ವಿಶ್ವನಾಥನಾಗೇನಹಳ್ಳಿ ಚರ್ಚು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬೆಂಗಳೂರಿನ ಹೆಬ್ಬಾಳದ ಬಳಿಯಿರುವ ನಾಗನಹಳ್ಳಿ ಎಂದೇ ಜನಪ್ರಿಯವಾಗಿರುವ ಈ ಊರಿನ ಕ್ರೈಸ್ತಭಕ್ತರು ೨೬ ನೇಫೆಬ್ರವರಿ ೧೯೮೯ರಂದು ತಮ್ಮ ಪಾಲಕಸಂತರಾದ ವನಚಿನ್ನಪ್ಪನವರ ಹಬ್ಬವನ್ನು ಆಚರಿಸುತ್ತಾ ಹಬ್ಬದ ಪೂಜೆ ನೆರವೇರಿಸಿದ ಮಹಾಬಿಷಪ್ ಅಲ್ಫೋನ್ಸಸ್ ಮಥಾಯಿಸ್ ಅವರಿಗೆ ಪುಟ್ಟ ದೇವಾಲಯವನ್ನು ದೊಡ್ಡದಾಗಿ ಪುನರ್ ನಿರ್ಮಾಣ ಮಾಡುವುದರ ಬಗ್ಗೆ ಮನವಿಯೊಂದನ್ನು ಸಲ್ಲಿಸಿದರು. ಯಥಾಪ್ರಕಾರ ಮಹಾಧರ್ಮಾಧಿಕಾರಿಗಳು ತಮ್ಮ ಧರ್ಮಪ್ರಾಂತ್ಯದಲ್ಲಿ ಹಣವೇ ಇಲ್ಲ ಎಂದು ಕೈತೊಳೆದುಕೊಂಡರು.

ಆದರೆ ನಾಗನಹಳ್ಳಿಯ ಜನ ಬೇರೆ ಬೇರೆ ಹಳ್ಳಿಗಳ ಜನರಂತೆ ತಲೆತೂಗಿ ಸುಮ್ಮನಾಗಿಬಿಡಲಿಲ್ಲ. ಮನೆಮನೆಯಿಂದ ಹಣ ಕೂಡಿಸಿ ದೇವಾಲಯ ಕಟ್ಟಲು ಪ್ರಾರಂಭಿಸಿಯೇಬಿಟ್ಟರು. ಕಣ್ಣಳತೆಯ ದೂರದಲ್ಲಿ ಕೊಂಕಣಿ ಸಮುದಾಯದವರು ಸುಮಾರು ೧೫೦ ಮನೆ ನಿವೇಶನಗಳನ್ನು ರಚಿಸಿ ಅಲ್ಲೊಂದು ದೇವಾಲಯವನ್ನು ಕಟ್ಟಲು ಪ್ರಾರಂಭಿಸಿದರು. ಅಲ್ಲಿಗೆ ಇದೇ ಬಿಷಪರು ಹಲವಾರು ಸಲ ಬಂದುಹೋದರಲ್ಲದೆ ಧನಸಹಾಯವನ್ನೂ ಮಾಡಿದರು. ವಿಪರ್ಯಾಸವೆಂದರೆ ನಾಗನಹಳ್ಳಿಯ ಜನತೆಗೆ ಅವರು ಬೆನ್ನು ತಟ್ಟುವುದಿರಲಿ ಆ ಕಡೆ ತಿರುಗಿಯೂ ನೋಡಲಿಲ್ಲ. ಉತ್ಸಾಹ ಕಳೆದುಕೊಳ್ಳದ ಜನ ಊರ ಕ್ರೈಸ್ತೇತರ ಜನರ ಅಸಹಕಾರವನ್ನೂ ಹಣದ ಮುಗ್ಗಟ್ಟನ್ನೂ ಎದುರಿಸಿ ನಿಂತು ಸುಂದರ ಚರ್ಚನ್ನು ಕಟ್ಟಿದರು. ಒಂದು ಮನೆಯಿಂದ ಕಲ್ಲು, ಮತ್ತೊಂದು ಮನೆಯಿಂದ ಸಿಮೆಂಟು, ಮಗದೊಂದು ಮನೆಯಿಂದ ಗಂಟೆ ಹೀಗೆ ಚರ್ಚು ಪೂರ್ಣಗೊಳ್ಳುವ ವೇಳೆಗೆ ವೆಚ್ಚ ಹನ್ನೊಂದುಲಕ್ಷ ದಾಟಿತ್ತು. ನಿರ್ಮಾಣದ ಕಾರ್ಯದಲ್ಲೂ ಜನ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು.

ಹೀಗೆ ಅವರ ತನುಮನಗಳೆಲ್ಲ ಕರ್ತನ ಮಂದಿರಕ್ಕೇ ಮುಡಿಪಾಗಿತ್ತು. ದೇವಕಾರ್ಯದಲ್ಲಿ ಭಾಗಿಗಳಾಗುತ್ತಿದ್ದೇವೆಂಬ ಅನನ್ಯ ಭಾವ ಅವರಿಗೆ ಪ್ರೇರಣೆಯಾಗಿತ್ತು. ಹೀಗೆ ಬೆಂಗಳೂರು ಮಹಾಧರ್ಮಪ್ರಾಂತ್ಯದ ಇತಿಹಾಸದಲ್ಲಿ ಬಿಷಪರನ್ನು ಧಿಕ್ಕರಿಸಿ ಜನರೇ ತಮ್ಮೂರಿಗೊಂದು ಚರ್ಚು ಕಟ್ಟಿಕೊಂಡು, ಪಾದ್ರಿಗಳೇ ಅದನ್ನು ಉದ್ಘಾಟಿಸಿ ಪೂಜೆಯರ್ಪಿಸಿದ ಸಂಗತಿ ಬೆಂಗಳೂರಿನ ಇತಿಹಾಸದಲ್ಲೇ ಒಂದು ಪ್ರಮುಖ ಮೈಲಿಗಲ್ಲು.