ಲೇಪಾಕ್ಷಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೇಪಾಕ್ಷಿ
ಲೇಪಾಕ್ಷಿ
ಮಂಡಲ್
Population
 (2001)
 • Total೪೨,೧೦೧

ಲೇಪಾಕ್ಷಿ (ತೆಲುಗು:లేపాక్షి) ಆಂಧ್ರಪ್ರದೇಶ ರಾಜ್ಯದ ಸತ್ಯಸಾಯಿ ಜಿಲ್ಲೆಯ ಒಂದು ಚಾರಿತ್ರಿಕ ಪಟ್ಟಣ. ಲೇಪಾಕ್ಷಿ ದೇವಸ್ಥಾನದಿಂದ ಸ್ವಲ್ಪ ದೂರದಲ್ಲಿ ಬೃಹದಾಕಾರದ ನಂದಿಯ ವಿಗ್ರಹವಿದೆ. ಇದು ೧೬ ಅಡಿ ಎತ್ತರ ಮತ್ತು ೨೭ ಅಡಿ ಉದ್ದವಿದೆ. ಇದು ಭಾರತದಲ್ಲಿಯೇ ಅತಿ ಎತ್ತರವಾದ ನಂದಿಯ ವಿಗ್ರಹ. ಲೇಪಾಕ್ಷಿ ದೇವಸ್ಥಾನದ ಚಿತ್ರಣಗಳಲ್ಲಿ ಕಂಡುಬರುವ ವಸ್ತ್ರ ವಿನ್ಯಾಸಗಳನ್ನು ಈಗ ಬಟ್ಟೆಗಳ ಮೇಲೆ ಮುದ್ರಿಸಲಾಗುತ್ತಿದ್ದು, ಲೇಪಾಕ್ಷಿ ಸೀರೆ ಮತ್ತು ಬಟ್ಟೆಗಳೆಂದೇ ಪ್ರಸಿದ್ಧಿ ಪಡೆದು ಮರುಕಟ್ಟೆಯಲ್ಲಿ ತುಂಬಾ ಬೇಡಿಕೆಯಲ್ಲಿವೆ. ಇದು "ಶೈವರ ಅಜಂತಾ" ಎಂದು ಪ್ರಸಿದ್ಧವಾಗಿದೆ

ಇತಿಹಾಸ[ಬದಲಾಯಿಸಿ]

ವಿಜಯನಗರ ಅರಸರ ಆಳ್ವಿಕೆಯ ಸಮಯದಲ್ಲಿ ಈ ದೇವಸ್ಥಾನವನ್ನು ಕಟ್ಟಲಾಗಿದೆ. ಕೃಷ್ಣದೇವರಾಯನ ತಮ್ಮ ಅಚ್ಯುತರಾಯನ ಕಾಲದಲ್ಲಿ ಪೆನುಗೊಂಡ ಪ್ರದೇಶಕ್ಕೆ ಕೋಶಾಧಿಕಾರಿಯಾಗಿದ್ದ ವಿರೂಪಣ್ಣ ಈ ದೇವಸ್ಥಾನ ಕಟ್ಟಿಸಿದರು ಎನ್ನುವ ಮಾಹಿತಿ ಇದೆ. ರಾಮಾಯಣದ ಕಾಲದಲ್ಲಿ ರಾವಣ ಸೀತೆಯನ್ನು ಅಪಹರಿಸಿಕೊಂಡು ಹೋಗುವಾಗ ಜಟಾಯು ಪಕ್ಷಿ ರಾವಣನನ್ನು ತಡೆಯಿತಂತೆ. ರಾವಣ ಕೋಪಗೊಂಡು ಪಕ್ಷಿಯ ರೆಕ್ಕೆಗಳನ್ನೆ ಕತ್ತರಿಸಿದನಂತೆ. ಕೆಳಗೆ ಬಿದ್ದ ಪಕ್ಷಿ ಶ್ರೀರಾಮ ಆ ಮಾರ್ಗವಾಗಿ ಬರುವುದನ್ನು ಕಾದು ರಾವಣ ಸೀತಾಮಾತೆಯನ್ನು ಕದ್ದೊಯ್ದದ್ದನ್ನು ತಿಳಿಸಿತಂತೆ. ರಾಮನು ಅದನ್ನು ಲೇ ಪಕ್ಷಿ ಎಂದು ಕರೆದು ಅದು ಲಯದಲ್ಲಿ ಲೀನವಾಗುವಂತೆ ಮಾಡಿದನಂತೆ. "ಲೇ ಪಕ್ಷಿ" ಎಂದದ್ದೆ, ಆ ಸ್ಥಳಕ್ಕೆ 'ಲೇಪಾಕ್ಷಿ' ಎಂಬ ಹೆಸರು ಬರಲು ಕಾರಣವಾಯಿತು.

ದೇವಾಲಯ ವಿನ್ಯಾಸ[ಬದಲಾಯಿಸಿ]

ದೇವಸ್ಥಾನವು ೭ ಪ್ರಾಕಾರಗಳಷ್ಟು ವಿಸ್ತಾರವಾಗಿದ್ದು ಈಗ ಮೂರು ಪ್ರಾಕಾರಗಳು ಮಾತ್ರ ಉಳಿದಿವೆ. ಉಳಿದದ್ದು ಊರು ಬೆಳೆದಂತೆ ಊರ ಒಳಗೆ ಸೇರಿಹೋಗಿದೆ. ಈ ದೇವಸ್ಥಾನವನ್ನು ಕೂರ್ಮಶೈಲವೆಂಬ ಆಮೆಯ ಆಕಾರದ ಬೆಟ್ಟದ ಮೇಲೆ ಕಟ್ಟಲಾಗಿದೆ. ಬದಿಯಿಂದ ಕಲ್ಲುಗಳನ್ನು ಜೋಡಿಸಿದ್ದಾರೇ ವಿನಾ ಅದಕ್ಕಾಗಿ ತಳಪಾಯವಾಗಲಿ ಅಥವಾ ಆಧಾರವಾಗಲಿ ಕಂಡುಬರುವುದಿಲ್ಲ. ದೇವಸ್ಥಾನದ ಮೊದಲ ಪ್ರಾಕಾರದ ಸ್ತಂಭಗಳಲ್ಲಿ ಶಿವ ಪಾರ್ವತಿಯರ ಮುಂದೆ ರಂಭೆ ನಾಟ್ಯವಾಡುವುದನ್ನು ಮತ್ತು ಅಲ್ಲಿನ ಸಭಾಸದರಾಗಿ ಮುನಿವರ್ಯರೂ ಹಾಗು ಮತ್ತಿತರರು ವೀಕ್ಷಿಸುತ್ತಿರುವ ದೃಶ್ಯ ಮತ್ತು ರಂಭೆಯು ಬೃಹದೇಶ್ವರ(ನಾಟ್ಯ ಗುರು) ರನ್ನೂ ನೋಡುತ್ತಾ ನರ್ತನ ಮಾಡುವಂತಿದೆ. ಆಸ್ಥಾನದಲ್ಲಿ ಪರಮೇಶ್ವರ, ಪಾರ್ವತಿ ಮತ್ತಿತರರು ಕುಳಿತು ನರ್ತನ ನೋಡುತ್ತಿರುವ ಕೆತ್ತನೆಗಳಿವೆ. ಈ ಸ್ತಂಭಗಳಿಗೆ ಯಾವುದೇ ಆಧಾರವಿಲ್ಲ. ಅದನ್ನು ಹಾಗೆಯೆ ನಿಲ್ಲಿಸಲಾಗಿದೆ. ಮೇಲ್ಛಾವಣಿಯಲ್ಲಿನ ಕಮಲದಲ್ಲಿ ಗುರುತ್ವಾಕರ್ಷಣೆಯ ಬಲವನ್ನು ಅಳವಡಿಸಿದ್ದಾರಂತೆ. ಇಲ್ಲಿರುವ ಬಲ ಬದಿಯ ೮ ಅಡಿ ಎತ್ತರದ ಸ್ತಂಭ ಒಂದು ಕೆಳಗಿನ ನೆಲಕ್ಕೆ ತಾಗದೆ ನಿಂತಿದೆ. ಅಂದರೆ ಸ್ತಂಭದ ಬುಡ ಕಲ್ಲಿನ ಮೇಲೆ ನಿಂತಿಲ್ಲ. ಮೊದಲೆಲ್ಲಾ ಬಟ್ಟೆ ಅಥವಾ ಕಾಗದವನ್ನು ಒಂದು ಕಡೆಯಿಂದ ಹಾಕಿ ಮತ್ತೊಂದು ಕಡೆಯಿಂದ ತೆಗೆಯುತ್ತಿದ್ದರಂತೆ. ಆಂಗ್ಲ ಇಂಜಿನಿಯರ್ ಒಬ್ಬನಿಗೆ ಇದು ಸಾಧ್ಯವಾಗದ ಮಾತು ಎನಿಸಿ ಆ ಸ್ತಂಭವನ್ನು ಸರಿಸಿದಾಗ ಆಲ್ಲಿದ್ದ ಸುತ್ತಲಿನ ಸ್ತಂಭಗಳು ಅಲ್ಲಾಡತೊಡಗಿದಾಗ ಅವಕ್ಕೆ ಹಾನಿಯಾಗುವುದೆಂಬ ಅಂಶ ಅವನಿಗೆ ಮನವರಿಕೆಯಾಯಿತಂತೆ. ಹಾಗೆ ಅವನು ದೂಡಲು ಯತ್ನಿಸಿದ ಸ್ತಂಭ ಮಾತ್ರ ಒಂದು ಬದಿ ನೆಲದ ಮೇಲೆ ಕುಳಿತಿದೆ ಈಗ.

ವಿರೂಪಣ್ಣ ಕುಟುಂಬ[ಬದಲಾಯಿಸಿ]

  • ವಿರೂಪಣ್ಣನ ಮನೆ ದೇವರು ವೀರಭದ್ರ. ಇಲ್ಲಿ ವೀರಭದ್ರಸ್ವಾಮಿ ಮುಖ್ಯ ಗರ್ಭಗುಡಿಯಲ್ಲಿದೆ. ವೀರಭದ್ರ ವಿರೂಪಣ್ಣನವರ ಕನಸಿನಲ್ಲಿ ಬಂದು ದೇವಸ್ಥಾನ ಕಟ್ಟಿಸುವಂತೆ ಆಣತಿಯಿತ್ತನಂತೆ. ವೀರಭದ್ರನ ಅಪ್ಪಣೆಯಂತೆ ಈ ದೇವಸ್ಥಾನ ನಿರ್ಮಿತವಾಗಿದೆ. ಗರ್ಭಗುಡಿಯಲ್ಲಿ ವೀರಭದ್ರನ ವಿಗ್ರಹವಿದೆ. ಕಾಲ ಬಳಿಯಲ್ಲಿ ದಕ್ಷನ ತಲೆಯನ್ನೂ ಮತ್ತು ವೀರಭದ್ರನ ಉದ್ಭವವನ್ನೂ ನಾವು ನೋಡಬಹುದು.
  • ಅಷ್ಟಲ್ಲದೇ ಇಲ್ಲಿಯ ಮೇಲ್ಚಾವಣಿಯಲ್ಲಿ ವಿರೂಪಣ್ಣ ಕುಟುಂಬ ಸಮೇತರಾಗಿ ವೀರಭದ್ರನನ್ನು ಪೂಜಿಸುವ, ಅತೀ ದೊಡ್ಡದಾದ ಚಿತ್ರಣವನ್ನು ಸುಂದರವಾಗಿ ಬಿಡಿಸಲಾಗಿದೆ. ಪಕ್ಕದಲ್ಲಿ ದೊಡ್ಡದಾದ ಬಂಡೆ ಕಲ್ಲಿದೆ. ಆದರ ಒಳಗಿನ ಗುಹೆಯಲ್ಲಿ ಅಗಸ್ತ್ಯ ಮುನಿಗಳು ಕುಳಿತು ತಪಸ್ಸನ್ನು ಮಾಡಿದ್ದರಂತೆ. ಗರ್ಭಗುಡಿಯ ಒಳಗಿನಿಂದ ಈ ಬಂಡೆಯ ಒಳಭಾಗ ನೋಡಬಹುದು.

ಐತಿಹ್ಯ[ಬದಲಾಯಿಸಿ]

  • ಎರಡನೆ ಪ್ರಾಕಾರಕ್ಕೆ ಹೋದಂತೆ ಬೃಹತ್ ಆಕಾರದ ಏಳು ಹೆಡೆಯ ನಾಗನ ಮೇಲೆ ಕುಳಿತಿರುವ ನಾಗಲಿಂಗವಿದೆ. ನಾಗಲಿಂಗನ ಕೆತ್ತನೆಯ ಕತೆ ಹೀಗಿದೆ. ಪ್ರಧಾನ ಶಿಲ್ಪಿಗಳು ಊಟ ಮಾಡಲು ಬಂದಾಗ ಅವರ ತಾಯಿ ಇನ್ನೂ ಅಡುಗೆ ಮಾಡುತ್ತಿದ್ದರಂತೆ.

ತನ್ನ ತಾಯಿ ಅಡುಗೆ ಮುಗಿಸುವಷ್ಟರಲ್ಲಿ ಶಿಲ್ಪಿಗಳು ಈ ನಾಗಲಿಂಗವನ್ನು ಕೆತ್ತಿದ್ದರಂತೆ. ನಾಗಲಿಂಗನ ಎದುರಿನ ಕೋಣೆಯೇ ಅಡುಗೆ ಮನೆಯಾಗಿದ್ದು, ಅದಕ್ಕೊಂದು ಪರದೆ ಕಟ್ಟಿ ತಾವು ನಾಗಲಿಂಗನ ಕೆತ್ತನೆಗೆ ತೊಡಗಿಸಿಕೊಂಡಿದ್ದರಂತೆ.

  • ತಾಯಿ ಅಡುಗೆ ಮುಗಿಸಿ ಹೊರಬಂದು ನಾಗಲಿಂಗನನ್ನು ನೋಡಿ ಆಶ್ಚರ್ಯಪಟ್ಟಾಗ ಅವರ ಕಣ್ಣು ತಾಗಿ ನಾಗಲಿಂಗ ಬಿರುಕು ಬಿಟ್ಟಿತಂತೆ. ಆದರೆ ಈಗ ಅದನ್ನು ಸಿಮೆಂಟಿನಿಂದ ಮುಚ್ಚಲಾಗಿದೆ. ನಾಗಲಿಂಗನ ಹಿಂಬಾಗದಲ್ಲಿ ದೊಡ್ಡ ಗಣಪತಿ ವಿಗ್ರಹವಿದೆ. ಮುಖ್ಯ ದೇವರು ವೀರಭದ್ರನಾದರೂ ಮೊದಲು ಗಣಪತಿ ದರ್ಶನ ಮಾಡಬೇಕು ಎನ್ನುವುದು ಇದರ ಉದ್ದೇಶ.
  • ಅದರ ಪಕ್ಕದಲ್ಲಿಯೆ ಶ್ರೀಕಾಳಹಸ್ತಿಯಲ್ಲಿ ಜೇಡ, ಹಾವು ಮತ್ತು ಆನೆ ಹಾಗು ಬೇಡರ ಕಣ್ಣಪ್ಪ ಶಿವನನ್ನು(ಲಿಂಗ) ಪೂಜಿಸುವ ಚಿತ್ರಣಗಳನ್ನು ಕೆತ್ತಲಾಗಿದೆ. ಮುಂದಿನ ಭಾಗದಲ್ಲಿ ಅಪೂರ್ಣವಾದ ಪಾರ್ವತಿ ಪರಮೇಶ್ವರರ ಕಲ್ಯಾಣ ಮಂಟಪವಿದೆ. ಮಂಟಪ ಹಾಗೆ ಅರ್ಧದಲ್ಲಿ ನಿಲ್ಲಲು ಕಾರಣವನ್ನು ಹೀಗೆ ಹೇಳುತ್ತಾರೆ. ವಿರೂಪಣ್ಣನಿಗೆ ಆಗದ ವಿರೋಧಿಗಳು ಆತ ರಾಜ್ಯದ ಖಜಾನೆಯ ಹಣವನ್ನೆಲ್ಲಾ ಹಾಳು ಮಾಡುತ್ತಿದ್ದಾನೆ ಎಂದು ರಾಜನಿಗೆ ಹೇಳಿಕೊಟ್ಟಾಗ ರಾಜನು ವಿರೂಪಣ್ಣನ ಕಣ್ಣುಗಳನ್ನು ಕೀಳುವಂತೆ ಅಜ್ಙೆ ಮಾಡಿದನಂತೆ. ಇದನ್ನು ಕೇಳಿದ ವಿರೂಪಣ್ಣ ಬೇಸರಗೊಂಡು ತನ್ನ ಕಣ್ಣನ್ನು ತಾನೆ ಕಿತ್ತು ಬಿಸುಟನಂತೆ. ಈಗಲೂ ಆ ಜಾಗದಲ್ಲಿ ಕೆಂಪಗೆ ರಕ್ತದಾರೆಯಿದ್ದು ಅದನ್ನು ನಾವು ನೋಡಬಹುದಾಗಿದೆ.
  • ಪಾರ್ವತಿ ಪರಮೇಶ್ವರರ ಕಲ್ಯಾಣ ಮಂಟಪದ ಪ್ರತಿಯೊಂದು ಸ್ತಂಭಗಳ ಕೆತ್ತನೆಯೂ ಅತ್ಯದ್ಭುತವಾಗಿದೆ. ಮದುಮಕ್ಕಳಾದ ಪಾರ್ವತಿ ಪರಮೇಶ್ವರರೂ, ವಸಿಷ್ಟ, ವಿಶ್ವಾಮಿತ್ರ ಮುನಿಗಳೂ ದತ್ತಾತ್ರೇಯ ಆದಿಯಾಗಿ ಎಲ್ಲಾ ದೇವಾನುದೇವತೆಗಳು ಅಲ್ಲಿಯ ಕುಲಪುರೋಹಿತರು, ಹೀಗೆ ಪ್ರತಿಯೊಬ್ಬರೂ ಈ ಮದುವೆಯಲ್ಲಿ ಉಪಸ್ಥಿತರಿರುವ ಕೆತ್ತನೆಗಳಿವೆ.
  • ಮದುವೆಯ ಸಂದರ್ಭದಲ್ಲಿನ ಧಾರೆಯೆರೆಯುವ ದೃಶ್ಯಾವಳಿಯ ಕೆತ್ತನೆ ಮತ್ತು ಪಾರ್ವತಿಯನ್ನು ಹೆಂಗಸರು ವಿವಾಹಕ್ಕಾಗಿ ಸಿದ್ದತೆ ಮಾಡುತ್ತಿರುವುದು, ಹೆಣ್ಣು ತನ್ನ ಹಣೆಯಲ್ಲಿ ಕುಂಕುಮವಿಟ್ಟುಕೊಳ್ಳುವ ವಿಧಾನ, ಮತ್ತು ಹೆಂಗಸರು ಎತ್ತರದ ಹಿಮ್ಮಡಿ ಇರುವ ಚಪ್ಪಲಿ ಧರಿಸುವ ಪದ್ದತಿ ಆಗ ಸಹ ರೂಢಿಯಲ್ಲಿತ್ತು ಎನ್ನುವುದು ಅಲ್ಲಿರುವ ಶಿಲ್ಪಗಳಿಂದ ತಿಳಿಯುತ್ತದೆ.
  • ಹಾಗೆ ಇನ್ನೂ ಮುಂದೆ ಬಂದಾಗ ಆಗಿನ ಕಾಲದಲ್ಲಿ ಉಪಯೋಗಿಸುತ್ತಿದ್ದಂತ ಊಟದ ತಟ್ಟೆಗಳನ್ನೂ ಕೆತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಸೀತಾಪಾದವೆಂದು ಹೇಳುವಲ್ಲಿ ಆಕೆಯ ಬಲಪಾದದ ಗುರುತು ಇದ್ದು, ಹೆಬ್ಬೆಟ್ಟಿನ ಬದಿಯಿಂದ ವರ್ಷದ ಎಲ್ಲಾ ಕಾಲದಲ್ಲಿಯೂ ಅಲ್ಲಿಂದ ನೀರು ಜಿನುಗುತ್ತದಂತೆ. ಅಲ್ಲಿಂದ ಮುಂದೆ ಹಳೆಕನ್ನಡದಲ್ಲಿ ಕೆತ್ತಿದ ಶಾಸನವಿದೆ.


ಉಲ್ಲೇಖಗಳು[ಬದಲಾಯಿಸಿ]