ಜೇನುಪ್ರಪಂಚ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಜೇನುನೊಣ
ಹುಟ್ಟೆ
ಜೇನು
ಜೇನುಮೇಣ

ಮಾನವನಿಗಿಂತಲು ಮೊದಲಾಗಿ ಜೇನು ನೊಣಗಳು ಪ್ರಪಂಚದ ಮೇಲೆ ಕಾಣಸಿಕೊಂಡವು ಎಂಬುದನ್ನು ಪಳಿಯುಳಿಕೆಗಳು ಕಾಣಿಸಿರುವ ಆಧಾರದಿಂದ ಅರಿಯಬಹುದು.ಸ್ಪೇನ್ ದೇಶದ ವೆಲಾಸಿಯಾ ಸೆರ್ಬಿಯದಲ್ಲಿ ಮಾನವ ಆಕೃತಿಯೊಂದು ಮರದಿಂದ ಜೇನು ಎರಿಗಳನ್ನು ಇಳಿಸಿ ತರುವ ಕುರುಹುಗಳು ಇವೆ. ಇದರಿಂದ ಮಾನವನು ಬಹು ಹಿಂದೆಯೇ ಜೇನು ಸವಿ ಅರಿತಿರಬಹುದು ಎನ್ನಬಹುದು ಮತ್ತು ಜೇನು ಸಿಹಿಗಾಗಿ ಆಸೆಪಡುತ್ತಿದ್ದನು ಎನ್ನಲೂಬಹುದು. ಎಂಟು ಸಾವಿರ ವರ್ಷಗಳಷ್ಟು ಮೊದಲೇ ಮಾನವ ಜನಾಂಗ ಜೇನು ಉತ್ಪತ್ತಿಗಳ ಆಕರ್ಷಣೆ ಹೊಂದಿರುವ ಪುರಾವೆಗಳನ್ನು ತಜ್ಞರು ಪತ್ತೆ ಮಾಡಿದ್ದಾರೆ. ಜೇನು ನೊಣಗಳ ವೈಜ್ಞಾನಿಕ ಅಧ್ಯಯನ ಹದಿನೆಂಟನೇ ಶತಮಾನದಲ್ಲಿ ಪ್ರಾರಂಭವಾಯಿತೆನ್ನಬಹುದು. ಅದುವರೆಗೂ ಜೇನು ಪ್ರಪಂಚದಲ್ಲಿ ಅಡಗಿದ ಜೀವವೈಜ್ಞಾನಿಕ ಹಾಗೂ ಕೌಟುಂಬಿಕ ಅಧ್ಯಯನದ ಅರಿವು ಹೊಂದುವ ಯತ್ನಗಳು ಹೆಚ್ಚಾಗಿ ಪ್ರಾರಂಭ ಆಗಿರಲಿಲ್ಲ ಎನ್ನಬಹುದು. ಮಾನವನ ಅರಿವು ಮತ್ತು ಸಾಮರ್ಥ್ಯ ಅಭಿವೃದ್ಧಿಯಾದಂತೆ ಜೇನು ಕುಟುಂಬದ ಬಗ್ಗೆ ಕುತೂಹಲ ಮತ್ತೂ ಅದರಿಂದ ಹೊಂದಬಹುದಾದ ಪ್ರಯೋಜನಗಳ ಬಗ್ಗೆಯೂ ಆಸಕ್ತಿ ಬೆಳೆಯತೊಡಗಿತು. ಈಜಿಪ್ಟ ದೇಶದಲ್ಲಿ ಜೇನು ನೊಣಗಳ ಚಿತ್ರಗಳನ್ನು ರಾಜರ ಕಿರೀಟಗಳಲ್ಲಿ ಮತ್ತು ಸಾಹಸ ಕಾರ್ಯ ಗೈದವರಿಗೆ ಚಿನ್ನದ ಜೇನುನೊಣಗಳನ್ನು ನೀಡಿ ಬಹುಮಾನಿಸಲಾಗುತ್ತಿತ್ತು. ಈ ಹಿಂದಿನ ಕಾಲದಲ್ಲಿ ಸತ್ತು ಕೊಳೆತ ಪ್ರಾಣಿಗಳ ದೇಹದಿಂದ ಜೇನುನೊಣಗಳು ಹುಟ್ಟುತ್ತವೆಂದು ನಂಬಿದ್ದರು ಮತ್ತು ಜೇನು ಹುಳುಗಳನ್ನು (ಲಾರ್ವ) ಹೂವುಗಳಿಂದ ಸಂಗ್ರಹಿಸುತ್ತವೆಂದು ನಂಬಿದ್ದರು. ಅರಿಸ್ಟಾಟಲ್ನು ( 322 ಬಿ.ಸಿ.) ತನ್ನಪುಸ್ತಕ ನ್ಯಾಚುರಲ್ ಹಿಸ್ಟರಿಯಲ್ಲಿ ಜೇನುನೊಣಗಳ ವರ್ಣನೆಯನ್ನು ಹಾಗೂ ಕೆಲಸಕಾರ್ಯಗಳನ್ನೂ ಅದೇ ತೆರೆನಾಗಿ, ತನ್ನ ಜಿಯೊರಿಕ್ ಪುಸ್ತಕ ದಲ್ಲಿ ವರ್ಜಿಲ್ನು ಜೇನು ನೊಣಗಳ ಕುರಿತು ಬರೆದ ನಂತರದಲ್ಲಿ ಜನರು ಈ ನಂಬಿಕೆಯನ್ನು ಬಿಟ್ಟರು. ನಂತರದ ಕಾಲದಲ್ಲಿ ಪಲಾದಿಯಸ್, ಪ್ಲಿನಿ, ಮೋಲೇ, ಮೊದಲಾದ ಮಹನೀಯರು ಜೇನು ಕುರಿತು ಬರೆದು ಜನರಿಗೆ ಹೆಚ್ಚಿನ ಅರಿವು ಮೂಡಿಸಿದರು.

ವೇದಕಾಲದಲ್ಲಿಯೇ ಭಾರತೀಯರಲ್ಲಿ ಜೇನಿನ ಬಗ್ಗೆ ಹೆಚ್ಚಿನ ಅರಿವು ಇತ್ತು ಎಂಬುದು ಅಥರ್ವಣ ವೇದದ ಮಧುಸೂಕ್ತದಿಂದ ಕಂಡುಬರುವುದು.ಮಧುಮತೀ ರೋಷಧೀರ್ದ್ಯಾಪ ಆಪೋ ಮಧುವನ್ನೋ ಭವತ್ವಂತರಿಕ್ಷಂ ಕ್ಷೇತ್ರಸ್ಯ ಪತಿರ್ಮಧುಮಾನ್ನೋ ಅಸ್ಟ್ತರಿಷ್ಯಂತೋ ಅನ್ವೇನಂ ಚರೇಮ. ಪನ್ನಾಯ್ಯಂ ತದಶ್ಚಿನಾ ಕೃತಂವಾ ವೃಷಭೋ ದಿವೋ ರಜಸ ಪೃಥಿವ್ಯಾಃ. ಸಹಸ್ರಂ ಶಂಸಾ ಎತಯೇ ಗವಿಷ್ಟೌ ಸರ್ವಾಂ ಇತ ತಾಂ ಉಪಯತಾ ಪಿಬದ್ದ್ಯೆ..

ಕ್ರಮೇಣ ನಾಗರೀಕತೆ ಬೆಳೆದಂತೆ ಕೌತುಕ ಕಾರಕ ಈ ಜೇನು ವಿಜ್ಞಾನದ ಅರಿವು ಅಲ್ಲಲ್ಲಿ ಆರಂಭವಾಯಿತು ಎನ್ನಬಹುದು. ಜೇನು ನೊಣಗಳ ಪಾಲನೆ ಮತ್ತು ಅಧ್ಯಯನ ಪ್ರಾರಂಭಿಸಿದ ಪಾಶ್ಚಾತ್ಯರಲ್ಲಿ ಸಾಮರ್ದಾಮ್, ಆಂಟೋನಿ, ಪಿ-ಡಿ-ರಿಯೋಮರ್, ಚಾರ್ಲ್ಸಬಾನೆಟ್ ಮತ್ತು ಅಂಧ ಸ್ವಿಸ್ ವಿಜ್ಞಾನಿ ಪ್ರಾನ್ಸಕೋಯಿಸ್ ಹ್ಯೂಬರ್ ಇನ್ನೂ ಮುಂತಾದ ಅನೇಕರನ್ನು ಹೆಸರಿಸಬಹುದು. 18-19 ನೇ ಶತಮಾನದ ಮಧ್ಯಂತರದಲ್ಲಿ ಜೇನು ಪಾಲನಾ ಸಹಕಾರಿಯಾಗಿರುವ ಆವಿಷ್ಕಾರಗಳನ್ನು ಕಾಣಬಹುದು.ಆ ವೇಳೆಗಾಗಲೇ ಬುಟ್ಟಿಗೆ ಮಣ್ಣು ಲೇಪಿಸಿ ಜೇನು ದಾರಿಯನ್ನೂ ಕಲ್ಪಿಸಿ ಪಾಲನೆ ಮಾಡುವ ತಂತ್ರ ಅರಿಯಲಾಗಿತ್ತು.1768-70 ರಲ್ಲಿ ಥಾಮಸ್ ವೈಲ್ಡಮ್ಯಾನ್ ಬುಟ್ಟಿಯಲ್ಲಿ ಸಾಕಾಣಿಕೆ ಮಾಡುತ್ತಿದ್ದ ಜೇನು ಕುಟುಂಬದಲ್ಲಿ ಬುಟ್ಟಿಯ ಒಳ ಮೇಲುಭಾಗದಲ್ಲಿ ಮರದ ಚಿಕ್ಕ ಕಡ್ಡಿಗಳನ್ನು ಒಂದರ ಪಕ್ಕ ಇನ್ನೊಂದರಂತೆ ಇರಿಸಿದಾಗ ಜೇನು ನೊಣಗಳು ಮರದ ಕಡ್ಡಿಗಳಲ್ಲಿ ಎರಿಗಳು ರಚಿಸುತ್ತವೆ ಎಂಬುದನ್ನು ಅದೇ ರೀತಿ ಅಂತಸ್ತು ಕಲ್ಪಿಸಿದಾಗಲೂ ಹಾಗೆ ಎರಿ ರಚಿಸುತ್ತವೆ ಎಂಬುದನ್ನು ತೋರಿಸಿಕೊಟ್ಟರು. ಇದು ಮುಂದಿನ ದಿನಗಳಲ್ಲಿ ಚಲಿಸುವ ಚೌಕಟ್ಟುಗಳಿರುವ ಜೇನು ಪೆಟ್ಟಿಗೆಗಳ ಹೊಸ ಆವಿಷ್ಕಾರಕ್ಕೆ ಮಾರ್ಗವಾಯಿತು. ಲ್ಯಾರೆಂಜೊ ಲೋರೆಯಾನ್ ಲ್ಯಾಂಗಸ್ಟ್ರೊತ್ 1810-1895 ಇವರೊಬ್ಬ ರೈತಕುಟುಂಬದಿಂದ ಬಂದವರು.ಇವರು ಸಂಯುಕ್ತಸಂಸ್ತಾನದಿಂದ ಯಾರ್ಖಶೈರ್ ಗ್ರಾಮಕ್ಕೆ ವಲಸೆ ಬಂದವರು. ಇವರು ಹ್ಯೊಬರನು ಮೊದಲು ಮಾಡಿದ್ದ ಅನ್ವೇಷಣೆಗಳನ್ನು ಪ್ರಾಯೋಗಿಕ ಸ್ತರದಿಂದ ನೈಜ ಆಚರಣೆಗೆ ಒಳಪಡಿಸಿದರು. ಜೇನುನೊಣಗಳ ಚಲನ ವಲನದ ದಾರಿಗಾಗಿ ಎರಿಗಳ ಮಧ್ಯದಲ್ಲಿ ಅಂತರವನ್ನು ಕಾಪಾಡುವುದು ಹಾಗೂ ಚಲಿಸುವ ಚೌಕಟ್ಟುಗಳಿಂದ ಕೂಡಿದ ಒಂದು ಪೆಟ್ಟಿಗೆಯ ಆಕಾರ ಮತ್ತು ಅಳತೆಯನ್ನು ನಿರೂಪಿಸಿ ನಿರ್ಮಿಸಿದರು. ಇವರು ತಾವು ಸಂಶೋಧಿಸಿ ನಿರ್ಮಿಸಿದ ಜೇನು ಪೆಟ್ಟಿಗೆಗೆ 1853ರಲ್ಲಿ ಸರ್ಕಾರದಿಂದ ಸ್ವಾಮಿತ್ವದ ಅನುಮೋದನೆ ಗಳಿಸಿದರು.( ಹಕ್ಕುಸ್ವಾಮ್ಯತೆ) ಇದೇ ಲ್ಯಾಂಗ್ ಸ್ಟ್ರೋತ್ ಮಾದರಿ ಜೇನು ಪೆಟ್ಟಿಗೆ ಎಂಬುದಾಗಿ ಇಂದಿಗೂ ಆಚರಣೆಯಲ್ಲಿರುವುದು. ಈ ಮಾದರಿಯನ್ನು ಅಳವಡಿಸಿಕೊಂಡು ಪ್ರಪಂಚದ ಬೇರೆ ಬೇರೆ ದೇಶಗಳಲ್ಲೂ ಸ್ಥಳೀಯ ಪರಿವರ್ತನೆ ಹಾಗೂ ಸ್ಥಳೀಯ ಹೆಸರೊಂದಿಗೆ ಮುಖ್ಯ ಲಕ್ಷಣಗಳನ್ನು ಉಳಿಸಿಕೊಂಡು ವ್ಯಾಪಕವಾಗಿ ಬಳಕೆಗೆ ಬಂದಿತು. ಈ ತೆರನಾದ ಚಲಿಸುವ ಮಾದರಿಯ ಜೇನು ಪೆಟ್ಟಿಗೆಗಳು ಜೇನು ಕೃಷಿಯ ಕ್ಷಿಪ್ರ ಬೆಳವಣಿಗೆಗೆ ಹೆದ್ದಾರಿಯಾಯಿತು. ಆದ್ದರಿಂದ ಶ್ರಿಯುತ ಎಲ್ಎಲ್ ಲ್ಯಾಂಗ್ ಸ್ಟ್ರೋತ್ ರವರನ್ನು ಆಧುನಿಕ ಜೇನು ಕೃಷಿಯ ಪಿತಾಮಹ ಎನ್ನಲಾಗುತ್ತದೆ. ಅಮೆರಿಕದಲ್ಲಿ ಲ್ಯಾಂಗ್ ಸ್ಟ್ರೋತ್ ಹಾಗೂ ಡ್ಯಾಡೆಂಟ್, ಇಂಗ್ಲೆಂಡಿನಲ್ಲಿ ಬ್ರಿಟಿಷ್-ಸ್ಟಾಂಡರ್ಡ್ ಮತ್ತು ಸುಧಾರಿತ ಡ್ಯಾಡಂಟ್ ಮತ್ತು ನ್ಯಾಷನಲ್, ಭಾರತದಲ್ಲಿ ಸುಧಾರಿತ ಲ್ಯಾಂಗ್ ಸ್ಟ್ರೋತ್ ಮತ್ತು ನ್ಯೊಟನ್ ಹೆಸರುಗಳಲ್ಲಿ ಚಾಲ್ತಿಗೆ ಬಂದವು. ನಮ್ಮ ದೇಶದಲ್ಲಿ ಸುಮಾರು 50 ವರುಷಗಳ ತರುವಾಯ ಅಂದರೆ ೧೯೧೧ರಲ್ಲಿ ಜೇನು ಪೆಟ್ಟಿಗೆಗಳು ಪರಿಚಯಿಸಲ್ಪಟ್ಟವು. ಈಗ ನಮ್ಮ ದೇಶದಲ್ಲಿ ಸರ್ಕಾರವು ಐ.ಎಸ್.ಐ.- ಎ ಮತ್ತು ಬಿ, ಮಾದರಿಯಲ್ಲಿರುವ ಜೇನು ಪೆಟ್ಟಿಗೆಗಳನ್ನೇ ಬಳಸುವಂತೆ ಸೂಚಿಸಿದೆ. ಜೇನು ಕುಟುಂಬದಲ್ಲಿರುವ ನೊಣಗಳ ಸಂಖ್ಯಾಬಲವನ್ನು ಲಕ್ಷ್ಯದಲಿರಿಸಿಕೊಂಡು ಉತ್ತರ ಮತ್ತು ದಕ್ಷಿಣ ಭಾರತದ ಅಗತ್ಯಕ್ಕೆ ಅನುಗುಣವಾಗಿ ಇವು ರೂಪಿಸಲ್ಟಿವೆ. ಈಗಿತ್ತಲಾಗಿ ಮರದ ಬದಲು ಪಾಲಿಸ್ಟ್ರಿನ್ ಉಪಯೋಗಿಸಿದ ಪೆಟ್ಟಿಗೆಯೂ ಬಳಸಲ್ಪಡುತ್ತಿದೆ.

ಕೆಲಸಗಾರ್ತಿ ನೊಣದ ಜೀವನ ಚಕ್ರ :[ಬದಲಾಯಿಸಿ]

ಕೆಲಸಗಾರ್ತಿ ನೊಣವು ಹುಟ್ಟಿ ಕಣದಿಂದ ಹೊರಬರುತ್ತಿರುವಂತೆಯೇ (19 ರಿಂದ21 ದಿನಗಳು) ತನ್ನದೇಹವನ್ನು ತಾನೇ ಶುಚಿಗೊಳಿಸಿಕೊಳ್ಳತೊಡಗುತ್ತದೆ. ಇದು ರಾಣಿಯಿಂದ ಬಳುವಳಿಯಾಗಿ, ಹುಟ್ಟುವಾಗಲೇ ಬಂದಿರುವ 10-12 ಓವರಿಯಲ್ಸ್ ಗಳನ್ನು (ಗರ್ಭ ಕೋಶದಲ್ಲಿ )ತತ್ತಿಯ ಕೋಶಗಳನ್ನು ಹೊಂದಿರುತ್ತವೆ. ಅನಂತರ 3 ದಿನಗಳವರೆಗೆ ತನಗಿಂತ ಹಿರಿಯ ಪ್ರಾಯದ ನೊಣಗಳಿಂದ ಆಹಾರ ಪಡೆದುಕೊಳ್ಳುತ್ತದೆ. ಹೀಗೆ ಪಡೆದ ಆಹಾರವು ಜೇನಾಗಿರಬಹುದು ಇಲ್ಲವೇ ಮಕರಂದವಾಗಿರಬಹುದು. ಮತ್ತು ಕೆಲವೊಮ್ಮೆ ರಾಜಶಾಹಿ ರಸ ಅಥವಾ ಬೇರೆ ರಸ ಗ್ರಂಥಿಗಳಿಂದ ಬರುವ ರಸವನ್ನು ಮಿಶ್ರ ಮಾಡಿದ ಆಹಾರದ ಗುಟುಕು ಕೂಡಾ ಆಗಿರಬಹುದು. ಆ ನಂತರದ ದಿನಗಳಲ್ಲಿ ಅವುಗಳ ಆಹಾರವು ಕೇವಲ ಪರಾಗ ಮತ್ತು ಜೇನಾಗಿರುತ್ತದೆ. ಜೇನು ನೊಣಗಳು ಸೇವಿಸುವ ಪರಾಗದಿಂದ ಅದರಲ್ಲಿನ ಸಸಾರಜನಕವು ರಾಸಾಯನಿಕವಾಗಿ ವಿಭಜಿಸಲ್ಪಟ್ಟು ವೇಗವರ್ಧಕದಂತೆಯೂ ಮತ್ತು ಆಯರ್ವರ್ಧಕವೂ ಆಗಿರುವುದು. ಇದಲ್ಲದೆ ಪೆಪ್ಟೋನ್ ಮತ್ತು ಪಾಲಿಪೆಪ್ಟೋನ್ಗಳಾಗಿ ನಂತರ ಅಮಿನೋ ಆಮ್ಲಗಳಿಂದ ಕೂಡಿಸಲ್ಪಟ್ಟು ಹೆಚ್ಚಿನಂಶವು ಹೈಪೋಪೆರೆಂಜಿಯಲ್ ರಸದೂತದ ಉತ್ಪತ್ಪಿಯಲ್ಲಿ ಪರಿವರ್ತನೆಗೊಳ್ಳುವುದು. 10 ದಿನಗಳಪರ್ಯಂತ ಮಾತ್ರ ಪರಾಗ ಜೇನುಮಿಶ್ರಿತ ಆಹಾರ ಸೇವಿಸುತ್ತವೆ. ಅನಂತರ ಕೇವಲ ಜೇನು ಮಾತ್ರ ಆಹಾರವಾಗಿರುವುದು. ಈ ಅವದಿಯಲ್ಲಿ ಹೆಚ್ಚು ಪರಾಗದ ಆಹಾರ ಸೇವಿಸಿದ್ದರೆ ಅದು ಹೆಚ್ಚು ಬಲಿಷ್ಟ ನೊಣವಾಗಿ ಹೆಚ್ಚು ಸಾಮರ್ಥ್ಯವನ್ನು,, ಮುಂದೆ ಹೆಚ್ಚು ಮೇಣ ಉತ್ಪಾದನಾ ಶಕ್ತಿಯನ್ನು ಸಹ ಹೊಂದಿರುತ್ತದೆ. ಇದರ ಮಿದುಳು ಗಂಡು/ರಾಣಿ ನೊಣಗಳಿಗಿಂತ ದೊಡ್ಡದು. ಈ ಭಾಗವನ್ನು ಕಾಪರ್ರಾಪೆಡೆಂಕ್ಯುಲೇಟಾ (Carpora pedunculata)ಜೇನುನೊಣಗಳಲ್ಲಿ ದೇಹದ ವಿವಿಧ ಅಂಗಗಳ ನಿಯಂತ್ರಣವು ಕೇವಲ ಮಿದುಳಿಗೆ ಮಾತ್ರ ಸೀಮಿತವಾಗಿಲ್ಲ, ಹಾಗೂ ಐದುಕೋಣೆಗಳುಳ್ಳ ಹೃದಯ ಎನ್ನಬಹುದಾದ ಭಾಗವಿದ್ದರೂ ಪ್ರತ್ಯೇಕ ರಕ್ತ ಪರಿಚಲನಾ ವ್ಯವಸ್ಥೆಯಿಲ್ಲ. ಒಣ ಹುಲ್ಲಿನ ಬಣ್ಣದಲ್ಲಿರುವ ಇದರ ರಕ್ತದಲ್ಲಿ ಲ್ಯುಕೋಸೈಟ್(Leuco cytes) ಮತ್ತು ಫ್ಯಾಗೋಸೈಟ್(phogo cytes) ಎಂಬ ಎರಡು ಬಗೆ ಇದ್ದು ಫ್ಯಾಗೋಸೈಟ್ ಬಿಳಿ ರಕ್ತದಂತೆ ರೋಗನಿರೋಧಕ ಕೆಲಸ ಮಾಡುವುದು. ಉಸಿರಾಟದ ವ್ಯವಸ್ಥೆಗಾಗಿ ಗಾಳಿಚೀಲಗಳು ಶ್ವಾಸನಾಳಗಳು ಕಣ್ಣಿಗೆ ಕಾಣದಷ್ಟು ಸೂಕ್ಷ್ಮವಾದ ನಾಳ ಹಾಗೂ ಅದರ ಕವಲುಗಳಿವೆ. ಗಾಳಿಯು ರಂದ್ರಗಳ ಮೂಲಕ ಸ್ಪಿರಾಕಲ್ಸ್ ಮೂಲಕ ಪ್ರವೇಶಿಸುತ್ತದೆ. ಈ ರಂದ್ರಗಳು ಥೋರೆಕ್ಸ್ (Thorex) ಗ್ರಂಥಿಯ ಮೇಲೆ ಎರಡು ಜೊತೆ ಹಾಗೂ ಹೊಟ್ಟೆಯಮೇಲೆ ಆರು ಜೊತೆಯಲ್ಲಿವೆ. ಆದರೆ ಗಂಡು ನೊಣಗಳಿಗೆ ಎಳು ಜೊತೆಯಲ್ಲಿವೆ. ಆಮ್ಲಜನಕದ ಅವಶ್ಯಕತೆಗೆ ತಕ್ಕಂತೆ ಈ ರಂದ್ರಗಳು ತೆರೆದು ಮುಚ್ಚಿಕೊಳ್ಳುತ್ತವೆ. ಇದರ ಬಾಯಿಸುತ್ತಲೂ ಚೂಪಾದ ಕೊಳವೆಯಂತಿರುವ ರುಚಿ ಗ್ರಾಹಕಗಳಿವೆ. ಇವುಗಳಿಗೆ ಮಿದುಳಿನ ನೇರಸಂಪರ್ಕವಿದ್ದು ರುಚಿಯನ್ನು ಅತ್ಯಂತ ಸೂಕ್ಷ್ಮವಾಗಿ ಗ್ರಹಿಸುತ್ತವೆ. ಜೇನುನೊಣಗಳಿಗೆ ಶೇ.4ಕ್ಕಿಂತ ಕಡಿಮೆ ಸಕ್ಕರೆಯುಳ್ಳ ದ್ರವವು ಸಿಹಿ ಎನಿಸುವುದಿಲ್ಲ. ಆದುದರಿಂದ ಅದನ್ನು ಸೇವಿಸಲು ಒಪ್ಪುವುದಿಲ್ಲ. ಜೇನುನೊಣಗಳ ಕಾಲುಗಳ ತುದಿಭಾಗದಲ್ಲಿ `ಅರೋಲಿಯಂ' ಎಂಬ ಒಂದು ವಿಶಿಷ್ಟ ದ್ರವವಿದ್ದು ಇದರ ಸಹಾಯದಿಂದ ಅತ್ಯಂತ ನಯವಾದ ಗಾಜು ಮುಂತಾದ ಸ್ಥಳದಲ್ಲೂ ಸುಲಭವಾಗಿ ಕುಳಿತುಕೊಳ್ಳಬಲ್ಲವು. ನೊಣಗಳಿಗೆ ಅತ್ಯಂತ ಖಚಿತವಾದ ಸಮಯ ಪ್ರಜ್ಞೆ ಇರುವುದು. ಆದುದರಿಂದ ಮರಗಿಡಗಳಲ್ಲಿ ಹೂವು ಅರಳಿ ಪುಷ್ಪರಸ/ಪರಾಗ ದೊರೆಯುವ ಸಮಯಕ್ಕೆ ಅನುಗುಣವಾಗಿ ಹಗಲಿನಲ್ಲಿ ಹೂವಿನೆಡೆಗೆ ಹಾರಿಹೋಗಿ ಆಹಾರವನ್ನು ಸಂಗ್ರಹಿಸುತ್ತವೆ. ಕೆಲಸಗಾರ್ತಿ ನೊಣಗಳ ಎಲ್ಲ ಚಟುವಟಿಕೆಗಳು ಅವುಗಳ ದೈಹಿಕ ವಯಸ್ಸಿಗಿಂತ ಹೆಚ್ಚಾಗಿ (ಛಿಡಿಠಟಿಠಟಠರಛಿಚಿಟ) ಐಚ್ಛಿಕತೆಯಂತೆ (ಠಿಥಿಠಟಠರಛಿಚಿಟ) ಅವಶ್ಯಕತೆಗೆ ಸರಿಹೊಂದುವಂತೆ ನಿಯಂತ್ರಿಸಲ್ಪಡುವುದು. ಹೀಗಿರುವುದರಿಂದಲೇ ಅದರ ಚಟುವಟಿಕೆಗಳು ಆ ಕುಟುಂಬದ ಅವಶ್ಯಕತೆಗೆ ಅನುಗುಣವಾಗಿ ಕೆಲವೊಮ್ಮೆ ಬದಲಾಗಬಹುದು. ಉದಾ: ಅಕಾಲಿಕವಾಗಿ ಮೇಣ ಮತ್ತು ರಾಜಶಾಹಿ ರಸವನ್ನು ಉತ್ಪಾದಿಸುವ ಪ್ರಾಯದ ನೊಣಗಳಲ್ಲದ ನೊಣಗಳು ಸಹ ಸಾಂದರ್ಭಿಕವಾಗಿ ಜೇನುಮೇಣ, ರಾಜಶಾಹಿರಸವನ್ನು ಉತ್ಪಾದಿಸುವುದಾಗಿದೆ. ಮತ್ತುಳಿದ ಕೆಲಸ ಹಾಗೂ ಕ್ಷೇತ್ರ ಕಾರ್ಯಗಳು ಸಹ ಹೀಗೆ ಬದಲಾಗಬಹುದು. ಜೇನು ನೊಣಗಳು ಬೆಳಕಿಗೆ ಆಕಷರ್ಸಲ್ಪಡುವ ಗುಣವನ್ನು ಹೊಂದಿವೆ. ಇದನ್ನು ಫೊಟೋ ಪಾಸಟಿವ್ (photo positive) ಗುಣವೆನ್ನುವರು. ಅನೇಕವೇಳೆ ವಿದ್ಯುತ್ ದೀಪದೆಡೆಗೆ ನೊಣಗಳು ಗಿರಕಿ ಹೊಡೆಯುತ್ತಿರುದನ್ನು ನಾವು ಕಾಣುತ್ತಿರುತ್ತೇವೆ. ಮತ್ತು ಗುರುತ್ವ ವಿರುದ್ಧ ಚಲಿಸುವ ಗುಣವನ್ನು ಸಹ ತೋರಿಸುತ್ತವೆ ಇದನ್ನು ಜಿಯೋನೆಗೆಟಿವ್ (Geo negetieve) ಗುಣವೆನ್ನುವರು ಆದುದರಿಂದ ಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸುವಾಗ ಅಡಿಮಣೆಯನ್ನು ಇಳಿಜಾರಾಗಿರಿಸಿ ಅಡಿಮಣೆಯ ಇಳಿಜಾರಿನಲ್ಲಿ ಕೆಳಗಿನಿಂದ ಮೇಲಕ್ಕೆ ಏರುವಂತೆ ಮಾಡಿ, ನೊಣಗಳನ್ನು ಪೆಟ್ಟಿಗೆಗೆ ಸೇರಿಸುವ ಕೆಲಸವನ್ನು ಸುಲಭಗೊಳಿಸಿಕೊಳ್ಳಬಹುದು. ಕೆಲಸಗಾರ್ತಿ ಜೇನುನೊಣಗಳ ಜೀವನಾವಧಿಯು ಸುಮಾರಾಗಿ 22 ದಿನಗಳಿಂದ 57 ದಿನಳಾವಧಿಯಲ್ಲಿದ್ದು ಮತ್ತು ಅದು ಹುಟ್ಟುವ ಋತು ಹಾಗೂ ಅದರ ಚಟುವಟಿಕೆಗಳನ್ನು ಅವಲಂಬಿಸಿದೆ. ಸಮಶೀತೋಷ್ಣ ವಲಯದಲ್ಲಿ ಜೇನು ನೊಣಗಳಿಗೆ ಆಹಾರವು ವರ್ಷಪೂರ್ತಿ ಸರಿಸುಮಾರಾಗಿ ದೊರಕುವುದು. ಹಾಗಾಗಿ ವರ್ಷವೆಲ್ಲ ಸಂಸಾರದ ಮೊಟ್ಟೆಮರಿ ಬೆಳೆಸುವಿಕೆಯು ನಿರಂತರವಾಗಿರುವುದು. ಈ ಪರಿಣಾಮವಾಗಿ ಅದು ಹೆಚ್ಚು ಕೆಲಸ ನಿರ್ವಹಿಸಬೇಕಾಗಿ ಬರುವುದರಿಂದ ಅಲ್ಪಾಯು ಆಗುವುದು. ಬೇರೆ ಪ್ರದೇಶಗಳಲ್ಲಿ ಅದೇರೀತಿ ಮಳೆಗಾಲ ಚಳಿಗಾಲದಲ್ಲಿ ಸಂಸಾರದಲ್ಲಿ ಕುಂಠಿತಗೊಳ್ಳುವ ಮೊಟ್ಟೆಮರಿ ಬೆಳೆಸುವಿಕೆ ಪರಿಣಾಮವು ಅವುಗಳ ದೇಹದಲ್ಲಿ ಸಸಾರಜನಕಾಂಶದ ಮಟ್ಟವು ವೃದ್ಧಿಸಿ ಹಾಗೂ ಕೆಲಸಕಾರ್ಯ ಕುಂಠಿತಗೊಂಡು ಆಯಸ್ಸು ಹೆಚ್ಚುವುದು. 42ದಿನಗಳಿಗಿಂತ ಕಡಿಮೆ ವಯಸ್ಸಿನ ನೊಣಗಳು ಏರಿಗಳ ಕಣ ಶುಚಿಗೊಳಿಸುವಿಕೆ ಮತ್ತು ಕಣದಲ್ಲಿ ಬೆಳೆಯುತ್ತಿರುವ ಚಿಕ್ಕ ಹುಳಗಳಿಗೆ ಶುಶ್ರೂಷೆ ಮಾಡುವವು. ಮೊದಮೊದಲು ದೊಡ್ಡಹುಳಗಳಿಗೆ ಮಾತ್ರ ಆಹಾರವನ್ನು ಕೊಡುತ್ತವೆ. ಅನಂತರ ಎಲ್ಲಾ ಪ್ರಾಯದಲ್ಲಿರುವ ಕಣದಲ್ಲಿ ಬೆಳೆಯುತ್ತಿರುವ ಹುಳಗಳಿಗೆ ಆಹಾರ ನೀಡುತ್ತವೆ. ಚಕಿತಗೊಳಿಸುವ ಸಂಗತಿ ಎಂದರೆ 6-7ದಿನಗಳಲ್ಲಿ ಅನೇಕ (8ಸಾವಿರಕ್ಕೂ ಮಿಕ್ಕಿ) ಸಾವಿರ ಬಾರಿ ಈ ತೆರನಾಗಿ ಮರಿಹುಳುಗಳಿಗೆ ಆಹಾರವನ್ನು ಒದಗಿಸುತ್ತವೆ. 6ರಿಂದ 12ದಿನಗಳ ಪ್ರಾಯದ ನೊಣಗಳು ಮೊಟ್ಟೆಹಾಕುವ ರಾಣಿಗೆ ಆಹಾರ ಉಣಿಸುತ್ತವೆ. ಹೀಗೆ ರಾಣಿಗೆ ಉಣಿಸಲು ಅವುಗಳ ತಲೆಯ ಭಾಗಲ್ಲಿರುವ ಹೈಪೋಪರೆಂಜಿಯಲ್ ಗ್ರಂಥಿಯಿಂದ ವಿಶಿಷ್ಟವಾದ ರಾಜಶಾಹಿರಸವು ಉತ್ಪಾದನೆಗೊಳ್ಳುವುದು. ನಂತರದ ದಿನಗಳಲ್ಲಿ ಶುಶ್ರೂಷಾತನವು ಕೊನೆಗೊಳ್ಳುತ್ತದೆ, ಅಲ್ಲದೆ 14-20ದಿನ ಪ್ರಾಯದ ನೊಣಗಳು ಹೊಸ ಏರಿ ರಚನೆಯ ಕಾರ್ಯದಲ್ಲಿ ತೊಡಗುತ್ತವೆ. ಆ ಸಮಯದಲ್ಲಿ ಅವುಗಳ ಹೊಟ್ಟೆಯ ತಳಭಾಗದಲ್ಲಿ ಇರುವ 4ಜೊತೆ ಮೇಣದ ಗ್ರಂಥಿಗಳು ಸಕ್ರಿಯಗೊಂಡಿರುತ್ತವೆ. ಈ ಸಮಯದಲ್ಲಿ ಅವು ಮಣಿಸರವನ್ನು ಪೋಣಿಸಿದಂತೆ ತಳುಕು ಹಾಕಿ ನಿಶ್ಚಲವಾಗಿ ಕುಳಿತು ಮೇಣ ಉತ್ಪಾದನೆಗೆ ತೊಡಗುತ್ತವೆ. 3ನೇವಾರದ ಪ್ರಾಯದಲ್ಲಿ ಗೂಡಿನಿಂದ ಹೊರಗಡೆಗಡೆಗೆ ಹೊರಟು ಸಣ್ಣಸಣ್ಣ ಹಾರಟವನ್ನು ಪ್ರಾಂಭಿಸುತ್ತವೆ. ಅವುಗಳಲ್ಲಿ ಕೆಲವು ಹಿರಿಯ ನೊಣಗಳು ಆ ಸಮಯದಲ್ಲಿ ಮುಖದ್ವಾರದಲ್ಲಿ ಕುಳಿತು ಪಹರೆ ಕೆಲಸಗಳನ್ನು ನೆಡೆಸುತ್ತವೆ. ಒಳಬರುವ ನೊಣಗಳನ್ನು ಪರಿಶೀಲನೆ ಮಾಡಿ ಕುಡಿಮೀಸೆಯಿಂದ ಮೂಸಿನೋಡಿ ಗೂಡಿನ ವಾಸನೆಯನ್ನು ಹೊಂದಿರದ, ಆಹಾರವನ್ನೂ ಹೊಂದಿರದ ನೊಣವನ್ನು ಹೊರಗಟ್ಟುತ್ತವೆ. ಅಲ್ಲದೆ ಕುಟುಂಬವು ಹೊಸ ಸ್ಥಳಕ್ಕೆ ಹೋಗಿ ನೆಲೆಸುವ ಸನ್ನಿವೇಶದಲ್ಲಿ ಕೆಲವು ಅನ್ವೇಷಕ ನೊಣಗಳು ಮೊದಲು ಆಹಾರ ಹಾಗೂ ಶತ್ರುಗಳ ಉಪಟಳವಿಲ್ಲದ ಉತ್ತಮವಾದ ವಾತಾವರಣವನ್ನು ಹೊಂದಿರುವ ಪ್ರದೇಶವನ್ನು ಆಯ್ಕೆಮಾಡಿ ತನ್ನ ಕುಟುಂಬ ನೆಲೆಸಲು ಬೇಕಾಗಿರುವ ನೆಲೆಗಳನ್ನು ಕಂಡುಹಿಡಿಯುವವು. ಅಂತಹ ಹೊಸ ನೆಲೆಗಳಲ್ಲಿ ತನ್ನ ಕುಟುಂಬದ ಎಲ್ಲಾ ಸದಸ್ಯರು ವಾಸಮಾಡಲು ಬೇಕಾಗುವಷ್ಟು ಪೊಟರೆಯು ವಿಶಾಲವಾಗಿದೆಯೇ ಎಂಬೆಲ್ಲಾ ಸೂಕ್ಷ್ಮ ಅಂಶಗಳನ್ನೂ ಸಹ ಅರಿತುಕೊಳ್ಳಲು ಪೊಟರೆಯೊಳಗೆ ಪ್ರವೇಶಿಸಿ ಜೋರಾಗಿ ರೆಕ್ಕೆಯಿಂದ ಶಬ್ದಹೊರಡಿಸಿ ಪ್ರತಿಧ್ವನಿ ಮೂಲಕ ಆ ಸ್ಥಳದ ವಿಶಾಲತೆಯನ್ನು ಗ್ರಹಿಸುತ್ತವೆ. ಅನಂತರದಲ್ಲಿ ಆ ಸ್ಥಳಕ್ಕೆ ರಾಣಿಯೊಂದಿಗೆ ಎಲ್ಲಾ ಸದಸ್ಯರು ಅನುಸರಿಸಿ ಹಾರಿಬರಲು ಮಾರ್ಗದರ್ಶನ ಇವೇ ಮುಂತಾದ ಅನೇಕ ಸಾಂದರ್ಭಿಕ ಕೆಲಸಗಳನ್ನೂ ನೋಡಿಕೊಳ್ಳುತ್ತವೆ. ಗೂಡಿನೊಳಗೆ ಶತ್ರುಗಳು ಬರದಂತೆ ರಕ್ಷಣೆ ಕೆಲಸವನ್ನು ನಿರ್ವಹಿಸುವವು. ಒಂದು ವೇಳೆ ಶತ್ರುಗಳು ಪ್ರಬಲವಾಗಿದ್ದು ಗೂಡಿನೊಳಗೆ ಅತಿಕ್ರಮಿಸಿದರೆ ವಿಶಿಷ್ಟ ಶಬ್ದವನ್ನು ಹೊರಡಿಸಿ ಎಚ್ಚರಿಕೆಯನ್ನು ನೀಡುವವು ಮತ್ತು ಶತ್ರುವನ್ನು ಆಕ್ರಮಿಸಿ ಹಿಮ್ಮೆಟ್ಟಿಸುತ್ತವೆ/ಕೊಂದು ಎಸೆಯುತ್ತವೆ. ಮೊಟ್ಟೆ ಮರಿಯುಳ್ಳ ಏರಿಗಳಮೇಲೆ ಒತ್ತಾಗಿ ಕುಳಿತು ಶಾಖ ಸಂರಕ್ಷಣೆಯ ಕೆಲಸವನ್ನೂ ಇಲ್ಲವೆ ಗೂಡಿನ ಶಾಖ 98ಡಿಗ್ರಿಗಳಿಗಿಂತ ಅಧಿಕವಾಗತೊಡಗಿದರೆ ರೆಕ್ಕೆಗಳನ್ನು ಜೋರಾಗಿ ಬೀಸುವ ಮೂಲಕ ತಣ್ಣನೆಯ ಗಾಳಿಯನ್ನು ಗೂಡಿನೊಳಗೆ ಕಳುಹಿಸಿ ತಂಪಾಗಿಸಲು ಯತ್ನಿಸುತ್ತವೆ. ಅಧಿಕ ಶಾಖದಿಂದ ಏರಿಗಳು ಕಳಚಿ ಬೀಳದಂತೆ ಮಾಡಲು ನೀರನ್ನು ಅನ್ವೇಷಿಸಿ ಕೂಡಲೇ ತಂದು ಏರಿಯ ಬುಡಕ್ಕೆ ನೀರನ್ನು ತುಂತುರು ಹನಿಯಂತೆ ಸಿಂಪಡಿಸುವವು. ಅಲ್ಲದೇ ಬೇಡದ ಕಸಕಡ್ಡಿಗಳನ್ನು ಗೂಡಿನಿಂದ ತೆಗೆದು ಹೊರಹಾಕುತ್ತವೆ. ಅಂಗವಿಹೀನ/ಸತ್ತುಹೋದ ನೊಣಗಳನ್ನು ಹೊರಕ್ಕೆ ಎಸೆಯುವವು. ಶುಚಿ ಮಾಡುವ ಕೆಲಸವನ್ನು ಸದಾ ನೋಡಿಕೊಳ್ಳುತ್ತಿರುತ್ತವೆ. ಗೂಡಿನಲ್ಲಿ ಸದಾ ಒಂದಲ್ಲ ಇನ್ನೊಂದು ಕೆಲಸವನ್ನು ನಿಷ್ಠೆಯಿಂದಲೂ/ಕಾಳಜಿಯಿಂದಲೂ ನಿರ್ವಹಿಸುತ್ತವೆ. ಹೀಗೆ ಕಾಲಕಾಲಕ್ಕೆ ಆಗಬೇಕಾಗಿರುವ ಎಲ್ಲಾ ಕೆಲಸಗಳನ್ನು ತಪ್ಪದೇ ನಿರ್ವಹಿಸುತ್ತಿರುವಂತೆಯೇ ಅವುಗಳ ರೆಕ್ಕೆಯು ಸವೆದು ಬಲಹೀನವಾಗುತ್ತಿರುವಂತಹ ಈ ಅವಧಿಯಲ್ಲಿ ಬಹುತೇಕವಾಗಿ ಅವುಗಳ ಜೀವನವೇ ಮುಗಿದು ಹೋಗಿರುತ್ತದೆ. ಇನ್ನೂ ಹಿರಿಯ ನೊಣಗಳು ಮಕರಂದವನ್ನು ಕಲೆಹಾಕಿ ತಂದ ನೊಣಗಳಿಂದ ಮಕರಂದವನ್ನು ಪಡೆದು, ಅದನ್ನು ಜೇನುತುಪ್ಪವಾಗಿ ಪರಿವರ್ತಿಸುವ ಕೆಲಸ ಹಾಗೂ ದಾಸ್ತಾನು ಮಾಡುವ ಕೆಲಸವನ್ನು ಮಾಡುತ್ತವೆ. 3 ವಾರ ಪ್ರಾಯದ ನಂತರ, ಪರಾಗ-ಪುಷ್ಪರಸ-ನೀರು ಸಂಗ್ರಹಿಸಿ ತರುವುದು ಮುಂತಾದ ಕೆಲಸವನ್ನು ಮಾಡುತ್ತವೆ. ಜೇನು ಕುಟುಂಬದಲ್ಲಿನ ಬಹುಪಾಲು ಸಂಖ್ಯೆಯಲ್ಲಿರುವ ಈ ಕೆಲಸಗಾರ್ತಿ ನೊಣಗಳು ಗೂಡಿನ ಎಲ್ಲಾ ಅವಶ್ಯಕವಾದ ಕೆಲಸಕಾರ್ಯಗಳನ್ನು ಕ್ಲುಪ್ತವಾಗಿ ಮಾಡಿ ತನ್ನ ಕೆಲಸವನ್ನು ಮುಗಿಸುತ್ತವೆ. ಈ ಸಲುವಾಗಿ ಅವುಗಳಲ್ಲಿರುವ ಅಂಗಾಂಗಗಳು ಚೆನ್ನಾಗಿ ಬೆಳವಣಿಗೆಯಾಗಿದ್ದರೂ ಅವುಗಳ ಪ್ರಜನನಾಂಗವು ಮಾತ್ರ ಅಪೂರ್ಣ ಬೆಳವಣಿಗೆಯಾಗಿದ್ದು ಸಹಜ ಕೆಲಸವನ್ನು ನಿರ್ವಹಿಸಲಾರದು. ಆದುದರಿಂದ ಇವು ಅಪೂರ್ಣವಾಗಿ ಬೆಳೆದ ಹೆಣ್ಣುನೊಣಗಳು ಎನಿಸಿಕೊಳ್ಳುತ್ತವೆ. ಅವು ಹೀಗೆ ಮಾಡುವ ಎಲ್ಲಾ ಕೆಲಸಕಾರ್ಯಗಳಿಗೆ ಅವುಗಳು ಹುಟ್ಟುವಾಗಲೇ ಪಡೆದು ಬಂದಿರುವ ವಿಶೇಷ ಅಂಗಾಂಗಗಳು ಮತ್ತು ವಿಶಿಷ್ಟ ರಸದೂತಗಳು ಮುಖ್ಯ ಕಾರಣವೆನ್ನಬಹುದು.

ಜೇನುಕುಟುಂಬದ ಜೀವ ವೈವಿಧ್ಯಗಳು:[ಬದಲಾಯಿಸಿ]

ಭಾರತೀಯ ತುಡಿವೆ ಮತ್ತು ಪಾಶ್ಚಾತ್ಯ ತುಡಿವೆ ಜೇನುಗಳನ್ನು ಪ್ರಪಂಚದ ನಿಜವಾದ ಜೇನುಗಳೆಂದು ಬಣ್ಣಿಸಿದ್ದಾರೆ. (ಖಿಡಿue ಊoಟಿeಥಿ ಃees). ಭಾರತೀಯ ತುಡಿವೆ ಜೇನುಗಳಲ್ಲಿ ೩ ಪ್ರಭೇದಗಳನ್ನು ಕಾಣಬಹುದು. ಈ ಪೈಕಿ ಕರ್ನಾಟಕ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶದ ದಕ್ಷಿಣ ಭೂಪ್ರದೇಶಗಳಲ್ಲಿ ಭಾರತೀಯ ತುಡಿವೆ ನೊಣಗಳ ಪ್ರಭೇದವು ಕಂಡುಬರುವುದು. (Apies Cerena Indica). ಈ ಜೇನುಕುಟುಂಬಗಳಲ್ಲಿ ಸಮಾನಾಂತರದಲ್ಲಿ ರಚಿಸಲ್ಪಡುವ ೬-೮ ಏರಿಗಳನ್ನು ಕಾಣಬಹುದು. ಆದರೆ ಒಂದೇ ಸ್ಥಾನದಲ್ಲಿ ಕುಟುಂಬವು ಸಂಸಾರ ನಿರ್ವಹಿಸಿ ನೆಲೆಸಿರುವ ಅವಧಿಯು ಅದೇ ಸ್ಥಾನಕ್ಕೆ ಭಿನ್ನವಾಗಿರಬಹುದು. ಇದು ಸಾಮಾನ್ಯವಾಗಿ ಗೂಡು ಇರುವ ಪ್ರದೇಶ, ಗೂಡಿನೊಳಗೆ ದೊರಕುವ ವಿಶಾಲವಾದ ಸ್ಥಳಾವಕಾಶವನ್ನು ಹಾಗೂ ಅದರ ಆಕಾರವನ್ನೂ ಅವಲಂಬಿಸಿರುವುದು. ಉತ್ತಮವಾದ ಎಲ್ಲಾ ಸೌಲಭ್ಯಗಳು ಮತ್ತು ಸಾಕಷ್ಟು ಆಹಾರವು ಸದಾ ದೊರೆಯುತ್ತಿದ್ದಲ್ಲಿ ಒಂದು ನೈಸರ್ಗಿಕ ಕುಟುಂಬವು ಸುಮಾರು ೧೫-೧೬ ದೊಡ್ಡ ಏರಿಗಳನ್ನು ರಚಿಸುವುದು ಹಾಗೂ ಹೆಚ್ಚುನೊಣ ಸಂಖ್ಯೆಯಿಂದಲೂ ಕೂಡಿ ಬೆಳೆದಿರುತ್ತವೆ.

ಒಂದು ಜೇನು ಕುಟುಂಬದಲ್ಲಿ ಕೆಲಸಗಾರ್ತಿನೊಣಗಳ ಪ್ರಜಾ ಸಂಖ್ಯೆಯು ಗರಿಷ್ಠ ೩೫,೦೦೦ ದಿಂದ ಹಿಡಿದು ಕಾಶ್ಮೀರಿನೊಣಗಳಲ್ಲಿ ೭೦,೦೦೦ ನೊಣಸಂಖ್ಯೆಯವರೆಗೆ ಕಂಡುಬರುವುದು. ಅದೇರೀತಿ ಕೆಲವು ಸನ್ನಿವೇಶಗಳಲ್ಲಿ ಕನಿಷ್ಠತಮವಾಗಿ ಅಂದರೆ ೧೮,೦೦೦ ನೊಣಸಂಖ್ಯೆಯಿಂದ ೨೨,೦೦೦ ನೊಣಸಂಖ್ಯೆಯವರೆಗೆ ಕೂಡಿರಲೂಬಹುದು. ಅಪರೂಪದಲ್ಲಿ ಅಸಾಮಾನ್ಯವಾಗಿ ಹಿಗ್ಗಿಬೆಳೆದ ಜೇನುಕುಟುಂಬಗಳು ೮೦,೦೦೦ ನೊಣಸಂಖ್ಯೆಯವರೆಗೂ ಕೂಡಿರುವುದುಂಟು. ಇದು ಸ್ಥಳೀಯ ಆಹಾರ ಲಭ್ಯತೆ, ಹವಾಮಾನ, ಜೇನುಕುಟುಂಬದ ತಳಿ ಹಾಗೂ ನಿರ್ವಹಣೆಯನ್ನು ಅವಲಂಬಿಸಿರುವುದು.

ಒಂದು ಜೇನುಕುಟುಂಬದಲ್ಲಿ ರಚಿಸಿರುವ ಪ್ರತಿಯೊಂದು ಏರಿಯ ಮಧ್ಯದ ಗೋಡೆ/ನೆಲದ ದಪ್ಪ ಏಕರೀತಿಯಲ್ಲಿರುವುದು. ಈ ಏರಿಗಳಲ್ಲಿ ಮೇಲ್ಭಾಗದಲ್ಲಿ ಜೇನುತುಪ್ಪ ಸಂಗ್ರಹವನ್ನು, ಮೊಟ್ಟೆಮರಿ ಹುಳವನ್ನು ಮಧ್ಯದಲ್ಲಿಯೂ ಇದಕ್ಕೆ ಹೊಂದಿಕೊಂಡಿರುವಂತೆ ಕೆಳಭಾಗದಲ್ಲಿ ಪರಾಗ ಸಂಗ್ರಹವನ್ನು ಕಾಣುತ್ತೇವೆ. ಈ ಏರಿಗಳಲ್ಲಿ ಗಂಡುನೊಣ ಕಣಗಳು ದೊಡ್ಡದಾಗಿಯೂ ಕೋಶಾವಸ್ಥೆಯಲ್ಲಿ ಬೆಳೆಯುತ್ತಿರುವ ಗಂಡುನೊಣ ಕಣಗಳಮೇಲೆ ಹಾಕಿರುವ ಮುಚ್ಚಳದಂತಹ ಮೇಣದ ಕುಪ್ಪಿಗೆಯು ಸ್ವಲ್ಪ ಮೇಲುಭಾಗಕ್ಕೆ ಉಬ್ಬಿದಂತೆಯು ಹಾಗೂ ಅದರ ಮಧ್ಯದಲ್ಲಿ ಚಿಕ್ಕ ರಂದ್ರ ಹೊಂದಿರುವುದರಿಂದ ಸುಲಭವಾಗಿ ಗುರುತಿಸಬಹುದು. ರಾಣಿಕಣಗಳು ಸಾಮಾನ್ಯ ಪರಿಸ್ಥಿತಿಯಲ್ಲಿ ಏರಿಗಳ ಕೆಳಭಾಗದ ಅಂಚಿನಲ್ಲಿ ರಚಿಸಲಾಗುತ್ತದೆ. ಕೆಲಸಗಾರ್ತಿ ಹಾಗೂ ಗಂಡುನೊಣಗಳನ್ನು ಬೆಳಸುವ ಏರಿಗಳೆಲ್ಲವೂ ಒಂದೇ ತೆರನಾಗಿ ಬಹು ಉಪಯೋಗಿಯಾಗಿ ಬಳಸಲ್ಪಡುವುದಾದರೂ ಸಾಮಾನ್ಯವಾಗಿ ಸಂಸಾರದ ಮಧ್ಯದ ಏರಿಗಳು ಯಾವಾಗಲೂ ಹೆಚ್ಚಾಗಿ ಮೊಟೆಮರಿ ಬೆಳೆಸುವಿಕೆಯಿಂದ ಕೂಡಿರುತ್ತವೆ. ಅದೇ ಸಂದರ್ಭಗಳಲ್ಲಿ ಏರಿಗಳ ಹೊರ ಅಂಚಿನಲ್ಲಿ ಅಲ್ಪಸ್ವಲ್ಪ ಮೊಟ್ಟೆಮರಿಗಳಿಂದ ಕೂಡಿರಲೂಬಹುದು, ಅಲ್ಲವೇ ಸ್ವಲ್ಪವೂ ಮೊಟೆಮರಿಗಳು ಇಲ್ಲದಿರಲೂಬಹುದು. ಕೆಲವೊಮ್ಮೆ ಏರಿಗಳೆಲ್ಲವೂ ಜೇನುತುಪ್ಪವನ್ನು ತುಂಬಿಸಲೋ ಅಥವಾ ಪರಾಗವನ್ನು ತುಂಬಿಸಲೋ ಬಳಕೆಯಾಗುವುದೂ ಉಂಟು. ಚಿಕ್ಕಗಾತ್ರದ ಬಯಲು ಪ್ರದೇಶದ ನೊಣಗಳು ಬಂಗಾರದ ಆಕರ್ಷಕ ಬಣ್ಣವನ್ನು ಹಾಗು ಬೆಟ್ಟಸೀಮೆಯ ನೊಣಗಳು ದೊಡ್ಡದಾದ ಗಾತ್ರ ಹಾಗೂ ಕಪ್ಪುಮಿಶ್ರಿತಬೂದು ಬಣ್ಣದಲ್ಲಿ ಕಾಣಿಸುತ್ತವೆ. ಕೆಲಸಗಾರ್ತಿನೊಣಗಳಿಗೆ ಹೀರುಕೊಳವೆ (ನಾಲಿಗೆಯ) (Prbosis) ಉದ್ದಳತೆಯು ಸಮಭಾಜಕ ರೇಖೆಯಿಂದ ಉತ್ತರ/ದಕ್ಷಿಣ, ಹಾಗೂ ಅಂತರ/ದೂರ (ಡಿಗ್ರಿಗಳಲ್ಲಿ) ಹಾಗೂ ಸಮುದ್ರ ಪಾತಳಿಯಿಂದ ಸ್ಥಳೀಯ ಪ್ರದೇಶದ ಎತ್ತರವನ್ನು ಅನುಸರಿಸಿ ಹೆಚ್ಚು ಉದ್ದವಾಗಿರುವುದು ಕಂಡುಬರುತ್ತದೆ. ದಕ್ಷಿಣ ಭಾರತದ ಬಯಲು ಸೀಮೆಯ ನೊಣಗಳಲ್ಲಿ ಇದು ಸಾಮಾನ್ಯವಾಗಿ ೪.೪೦ ಮಿಮಿ. ಮತ್ತು ೪.೮೪ಮಿಮಿ. ಅದೇರೀತಿ ಬೆಟ್ಟಸೀಮೆಯ ನೊಣಗಳಲ್ಲಿ ೪.೭೫ಮಿಮಿ.ರಿಂದ ೫.೨೫ಮಿಮಿ. ಉದ್ದವನ್ನು ಹೊಂದಿರುವುದು ಕಂಡುಬರುತ್ತದೆ. ಹಾಗೆಯೇ ಭಿನ್ನ ಭೌಗೋಳಿಕ ಪ್ರಾಂತ್ಯಗಳಲ್ಲಿರುವ ನೊಣಗಳ ರೆಕ್ಕೆಗಳನ್ನು ಜೋಡಿಸುವ ಕೊಂಡಿಗಳ ಸಂಖ್ಯೆಯಲ್ಲೂ ಏರಿಳಿತಗಳು ಕಂಡುಬರುವುದು. ಮೇಲುಭಾಗದ ರೆಕ್ಕೆಯೊಂದಿಗೆ ಕೆಳಭಾಗದ ರೆಕ್ಕೆಯಿಂದ ಬಿಗಿಯಾಗಿ ಬಂಧಿಸಿಡುವ ಈ ರೆಕ್ಕೆಗಳನ್ನು ಜೋಡಿಸುವ ಕೊಂಡಿಗಳು ಸರಾಸರಿಯಾಗಿ ೧೬-೨೧ ವರೆಗೂ ಕಂಡುಬರುತ್ತವೆ ಮತ್ತು ಸಾಮಾನ್ಯವಾಗಿ ನ್ರೆಣಗಳಹಾರಾಟದ ದೂರವೂ ವ್ಯತ್ಯಾಸವಾಗುವುದನ್ನು ಕಾಣುತ್ತೇವೆ. ಹಿಮಾಚಲ ಪ್ರದೇಶ, ಜಮ್ಮುಕಾಶ್ಮೀರ ಭಾಗದಲ್ಲಿರುವ ತುಡಿವೆ ಜೇನುಪ್ರಭೇದ ‘ಏಪಿಸ್ ಸೆರನಾ ಸೆರನಾ (Apies Cerana Cerana) ಹಿಮಾಲಯದ ಉತ್ತರ ಪಶ್ಚಿಮ ರಾಜ್ಯಗಳಲ್ಲಿರುವ ‘ಏಪಿಸ್ ಸೆರನಾ ಹಿಮಾಲಯ (Apies cerana Himalaya) ಪ್ರಭೇದಗಳಲ್ಲೂ ಸಹ ನೊಣಗಳ ಗಾತ್ರ ಹಾಗೂ ದೂರ ದೂರದ ಹಾರಾಟದ ಸಾಮರ್ಥ್ಯವು ಹಾಗೂ ಹೀರುಕೊಳವೆಯ ಉದ್ದ ಮುಂತಾದ ಶಕ್ತಿಸಾಮರ್ಥ್ಯದ ಅಂಶಗಳು ಭಿನ್ನವಾಗಿರುತ್ತವೆ.

ಮೆಲ್ಲಿಫೆರಾ ಜೇನುಗಳು (Mellifera):[ಬದಲಾಯಿಸಿ]

ಇದು ಪಾಶ್ಚಾತ್ಯ ತುಡಿವೆ ಜೇನುಗಳ ಒಂದುತಳಿಯಾಗಿದೆ. ಭಾರತೀಯ ತುಡಿವೆ ಜೇನುನೊಣಗಳಿಗಿಂತ ದೊಡ್ಡಗಾತ್ರದಲ್ಲಿವೆ ಮತ್ತು ಸಂಖ್ಯೆಯಲ್ಲೂ ಸಹ ತುಂಬಾ ಜಾಸ್ತಿಯಾಗಿರುತ್ತವೆ. ಈವ ವೈವಿಧ್ಯತೆಯಲ್ಲಿ ನಮ್ಮ ತುಡಿವೆ ಜೇನುನೊಣಗಳಂತೆಯೇ ಬೆಳವಣಿಗೆ ಹಾಗೂ ಸಾಮಾನ್ಯವಾದ ಜೀವನಚಕ್ರವಿದೆ. ಆದರೆ ದೇಹದ ಗಾತ್ರದಲ್ಲಿ ದೊಡ್ಡದಾಗಿಯೂ ಮತ್ತು ಹೆಚ್ಚು ದೂರದವರೆಗೆ ಕ್ರಮಿಸಿ ಹಾರಾಡಬಲ್ಲವೂ ಆಗಿವೆ. ಹೆಚ್ಚು ಉದ್ದ ಹಾಗೂ ಅಗಲವಾದ ಹಲವಾರು ಏರಿಗಳನ್ನು ನಿರ್ಮಿಸುತ್ತವೆ. ಭಾರತೀಯ ತುಡಿವೆ ನೊಣಗಳಿಗಿಂತ ಭಿನ್ನವಾಗಿ ಒಂದು ರೀತಿಯ ಜೇನುಗೋಂದು ಉತ್ಪಾದಿಸಿ ಅದನ್ನು ಚೌಕಟ್ಟುಗಳಿಗೆ ಹಾಗೂ ಪೆಟ್ಟಿಗೆಯ ರಂದ್ರಗಳನ್ನು ಮುಚ್ಚಲು ರಕ್ಷಣಾತ್ಮಕವಾಗಿ ಬಳಸುತ್ತವೆ. ಆದುದರಿಂದ ಇವುಗಳ ಕುಟುಂಬಗಳಲ್ಲಿ ಮೇಣದ ಚಿಟ್ಟೆಯ ಹಾವಳಿ ಉಂಟಾಗುವುದೇ ಇಲ್ಲ. ಆದರೆ ಜೇನುಪೆಟ್ಟಿಗೆಗಳಿಂದ ಚೌಕಟ್ಟುಗಳನ್ನು ತೆಗೆಯಲು, ಮರಗೆಲಸದಲ್ಲಿ ಬಳಸುವ ಉಳಿಯಂತಿರುವ ಸಾಧನವು ಬೇಕಾಗುವುದು. (ಊive ಖಿooಟ). ಈ ಜೇನುಕುಟುಂಬಗಳಿಂದ ಹೆಚ್ಚು ಪ್ರಮಾಣದ ಜೇನುತುಪ್ಪವನ್ನು ಸಂಗ್ರಹಿಸಬಹುದು. ಇದರೊಂದಿಗೆ ಜೇನುಗೋಂದನ್ನು ಕೂಡ ತೆಗೆದು ಔಷಧಗಳ ತಯಾರಿಕೆಗಾಗಿ ಬಳಸಲಾಗುತ್ತಿದೆ. ಸ್ಥಳಾಂತರ ಜೇನು ಕೃಷಿಗೆ ಈ ಕುಟುಂಬಗಳು ಸುಲಭವಾಗಿ ಹೊಂದಿಕೊಳ್ಳುತ್ತವೆ. ಈ ಕುಟುಂಬಗಳು ಪರಾರಿಯಾಗುವುದು ತೀರಾ ವಿರಳ. ಹಾಗಾಗಿ ಭಾರತೀಯ ತುಡಿವೆ ನೊಣಗಳಿಗೆ ಬಳಸುವಂತೆ ರಾಣಿತಡೆ ಅವಶ್ಯಕತೆಯು ಇರುವುದಿಲ್ಲ.(ಕಿeeಟಿ ಉಚಿಣe). ಥಾಯಿಶ್ಯಾಕ್ ಬ್ರೂಡ್ ವೈರಸ್ ಖಾಯಿಲೆ ನಿರೋಧಕ ಗುಣವು ಹೆಚ್ಚಿದೆ. ವಿಸ್ತಾರವಾದ ಹೊಲಗದ್ದೆಗಳಲ್ಲಿ ಪುಷ್ಪಗಳು ಅರಳಿದಾಗ ಈ ಕುಟುಂಬಗಳನ್ನು ಅಂತಹ ಸ್ಥಳಗಳಿಗೆ ಸ್ಥಳಾಂತರಿಸಿ ಹೆಚ್ಚು ಜೇನುತುಪ್ಪವನ್ನು ಸಂಗ್ರಹಿಸಬಹುದು.

ಇವುಗಳ ಗುಣದೋಷಗಳು ಎಂದರೆ ಮಲೆನಾಡಿನ ನಿಸರ್ಗದತ್ತ ಕಾಡುಗಳಲ್ಲಿರುವ ಅನೇಕ ಪ್ರಭೇದದ ಪುಷ್ಪಗಳಿಗೆ ಪರಾಗ ಅಥವಾ ಮಕರಂದ ಸಂಗ್ರಹ ಮಾಡಲು ಆಸಕ್ತಿ ತೋರಿಸುವುದಿಲ್ಲ. ಅಲ್ಲದೇ ಸುಲಭವಾಗಿ ಶತ್ರು ಪಡೆಗಳಿಗೆ ತುತ್ತಾಗುವವು. ಬೇಳಗಿನ ಅವಧಿಯಲ್ಲಿ ತಡವಾಗಿ ಚಟುವಟಿಕೆಯನ್ನು ಆರಂಭಿಸುತ್ತವೆ. ಜೇನು ಹೇನುಗಳ ಉಪಟಳ ಹೆಚ್ಚಿದೆ. ಈ ಕುಟುಂಬಗಳನ್ನು ‘ಲಾಂಗ್ ಸ್ಟ್ರಾತ್ ಮಾದರಿಯ ದೊಡ್ಡ ಪೆಟ್ಟಿಗೆಗಳಲ್ಲಿ ಪಾಲನೆ ಮಾಡಬಹುದು.



ಜೇನು ಕುಟುಂಬಗಳು ಪರಾರಿಯಗಲು ಕಾರಣವಾಗುವ ಕೆಲವು ಅಂಶಗಳು ಮತ್ತು ಸಾಮಾನ್ಯ ನಿವಾರಣ ಉಪಾಯಗಳು( Desertion(obscanding) & prevention)[ಬದಲಾಯಿಸಿ]

ಜೇನುಕುಟುಂಬಗಳು ಹೆಚ್ಚು ಅವಧಿಯವರೆಗೆ ಒಂದೇ ಕಡೆ ನೆಲೆಸಿರಲು ಸಾಕಷ್ಟು ಆಹಾರದ ದಾಸ್ತಾನು ಸದಾಗೂಡಿನಲ್ಲಿರಬೇಕು. ಇಲ್ಲವೇ ಸಂಗ್ರಹಿಸಿ ತರುವಂತಾದರೂ ಅವಕಾಶಗಳು ದೊರೆಯಬೇಕು. ಹೀಗಿರುವಾಗ ಅವುಗಳ ಸಂತಾನಚಕ್ರವು ಸುಗಮವಾಗಿ ಸುತ್ತುವಂತಾಗುವುದು. ಜೇನು ಕುಟುಂಬಗಳಿಗೆ ಆಹಾರದ ಅಭಾವವಾಗದೇ ಪುಷ್ಪರಸ ಮತ್ತು ಪರಾಗ ಈ ಎರಡು ಅಂಶಗಳು ಧಾರಾಳವಾಗಿ ದೊರಕುತ್ತಿರಬೇಕು. ಪರಾಗ ಮತ್ತು ಪುಷ್ಪರಸವನ್ನು ನೀಡುವ ವನಸ್ಪತಿಗಳ ಪಟ್ಟಿಯನ್ನು ಪ್ರತ್ಯೇಕ ಭಾಗದಲ್ಲಿ ನೀಡಲಾಗಿದೆ. ಹೀಗೆ ಅವುಗಳಿಗೆ ಸದಾಕಾಲವು ಆಹಾರ ದೊರಕುತ್ತಿದ್ದರೆ ಪರಾರಿಯಗುವುದು ವಿರಳ. ಆದರೂ ಸಹ ಪರಾರಿಯಗಲು ಈ ಕೆಳಗಿನ ಕೆಲವು ಅಂಶಗಳು ಸಹ ಕಾರಣವಾಗಬಹುದು. ಕೃಷಿಕರಿಗೆ ಇದೊಂದು ದೊಡ್ಡ ಸಮಸ್ಯೆಯಗಿದೆ. ಅದರಲ್ಲೂ ಕಡಿಮೆ ಸಂಖ್ಯೆಯಲ್ಲಿ ೧-೨ ಜೇನು ಕುಟುಂಬ ಪಾಲನೆ ಮಡುತ್ತಿರುವ ಕೃಷಿಕರಿಗೆ ತೀವ್ರ ನಿರಾಸೆ ಉಂಟುಮಡುವುದಾಗಿದೆ.

1. ಆಹಾರದ ಅಭಾವದಿಂದ ಪರಾರಿಯಗುವುದು.[ಬದಲಾಯಿಸಿ]

ಇದರ ನಿವಾರಣೆಗಾಗಿ ಜೇನು ತುಪ್ಪದ ಹಂಗಾಮು ಮುಗಿಯುವಾಗ ಒಮ್ಮೇಲೆ ಸಸ್ಯಗಳಲ್ಲಿ ಆಹಾರ ದೊರಕುವುದು ಸ್ಥಗಿತಗೊಳ್ಳುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಹೆಚ್ಚಾಗಿ ಮಲೆನಾಡು ಭಾಗಗಳಲ್ಲಿ ಹೀಗೆ ಆಗುವುದು ಕಂಡು ಬರುವುದು. ಆದುದರಿಂದ ಸಾಕಷ್ಟು ಜೇನುತುಪ್ಪವನ್ನು ಪೆಟ್ಟಿಗೆಯಲ್ಲಿರುವ ಒಂದು ಜೇನುಕೋಣೆಯಲ್ಲಾದರೂ ಕೃಷಿಕರು ಉಳಿಸಿರಬೇಕು. ಅದೂ ಸಹ ಸಾಧ್ಯವಾಗದೇ ಅಭಾವವಾಗಿದ್ದಲ್ಲಿ ನೊಣಗಳ ಹೊಟ್ಟೆಪಾಡಿಗಾಗಿ ಸಕ್ಕರೆ ಮಿಶ್ರಣವನ್ನು 1:1 ಪ್ರಮಣದಲ್ಲಿ ಒಂದು ಹನಿ ನಿಂಬೆ ಹಣ್ಣಿನ ರಸಯುಕ್ತ ನೀರು ಇಲ್ಲವೇ ಜೇನು ಮತ್ತು ನೀರಿನ ಮಿಶ್ರಣವನ್ನು ಆಹಾರವಾಗಿ ಕೊಡಬಹುದು. ಹೀಗೆ ಆಹಾರ ನೀಡಲು ಅಗಲ ಬಾಯಿ ಇರುವ ಪ್ಲಾಸ್ಟಿಕ್ಕಿನ ೨೫೦ ಎಂ.ಎಲ್. ಬಾಟಲಿನಲ್ಲಿ ತುಂಬಿಸಿ ಮುಚ್ಚಳಕ್ಕೆ ಚಿಕ್ಕ ಸೂಜಿಯನ್ನು ಕಾಯಿಸಿ ಚುಚ್ಚಿದರೆ ರಂದ್ರಗಳಾಗುತ್ತವೆ. ಇದು ೧ಎಂ.ಎಂ. ಗಿಂತ ಕಡಿಮೆ ವ್ಯಾಸದ ರಂದ್ರವಾಗಿರಲಿ. ಹೀಗೆ ಸಾಕಷ್ಟು ರಂದ್ರಗಳನ್ನು ಮಡಿ ಆಹಾರದ ದ್ರಾವಣವನ್ನು ತುಂಬಿಸಿ ಸಂಜೆ ವೇಳೆಗೆ ಜೇನುಕೋಣೆ ಅಥವಾ ಸಂಸಾರಕೋಣೆಯ ಮೇಲೆ ಬೋರಲಾಗಿರಿಸಿ ಮುಚ್ಚುಳಹಾಕಬೇಕು. ನಂತರ ನೋಣಗಳು ಸುರಕ್ಷಿತವಾಗಿ ತಮ್ಮ ಹೀರುಕೊಳವೆಯ ಮೂಲಕ ಹೀಗೆ ನೀಡಿರುವ ಆಹಾರವನ್ನು ತೆಗೆದುಕೊಳ್ಳುತ್ತವೆ. ತೀವ್ರತೆರನಾಗಿ ಆಹಾರವು ಪರಿಸರದಲ್ಲಿ ದೊರಕದಿದ್ದರೆ ಈ ರೀತಿಯದ ೨ ಬಾಟಲಿಗಳಲ್ಲಿ ಒಮ್ಮೆಗೆ ಆಹಾರನೀಡಿ ಒಂದು ದಿನದ ನಂತರ ಮತ್ತೊಮ್ಮೆ ನೀಡಿದರೆ ೧ಲೀ. ಪ್ರಮಣ ಆಹಾರ ನೀಡಿದಂತಾಗುವುದು. ಹೀಗೆ ಕೆಲವು ದಿನಗಳ ಅಂತರದಲ್ಲಿ ೨_೩ ಬಾರಿ ಕೆಲವೊಮ್ಮೆ ಆಹಾರವನ್ನು ನೀಡಬೇಕಾಗಬಹುದು. ಇದರಿಂದಾಗಿ ನೋಣಗಳಿಗೆ ಪುಷ್ಪರಸದ ಆಭಾವವನ್ನು ತಗ್ಗಿಸಬಹುದು. ಆದರೆ ಪರಾಗದ ಅಭಾವವನ್ನು ನೀಗಿಸಲು ತೆಂಗು ಮುಂತಾದ ಹೆಚ್ಚು ಪರಾಗವನ್ನು ಸದಾ ನೀಡುವ ಮರಗಳಿದ್ದಲ್ಲಿ ಮಾತ್ರ ಅವುಗಳಿಗೆ ಮೊಟ್ಟೆಮರಿಗಳನ್ನು ಬೆಳೆಸಲು ಉಪಯುಕ್ತವಾಗುವುದು. ಎಲ್ಲಕ್ಕಿಂತ ಮಿಗಿಲಾಗಿ ಜೇನು ಕುಟುಂಬಗಳನ್ನು ಉತ್ತಮ ಸನ್ನಿವೇಶ ಇರುವೆಡೆಗೆ ಸ್ಥಳಾಂತರಿಸಿದರೆ ಜೇನು ಉತ್ಪತ್ತಿಯು ಅಕಾಲದಲ್ಲಿ ದೊರಕಿದಂತಾಗುವುದು. ಕುಟುಂಬಗಳು ಸಹ ಬಲಿಷ್ಠವಾಗುತ್ತವೆ. ಮರಿ ಕುಟುಂಬಗಳನ್ನು ಸಹ ಉತ್ಪಾದಿಸಬಹುದು. ಈ ರೀತಿ ಆಹಾರ ಅಭಾವ ಸಮಯದಲ್ಲಿ ಅಲ್ಪಸ್ವಲ್ಪ ಆಹಾರ ದಾಸ್ತಾನು ಉಳಿಸಿಕೊಂಡಿರುವ ಜೇನುಕುಟುಂಬಗಳಿಗೆ ಬೇರೆ ಪೆಟ್ಟಿಗೆಯಿಂದ ನೋಣಗಳು ನುಗ್ಗಿ ಆಹಾರ ಅಪಹರಿಸಲು ಯತ್ನಿಸಿ ಕಚ್ಚಾಟ ನಡೆಯಬಹುದು. ಅಭಾವ ಕಾಲದಲ್ಲಿ ಆಹಾರಕ್ಕಾಗಿ ನೋಣಗಳು ತುಂಬಾ ಪೇಚಾಡುತ್ತವೆ, ಇದಕ್ಕಾಗಿ ಎಲ್ಲಾ ಪೆಟ್ಟಿಗೆಗೆಗಳಿಗೂ ಒಂದೇದಿನ ಸಂಜೆ ಕಾಲದಲ್ಲಿ ಆಹಾರ ಒದಗಿಸುವುದು ಉತ್ತಮ. ಜೇನುನೊಣಗಳ ಸ್ವಾಭಾವಿಕ ಹಾರಾಟದ ಪರಿಧಿಯು ಸುಮರು ೭೫೦ಮೀ. ಆಗಿರುವುದರಿಂದ ಕುಟುಂಬಗಳನ್ನು ನೊಣ ಹಾರಾಡುವ ದೂರಕ್ಕಿಂತ ಹೆಚ್ಚಿನ ಅಂತರದಲ್ಲಿ ಮೊದಲೇ ಇರಿಸಿಕೊಳ್ಳುವುದು ಕ್ಷೇಮಮಕರ.

2. ಥಾಯಿಸ್ಯಾಕ್ ಬ್ರೂಡ್ ಖಾಯಿಲೆ:-[ಬದಲಾಯಿಸಿ]

ಇದು ಮೊಟ್ಟೆ ಮರಿಗಳಮೇಲೆ ಆಕ್ರಮಿಸುವ ವೈರಸ್ ಖಾಯಿಲೆಯಾಗಿದ್ದು ನೊಣಗಳಿಗೆ ತಗಲುವುದಿಲ್ಲ. ನಿವಾರಣೆಗಾಗಿ ಯಾವುದೇ ಔಷಧವೂ ಸಹ ಇನ್ನು ತಿಳಿದುಬಂದಿಲ್ಲ. ಈ ಖಾಯಿಲೆಯಿಂದಾಗಿ ಜೇನು ಕುಟುಂಬಗಳಲ್ಲಿ ನೊಣಗಳ ಸಂಖ್ಯೆ ವೃದ್ಧಿಯಗುವುದಿಲ್ಲ. ಈ ಖಾಯಿಲೆ ಬಂದಿರುವ ಪ್ರದೇಶದಲ್ಲಿ ತೀವ್ರಗತಿಯಲ್ಲಿ ಎಲ್ಲಾಕಡೆ ಎಲ್ಲಾ ಕುಟುಂಬಗಳಿಗೆ ವ್ಯಾಪಿಸುವುದು. ಇಂತಹ ಕುಟುಂಬಗಳನ್ನು ಸ್ಥಳಾಂತರಕೃಷಿಗಾಗಿ ತೆಗೆದುಕೊಳ್ಳಬಾರದು ಹಾಗೂ ಮೊಟ್ಟೆಮರಿ ಏರಿಯನ್ನು ಯರವಲಾಗಿ ಬೇರೊಂದು ಕುಟುಂಬಕ್ಕೆ ಕೊಡಲು ಸಹ ಬಳಸಬಾರದು. ಈ ವೈರಸ್ ಖಾಯಿಲೆ ಪೀಡಿತಕುಟುಂಬದಲ್ಲಿ ಮರಿಹುಳಗಳು ಬೆಳೆಯುತ್ತಿರುವ ಕಣದಲ್ಲೇ ಕೊಳೆತು ಸತ್ತು ಹೋಗಿರುತ್ತವೆ. ಕೋಶಾವಸ್ಥೆಯ ನೊಣಗಳ ಮುಚ್ಚಳದ ಮೇಲೆ ಅತೀ ಸೂಕ್ಷ್ಮವಾದ ರಂದ್ರಗಳನ್ನು ಕಾಣಬಹುದು. ಹೊಸದಾಗಿ ಹೆಚ್ಚಿನ ಸಂಖ್ಯೆಯ ನೊಣಗಳು ಹುಟ್ಟಿ ಬಾರದಿರುವುದರಿಂದ ಜೇನು ಕುಟುಂಬದಲ್ಲಿ ಸದ್ಯದಲ್ಲಿ ಬೆಳೆದಿರುವ ನೊಣಗಳಿಂದಲೇ ಸಂಸಾರ ನಡೆಯುತ್ತಿರುತ್ತವೆ. ಹೆಜ್ಜೇನು ಮತ್ತು ತುಡಿವೆ ಜೇನುಗಳಿಗೆ ಇದೊಂದು ಅತ್ಯಂತ ಮರಕ ರೋಗವಾಗಿದ್ದು ಜೇನು ಕುಟುಂಬಗಳು ದೇಶದಾದ್ಯಂತ ತೀವ್ರಗತಿಯಲ್ಲಿ ಇಳಿಮುಖವಾಗಿವೆ. ಇದರಿಂದ ಜೇನುಕುಟುಂಬಗಳನ್ನು ಸಂರಕ್ಷಣೆ ಮಡುವ ಕುರಿತು ಶೀಘ್ರಗತಿಯಲ್ಲಿ ಸಂಶೋಧನೆ ಮತ್ತು ನಿವಾರಣಾ ತಂತ್ರ ಜಾರಿಗೆ ಕಂಡುಕೊಳ್ಳದಿದ್ದಲ್ಲಿ ಜೇನುಕುಟುಂಬಗಳು ಪ್ರಕೃತಿಯಲ್ಲಿ ಇನ್ನಿಲ್ಲದಂತೆ ವಿರಳವಾಗುತ್ತವೆ.

3. ಶತ್ರುಗಳ ಉಪಟಳದಿಂದ ಪರಾರಿಯಗುವುದು.[ಬದಲಾಯಿಸಿ]

ಸಾಮಾನ್ಯವಾದ ಶತ್ರುಗಳೆಂದರೆ:-

  1. ಮೇಣದ ಚಿಟ್ಟೆ
  2. ಇರುವೆ
  3. ಮರನಾಯಿ/ಕ್ಯಾಸಳಿಲು/ಕೆಂಪುಬಾಲದ ಅಳಿಲು
  4. ಭೀಮರಾಜ ಪಕ್ಷಿ/ ಜೇನು ಬಾಕ ಪಕ್ಷಿ / ಪಳ್ಳಿಕೀರ ಪಕ್ಷಿ
  5. ಕಣಜಗಳು (ಬ್ರೌನ್ ಬ್ಯಾಂಡೆಡ್ ವಾಸ್ಪ್)
  6. ಕರಡಿ
  7. ಸ್ಯುಡೋ ಕಾರ್ಪಿಯನ್ ಕೀಟ (P-Seudo scorpion)
  8. ಜೇನು ಹೇನುಗಳು (Mites- Fungal feeders)
  9. ವರೋಜಾಕೋಬ್‌ಸನ್ ಎಂಟು ಕಾಲಿನ ಕೀಟ (varroajacobsoni)
  10. ನೋಡಲು ಜೇನು ನೊಣಗಳಂತೆಯೇ ಇರುವ ಜೇನು ನೊಣ ಭಕ್ಷಕ ಕೀಟ

೧. ಮೇಣದ ಚಿಟ್ಟೆ:-[ಬದಲಾಯಿಸಿ]

ಇದು ಸಂಸಾರ ಕೋಣೆಯ ಎರಿಗಳಲ್ಲಿ ನುಗ್ಗಿ ಹಳೇ ಎರಿಗಳ ಮಧ್ಯೆ ಸುರಂಗ ಮಾಡಿ ಎರಿಯನ್ನು ಅನುಪಯುಕ್ತಗೊಳಿಸುವುದು. ತಂಪು ವಾತಾವರಣದಲ್ಲಿ ಇದರ ಉಪಟಳ ಹೆಚ್ಚು. ರಾತ್ರಿ ವೇಳೆ ಚಲಿಸುವ ಒಂದು ಜಾತಿಯ ಪತಂಗವು ಜೇನು ಪೆಟ್ಟಿಗೆಯ ಸಂದುಗಳಲ್ಲಿ ಒಮ್ಮೆಗೆ ೩೦೦-೪೦೦ ಮೊಟ್ಟೆಗಳನ್ನಿರಿಸಿ ಆ ಮೊಟ್ಟೆಗಳಿಂದ ಮೇಣ ಚಿಟ್ಟೆಯ ಹುಳುಗಳು ಹುಟ್ಟಿಬರುತ್ತವೆ. ಪರಾಗದ ತುಣುಕುಗಳನ್ನು ತಿನ್ನಲು ಅಡಿಮಣೆಯ ಸಂದುಗಳಲ್ಲಿ ಬೆಳೆದು ಸಂಸಾರ ಕೋಣೆಗೆ ಪ್ರವೇಶಿಸುತ್ತವೆ. ಅವುಗಳಿಗೆ ಬೆಳವಣಿಗೆಯ ಸೂಕ್ತ ವಾತಾವರಣ ದೊರೆಯುವವರೆಗೂ ಮೊಟ್ಟೆಗಳು ಜೇನು ಪೆಟ್ಟಿಗೆಯ ಸಂದುಗಳಲ್ಲಿ ಬದುಕಿರುತ್ತವೆ. ಇದರಲ್ಲಿ ಎರಡು ಪ್ರಭೇದವಿದೆ. ಚಿಕ್ಕ ಮೇಣದ ಚಿಟ್ಟೆಹುಳು ಹಾಗೂ ದೊಡ್ಡ ಗಾತ್ರದ ಮೇಣದ ಚಿಟ್ಟೆ ಹುಳಗಳನ್ನು ನೋಡಬಹುದು. (Lesser Wax Moth & Grator Wax Moth ) ಇದರ ಉಪಟಳ ಅಧಿಕವಾದಾಗ ಸಂಸಾರದ ಎರಿಗಳು ಬಲೆಯಂತಾಗಿ ನೊಣಗಳು ಪರಾರಿಯಗುತ್ತವೆ. ಇದರ ನಿವಾರಣೆಗಾಗಿ ಜೇನುಕುಟುಂಬದಲ್ಲಿ ಯಾವಾಗಲೂ ಹೊಳಪುಳ್ಳ ಎರಿಗಳಿರುವಂತೆ ನಿಗಾ ವಹಿಸಬೇಕು. ಹಳೆಯದಾದ ಎರಿಗಳನ್ನು ಆಗಿಂದಾಗ್ಗೆ ತೆಗೆದು, ಹಾಗೆ ತೆಗೆದ ಖಾಲಿ ಚೌಕಟ್ಟುಗಳಿಗೆ ಮೇಣದ ತಳಹದಿ ಮರ್ಗದರ್ಶಿ ಅಂಟಿಸುವ ಛಡಿಯಲ್ಲಿ ಉದ್ದಕ್ಕೂ ೧/೪ ಇಂಚು ಅಗಲದಲ್ಲಿ ಮೇಣದ ತಳಹದಿ ಅಂಟಿಸಿ ಸಂಸಾರ ಕೋಣೆ ಮಧ್ಯದಲ್ಲಿ ಒಂದೊಂದೇ ಚೌಕಟ್ಟನ್ನು ಕಾಲಕಾಲದಲ್ಲಿ ನೀಡಿ ಎರಿ ರಚಿಸಿದಂತೆಲ್ಲಾ ಪಕ್ಕಕ್ಕೆ ಜಾರಿಸಿ ಇನ್ನೊಂದು ಚೌಕಟ್ಟನ್ನು ಇದೇ ರೀತಿ ಎರಿ ರಚಿಸಲು ನೀಡಬೇಕು. ೧೫ ದಿನಗಳಿಗೊಮ್ಮೆ ಅಡಿಮಣೆಯನ್ನು ಶುಚಿಗೊಳಿಸಬೇಕು. ಅಥವಾ ಮೊದಲೇ ಶುಚಿಗೊಳಿಸಿದ ಬದಲಿ ಅಡಿಮಣೆಯನ್ನು ನೀಡಬೇಕು. ಅಡಿಮಣೆಯ ಸಂದುಗಳಲ್ಲಿರುವ ಕಣ್ಣಿಗೆ ಕಾಣದಂತಿರುವ ಮೇಣದ ಚಿಟ್ಟೆಯ ಮೊಟ್ಟೆಗಳನ್ನು ನಾಶಪಡಿಸಲು ಬಿಸಿಮಾಡಬಹುದು. ಆದರೆ, ತಣ್ಣನೆಯ ಅಡಿಮಣೆಯನ್ನು ಮಾತ್ರ ಬದಲಿಸಲು ಬಳಸಬೇಕು. ಪೆಟ್ಟಿಗೆಯ ಎಲ್ಲಾ ಸಂದುಗಳನ್ನು ಮಳೆಗಾಲದಲ್ಲಿ ಕೆಮ್ಮಣ್ಣಿನಿಂದ ಮುಲಾಮಿನಂತೆ ಮಾಡಿ ಹೊರಭಾಗದಿಂದ ಮುಚ್ಚಿದ್ದರೆ ಸುಲಭವಾಗಿ ಮೇಣದ ಚಿಟ್ಟೆ ಮೊಟ್ಟೆಯಿರಿಸಲು ಸಾಧ್ಯವಾಗುವುದಿಲ್ಲ.

೨. ಇರುವೆ:-[ಬದಲಾಯಿಸಿ]

ಜೇನುಕುಟುಂಬಗಳಿಗೆ ಇರುವೆಯಿಂದ ಆಗಿಂದಾಗ್ಗೆ ತೀವ್ರವಾದ ಉಪಟಳ ಉಂಟಾಗುವುದು. ಋತುಮಾನ ಬದಲಾದಂತೆಲ್ಲಾ ಬೇರೆ ಬೇರೆ ಜಾತಿಯ ಇರುವೆಗಳು ಕಾಣಿಸಿಕೊಳ್ಳುತ್ತವೆ. ಅಲ್ಲದೆ ಸ್ಥಳೀಯವಾಗಿಯೂ ಬೇರೆ ಬೇರೆ ಇರುವೆಯ ಜಾತಿಯನ್ನು ಕಾಣುತ್ತೇವೆ. ಜೇನುಕುಟುಂಬಗಳನ್ನಿರಿಸಿರುವ ಸ್ಟ್ಯಾಂಡ್ ಬುಡದಲ್ಲಿ ಸದಾ ನೀರು ನಿಲ್ಲುವಂತೆ ಮಾಡಿ ರಕ್ಷಿಸುವುದು ಒಂದು ವಿಧಾನ. ನೈಸರ್ಗಿಕವಾದ ಗೇರು ಎಣ್ಣೆ ಅಥವಾ ಈಗೀಗ ಹೆಚ್ಚು ಸುಲಭವಾಗಿ ದೊರೆಯುತ್ತಿರುವ ವಾಹನಗಳಿಂದ ತೆಗೆದ ಸುಟ್ಟ ಎಣ್ಣೆಯನ್ನು ಕಂಬಗಳ ಬುಡಕ್ಕೆ ಲೇಪಿಸಿ ಇರುವೆಯನ್ನು ಶೇ.೯೦ ನಿಯಂತ್ರಣಗೊಳಿಸಬಹುದು.

೩. ಮರನಾಯಿ/ಕ್ಯಾಸಳಿಲು/ಕೆಂಪುಬಾಲದ ಅಳಿಲು:-[ಬದಲಾಯಿಸಿ]

ಸ್ಥಳೀಯವಾಗಿ ಬೇರೆ ಬೇರೆ ಹೆಸರಿನಿಂದ ಇದನ್ನು ಗುರುತಿಸುತ್ತಾರೆ. ಜೇನುಕುಟುಂಬದಲ್ಲಿರುವ ಜೇನುತುಪ್ಪವನ್ನು ಕಬಳಿಸಲು ಇದು ಇಡೀ ಪೆಟ್ಟಿಗೆಯನ್ನು ಕೆಡವಿ ಹಾಕಿ ಹಾಳುಮಾಡುವುದು. ಇದರ ಉಪಟಳ ಇರುವ ಪ್ರದೇಶದಲ್ಲಿ ಸಾಮಾನ್ಯ ರಕ್ಷಣಾ ವ್ಯವಸ್ಥೆಯನ್ನು ಮಾಡಿದರೆ ಕಿತ್ತೆಸೆಯುವುದರಿಂದ ರಕ್ಷಿಸಬಹುದು. ಜೇನುಪೆಟ್ಟಿಗೆಗಳಿಗೆ ೪ ದಿಕ್ಕಿನಲ್ಲಿ ಬಲವಾದ ಕಂಬಗಳನ್ನು ನೆಟ್ಟು ಸಂಸಾರ ಕೋಣೆ - ಜೇನು ಕೋಣೆ ಹಾಗೂ ಮುಚ್ಚಳಗಳನ್ನು ಈ ಕಂಬಕ್ಕೆ ಗಟ್ಟಿ ದಾರದಿಂದ ಬಿಗಿದು ಬಲಗೊಳಿಸಬೇಕಾಗುತ್ತದೆ.

೪. ಭೀಮರಾಜ ಪಕ್ಷಿ : -[ಬದಲಾಯಿಸಿ]

ಭೀಮರಾಜಪಕ್ಷಿ ಮತ್ತು ಇತರ ಅನೇಕ ಜಾತಿಯ ಪಕ್ಷಿಗಳು ಸಹ ಹಾರುತ್ತಿರುವ ಜೇನುನೊಣಗಳನ್ನು ಹಿಡಿದು ತಿನ್ನುತ್ತವೆ. ಜೇನುಕುಟುಂಬದಲ್ಲಿರುವ ನೊಣಗಳನ್ನು ಭಕ್ಷಿಸುವ ಅನೇಕ ಪ್ರಭೇದದ ಪಕ್ಷಿಗಳನ್ನು ದಕ್ಷಿಣ ಭಾರತದಲ್ಲಿ ಕಾಣಬಹುದು. ಕೆಲವು ಪ್ರಭೇದದ ಪಕ್ಷಿಗಳು ಜೇನುಪೆಟ್ಟಿಗೆಯ ಮುಖದ್ವಾರದಲ್ಲಿ ಬಂದು ಕುಳಿತು ಉದ್ದನೆಯ ಕೊಕ್ಕನ್ನು ತೂರಿಸಿ ನೊಣಗಳನ್ನು ರೊಚ್ಚಿಗೆಬ್ಬಿಸಿ ಹಾರಾಡುವಂತೆ ಮಾಡಿ ಹಾರುವ ನೊಣಗಳನ್ನು ತಿನ್ನುತ್ತವೆ. ಪಳ್ಳಿಕೀರ ಪ್ರಭೇದದ ಹಕ್ಕಿಗಳು ಮತ್ತು ಭೀಮರಾಜಪಕ್ಷಿ (ಕಪ್ಪು ಬಣ್ಣ) ವಿದ್ಯುತ್ ತಂತಿಗಳ ಅಥವಾ ಮರದ ಮೇಲೆ ಕುಳಿತು ಹಾರುತ್ತಿರುವ ಜೇನು ನೊಣಗಳನ್ನು ಹಿಡಿದು ತಿನ್ನುತ್ತವೆ. ಪಳ್ಳಿಕೀರ ಪಕ್ಷಿಯ ಕೊರಳಲ್ಲಿ ನಸುಗೆಂಪು ಪಟ್ಟೆಯಂತೆ ಗಂಡು ಹಕ್ಕಿಗಳಲ್ಲಿ ಒಂದು ಪಟ್ಟಿಯನ್ನು ಕಾಣಬಹುದು ಮತ್ತು ದೇಹವು ಹಸಿರು ಬಣ್ಣದಲ್ಲಿರುತ್ತದೆ. ಈ ಜಾತಿಯ ಪಕ್ಷಿಗಳು ಕಂದಕಗಳ ಗೋಡೆಯ ಮಣ್ಣಿನಲ್ಲಿ ಗೂಡು ನಿರ್ಮಿಸಿಕೊಂಡು ಸಂತಾನಾಭಿವೃದ್ಧಿಯ ಕಾಲದಲ್ಲಿ ಅಂದರೆ ಡಿಸೆಂಬರ್, ಜನವರಿ, ಮಾರ್ಚ್ ತಿಂಗಳವರೆಗೆ ಹೆಚ್ಚು ಉಪಟಳ ನೀಡುತ್ತವೆ. ಈ ಪಕ್ಷಿಗಳು ಒಂದೊಂದು ದಿನದಲ್ಲಿ ಸುಮಾರು ೧೫೦ಕ್ಕೂ ಹೆಚ್ಚಿನ ಜೇನುನೊಣಗಳನ್ನು ತಿನ್ನುತ್ತವೆ. ಜೇನುಕುಟುಂಬಗಳು ಪಾಲಾದಾಗ ಹಾಗೂ ಜೋಡಿಗಾಗಿ ಹೊರಡುವ ರಾಣಿ ನೊಣದ ದಿಬ್ಬಣ ಹಾರಾಟ ಕಾಲದಲ್ಲಿ ಸುಲಭವಾಗಿ ಬೇರೆ ಬೇರೆ ಪ್ರಭೇದದ ಈ ಪಕ್ಷಿಗಳ ಉಪಟಳಕ್ಕೆ ತುತ್ತಾಗುವುದು. ಆಗ ಅನೇಕ ಜೇನುಕುಟುಂಬಗಳಲ್ಲಿ ರಾಣಿ ನೊಣಗಳು ಇಲ್ಲದಂತಾಗುವುದು ಸಾಮಾನ್ಯ ಸಂಗತಿಯಾಗಿದೆ. ನಿವಾರಣೆಗಾಗಿ ತಾತ್ಕಾಲಿಕವಾಗಿ ದಟ್ಟ ಮರ-ಗಿಡವಿರುವ/ತೋಟದ ಭಾಗಕ್ಕೆ ಜೇನುಪೆಟ್ಟಿಗೆಗಳನ್ನು ಸ್ಥಳಾಂತರಿಸುವುದು ಉತ್ತಮ ಮಾರ್ಗ. ಜೇನು ಪೆಟ್ಟಿಗೆಗಳಿಗೆ ತಂತಿಜಾಲರಿ ಸುತ್ತಿ ರಕ್ಷಿಸಬಹುದು. ಮುಂಭಾಗದ ಅಡಿಮಣೆಯ ಮೇಲೆ ಕೆಲವರು ಇಲಿಗತ್ತರಿಯನ್ನು ಇರಿಸಿ ಕೆಲವು ಹಕ್ಕಿಗಳನ್ನು ಹಿಡಿದು ಉಳಿದ ಹಕ್ಕಿಗಳಿಗೆ ಭಯ ಬರಿಸುತ್ತಾರೆ.

೫. ಕರಡಿ:-[ಬದಲಾಯಿಸಿ]

ಕರಡಿಗಳೂ ಸಹ ಜೇನುಕುಟುಂಬಗಳನ್ನು ನಾಶಪಡಿಸುತ್ತವೆ. ಕರಡಿಗಳಿಗೂ ಜೇನುಗಳಿಗೂ ಎಲ್ಲಿಲ್ಲದ ನಂಟು. ಇದು ಕುಟುಂಬದ ಎಲ್ಲಾ ಎರಿಗಳನ್ನು ಕಿತ್ತು ತಿನ್ನುವುದು. ಇದರ ದಾಳಿ ನಿವಾರಣೆಗಾಗಿ ಜೇನುಕುಟುಂಬಗಳನ್ನು ಸ್ಥಳಾಂತರ ಮಾಡುವುದೊಂದೇ ಮಾರ್ಗವಾಗಿರುತ್ತದೆ.

೬. ಕಣಜದ ಹುಳ (Brown Banded Wasp):-[ಬದಲಾಯಿಸಿ]

ಇವು ಜೇನುನೊಣಗಳನ್ನು ಪೆಟ್ಟಿಗೆಯ ಮುಂಭಾದಲ್ಲಿ ಕುಳಿತು ಕೆಲವೊಮ್ಮೆ ಪೆಟ್ಟಿಗೆಯ ಒಳಗೂ ನುಗ್ಗಿ ಹಿಡಿದು ತಿನ್ನುತ್ತವೆ. ಇವುಗಳ ಉಪಟಳದಿಂದ ಜೇನುಕುಟುಂಬಗಳು ಪೆಟ್ಟಿಗೆಯನ್ನು ಬಿಟ್ಟು ಪರಾರಿಯಗುತ್ತವೆ. ಸಾಮನ್ಯವಾಗಿ ಹತ್ತಿರದಲ್ಲಿ ದೊಡ್ಡದಾದ ಗೂಡನ್ನು ರಚಿಸಿ ಜುಲೈ - ಆಗಸ್ಟ್ ತಿಂಗಳುಗಳಲ್ಲಿ, ಮಳೆಗಾಲದಲ್ಲಿ ಹೆಚ್ಚು ಉಪಟಳ ನೀಡುತ್ತವೆ. ಇವುಗಳ ನಿವಾರಣೆಗಾಗಿ ಜೇನುಕುಟುಂಬಗಳನ್ನು ಸ್ಥಳಾಂತರಿಸಬೇಕಾಗುವುದು. ಕಣಜದ ಹುಳಗಳು ಪ್ರಕೃತಿಯಲ್ಲಿ ಇತರೇ ಕೀಟಗಳನ್ನು ಭಕ್ಷಿಸುವುದರಿಂದ ಪ್ರಕೃತಿ ಸಮತೋಲನದಲ್ಲಿ ಇವುಗಳ ಪಾತ್ರ ಕಂಡುಬರುವುದು.. ಆದುದರಿಂದ ಇವುಗಳನ್ನು ನಾಶಪಡಿಸುವ ಕ್ರಮ ಸಲ್ಲದು. ಈ ನೊಣಗಳು ಮನುಷ್ಯರಿಗೆ ಮತ್ತು ಜಾನುವಾರುಗಳಿಗೆ ಸಹ ತೊಂದರೆ ಉಂಟುಮಾಡಬಲ್ಲವು. ಆದುದರಿಂದ ಇವುಗಳ ಬಗ್ಗೆ ಎಚ್ಚರವಾಗಿರುವುದು ಅಗತ್ಯ.

೭. ಸ್ಯುಡೋ ಕಾರ್ಪಿಯನ್ ಕೀಟ (pseudoscorpion) :-[ಬದಲಾಯಿಸಿ]

ಉಣ್ಣೆಯಂತೆ ಇದು ಜೇನುನೊಣಗಳ ಕಾಲಿಗೆ ಕಚ್ಚಿಕೊಂಡು ನೇತುಬಿದ್ದಿರುತ್ತದೆ. ಇದರಿಂದ ನೊಣಗಳ ಕೆಲಸಕಾರ್ಯಗಳಿಗೆ ತುಂಬಾ ಅಡಚಣೆ ಉಂಟಾಗುವುದು. ಸಾಮಾನ್ಯವಾಗಿ ಕೆಲಸಗಾರ್ತಿ ನೊಣಗಳು ಪರಾಗಪುಷ್ಪರಸಕ್ಕಾಗಿ ತಿರುಗಾಡಿ ಬರುವಾಗ ಈರೀತಿಯ ಕೀಟಗಳು ನೊಣಗಳ ಕಾಲಿನಲ್ಲಿ ಕಂಡುಬರುತ್ತವೆ. ಇವುಗಳ ನಿವಾರಣೆಗಾಗಿ ದುರ್ಬಲ ರಾಸಾಯನಿಕ-ರಂಜಕ ೨% ಪೆಟ್ಟಿಗೆ ಚೌಕಟ್ಟುಗಳ ಮೇಲೆ ಸಿಂಪಡಿಸಿ ನಿಯಂತ್ರಿಸಬಹುದಾಗಿದೆ.

೮. ಜೇನು ಹೇನುಗಳು (Mites/ fungal feeders):-[ಬದಲಾಯಿಸಿ]

ಈ ಜಾತಿಯ ಹೇನುಗಳು ಜೇನುನೊಣಗಳ ಕುತ್ತಿಗೆಯ ಸುತ್ತಲೂ ಅಂಟಿ ಕೂತಿರುತ್ತವೆ. ನೊಣಗಳು ಕೆಲಸಕಾರ್ಯಗಳನ್ನು ಮಾಡುವಾಗ ಅತ್ಯಂತ ತೊಂದರೆಗೊಳಗಾಗುತ್ತವೆ. ಆಗಿಂದಾಗ್ಗೆ ಈ ಕೀಟಗಳನ್ನು ನಿವಾರಿಸಿಕೊಳ್ಳುವ ಬಗ್ಗೆ ಮುಂಗಾಲಿನಿಂದ ಕುತ್ತಿಗೆಯ ಭಾಗವನ್ನು ಶುಚಿಗೊಳಿಸಿಕೊಳ್ಳಲು ಯತ್ನಿಸುತ್ತವೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಈ ಕೀಟಗಳು ಹೆಚ್ಚು ಕಂಡುಬರುತ್ತವೆ. ನಿವಾರಣೆಗಾಗಿ ದುರ್ಬಲ ರಾಸಾಯನಿಕ-ರಂಜಕ ೨% ಪೆಟ್ಟಿಗೆ ಚೌಕಟ್ಟುಗಳ ಮೇಲೆ ಸಿಂಪಡಿಸಿ ನಿಯಂತ್ರಿಸಬಹುದಾಗಿದೆ.

೯. ವರೋಜಾಕೋಬ್‌ಸನ್ (Varroajacobsoni) :-[ಬದಲಾಯಿಸಿ]

ಈ ಕೀಟವು ೮ಕಾಲುಗಳಿಂದ ಕೂಡಿದ್ದು ಜೇನುನೊಣಗಳ ಅಂಗಾಂಗಗಳಮೆಲೆ ಅಂಟಿಕೊಳ್ಳುವುದು. ಇದರಿಂದಲೂ ಸಹ ಜೇನುನೊಣಗಳಿಗೆ ತೊಂದರೆ ಉಂಟಾಗುವುದು. ಇವುಗಳ ಉಪಟಳ ನಿವಾರಣೆಗಾಗಿಯೂ ಸಹ ದುರ್ಬಲ ರಸಾಯನಿಕ-ರಂಜಕ ೨% ಪೆಟ್ಟಿಗೆ ಚೌಕಟ್ಟುಗಳ ಮೇಲೆ ಸಿಂಪಡಿಸಿ ನಿಯಂತ್ರಿಸಬಹುದಾಗಿದೆ.

೧೦. ನೋಡಲು ಜೇನುನೊಣಗಳಂತೆಯೇ ಇರುವ ಜೇನುನೊಣ ಭಕ್ಷಕ ಕೀಟ:-[ಬದಲಾಯಿಸಿ]

ಈ ಕೀಟಗಳು ಜೇನುನೊಣಗಳಂತೆಯೇ ಕಾಣಿಸುವುದಾದರೂ ತಲೆಯಚಿಪ್ಪಿನ ಮೇಲ್ಭಾಗದಲ್ಲಿ ಬಣ್ಣದಲ್ಲಿ ವ್ಯತ್ಯಾಸ ಕಾಣುವುದು. ಉಸುಕಿರುವ ಜಾಗದಲ್ಲಿ ವಾಸಿಸುವ ಈ ಕೀಟಗಳು ಜೇನುಪೆಟ್ಟಿಗೆಯ ಮುಖದ್ವಾರದಲ್ಲಿ ಬಂದುಕುಳಿತು ಜೇನುನೊಣಗಳನ್ನು ಹಿಡಿದು ಹೊತ್ತೊಯ್ಯುವುದು. ಇದರಿಂದ ಜೇನುನೊಣಗಳ ಸಂಖ್ಯೆ ಕ್ಷೀಣಿಸುವುದು. ಇವುಗಳ ನಿಯಂತ್ರಣಕ್ಕಾಗಿ ಜೇನುಕುಟುಂಬಗಳನ್ನು ಕೂಡಲೇ ಸ್ಥಳಾಂತರಿಸುವುದು ಉತ್ತಮ ಹಾಗೂ ಏಕೈಕ ಮಾರ್ಗವಾಗಿದೆ.

ಜೇನುಕುಟುಂಬಗಳಿಗೆ ಸಹಾಯಮಾಡುವ ಪರೋಪಜೀವಿ ಕೀಟ (A- pantelesgalleria) :[ಬದಲಾಯಿಸಿ]

ಇದೊಂದು ಉಪಕಾರಿ ಕೀಟವಾಗಿದ್ದು, ಹತ್ತಿಯ ಚಿಕ್ಕ ಉಂಡೆಯಂತೆ ಜೋಳದ ಕಾಳಿನ ಗಾತ್ರದಲ್ಲಿ ಅಥವಾ ನವಣೆಯ ಕಾಳಿನ ಗಾತ್ರದಲ್ಲಿ ಕಾಣಿಸುವುದು. ಅಡಿಮಣೆಯಲ್ಲಿ ಕೋಶಾವಸ್ಥೆಯಲ್ಲಿರುವ ಅಲ್ಲಲ್ಲಿ ಇವು ಕೆಲವೊಮ್ಮೆ ಕಾಣಸಿಗುತ್ತವೆ. ಇದು ನೈಸರ್ಗಿಕವಾಗಿ ಮೇಣದ ಚಿಟ್ಟೆಯ ಹುಳಗಳನ್ನು ತಿನ್ನುವ, ನಿಯಂತ್ರಣಗೊಳಿಸುವ ಪ್ರಾಕೃತಿಕ ಹುಳವಾಗಿದೆ. ಚಿಕ್ಕಹುಳಗಳು ಮೇಣದ ಮೊಟ್ಟೆಗಳನ್ನು ತಿಂದು ಮೇಣದ ಚಿಟ್ಟೆಯನ್ನು ನೈಸರ್ಗಿಕವಾಗಿ ಹತೋಟಿ ಮಡುವುದು. ಇದು ಪರಾವಲಂಬಿಯಾಗಿದ್ದು ಮೇಣದ ಚಿಟ್ಟೆಯ ಚರ್ಮದ ಭಾಗದಲ್ಲಿ ತನ್ನ ಜೀವನ ಪ್ರಾರಂಭಿಸುವುದು. ಆದುದರಿಂದ ಮೇಣದಚಿಟ್ಟೆಯ ಹುಳಗಳು ನಾಶವಾಗುವುದು. ಜೇನು ಕೃಷಿಕರು ಅಡಿಮಣೆಯನ್ನು ಶುಚಿಗೊಳಿಸುವಾಗ ಇಂತಹ ಕೀಟಗಳು ಕಾಣಿಸಿದರೆ ಅವುಗಳನ್ನು ತೆಗೆಯಬಾರದು ಮತ್ತು ಏರಿಗಳನ್ನು ತೆಗೆದು ಶುಚಿಗೊಳಿಸುವಾಗ ಈ ಕೀಟಗಳ ಮೊಟ್ಟೆಯು ಕಂಡುಬಂದರೆ ಅಂತಹ ಏರಿಗಳನ್ನು ಒಂದುಕಡೆ ಸಂಗ್ರಹಿಸಿ ಇವುಗಳ ಬೆಳವಣಿಗೆಗೆ ಪೂರಕ ಸನ್ನಿವೇಶವನ್ನು ಒದಗಿಸಬೇಕು. ಇದಕ್ಕಾಗಿ ಪ್ಲಾಸ್ಟಿಕ್ ಅಗಲಬಾಯಿ ಇರುವ ಪಾತ್ರೆಗೆ ಏರಿಗಳನ್ನು ಹಾಕಿ ಅದರ ಮೇಲೆ ೩ಎಂ.ಎಂ. ಕಡಿಮೆ ರಂದ್ರವ್ಯಾಸದ ಜಾಲರಿಯನ್ನು ಹಾಕಿ ಈ ಕೋಶಾವಸ್ಥೆಯ ಕೀಟಗಳನ್ನು ಮತ್ತು ಏರಿಯಲ್ಲಿರುವ ಮೇಣದ ಚಿಟ್ಟೆಯ ಹುಳಗಳನ್ನು ತಿಂದು ಬೆಳೆಯುವಂತೆ ಹಾಗೂ ವೃದ್ಧಿಯಾಗುವುದಕ್ಕೆ ಸಹಕರಿಸಬೇಕು.

ಹೊಸದಾಗಿ ಜೇನುಪೆಟ್ಟಿಗೆಗೆ ಸೇರಿಸಿದ ಜೇನುಕುಟುಂಬಗಳು ಪರಾರಿಯಗುವುದು ಮತ್ತು ನಿವಾರಣಾ ತಂತ್ರ :[ಬದಲಾಯಿಸಿ]

ಹೊಸದಾಗಿ ಒಂದು ಜೇನುಕುಟುಂಬವನ್ನು ಪೆಟ್ಟಿಗೆಗೆ ಸೇರಿಸಿದಾಗ ಅನೇಕ ಸಂದರ್ಭಗಳಲ್ಲಿ ಕುಟುಂಬಗಳು ಪರಾರಿಯಗಲು ಪ್ರಯತ್ನಿಸುತ್ತವೆ. ಹಾಗೆ ಪರಾರಿಯಗಲು ಯತ್ನಿಸಲು ಈ ಕೆಳಗಿನ ಕೆಲವು ಕಾರಣಗಳಿರಬಹುದು.

  1. ಪದೇ ಪದೇ ಮುಚ್ಚಳ ತೆರೆದು ಪರೀಶೀಲಿಸುವುದರಿಂದ.
  2. ಪೆಟ್ಟಿಗೆಗೆ ಸೇರಿಸುವಾಗ ಚೌಕಟ್ಟುಗಳಿಗೆ ಜೋಡಿಸಿದ ಏರಿಗಳು ಹಾಳಾಗಿರುವುದರಿಂದ.
  3. ಸೇರಿಸುವಾಗ ಚೌಕಟ್ಟುಗಳಿಗೆ ಜೋಡಿಸಿದ ಏರಿಗಳಲ್ಲಿ ಸಾಕಷ್ಟು ವಿವಿಧ ಅವಸ್ಥೆಯ ಮೊಟ್ಟೆಮರಿಗಳು ಇಲ್ಲದಿರುವುದರಿಂದ.
  4. ಹೊಸಪೆಟ್ಟಿಗೆಗಳನ್ನು ಮೊದಲ ಬಾರಿಗೆ ಬಳಸುವಾಗ ತೊಳೆಯದಿರುವುದು ಮತ್ತು ಶುದ್ಧಜೇನುಮೇಣವನ್ನು ಸವರದೇ ಬಳಸುವುದರಿಂದ / ಹುತ್ತದ ಕೆಮ್ಮಣ್ಣನ್ನು ಸವರದಿರುವುದು.
  5. ಆಗಿಂದಾಗ್ಗೆ ಜೇನುಕುಟುಂಬಗಳ ಪೆಟ್ಟಿಗೆಯ ಸ್ಥಳ ಬದಲಿಸಿ ಇಡುವುದರಿಂದ.
  6. ಸಂಸಾರ ಕೋಣೆಯ ಚೌಕಟ್ಟುಗಳನ್ನು ನಿಗದಿತ ಅಂತದಲ್ಲಿ ಇರಿಸದೇ ಹೆಚ್ಚು ಅಂತರದಲ್ಲಿ ಇರಿಸುವುದರಿಂದ.
  7. ಅತೀ ಬಿಸಿಲು ಇರುವ ಜಾಗ/ಅತೀ ಶೀತ ಇರುವ ಜಾಗದಲ್ಲಿ/ಗಾಳಿಬೀಸುವಿಕೆ ಜೋರಾಗಿರುವ ಸ್ಥಳದಲ್ಲಿ ಪೆಟ್ಟಿಗೆಯನ್ನು ಇರಿಸುವುದರಿಂದ.
  8. ಆಹಾರ ಕೊಡುವಾಗ ತಪ್ಪು ಕ್ರಮಗಳನ್ನು ಅನುಸರಿಸುವುದರಿಂದ.

ಪದೇ ಪದೇ ಮುಚ್ಚಳ ತೆರೆದು ಪರೀಶೀಲಿಸುವುದರಿಂದ[ಬದಲಾಯಿಸಿ]

ಜೇನುಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸಿ ತಂದಿರಿಸಿದ ನಂತರ ಪದೇ ಪದೇ ತೆರೆದು ಪರೀಶೀಲಿಸಬಾರದು. ಸೇರಿಸುವಾಗ ನೊಣಗಳಿಗೆ ನಿತ್ಯದ ಕೆಲಸಕಾರ‍್ಯಗಳಿಗೆ ಈಗಾಗಲೇ ಬಹಳಷ್ಟು ತೊಂದರೆ ಉಂಟುಮಾಡಿದಂತೆ ಆಗಿರುತ್ತದೆ. ಏಕೆಂದರೆ, ಮೊಟ್ಟೆ ಮರಿಗಳನ್ನು ಪೋಷಿಸುವುದು ವಿಳಂಬವಾಗಿರುವುದು. ಅವುಗಳಿಗೆ ಕಾಲಕಾಲಕ್ಕೆ ನೀಡುವ ಆಹಾರದ ಗುಟುಕು ಒದಗಿಸಲು ನೊಣಗಳಿಗೆ ಅಸಾಧ್ಯವಾಗಿರುತ್ತದೆ. ಅಲ್ಲದೆ ಸಂಸಾರ ಬೆಳೆಯುತ್ತಿರುವ ಕೋಣೆಯಲ್ಲಿನ ಶಾಖ ೯೦-೯೭೦ಈವರೆಗೆ ಸದಾ ಕಾಯ್ದಿರಿಸಿಕೊಳ್ಳುತ್ತವೆ. ಆದುದರಿಂದ ಬೆಳೆಯುತ್ತಿರುವ ಹುಳ, ಮೊಟ್ಟೆ ಸ್ಥಳದಲ್ಲಿ ಇರಬೇಕಾದ ನಿಗದಿತವಾದ ಉಷ್ಣಾಂಶ ಏರುಪೇರಾಗಿರುವುದು. ನಿಸರ್ಗದ ಗೂಡಿನಿಂದ ಏರಿಗಳನ್ನು ಬಿಡಿಸಿದ ನಂತರ ಜೇನುಪೆಟ್ಟಿಗೆಯ ಚೌಕಟ್ಟುಗಳಿಗೆ ಜೋಡಿಸುವಾಗ ಸಾಕಷ್ಟು ಸಮಯ ಕಳೆದಿರುತ್ತದೆ. ಶಾಖವನ್ನು ಕಾಯ್ದಿರಿಸಲು ಏರಿಯ ಮೇಲೆ ನೊಣಗಳು ಸಹ ಆವರಿಸಿ ಕುಳಿತಿರುವುದಿಲ್ಲ. ಏರಿಗಳನ್ನು ಚೌಕಟ್ಟುಗಳಿಗೆ ಜೋಡಿಸುವಾಗ ನೇರ್ಪುಗೊಳಿಸಿ ಯವುದಾದರೂ ಉತ್ತಮವಾದ ನಾರಿನ ದಾರದಿಂದ ಸಡಿಲವಾಗಿಲ್ಲದಂತೆ ಮತ್ತು ಏರಿಗಳು ಚೌಕಟ್ಟಿಗೆ ಭದ್ರವಾಗಿ ಜೋಡಿಸಲ್ಪಡುವಂತೆ ಹಾಗೂ ಬುಡ ಮೇಲಾಗದಂತೆ ಜೋಡಿಸಬೇಕು. ಈ ಸಂದರ್ಭದಲ್ಲೂ ಏರಿಗಳು ಸಾಕಷ್ಟು ಜಖಂ ಆಗಿರುತ್ತವೆ. ಆದುದರಿಂದ ಪೆಟ್ಟಾಗಿರುವ ಹುಳ ಮೊಟ್ಟೆಗಳನ್ನು ತೆಗೆದು ಹಾಕುವುದು, ಕಣಗಳನ್ನು ದುರಸ್ತಿಗೊಳಿಸುವುದು, ಜೇನುತುಪ್ಪದ ಭಾಗದಲ್ಲಿ ಕಣಗಳು ಕೆಲವೊಮ್ಮೆ ಹೆಚ್ಚು ಜಖಂ ಆಗಿ ಜೇನುತುಪ್ಪವು ಸೋರಿಕೆಯಗುವುದನ್ನು ಸರಿಪಡಿಸುವುದು ಮುಂತಾದ ಕೆಲಸಗಳನ್ನು ಮಾಡುವುದು ನೊಣಗಳಿಗೆ ತೀರ ಅಗತ್ಯವಾಗಿರುತ್ತದೆ. ಅಲ್ಲದೆ, ಗೂಡನ್ನು ಸದಾ ಶುಚಿಯಾಗಿರಿಸಿಕೊಳ್ಳುವ ಗುಣವಿರುವ ಜೇನುನೊಣಗಳು ಕೂಡಲೇ ಇಂತಹ ಸರಿಪಡಿಸುವ ಕೆಲಸದಲ್ಲಿ ನಿರತವಾಗಿರುತ್ತವೆ. ಅದೇ ಸಂದರ್ಭದಲ್ಲಿ ಆಗಿಂದಾಗ್ಗೆ ಪೆಟ್ಟಿಗೆಯನ್ನು ತೆರೆದು ಪರೀಶೀಲಿಸುವುದನ್ನು ನೊಣಗಳು ಸಹಿಸಲಾಗದೇ, ಏರಿಗಳಲ್ಲಿರುವ ಕೋಶಾವಸ್ಥೆಯಲ್ಲಿರುವ ಕಣಗಳಿಂದ ನೊಣಗಳು ಹೊರಬರುವತನಕ ಕಾಯ್ದುಕೊಂಡಿದ್ದು ನಂತರ ಅಂತಹ ಗೂಡನ್ನು ತ್ಯಜಿಸಿ ಪರಾರಿಯಗುತ್ತವೆ. ನಾವು ಗೂಡನ್ನು ಪರಿಶೀಲಿಸುವ ಮೊದಲು ಕೆಲಸಮಯ ತಾಳ್ಮೆಯಿಂದ ನಮ್ಮ ಕುತೂಹಲವನ್ನು ಅದುಮಿಟ್ಟು ಕಾಯಬೇಕಾಗುವುದು ಅಂದರೆ ನೊಣಗಳು ಏರಿಯನ್ನು ಚೌಕಟ್ಟುಗಳಿಗೆ ಮೇಣದಿಂದ ಅಂಟಿಸುವುದು ಹಾಗೂ ನಾರಿನ ದಾರವನ್ನು ದಾಡೆಯಿಂದ ಕೊರೆದು_ಕೊರೆದು ಪ್ರವೇಶ ದ್ವಾರ ಅಂದರೆ ರಾಣಿ ತಡೆಯಿರಿಸಿರುವ ಎಡೆಗೆ ತಂದು ಹೊರಗೆ ಎಸೆಯಲು ಆರಂಭಿಸುತ್ತವೆ ಮತ್ತು ಏರಿಗಳಲ್ಲಿ ರಾಣಿಯು ಮೊಟ್ಟೆಗಳನ್ನು ಇರಿಸಲು ಪ್ರಾರಂಭಿಸುತ್ತಿದ್ದಂತೆ ಮರಿಹುಳಗಳಿಗೆ ಜೇನುಮಿಶ್ರಣದ ಆಹಾರವನ್ನು ತಿನ್ನಿಸಲು ಬೇಕಾಗುವ ಪರಾಗವನ್ನು ಮರಗಿಡಗಳಿಂದ ಸಂಗ್ರಹಿಸಿ ಗೂಡಿಗೆ ತರಲು ಪ್ರಾರಂಭಿಸುವುದರಿಂದ ಕಾಲಿನಲ್ಲಿ ಪರಾಗದ ಉಂಡೆಗಳನ್ನು ತರುತ್ತಿರುವುದು ಕಾಣಿಸುತ್ತದೆ. ಇಲ್ಲಿಯವರೆಗಾದರೂ ನಾವು ತಾಳ್ಮೆಯಿಂದ ಕಾಯಬೇಕಾಗುವುದು. ಸಾಮಾನ್ಯವಾಗಿ ೧೮-೨೦ ದಿನಗಳ ನಂತರ ಹೊಸದಾಗಿ ಕೂಡಿಸಿದ ಕುಟುಂಬಗಳು ಪರಾಗ ತರುವುದನ್ನು ಗಮನಿಸಬಹುದು. ಆದರೆ ಕೂಡಿಸುವಾಗ ಏರಿಗಳಲ್ಲಿ ಮರಿಹುಳಗಳು ಇರುವುದರಿಂದ ಅವುಗಳ ಪೋಷಣೆಗಾಗಿಯೂ ಕೂಡ ಮೊದಲ ೪-೬ ದಿನಗಳವರೆಗೆ ಪರಾಗವನ್ನು ಹೊತ್ತು ತರಬಹುದು. ಆದರೆ ಅದು ಅಷ್ಟು ಮುಖ್ಯವಲ್ಲ. ಈ ಸಮಯದಲ್ಲಿ ತಾತ್ಕಾಲಿಕವಾಗಿ ಮೊಟ್ಟೆಯನ್ನಿರಿಸುವುದನ್ನು ನಿಲ್ಲಿಸಿರುತ್ತದೆ. ಆದರೆ, ಪರಿಸರವು ಅತ್ಯಂತ ಉತ್ತಮವಾಗಿದ್ದಲ್ಲಿ ಓಡಿಹೋಗುವ ಯವುದೇ ಉದ್ದೇಶವಿಲ್ಲದ ಕುಟುಂಬಗಳು ಚೆನ್ನಾಗಿ ಪರಾಗ ತರಲು ಚುರುಕಾದ ಕೆಲಸ ಮಡಲು ತೊಡಗಿರುತ್ತವೆ. ಹೀಗೆ ಮತ್ತೆ ಮೊಟ್ಟೆಮರಿಗಳು ಸಾಕಷ್ಟು ಆ ಗೂಡಿನಲ್ಲಿ ಉಂಟಾದಾಗ ಅದನ್ನು ಅನಾಥವಾಗಿ ತ್ಯಜಿಸಿ ಎಂದೂ ನೊಣಗಳು ಪರಾರಿಯಗುವುದಿಲ್ಲ. ಈ ಒಂದು ಅಂಶದ ಆಧಾರದಲ್ಲಿ ಈಗ ಜೇನುಕುಟುಂಬಗಳನ್ನು ತೆರೆದು ಜಾರಿಹೋಗಿರುವ ಏರಿಗಳನ್ನು ಪುನಃ ಸರಿಯಾಗಿ ದಾರದಿಂದ ಜೋಡಿಸುವುದು. ಚೌಕಟ್ಟುಗಳಿಗೆ ಏರಿಗಳನ್ನು ಜೋಡಿಸಿದ ನಂತರ ಹೊರಸಾಗಿಸಲು ಸಾಧ್ಯವಾಗದೇ ಉಳಿಸಿರುವ ದಾರವನ್ನು ಕಿತ್ತು ತೆಗೆದು ಹಾಕುವುದು, ಅಡಿಮಣೆಯನ್ನು ಶುಚಿಗೊಳಿಸುವುದು, ಹಾಗೂ ಸಂಸಾರ ಕೋಣೆಯ ಮಧ್ಯದ ಏರಿಗಳಲ್ಲಿ ರಾಣಿ ಮೊಟ್ಟೆ ಇರಿಸಿರುವುದನ್ನು ಪರೀಶೀಲಿಸಿ ನೋಡಿ ಖಾತ್ರಿ ಪಡಿಸಿಕೊಳ್ಳುವುದು ಮುಂತಾದ ಕೆಲಸವನ್ನು ಮಾಡಬೇಕಾಗುವುದು. ಸೇರಿಸುವಾಗಲೇ ಏರಿಗಳು ಹಾಳಾಗಿದ್ದರೆ ?

ನಿಸರ್ಗದಲ್ಲಿ ಗೆದ್ದಲು ಹುತ್ತದಲ್ಲಿರುವ/ಮರದ ಪೊಟರೆಯಲ್ಲಿರುವ ಜೇನು ಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸುವಾಗ ದೊರೆತ ಏರಿಗಳು ಚೆನ್ನಾಗಿರದೇ ಇದ್ದಲ್ಲಿ, ಅವು ತುಂಬಾ ಹಳೆಯದಾಗಿ ಕಪ್ಪಾಗಿದ್ದರೆ, ಹೊಳಪು ಇಲ್ಲದೇ ದೊರಗಾಗಿದ್ದರೆ, ಅವುಗಳಲ್ಲಿ ಮೊಟ್ಟೆ ಮರಿಗಳು ವಿರಳವಾಗಿದ್ದರೆ /ಇಲ್ಲದಿದ್ದರೆ ಅಥವಾ ಅಂಕುಡೊಂಕಾಗಿ ಜೋಡಿಸಲು ಬಾರದಿದ್ದರೆ ಅಂತಹ ಏರಿಗಳನ್ನು ಚೌಕಟ್ಟಿಗೆ ಜೋಡಿಸಬಾರದು ಮತ್ತು ಬೇರೊಂದು ಕುಟುಂಬದಿಂದ ಮೊಟ್ಟೆ ಮರಿಗಳು ಚೆನ್ನಾಗಿರುವ ೧-೨ ಸಂಸಾರ ಕೋಣೆ ಚೌಕಟ್ಟುಗಳನ್ನು ಸೇರಿಸುವಾಗಲೇ ಒದಗಿಸಿ ಕೊಡುವುದು ಉಪಯುಕ್ತ. ಖಾಲಿಯಿರುವ ಚೌಕಟ್ಟುಗಳಿಗೆ, ಚೌಕಟ್ಟಿನಲ್ಲಿ ಮೇಣದ ಹಾಳೆ ಅಂಟಿಸುವ ಮಾರ್ಗದರ್ಶಿ ಜಾಗದ ಛಡಿಯಲ್ಲಿ ೧/೪ ಇಂಚು ಅಗಲದಲ್ಲಿ ಮೇಣದ ಹಾಳೆಗಳನ್ನು ಅಂಟಿಸಿಕೊಡಬೇಕಾಗುವುದು. ಹಳೆಯದಾದ ಏರಿಗಳನ್ನೇ ಜೋಡಿಸಿ ಕೊಡುವುದರಿಂದ ಹೊಸ ಸ್ಥಳಕ್ಕೆ ನೊಣಗಳನ್ನು ಸೇರಿಸಿದ ಜೇನುಪೆಟ್ಟಿಗೆಗಳನ್ನು ತಂದಿರಿಸಿದಾಗ ನೊಣಗಳು ಚೆನ್ನಾಗಿ ಬಿರುಸಿನಿಂದ ಚಟುವಟಿಕೆ ಪ್ರಾರಂಭಿಸುವ ಮೊದಲೇ ಮೇಣದ ಚಿಟ್ಟೆ ಆಕ್ರಮಿಸಿ ಜೇನುಕುಟುಂಬಗಳು ಪರಾರಿಯಗಲು ಕಾರಣವಾಗುತ್ತದೆ. ಇಲ್ಲವೇ ಹಳೆಯ ಏರಿಯ ಕಣಗಳನ್ನು ದಾಡೆಯಿಂದ ಕೊರೆದು ಉಳಿಯುವ ತಳಹದಿಯ ಮೇಲೆ ಏರಿ ರಚಿಸಿರುವುದು ನೊಣಗಳಿಗೆ ವಿಳಂಬ ಆಗುವುದು. ಜೇನುಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸುವಾಗ ಕೆಲವೊಮ್ಮೆ ಮೊಟ್ಟೆಮರಿಯಿಂದ ಕೂಡಿದ ಏರಿಗಳು ಒಂದೂ ಸಹ ಇಲ್ಲದಿರಬಹುದು. ಹೀಗಾಗಲೂ ಕಾರಣ, ಮರಿಹಾರಿಸುವ ಕಾಲದಲ್ಲಿ ಜೇನು ಕೂಡಿಸಲು ದೊರೆತ ಕುಟುಂಬದಲ್ಲಿ ಅನೇಕ ಸಂದರ್ಭದಲ್ಲಿ ಹೊಸ ರಾಣಿಯು ಜೋಡಿಯಾಗಿ ಬಂದು ಮೊಟ್ಟೆ ಇರಿಸಲು ಇನ್ನೂ ಪ್ರಾರಂಭ ಮಾಡದೇ ಇರಬಹುದು. ಇಲ್ಲವೇ, ಆ ಸ್ಥಳವನ್ನು ಬಿಟ್ಟು ಈಗಾಗಲೇ ಪರಾರಿಯಾಗುವ ಯೋಚನೆಯಲ್ಲಿರುವ ಕುಟುಂಬವಾಗಿರಬಹುದು. ಇಂತಹ ಕುಟುಂಬಗಳನ್ನು ಹೊಸದಾಗಿ ಪೆಟ್ಟಿಗೆಗೆ ಸೇರಿಸಿ ಉಳಿಸಿಕೊಳ್ಳಲು ಸಹ ಬೇರೊಂದು ಪೆಟ್ಟಿಗೆಯಿಂದ ಮರಿಮೊಟ್ಟೆ ಹಾಗೂ ಜೇನಿರುವ ಚೌಕಟ್ಟುಗಳನ್ನು ಎರವಲು ನೀಡಬೇಕು ಮತ್ತು ಏರಿಯನ್ನು ಎರವಲಾಗಿ ತೆಗೆದುಕೊಂಡ ಪೆಟ್ಟಿಗೆಯಲ್ಲಿ ತೆಗೆದ ಚೌಕಟ್ಟು ಸ್ಥಳ ತುಂಬಲು, ಹಾಗೂ ಕುಟುಂಬ ಕೂಡಿಸುವ ಪೆಟ್ಟಿಗೆಗೆ ಉಳಿದ ಖಾಲಿ ಚೌಕಟ್ಟುಗಳಿಗೆ ಮೇಣದ ಹಾಳೆ ಮರ್ಗದರ್ಶಿ ಅಂಟಿಸಿ ನೀಡಬೇಕಾಗುತ್ತದೆ. ಕೃಷಿಕರು ಹೊಸದಾಗಿ ಖರೀದಿ ಮಾಡಿ ತೆಗೆದುಕೊಂಡು ಹೋದ ಜೇನುಪೆಟ್ಟಿಗೆಗಳ ಒಳಭಾಗವನ್ನು ತೆಗೆದು_ತೊಳೆದು ಒಣಗಿದ ನಂತರ ಶುದ್ಧ ಜೇನುಮೇಣವನ್ನು ಕರಗಿಸಿ ಸಂಸಾರ ಕೋಣೆಯ ಒಳಭಾಗದ ೪ ಗೋಡೆಗಳಿಗೆ ಮತ್ತು ಚೌಕಟ್ಟುಗಳಲ್ಲಿ ಮುಖ್ಯವಾಗಿ ಏರಿಗಳನ್ನು ಜೋಡಿಸುವ ಭಾಗ ಹಾಗೂ ಅದರ ಮೇಲ್ಭಾಗದಲ್ಲಿ ಹಾಗೂ ಜೇನುಕೋಣೆಗೂ ಸಹ ಮೇಣವನ್ನು ಬಿಸಿ ಮಾಡಿ ಕರಗಿಸಿದ ಮೇಣವನ್ನು ಸವರಬೇಕು. ಹೆಜ್ಜೇನು/ಕೋಲುಜೇನು ಮೇಣವು ಆಗಬಹುದು. ಹೀಗೆ ಕರಗಿದ ಮೇಣವನ್ನು ಸವರಲು ಸ್ವಲ್ಪ ಹತ್ತಿ/ಹತ್ತಿಬಟ್ಟೆಯನ್ನು ಬಳಸಬಹುದು. ಸುಮಾರು ೭೫-೧೦೦ ಗ್ರಾಂ ಜೇನುಮೇಣ ಇದಕ್ಕಾಗಿ ಬೇಕಾಗುವುದು. ಅಂಗಡಿಗಳಲ್ಲಿ ಜೇನುಮೇಣದ ಹೆಸರಲ್ಲಿ ದೊರಕುವ ಮೇಣವು ಹೆಚ್ಚಿನ ಸಂದರ್ಭದಲ್ಲಿ ಕಲಬೆರಕೆಯಾಗಿರುತ್ತದೆ. ಇದರೊಂದಿಗೆ ರಾಸಾಯನಿಕ ಪ್ಯಾರಾಫಿನ್ ಸೇರಿಸಿ ಇರುವುದರಿಂದ ಈ ಉದ್ದೇಶಕ್ಕೆ ಬರುವುದಿಲ್ಲ. ಶುದ್ಧ ಜೇನುಮೇಣ ದೊರೆಯದಿದ್ದರೆ ತೊಳೆದ ನಂತರ ಜೇನು ಪೆಟ್ಟಿಗೆಗೆ ಕಾಡುದಾಲಚಿನಿ ಸೊಪ್ಪಿನ ರಸವನ್ನು ತಯಾರಿಸಿ ಲೇಪಿಸಬೇಕು. ಅಥವಾ ಹುತ್ತದ ಕೆಮ್ಮಣ್ಣನ್ನು ನೀರಿನಲ್ಲಿ ಕದಡಿ ತೆಳುವಾದ ಮಿಶ್ರಣ ಮಾಡಿ ಲೇಪಿಸಬಹುದು ಮತ್ತು ಒಣಗಿದ ನಂತರ ಜೇನುಕುಟುಂಬಗಳನ್ನು ಪೆಟ್ಟಿಗೆಗೆ ಸೇರಿಸಲು ಬಳಸಬೇಕು. ಪೆಟ್ಟಿಗೆಯನ್ನು ತಯಾರಿಸುವಾಗ ಮೋಪುಗಳಲ್ಲಿ ಇರುವ ರಂದ್ರಗಳನ್ನು ಮುಚ್ಚಲು ರಾಸಾಯನಿಕ ಮಿಶ್ರಣವನ್ನು ‘ಲಪ್ಪ’ ಬಳಸಿರುತ್ತಾರೆ. ಹಾಗೂ ಜೇನುಪೆಟ್ಟಿಗೆಗಳಿಗೆ ಬಣ್ಣವನ್ನು ಬಳಿದಿರುತ್ತಾರೆ. ಆದರೆ ಜೇನುನೊಣಗಳು ಕೃತಕವಾದ ಯಾವುದೇ ಅಂಶಗಳನ್ನು ಒಪ್ಪಿಕೊಳ್ಳಲಾರವು. ಆದುದರಿಂದ ಪರಾರಿಯಗಲು ಯತ್ನಿಸಬಹುದು. ಇದಕ್ಕಾಗಿ ಹೊಸ ಪೆಟ್ಟಿಗೆಗಳಿಗೆ ಜೇನು ಕುಟುಂಬಗಳನ್ನು ಸೇರಿಸುವ ಮೊದಲು ಜೇನು ಪೆಟ್ಟಿಗೆಗಳನ್ನು ತೊಳೆಯುವುದು, ಮೇಣವನ್ನು ಸವರುವುದು ಮುಂತಾದ ಜೇನುನೊಣಗಳಿಗೆ ಸಹಜ ಎನ್ನುವಂತೆ ಅಣಿಗೊಳಿಸಬೇಕಾಗುವುದು.

ಆಗಿಂದಾಗ್ಗೆ ಸ್ಥಳ ಬದಲಿಸಿ ಇಡುವುದರಿಂದ[ಬದಲಾಯಿಸಿ]

ಜೇನು ಕುಟುಂಬ ಪೆಟ್ಟಿಗೆಗೆ ಸೇರಿಸಿದ ನಂತರ ನಿಸರ್ಗದಲ್ಲಿ ಸೇರಿಸಿದ ಜಾಗದಲ್ಲೇ ಇಡುವುದು ಂಗ್ಯ. ಹಾಗೆ ಸಾಧ್ಯವಾಗದಿದ್ದರೆ ಕೆಲದಿನಗಳ ಮಟ್ಟಿಗಾದರೂ ಇರುವೆ ಇತ್ಯಾದಿಗಳಿಂದ ಸಂರಕ್ಷಿಸಿ ಇಡುವುದರಿಂದ ಪರಾರಿಯಗುವುದನ್ನು ತಪ್ಪಿಸಲು ಉಪಯುಕ್ತವಾಗುವುದು. ಅದೂ ಸಹ ಅಸಾಧ್ಯವಾದರೆ ಸೇರಿಸಿದ ಕುಟುಂಬವನ್ನು ರಾತ್ರಿ ವೇಳೆ ರವಾನಿಸಿ ಮೊದಲೇ ತೀರ್ಮಾನಿಸಿದ ಜಾಗದಲ್ಲಿರಿಸಬಹುದು. ಹಾಗೆ ತಂದಿರಿಸುವ ಸ್ಥಳವು ಸುರಕ್ಷಿತವು ತೀವ್ರ ಬಿಸಿಲು ಅಥವಾ ಶೀತರಹಿತ ಸ್ಥಳವು ಆಗಿರಬೇಕು. ೧-೨ ಜೇನುಕುಟುಂಬಗಳನ್ನು ಮಾತ್ರ ಪಾಲಿಸುವುದಿದ್ದರೆ ಮನೆಯ ಮಹಡಿ ಅಥವಾ ಅಂತಹ ಎತ್ತರದ ಸ್ಥಳಗಳು ನೊಣಗಳಿಗೆ ಹೆಚ್ಚು ಆಕರ್ಷಕವಾಗಿರುತ್ತದೆ. ಆದರೆ ಅಲ್ಲಿ ಅವುಗಳ ಸುಲಭ ಹಾರಾಟಕ್ಕೆ ಅಡಚಣೆ ಉಂಟಾಗದಂತಿರಬೇಕು. ಎತ್ತರದ ಸ್ಥಳದಲ್ಲಿರಿಸಿದ ಜೇನುಕುಟುಂಬಗಳು ಪರಾರಿಯಾಗುವುದು ವಿರಳ. ಯಾವುದೇ ಕಾರಣದಿಂದ ತಂದಿರಿಸಿದ ಪೆಟ್ಟಿಗೆಯನ್ನು ಒಂದು ಸ್ಥಳದಿಂದ ಇನ್ನೊಂದು ಹತ್ತಿರದ ಸ್ಥಳಕ್ಕೆ ರಾತ್ರಿ/ಹಗಲಾಗಲೀ ಬದಲಿಸಿ ಇಡಬಾರದು. ಅಭ್ಯಾಸ ಬಲದಿಂದ ಮೊದಲ ಜಾಗಕ್ಕೆ ಮಾರನೇ ದಿನ ಆಹಾರ ತರುವ ನೊಣಗಳು ಹೋಗಿ ಕುಳಿತು ಹೊಸ ಸ್ಥಳವನ್ನು ಗುರುತಿಸಲಾಗದೇ ತೊಂದರೆಗೊಳಗಾಗುತ್ತವೆ. ಆದರೆ ೭೫೦ ಮೀ.ಗಿಂತ ಹೆಚ್ಚು ದೂರದಲ್ಲಿರಿಸಿದರೆ ಹೀಗೆ ಆಗಲಾರದು. ಆದರೂ ಪ್ರತಿಂಂದು ಹೊಸದಾಗಿ ತಂದಿರಿಸಿದ ಸ್ಥಳದ್ಲಲಿ ಪರಾಗ ಮೂಲವನ್ನು ಗುರುತಿಸಿಕೊಳ್ಳುವುದು, ಪೆಟ್ಟಿಗೆಯನ್ನಿರಿಸಿದ ಜಾಗವನ್ನು ಗುರುತಿಸಿಕೊಳ್ಳುವುದು, ಮುಂತಾದ ತೊಂದರೆಯಿಂದಾಗಿ ಪರಾರಿಯಗಲು ಯತ್ನಿಸುತ್ತವೆ.

ಸಂಸಾರ ಕೋಣೆಯ ಚೌಕಟ್ಟುಗಳನ್ನು ಹೆಚ್ಚು ಅಂತರದಲ್ಲಿ ಇರಿಸುವುದರಿಂದ[ಬದಲಾಯಿಸಿ]

ಅರಿವಿಲ್ಲದೇ ಅನೇಕ ಬಾರಿ ಕೃಷಿಕರು ಜೇನುಕುಟುಂಬವನ್ನು ಪೆಟ್ಟಿಗೆಗೆ ಸೇರಿಸಿದ ನಂತರ ನೈಸರ್ಗಿಕ ಏರಿಗಳು ಅದರಲ್ಲಿ ಕಡಿಮೆ ಸಂಖ್ಯೆಯಲ್ಲಿ ದೊರಕಿದ್ದಾಗ ೩-೪ ಚೌಕಟ್ಟುಗಳಿಗೆ ಮಾತ್ರ ಏರಿಗಳನ್ನು ಜೋಡಿಸಿ ಉಳಿದ ಖಾಲಿ ಚೌಕಟ್ಟುಗಳನ್ನು ತೆಗೆದು ಹೊರಗಿರಿಸಿಕೊಂಡು ಸಂಸಾರ ಕೋಣೆಯಲ್ಲಿ ಕೆಲವೇ ಚೌಕಟ್ಟುಗಳನ್ನಷ್ಟೇ ಇರಿಸಿರುತ್ತಾರೆ. ಅಲ್ಲಿ ಒಟ್ಟಾಗಿ ೮ ಚೌಕಟ್ಟುಗಳನ್ನು ಇರಿಸಬೇಕಾದ ಸ್ಥಳದಲ್ಲಿ ಕೇವಲ ಕೆಲವು ಚೌಕಟ್ಟುಗಳನ್ನಷ್ಟೇ ಇರಿಸಿ ಒಂದು ಚೌಕಟ್ಟಿನಿಂದ ಇನ್ನೊಂದು ಚೌಕಟ್ಟಿಗೆ ಇರಬೇಕಾದ ೭ಮಿ.ಮೀ. ಅಂತರಕ್ಕಿಂತ ಹೆಚ್ಚು ದೂರವಾಗಿರಿಸಿರುತ್ತಾರೆ. ಆಗ ನೊಣಗಳಿಗೆ ಒಂದು ಏರಿಯಿಂದ ಇನ್ನೊಂದು ಏರಿಗೆ ಚಲಿಸಲು ಹಾಗೂ ಮೊಟ್ಟೆ ಮರಿಗಳ ಪೋಷಣೆಗೆ ತೊಂದರೆ ಉಂಟಾಗುವುದು. ಸ್ವಲ್ಪ ಅಂತರ ಮಾತ್ರ ಹೆಚ್ಚಿದ್ದರೆ ಬಹಳಷ್ಟು ಸಮಯದಲ್ಲಿ ಆ ಹೆಚ್ಚಿನ ಖಾಲಿ ಸ್ಥಳದಲ್ಲಿ ಬರ್‌ಕೋಮ್ಬ್, ಅಂಕುಡೊಂಕಾಗಿ ಹೆಚ್ಚಿನ ಏರಿಗಳನ್ನು ನಿರ್ಮಿಸಿ ಚಲನೆಗೆ ಅನುಕೂಲವಾಗುವಂತೆ ಸೇತುವೆ ಮಾಡಿಕೊಳ್ಳಲು ಪ್ರಯತ್ನಿಸುತ್ತವೆ. ಈ ಏರಿ ರಚಿಸಿ ನೊಣ ದಾರಿಯನ್ನು ಸರಿ ತೂಗಿಸಲಾಗದಷ್ಟು ಹೆಚ್ಚಿನ ಅಂತರದಲ್ಲಿದ್ದರೆ ಗೂಡಿನ ಶಾಖಾ ಸಂರಕ್ಷಣೆಗೆ ಅವಕಾಶವಾಗದೇ ಓಡಿಹೋಗುತ್ತವೆ. ಇದಲ್ಲದೆ ಅಡಿಮಣೆಯಿಂದ ಚೌಕಟ್ಟಿಗೆ ಮಧ್ಯೆ ಇರಬೇಕಾದ ಅಂತರ ಹಾಗೂ ಜೇನುಕೋಣೆ ಮತ್ತು ಸಂಸಾರ ಕೋಣೆ ಮಧ್ಯದಲ್ಲಿ ಇರಬೇಕಾದ ನಿಗದಿತ ಅಂತರವೂ ಸಹ ನಿರ್ದಿಷ್ಟವಾಗಿದ್ದು ನೊಣಗಳ ಕೆಲಸಕಾರ‍್ಯಕ್ಕೆ ಅನುಕೂಲವಾಗದಂತೆ ಪೆಟ್ಟಿಗೆಯಲ್ಲಿ ಅಳತೆ ವ್ಯತ್ಯಾಸ ಇದ್ದರೆ ಪರಾರಿಯಗುತ್ತವೆ.

ಅತೀ ಬಿಸಿಲು ಅಥವಾ ಅತಿಯಾದ ಶೀತ ಸ್ಥಳದಲ್ಲಿ ಇರಿಸಿದಾಗ/ಜೋರಾಗಿ ಗಾಳಿಬೀಸುವಿಕೆಗೆ ಎದುರಾಗಿರಿಸಿದಾಗ:[ಬದಲಾಯಿಸಿ]

ಜೇನುಕುಟುಂಬಗಳನ್ನು ಅತೀ ಬಿಸಿಲಿನಲ್ಲಿ ಅಥವಾ ಅತಿಯಾದ ಶೀತಪ್ರದೇಶದಲ್ಲಿ ಇರಿಸಿದಾಗ ಬೆಳೆಯುತ್ತಿರುವ ಮೊಟ್ಟೆ ಮರಿಗಳಿಗೆ ಉಷ್ಣತಾಮಾನ ಏರುಪೇರಾಗುವುದು. ಉಷ್ಣತೆ ಜಾಸ್ತಿಯಾಗುವುದರಿಂದ ಸಂಸಾರಕ್ಕೆ ನೀರಿನ ಅವಶ್ಯಕತೆ ಜಾಸ್ತಿಯಾಗುವುದು. ಅಲ್ಲದೆ ಅತಿಯಾದ ಶಾಖದಿಂದ ಚೌಕಟ್ಟಿನಿಂದ ಏರಿಗಳು ಕಳಚಿ ಬೀಳುವುದುಂಟು. ಹಾಗೆ ಅತಿಯಾದ ಶೀತ ಸದಾ ಇರುವ ಸ್ಥಳದಲ್ಲಿರಿಸಿದಾಗ ಮೇಣದ ಚಿಟ್ಟೆ ಹಾಗೂ ಬಸವನಹುಳದ ಉಪದ್ರವ ಅಧಿಕವಾಗುವುದು. ಮತ್ತು ಹೆಚ್ಚು ಆಹಾರವನ್ನು ಬಳಸಿ ಗೂಡಿನಲ್ಲಿ ಅದಿsಕ ಉಷ್ಣತೆ ಉಂಟುಮಡಲು ಹಾಗೂ ಗುಂಪುಗೂಡಿ ಶಾಖವನ್ನು ಸಂರಕ್ಷಿಸುವುದು ಅಗತ್ಯವಾಗುವುದು. ಜೋರಾಗಿ ಗಾಳಿ ಬೀಸುವಿಕೆ ಹೆಚ್ಚಿರುವ ಸ್ಥಳಗಳಲ್ಲಿ ಪೆಟ್ಟಿಗೆಯ ಪ್ರವೇಶದ್ವಾರವನ್ನು ಗಾಳಿಬೀಸುವಿಕೆಯ ದಿಕ್ಕಿಗೆ ಅಭಿಮುಖವಾಗಿರಿಸಿದಾಗ, ಪೆಟ್ಟಿಗೆಯೊಳಗೆ ಹೆಚ್ಚಿನ ಗಾಳಿನುಗ್ಗಿ ಮೊಟ್ಟೆಮರಿಗಳ ಪಾಲನೆಗೆ ಹಾಗೂ ಗೂಡಿನ ಶಾಖ ಸಂರಕ್ಷಣೆಗೆ ತೊಂದರೆಯಾಗುವುದು. ಅಲ್ಲದೇ ಮೊಟ್ಟೆಮರಿಗಳ ಮೇಲಿರುವ ತೇವಾಂಶವು ಕಡಿಮೆಯಾಗಿ ಒಣಗುವಿಕೆಗೆ ಒಳಗಾಗುತ್ತವೆ (desiccation). ಅಲ್ಲದೆ ನೊಣಗಳ ಕೆಲಸಕಾರ್ಯಗಳಿಗೆ ಮತ್ತು ಗೂಡಿನಹೊರಗೆ ಹಾರಾಡುವಿಕೆಗೆ ಧಕ್ಕೆ ಉಂಟಾಗುವುದು. ಆದುದರಿಂದ ಪೆಟ್ಟಿಗೆಗಳನ್ನು ಇಂತಹ ಸ್ಥಳದಲ್ಲಿರಿಸುವುದರಿಂದ ಜೇನುಕುಟುಂಬಗಳು ಪರಾರಿಯಗಲು ಕಾರಣವಾಗುತ್ತದೆ.

ಆಹಾರ ಕೊಡುವಾಗ ಉಂಟಾಗುವ ತೊಂದರೆಯಿಂದ:[ಬದಲಾಯಿಸಿ]

ಹೊಸದಾಗಿ ಜೇನುಪೆಟ್ಟಿಗೆಗಳಿಗೆ ಸೇರಿಸಿದ ಜೇನುಕುಟುಂಬಗಳಿಗೆ ಮೊಟ್ಟೆ ಮರಿಗಳ ಪೋಷಣೆಗೆ ಹಾಗೂ ತುರ್ತಾಗಿ ಬೇಕಾಗಿರುವ ಆಹಾರದ ಅವಶ್ಯಕತೆ ನೀಗಿಸಲು ಸಕ್ಕರೆ, ಜೋನಿ ತಯರಿಸಿ ಕೊಡುವುದಿದೆ. ಕುಟುಂಬವನ್ನು ಹೊಸ ಜಾಗದಲ್ಲಿ ತಂದಿರಿಸಿದಾಗ ಅನ್ವೇಷಕ ನೊಣಗಳು ಗೂಡನ್ನು ಇರಿಸಿದ ತನ್ನ ಸ್ಥಳವನ್ನು ಚೆನ್ನಾಗಿ ಅರಿತು ಅನಂತರ ಆಹಾರವನ್ನು ದೊರಕಿಸುವ ಸಸ್ಯಗಳನ್ನು ಅನ್ವೇಷಿಸಿಕೊಂಡು ವರ್ತಮನವನ್ನು ಗೂಡಿಗೆ ಬಂದು ನೃತ್ಯ ಮಡಿ ತಿಳಿಸುವುದು. ಹೆಚ್ಚು ಮೊಟ್ಟೆಮರಿಗಳಿರುವ ಕುಟುಂಬದಲ್ಲಿ ಆಹಾರದ ಬಳಕೆ ಜಾಸ್ತಿಯಗಿರುವುದರಿಂದ ದಾಸ್ತಾನು ಕಡಿಮೆಯಗಿರಬಹುದು. ಈ ಕೊರತೆಯನ್ನು ನೀಗಿಸಲು ನಾವು ಆಹಾರವನ್ನು ಒದಗಿಸಿಕೊಡಬಹುದು. ಹೀಗೆ ಆಹಾರ ಕೊಡಲು ಪೆಟ್ಟಿಗೆಯನ್ನು ರಾತ್ರಿ ವೇಳೆ ಅನೇಕ ದಿನಗಳಲ್ಲಿ ತೆರೆಯುವುದರಿಂದ ತೊಂದರೆ ಉಂಟಾಗಿ ನಂತರದ ದಿನಗಳಲ್ಲಿ ಓಡಿಹೋಗಲು ಯತ್ನಿಸಬಹುದು. ಆದುದರಿಂದ ಅಂತಹ ಕುಟುಂಬಗಳಿಗೆ ೨೫೦ಮಿ.ಲೀ. ದ್ರಾವಣವನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಸಿ ಕ್ಷಿಪ್ರಗತಿಯಲ್ಲಿ ೧-೨ ನಿಮಿಷಗಳಲ್ಲಿ ಈ ಆಹಾರ ಕೊಡುವ ಕಾರ್ಯವನ್ನು ಮುಗಿಸಬೇಕು. ಮನವರಿಗೆ ಗ್ಲೂಕೋಸ್ ಡ್ರಿಪ್ಸ್ ನೀಡಲು ಬಳಸಿದ, ಶುಚಿಗೊಳಿಸಿದ ಸಾಮಗ್ರಿಗಳಿಂದಲೂ ಜೇನುಕುಟುಂಬಗಳಿಗೆ ತೆರೆದು ತೊಂದರೆಯಗದಂತೆ ಅದರ ಪೆಟ್ಟಿಗೆಯನ್ನು ತೆರೆಯದೇ ಹೊರಭಾಗದಿಂದಲೇ ಆಹಾರ ನೀಡಬಹುದು. ಇದಕ್ಕಾಗಿ ಡ್ರಿಪ್ಸ್ ನಲ್ಲಿ ಬಳಸುವ ಕೊಳವೆ, ಸೂಜಿಯ ತುದಿಗೆ ಹತ್ತಿಯ ಚೂರನ್ನು ಇರಿಸಿ ಗವಾPದ ಜಾಗದಿಂದ ಕೊಳವೆ ಹಾಯಿಸಿ ಆಹಾರವನ್ನು ನೀಡಬಹುದು. ಇದರಿಂದ ಪರಾರಿಯಾಗುವುದನ್ನು ತಪ್ಪಿಸಲು ಅನುಕೂಲವಾಗುವುದು.

ಇವುಗಳನ್ನೂ ನೋಡಿ[ಬದಲಾಯಿಸಿ]

  1. ಜೇನು
  2. ಗಂಡುಜೇನುನೊಣ
  3. ಜೇನುಸಾಕಣೆ
  4. ಜೇನು ಹುಳು

ಉಲ್ಲೇಖ[ಬದಲಾಯಿಸಿ]

??