ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಮುದ್ದೇಬಿಹಾಳ ವಿಧಾನ ಸಭಾ ಕ್ಷೇತ್ರ(2018ರಂತೆ)ದಲ್ಲಿ 1,03,038 ಪುರುಷರು ಹಾಗೂ 97,844 ಮಹಿಳೆಯರು ಸೇರಿ ಒಟ್ಟು 2,00,882 ಮತದಾರರಿದ್ದಾರೆ.
ಕ್ಷೇತ್ರದ ಇತಿಹಾಸ
[ಬದಲಾಯಿಸಿ]ಹನ್ನೆರಡನೇ ಶತಮಾನದ ಶರಣ ಶ್ರೇಷ್ಠ ಬಸವಣ್ಣನವರ ಧರ್ಮ ಪತ್ನಿ ನೀಲಾಂಬಿಕೆ ಐಕ್ಯರಾದ ಸ್ಥಳ ತಂಗಡಗಿ. ವಿಜಯನಗರ ಸಾಮ್ರಾಜ್ಯ ಪತನಕ್ಕೆ ಕಾರಣೀಭೂತವಾದ ಯುದ್ಧ ನಡೆದಿದ್ದು ರಕ್ಕಸ-ತಂಗಡಗಿಯಲ್ಲೇ. ಇಲ್ಲಿನ ಮಿಣಜಗಿಯ ಪರ್ಸಿ ಎಲ್ಲೆಡೆ ಪ್ರಸಿದ್ಧಿ. ಮಹಿಳಾ ರಾಜಕಾರಣಿಗೆ ಮನ್ನಣೆ ನೀಡಿದ ಜಿಲ್ಲೆಯ ಏಕೈಕ ವಿಧಾನಸಭಾ ಕ್ಷೇತ್ರ ಮುದ್ದೇಬಿಹಾಳ. ನಾಲ್ಕು ದಶಕಗಳಿಂದ ಎರಡು ಮನೆತನಕ್ಕಷ್ಟೇ ಮನ್ನಣೆ ನೀಡಿರುವುದು ಇಲ್ಲಿನ ವೈಶಿಷ್ಟ್ಯ.
ಆಂಗ್ಲರ ಅಧಿಪತ್ಯ ಅಳಿದು 70 ವರ್ಷಗಳಾದರೂ ಮುದ್ದೇಬಿಹಾಳ ವಿಧಾನಸಭೆ ಕ್ಷೇತ್ರದ ಮತದಾರ ಪ್ರಭು ಇನ್ನೂ ದೇಸಗತಿ ಮನೆತನಕ್ಕೆ ಮಣೆ ಹಾಕುತ್ತಿರುವುದು ಕ್ಷೇತ್ರದ ವಿಶೇಷ. ಊಳುವವನೇ ಒಡೆಯ ಕಾಯ್ದೆಯನ್ವಯ ನೂರಾರು ಎಕರೆ ಜಮೀನು ಬಿಟ್ಟುಕೊಟ್ಟ ಶಾಸಕ ಸಿ.ಎಸ್. ನಾಡಗೌಡ ಹಾಗೂ ಜಗದೇವರಾವ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು ಅಧಿಕಾರದ ಫಲ ನೀಡುತ್ತಲೇ ಇದ್ದಾರೆ. 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಚುನಾವಣೆವರೆಗಿನ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.
1994ರಲ್ಲಿ ನಡೆದ ಚುನಾವಣೆಯಲ್ಲಿ ಸಚಿವರಾಗಿದ್ದ ಸಿ.ಎಸ್.ನಾಡಗೌಡರನ್ನು ಸೋಲಿಸಿ, ವಿಜಯ ಪತಾಕೆ ಹಾರಿಸಿದ ವಿಮಲಾಬಾಯಿ ದೇಶಮುಖ ಜಿಲ್ಲೆಯ ಎರಡನೇ ಮಹಿಳಾ ಶಾಸಕಿ. ಜನತಾದಳ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯ ನಿರ್ವಹಿಸಿದರು.
ದೇಶಮುಖ ಮನೆತನದ ನಾಯಕ ಜಗದೇವರಾವ ಸಂಗನಬಸಪ್ಪ ದೇಶಮುಖರು ಸತತ ಮೂರು ಬಾರಿ ಕ್ಷೇತ್ರದಲ್ಲಿ ವಿಜಯ ಪತಾಕೆ ಹಾರಿಸಿದ್ದರು. ಅವರ ಅಕಾಲಿಕ ನಿಧನ ಬಳಿಕ ಕ್ಷೇತ್ರ ಕೈ ತಪ್ಪಿತು. ಮಧ್ಯಂತರದಲ್ಲಿ ಅಧಿಕಾರ ಕಸಿದುಕೊಂಡಿದ್ದ ಸಿ.ಎಸ್. ನಾಡಗೌಡರಿಂದ ಮತ್ತೆ ಕ್ಷೇತ್ರ ಕೈವಶ ಮಾಡಿಕೊಳ್ಳುವಲ್ಲಿ ಜಗದೇವರಾವ ಅವರ ಪತ್ನಿ ವಿಮಲಾಬಾಯಿ ಸಫಲರಾದರು. 1994ರಲ್ಲಿ ಅನುಕಂಪದ ಆಧಾರದ ಮೇಲೆ ವಿಮಲಾದೇವಿ ಭರ್ಜರಿ ಜಯಸಾಧಿಸಿದರು.
ಮುದ್ದೇಬಿಹಾಳ ಕೇತ್ರದಿಂದ 6 ಬಾರಿ ಶಾಸಕರಾಗಿ ಆಯ್ಕೆಯಾದ ಸಿ.ಎಸ್.ನಾಡಗೌಡರು ಪಂಚಾಯಿತಿಯಿಂದ ಈ ಮಟ್ಟಕ್ಕೆ ಬೆಳೆದವರು. 1986ರಲ್ಲಿ ನಾಲತವಾಡ ಜಿಪಂ ಕ್ಷೇತ್ರದಿಂದ ಆಯ್ಕೆಯಾಗಿದ್ದ ನಾಡಗೌಡರಿಗೆ 1989ರ ಅಸೆಂಬ್ಲಿ ಚುನಾವಣೆಯಲ್ಲಿ ಅದೃಷ್ಟ ಒಲಿಯಿತು. ಅಲ್ಲಿಂದೀಚೆಗೆ 6 ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯ ಸಚೇತಕ, ಪ್ರಸ್ತುತ ಸರಕಾರದಲ್ಲಿ ದಿಲ್ಲಿ ವಿಶೇಷ ಪ್ರತಿನಿಧಿಯಾಗಿದ್ದಾರೆ.
1957ರಲ್ಲಿ ಸಿದ್ಧಾಂತಿ ಪ್ರಾಣೇಶ ಗುರುಭಟ್ಟ (ಬ್ರಾಹ್ಮಣ), 1972ರಲ್ಲಿ ಮಲ್ಲಪ್ಪ ಮುರಗೆಪ್ಪ ಸಜ್ಜನ(ಗಾಣಿಗ) ಶಾಸಕರಾಗಿ ಆಯ್ಕೆಯಾಗಿದ್ದು ಹೊರತುಪಡಿಸಿದರೆ, ಉಳಿದ ಅವಧಿಗೆ (1978ರಿಂದ 2018ರವರೆಗಿನ ನಾಲ್ಕು ದಶಕಗಳ ಅವಧಿ) ಆಯ್ಕೆಯಾದವರು ಪಂಚಮಸಾಲಿ ಮತ್ತು ರಡ್ಡಿ ಸಮುದಾಯದವರು.
ಸತತ ಮೂರು ಬಾರಿ ಜೆ.ಎಸ್.ದೇಶಮುಖ (ಪಂಚಮಸಾಲಿ), 1994ರಲ್ಲಿ ವಿಮಲಾಬಾಯಿ ದೇಶಮುಖ ಆಯ್ಕೆಯಾದರೆ, ಉಳಿದ 25 ವರ್ಷದ ಅವಧಿ ಸಿ.ಎಸ್.ನಾಡಗೌಡ (ರಡ್ಡಿ) ಶಾಸಕರು. ಈ ಅವಧಿಯಲ್ಲಿ ಸ್ಪರ್ಧೆ ನಡೆದಿದ್ದು, ಈ ಎರಡೂ ಮನೆತನಗಳ ನಡುವೆಯೇ. ಒಮ್ಮೆ ಮಾತ್ರ ಬಿಜೆಪಿಯ ಮಂಗಳಾದೇವಿ ಬಿರಾದಾರ ಪ್ರಬಲ ಪೈಪೋಟಿ ನೀಡಿದ್ದಾರೆ.
ಪಕ್ಷವಾರು ಸಾಧನೆ ಪರಿಗಣಿಸಿದರೆ ಸದರಿ ಕ್ಷೇತ್ರ ಕಾಂಗ್ರೆಸ್ ಪಕ್ಷ ಹೆಚ್ಚಿನ ಸಂಖ್ಯೆಯಲ್ಲಿ ಈ ಕ್ಷೇತ್ರದಲ್ಲಿ ಗೆದ್ದಿದೆ. 1957ರ ಸಾರ್ವತ್ರಿಕ ಚುನಾವಣೆ ಗಣನೆಗೆ ತೆಗೆದುಕೊಳ್ಳುವುದಾದರೆ ಅಂದಿನ ಭಾರತೀಯ ಕಾಂಗ್ರೆಸ್ ಪಕ್ಷದ ಸಿದ್ಧಾಂತಿ ಪ್ರಾಣೇಶ ಗುರುಭಟ್ಟರು, ಆ ಬಳಿಕ ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ, ಹಾಗೂ ಮಲ್ಲಪ್ಪ ಮುರಗೆಪ್ಪ ಸಜ್ಜನ ಸಾಲಾಗಿ ಆಯ್ಕೆಯಾಗಿದ್ದು ಕಾಂಗ್ರೆಸ್ ಸಾಧನೆ. ಪ್ರಪ್ರಥಮ ಬಾರಿಗೆ ಜನತಾ ಪಕ್ಷದಿಂದ ಜಗದೇವರಾವ ಅವರು ಅಧಿಕಾರ ಕಸಿದುಕೊಂಡು ಹ್ಯಾಟ್ರಿಕ್ ಸಾಧನೆ ಮೆರೆದರು.
1966ರಲ್ಲಿ ಲೋಕಸಭೆ ಹಾಗೂ ವಿಧಾನಸಭೆ ಕ್ಷೇತ್ರಗಳ ಪುನರ್ವಿಂಗಡಣೆಯಾದ ಬಳಿಕ ತಾಳಿಕೋಟೆ ಕ್ಷೇತ್ರವು ಮುದ್ದೇಬಿಹಾಳ ಕ್ಷೇತ್ರದಲ್ಲಿ ವಿಲೀನವಾಯಿತು. ಮೊದಲೆರಡು ಚುನಾವಣೆಯಲ್ಲಿ ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿದ್ದ ತಾಳಿಕೋಟೆಯಿಂದ 1957ರಲ್ಲಿ ಕುಮಾರಗೌಡ ಅಡಿವೆಪ್ಪಗೌಡ ಪಾಟೀಲರು ಸ್ವತಂತ್ರ ಅಭ್ಯರ್ಥಿಯಾಗಿ(15,200) ಗೆಲುವು ಸಾಧಿಸಿದರು. ಇವರ ವಿರುದ್ಧ ಭಾರತೀಯ ಕಾಂಗ್ರೆಸ್ ಪಕ್ಷದಿಂದ ಶರಣಯ್ಯ ಬಸಲಿಂಗಯ್ಯ ವಸ್ತ್ರದ (12,804) ಪರಾಜಯಗೊಂಡರು. ಆ ಬಳಿಕ 1962ರಲ್ಲಿ ಗದಿಗೆಪ್ಪಗೌಡ ನಿಂಗನಗೌಡ ಪಾಟೀಲ ಭಾರತೀಯ ಕಾಂಗ್ರೆಸ್ನಿಂದ ಅವಿರೋಧ ಆಯ್ಕೆಯಾದರು.
ಕ್ಷೇತ್ರದ ವಿಶೇಷತೆ
[ಬದಲಾಯಿಸಿ]- ಜಗದೇವರಾವ್ ದೇಶಮುಖರವರು 1985ರಲ್ಲಿ ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಸಚಿವರಾಗಿದ್ದರು.
- ಜಗದೇವರಾವ್ ದೇಶಮುಖರವರು 1988ರಲ್ಲಿ ಎಸ್.ಆರ್.ಬೊಮ್ಮಾಯಿ ಸಂಪುಟದಲ್ಲಿ ಇಂಧನ ಖಾತೆ ಸಚಿವರಾಗಿದ್ದರು.
- ವಿಮಲಾಬಾಯಿ ದೇಶಮುಖರವರು 1996ರಲ್ಲಿ ಜೆ.ಎಚ್.ಪಟೇಲ್ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿದ್ದರು. ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವೆಯಾಗಿ ಕಾರ್ಯನಿರ್ವಹಿಸಿದ್ದರು.
- ಜನತಾ ಪಕ್ಷದಿಂದ ಜಗದೇವರಾವ್ ದೇಶಮುಖರವರು ಹ್ಯಾಟ್ರಿಕ್ ಆಯ್ಕೆಯಾಗಿದ್ದು ಕ್ಷೇತ್ರದ ವಿಶೇಷತೆಯಾಗಿದೆ.
- ಸಿ.ಎಸ್.ನಾಡಗೌಡರು ಕಾರ್ಮಿಕ ಸಚಿವ ಮತ್ತು ಸರ್ಕಾರದ ಮುಖ್ಯ ಸಚೇತಕ, ನವದೆಹಲಿ ವಿಶೇಷ ಪ್ರತಿನಿಧಿಯಾಗಿದ್ದು ಕ್ಷೇತ್ರದ ಮೈಲಿಗಲ್ಲು.
- ಸಿ.ಎಸ್.ನಾಡಗೌಡರು ಕಾಂಗ್ರೆಸ್ ಪಕ್ಷದಿಂದ ಹ್ಯಾಟ್ರಿಕ್ ಬಾರಿಸಿ ಆರು ಬಾರಿ ಆಯ್ಕೆಯಾಗಿದ್ದು ಕ್ಷೇತ್ರದ ಮತ್ತೊಂದು ವಿಶೇಷತೆಯಾಗಿದೆ.
- ನಾಡಗೌಡ ಹಾಗೂ ದೇಶಮುಖ ಮನೆತನಕ್ಕೆ ಇಲ್ಲಿನ ಮತದಾರರು 1978 ರಿಂದ 2018ರವರೆಗೆ ಸುಮಾರು 40 ವರ್ಷಗಳ ಕಾಲ ಕ್ಷೇತ್ರದ ಇತಿಹಾಸ ಗಮನಿಸಿದಾಗ ಹೆಚ್ಚಿನ ಅಧಿಕಾರ ಅನುಭವಿಸಿದ್ದು ಇದೇ ಎರಡು ಮನೆತಗಳು ಎಂಬುದು ಗಮನಾರ್ಹ.
- ಎ.ಎಸ್.ಪಾಟೀಲ(ನಡಹಳ್ಳಿ)ಯವರು ಮೊದಲ ಬಾರಿಗೆ 2018ರಲ್ಲಿ ಬಿಜೆಪಿಯಿಂದ ಗೆದ್ದಿರುವುದು ವಿಶೇಷವಾಗಿದೆ.
- ಎ.ಎಸ್.ಪಾಟೀಲ(ನಡಹಳ್ಳಿ)ಯವರು ಬಿ.ಎಸ್.ಯಡಿಯೂರಪ್ಪನವರ ಸರ್ಕಾರದಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಅಧ್ಯಕ್ಷರಾಗಿದ್ದರು.
ಜನಪ್ರತಿನಿಧಿಗಳ ವಿವರ
[ಬದಲಾಯಿಸಿ]ವರ್ಷ | ವಿಧಾನ ಸಭಾ ಕ್ಷೆತ್ರ | ವಿಜೇತ | ಪಕ್ಷ | ಮತಗಳು | ಉಪಾಂತ ವಿಜೇತ | ಪಕ್ಷ | ಮತಗಳು |
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಕರ್ನಾಟಕ ರಾಜ್ಯ | ||||||
2023 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 79483 | ಎ.ಎಸ್.ಪಾಟೀಲ(ನಡಹಳ್ಳಿ) | BJP | 71846 |
2018 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಎ.ಎಸ್.ಪಾಟೀಲ(ನಡಹಳ್ಳಿ) | BJP | 63512 | ಸಿ.ಎಸ್.ನಾಡಗೌಡ | INC | 54879 |
2013 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 34747 | ವಿಮಲಾಬಾಯಿ ದೇಶಮುಖ | KJP | 22545 |
2008 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 24065 | ಮಂಗಳಾದೇವಿ ಬಿರಾದಾರ | BJP | 21662 |
2004 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 30203 | ವಿಮಲಾಬಾಯಿ ದೇಶಮುಖ | JDS | 27776 |
1999 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 43662 | ವಿಮಲಾಬಾಯಿ ದೇಶಮುಖ | JDU | 32632 |
1994 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ವಿಮಲಾಬಾಯಿ ದೇಶಮುಖ | JD | 39149 | ಸಿ.ಎಸ್.ನಾಡಗೌಡ | INC | 21756 |
1989 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿ.ಎಸ್.ನಾಡಗೌಡ | INC | 31933 | ಜಗದೇವರಾವ್ ದೇಶಮುಖ | JD | 29840 |
1985 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಜಗದೇವರಾವ್ ದೇಶಮುಖ | JNP | 35056 | ಬಸವರಾವ್ ಜಗ್ಗಲ | INC | 16052 |
1983 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಜಗದೇವರಾವ್ ದೇಶಮುಖ | JNP | 21885 | ರಾಮರಾವ್ ಭಗವಂತ | IND | 9530 |
1978 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಜಗದೇವರಾವ್ ದೇಶಮುಖ | JNP | 28857 | ಮಲ್ಲಪ್ಪ ಸಜ್ಜನ | INC | 11486 |
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಮೈಸೂರು ರಾಜ್ಯ | ||||||
1972 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಮಲ್ಲಪ್ಪ ಸಜ್ಜನ | INC | 17778 | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | INC(O) | 17021 |
1967 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | INC | 19452 | ಶ್ರೀಶೈಲಪ್ಪ ಮಸಳಿ | SWA | 14740 |
1962 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಶಿವಶಂಕರಪ್ಪ ಮಲ್ಲಪ್ಪ ಗುರಡ್ಡಿ | INC | 13969 | ಶ್ರೀಶೈಲಪ್ಪ ಮಸಳಿ | SWA | 10680 |
1957 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿದ್ಧಾಂತಿ ಪ್ರಾಣೇಶ ಭಟ್ | INC | 12888 | ಶಿವಬಸವಸ್ವಾಮಿ ವಿರಕ್ತಮಠ | SWA | 11657 |
ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಬಾಂಬೆ ರಾಜ್ಯ | ||||||
1951 | ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರ | ಸಿದ್ಧಾಂತಿ ಪ್ರಾಣೇಶ ಭಟ್ | INC | 16627 | ಭೀಮನಗೌಡ ಪಾಟೀಲ | KMPP | 7745 |