ಅನುಸರಿಸುತ್ತದೆ.

ಈ ಚಿತ್ರವು ಭಾರತದ ಸಂವಿಧಾನದ ೧೫ನೇ ವಿಧಿಯ ಬಗ್ಗೆ ಆಗಿದೆ. ಈ ವಿಧಿಯು ಧರ್ಮ, ಜನಾಂಗ, ಜಾತಿ, ಲಿಂಗ ಅಥವಾ ಜನ್ಮಸ್ಥಳದ ಆಧಾರದ ಮೇಲೆ ತಾರತಮ್ಯ ಮಾಡುವುದನ್ನು ನಿಷೇಧಿಸುತ್ತದೆ.[೬] ಇದು ಒಂದು ನಿರ್ದಿಷ್ಟ ಘಟನೆಯ ಮೇಲೆ ಆಧಾರಿತವಾಗಿರದಿದ್ದರೂ, ಚಿತ್ರವು ೨೦೧೪ರ ಬದಾಯ್ಞೂ ಸಾಮೂಹಿಕ ಅತ್ಯಾಚಾರದ ಆರೋಪಗಳು ಮತ್ತು ೨೦೧೬ರ ಉನಾ ಚಡಿ ಏಟಿನ ಘಟನೆ ಸೇರಿದಂತೆ ಅನೇಕ ನಿಜಜೀವನದ ಘಟನೆಗಳಿಂದ ಸ್ಫೂರ್ತಿ ಪಡೆದಿದೆ.[೭][೮] ಪ್ರಧಾನ ಛಾಯಾಗ್ರಹಣವು ೧ ಮಾರ್ಚ್ ೨೦೧೯ರಂದು ಲಕ್ನೋದಲ್ಲಿ ಶುರುವಾಯಿತು. ಚಿತ್ರದ ಧ್ವನಿವಾಹಿನಿಯನ್ನು ಅನುರಾಗ್ ಸೈಕಿಯಾ, ಪೀಯುಷ್ ಶಂಕರ್, ಡೆವಿನ್ ಪಾರ್ಕರ್ ಮತ್ತು ಜಿಂಜರ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ರಶ್ಮಿ ವಿರಾಗ್, ಶಕೀಲ್ ಆಜ಼್ಮಿ, ಸ್ಲೋ ಚೀತಾ, ಡೀ ಎಮ್‍ಸಿ, ಕಾಮ್ ಭಾರಿ ಮತ್ತು ಸ್ಪಿಟ್‍ಫ಼ಾಯರ್ ಬರೆದಿದ್ದಾರೆ. ಇದನ್ನು ಜ಼ೀ ಮ್ಯೂಸಿಕ್ ಕಂಪನಿಯ ಲಾಂಛನದಡಿ ಬಿಡುಗಡೆ ಮಾಡಲಾಗಿದೆ.

ಆರ್ಟಿಕಲ್ 15 ಲಂಡನ್ ಇಂಡಿಯನ್ ಚಲನಚಿತ್ರೋತ್ಸವದಲ್ಲಿ ೨೦ ಜೂನ್ ೨೦೧೯ರಂದು ಪ್ರಪ್ರಥಮವಾಗಿ ಪ್ರದರ್ಶನಗೊಂಡಿತು.[೯][೧೦] ಇದು ಭಾರತದ ಚಿತ್ರಮಂದಿರಗಳಲ್ಲಿ ೨೮ ಜೂನ್ ೨೦೧೯ರಂದು ಬಿಡುಗಡೆಗೊಂಡಿತು. ಈ ಚಿತ್ರವು ಅದರ ವಿಷಯವಸ್ತುವಿನ ಸಂವೇದನಾತ್ಮಕ ಚಿತ್ರಣಕ್ಕಾಗಿ ವಿಮರ್ಶಕರಿಂದ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು,[೧೧] ಮತ್ತು ವಿಶ್ವಾದ್ಯಂತ ₹93.08 ಕೋಟಿಗಿಂತ ಹೆಚ್ಚು ಹಣಗಳಿಸಿ ವಾಣಿಜ್ಯಿಕ ಯಶಸ್ಸೆನಿಸಿಕೊಂಡಿತು.

ಕಥಾವಸ್ತು[ಬದಲಾಯಿಸಿ]

ಲಾಲ್‍ಗಾಂವ್‍ನ ಗ್ರಾಮಸ್ಥರ ಒಂದು ಗುಂಪು ಒಂದು ಹಾಡಿನಲ್ಲಿ ತೊಡಗಿರುವಾಗ ಇಬ್ಬರು ದಲಿತ ಹುಡುಗಿಯರನ್ನು ಕೆಲವು ಪುರುಷರು ಒಂದು ಶಾಲಾ ಬಸ್‍ನಲ್ಲಿ ಸಿಕ್ಕಿಸಿರುವುದರೊಂದಿಗೆ ಚಿತ್ರವು ಆರಂಭವಾಗುತ್ತದೆ. ಸೇಂಟ್ ಸ್ಟೀಫ಼ನ್ಸ್ ಕಾಲೇಜಿನ ಪದವೀಧರ ಮತ್ತು ಐ ಪಿ ಎಸ್ ಅಧಿಕಾರಿಯಾದ ಅಯಾನ್ ರಂಜನ್‍ನ್ನು (ಆಯುಷ್ಮಾನ್ ಖುರಾನಾ) ಇತ್ತೀಚೆಗೆ ಲಾಲ್‍ಗಾಂವ್‍ನಲ್ಲಿ ಹೆಚ್ಚುವರಿ ಪೋಲಿಸ್ ಅಧೀಕ್ಷಕನಾಗಿ ನಿಯೋಜಿಸಲಾಗಿರುತ್ತದೆ. ಅವನನ್ನು ಅಧಿಕಾರಿಗಳಾದ ಬ್ರಹ್ಮದತ್ ಸಿಂಗ್ (ಮನೋಜ್ ಪಾಹ್ವಾ) ಮತ್ತು ಜಾಟವ್ (ಕುಮುದ್ ಮಿಶ್ರಾ) ಸ್ನೇಹಪರವಾಗಿ ಸ್ವಾಗತಿಸುತ್ತಾರೆ. ಅವನು ಒಂದು ಸ್ಥಳೀಯ ಅಂಗಡಿಯಿಂದ ನೀರಿನ ಬಾಟಲಿಯನ್ನು ಖರೀದಿಸಲು ನಿಲ್ಲಿಸಿದಾಗ ತಾವು ಅವರ ನೀರನ್ನು ಖರೀದಿಸುವಂತಿಲ್ಲ ಏಕೆಂದರೆ ಆ ಅಂಗಡಿಯು ಕೀಳು ಜಾತಿಯ ಜನರಿಗೆ ಸೇರಿದೆ ಎಂದು ಒಬ್ಬ ಅಧಿಕಾರಿಯು ಹೇಳಿದಾಗ ಅವನಿಗೆ ಆ ಹಳ್ಳಿಯಲ್ಲಿರುವ ಜಾತಿ ತಾರತಮ್ಯವನ್ನು ಪರಿಚಯ ಮಾಡಿಕೊಡಲಾಗುತ್ತದೆ. ಅವನು ತನ್ನ ಸ್ವಾಗತ ಪಾರ್ಟಿಯಲ್ಲಿ ಇದೇ ರೀತಿಯ ಪ್ರಸಂಗವನ್ನು ಎದುರಿಸುತ್ತಾನೆ. ಅಲ್ಲಿ ಅವನು ಜಾಟವ್‍ನ ತಟ್ಟೆಯಿಂದ ತಿನ್ನಲು ಪ್ರಯತ್ನಿಸಿದಾಗ ಅವನಿಗೆ ಬೇರೊಂದು ತಟ್ಟೆಯನ್ನು ತಿನ್ನಲು ನೀಡಲಾಗುತ್ತದೆ. ಅವನು ಈ ಮಾಹಿತಿಯನ್ನು ತನ್ನ ಗೆಳತಿ ಅದಿತಿಯೊಂದಿಗೆ (ಇಶಾ ತಲ್ವಾರ್) ಹಂಚಿಕೊಳ್ಳುತ್ತಾನೆ.

ಅಯಾನ್ ತನ್ನ ಕಾಲೇಜಿನ ಗೆಳೆಯನಾದ ಸತ್ಯೇಂದ್ರ ರಾಯ್‍ನನ್ನೂ (ಆಕಾಶ್ ಧಾಬಡೆ) ಭೇಟಿಯಾಗುತ್ತಾನೆ. ಅವನು ಅಯಾನ್‍ನ ಸುತ್ತ ಬಹಳ ಚಡಪಡಿಕೆ ಮತ್ತು ಅಹಿತಕರತೆಯನ್ನು ಹೊಂದಿದಂತೆ ತೋರುತ್ತದೆ. ಆದರೆ ತಾವಿಬ್ಬರು ನಿಕಟ ಸ್ನೇಹಿತರಾಗಿದ್ದೇವೆಂದು ಸಾಧಿಸುತ್ತಾನೆ. ಮರುದಿನ, ಆ ಇಬ್ಬರು ಹುಡುಗಿಯರನ್ನು ಒಂದು ಮರಕ್ಕೆ ನೇಣು ಹಾಕಲಾಗಿರುವುದಾಗಿ ತೋರಿಸಲಾಗುತ್ತದೆ. ಮೂರನೆಯವಳಾದ ಪೂಜಾ ಈಗಲೂ ಕಣ್ಮರೆಯಾಗಿರುತ್ತಾಳೆ. ಎಫ಼್ ಐ ಆರ್ ದಾಖಲಿಸಿ ಮೃತರಾದ ಹುಡುಗಿಯರ ಶವಪರೀಕ್ಷೆಯ ವರದಿಯನ್ನು ಪಡೆದುಕೊಳ್ಳುವಂತೆ ಅಯಾನ್ ಬ್ರಹ್ಮದತ್‍ಗೆ ಆದೇಶಿಸುತ್ತಾನೆ. ಹುಡುಗಿಯರು ಬಹಳ ಹತ್ತಿರವಿದ್ದ ಕಾರಣ ಅವಮಾನಿತನಾದ ಅವರ ತಂದೆ ಅವರನ್ನು ನೇಣು ಹಾಕಿದನೆಂದು ಹೇಳಿ ಸುಳ್ಳು ವರದಿಯನ್ನು ತಯಾರಿಸುವಂತೆ ಬ್ರಹ್ಮದತ್ ಶವಪರೀಕ್ಷೆಯ ವೈದ್ಯನಾದ ಡಾ. ಅವ್‍ಧೇಶ್‍ಗೆ ಹೇಳುತ್ತಾನೆ. ಡಾ. ಅವ್‍ಧೇಶ್‍ನ ಅನುಪಸ್ಥಿತಿಯ ಕಾರಣ, ಅವನ ಸಹಾಯಕಿಯಾದ ಡಾ. ಮಾಲ್ತಿ ರಾಮ್ (ರೊಂಜಿನಿ ಚಕ್ರಬೊರ್ತಿ) ಆ ದೇಶಗಳ ಶವಪರೀಕ್ಷೆ ಮಾಡುತ್ತಾರೆ. ಶವಗಳ ಪರೀಕ್ಷೆಯ ವೇಳೆ, ಹುಡುಗಿಯರ ಸಾಮೂಹಿಕ ಅತ್ಯಾಚಾರವಾಗಿದ್ದು ಅವರಿಗೆ ಗೊತ್ತಾಗುತ್ತದೆ. ಆದರೆ ಬ್ರಹ್ಮದತ್ ಅವರನ್ನು ತಡೆಹಿಡಿದು ವರದಿಯನ್ನು ವಿಳಂಬಗೊಳಿಸುವುದರ ಜೊತೆಗೆ ಪ್ರಕರಣವು ಗೌರವ ಮರಣದ್ದಾಗಲು ಹುಡುಗಿಯರ ಅತ್ಯಾಚಾರದ ಬದಲಾಗಿ ಕೊಲೆಯಾಯಿತೆಂದು ಬರೆಯುವಂತೆ ಪುಸಲಾಯಿಸುತ್ತಾನೆ. ಈ ನಡುವೆ, ವೇಗದ ನ್ಯಾಯ ಕೇಳುವ ಸಲುವಾಗಿ ಒಂದು ಕ್ರಾಂತಿಕಾರಿ ಗುಂಪಿನ ಮುಖ್ಯಸ್ಥನಾದ ನಿಶಾದ್‍ನ ಕಡೆಯವರು ಜಾಟವ್ ಮತ್ತು ಮಯಾಂಕ್‍ನನ್ನು (ಅಯಾನ್‍ನ ಪಿಎ) ಬೆದರಿಸಿ ಅವರ ಜೀಪ್‍ನ್ನು ಸುಟ್ಟುಬಿಡುತ್ತಾರೆ. ಜಾಟವ್‍ನನ್ನು ಪ್ರಶ್ನಿಸಿದಾಗ, ಅಯಾನ್‍ಗೆ ಪರಿಸ್ಥಿತಿಯ ಗಂಭೀರತೆಯ ಅರಿವಾಗಿ ಆಪತ್ತಿಗೊಳಗಾದವರಿಗೆ ನ್ಯಾಯ ಸಿಗುವವರೆಗೆ ಈ ಪ್ರಕರಣದಲ್ಲಿ ಆಳಕ್ಕಿಳಿಯಲು ನಿರ್ಧರಿಸುತ್ತಾನೆ. ತಾನು ಆದಷ್ಟು ಬೇಗ ಪ್ರಕರಣವನ್ನು ಮುಚ್ಚಿಸುವಂತೆ ಪ್ರಯತ್ನಿಸುತ್ತಿರುವ ಬ್ರಹ್ಮದತ್‍ಗೆ ಜಾಟವ್ ಮೇಲೆ ಸಿಟ್ಟುಬರುತ್ತದೆ. ಪ್ರಕರಣವು ಸುಳ್ಳಾಗಿದೆಯೆಂದು ನೆಪವೊಡ್ಡಿ ಹಾಗೆ ಮಾಡುವಂತೆ ಅಯಾನ್ ಮನವೊಲಿಸಲು ಪ್ರಯತ್ನಿಸುತ್ತಾನೆ. ಅವರು ಒಬ್ಬ ಸ್ಥಳೀಯ ಕಟ್ಟುಗನಾದ ಅಂಶು ನಹಾರಿಯಾಗಾಗಿ ಕೆಲಸ ಮಾಡುತ್ತಿದ್ದರು ಮತ್ತು ಇತ್ತೀಚೆಗೆ ತಮ್ಮ ಸಂಬಳದಲ್ಲಿ ಕೇವಲ ರೂ. ೩ ರ ಏರಿಕೆ ಕೇಳಿದ್ದರೆಂದು ಒಬ್ಬ ಹುಡುಗಿಯ ಸೋದರಿಯಾದ ಗೌರಾ ಅವನಿಗೆ ಹೇಳಿದಾಗ ತನಿಖೆ ಹೆಚ್ಚು ಚುರುಕುಗೊಳ್ಳುತ್ತದೆ. ಅಯಾನ್ ಅಂಶುನನ್ನು ವಿಚಾರಣೆಗಾಗಿ ಕರೆಯಲು ನಿರ್ಧರಿಸಿದಾಗ, ಅಂಶು ಸಿಎಂ ರಾಮ್ ಲಾಲ್ ನಹಾರಿಯಾ ಸಂಬಂಧಿ ಎಂದು ಹೇಳಿ ಬ್ರಹ್ಮದತ್ ಹಾಗೆ ಮಾಡದಂತೆ ಮನವೊಲಿಸಲು ಯತ್ನಿಸುತ್ತಾನೆ. ವಿಚಾರಣೆಯ ವೇಳೆ, ಇಡೀ ಜಾತಿಗೆ ತಮ್ಮ ಸ್ಥಾನಮಾನದ ನೆನಾಪಗಲು ಹುಡುಗಿಯರ ಕಪಾಳಕ್ಕೆ ಹೊಡೆಯಲಾಯಿತೆಂದು ಅಂಶು ಹೇಳುತ್ತಾನೆ. ಅವರ ಸ್ಥಾನಮಾನವೇನೆಂದು ಅಯಾನ್ ಅವನಿಗೆ ಕೇಳಿದಾಗ, "ನಾವೇನು ಕೊಡುತ್ತೀವೊ ಅದೇ ಅವರ ಸ್ಥಾನಮಾನ" ಎಂದು ಅವನು ಉತ್ತರಿಸುತ್ತಾನೆ. ಇದು ಅಯಾನ್‍ನನ್ನು ಬಹಳವಾಗಿ ವ್ಯಾಕುಲಗೊಳಿಸುತ್ತದೆ ಏಕೆಂದರೆ ಅವನಿಗೆ ರಾಜಕೀಯ ವ್ಯವಸ್ಥೆಯ ಹಿಂದಿನ ಲೋಪದೋಷಗಳು ಕಾಣಿಸುತ್ತವೆ. ಅವನು ಕೂಡಲೇ ಈ ಅವ್ಯವಸ್ಥೆಯನ್ನು ಸರಿಮಾಡಲು ನಿರ್ಧರಿಸಿ ಮರುದಿನ ಬೆಳಿಗ್ಗೆ, ಮೊಟ್ಟಮೊದಲು ತಾವು ಭಾರತೀಯರಾಗಬೇಕು ಮತ್ತು ಯಾವುದೇ ರೀತಿಯ ಜಾತಿ ತಾರತಮ್ಯವು ಕ್ರಿಮಿನಲ್ ಅಪರಾಧವೆಂದು ಎಲ್ಲ ಪೋಲಿಸ್ ಅಧಿಕಾರಿಗಳಿಗೆ ಜ್ಞಾಪಿಸಿಕೊಡಲು ಅವನು ಭಾರತೀಯ ಸಂವಿಧಾನದ ೧೫ನೇ ವಿಧಿಯನ್ನು ಸ್ಟೇಶನ್‍ನ ಫಲಕದ ಮೇಲೆ ಅಂಟಿಸಿ ಪ್ರಕರಣದ ತನಿಖೆಯನ್ನು ಮುಂದುವರಿಸುತ್ತಾನೆ.

ಅಯಾನ್ ಡಾ. ಮಾಲ್ತಿ ರಾಮ್‍ಳನ್ನು ಭೇಟಿಯಾದಾಗ ವರದಿಗೆ ವಿರುದ್ಧವಾಗಿ ಬಾಲಕಿಯರ ಮೇಲೆ ಅತ್ಯಾಚಾರ ಮಾಡಿ ಅವರನ್ನು ಕೊಲ್ಲಲಾಗಿರುತ್ತದೆ ಎಂದು ಅವನಿಗೆ ತಿಳಿಯುತ್ತದೆ. ಡಿಎನ್ಎ ಮಾದರಿಗಳನ್ನು ಪರೀಕ್ಷಿಸಲು ಅವರು ಲಕ್ನೊಗೆ ಹೋಗುವಂತೆ ಅವನು ಹೇಳುತ್ತಾನೆ ಮತ್ತು ಮೇಲಿನವರು ಅಂಶು ನಹಾರಿಯಾನ ತಂದೆ ರಾಮ್‍ಲಾಲ್ ನಹಾರಿಯಾಗೆ ಹತ್ತಿರವಾಗಿದ್ದಾರೆ ಎಂದು ಅರಿವಾಗಿ ಕೇವಲ ತನ್ನನ್ನು ಸಂಪರ್ಕಿಸುವಂತೆ ಹೇಳುತ್ತಾನೆ. ಈ ನಡುವೆ, ಜಾತಿಯಿಂದ ಬ್ರಾಹ್ಮಣನಾದ ಮಹಾಂತ್‍ಜಿ ನಿಶಾದ್‍ನಿಂದ ತೀವ್ರವಾಗಿ ವಿರೋಧ ಎದುರಿಸುತ್ತಿರುವ ದಲಿತ ಸಮುದಾಯದ ಮುಖ್ಯಸ್ಥನಾದ ಶಾಂತಿ ಪ್ರಸಾದ್‍ನೊಂದಿಗೆ ಕೂಟವನ್ನು ರಚಿಸಿಕೊಂಡಿರುತ್ತಾನೆ ಮತ್ತು ಅವನು ಇದರ ವಿರುದ್ಧ ಒಂದು ಪ್ರತಿಭಟನೆಯನ್ನು ಸಂಘಟಿಸುತ್ತಾನೆ.

ಪೂಜಾಳನ್ನು ಹುಡುಕಲು ತಮಗೆ ಹೆಚ್ಚಿನ ಜನರು ಸಿಗುವಂತಾಗಲು ಪ್ರತಿಭಟನೆಯನ್ನು ನಿಲ್ಲಿಸುವಂತೆ ವಿನಂತಿಸಿಕೊಳ್ಳಲು ಅಯಾನ್ ನಿಶಾದ್‍ನನ್ನು ಭೇಟಿಯಾಗುತ್ತಾನೆ. ಮಹಾಂತ್‍ಜಿ ಮತ್ತು ಶಾಂತಿ ಪ್ರಸಾದ್ ಇದನ್ನು ತಮ್ಮ ಸ್ವಂತ ಲಾಭಕ್ಕಾಗಿ ಮಾಡುತ್ತಿದ್ದಾರೆ ಎಂದು ಹೇಳಿ ನಿಶಾದ್ ನಿರಾಕರಿಸುತ್ತಾನೆ. ಪ್ರತಿಭಟನೆಗಳು ಮುಂದುವರಿಯುವವು ಎಂದು ಅವನು ಹೇಳುತ್ತಾನೆ ಆದರೆ ಹುಡುಕಾಟ ಮುಂದುವರಿಯುವಂತಾಗಲು ಕೆಲವರನ್ನು ಹೋಗಲು ಬಿಡುತ್ತಾನೆ. ಡಾ. ಮಾಲ್ತಿ ಅಯಾನ್‍ಗೆ ಕರೆಮಾಡಿ ಅಂಶುನೇ ಆ ಇಬ್ಬರು ಹುಡುಗಿಯರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಅವರನ್ನು ಕೊಂದಿರುವುದಾಗಿ ದೃಢಪಡಿಸುತ್ತಾರೆ. ಅಯಾನ್ ಅಂಶುಗಾಗಿ ಬಂಧನದ ಆಜ್ಞಾಪತ್ರವನ್ನು ಪಡೆದು ಅವನನ್ನು ಬಂಧಿಸಲು ಅವನ ಮನೆಗೆ ಹೋಗುತ್ತಾನೆ. ಆದರೆ ಅಂಶು ಮನೆಯಲ್ಲಿರದೆ ಬ್ರಹ್ಮದತ್‍ನೊಂದಿಗೆ ಸುರಕ್ಷಿತವಾಗಿರುತ್ತಾನೆ. ಬ್ರಹ್ಮದತ್ ಅತ್ಯಾಚಾರಿಗಳಲ್ಲಿ ಒಬ್ಬನೆಂದು ಬಹಿರಂಗವಾಗಿ ತನ್ನನ್ನು ತಾನು ಉಳಿಸಿಕೊಳ್ಳಲು ಅಂಶುನನ್ನು ಸಾಯಿಸುತ್ತಾನೆ.

ಈ ನಡುವೆ, ಒಪ್ಪಿಸಲಾದ ಸಾಕ್ಷ್ಯಾಧಾರದ ಸಂಬಂಧವಾಗಿ ಪಾಣಿಕರ್ ಅಯಾನ್‍ನ ವಿಚಾರಣೆ ಮಾಡಿ ಅವನನ್ನು ಅಮಾನತುಗೊಳಿಸುತ್ತಾನೆ. ಆದರೆ ಸ್ವಲ್ಪ ಸಮಯದಿಂದ ಕಣ್ಮರೆಯಾಗಿದ್ದ ಸತ್ಯೇಂದ್ರನಿರುವ ಸ್ಥಳದ ಬಗ್ಗೆ ಅಯಾನ್‍ಗೆ ತಿಳಿದು ಅವನನ್ನು ಮಾತಾಡಿಸುತ್ತಾನೆ. ಅಂಶು ನಹಾರಿಯಾ ಒಂದು ಪಾರ್ಟಿಯನ್ನು ಇಟ್ಟುಕೊಂಡು ಬ್ರಹ್ಮದತ್ ಮತ್ತು ಸಹ ಪೋಲಿಸಿನವನಾದ ನಿಹಾಲ್ ಸಿಂಗ್‍ರನ್ನು ಆಹ್ವಾನಿಸಿರುತ್ತಾನೆ. ಅವರು ತೀವ್ರವಾಗಿ ಮದೋನ್ಮತ್ತರಾಗಿ ಕುಡಿದ ಮಂಪರಿನಲ್ಲಿ ಒಬ್ಬರ ನಂತರ ಒಬ್ಬರು ಆ ಇಬ್ಬರು ಹುಡುಗಿಯರ ಮೇಲೆ ಅತ್ಯಾಚಾರ ಮಾಡಿ ಶಂಕೆ ಬರದಿರಲು ಅವರನ್ನು ಗಿಡದಿಂದ ನೇಣು ಹಾಕಿರುತ್ತಾರೆ. ಆದರೆ, ಸತ್ಯೇಂದ್ರನು ಸಾಕ್ಷಿಯಾಗಲು ನಿರಾಕರಿಸಿ ಓಡಿಹೋಗುತ್ತಾನೆ. ಅಯಾನ್ ನಿಹಾಲ್ ಸಿಂಗ್‍‍ಗೆ ಎದುರಾಗುತ್ತಾನೆ. ಅಯಾನ್‍ನ ಮನೆಯಲ್ಲಿ ಕೆಲಸಮಾಡುವ ತನ್ನ ತಂಗಿ ಅಮಲಿಗೆ ತಾನು ಮಾಡಿದ್ದನ್ನು ಹೇಳಬಾರದೆಂದು ನಿಹಾಲ್ ಅಯಾನ್‍ನನ್ನು ಕೇಳಿಕೊಳ್ಳುತ್ತಾನೆ. ತನ್ನ ಕೃತ್ಯಗಳ ಬಗ್ಗೆ ಪಶ್ಚಾತ್ತಾಪ ಮತ್ತು ವಿಷಾದ ಹೊಂದಿ ನಿಹಾಲ್ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಆದರೆ, ಅಯಾನ್ ಈ ಸುದ್ದಿಯನ್ನು ನಿಹಾಲ್ ಸಿಂಗ್‍ನ ಸೋದರಿ ಅಮಲಿಗೆ ಹೇಳಿದಾಗ ಅವಳು ನಿಯಂತ್ರಣವಿಲ್ಲದೆ ಅಳುತ್ತಾಳೆ.

ಅಯಾನ್‍ನ ಆದೇಶದ ಮೇಲೆ ಜಾಟವ್ ಬ್ರಹ್ಮದತ್‍ನನ್ನು ಬಂಧಿಸಿದಾಗ ಅವನು ಜಾಟವ್ ಮೇಲೆ ಹಲ್ಲೆ ಮಾಡಿ ಅವನನ್ನು ಅವಮಾನ ಮಡುತ್ತಾನೆ. ಜಾಟವ್ ಅವನ ಕಪಾಳಕ್ಕೆ ಹೊಡಿದು ಅವನನ್ನು ಜೈಲಿಗೆ ಕಳಿಸುತ್ತಾನೆ. ಜಾಟವ್ ಮತ್ತು ಇತರ ಪೋಲೀಸಿನವರೊಂದಿಗೆ ಅಯಾನ್ ಒಂದು ಕೊಳಕಾದ ಜೌಗುನೆಲವನ್ನು ದಾಟಿ ಪೂಜಾ ಬಚ್ಚಿಟ್ಟುಕೊಂಡಿರಬಹುದಾದ ಮತ್ತೊಂದು ಬದಿಯಲ್ಲಿನ ಕಾಡನ್ನು ಪ್ರವೇಶಿಸುತ್ತಾನೆ. ಈ ನಡುವೆ, ನಿಶಾದ್‍ನನ್ನು ಪೋಲಿಸರು ಬಂಧಿಸಿ ವ್ಯಾನ್‍ನಲ್ಲಿ ಕರೆದೊಯ್ಯುತ್ತಾರೆ. ಇದು ಎನ್‍ಕೌಂಟರ್ ಆಗಿದ್ದು ಅವನನ್ನು ಸಾಯಿಸಲಾಗುತ್ತದೆ. ಇದು ಗೌರಾ ಮತ್ತು ಸಹ ದಲಿತನೆಂದು ಬಹಿರಂಗವಾದ ಜಾಟವ್‍ನಿಗೆ ತೀವ್ರ ಯಾತನೆಯನ್ನುಂಟುಮಾಡುತ್ತದೆ.

ಅಯಾನ್ ಎಲ್ಲ ಸಾಕ್ಷ್ಯಾಧಾರವನ್ನು ಗೃಹಮಂತ್ರಿಗಳಿಗೆ ಒಪ್ಪಿಸಿದಾಗ, ಅವರು ಅವನಿಗೆ ತನಿಖೆಯನ್ನು ಮುಂದುವರಿಸುವಂತೆ ಪ್ರೋತ್ಸಾಹಿಸುತ್ತಾರೆ. ಅಂತಿಮವಾಗಿ ಅವರು ಜೌಗುನೆಲವನ್ನು ದಾಟುವಲ್ಲಿ ಯಶಸ್ವಿಯಾಗಿ ಪೂಜಾ ಒಂದು ಪೈಪ್‍ನಲ್ಲಿ ಅಡಗಿರುವುದನ್ನು ಪತ್ತೆಹಚ್ಚುತ್ತಾರೆ. ಅವರು ಅವಳನ್ನು ಕಾಪಾಡುತ್ತಾರೆ. ಅವಳ ಹೇಳಿಕೆಯಿಂದ ಶಿಕ್ಷೆಯಾಗಿ ಬ್ರಹ್ಮದತ್‍ಗೆ ಹನ್ನೊಂದು ವರ್ಷಗಳ ಸೆರೆವಾಸವಾಗುತ್ತದೆ. ಮಹಾಂತ್‍ಜಿ ಚುನಾವಣೆಯನ್ನು ಸುಲಭವಾಗಿ ಗೆಲ್ಲುತ್ತಾನೆ. ಅಯಾನ್ ಮತ್ತು ಎಲ್ಲ ಪೋಲೀಸಿನವರು ರಸ್ತೆಬದಿಯ ಉಪಾಹಾರ ಗೃಹದ ಮಹಿಳೆಯಿಂದ ರೋಟಿಗಳನ್ನು ಖರೀದಿಸುತ್ತಾರೆ. ಅಯಾನ್ ಆ ಮಹಿಳೆಗೆ ಅವಳ ಜಾತಿಯನ್ನು ಕೇಳುವುದರೊಂದಿಗೆ ಚಿತ್ರವು ಅಂತ್ಯವಾಗುತ್ತದೆ. ಸಾಗುತ್ತಿರುವ ಲಾರಿಯ ಹಾರನ್ನಿನ ಶಬ್ದದ ಕಾರಣ ಇದು ಕೇಳಿಸುವುದಿಲ್ಲ ಮತ್ತು ಇತರ ಪೋಲೀಸಿನವರು ಅದರ ಬಗ್ಗೆ ನಗುತ್ತಾರೆ. ಇದು ಅವರ ಸುಧಾರಣೆಯನ್ನು ಸೂಚಿಸುತ್ತದೆ.

ಪಾತ್ರವರ್ಗ[ಬದಲಾಯಿಸಿ]

  • ಹೆಚ್ಚುವರಿ ಎಸ್‍ಪಿ ಅಯಾನ್ ರಂಜನ್ ಪಾತ್ರದಲ್ಲಿ ಆಯುಷ್ಮಾನ್ ಖುರಾನಾ
  • ಸಿಬಿಐ ಅಧಿಕಾರಿ ಪಾಣಿಕರ್ ಪಾತ್ರದಲ್ಲಿ ನಾಸರ್
  • ವೃತ್ತಾಧಿಕಾರಿ ಭ್ರಮದತ್ ಸಿಂಗ್ ಪಾತ್ರದಲ್ಲಿ ಮನೋಜ್ ಪಾಹ್ವಾ
  • ಪೋಲಿಸ್ ಸಬ್ ಇನ್‍ಸ್ಪೆಕ್ಟರ್ ಕಿಸಾನ್ ಜಾಟವ್ ಪಾತ್ರದಲ್ಲಿ ಕುಮುದ್ ಮಿಶ್ರಾ
  • ಅದಿತಿ ರಂಜನ್ ಪಾತ್ರದಲ್ಲಿ ಇಶಾ ತಲ್ವಾರ್
  • ಗೌರಾ ಪಾತ್ರದಲ್ಲಿ ಸಯಾನಿ ಗುಪ್ತಾ
  • ಡಾ. ಮಾಲ್ತಿ ರಾಮ್ ಪಾತ್ರದಲ್ಲಿ ರೊಂಜಿನಿ ಚಕ್ರಬೊರ್ತಿ
  • ನಿಶಾದ್ ಪಾತ್ರದಲ್ಲಿ ಮೊಹಮ್ಮದ್ ಜ಼ೀಶಾನ್ ಅಯೂಬ್
  • ಅಂಶು ನಹಾರಿಯಾ ಪಾತ್ರದಲ್ಲಿ ವೀನ್ ಹರ್ಷ್
  • ನೊಖಾಯ್ ಪಾತ್ರದಲ್ಲಿ ವಿವೇಕ್ ಯಾದವ್
  • ಮಾಯಾಂಕ್ ಪಾತ್ರದಲ್ಲಿ ಆಶೀಶ್ ವರ್ಮಾ
  • ನಿಹಾಲ್ ಸಿಂಗ್ ಪಾತ್ರದಲ್ಲಿ ಸುಶೀಲ್ ಪಾಂಡೆ
  • ಪ್ರಮೋದ್ ಯಾದವ್ ಪಾತ್ರದಲ್ಲಿ ಕಪಿಲ್ ತಿಲ್ಹಾರಿ
  • ಸತ್ಯೇಂದ್ರ ರಾಯ್ ಪಾತ್ರದಲ್ಲಿ ಆಕಾಶ್ ದಭಾಡೆ
  • ಚಂದ್ರಭಾನ್ ಪಾತ್ರದಲ್ಲಿ ಶುಬ್ರಜ್ಯೋತಿ ಭರತ್
  • ಅಮಲಿ ಪಾತ್ರದಲ್ಲಿ ಎಜ಼ಾ ಸುಂಬುಲ್ ತೌಕೀರ್

ತಯಾರಿಕೆ[ಬದಲಾಯಿಸಿ]

ಚಿತ್ರದ ಕಥೆಯು ಸ್ವಾತಂತ್ರ್ಯೋತ್ತರ ಕಾಲದ ದೇಶದ ಸಮಾಜ ರಾಜಕೀಯ ಪರಿಸ್ಥಿತಿಯ ಮೇಲೆ ಆಧಾರಿತವಾಗಿದೆ ಮತ್ತು ಕಳೆದ ೬ ತಿಂಗಳಿಂದ ಸಂಶೋಧಿಸಲಾದ ನಿಜಜೀವನದ ಘಟನೆಗಳಿಂದ ತೀರ್ಮಾನಗಳನ್ನು ಮಾಡಿದೆ.[೧೨]

ಚಿತ್ರೀಕರಣ[ಬದಲಾಯಿಸಿ]

ಚಿತ್ರೀಕರಣವು ಲಕ್ನೊದಲ್ಲಿ ೧ ಮಾರ್ಚ್ ೨೦೧೯ರಂದು ಆರಂಭವಾಯಿತು.[೧೩] ಚಿತ್ರೀಕರಣದ ವೇಳೆ, ಚಿತ್ರದ ತಂಡವು ಕೆಲವು ದೃಶ್ಯಗಳನ್ನು ಚಿತ್ರೀಕರಿಸಲು ಜಿಗಣೆಗಳಿಂದ ತುಂಬಿದ ಜವುಗು ನೆಲವನ್ನು ಪ್ರವೇಶಿಸಿತು. ಚಿತ್ರದ ಚಿತ್ರೀಕರಣವು ಎಪ್ರಿಲ್ ೨೦೧೯ರ ಮೊದಲಾರ್ಧದಲ್ಲಿ ಮುಗಿಯಿತು.[೧೪]

ಮಾರಾಟಗಾರಿಕೆ ಮತ್ತು ಬಿಡುಗಡೆ[ಬದಲಾಯಿಸಿ]

ಚಿತ್ರದ ಮೊದಲ ನೋಟವನ್ನು ೬ ಮಾರ್ಚ್ ೨೦೧೯ರಂದು ಹಂಚಿಕೊಳ್ಳಲಾಯಿತು. ಮೊದಲ ನೋಟದ ಭಿತ್ತಿಪತ್ರವನ್ನು ೨೭ ಮೇ ೨೦೧೯ರಂದು ಬಿಡುಗಡೆ ಮಾಡಲಾಯಿತು. ಆಮೇಲೆ ಅದೇ ದಿನದಂದು ಚಿತ್ರದ ಟೀಜ಼ರ್‌ನ್ನು ಬಿಡುಗಡೆ ಮಾಡಲಾಯಿತು.[೧೫] ಚಿತ್ರದ ಅಧಿಕೃತ ಟ್ರೇಲರ್‌ನ್ನು ೩೦ ಮೇ ಯಂದು ಬಿಡುಗಡೆ ಮಾಡಲಾಯಿತು.[೧೬]

ಚಿತ್ರದ ಜೂಕ್‍ಬಾಕ್ಸ್‌ನ್ನು ೧೪ ಜೂನ್ರಂದು ಬಿಡುಗಡೆ ಮಾಡಲಾಯಿತು.[೧೭]

ಭಾರತದಲ್ಲಿ ಈ ಚಿತ್ರವು ೨೮ ಜೂನ್ ೨೦೧೯ರಂದು ಬಿಡುಗಡೆಯಾಯಿತು.[೧] ಇದು ಆನ್‍ಲೈನ್ ಪ್ರಸಾರಕ್ಕಾಗಿ ನೆಟ್‍ಫ್ಲಿಕ್ಸ್‌ನಲ್ಲಿ ಲಭ್ಯವಿದೆ.

ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು[ಬದಲಾಯಿಸಿ]

ಫಿಲ್ಮ್‌ಫೇರ್ ಪ್ರಶಸ್ತಿಗಳು

  • ವಿಮರ್ಶಕರ ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ - ಅನುಭವ್ ಸಿನ್ಹಾ - ಗೆಲುವು
  • ವಿಮರ್ಶಕರ ಅತ್ಯುತ್ತಮ ನಟ ಪ್ರಶಸ್ತಿ - ಆಯುಷ್ಮಾನ್ ಖುರಾನಾ - ಗೆಲುವು
  • ಅತ್ಯುತ್ತಮ ಕಥೆ - ಅನುಭವ್ ಸಿನ್ಹಾ ಮತ್ತು ಗೌರವ್ ಸೋಲಂಕಿ - ಗೆಲುವು
  • ಅತ್ಯುತ್ತಮ ಪೋಷಕ ನಟ - ಮನೋಜ್ ಪಾಹ್ವಾ - ನಾಮನಿರ್ದೇಶಿತ
  • ಅತ್ಯುತ್ತಮ ಸಂಭಾಷಣೆ - ಅನುಭವ್ ಸಿನ್ಹಾ ಮತ್ತು ಗೌರವ್ ಸೋಲಂಕಿ - ನಾಮನಿರ್ದೇಶಿತ
  • ಅತ್ಯುತ್ತಮ ಚಿತ್ರಕಥೆ - ನಾಮನಿರ್ದೇಶಿತ
  • ಅತ್ಯುತ್ತಮ ಹಿನ್ನೆಲೆ ಸಂಗೀತ - ಮಂಗೇಶ್ ಧಾಕ್ಡೆ - ನಾಮನಿರ್ದೇಶಿತ
  • ಅತ್ಯುತ್ತಮ ಛಾಯಾಗ್ರಹಣ - ಇವಾನ್ ಮುಲಿಗನ್ - ನಾಮನಿರ್ದೇಶಿತ
  • ಅತ್ಯುತ್ತಮ ಸಂಕಲನ - ಯಶಾ ರಾಮ್‍ಚಂದಾನಿ - ನಾಮನಿರ್ದೇಶಿತ
  • ಅತ್ಯುತ್ತಮ ನಿರ್ಮಾಣ ವಿನ್ಯಾಸ - ನಿಖಿಲ್ ಕೋವಲೆ - ನಾಮನಿರ್ದೇಶಿತ
  • ಅತ್ಯುತ್ತಮ ಧ್ವನಿ ವಿನ್ಯಾಸ - ಕಾಮೋದ್ ಎಲ್ ಕರಾಡೆ - ನಾಮನಿರ್ದೇಶಿತ

ಧ್ವನಿವಾಹಿನಿ[ಬದಲಾಯಿಸಿ]

ಚಿತ್ರದ ಸಂಗೀತವನ್ನು ಅನುರಾಗ್ ಸೈಕಿಯಾ, ಪೀಯುಷ್ ಶಂಕರ್, ಡೆವಿನ್ ಪಾರ್ಕರ್ ಮತ್ತು ಜಿಂಜರ್ ಸಂಯೋಜಿಸಿದ್ದಾರೆ. ಹಾಡುಗಳಿಗೆ ಸಾಹಿತ್ಯವನ್ನು ರಶ್ಮಿ ವಿರಾಗ್, ಶಕೀಲ್ ಆಜ಼್ಮಿ, ಸ್ಲೋ ಚೀತಾ, ಡೀ ಎಮ್‍ಸಿ, ಕಾಮ್ ಭಾರಿ ಮತ್ತು ಸ್ಪಿಟ್ ಫ಼ಾಯರ್ ಬರೆದಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯसंगीतकारಗಾಯಕ(ರು)ಸಮಯ
1."ನೆಯ್ನಾ ಯೇ"ರಶ್ಮಿ ವಿರಾಗ್ಪೀಯುಷ್ ಶಂಕರ್ಯಾಸರ್ ದೇಸಾಯಿ, ಆಕಾಂಕ್ಷಾ ಶರ್ಮಾ5:29
2."ಇಂತಜ಼ಾರಿ"ಶಕೀಲ್ ಆಜ಼್ಮಿಅನುರಾಗ್ ಸೈಕಿಯಾಅರ್ಮಾನ್ ಮಲಿಕ್5:08
3."ಇಂತಜ಼ಾರಿ" (ಅನ್‍ಪ್ಲಗ್‍ಡ್)ಶಕೀಲ್ ಆಜ಼್ಮಿಅನುರಾಗ್ ಸೈಕಿಯಾಆಯುಷ್ಮಾನ್ ಖುರಾನಾ4:46
4."ಇಂತಜ಼ಾರಿ" (ಅಸೀಸ್ ಶೈಲಿ)ಶಕೀಲ್ ಆಜ಼್ಮಿಅನುರಾಗ್ ಸೈಕಿಯಾಅಸೀಸ್ ಕೌರ್4:35
5."ಕಹಾಬ್ ತೋ"ಶಕೀಲ್ ಆಜ಼್ಮಿಅನುರಾಗ್ ಸೈಕಿಯಾಸಯಾನಿ ಗುಪ್ತಾ3:12
6."ಶುರು ಕರ್‍ಞೆ ಕ್ಯಾ"ಸ್ಲೋ ಚೀತಾ, ಡೀ ಎಮ್‍ಸಿ, ಕಾಮ್ ಭಾರಿ, ಸ್ಪಿಟ್ ಫ಼ಾಯರ್ಡೆವಿನ್ ಪಾರ್ಕರ್, ಜಿಂಜರ್ಸ್ಲೋ ಚೀತಾ, ಡೀ ಎಮ್‍ಸಿ, ಕಾಮ್ ಭಾರಿ, ಸ್ಪಿಟ್ ಫ಼ಾಯರ್3:45
ಒಟ್ಟು ಸಮಯ:26:55

ಗೃಹ ಮಾಧ್ಯಮ[ಬದಲಾಯಿಸಿ]

ಚಿತ್ರವು ಬೇಡಿಕೆ ಮೇರೆಗೆ ವೀಡಿಯೊ ಆಗಿ ನೆಟ್‍ಫ್ಲಿಕ್ಸ್‌ನಲ್ಲಿ ಆಗಸ್ಟ್ ೨೦೧೯ರಲ್ಲಿ ಲಭ್ಯವಾಯಿತು.[೧೮]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ "Ayushmann Khurrana starrer 'Article 15' gets release date". Business Standard. 30 April 2019. Retrieved 10 May 2019.
  2. "ARTICLE 15". British Board of Film Classification. Archived from the original on 20 ಜೂನ್ 2019. Retrieved 18 June 2019.
  3. "Article 15 - Movie - Box Office India". boxofficeindia.com.
  4. "Article 15 Box Office". Bollywood Hungama. Retrieved 4 August 2019.
  5. "I Believe Caste System Must Be Eradicated: Ayushmann on Article 15". The Quint. 31 May 2019.
  6. "Details About Ayushmann Khurrana's Next FilmArticle 15 By Mulk Director". NDTV. 2 March 2019. Retrieved 9 March 2019.
  7. "'Article 15' teaser: Ayushmann Khurrana's film on Badaun gangrape and murder is haunting". DNA India. 27 May 2019.
  8. "Ayushmann Khurana's next 'Article 15' is inspired by true events!". Times of India. 25 May 2019. Retrieved 25 May 2019.
  9. Singh, Raghuvendra (10 May 2019). "Article 15 to be screened at the London Indian Film Festival". Filmfare. Retrieved 10 May 2019.
  10. "Ayushmann Khurrana's Article 15 to be screened at London Indian Film Festival 2019; Know more". India TV. 10 May 2019. Retrieved 10 May 2019.
  11. "Article 15 movie review and rating: Critics' verdict on Ayushmann Khurrana's film". IB Times. 27 June 2019. Retrieved 29 June 2019.
  12. "FIRST LOOK: Ayushmann Khurrana to play police officer in Anubhav Sinha's investigative drama titled Article 15". Bollywood Hungama. 6 March 2019. Retrieved 9 March 2019.
  13. "When Ayushmann Khurrana discussed Article 15 with Taapsee Pannu at the Delhi airport". Times Now News 18. 7 March 2019. Retrieved 9 March 2019.
  14. "Ayushmann Khurrana wraps up Article 15, Anubhav Sinha gifts him a miniature model. See pic". Hindustan Times. 9 April 2019. Retrieved 7 May 2019.
  15. "Article 15 Teaser is a Hard-Hitting Reminder of the Forgotten Values of Indian Constitution". News18. Retrieved 2019-05-27.
  16. "Article 15 - Trailer | Ayushmann Khurrana | Anubhav Sinha". YouTube. Zee Music Company. 29 May 2019.
  17. "Article 15 - Full Movie Audio Jukebox | Ayushmann Khurrana | Anubhav Sinha". YouTube. Zee Music Company. 14 June 2019.
  18. "Article 15". Netflix. August 2019. Retrieved 30 August 2019.

ಹೊರಗಿನ ಕೊಂಡಿಗಳು[ಬದಲಾಯಿಸಿ]