ಗೀಯೋಮ್ ಡ ಲಾರೀಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಹಸ್ತಪ್ರತಿಯೊಂದರಲ್ಲಿನ ಗಿಯೋಮ್ ಡ ಲಾರೀಸ್ ನ ಚಿತ್ರ

ಗೀಯೋಮ್ ಡ ಲಾರೀಸ್ - (1200-1240). ಮಧ್ಯ ಯುಗದ ಈ ಫ್ರೆಂಚ್ ಕವಿಯ ವಿಚಾರವಾಗಿ ಏನೇನೂ ತಿಳಿದುಬಂದಿಲ್ಲ. ಲಾರೀಸ್ ಎಂಬ ಊರಿನ ನಿವಾಸಿಯಾಗಿದ್ದಿರಬಹುದೆಂದು ಊಹಿಸಿದ್ದಾರೆ. ಖಚಿತವಾಗಿರುವ ಒಂದು ಸಂಗತಿ ಏನೆಂದರೆ, ಲೋಕಪ್ರಿಯವಾದ ರೊಮಾನ್ ಡ ಲ ರೋಸ್ (ಗುಲಾಬಿ ಹೂವಿನ ಅಚ್ಚರಿ ಕಥೆ) ಎಂಬ ಸುದೀರ್ಘ ಕಥನ ಕಾವ್ಯದ ಪೂರ್ವಭಾಗ, ಸುಮಾರು 4000 ಸಾಲುಗಳು, ಇವನಿಂದ ರಚಿತವಾದವು.

ರೊಮಾನ್ ಡ ಲ ರೋಸ್[ಬದಲಾಯಿಸಿ]

ಗೀಯೋಮ್ ಡ ಲಾರೀಸ್ 4,000 ಪಂಕ್ತಿ ಬರೆದು ನಿಲ್ಲಿಸಿದ್ದನ್ನು ಜೀನ್ ಡ ಮ್ಯೂಂಗ್ ಎಂಬ ಕವಿಯು 1275 ರಿಂದ 1280ರ ವರೆಗೆ ಶ್ರಮಿಸಿ 18,000 ಪಂಕ್ತಿಗಳನ್ನು ಹೊಸದಾಗಿ ಸೇರಿಸಿ ಪೂರ್ತಿ ಮಾಡಿದ ಲಾರಿಸ್ ಉಪಯೋಗಿಸಿದ ಎಂಟು ಉಚ್ಚಾರಾಂಶಗಳ ಪಂಕ್ತಿಯೇ ಡ ಮ್ಯೂಂಗಿಗೂ ಮಾಧ್ಯಮವಾಯಿತು. ಅಲ್ಲದೆ ಅವನು ಅನುಸರಿಸಿದ ಅನ್ಯಾರ್ಥ ರೀತಿಯನ್ನೂ ಇವನು ಬಿಡಲಿಲ್ಲ. ಕಥೆಯನ್ನೂ ಮುಂದುವರಿಸಿ ಕೊನೆಗೊಳಿಸಿದ. ಆದರೆ ಕಾವ್ಯೋದ್ದೇಶ ಧೋರಣೆ ವಿಷಯ ಸಂಪತ್ತು ವಿವರಗಳು ಎಲ್ಲದರಲ್ಲೂ ಲಾರಿಸ್ ಬೇರೆ, ಮ್ಯೂಂಗ್ ಬೇರೆ. ಆ ಕಾವ್ಯದ ಕಥೆ ಹೀಗಿದೆ: ಕವಿಗೆ ಒಂದು ಪವಿತ್ರ ಕನಸಾಗುತ್ತದೆ. ಮೈಗಳ್ಳತನ ಕೈಹಿಡಿದು ಅವನನ್ನು ಮರುಪುಷ್ಪಪಕ್ಷಿ ನಿಬಿಡವಾದ ಒಂದು ರಮ್ಯಾರಾಮಕ್ಕೆ ಕರೆದೊಯ್ಯುತ್ತದೆ. ಅಲ್ಲಿ ಅಡ್ಡಾಡುತ್ತಿದ್ದ ವ್ಯಕ್ತಿಗಳೆಂದರೆ ಆಹ್ಲಾದ, ನಲಿದಾಟ, ಮಧುರನೋಟ, ಐಶ್ವರ್ಯ, ಪರಮೌದಾರ್ಯ, ಮೇಲಾಗಿ ಪ್ರೇಮದೇವ. ಅಲ್ಲಿ ಇಲ್ಲಿ ಸುತ್ತುತ್ತಿರುವಾಗ ಕವಿಗೆ ಹಠಾತ್ತಾಗಿ ಅಂದಚಂದದ ಒಂದು ಗುಲಾಬಿ ಮೊಗ್ಗು ಗೋಚರಿಸುತ್ತದೆ. ಕೂಡಲೆ ಅವನಿಗೆ ಅದನ್ನು ಬಿಡಿಸಿ ಕೊಂಡು ಕೈವಶಮಾಡಿಕೊಳ್ಳುವ ತವಕ ಉಂಟಾಗುತ್ತದೆ. ಅರ್ಥಾತ್ ಪ್ರೇಮ ದೇವನ ಬಲಿಗೆ ಅವನು ಉರುಳಿಬೀಳುತ್ತಾನೆ ಪ್ರೇಮದೇವ ಅವನನ್ನು ಹತ್ತಿರ ಕುಳ್ಳಿರಿಸಿಕೊಂಡು ಶಿಷ್ಟಪ್ರಣಯ (ಕೋಟ್ರ್ಲಿ ಲವ್) ಎಂಬ ನಾಜೂಕು ಸಂಪ್ರದಾಯದ ಜಟಿಲ ತತ್ತ್ವಗಳನ್ನೂ ಕ್ಲಿಷ್ಟ ನಿಯಮಾವಳಿಯನ್ನೂ ಸ್ಪಷ್ಟವಾಗಿ ವಿವರಿಸಿ, ಕವಿ ತನ್ನ ಅಡಿಯಾಳಾಗಲು ಒಪ್ಪಿದರೆ, ಬಹಳ ಕಷ್ಟಗಳನ್ನು ಅನುಭವಿಸಿ ಆಮೇಲೆ ಅಷ್ಟೇ ಮೊತ್ತದ ಅಮೋದಗಳನ್ನೂ ಸವಿಯಬಹುದು-ಎಂದು ಹೇಳುತ್ತಾನೆ. ಒಲವಿನಿಂದ ಈಚೆಗೆ ಬರಲಾರದೆ ಕವಿ ಪ್ರೇಮದಾಸನಾಗಿ ಗುಲಾಬಿ ಮೊಗ್ಗನ್ನು ಕಿತ್ತುಕೊಳ್ಳುವ ಸಾಹಸಕಾರ್ಯದಲ್ಲಿ ಉದ್ಯುಕ್ತನಾಗುತ್ತಾನೆ. ವಿನಯ ಮುಂತಾದ ಒಳ್ಳೆಯ ವ್ಯಕ್ತಿಗಳಿಂದ ಅವನಿಗೆ ಉತ್ತೇಜನವೂ ಅಪಾಯ. ಪಿಸುಣು ಇತ್ಯಾದಿ ಧೂರ್ತರಿಂದ ಭಯ, ಭೀತಿಗಳೂ ಒದಗಿ ಅವನ ಪ್ರಯತ್ನಗಳು ವ್ಯರ್ಥವಾಗುತ್ತವೆ. ಬುದ್ಧಿವಿವೇಕ ಅವನಿಗೆ ವೃಥಾ ಶ್ರಮಪಡಬೇಡ ಎಂದು ಹಿತನುಡಿ ಆಡುತ್ತದೆ. ಏನೂ ತೋಚದೆ ಕನಸಿಗನಂತೆ ಕವಿ ಸುಮ್ಮನೆ ಇರುವಾಗ, ಮರುಕ ಮತ್ತು ಪ್ರೇಮದೇವಿ ಮುಂದೆ ಬಂದು, ಸಮಾಧಾನ ಹೇಳಿ, ಗುಲಾಬಿ ಮೊಗ್ಗಿಗೆ ಅವನು ಒಂದು ಬಾರಿ, ಮುತ್ತಿಡಲು ಅಪ್ಪಣೆ ಕೊಡುತ್ತಾರೆ. ಆದರೇನು? ಪಿಸುಣು ರಂಪ ಎಬ್ಬಿಸಿ ಕಿರುಚಿತ್ತಾಳೆ. ತತ್‍ಕ್ಷಣ ದಷ್ಟಪುಷ್ಟ ಕಾವಲುಗಾರರು ಓಡಿ ಬರುತ್ತಾರೆ. ಗುಲಾಬಿ ಮೊಗ್ಗಿನ ಸುತ್ತ ಕೋಟೆಗೋಡೆ ಏಳುತ್ತದೆ. ಮೊಗ್ಗನ್ನು ಕಾಪಾಡಿಕೊಳ್ಳಲು ಒಬ್ಬ ದಾದಿಯ ನೇಮಕವಾಗುತ್ತದೆ.

ಇಲ್ಲಿಗೆ ಡ ಲಾರೀಸನ ಕವನ ಕೊನೆಗೊಳ್ಳುತ್ತದೆ. ಕ್ರಿ.ಪೂ. 43ರಿಂದ ಕ್ರಿ.ಶ. 18ರ ವರೆಗೆ ಬದುಕಿದ ರೋಮನ್ ಕವಿ ಓವಿಡ್ಡನ ಶೈಲಿಯೇ ಲಾರೀಸನಿಗೆ ಮೇಲುಪಂಕ್ತಿ. ಲಾರೀಸ್ ಬರೆದದ್ದು ಉಚ್ಚವರ್ಗದವರಿಗೆ ಕಾವ್ಯಾಹ್ಲಾದ ಒದಗಿಸುವುದಕ್ಕಾಗಿ. ಆದ್ದರಿಂದ ಅವನ ಕವನ ರಮ್ಯವಾಗಿದೆ, ಲಲಿತವಾಗಿದೆ, ಹಿತವಾಗಿದೆ; ಚಿತ್ರಯೋಗ್ಯ ವರ್ಣನೆಗಳಿಂದ ಅಲಂಕೃತವಾಗಿದೆ.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: