ಮೈಕ್ರೋ ಫೋರ್ ಥರ್ಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲಿ ಲೆನ್ಸ್ ಬದಲಾಯಿಸಲು ಆಗುವುದಿಲ್ಲ. ಅದು ಏನಿದ್ದರೂ ಎಸ್‌ಎಲ್‌ಆರ್ ಕ್ಯಾಮರಾಗಳ ಸವಲತ್ತು. ಆದರೆ ಎಂದೆಂದಿಗೂ ಹಾಗೆಯೇ ಆಗಬೇಕಾಗಿಲ್ಲ. ಕೆಲವು ಕ್ಯಾಮರಾ ತಯಾರಕರು ಏಮ್ ಆಂಡ್ ಶೂಟ್ ಕ್ಯಾಮರಾಗಳಲ್ಲೂ ಲೆನ್ಸ್ ಬದಲಾಯಿಸುವ ಸವಲತ್ತನ್ನು ನೀಡಲು ತೊಡಗಿದ್ದಾರೆ. ಇಂತಹ ಕ್ಯಾಮರಾಗಳಿಗೆ ಮೈಕ್ರೋ ಫೋರ್ ಥರ್ಡ್ (Micro Four Thirds system) ಎಂಬ ಹೆಸರಿದೆ. ಇದನ್ನು ಒಲಿಂಪಸ್ ಮತ್ತು ಪಾನಾಸೋನಿಕ್ ಕಂಪೆನಿಗಳವರು ಜೊತೆ ಸೇರಿ ಪ್ರಾರಂಭಿಸಿದರು. ಇದನ್ನು ಜಾಗತಿಕ ಶಿಷ್ಟತೆ ಎಂದು ಎಲ್ಲರೂ ಬಳಸುವಂತಾಗಲಿ ಎಂಬುದು ಅವರ ಆಶೆಯಾಗಿತ್ತು. ಆದರೆ ಹಾಗಾಗಲಿಲ್ಲ. ಏನಿದು ಮೈಕ್ರೋ ಫೋರ್ ಥರ್ಡ್ ಎಂದರೆ?

ಫೋರ್ ಥರ್ಡ್ ಅಂದರೆ 4:3 ರ ಅನುಪಾತ ಎಂದು. 35ಮಿಮಿ ಫಿಲ್ಮಿನಲ್ಲಿ ಫಿಲ್ಮಿನ ಅಗಲ ಮತ್ತು ಎತ್ತರದ ಅನುಪಾತ 3:2 ಇತ್ತು ಡಿಎಸ್‌ಎಲ್‌ಆರ್ ಕ್ಯಾಮರಾಗಳಿಗೆ ಬಂದಾಗ ಅದು 4:3 ಆಯಿತು ಅದನ್ನೇ ಫೋರ್ ಥರ್ಡ್ ಎಂದು ಕರೆದರು. ಈ ನಮೂನೆಯ ಕ್ಯಾಮರಾಗಳಲ್ಲಿ ಕನ್ನಡಿ, ಪೆಂಟಾಪ್ರಿಸಂ ಎಲ್ಲ ಇರುತ್ತವೆ. ಆದುದರಿಂದ ಇವುಗಳ ಗಾತ್ರ ದೊಡ್ಡದಾಗಿರುತ್ತದೆ. ಮೈಕ್ರೋ ಫೋರ್ ಥರ್ಡ್‌ಗಳಲ್ಲಿ ಬೆಳಕನ್ನು ಮೇಲಕ್ಕೆ ಕಳುಹಿಸಿ ಅಲ್ಲಿಂದ ಪೆಂಟಾಪ್ರಿಸಂ ಮೂಲಕ ಐಪೀಸ್‌ನಲ್ಲಿ ನೋಡುವ ವ್ಯವಸ್ಥೆ ಇರುವುದಿಲ್ಲ. ಬೆಳಕು ನೇರವಾಗಿ ಸಂವೇದಕ (ಸೆನ್ಸರ್) ಮೇಲೆ ಬೀಳುತ್ತದೆ. ಎಸ್‌ಎಲ್‌ಆರ್‌ಗಳಂತೆ ಇಲ್ಲೂ ಲೆನ್ಸ್ ಬದಲಾಯಿಸಬಹುದು. ಫೋರ್ ಥರ್ಡ್ ಕ್ಯಾಮರಾಗಳಲ್ಲಿ 4:3ರ ಅನುಪಾತ ಇರುತ್ತದೆ. ಆದರೆ ಮೈಕ್ರೋ ಫೋರ್ ಥರ್ಡ್ ಕ್ಯಾಮರಾಗಳಲ್ಲಿ ಈ ಅನುಪಾತವಲ್ಲದೆ ಹೈಡೆಫಿನಿಶನ್ ಅಂದರೆ 16:9ರ ಅನುಪಾತವೂ ಇರುತ್ತದೆ. ಆದುದರಿಂದಲೇ ಈ ಮೈಕ್ರೋ ಎಂಬ ಹೆಚ್ಚಿಗೆ ಪದ ಜೋಡಿಕೊಂಡಿದೆ. ಇವುಗಳಲ್ಲೂ ಲೆನ್ಸ್ ಬದಲಾಯಿಸಬಹುದು. ಸರಿಯಾದ ಅಡಾಪ್ಟರ್ ಇದ್ದಲ್ಲಿ ಯಾವ ಲೆನ್ಸ್ ಬೇಕಿದ್ದರೂ ಬಳಸಬಹುದು. ಹೀಗಿದ್ದರೂ ಇದು ಜಾಗತಿಕ ಶಿಷ್ಟತೆಯಾಗಿಲ್ಲ.

ಈ ಮಾದರಿಯ ಕ್ಯಾಮರಾಗಳಲ್ಲಿ ಸಂವೇದಕದ ಗಾತ್ರ ಡಿಎಸ್‌ಎಲ್‌ಆರ್ ಕ್ಯಾಮರಾಗಳ ಸಂವೇದಕಕ್ಕಿಂತ ಕಡಿಮೆ ಇರುತ್ತದೆ. ಅಂತೆಯೇ ಲೆನ್ಸ್‌ನ ವ್ಯಾಸವೂ ಕಡಿಮೆ ಇರುತ್ತದೆ. ಹೆಚ್ಚು ಮೆಗಾಪಿಕ್ಸೆಲ್ ಎಂದು ಬರೆದಿದ್ದರೂ ಸಂವೇದಕದ ಒಟ್ಟು ಗಾತ್ರವೇ ಕಡಿಮೆ ಇರುವುದಿರಿಂದ ಹಾಗೂ ಲೆನ್ಸ್‌ನ ವ್ಯಾಸ ಕಡಿಮೆ ಇರುವುದರಿಂದ ಇವು ಡಿಎಸ್‌ಎಲ್‌ಆರ್ ಕ್ಯಾಮರಾಗಳ ಗುಣಮಟ್ಟವನ್ನು ತಲುಪುವುದಿಲ್ಲ. ಆದರೆ ಕನ್ನಡಿ, ಪೆಂಟಾಪ್ರಿಸಂ ಇಲ್ಲದಿರುವುದರಿಂದ ಕ್ಯಾಮರಾದ ಗಾತ್ರ ಕಡಿಮೆಯಾಗಿರುತ್ತದೆ. ಏಮ್ ಆಂಡ್ ಶೂಟ್ ಕ್ಯಾಮರಾ ಆಗಿದ್ದೂ ಲೆನ್ಸ್ ಬದಲಾಯಿಸಬಲ್ಲ ಸವಲತ್ತು ಈ ಕ್ಯಾಮರಾಗಳಿಗಿವೆ.

ಈಗ ಇದೇ ಮಾದರಿಯ ಎರಡು ಕ್ಯಾಮರಾಗಳನ್ನು ನಿಕಾನ್ ಕಂಪೆನಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವುಗಳೇ ನಿಕಾನ್ 1 J1 ಮತ್ತು V1. ಇಲ್ಲಿ ನಿಕಾನ್ 1 ಎಂಬುದು ಈ ಹೊಸ ಮಾದರಿಯ ಶ್ರೇಣಿ ಆಗಿದೆ. ಅಂದರೆ ಇನ್ನು ಮುಂದೆ ನಿಕಾನ್ 1 ಎಂಬ ಹೆಸರಿನ ಹಲವಾರು ಕ್ಯಾಮಾರಾಗಳು ಮಾರುಕಟ್ಟೆಗೆ ಬರಲಿವೆ