ವರರುಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರರುಚಿ ಪ್ರಾಚೀನ ಕವಿ ಹಾಗೂ ಶಾಸ್ತ್ರಕಾರ. ಪಾಣಿನಿಯ ಆನಂತರದವ.[೧] ಪಾಣಿನಿ, ವರರುಚಿ ಮತ್ತು ಪತಂಜಲಿ (ಮಹಾಭಾಷ್ಯಕಾರ) ಎಂಬ ಮುನಿತ್ರಯದ ಫಲವಾಗಿ ಶಿಷ್ಟಭಾಷೆಗೊಂದು ಸಾರ್ವಕಾಲಿಕವಾದ ನಿಯತತ್ವ ಉಂಟಾಯಿತು, ಭಾರತಾದ್ಯಂತ ಸಂಸ್ಕøತ ಭಾಷೆ ಒಂದೇ ರೂಪದ್ದಾಯಿತು. ಇವನಿಗೆ ಕಾತ್ಯಾಯನ, ಕಾತ್ಯ ಎಂಬ ಹೆಸರುಗಳೂ ಇವೆ.

ಈತ ಪಾಣಿನಿಯ ಅಷ್ಟಾಧ್ಯಾಯಿಗೆ ಸೂತ್ರ ವೃತ್ತಿಗಳನ್ನು (ವಾರ್ತಿಕ) ಬರೆದಿದ್ದಾನೆ. ಇವನು ತನ್ನ ಕಾಲದ ಹೊತ್ತಿಗೆ ಶಿಷ್ಟಭಾಷೆಯಲ್ಲಿ ಉಂಟಾಗಿದ್ದ ಬೆಳೆವಣಿಗೆಯನ್ನು ಗಮನಿಸಿ ಪಾಣಿನಿಯ ಸೂತ್ರಗಳಿಗೆ ತಿದ್ದುಪಡಿಗಳನ್ನು ಸೂಚಿಸಿದ್ದಾನೆ. ಇದರಿಂದ ಅವನ ಕಾಲಕ್ಕೆ ಸಂಸ್ಕøತ ಜೀವಂತ ಭಾಷೆ ಆಗಿತ್ತೆಂಬುದು ಸ್ಪಷ್ಟ. ಅರ್ಥಾತ್ ಈ ಭಾಷೆ ಇನ್ನೂ ಬೆಳೆಯುತ್ತಿತ್ತು. ಈತ ಪಾಣಿನಿಯ ಶೈಲಿಯನ್ನೇ ಅಳವಡಿಸಿಕೊಂಡಿದ್ದಾನೆ.

ಈತ ವಾರರುಚಿಕಾವ್ಯ ಮತ್ತು ಉಭಯಾಭಿಸಾರಿಕಾಭಾಣ ಎಂಬ ಕೃತಿಗಳನ್ನೂ ರಚಿಸಿದುದಾಗಿ ತಿಳಿದು ಬರುತ್ತದೆ. ಈತ ಕೋಶವೊಂದನ್ನೂ ಬರೆದುದಾಗಿ ಹರ್ಷವರ್ಧನನಿಂದ ತಿಳಿದುಬರುತ್ತದೆ. ಇದು ಪೂರ್ಣವಾಗಿ ದೊರೆತಿಲ್ಲ. ಮದರಾಸು ಓರಿಯಂಟಲ್ ಲೈಬ್ರರಿಯಲ್ಲಿ ಉಪಲಬ್ಧವಿರುವ ಹಸ್ತಪ್ರತಿಯಲ್ಲಿ ಈತನ ಕೋಶದ ಕೇವಲ ಲಿಂಗಮಾತ್ರ ಉಕ್ತವಾಗಿದೆ. “ಆದರೆ ಕ್ಷೀರಸ್ವಾಮಿಯು ಅಲ್ಲಲ್ಲಿ ಉದಾಹರಿಸಿರುವ ಕಾತ್ಯನ ಕೋಶದ ವಾಕ್ಯಗಳನ್ನು ನೋಡಿದರೆ ಅದು ಎಷ್ಟು ಮಾತ್ರಕ್ಕೂ ಲಿಂಗಾನುಶಾಸನ ವಾಗಿರದೆ ನಾಮಗಳ ಅನುಶಾಸನವೆಂದೇ ತಿಳಿದುಬರುವುದು”. ಈ ನಿಘಂಟುವಿಗೆ “ನಾಮಮಾಲೆ” ಎಂಬ ಹೆಸರಿತ್ತೆಂದು ವಾಮನನ ಸೂತ್ರದಿಂದ ತಿಳಿದುಬರುತ್ತದೆ. ಕ್ಷೀರಸ್ವಾಮಿ ಕೆಲವೆಡೆಗಳಲ್ಲಿ ಪ್ರಮಾಣ ರೂಪದಲ್ಲೂ ಮತ್ತೆ ಕೆಲವೆಡೆ ಪೂರ್ವಪಕ್ಷರೂಪದಲ್ಲೂ ಉದಾಹರಿಸಿರುವ ವಾಕ್ಯಗಳನ್ನೆಲ್ಲ ಕ್ರೋಡೀಕರಿಸಿ ನೋಡಿದರೆ ಲಿಂಗಮಾತ್ರ ತಂತ್ರ ಹಾಗೂ ನಾಮಮಾತ್ರ ತಂತ್ರ ಎಂಬ ಏನೆಲ್ಲ ವಿಷಯಗಳನ್ನು ಕುರಿತ ಗ್ರಂಥವನ್ನು ಈತ ಬರೆದಿರಬಹುದು. ಕಾಲಕ್ರಮದಲ್ಲಿ ಅವು ಅಭ್ಯಾಸಿಗಳ ಇಷ್ಟದ ಅಭ್ಯಾಸಕ್ಕೆ ಬೇಕಾದಂತೆ ಬೇಕಾದಾಗ ಪ್ರತಿಗೊಂಡು ಬೇರೆ ಬೇರೆಯಾಗಿ ಮಾರ್ಪಟ್ಟು ಎರಡು ಗ್ರಂಥಗಳ ಸ್ವರೂಪವನ್ನು ಪಡೆದಿರಬಹುದು. ಈ ಸಂಗತಿಗಳು ಕ್ಷೀರಸ್ವಾಮಿಯ ಅಮರಕೋಶದ ವ್ಯಾಖ್ಯಾನದಲ್ಲಿ ಬಂದಿರುವುದರಿಂದ ವರರುಚಿಯ ಕೃತಿಯೂ ಅಮರಕೋಶದಂತಹ ಕೃತಿಯಾಗಿರಬಹುದು. ಆತನ ಸಮಗ್ರಕೋಶ ಲಭ್ಯವಾಗದಿರುವುದರಿಂದ ಈ ಕುರಿತು ಹೆಚ್ಚು ಹೇಳಲು ಸಾಧ್ಯವಿಲ್ಲ.

ಉಲ್ಲೇಖ[ಬದಲಾಯಿಸಿ]

  1. Encyclopedia of Indian philosophies: The philosophy of the grammarians |editor1=Harold G. Coward |editor-link1=Harold Coward |editor2=Karl H. Potter |editor3= K. Kunjunni Raja|publisher=Motilal Banarsidass Publishers|location=Delhi|year=1990|pages=458–459|isbn=978-81-208-0426-5
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ವರರುಚಿ&oldid=1164157" ಇಂದ ಪಡೆಯಲ್ಪಟ್ಟಿದೆ