ವಿಕಿಪೀಡಿಯ
Wikipedia ಇಂದ
ವಿಕಿಪೀಡಿಯ ಒಂದು ಮುಕ್ತ ವಿಶ್ವಕೋಶ. ಇದು ಅನೇಕ ಓದುಗರ, ಸದಸ್ಯರ ಸಹಯೋಗದಿ೦ದ ಒಟ್ಟಾಗಿ ಬರೆಯಲ್ಪಡುತ್ತಿರುವ ವಿಶ್ವಕೋಶ. ಜನವರಿ ೨೦೦೧ ರಂದು ಜಿಮ್ಮಿ ವೇಲ್ಸ್ ಮತ್ತು ಲಾರ್ರಿ ಸೇಂಗರ್ ಆರಂಭಿಸಿದ ವಿಕಿಪೀಡಿಯ ೨೬೨ ವಿವಿಧ ಭಾಷೆಗಳಲ್ಲಿ ಆವೃತ್ತಿಗಳನ್ನು ಹೊಂದಿರುವ ವಿಶ್ವಕೋಶಗಳ ಸಮೂಹವಾಗಿದ್ದು ಈಗ ವಿಕಿಮೀಡಿಯ ಫೌಂಡೇಷನ್ ನಿಂದ ಪ್ರಾಯೋಜಿಸಲ್ಪಟ್ಟಿದೆ. ಇದು ಸಾಂಪ್ರದಾಯಿಕ ವಿಶ್ವಕೋಶಗಳ ಲೇಖನಗಳ ವಿಷಯಗಳ ಮೇಲೆ ಹಾಗೂ ಪ್ರಚಲಿತ ವಿದ್ಯಮಾನಗಳ ಬಗೆಗೆ ಲೇಖನಗಳನ್ನು ಒಳಗೊಂಡ ವಿಕಿಗಳ ಸಮೂಹವಾಗಿದೆ.
ವಿಕಿಪೀಡಿಯ ಜನವರಿ ೧೫, ೨೦೦೧ ರಂದು ಆಂಗ್ಲ ಭಾಷೆಯ ಆವೃತ್ತಿಯಿಂದ Wikipedia ನಲ್ಲಿ ಶುರುವಾಯಿತು. ಸಪ್ಟೆಂಬರ್ ೯, ೨೦೦೭ ರಂದು ಆಂಗ್ಲ ಭಾಷೆಯ ವಿಕಿಪೀಡಿಯ ೨೦ ಲಕ್ಷಕ್ಕೂ ಹೆಚ್ಚಿನ ಲೇಖನಗಳನ್ನು ಹೊಂದಿದ್ದು ಜಗತ್ತಿನ ಅತೀ ದೊಡ್ಡ ವಿಶ್ವಕೋಶ ಎನಿಸಿಕೊಂಡಿತು. ೨೬೨ ವಿವಿಧ ಭಾಷೆಗಳಲ್ಲಿ ಲಭ್ಯವಿರುವ ವಿಕಿಪೀಡಿಯ ಈಗ ಹಲವು ವಿದೇಷಿ ಭಾಷೆಗಳಲ್ಲಿ ಮಾತ್ರವಲ್ಲದೆ ಅನೇಕ ಭಾರತೀಯ ಭಾಷೆಗಳಲ್ಲಿ ಕೂಡ ಲಭ್ಯವಿದೆ.
ವಿಕಿಪೀಡಿಯ ಅನ್ಯ ವಿಶ್ವಕೋಶಗಳಿಂದ ಬೇರೆಯಾಗಿದ್ದು, ಇದನ್ನು ಸದಸ್ಯರು ಮಾತ್ರವಲ್ಲದೆ ಯಾವುದೇ ಓದುಗರು ಕೂಡ ಸಂಪಾದಿಸಬಹುದು. ಸಂಪಾದಿಸಿದ ಲೇಖನಗಳು ಓದುಗರಿಗೆ ತಕ್ಷಣವೇ ಕಾಣಸಿಗುತ್ತದೆ. ಅದಲ್ಲದೆ ಓಂದು ವಿಷಯವನ್ನು ಪ್ರತಿ ಬಾರಿ ಸಂಪಾದಿಸಿದಾಗಲೂ ಆ ವಿಷಯ ಪುಟದ ಬದಲಾವಣೆಗಳು "ಇತಿಹಾಸ" ಪುಟದಲ್ಲಿ ದಾಖಲಾಗುತ್ತದೆ. ಇದರಿಂದಾಗಿ ಯಾವುದೇ ಹಿಂದಿನ ಮತ್ತು ಅದರ ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು ಹಾಗು ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು. "ಚರ್ಚೆ" ಪುಟಗಳು ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕರಿಸುತ್ತದೆ.
ಕನ್ನಡ ಭಾಷೆಯಲ್ಲಿನ ವಿಕಿಪೀಡಿಯದ ಬಗ್ಗೆ ಮಾಹಿತಿಗಾಗಿ ಕನ್ನಡ ವಿಕಿಪೀಡಿಯ ಲೇಖನವನ್ನು ನೋಡಿ.
