ಚಿತ್ರಲಿಪಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಚಿತ್ರಲಿಪಿ ಎಂದರೆ ಚಿತ್ರಗಳನ್ನೇ ಲಿಪಿಚಿಹ್ನೆಗಳಾಗಿ ಬಳಸಿದ ಲಿಪಿ (ಪಿಕ್ಟೋರಿಯಲ್ ಸ್ಕ್ರಿಪ್ಟ್). ಇದನ್ನು ಅನಕ್ಷರ ಲಿಪಿ ಎನ್ನಬಹುದು. ಬಹು ವಿಶಾಲವಾದ ಅರ್ಥದಲ್ಲಿ ಮಾನವನಿಂದ ಬರೆಯಲ್ಪಟ್ಟ, ಗೀಚಲ್ಪಟ್ಟ, ಕೊರೆಯಲ್ಪಟ್ಟ, ಚಿತ್ರಿತವಾದ ಮತ್ತು ಅಕ್ಷರ ಲಿಪಿಯ ವಿಕಾಸಕ್ಕೆ ದಾರಿ ಮಾಡಿಕೊಟ್ಟ ಎಲ್ಲ ಚಿತ್ರಗಳನ್ನು ಒಳಗೊಂಡಿರುತ್ತದೆ. ಆದರೆ ಇಲ್ಲಿ ಚಿತ್ರಗಳು ಕೇವಲ ಸೌಂದರ್ಯ ಪ್ರಜ್ಞೆಯನ್ನು ಅಭಿವ್ಯಕ್ತಗೊಳಿಸುವ ಸಾಧನಗಳಲ್ಲ. ಅವು ವ್ಯಾವಹಾರಿಕ ಉಪಯೋಗಕ್ಕಾಗಿ, ಅಂದರೆ ಸಂದೇಶ ಪ್ರಸಾರಕ್ಕೋಸ್ಕರ ಅಣಿಗೊಳಿಸಿದವು ಎಂಬುದನ್ನು ಗಮನಿಸಬೇಕು. ಅಂದರೆ ಚಿತ್ರಲಿಪಿ ಒಂದು ಬಗೆಯ ಭಾಷಾ ಮಾಧ್ಯಮ. ಪರಿಮಿತ ಅರ್ಥದಲ್ಲಿ ಚಿತ್ರಲಿಪಿಯನ್ನು ಕಲ್ಲಿನ ಮೇಲೆ ಚಿತ್ರಿತವಾದ ಪ್ರಾಚೀನಕಾಲದ ಬರೆವಣಿಗೆ (ಪೆಟ್ರೋಗ್ರಾಮ್) ಅಥವಾ ಕೊರೆದ ಬರವಣಿಗೆ (ಪೆಟ್ರೋಗ್ರ್ಯಾಪ್) ಎಂದು ಗ್ರಹಿಸಬೇಕಾಗಿದೆ. ಬಹು ನಿರ್ದಿಷ್ಟವಾದ ಅರ್ಥದಲ್ಲಿ ಅಕ್ಷರ ಲಿಪಿಯ ಪೂರ್ವ ಸ್ಥಿತಿಯೇ ಚಿತ್ರಲಿಪಿ ಎಂದೂ ಹೇಳಬಹುದು. ಲಿಪಿ ತನ್ನ ವಿಶಾಲಾರ್ಥದಲ್ಲಿ ಭಾವಲಿಪಿ ಮತ್ತು ಪದಸೂಚಕಲಿಪಿಗಳೆರಡನ್ನೂ (ಲೋಗೋಗ್ರಫಿ) ಒಳಗೊಂಡಿರುತ್ತದೆ.

ಚಿತ್ರಲಿಪಿಯೇ ಬರವಣಿಗೆಯ ಅತ್ಯಂತ ಪ್ರಾಚೀನ ಹಂತ. ಅಕ್ಷರಸ್ಥ ನಾಗರಿಕರಿಗೆ ಬರೆವಣಿಗೆ ಯಾವ ರೀತಿ ಸಹಾಯವಾಗಿದೆಯೋ ಅದೇ ರೀತಿ ಪ್ರಾಚೀನ ಜನಾಂಗಗಳಿಗೆ ಚಿತ್ರಲಿಪಿ ಸಹಾಯಕವಾಗಿತ್ತು. ಕಾಲಕ್ರಮದಲ್ಲಿ ಚಿತ್ರಲೇಖನಕಲೆಯಲ್ಲಿ ಎರಡು ಮುಖ್ಯ ಭಾಗಗಳಾದವು. ಮೊದಲನೆಯದರಲ್ಲಿ ಚಿತ್ರಗಳಿಗೂ ಭಾಷೆಗೂ ಯಾವ ಸಂಬಂಧವೂ ಕಾಣದು, ಉದಾಹರಣೆಗೆ ಆನೆಯ ಚಿತ್ರ. ಕನ್ನಡಿಗ ಅದನ್ನು ನೋಡಿ ಆನೆ ಎಂದರೆ ಸಂಸ್ಕ್ರತದವ ಗಜ ಎನ್ನಬಹುದು. ಅಂದರೆ ಇದು ಮಾತಿನ ಧ್ವನಿಗೆ ಸಂಬಂಧಿಸದೆ ಭಾವನೆಗೆ ಸಂಭಂದಿಸಿದ್ದು. ಎರಡೆನಯದರಲ್ಲಿ ಚಿತ್ರಕ್ಕೂ ಭಾಷೆಗೂ ಸಂಬಂಧ ಉಂಟು. ಇದನ್ನೇ ಭಾವ ಲಿಪಿ ಎನ್ನುತ್ತಾರೆ. ಚಿತ್ರಲಿಪಿಗೂ ಭಾವಲಿಪಿಗೂ ಇರುವ ಸಂಬಂಧ ಬಹಳ ನಿಕಟವಾದದದ್ದು. ಒಂದು ವಿಧದಲ್ಲಿ ಅಕ್ಷರ ಲಿಪಿಗೂ ಚಿತ್ರಲಿಪಿಗೂ ಮಧ್ಯದ ಹಂತವೇ ಭಾವಲಿಪಿ. ಬಾವಲಿಪಿಯೂ ಚಿತ್ರಲಿಪಿಯೇ, ಏಕೆಂದರೆ ಇಲ್ಲಿಯೂ ಸಂದೇಶವನ್ನು ತಿಳಿಸಲು ಚಿತ್ರಗಳೇ ಬಳಸಲ್ಪಡುತ್ತದೆ. ಚಿತ್ರಲಿಪಿ ಚಿತ್ರಿತ ವಸ್ತುವಿನ ಬಾಹ್ಯರೂಪರೇಷೆಗಳನ್ನು ತಿಳಿಸಿದರೆ, ಭಾವಲಿಪಿ ಆ ವಸ್ತುವಿನ ಅಂಥರಾರ್ಥವನ್ನು ಸೂಚಿಸುತ್ತದೆ. ಚಿತ್ರಲಿಪಿಯಲ್ಲಿ ಒಂದು ಸಣ್ಣ ವೃತ್ತ ಸೂರ್ಯ ಎಂಬುದನ್ನು ತಿಳಿಸುತ್ತದೆ. ಆದರೆ ಇದೇ ವೃತ್ತ ಭಾವಲಿಪಿಯಲ್ಲಿ ಸೂರ್ಯನ ಶಾಖ, ಬಿಸಿಲು, ಹಗಲು ಮುಂತಾದವನ್ನು ತಿಳಿಸುತ್ತದೆ. ಅದೇ ರೀತಿಯಲ್ಲಿ ಎರಡು ಕಾಲುಗಳು ಕೇವಲ ಅದೇ ಅಭಿಪ್ರಾಯವನ್ನು ತಿಳಿಸಿದರೆ, ಭಾವಲಿಪಿಯಲ್ಲಿ ಓಡಾಡುವುದು, ನಡೆಯುವುದು ಮುಂತಾದ ಆರ್ಥಗಳನ್ನು ಕೊಡುತ್ತದೆ. ಅಂದರೆ ಭಾವಲಿಪಿ ಚಿತ್ರಲಿಪಿಗಿಂತ ಮುಂದುವರಿದ ಲಿಪಿ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಭಾವಲಿಪಿ ಚಿತ್ರಲಿಪಿಯಷ್ಟು ಸರಳವಾದುದಲ್ಲ, ಏಕೆಂದರೆ ಸಮಾಜದಲ್ಲಿ ಬಳಕೆಯಿರುವ ಕೆಲವು ಅಭಿಪ್ರಾಯಗಳು ಭಾವಲಿಪಿಯಲ್ಲಿ ಸೇರಿರುತ್ತದೆ. ಕೈ ಮತ್ತು ಬೆರಳುಗಳ ವಿನ್ಯಾಸವನ್ನು ಬರೆದಾಗ ಪರಿಚಯವಿರುವವರಿಗೆ ಮಾತ್ರ ಅರ್ಥವಾಗುತ್ತದೆ. ಮಿಕ್ಕವರಿಗೆ ಅದರ ಅರ್ಥವೇ ತಿಳಿಯುವುದಿಲ್ಲ. ಈ ರೀತಿಯ ಸಂಕೇತಗಳನ್ನು ಅಮೇರಿಕನ್ ಇಂಡಿಯನ್ ಬರವಣಿಗೆಯಲ್ಲಿ ವಿಶೇಷವಾಗಿ ಕಾಣಬರುತ್ತದೆ. ಈ ಆರ್ಥದಲ್ಲಿ ನಮ್ಮ ನೃತ್ಯಶಾಸ್ರದ ಕರನ್ಯಾಸಗಳನ್ನು ಮುದ್ರೆಗಳನ್ನೂ ಉದಾಹರಿಸಬಹುದು.

ಚಿತ್ರ ಮತ್ತು ಭಾವಲಿಪಿಗಳೆರಡರಲ್ಲೂ ವರ್ಣಕ್ಕೆ(ಬಣ್ಣಕ್ಕೆ) ಪ್ರಾಧಾನ್ಯವಿದೆ. ಅಮೆರಿಕನ್ ಇಂಡಿಯನ್ ಬುಡಕಟ್ಟಿನ ಚಿರೋಕಿ ಎಂಬ ಜನರಲ್ಲಿ ಪ್ರತಿಯೊಂದು ಬಣ್ಣಕ್ಕೂ ಒಂದು ಅರ್ಥ ಉಂಟು. ಬಿಳಿಯ ಬಣ್ಣ ಸಂತೋಷವನ್ನೂ, ಕರಿಯ ಬಣ್ಣ ಸಾವನ್ನೂ, ಕೆಂಪು ಬಣ್ಣ ವಿಜಯವನ್ನೂ, ನೀಲಿ ಬಣ್ಣ ಸೋಲನ್ನೂ ಸಂಕೇತಿಸುತ್ತದೆ. ಅಂದರೆ ಒಂದು ಚಿತ್ರದಲ್ಲಿ ಇಬ್ಬರು ರಾಜರ ಚಿತ್ರಗಳಿದ್ದು, ಒಬ್ಬನ ಬಣ್ಣ ಕೆಂಪಗೂ ಮತ್ತೊಬ್ಬನ ಬಣ್ಣ ನೀಲಿಯೂ ಆಗಿದ್ದರೆ, ಕೆಂಪು ಬಣ್ಣದ ರಾಜನ ಚಿತ್ರ ಗೆದ್ದ ರಾಜನದ್ದೆಂದೂ ನೀಲಿ ಬಣ್ಣದ ರಾಜನ ಚಿತ್ರ ಸೋತ ರಾಜನದ್ದೆಂದು ತಿಳಿಯಬೇಕಾಗುತ್ತದೆ. ಚಿತ್ರಲಿಪಿ ಮತ್ತು ಭಾವಲಿಪಿಗಳಿಗಿರುವ ಇನ್ನೊಂದು ವ್ಯತ್ಯಾಸವನ್ನು ಇಲ್ಲಿ ಗಮನಿಸಬಹುದು. ಚಿತ್ರಲಿಪಿಯಲ್ಲಿ, ಒಂದು ಅಭಿಪ್ರಾಯವನ್ನು ತಿಳಿಸುವ ನಾಲ್ಕಾರು ಚಿತ್ರಗಳಲ್ಲಿ ಯಾವ ಚಿತ್ರ ಎಲ್ಲಿ ಬರಬೇಕೆಂಬ ನಿಯಮವಿರುವುದಿಲ್ಲ. ಅಂದರೆ ಚಿತ್ರಗಳ ಸ್ಥಾನಕ್ಕೆ ಮಹತ್ವವಿಲ್ಲ. ಆದರೆ ಭಾವಲಿಪಿಯಲ್ಲಿ ಆ ಸ್ಥಾನಗಳಿಗೂ ಪ್ರಾಧಾನ್ಯವುಂಟು. ಒಬ್ಬ ಮನುಷ್ಯನ ತಲೆಯ ಮೇಲ್ಭಾಗದಲ್ಲಿ ಸಿಂಹದ ಚಿತ್ರವನ್ನು ಬರೆದರೆ, ಆ ಮನುಷ್ಯನ ಹೆಸರು ಸಿಂಹ ಎಂದಾಗುತ್ತದೆ. ಅದೇ ಸಿಂಹವನ್ನು ಅವನ ಎದುರಿಗೆ ಬರೆದರೆ ಅವನು ಸಿಂಹದೊಡನೆ ಹೋರಾಡುತ್ತಾನೆ ಎಂದಾಗುತ್ತದೆ. ಅದೇ ಸಿಂಹವನ್ನು ಅವನಿಗೆ ಹಿಮ್ಮಖವಾಗಿ ಬರೆದರೆ ಸಿಂಹ ಅವನಿಗೆ ಹೆದರಿ ಓಡಿಹೋಗುತ್ತಿದೆ ಎಂದಾಗುತ್ತದೆ. ಅಮೆರಿಕನ್ ಇಂಡಿಯನ್ ಬರವಣಿಗೆಯಲ್ಲಿ ಸಮದೇಶದ ಕೊನೆಯಲ್ಲಿ ಚಿರತೆಯ ಚಿತ್ರವನ್ನು ಬರೆದರೆ, ಶಕ್ತಿ ದೇವತೆಯನ್ನು ಸ್ತುತಿಸಿದ ಅರ್ಥ ಬರುತ್ತದೆ. ಅದೇ ಚಿರತೆ ಚಿತ್ರವನ್ನು ಮನುಷ್ಯನ ತಲೆಯ ಮೇಲೆ ಬರೆದರೆ ಅದು ಅವನ ಹೆಸರಾಗುತ್ತದೆ.

ಈ ಎರಡು ಹಂತಗಳನ್ನೂ ಮೀರಿದ ಮತ್ತೊಂದು ಹಂತವೇ ಪದಸೂಚಕಲಿಪಿ. ಅಂದರೆ ಇಲ್ಲಿ ಚಿತ್ರಗಳೂ ಒಂದು ಪದವನ್ನು ಸೂಚಿಸುವ ಸಾಧನಗಳಾಗಬಲ್ಲವು. ಇದನ್ನು ಈ ಉದಾಹರಣೆಯಿಂದ ವಿಶದಪಡಿಸಬಹುದು. ರಾಜ ಆನೆಯನ್ನು ಕೊಂದ ಎಂಬುದನ್ನು ಚಿತ್ರಲಿಪಿಯಲ್ಲಿ, ಕಿರೀಟ ಅಥವಾ ರಾಜ ಚಿಹ್ನೆ ಧರಿಸಿದ ಮನುಷ್ಯನ ಚಿತ್ರ, ಅವನು ಆಯುಧದಿಂದ ಆನೆಯನ್ನು ಇರಿಯುತ್ತಿರುವ ಚಿತ್ರ ಮತ್ತು ಸತ್ತು ಬಿದ್ದಿರುವ ಆನೆಯ ಚಿತ್ರ-ಈ ಮೂರು ಚಿತ್ರಗಳನ್ನು ಬರೆಯುವುದರಿಂದ ತೋರಿಸಬಹುದು. ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಇಲ್ಲಿನ ಚಿಹ್ನೆಗಳು ಮಾತನಾಡುವ ಕ್ರಮದಲ್ಲಿಯೇ ಇರಬೇಕು. ಅಂದರೆ ಮೊದಲೆನೆಯದು ರಾಜನಚಿಹ್ನೆ, ಎರಡೆನೆಯದು ಆನೆಯದು ಮತ್ತು ಕೊಲ್ಲು ಎನ್ನುವ ಪದದ್ದು. ಈ ಚಿಹ್ನೆಗಳ ಸ್ಥಾನಪಲ್ಲಟಕ್ಕೆ ಅವಕಾಶವಿಲ್ಲ. ಕೊಂದನು ರಾಜನು ಆನೆಯನ್ನು ಎಂದು ನಾವು ಮಾತನಾಡುವುದಿಲ್ಲ. ಅದೇ ರೀತಿಯಲ್ಲೂ ಬರೆಯುವಾಗಲೂ ಪದಸೂಚ್ಯಲಿಪಿಯಲ್ಲಿ ಈ ರೀತಿ ಬರೆಯುವ ಹಾಗಿಲ್ಲ. ಏಕೆಂದರೆ ಅದು ಅರ್ಥವಾಗುವುದಿಲ್ಲ.

ಪದಸುಚ್ಯಲಿಪಿಯಲ್ಲಿ ಮತ್ತೊಂದು ವ್ಯತ್ಯಾಸ ಕಾಣಬರುತ್ತದೆ. ಭಾವಲಿಪಿಯಲ್ಲಿ ಒಂದು ಚಿತ್ರಕ್ಕೆ ಸಂಬಂಧಿಸಿದ ಎಷ್ಟು ಅರ್ಥಗಳು ಬೇಕಾದರೂ ಇರಬಹುದು. ಸೂರ್ಯನ ಚಿತ್ರ ಹಗಲು, ಹೊಳೆಯುವುದು, ಶುದ್ಧವಾದುದು, ಬೆಳ್ಳಗಿರುವುದು ಮುಂತಾದ ಹತ್ತಾರು ಅರ್ಥಗಳನ್ನು ಕೊಡಬಲ್ಲುದು. ಆದರೆ ಪದಸೂಚ್ಯಕಲಿಪಿಯಲ್ಲಿ ಆ ಪದಕ್ಕೆ ಸಂಬಂಧಿಸಿದ ಅರ್ಥಗಳು ಆ ಭಾಷೆಯಲ್ಲಿ ಎಷ್ಟಿವೆಯೋ ಅಷ್ಟನ್ನು ಮಾತ್ರ ಸೂಚಿಸುತ್ತದೆ. ಉದಾಹರಣೆಗೆ ಸುಮೇರಿಯನ್ ಭಾಷೆಯಲ್ಲಿ ಸೂರ್ಯನ ಚಿತ್ರಕ್ಕೆ ಏಳು ವಿವಿಧ ಅರ್ಥಗಳಿವೆ. ಆದರೆ ಚೀನಿಲಿಪಿಯಲ್ಲಿ ಅದಕ್ಕೆ ಎರಡೇ ಅರ್ಥ- ಸೂರ್ಯ ಮತ್ತು ಹಗಲು ಎಂದು ಸುಮೇರಿಯನ್‍ನಲ್ಲಿ ಶುದ್ಧವಾದುದು ಎಂಬುದನ್ನು ಹೇಳಲು ಸೂರ್ಯನ ಚಿಹ್ನೆಯನ್ನೇ ಬಳಸಿದರೆ ಸಾಕು. ಆದರೆ ಚೀನೀ ಲಿಪಿಯಲ್ಲಿ ಸೂರ್ಯ ಚಿತ್ರದ ಜೊತೆಯಲ್ಲಿ ಬಣ್ಣದ ಚಿತ್ರವನ್ನೂ ಸೇರಿಸಿದರೆ ಮಾತ್ರ ಪರಿಶುದ್ಧವಾದುದು ಎಂಬ ಅರ್ಥ ಸ್ಫುರಿಸುತ್ತದೆ. ಅಂದರೆ ನಿದಿಷ್ಟ ಅರ್ಥ ಮತ್ತು ಧ್ವನಿಯನ್ನು ಗುರುತಿಸುವ ಹಂತದಲ್ಲಿ ಪದಸೂಚಕ ಲಿಪಿ ಚಿತ್ರಲಿಪಿಯ ಸುಧಾರಿತ ರೂಪವೆಂದು ತಿಳಿಯಬಹುದು.

ಈ ವಿವಿಧ ಹಂತಗಳ ಚಿತ್ರಲಿಪಿ ಪ್ರಾಚೀನ ಪ್ರಪಂಚದ ವಿವಿಧ ಭಾಗಗಳಲ್ಲಿ ಪ್ರಚಲಿತವಾಗಿತ್ತು. ಮುಖ್ಯವಾಗಿ ಮೆಸಪೊಟೇಮಿಯ, ಈಜಿಪ್ಟ್, ಫಿನೀಷಿಯ, ಕ್ರೀಟ್, ಸ್ಪೇನ್, ದಕ್ಷಿಣ ಫ್ರಾನ್ಸ, ಚೀನ, ಅಮೆರಿಕ, ಭಾರತ, ಸೈಬೀರಿಯ, ಆಸ್ಟ್ರೇಲಿಯ-ಮುಂತಾದ ಕಡೆಗಳಲ್ಲಿ ಬಳಕೆಯಲ್ಲಿತ್ತು. ಮೆಸಪೊಟೋಮಿಯದಲ್ಲಿ ವಿಶೇಷವಾಗಿ ಬಳಕೆಯಲ್ಲಿದ್ದ ಕ್ಯೂನಿಫಾರಂ ಲಿಪಿ ಪ್ರಾರಂಭದಲ್ಲಿ ಬಹು ಸರಳ ಚಿತ್ರ ಲಿಪಿಯೇ ಆಗಿತ್ತು. ಸುಮಾರು ಒಂಬೈನೂರು ಚಿಹ್ನೆಗಳುಳ್ಳ ಈ ಚಿತ್ರಲಿಪಿ ಉರುಕ್ ಎಂಬಲ್ಲಿ Iಗಿ ಃ ಎಂಬ ಸಂಸ್ಕøತಿಸ್ತರದಲ್ಲಿ ದೊರೆತಿದೆ. ಈ ತರದಲ್ಲಿ ಭಾವಲಿಪಿ ಕಂಡುಬರುವುದೇ ಇಲ್ಲ. ಈ ಸುಮೆರಿಯನ್ ಚಿತ್ರಲಿಪಿ ಸುಮಾರು ಕ್ರಿ. ಪೂ. ನಾಲ್ಕನೆಯ ಸಹಸ್ರಭಾಗದ ಮಧ್ಯದಲ್ಲಿ ಬಳಕೆಯಲ್ಲಿತ್ತೆಂದು ಹೇಳಬಹುದು. ಇದರಲ್ಲಿ ವಿಶೇಷವಾಗಿ ಮನುಷ್ಯ, ಗಂಡಸು, ಹೆಂಗಸು, ಬೆಟ್ಟ, ಎತ್ತು, ಸೂಂiÀರ್i,ಹಸು, ಮೀನು ಮುಂತಾದ ಚಿತ್ರಗಳು ಕಾಣಬರುತ್ತವೆ. ಕಾಲಕ್ರಮದಲ್ಲಿ ಭಾವಲಿಪಿಯಾಗಿ, ಈ ಚಿತ್ರಲಿಪಿ ಕ್ಯೂನಿಫಾರಮಿಗೆ ಎಡೆಮಾಡಿ ಕೊಟ್ಟಿತು. ಪ್ರಾಯಶಃ ಇದೇ ಪ್ರಪಂಚದಲ್ಲಿ ಅತ್ಯಂತ ಪ್ರಾಚೀನ ಬರವಣಿಗೆಯೆಂದು ಭಾವಿಸಬಹುದು. ಪ್ರಾಚೀನ ಈಜಿಪ್ತಿನ ದೇವಲಿಪಿಯಾದ ಹೈರೋಗ್ಲಿಫಿಕ್ ಬರವಣಿಗೆ ಕ್ರಿ. ಪೂ. ಸುಮಾರು 3 ನೆಯ ಸಹಸ್ರಮಾನದ ಆದಿಭಾಗಕ್ಕೆ ಸೇರಿದ್ದು, ಈ ಲಿಪಿಯೂ ಚಿತ್ರಲಿಪಿಯಿಂದಲೆ ಉಗಮವಾಯಿತೆನ್ನುವ ವಾದವನ್ನೇ ಅನೇಕ ವಿದ್ವಾಂಸರು ಒಪ್ಪುತ್ತಾರೆ. ನಾರ್ಮರ್ ಪಾಲೆಟ್ ಎಂದು ಖ್ಯಾತವಾಗಿರುವ ವಸ್ತುವಿನ ಮೇಲಿರುವ ಚಿತ್ರಲಿಪಿ ಈಜಿಪ್ಟಿನ ಚಿತ್ರಲಿಪಿಗೆ ಉತ್ತಮ ಉದಾಹರಣೆ. ಈಜಿಪ್ಟಿನ ಸೈನ್ಯವೊಂದು ಶತ್ರುಗಳ ಮೇಲೆ ಹೋಗುತ್ತಿರುವ ಚಿತ್ರ, ಆ ಶತ್ರುಸೈನ್ಯವನ್ನು ಸೋಲಿಸುತ್ತಿರುವುದು ಮತ್ತು ಇಜಿಒಟಿನ ರಾಜನೊಬ್ಬ ಶತ್ರುರಾಜನನ್ನು ಹೊಡೆಯುತ್ತಿರುವುದು ಇದರಲ್ಲಿ ಬಲು ಸುಂದರವಾಗಿ ಚಿತ್ರಿತವಾಗಿದೆ. ಇದರಲ್ಲಿ ಚಿತ್ರಲಿಪಿಯನ್ನು ಮೀರಿದ ಮುಂದಿನ ಹಂತದ ಲಿಪಿಯಿದೆ.

ಪ್ರಾಚೀನ ಕ್ರೀಟ್ನಲ್ಲಿ ಚಿತ್ರಲಿಪಿ ಪ್ರಾಚೀನ ಮಿನೋವನ್ ಸಂಸ್ಕøತಿಯ ಮೊದಲಸ್ತರದಲ್ಲಿ ಬಳಕೆಯಲ್ಲಿತ್ತು. ಕ್ರಿ. ಪೂ. ಸುಮಾರು2800ಕ್ಕೆ ಸೇರಬಹುದಾದ ಈ ಸಂಸ್ಕøತಿಯಲ್ಲಿ ಶಂಕುವಿನಾಕಾರದ ಮುದ್ರೆಗಳಲ್ಲಿ ಬಹು ಸರಳವಾದ ಚಿತ್ರಲಿಪಿ ಕಾಣಬರುತ್ತದೆ. ಇವುಗಳಲ್ಲಿ ನಯವಿಲ್ಲದ ಅನೇಕ ಚಿತ್ರಗಳಿರುವುದು ಗಮನಾರ್ಹ, ಈ ಚಿನ್ಹೆಗಳು ಮಧ್ಯ ಮಿನೋವನ್ ಸಂಸ್ಕøತಿಯ ಕ್ರಿ. ಪೂ. 2000-1850 ಕಾಲದವರೆಗೂ ಬಳಕೆಯಲ್ಲಿದ್ದವು. ಈ ಸಂಸ್ಕøತಿಯ ಕೊನೆಯ ಭಾಗದಲ್ಲಿ ಲೀನಿಯರ್ ಂ ಲಿಪಿ ಬಳಕೆಗೆ ಬಂತು. ಕ್ರಿ.ಪೂ 1500 ಸೇರಬಹುದಾದ ಹಿಟ್ಟೈಟ್ ಹೈರೋಗ್ಲಿಫಿಕ್ ಎಂದು ಕರೆಯಲ್ಪಡುವ ಮೂಲವಿನ್ನೂ ತಿಳಿದಿಲ್ಲ. ಆದರೆ ಹೊರನೋಟಕ್ಕೆ ಇದಕ್ಕೂ ಕ್ರೀಟನ್ ಚಿತ್ರಲಿಪಿಗೂ ಬಹಳ ಹೋಲಿಕೆಗಳಿರುವುದು ಕಾಣಬರುತ್ತದೆ. ಆದುದರಿಂದ ಇದನ್ನು ಹಿಟ್ಟೈಟ್ ಚಿತ್ರಲಿಪಿಯೆಂದು ಕರೆಯುವುದುಂಟು. ಕ್ರಿ.ಪೂ.600 ರವರೆಗೂ ಬಳಕೆಯಲ್ಲಿದ್ದ ಈ ಲಿಪಿಯಲ್ಲಿ ಚಿತ್ರ ಮತ್ತು ಭಾವ ಲಿಪಿಗಳ ಮಿಲನವಿರುವುದೇ ವಿಶೇಷ.

ಕ್ರಿ.ಪೂ ಎರಡನೆಯ ಸಹಸ್ರಮಾನದ ಮಧ್ಯಭಾಗಕ್ಕೆ ಸೇರುವ ಚೀನೀ ಲಿಪಿ ಪೂರ್ಣ ಚಿತ್ರಲಿಪಿಯಲ್ಲ. ಆದರೆ ಅದರ ಬೆಳವಣಿಗೆಯನ್ನು ಗಮನಿಸಿದರೆ ಇದಕ್ಕಿಂತ ಪೂರ್ವದಲ್ಲಿ ಅಲ್ಲಿ ಚಿತ್ರಲಿಪಿ ಇದ್ದಿರಬೇಕೆಂದೂ ಅದು ನಮಗೆ ಇನ್ನೂ ದೊರಕಿಲ್ಲವೆಂದೂ ಊಹಿಸಬಹುದಾಗಿದೆ.

ಕ್ರಿ. ಪೂ. ಮೂರನೆಯ ಸಹಸ್ರಮಾನದಲ್ಲಿ ಬಳಕೆಯಲ್ಲಿದ್ದ ಸಿಂಧೂ ಲಿಪಿ ಗೋಪ್ಯ ಲಿಪಿಯಾಗಿಯೇ ಉಳಿದಿದೆಯೆನ್ನಬಹುದು. ಸುಮಾರು ಎರಡೂವರೆ ಸಹಸ್ರ ಮುದ್ರೆಗಳ ಮೇಲಿನ ಲಿಪಿಯಲ್ಲಿ ಸುಮಾರು ಇನ್ನೂರೈವತ್ತು ಚಿಹ್ನೆಗಳಿವೆ. ಚಿತ್ರಲಿಪಿ ಮತ್ತು ಭಾವಲಿಪಿ ಎಂದಿದನ್ನು ಹೆಸರಿಸಲು ಈಗ ದೊರೆತಿರುವ ಇನ್ನೂರೈವತ್ತು ನಿದರ್ಶನಗಳು ಸಾಲವು. ವರ್ಣಾತ್ಮಕ ಮತ್ತು ಭಾವಲಿಪಿ ಚಿತ್ರಲಿಪಿಗಳ ಮಿಶ್ರಣವೆಂದು ಅನೇಕ ವಿದ್ವಾಂಸರು ಭಾವಿಸಿದ್ದಾರೆ. ಮತ್ತೆ ಕೆಲವರು ಇದು ಕೇವಲ ಪದಸೂಚಕ ಲಿಪಿಯೆಂದು ವಾದಿಸಿದ್ದಾರೆ. ಸೋವಿಯತ್ ಲಿಪಿತಜ್ಞರು, ಕೋಲನ್ನು ಹಿಡಿದಿರುವ ಮನುಷ್ಯನ ಚಿತ್ರವನ್ನು ದಂಡಧರ ಅಥವಾ ಯಮ ಎಂದು ಬಾವಿಸಿದ್ದಾರೆ. ಆದರೆ ಇತ್ತೀಚೆಗೆ ಈ ಪ್ರಶ್ನೆಯನ್ನು ವಿಶದವಾಗಿ ಸಂಶೋಧಿಸಿರುವ ಶಿಕಾರಿಪುರದ ರಂಗನಾಥರಾಯರು ಸಿಂಧೂಲಿಪಿ, ಚಿತ್ರಲಿಪಿ ಅಥವಾ ಭಾವಲಿಪಿಯಲ್ಲವೆಂದು ವಾದಿಸಿದ್ದಾರೆ. ಇವರ ಪ್ರಕಾರ ಸಿಂಧು ಲಿಪಿಯಲ್ಲಿ 52 ಸಂಕೇತಗಳಿವೆ. ಇವುಗಳಲ್ಲಿ 12 ಮಾತ್ರ ಚಿತ್ರಗಳು, ಅವು ಕೀಟಗಳು, ಪಕ್ಷಿಗಳು, ಚೇಳು, ನಾಯಿ, ಮರ, ಮೀನು ಮತ್ತು ಮನುಷ್ಯ. ಮಿಕ್ಕವು ಧ್ವನ್ಯಾತ್ಮಕ ಚಿಹ್ನೆಗಳು. ಇವು ಸಿಂಧೂ ನಾಗರೀಕತೆಯ ಕೊನೆಯ ಹಂತದವುಗಳಾದುದರಿಂದ ಈ ಲಿಪಿಯ ಉಗಮ ಚಿತ್ರಲಿಪಿಯಿಂದಾದುದೆಂದು ಹೇಳಲು ಅಡ್ಡಿಯಿಲ್ಲ.

ಚಿತ್ರಲಿಪಿ ಪ್ರಾಚೀನಕಾಲಕ್ಕೆ ಮಾತ್ರ ಸೀಮಿತವಾಗಿತ್ತೆಂದು ಹೇಳಲಾಗುವುದಿಲ್ಲ. ಮಧ್ಯ ಆಫ್ರಿಕ, ಆಗ್ನೇಯ ಏಷ್ಯ, ಸೈಬೀರಿಯ ಮುಂತಾದ ಕಡೆಗಳಲ್ಲಿ ಅನಾಗರಿಕ ಬುಡಕಟ್ಟಿನ ಜನಾಂಗಗಳು ಇಂದಿಗೂ ಚಿತ್ರಲಿಪಿಯನ್ನು ಬಳಸುತ್ತಿದ್ದಾರೆ. ಆಧುನಿಕ ನಾಗರೀಕತೆಯಲ್ಲಿಯೂ ಅದು ಬಳಕೆಯಲ್ಲಿದೆ. ಸಂಚಾರ ಮಾರ್ಗಗಳಲ್ಲಿ, ಸೇತುವೆಗಳು, ತಿರುವುಗಳು, ಶಾಲೆಯ ಸಮೀಪದ ಸ್ಥಳಗಳು, ಮತ್ತು ಆಸ್ಪತ್ರೆಗಳಲ್ಲಿ ನಿಶ್ಯಬ್ದಬೇಕೆಂಬ ನಿಯಮದ ಚಿತ್ರ, ಚಿತ್ರಮಂದಿರಗಳಲ್ಲಿ ಧೂಮಪಾನ ನಿಷೇಧ ಚಿತ್ರ, ವಿದ್ಯುತ್ತಿನ ಅಪಾಯವನ್ನು ತೋರಿಸುವ ಕೆಂಪುಬಣ್ಣದ ತಲೆಬರುಡೆ ಚಿತ್ರ - ಹೀಗೆ ಹಲವಾರು ಇಂದಿಗೂ ಬಳಕೆಯಲ್ಲಿವೆ. ಇವೆಲ್ಲಾ ಚಿತ್ರಲಿಪಿಯಿಂದಲೇ ಪ್ರಭಾವಿತಗೊಂಡವು ಎಂದರೆ ತಪ್ಪಲ್ಲ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: