ಅಸಹಕಾರ ಚಳವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ (Amrit Mahotsav) ಮಹಾತ್ಮ ಗಾಂಧಿ ಅವರ ನೇತೃತ್ವದಲ್ಲಿ ನಡೆದ ಅಸಹಕಾರ ಚಳವಳಿ (1920-22) ಬ್ರಿಟಿಷರನ್ನು ಕಂಗಾಲಾಗಿಸಿತ್ತು. ಈ ಸಮಯದಲ್ಲಿ ವಿಜಯಪುರ ಜಿಲ್ಲೆಯಲ್ಲಿ ನಡೆದ ʼಗಾಂಧಿ ಟೋಪಿ ಪ್ರಕರಣʼ ಗಾಂಧೀಜಿ ಗಮನ ಸೆಳೆದಿದ್ದಲ್ಲದೆ, ಅವರ ಯಂಗ್‌ ಇಂಡಿಯಾ ಹಾಗೂ ಬಾಲಗಂಗಾಧರ ತಿಲಕರ ಮರಾಠಿ ಪತ್ರಿಕೆ ʼಕೇಸರಿʼಯಲ್ಲೂ ಗಮನ ಸೆಳೆದಿತ್ತು.

ಜಿಲ್ಲೆಯ ಅಪ್ರತಿಮ ಸ್ವಾತಂತ್ರ್ಯದ ಹೋರಾಟಗಾರ ಕೌಜಲಗಿ ಹನುಂತರಾಯರು ಈ ಗಾಂಧಿ ಟೋಪಿ ಪ್ರಕರಣದ ಕಥಾ ನಾಯಕ. ಅಸಹಕಾರ ಚಳವಳಿಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳನ್ನು, ವಕೀಲರು ನ್ಯಾಯಾಲಯಗಳನ್ನು ಬಹಿಷ್ಕರಿಸಿದರೆ, ಗಣ್ಯರು ಬ್ರಿಟಿಷರು ನೀಡಿದ್ದ ಪ್ರಶಸ್ತಿಗಳನ್ನು ಹಿಂದಿರುಗಿಸಿ ನಡೆಸಿದ ಅಹಿಂಸಾತ್ಮಕ, ಅಸಹಕಾರ ಹೋರಾಟ ಭಾರಿ ಸಂಚಲವನ್ನು ಮೂಡಿಸಿತ್ತು. ಗಾಂಧಿ ಕರೆಗೆ ಪಂಡಿತ ಮೋತಿಲಾಲ ನೆಹರು, ಚಿತ್ರರಂಜನದಾಸ್, ಸಿ.ರಾಜಗೋಪಾಲಾಚಾರಿ ಮುಂತಾದ ನಾಯಕರು ವಕೀಲ ವೃತ್ತಿ ತ್ಯಜಿಸಿದಾಗ ವಿಜಾಪುರ (ವಿಜಯಪುರ) ಜಿಲ್ಲೆಗೂ ಅದರ ಬಿಸಿ ತಟ್ಟಿತು.

ಜಿಲ್ಲಾ ಕೇಂದ್ರವಾದ ವಿಜಾಪುರದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಜಯರಾವ್ ನರಗುಂದ, ಶ್ರೀನಿವಾಸರಾವ್ ಕೌಜಲಗಿ, ರಂಗರಾವ್ ತಿಳಿಗೂಳ, ಜನಾಬ್ ಜಾನವೇಕರರ್‌ ವಕೀಲ ವೃತ್ತಿಯನ್ನು ತ್ಯಜಿಸಿ ಅಸಹಕಾರ ಚಳವಳಿಯಲ್ಲಿ ತೊಡಗಿಸಿಕೊಂಡರು. ಇವರೊಂದಿಗೆ ಕಿರಸೂರು, ಕಟ್ಟಿ, ಬಾಳಾಚಾರ, ಕೆರೂರು ಮುಂತಾದವರೂ ಕೂಡಿಕೊಂಡರು. ಈ ವಿದ್ಯಮಾನ ತಿಳಿದು ಬಾಗಲಕೋಟೆಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೌಜಲಗಿ ಹನುಮಂತರಾಯತು ವಕೀಲ ವೃತ್ತಿಯನ್ನು ತೊರೆದು ಚಳವಳಿಗೆ ಧುಮುಕಿದರು.

1920ರ ನಾಗಪುರ ಕಾಂಗ್ರೆಸ್‌ ಸಮಾವೇಶದಲ್ಲಿ ಕರ್ನಾಟಕಕ್ಕೆ ಪ್ರತ್ಯೇಕ ಕಾಂಗ್ರೆಸ್ ಸಮಿತಿ ಸ್ಥಾಪಿಸಲು ಅನುಮತಿ ಲಭಿಸಿತು. ಅಖಿಲ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಚೇರಿ 1921ರಲ್ಲಿ ಗದಗದಲ್ಲಿ ಆರಂಭಗೊಂಡಾಗ ಗಂಗಾಧರರಾವ್ ದೇಶಪಾಂಡೆ ಮೊದಲ ಅಧ್ಯಕ್ಷರಾದರು. ಹೀಗೆ ರೂಪುಗೊಂಡ ಸಮಿತಿಯಲ್ಲಿ ವಿಜಾಪುರ ಜಿಲ್ಲೆಯ ಕೌಜಲಗಿ ಹನುಮಂತರಾಯ, ನೀಲಕಂಠಪ್ಪ ಸುಗಂಧಿ, ದಿವಾನ್ ಸಾಹೇಬ ಜನಾಬ್ ಜಾನವೇಕರ್‌ ಹಾಗೂ ನಿಕ್ಕಂ ಸದಸ್ಯರಾಗಿದ್ದರು.

ಅಸಹಕಾರ ಚಳವಳಿಯ ಪ್ರಚಾರಕ್ಕಾಗಿ ಕೌಜಲಗಿ ಶ್ರೀನಿವಾಸರಾವ್ ಹಾಗೂ ಕೌಜಲಗಿ ಹನುಮಂತರಾಯರು ವಾರದಲ್ಲಿ ಎರಡು ಬಾರಿ ಬೆಳಗಾವಿಗೆ ಹೋಗಿ ಸಾರ್ವಜನಿಕ ಭಾಷಣ ಮಾಡಿ ಬರುತ್ತಿದ್ದರು. ಕೌಜಲಗಿ ಹನುಮಂತರಾಯರು ಹಳ್ಳಿಗಳಿಗೆ ಭೇಟಿ ಕೊಟ್ಟು ಗಾಂಧಿ ಸಂದೇಶವನ್ನು ಬಿತ್ತರಿಸುತ್ತಾ ಖಾದಿ ಪ್ರಚಾರ, ಮದ್ಯಪಾನದ ನಿಷೇಧಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸಿ, ಅವರನ್ನೂ ಅಸಹಕಾರ ಚಳವಳಿಯತ್ತ ಆಕರ್ಷಿಸಲು ಯತ್ನಿಸಿದರು. ಇದು ಸಹಜವಾಗಿ ಬ್ರಿಟಿಷ್ ಸರ್ಕಾರಕ್ಕೆ ಸಹ್ಯವಾಗಲಿಲ್ಲ. ಅದರಿಂದಾಗಿ ಸರ್ಕಾರದ ವಿರುದ್ಧ ಜನರನ್ನು ಎತ್ತಿಕಟ್ಟುತ್ತಿದ್ದಾರೆಂದು ಆಪಾದಿಸಿ 108ನೇ ಕಲಂ ಪ್ರಕಾರ ಸರ್ಕಾರ ಹನುಮಂತರಾಯರ ಮೇಲೆ ಕೇಸ್ ಹಾಕಿತು.

ಈ ರಾಜದ್ರೋಹ ಪ್ರಕರಣದ ವಿಚಾರಣೆಯು ಜಿಲ್ಲಾ ಮ್ಯಾಜಿಸ್ಟ್ರೇಟ್ ಹ್ಯಾಂಡರ್ಸನ್ ಮುಂದೆ ಬಂತು. ಪೊಲೀಸರು ಗಾಂಧಿ ಟೋಪಿಧಾರಿ ಹನುಮಂತರಾಯರನ್ನು ನ್ಯಾಯಾಲಯದೊಳಗೆ ಕರೆತಂದು ನಿಲ್ಲಿಸಿದಾಗ, ರಾಯರ ತಲೆಯ ಮೇಲೆ ರಾರಾಜಿಸುತ್ತಿದ್ದ ಗಾಂಧಿ ಟೋಪಿಯನ್ನು ಕಂಡು ಹ್ಯಾಂಡರ್ಸನ್‌ ಸಿಟ್ಟಾಗಿ ಟೋಪಿಯನ್ನು ತೆಗೆದಿಟ್ಟು ಬರುವಂತೆ ಆಜ್ಞಾಪಿಸುತ್ತಾನೆ. ಆದರೆ, ಹೊರ ಹೋದ ಹನುಮಂತರಾಯರು ಮತ್ತೆ ಗಾಂಧಿ ಟೋಪಿಯೊಂದಿಗೆ ಒಳಬಂದಿದ್ದರು. ತನ್ನ ಅದೇಶವನ್ನು ಧಿಕ್ಕರಿಸಿದ ಹನುಮಂತರಾಯರನ್ನು ಕಂಡು ಹ್ಯಾಂಡರ್ಸನ್ ಸಿಟ್ಟಾಗಿ ಟೋಪಿಯನ್ನು ತೆಗೆಯಲು ಮೂರು ಬಾರಿ ಆದೇಶಿಸಿದರೂ ಹನುಮಂತರಾಯರು ಅದಕ್ಕೆ ಸೊಪ್ಪು ಹಾಕದೆ ತಮ್ಮ ನಿಲುವನ್ನು ಸಮರ್ಥಿಸಿಕೊಂಡರು.

ಒಂದು ಬಾರಿ ಟೋಪಿ ಧರಸಿದ್ದಕ್ಕೆ 200 ರೂ.ಗಳಂತೆ ಮೊದಲೆರಡು ಬಾರಿಗೆ ಜುಲ್ಮಾನೆ ವಿಧಿಸಿದ್ದನಾದರೂ ಮೂರನೆಯ ಬಾರಿಗೂ ಹನುಮಂತರಾಯರು ಗಾಂಧಿ ಟೋಪಿಯೊಂದಿಗೆ ಮತ್ತೆ ಕಾಣಿಸಿಕೊಂಡಾಗ ಹ್ಯಾಂಡರ್ಸನ್ ದಂಡ ವಿಧಿಸುವ ಗೋಜಿಗೆ ಹೋಗದೆ ವಿಚಾರಣೆಯನ್ನು ಭಾರತ ದಂಡ ಸಂಹಿತೆ 268ನೆಯ ಕಲಮಿನ ಅನ್ವಯ ಹಿರೇಮಠರ ಕೋರ್ಟಿಗೆ ವರ್ಗಾಯಿಸಿದ. ವಿಜಾಪುರದ ವಕೀಲ ವೃಂದ ಹನುಮಂತರಾಯರಿಗೆ ಹ್ಯಾಂಡರ್ಸನ್ ಎರಡು ನೂರು ರೂಪಾಯಿಗಳಂತೆ ಎರಡು ಸಲ ದಂಡ ವಿಧಿಸಿದ್ದರ ವಿರುದ್ಧ ಅಪೀಲು ಹೋಗಲು ಸಿದ್ಧವಾಯಿತು. ಪಾಂಡುರಂಗರಾವ್ ದೇಸಾಯಿ ವಕಾಲತ್ತು ನಡೆಸಲು ಮುಂದೆ ಬಂದರು. ವಿಜಾಪುರದ ಈ ಗಾಂಧಿ ಟೋಪಿ ಪ್ರಕರಣ ಮುಂಬಯಿ ಪ್ರಾಂತ್ಯದ ಎಲ್ಲ ಭಾಷಾ ಪತ್ರಿಕೆಗಳಲ್ಲೂ ವಿಶೇಷ ಮಹತ್ವ ಪಡೆಯಿತು.

ಪತ್ರಿಕೆಗಳಲ್ಲಿ ವ್ಯಾಪಕ ಖಂಡನೆ

ಜಯರಾವ್ ನರಗುಂದರ ಸಂಪಾದಕತ್ವದಲ್ಲಿ ವಿಜಾಪುರದಿಂದ ಪ್ರಕಟಣೆಯಾಗುತ್ತಿದ್ದ ಕರ್ನಾಟಕ ವೈಭವ ಸಾಪ್ತಾಹಿಕವು 1921 ಜೂನ್ 21ರ ಸಂಚಿಕೆಯಲ್ಲಿ ಹ್ಯಾಂಡರ್ಸನ್ ಕ್ರಮವನ್ನು ಟೀಕಿಸಿ ಅದನ್ನು 'ಮಂಗಚೇಷ್ಟೆ' ಎಂದು ಗೇಲಿ ಮಾಡಿತು. ತಿಲಕರು ಆರಂಭಿಸಿದ್ದ ಮರಾಠಿ ಪತ್ರಿಕೆ 'ಕೇಸರಿ' ಹ್ಯಾಂಡರ್ಸನ್ ಧೋರಣೆಯನ್ನು ಉಗ್ರವಾಗಿ ಖಂಡಿಸುತ್ತಾ, ಒಂದು ಗಾಂಧಿ ಟೋಪಿಯನ್ನು ಇಲ್ಲದಂತೆ ಮಾಡುವ ಆಜ್ಞೆಯಿಂದ ನೂರಾರು, ಸಾವಿರಾರು ಗಾಂಧಿ ಟೋಪಿಗಳು ತಮ್ಮ ಮುಂದೆ ನರ್ತಿಸಲಿವೆ ಎಂಬುವುದನ್ನು ಹ್ಯಾಂಡರ್ಸನ್ ಮರೆಯಬಾರದೆಂದು ಎಚ್ಚರಿಸಿತು. 'ಲೋಕ ಸಂಗ್ರಹ' ಪತ್ರಿಕೆ ಹ್ಯಾಂಡರ್ಸನ್‌ನ 'ಧಡಪಶಾಹಿ' ಎಂದು ಕರೆದು ಹನುಮಂತರಾಯರ ದೇಶಭಕ್ತಿಯನ್ನು ಮನಃಪೂರ್ವಕವಾಗಿ ಕೊಂಡಾಡಿತು.

ಧಾರವಾಡದಿಂದ ಪ್ರಕಟವಾಗುತ್ತಿದ್ದ 'ಶುಭೋದಯ' ಪತ್ರಿಕೆ ಬ್ರಿಟಿಷ್ ಆಡಳಿತವನ್ನು 'ಸುಡುಗಾಡು ಸಿದ್ಧʼರಿಗೆ ಹೋಲಿಸಿ, ಇದನ್ನು ಕುಚೇಷ್ಟೆ ಎಂದು ವರದಿ ಮಾಡಿತು. ಈ ಘಟನೆ ಮಹಾತ್ಮ ಗಾಂಧಿ ಅವರ ಗಮನವನ್ನೂ ಸೆಳೆಯಿತು. ಗಾಂಧೀಜಿ ತಮ್ಮ 'ಯಂಗ್ ಇಂಡಿಯಾ' ಪತ್ರಿಕೆಯಲ್ಲಿ ಇದನ್ನು ಮ್ಯಾಜಿಸ್ಟ್ರೇಟರ ಉದ್ಧಟತನ ಎಂದು ಹೇಳುತ್ತಾ, ಅಧಿಕಾರಿಗಳು ಅಸಹಕಾರಿಗಳಿಗೆ ಕಾಯ್ದೆ ಭಂಗ ವೃತ್ತಿ ಕೈಗೊಳ್ಳಲು ಆಹ್ವಾನಿಸುತ್ತಿದ್ದಾರೆ. ಇದನ್ನು ಅಸಹಕಾರಿಗಳು ಆನಂದದಿಂದ ಸ್ವೀಕರಿಸಬೇಕು ಎಂದು ಬರೆದರಷ್ಟೇ ಅಲ್ಲದೆ ಸರ್ಕಾರದ ಆಜ್ಞೆಯನ್ನು ಮುರಿಯುವಲ್ಲಿ ಹನುಮಂತರಾಯರು ತೋರಿದ ವಿನಯಶೀಲತೆಯನ್ನು ಬಹಳ ಮೆಚ್ಚಿಕೊಂಡರು. ಹೀಗೆ ಕರ್ನಾಟಕದಲ್ಲಿ ಕಾನೂನು ಭಂಗ ಚಳವಳಿಯ ಆದ್ಯ ಪ್ರವರ್ತಕರಾಗಿ ಮೆರೆದ ಕೌಜಲಗಿ ಹನುಮಂತರಾಯರು, ಗಾಂಧೀಜಿಗೆ ತಮ್ಮ ಸವಿನಯ ಕಾಯ್ದೆ ಭಂಗ ಚಳವಳಿಯ ಬಗ್ಗೆ ಮತ್ತಷ್ಟು ಆಳವಾಗಿ ಚಿಂತಿಸಲು ಅನುವು ಮಾಡಿಕೊಟ್ಟರು.

ಹನುಮಂತರಾಯರಿಗೆ ಹ್ಯಾಂಡರ್ಸನ್ ವಿಧಿಸಿದ್ದ 400 ರೂಪಾಯಿ ಜುಲ್ಮಾನೆಯ ವಿರುದ್ಧ ಪಾಂಡುರಂಗರಾವ್ ದೇಸಾಯಿ ಜಿಲ್ಲಾ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ಎಲಿಸನ್ನರ ಮುಂದೆ ನಡೆದು, ಅವರು ವಿಧಿಸಿದ್ದ ಜುಲ್ಮಾನೆಯನ್ನು ರದ್ದುಪಡಿಸಿ, ಸಂಗ್ರಹಿಸಿರುವ ಜುಲ್ಮಾನೆಯನ್ನು ಹಿಂತಿರುಗಿಸುವಂತೆ ಆಜ್ಞೆ ಮಾಡಲಾಯಿತು. ಇದರಿಂದ ಅಪಮಾನಿತನಾದ ಹ್ಯಾಂಡರ್ಸನ್, ಹನುಮಂತರಾಯರನ್ನು ಹೇಗಾದರೂ ಮಾಡಿ ಶಿಕ್ಷಿಸಬೇಕೆಂದು ಕ್ರಿಮಿನಲ್ ಪ್ರೊಸೀಜರ್ ಕೋಡ್ 108ನೇ ಕಲಂ ಅಡಿಯಲ್ಲಿ ಮೊಕದ್ದಮೆ ಹೂಡಿದ. ಹನುಮಂತರಾಯರ ಕೋರಿಕೆಯಂತೆ ಈ ಖಟ್ಲೆಯ ವಿಚಾರಣೆಯನ್ನು ಸೊಲ್ಲಾಪುರದ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟಿಗೆ ವರ್ಗಾಯಿಸಲಾಯಿತು. ಸೊಲ್ಲಾಪುರದ ಜಡ್ಜ್ ಮುಂದೆ ನಡೆದ ವಿಚಾರಣೆಯಲ್ಲಿ ಹ್ಯಾಂಡರ್‌ಸನ್ ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿದ ಪರಿಣಾಮ ಅಂತಿಮವಾಗಿ ನ್ಯಾಯಾಲಯ ಹನುಮಂತರಾಯರಿಗೆ ಒಂದು ವರ್ಷದ ಸದ್ವರ್ತನಾ ಜಾಮೀನು ನೀಡಬೇಕು. ಇಲ್ಲವೇ ಒಂದು ವರ್ಷ ಶಿಕ್ಷೆ ಅನುಭವಿಸಬೇಕೆಂದು ತೀರ್ಪು ನೀಡಿತು.

ಹನುಮಂತರಾಯರು ಜೈಲು ಶಿಕ್ಷೆ ಅನುಭವಿಸಲು ಸಿದ್ಧರಿದ್ದರೂ ಅವರ ಸೋದರಮಾವ ಗೋವಿಂದರಾವ್ ಬೆಳಗಲ್ ತಾವೇ ಖುದ್ದಾಗಿ ಮ್ಯಾಜಿಸ್ಟ್ರೇಟರನ್ನು ಕಂಡು ಹನುಮಂತರಾಯರ ಪರವಾಗಿ ತಾವೇ ಸದ್ವರ್ತನಾ ಜಾಮೀನು ನೀಡಿ ಹನುಮಂತರಾಯರನ್ನು ಬಿಡುಗಡೆ ಮಾಡಿಸಿಕೊಂಡು ಬಾಗಲಕೋಟೆಗೆ ಹಿಂದಿರುಗಿದರು. ಆದರೆ ಬಾಗಲಕೋಟೆಗೆ ಹಿಂತಿರುಗಿದ ಹನುಮಂತರಾಯರು, ಗೆಳೆಯರಾದ ಮೊಹರೆ ಹನುಮಂತರಾಯ, ಸಾಲಿ ರಾಮಚಂದ್ರರಾಯ, ರಂಗರಾವ್ ತಿಳಗೂಳ ಹಾಗೂ ನಾನಾಸಾಹೇಬ ಮಸೂರಕರರೊಂದಿಗೆ ಸಮಾಲೋಚಿಸಿ ಸೆರೆಮನೆ ಶಿಕ್ಷೆ ಅನುಭವಿಸುವುದೇ ಸೂಕ್ತವೆಂದು ತೀರ್ಮಾನಿಸಿ, ಮನೆಯವರಾರಿಗೂ ಗೊತ್ತಾಗದಂತೆ ಮಸೂರಕರ ಹಾಗೂ ತಿಳಗೂಳರೊಡನೆ ಸೊಲ್ಲಾಪುರಕ್ಕೆ ಹೋಗಿ ಡಿಸ್ಟ್ರಿಕ್ಟ್ ಮ್ಯಾಜಿಸ್ಟ್ರೇಟರನ್ನು ಕಂಡು, ತಮ್ಮ ಸೋದರಮಾವ ನೀಡಿದ್ದ ಸದ್ವರ್ತನಾ ಜಾಮೀನನ್ನು ಹಿಂತೆಗೆದುಕೊಂಡು ತಮಗೆ ಜೈಲು ಶಿಕ್ಷೆ ವಿಧಿಸಬೇಕೆಂದು ಕೋರಿದರು. ಅದರಂತೆ ವೀಸಾಪುರ ಜೈಲು ಸೇರಿದರು.

ಹೀಗೆ ಹನುಮಂತರಾಯರ 'ಗಾಂಧಿ ಟೋಪಿ ಪ್ರಕರಣ ಐತಿಹಾಸಿಕ ದಾಖಲೆಯಾಯಿತು. ಇದರ ಪ್ರಭಾವ ಎಷ್ಟಿತ್ತೆಂದರೆ ಅಂದಿನವರೆಗೆ ರುಮಾಲನ್ನೇ ಸುತ್ತಿಕೊಳ್ಳುತ್ತಿದ್ದ ಲಾಲಾಲಜಪತರಾಯರು ಈ ಪ್ರಕರಣದ ನಂತರ ರುಮಾಲು ತ್ಯಜಿಸಿ ಗಾಂಧಿ ಟೋಪಿ ಧರಿಸಲಾರಂಭಿಸಿದರು. ಗಾಂಧೀಜಿ ಅವರು ಚಿಂತಿಸುತ್ತಿದ್ದ ಸವಿನಯ ಕಾಯ್ದೆ ಭಂಗ ಚಳವಳಿಗೆ ಇದೊಂದು ರೀತಿಯಲ್ಲಿ ಮೂರ್ತ ರೂಪ ನೀಡಿತೆಂದರೆ ತಪ್ಪಾಗಲಾರದು.[೧]

[೨]

ಉಲ್ಲೇಖ[ಬದಲಾಯಿಸಿ]

  1. "ಅಸಹಕಾರ ಚಳವಳಿಯಲ್ಲಿ ಬಾಪು ಗಮನ ಸೆಳೆದಿದ್ದ ಕೌಜಲಗಿ ಹನುಮಂತರಾಯ!". Vistara News. Vistara News. 2 August 2023.{{cite web}}: CS1 maint: url-status (link)
  2. "Independence Day". Vistara News. Vistara News. 2 August 2023.{{cite web}}: CS1 maint: url-status (link)