ಕೆರೆಗೆ ಹಾರ ಕಥನಗೀತೆ
ಕೆರೆಗೆ ಹಾರ ಕಥನಗೀತೆಗಳಲ್ಲೇ ಬಹಳ ಪ್ರಸಿದ್ದವಾದುದು. ಹೃದಯ ವಿದ್ರಾವಕವಾದ ದುರಂತ ಗೀತೆ. ಹೆಣ್ಣನ್ನು ಒಂದು ವಸ್ತುವಾಗಿ ಬಳಸಿರುವುದು ಇಲ್ಲಿ ಎದ್ದು ಕಾಣುವ ಅಂಶ. ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ತನ್ನ ಮೂಲ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹೋರಾಟ ಮಾಡಬೇಕಾದ ಅನಿವಾರ್ಯತೆಯನ್ನು ಈ ಕಥನಗೀತೆ ಪ್ರಸ್ತುತ ಪಡಿಸುತ್ತದೆ. ಭಾರತೀಯ ಜನಪದ ಸಾಹಿತ್ಯದಲ್ಲಿ ತ್ಯಾಗ, ಬಲಿದಾನಕ್ಕೆ ಸಂಬಂಧಿಸಿದ ಕಥನಗೀತೆಗಳು ಹೇರಳವಾಗಿ ದೊರೆಯುತ್ತವೆ. ಕಥನಗೀತೆಗಳು ಜನಪದ ಸಂಸ್ಕೃತಿಯ ಮಹಾದರ್ಶನವನ್ನು ಮಾಡಿಸುತ್ತವೆ. ಇಲ್ಲಿ ಗಂಡಿಗಿಂತ ಹೆಣ್ಣಿನ ಬಹುಮುಖಗಳ ಅನಂತದರ್ಶನ ಅನಾವರಣಗೊಂಡಿವ.
ಪೀಠಿಕೆ
[ಬದಲಾಯಿಸಿ]- ಯಾವುದೇ ಜನಪದ ಸಾಹಿತ್ಯ ಜನ ಸಾಮಾನ್ಯರ, ಅಜ್ಞಾತ ಕವಿಗಳ ಬದುಕಿನ ಸಮಗ್ರ ಅನುಭವ, ಅನುಭಾವಗಳನ್ನು ಮೌಖಿಕವಾಗಿ ಅಭಿವ್ಯಕ್ತಗೊಳಿಸುವಂತಹುದು. ಮನುಷ್ಯನ ಜೀವನದ ಪ್ರತಿಯೊಂದು ಗಳಿಗೆಗಳನ್ನು ಅರ್ಥಪೂರ್ಣವಾಗಿ ಕಳೆಯುವ ಅವರು, ತಮ್ಮ ಆಸರಿಕೆ, ಬೇಸರಿಕೆ ಕಳೆಯಲು ಹಾಡಿಕೊಂಡ ಸುದೀರ್ಘ ಪದಗಳು ಕಥನಗೀತೆಗಳೆನಿಸಿವೆ. ಕಥನಗೀತೆಗಳು ಜನಪದ ಸಂಸ್ಕೃತಿಯ ಮಹಾದರ್ಶನವನ್ನು ಮಾಡಿಸುತ್ತವೆ.
- ಇಲ್ಲಿ ಗಂಡಿಗಿಂತ ಹೆಣ್ಣಿನ ಬಹುಮುಖಗಳ ಅನಂತ ದರ್ಶನ ಅನಾವರಣಗೊಂಡಿವೆ. ಜೊತೆಗೆ ಜೀವನದ ಪ್ರತೀ ಹಂತದಲ್ಲೂ ಹೆಣ್ಣಿನ ಪಾತ್ರ ಎಷ್ಟೊಂದು ಮುಖ್ಯ ಎಂಬುದರ ಅರಿವನ್ನು ಮಾಡಿಕೊಡಲಾಗಿದೆ. ಜನಪದ ಸಾಹಿತ್ಯ ದಲ್ಲಿ ಪದ್ಯಭಾಗ ಜನಪ್ರಿಯಗೊಂಡಿರುವಷ್ಟು ಬೇರೆ ಪ್ರಕಾರಗಳು ಜನಪ್ರಿಯಗೊಂಡಿಲ್ಲವೆಂದೇ ಹೇಳಬಹುದು. ಇವುಗಳ ರಚನಕಾರರು ಯಾರೆಂಬುದಾಗಲೀ, ಅವರ ಕಾಲಮಾನವಾಗಲೀ ತಿಳಿದಿಲ್ಲ.
- ಸುಮಾರು ೩೦-೩೫ವರ್ಷಗಳ ಹಿಂದೆ ಶ್ರೀಯುತ ಬೆಟಗೇರಿ ಕೃಷ್ಣಶರ್ಮರು ಗ್ರಾಮೀಣ ಪ್ರದೇಶವೊಂದರಲ್ಲಿ ಜನಪದ ಕ್ಷೇತ್ರಕಾರ್ಯ ಮಾಡುತ್ತಿರುವಾಗ, ಅಲ್ಲಿ ಒಂದು ಕೋಲಾಟದ ಪದದಿಂದ ಆಕರ್ಷಿತರಾಗಿ, ಅದನ್ನು ಸಂಗ್ರಹಿಸುತ್ತಾರೆ, ದಾಖಲಿಸುತ್ತಾರೆ. ಅದೇ 'ಕೆರೆಗೆಹಾರ' ಕಥನಗೀತೆ. ಈ ಗೀತೆ ಸುಮಾರು ೧೨೦ ಸಾಲುಗಳನ್ನು ಒಳಗೊಂಡಿದೆ.
ಆ'ಹಾರ' ಪದ್ದತಿ
[ಬದಲಾಯಿಸಿ]ಭಾರತೀಯ ಜನಪದ ಸಾಹಿತ್ಯದಲ್ಲಿ ತ್ಯಾಗ, ಬಲಿದಾನಕ್ಕೆ ಸಂಬಂಧಿಸಿದ ಕಥನಗೀತೆಗಳು ಹೇರಳವಾಗಿ ದೊರೆಯುತ್ತವೆ. ಸಮಾಜದ ಸಮಷ್ಠಿ ಹಿತಕ್ಕಾಗಿ ಸ್ವ ಇಚ್ಛೆಯಿಂದ ಆತ್ಮಾರ್ಪಣೆ ಮಾಡಿ ಕೊಳ್ಳುವುದು ತ್ಯಾಗ ಎನಿಸಿದರೆ, ಸಾಯಲು ಇಷ್ಟವಿಲ್ಲದ ಜೀವವೂಂದು ಮನೆಯವರ ಒತ್ತಡಕ್ಕೆ ಮಣಿದು ಸಾಯುವುದು "ಬಲಿ" ಎನಿಸಿಕೊಳ್ಳುತ್ತದೆ. ಸಾಮಾನ್ಯ ಅರ್ಥದಲ್ಲಿ 'ಬಲಿ' ಎಂದರೆ ನಾವು ನಂಬಿರುವ ದೇವರಿಗೆ ಆಹಾರ/ನೈವೇದ್ಯ ಕೊಡುವ ಪ್ರಕ್ರಿಯೆ. 'ಎಡೆ'ಯಲ್ಲಿ ಎರಡು ವಿಧ.
- ಸಾತ್ವಿಕ ಆಹಾರ(ಸಸ್ಯಹಾರ)-ಸಸ್ಯಹಾರಿಗಳು ದೇವರಿಗೆ ಎಡೆ ಅರ್ಪಿಸುವಾಗ ಸಾತ್ವಿಕ ಆಹಾರವನ್ನು ನೈವೇದ್ಯ ಮಾಡಿದರೆ,
- ತಾಮಸ ಆಹಾರ(ಮಾಂಸಹಾರ)-ಮಾಂಸಹಾರಿಗಳು ಯಾವುದಾದರೊಂದು ಪ್ರಾಣಿಯನ್ನು ಕೊಂದು ಅಡುಗೆ ತಯಾರಿಸಿ ಅದನ್ನೇ ಎಡೆ ರೂಪದಲ್ಲಿ ದೇವರಿಗೆ ಅರ್ಪಿಸುವುದು ವಾಡಿಕೆ. ಅಂತೆಯೇ ಆದಿಯಿಂದಲೂ ಮನುಷ್ಯ 'ನರಬಲಿ' ಕೊಡುವ ಪದ್ದತಿ ಯನ್ನು ರೂಢಿಸಿ ಕೊಂಡಿದ್ದಾನೆ. ಅವನ ದೃಷ್ಠಿಯಲ್ಲಿ ಹೆಣ್ಣು ಒಂದು ವಸ್ತು ಮಾತ್ರ. ಆಹಾರ ತಿನ್ನುವ ಖಾದ್ಯವಾದರೆ, 'ಹಾರ' ಎಂಬುದು 'ಬಲಿ'ಯ ಪರ್ಯಾಯ ಪದವೆನಿಸಿದೆ. ಹಾಗಾಗಿ ಕನ್ಯೆ, ಬಸುರಿ, ಬಾಣಂತಿ, ಮುತ್ತೈದೆ, ಮುಂತಾದ ಸ್ತ್ರೀರತ್ನಗಳು ಬರಡು ಭೂಮಿಗೆ, ಕೋಟೆ-ಕೊತ್ತಲಗಳಿಗೆ, ಮಳೆಗೆ, ನಿಧಿಗೆ, ಮಾಟಮಂತ್ರಗಳಿಗೆ ಮತ್ತು ಕೆರೆಗೆ ಆಹುತಿಯಾದ ನಿದರ್ಶನಗಳಿವೆ. ಆ ದಿಶೆಯಲ್ಲಿ ಒಡ್ಡರಬೊಯಿ, ಹುಳಿಯಾರು ಕೆಂಚಮ್ಮ, ಕೆರೆ ಹೊನ್ನಮ್ಮ, ಕೆರೆಗೆ ಹಾರದ ಭಾಗೀರಥಿ ಪ್ರಮುಖವಾಗು ತ್ತಾರೆ.
ಕೆರೆಗೆಹಾರ ಕಥನಗೀತೆ
[ಬದಲಾಯಿಸಿ]
ಕಲ್ಲನಕೇರಿ ಮಲ್ಲನ ಗೌಡ ಕೆರೆಯೊಂದ ಕಟ್ಟಿಸ್ಯಾನು,
ಕೆರೆಯೊಂದ ಕಟ್ಟಿಸ್ಯಾನು ಸೆರೆಮುಕ್ಕ ನೀರಿಲ್ಲ,
ಸೆರೆಮುಕ್ಕ ನೀರಿಲ್ಲ ಹೊತ್ತಿಗಿ ತೆಗೆಸ್ಯಾರು,
ಹೊತ್ತಿಗಿ ತೆಗೆಸ್ಯಾರು ಜೋಯಿಸನ ಕೇಳ್ಯಾರು,
'ದೇವ್ರಲ್ಲ ದಿಂಡ್ರಲ್ಲ ದೆವ್ವಲ್ಲ ಭೂತಲ್ಲ',
ಹಿರಿಸೊಸಿ ಮಲ್ಲವ್ವನ ಹಾರವ ಕೊಡಬೇಕು,
ಹಾರವ ಕೊಟ್ಟರ ನೀರು ಬೀಳೋದಂದ್ರು,
"ಹಿರಿಸೊಸಿನ ಕೊಟ್ಟರೆ ಹಿರಿತನಕೆ ಯಾರಿಲ್ಲ",
ಕಡೆ ಸೊಸಿ ಭಾಗೀರತಿನ್ನ ಹಾರವ ಕೊಡಬೇಕು,
ಹಾರವ ಕೊಡಬೇಕಂತ ಮಾತಾತು ಮನೆಯಾಗ,
ಸಣ್ಣಸೊಸಿ ಭಾಗೀರತಿ ತವರುಮನಿಗೆ ಹೊಂಟಾಳು,
"ಅತ್ತೆವ್ವಾ ನಾ ನಮ್ಮ ತವರುಮನಿಗೆ ಹೋಗತೀನು"'
'ಸರ್ರನೆ ಹೋಗವ್ವಾ ಭರ್ರನೆ ಬಾರವ್ವಾ
ಸಣ್ಣಸೊಸಿ ಭಾಗೀರತಿ ತವರುಮನಿಗೆ ಹೋದಾಳು,
ಮನೆ ಮುಂದ ಹೋಗುದಕ ಅವರಪ್ಪ ಬಂದಾನು,
'ಎಂದಿಲ್ಲದ ಭಾಗೀರತಿ ಇಂದ್ಯಾಕ ಬಂದೆವ್ವಾ?,
ಬಾಡಿದ ಮಾರ್ಯಾಕ ಕಣ್ಣಾಗ ನೀರ್ಯಾಕ?',
"ನಮ್ಮಾವ ನಮ್ಮತ್ತೆ ಬ್ಯಾರೆ ಇಡ್ತಾರಂತೆ",
'ಇಟ್ಟರೆ ಇಡಲೇಳು ಹೊಲಮನಿ ಕೊಡತೆನು',
ಹೊಲಮನಿ ಒಯ್ದು ಹೊಳೆದಂಡ್ಯಾಗ್ಹಾಕಪ್ಪ,
ಅತ್ತತ್ತ ಹೋಗುತ್ತಲೇ ಅವರವ್ವ ಬಂದಳು
'ಎಂದಿಲ್ಲದ ಭಾಗೀರತಿ ಇಂದ್ಯಾಕಳುತಾ ಬಂದೆ?'
"ನಮ್ಮತ್ತೆ ನಮ್ಮಾವ ಬ್ಯಾರೆ ಇಡ್ತಾರಂತೆ"
ಇಟ್ಟರೆ ಇಡಲೇಳು ವಾಲಿಜೋಡು ಕೊಡತೇನೆ"
'ವಾಲಿಯ ಜೋಡೊಯ್ದು ಒಲಿಯಾಗ ಹಾಕವ್ವ'
ಮುಂದಕತ್ತ ಹೋಗುತಲೆ ಅವರಕ್ಕ ಬಂದಳು
ಅವರಕ್ಕ ಬಂದಾಳು ಭಾಗೀರತಿನ್ನ ಕೇಳ್ಯಾಳು
"ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ದುಕ್ಕ"
"ನಮ್ಮತ್ತೆ ನಮ್ಮಾವ ಬ್ಯಾರೆ ಇಡ್ತಾರಂತೆ"
'ಇಟ್ಟರೆ ಇಡಲೇಳ ಮಕ್ಕಳ ಜೋಡಿಗೆ ಕಳವತೇನೆ'
"ಮಕ್ಕಳಿದ್ದರೇನಕ್ಕ ದುಕ್ಕ ಕಳದಾವೇನ?"
ಸಣ್ಣಸೊಸಿ ಭಾಗೀರತಿ ತವರುಮನೆಯ ಬಿಟ್ಟು
ತವರುಮನೆಯ ಬಿಟ್ಟು ಗೆಣತಿ ಮನೆಗೆ ನಡೆದಳು
ತಲಬಾಗಿಲದಾಗ ಗೆಳತಿನ್ನ ಕಂಡಳು
"ಎಂದಿಲ್ಲದ ಭಾಗೀರತಿ ಇಂದ್ಯಾಕ ಈ ಅಳುವು?"
ಅಂಜಿ "ಹೇಳಲೆ ಗೆಳತಿ" ಅಳುಕಿ "ಹೇಳಲೆ ಗೆಳತಿ"
'ಅಂಜಬ್ಯಾಡ ಗೆಳತಿ ಅಳುಕಬ್ಯಾಡ ಗೆಳತಿ'
"ನಮ್ಮತ್ತೆ ನಮ್ಮಾವ ಕೆರೆಗ್ಹಾರ ಕೊಡತಾರಂತ"
'ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕ!'
ಸರ್ರನೆ ಹೋದಳು ಭರ್ರನೆ ಬಂದಳು.
ಬ್ಯಾಳಿಯ ಹಸಮಾಡ್ತ ಬಿಟ್ಟಳು ಕಣ್ಣೀರ
"ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು"
'ಬ್ಯಾಳ್ಯಾಗಿನ ಹಳ್ಳು ಬಂದು ಕಣ್ಣಾಗೆರಚಿದವು ಮಾವಾ'
ಅಕ್ಕಿಯ ಹಸಮಾಡ್ತ ಉಕ್ಕಾವು ಕಣ್ಣೀರು
"ಎಂದಿಲ್ಲದ ಭಾಗೀರತಿ ಇಂದ್ಯಾಕ ಕಣ್ಣೀರು"
'ಅಕ್ಯಾಗಿನ ಹಳ್ಳೊಂದು ಕಣ್ಣಾಗ ಬಿತ್ತತ್ತಿ'
ಉಕ್ಕುವ ನೀರಾಗ ಅಕ್ಕಿಯ ಸುರಿವ್ಯಾರ
ಹತ್ತು ಕೊಪ್ಪರಿಗೆ ನೀರು ಉಕ್ಕಿ ಮಳ್ಳತಿತ್ತು
"ನಿಂಗವ್ವ ಜಳಕ ಮಾಡ ನೀಲವ್ವ ಜಳಕ ಮಾಡ "
ನಿಂಗವ್ವ 'ನಾವೂಲ್ಲೆ' ನೀಲವ್ವ 'ನಾವೂಲ್ಲೆ'
"ಗಂಗವ್ವ ಜಳಕ ಮಾಡ ಗವರವ್ವ ಜಳಕ ಮಾಡ "
ಗಂಗವ್ವ 'ನಾವೂಲ್ಲೆ' ಗವರವ್ವ 'ನಾವೂಲ್ಲೆ'
'ಸಣ್ಣಸೊಸಿ ಬಾಗವ್ವ ನೀನರೆ ಜಳಕ ಮಾಡ '
ಸಣ್ಣಸೊಸಿ ಭಾಗೀರತಿ ಜಳಕನ ಮಾಡ್ಯಾಳು
ಜಳಕನ ಮಾಡ್ಯಾಳು ಬಂಗಾರಬುಟ್ಟಿ ತುಂಬ್ಯಾಳು
ಬಂಗಾರಬುಟ್ಟಿ ತುಂಬ್ಯಾಳು ಸಿಂಗಾರಸಿಂಬಿ ಮಾಡ್ಯಾಳು
ಸಿಂಗಾರಸಿಂಬಿ ಮಾಡ್ಯಾಳು ಮುಂದ ಮುಂದ ಹೊಂಟಾಳು
ಮುಂದ ಮುಂದ ಭಾಗೀರತಿ ಹಿಂದಿಂದ ಎಲ್ಲಾರೂ
ಗಂಗಿ ಪೂಜೆ ಮಾಡ್ಯಾರ ಬೆಲಪತ್ರಿ ಏರಿಸ್ಯಾರ
ಬೆಲಪತ್ರಿ ಏರಿಸ್ಯಾರ ಈಬತ್ತೀ ಧರಿಸ್ಯಾರ
ಸೀರಿ ಕುಬುಸ ಏರಿಸ್ಯಾರ ಹೂವಿನ ದಂಡಿ ಮುಡಿಸ್ಯಾರ
ಹೂವಿನ ದಂಡಿ ಮುಡಿಸ್ಯಾರ ನೇವದಿ ಮಾಡ್ಯಾರ
ನೇವದಿ ಮಾಡ್ಯಾರ ಎಲ್ಲಾರು ಉಂಡಾರು
ಎಲ್ಲಾರು ಉಂಡಾರು ಉಳಿದದ್ದು ತುಂಬ್ಯಾರು
ಉಳಿದದ್ದು ತುಂಬ್ಯಾರು ಬಂಗಾರಬುಟ್ಟಿ ಹೊತ್ತಾರು
ಬುಟ್ಟಿ ಹೊತ್ತು ನಡೆದಾರು ಬಂಗಾರ ಬಟ್ಲ ಮರತರು
"ಗಂಗವ್ವ ನೀ ಹೋಗ! ಗವರವ್ವ ನೀ ಹೋಗ"
ಗಂಗವ್ವ 'ನಾವೂಲ್ಲೆ' ಗವರವ್ವ 'ನಾವೂಲ್ಲೆ'
ನಿಂಗವ್ವ ನೀ ಹೋಗ ನೀಲವ್ವ ನೀ ಹೋಗ
ನಿಂಗವ್ವ 'ನಾವೂಲ್ಲೆ' ನೀಲವ್ವ 'ನಾವೂಲ್ಲೆ'
'ಸಣ್ಣಸೊಸಿ ಭಾಗೀರತಿ ನೀ ತರ ಹೋಗವ್ವ'
ಸಣ್ಣ ಸೊಸಿ ಭಾಗೀರತಿ ಬಿರಿ ಬಿರಿ ನಡೆದಾಳು
ಬಿರಿ ಬಿರಿ ಹೋದಾಳು ಬಂಗಾರ ಬಟ್ಲ ತೊಗೊಂಡಳು
ಒಂದು ಮೆಟ್ಲೇರುದಕ ಪಾದಕೆ ಬಂದಳು ಗಂಗಿ
ಎರಡು ಮೆಟ್ಲೇರುದಕ ಪಾದ ಮುಣಿಗಿಸ್ಯಾಳು ಗಂಗಿ
ಮೂರು ಮೆಟ್ಲೇರುದಕ ವೊಣಕಾಲಿಗೆ ಬಂದಾಳು ಗಂಗಿ
ನಾಕು ಮೆಟ್ಲೇರುದಕ ನಡುಮಟ್ಟ ಬಂದಳು ಗಂಗಿ
ಐದು ಮೆಟ್ಲೇರುದಕ ತುಂಬಿ ಹರಿದಾಳು ಗಂಗಿ
ಸಣ್ಣ ಸೊಸಿ ಭಾಗೀರತಿ ಕೆರೆಗ್ಹಾರವಾದಳು
ಗಂಡ ಮಾದೇವರಾಯ ದಂಡಿನಾಗೈದಾನು
ದಂಡಿನಾಗೈದಾನು ಕಂಡನು ಕೆಟ್ಟ ಕನಸ
ಸೆಲ್ಯ ಸುಟ್ಟಾಂಗಾತು ಕೋಲು ಮುರಿದಂಗಾತು
ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗಾತು
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಒತ್ತಾರ ಬಂದಾನ ಮನೆಗೆ
ಬಂದ ಮಾದೇವನ ತಂದೆತಾಯಿ ನೋಡಿದರು
"ಗಂಗವ್ವ ನೀರು ಕೊಡ ಗವರವ್ವ ನೀರು ಕೊಡ
"ಗಂಗವ್ವ ನೀರು ಕೊಡುದ್ಯಾಕ ಗವರವ್ವ ನೀರು ಕೊಡುದ್ಯಾಕ"
'ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳವ್ವ?'
"ನಿನ ಮಡದಿ ಭಾಗೀರತಿ ತವರಿಗೆ ಹೋಗ್ಯಾಳಪ್ಪ"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಹೊಂಟಾನತ್ತೆ ಮನೆಗೆ
ಬಂದಿರು ಅಳಿಯನ ನೋಡಿ ಅಂದಳು ಅತ್ತೇವ್ವ
"ನಿಂಬೆವ್ವ ನೀರ್ ಕೊಡ ನೀಲವ್ವ ನೀರ್ ಕೊಡ!"
"ನಿಂಬೆವ್ವ ನೀರ್ ಕೊಡುದ್ಯಾಕ ನೀಲವ್ವ ನೀರ್ ಕೊಡುದ್ಯಾಕ?"
ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳತ್ತಿ?
"ನಿನ ಮಡದಿ ಭಾಗೀರತಿ ಗೆಣತಿ ಮನೆಗೆ ಹೋಗ್ಯಾಳಪ್ಪ!"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಗೆಣತಿ ಮನೆಗೆ ಸ್ವಾರಿ
ಬಂದಿರು ಮಾದೇವನ ಕಂಡಾಳು ಗೆಣತೆವ್ವ
"ಬಾಳವ್ವ ನೀರ್ ಕೊಡ ಬಸವ್ವ ನೀರ್ ಕೊಡ"
"ಬಾಳವ್ವ ನೀರ್ ಕೊಡುದ್ಯಾಕ ಬಸವ್ವ ನೀರ್ ಕೊಡುದ್ಯಾಕ!
'ನನ ಮಡದಿ ಭಾಗೀರತಿ ಎಲ್ಲಿಗ್ಹೋಗ್ಯಾಳಕ್ಕ?"
"ನಿನ ಮಡದಿ ಭಾಗೀರತಿದು ಏನು ಹೇಳಲಿ ಸೋರಿ
ನಿಮ್ಮಪ್ಪ ನಿಮ್ಮವ್ವ ಕೆರೆಗ್ಹಾರ ಕೊಟ್ಟರಂತ"
ಗಂಡ ಮಾದೇವರಾಯ ಹತ್ತಿದ ಬತ್ತಲೆಗುದುರಿ
ಹತ್ತಿದ ಬತ್ತಲೆಗುದುರಿ ಹೊಂಟಾನು ಹೌಹಾರಿ;
ಕೆರೆಯ ದಂಡೆಗೆ ಬಂದು ಕಣ್ಣೀರು ಇಟ್ಟಾನು
ಕಣ್ಣೀರು ಇಟ್ಟಾನು ನಿಟ್ಟುಸಿರು ಬಿಟ್ಟಾನು;
"ಸಾವಿರ ವರಹ ಕೊಟ್ಟರೂ ಸಿಗಲಾರದ ಸತಿ ನೀನು
ಸಿಗಲಾರದ ಸತಿ ನೀನು ನನ ಬಿಟ್ಟು ಎಲ್ಲಿ ಹೋದೆ?
ಮುನ್ನೂರು ವರಹ ಕೊಟ್ಟು ಮುತ್ತಿನೋಲೆ ಮಾಡಿಸಿದ್ದೆ
ಮುತ್ತಿನೋಲೆ ಇಟ್ಟುಗೊಳ್ಳೊ ಮುತ್ತೈದೆ ಎಲ್ಲಿಗ್ಹೋದೆ"
ಇಟ್ಟು ಮಾತಾಡಿ ಮಾದೇವ ಬಿಟ್ಟಾನು ಕಣ್ಣೀರು
ಬಿಟ್ಟಾನು ಕಣ್ಣೀರು ಹಾರಿದ ಕೆರೆ ನೀರಾಗ.
ಗೀತೆಯ ಕೇಂದ್ರಬಿಂದು
[ಬದಲಾಯಿಸಿ]- ಕಲ್ಲನಕೇರಿ ಮಲ್ಲನಗೌಡನ ಮನೆ ಕಥನಗೀತೆಯ ಕೇಂದ್ರ ಬಿಂದು. ಹೇಗೆಂದರೆ- ಮಲ್ಲನಗೌಡ ಕಲ್ಲನಕೇರಿ ಗ್ರಾಮದ ಮುಖಂಡ. ಆತ ತನ್ನ ಊರಿನ ಜನರ ಹಿತಕ್ಕಾಗಿ ಕೆರೆಯೊಂದನ್ನು ಕಟ್ಟಿಸುವನು. ಆದರೆ ಆ ಕೆರೆಯಲ್ಲಿ ಬೊಗಸೆಯಷ್ಟು ನೀರು ಕೂಡ ಬರುವುದಿಲ್ಲ. ಇದರಿಂದ ವ್ಯಾಕುಲ ಗೊಂಡ ಗೌಡ ವಾಸ್ತವಾಂಶ ತಿಳಿದುಕೊಳ್ಳಲು ಜ್ಯೋತಿಷಿ ಬಳಿ ಶಾಸ್ತ್ರ ಕೇಳುತ್ತಾರೆ.
- ಆ ಜ್ಯೋತಿಷಿ ನಿಮ್ಮ ಮನೆತನದ ಹಿರಿಯಸೊಸೆ ಮಲ್ಲವ್ವನ ಕೆರೆಗೆ 'ಹಾರ'ಕೊಟ್ಟರೆ ಕೆರೆಯಲ್ಲಿ ನೀರು ಬಂದೇ ಬರುತ್ತದೆಂದು ಹೇಳಿದಾಗ, ಧೃತಿಗೆಟ್ಟ ಗೌಡ ತನ್ನ ಹೆಂಡತಿಯೊಡನೆ ಈ ವಿಷಯದ ಬಗ್ಗೆ ಸಮಾಲೋಚನೆ ನಡೆಸುವನು. ಹಿರಿಸೊಸೆ ಕೊಟ್ಟರೆ ಹಿರಿತನಕೆ ಯಾರಿಲ್ಲ ಕಿರಿಸೊಸೆ ಭಾಗೀರತಿಯನ್ನು ಕೆರೆಗೆ ಹಾರ ಕೊಡಲು ಅವರೆಲ್ಲ ನಿರ್ಧರಿಸುತ್ತಾರೆ. ಆದರೆ ಭಾಗಿರತಿಯನ್ನು ಈ ಬಗ್ಗೆ ಒಂದು ಮಾತು ಯಾರು ಕೇಳುವುದಿಲ್ಲ.
ಕಥನಗೀತೆಯ ಒಳನೋಟ
[ಬದಲಾಯಿಸಿ]ಭಾಗೀರಥಿಯ ಆಂತರ್ಯ ತೊಳಲಾಟ
[ಬದಲಾಯಿಸಿ]- ಇಲ್ಲಿ ಭಾಗೀರಥಿ ಅತ್ತೆ-ಮಾವನ ಮಾತನ್ನು ಮೀರದ ಸೊಸೆ. ಭಾಗೀರಥಿಗೂ ಮನೆಯಲ್ಲಿ ನಡೆವ ಮಾತುಕಥೆ ಗೊತ್ತಾದರೂ ಏನೊಂದು ಸೊಲ್ಲೆತ್ತದೆ, ಪ್ರತಿಭಟನೆಯನ್ನು ಮಾಡದೆ "ಶೀತಲ ಪ್ರವೃತ್ತಿ"ಯನ್ನು ಕಡೆವರೆಗೂ ಕಾಯ್ದು ಕೊಳ್ಳುತ್ತಾಳೆ. ಇಲ್ಲಿ ಆಕೆಯ ಮಾನಸಿಕ ವೇದನೆ, ಮನೋ ತಾಕಲಾಟ, ತಲ್ಲಣದ ತೀವ್ರತೆ ತವರಿಗೆ ಹೋದಾಗ, ಗೆಳತಿಯನ್ನು ಕಾಣಲು ಹೋದಾಗ ವ್ಯಕ್ತವಾಗುತ್ತದೆ. ಆಕೆಯ 'ಅಳು' ಬಲಿಯಾಗಲು ಇಷ್ಟವಿಲ್ಲದಿರುವುದನ್ನು ಸೂಚಿಸುತ್ತದೆ.
- "ಉಳಿದೇನು!ಉಳಿಯ ಬಹುದೇನೊ" ಎಂಬ ಆಸೆ ಕಡೆಯವರೆಗೂ ಇರುತ್ತದೆ. ಗೆಳತಿಯು ಕೂಡ ಪರಿಸ್ಥಿತಿ ಕೈಗೊಂಬೆಯಾದುದರಿಂದ ಭಾಗೀರಥಿಯನ್ನೂ ಸಾವಿನ ದವಡೆಯಿಂದ ಪಾರುಮಾಡಲು ಸಾಧ್ಯವಾಗುವುದಿಲ್ಲ. ತನ್ನ ಅಸಾಹಾಯಕತೆಯನ್ನು ನೆನೆವಾಗ ಅವಳಿಗೆ ದು:ಖ ಉಮ್ಮಳಿಸಿ ಬರುತ್ತದೆ. ಸಾಯುವ ದಿನವೂ ಕೂಡ ಭಾಗೀರಥಿ ಎಂದಿನಂತೆ ಮನೆಕೆಲಸದಲ್ಲಿ ತನ್ನನ್ನೂ ತೊಡಗಿಸಿಕೊಳ್ಳುತ್ತಾಳೆ.
- ಭಾಗೀರಥಿಯ ಮನೋವೇದನೆ ಆಕೆಯ ಅತ್ತೆ-ಮಾವನಿಗೆ ಅರಿವಾದರೂ,"ಸ್ಥಿತಪ್ರಜ್ಞೆ"ಕಾಯ್ದು ಕೊಳ್ಳುತ್ತಾರೆ. ಗೌಡನ ಮನೆಯವರು ಆರ್ಥಿಕವಾಗಿ ಬಲಾಢ್ಯರಾಗಿದ್ದರು ಎಂಬುದನ್ನು 'ಬಂಗಾರದ ಬುಟ್ಟಿ, ಸಿಂಗಾರದ ಸಿಂಬಿ' ಸೂಚಿಸುತ್ತವೆ. ವಿನಯ, ವಿಧೇಯತೆ, ಸಂಸ್ಕಾರ, ಸಂಸ್ಕೃತಿಯ ನಡವಳಿಕೆಗಳೇ ಭಾಗೀರಥಿಗೆ ಮುಳುವಾಗುತ್ತವೆ. ಗಂಗವ್ವನ ಪೂಜೆ "ಮಹಾತ್ಯಾಗ"ವೂಂದರ ಮುನ್ಸೂಚನೆ.
- 'ಬಿರಿ ಬಿರನೆ' ಎಂಬ ಪದ ಭಾಗೀರಥಿಯ ಮನದ ಭೀತಿ, ತಳಮಳ, ಆತಂಕ, ಬದುಕಬೇಕೆಂಬ ಆತುರತೆಯನ್ನು ತೋರಿಸುತ್ತದೆ. ಸಾಮಾನ್ಯವಾಗಿ ಮೆಟ್ಟಿಲೆನ್ನುವುದು ಅಭಿವೃದ್ಧಿಯ, ಬೆಳವಣಿಗೆಯ ದ್ಯೋತಕ. ಆದರಿಲ್ಲಿ (ಕೆರೆಯ)ಮೆಟ್ಟಿಲುಗಳು ವ್ಯಕ್ತಿಯೊಬ್ಬಳ ಸರ್ವನಾಶಕ್ಕೆ ಕಾರಣವಾಗುತ್ತವೆ. ಭಾಗೀರಥಿ ತನ್ನ ಅಸ್ತಿತ್ವದ ಉಳಿವಿಗಾಗಿ ಕೊನೆಯ ತನಕ ಹೋರಾಡಿ ವಿಫಲಳಾಗುತ್ತಾಳೆ.
- ಭಾಗೀರಥಿ ಸಾವನ್ನು ಸ್ವಾಗತಿಸುವಳಾಗಿದ್ದರೆ, ಮೆಟ್ಟಿಲನ್ನು ಹತ್ತುವ ಪ್ರಮೇಯವೆ ಬರುತ್ತಿರಲಿಲ್ಲ. ಕೆರೆಯಲ್ಲಿ ನೀರು ಉಕ್ಕಿ ಬಂದ ಕೂಡಲೆ ತಟಸ್ಥವಾಗಿ ನಿಂತು ಬಿಡುತ್ತಿದ್ದಳು. ಇಲ್ಲಿ ಹಾಗಾಗ ದಿರುವುದೇ ಮನೋಸಂಘರ್ಷಕ್ಕೆ ಕಾರಣವಾಗುತ್ತದೆ. ಆವಳನ್ನು ಆಕ್ರಮಿಸಲು ಬರುವ ಗಂಗೆ, ಅದರಿಂದ ತಪ್ಪಿಸಿಕೊಳ್ಳಲು ಹೋರಾಡುವ ಭಾಗೀರಥಿಯ ರೀತಿ ಮನವನ್ನು ಆದ್ರವಾಗಿ ಸುತ್ತದೆ. ಬಲಿ ಸಮರ್ಪಣೆ ಎಷ್ಟು ಮೃದುವಾಗಿ ನಡೆಯುತ್ತದೆಯೊ, ಬಲಿ ಸ್ವೀಕಾರವೂ ಅಷ್ಟೇ ನವಿರಾಗಿ ನಡೆಯುತ್ತದೆ.
ಸಾವಿನ ನಿರ್ಣಾಯಕ ಸ್ಥಳ
[ಬದಲಾಯಿಸಿ]- ಗೆಳತಿಯ ಮನೆ ಭಾಗೀರಥಿಯ ಸಾವಿನ ನಿರ್ಣಾಯಕ ಸ್ಥಳವಾಗುತ್ತದೆ. ಗೆಳತಿ ಮೊದಲಿನಿಂದಲೂ ಭಾಗೀರಥಿಯ ಅಂತರಂಗವನ್ನು ಅರಿತಿದ್ದರೂ, ಆ ಕಾಲದಲ್ಲಿ ಭಾಗೀರಥಿ ಈ ಕಾರ್ಯವನ್ನು ನಿರಾಕರಿಸಿದ್ದರೆ ಆಗಬಹುದಾಗಿದ್ದ ಕೆಟ್ಟ ಪರಿಣಾಮವನ್ನು ಬಹುಶ: ಊಹಿಸಿರಬಹುದು. ಹಾಗಾಗಿ ಅವಳು "ಕೊಟ್ಟರೆ ಕೊಡಲೇಳು ಇಟ್ಟಾಂಗ ಇರಬೇಕ" ಎಂಬ ಹತಾಶೆ ಯ ಮಾತುಗಳನ್ನಾಡುವಳು.
- ಹಿರಿಯರ ಮಾತಿಗೆ ಪ್ರತಿಯಾಡದ ಸಮಾಜ ಅಂದಿದ್ದುದರಿಂದ, ಇಲ್ಲವೆ ಊರಿನ ಹಿತಕ್ಕಾಗಿ, ಲೋಕ ಕಲ್ಯಾಣಕ್ಕಾಗಿ ಭಾಗೀರಥಿಯ ಬಲಿ ಅನಿವಾರ್ಯ ಎಂಬುದನ್ನು ಗೆಳತಿ ಒಪ್ಪಿಕೊಂಡು ಆ ಮಾತನ್ನು ಹೇಳಿರಬಹುದು. ಭಾಗೀರಥಿಯು ತನ್ನ ಮನಸ್ಸನ್ನು ಕಲ್ಲು ಮಾಡಿಕೊಂಡು ಸಾಯಲು ಇಷ್ಟವಿಲ್ಲದಿದ್ದರು, ಬೇರೆ ದಾರಿ ಕಾಣದೆ ಸಾವಿಗೆ ಸಿದ್ದಳಾಗುತ್ತಾಳೆ.
ಅಂತಿಮ ಘಟ್ಟ
[ಬದಲಾಯಿಸಿ]ಕಥನಗೀತೆಯ ಅಂತಿಮ ಘಟ್ಟ ಕೆರೆಯ ಆವರಣ. ಬಯಲಿನಂತೆ ಒಣಗಿ ಬರಡಾಗಿದ್ದ ಕೆರೆಯ ಅಂಗಳದೊಳಗೆ ಗಂಗೆಯ ಪೂಜೆಯ ವಿಧಿ-ವಿಧಾನಗಳು. ಬಾಗಿನ ಕೊಡುವ ಕಾರ್ಯ ಕ್ರಮ ನಡೆಯುತ್ತದೆ. ನಂತರ ನೈವೇದ್ಯ, ಪ್ರಸಾದ ಸ್ವೀಕರಣೆಯಾಗುತ್ತದೆ. ಊಟದ ನಂತರ ಉದ್ದೇಶ ಪೂರ್ವಕವಾಗಿ ಬಂಗಾರದ ಬಟ್ಟಲನ್ನು ಮರೆತು ಬರುವರು. ಬಂಗಾರದ ಬಟ್ಟಲು 'ಜೀವನ ಮೌಲ್ಯವನ್ನು' ತಿಳಿಸಿ ಕೊಡುತ್ತದೆ. ಭಾಗೀರಥಿ ಬಂಗಾರದ ಬಟ್ಟಲನ್ನು ಕೈಗೆ ತೆಗೆದು ಕೊಂಡು ಹೊರ ಬರುವ ಸಂದರ್ಭದಲ್ಲಿ ಗಂಗೆ ಅವಿರ್ಭವಿಸಿ ಬಂಗಾರದಂತ ಭಾಗೀರತಿ ಯನ್ನು ನವಿರಾಗಿ ತನ್ನೊಳಗೆ ಸೆಳೆದೊಯ್ಯುತ್ತಾಳೆ.
ಮಾದೇವರಾಯ
[ಬದಲಾಯಿಸಿ]- ಈ ಕಥನಗೀತೆ ಭಾಗೀರಥಿಯ ಸಾವಿನೊಂದಿಗೆ ಮುಕ್ತಾಯವಾಗುವುದಿಲ್ಲ. ಮತ್ತೆ ಸ್ವಲ್ಪ ಮುಂದುವರೆಯುವುದು. ಭಾಗೀರಥಿಯು ಕೆರೆಗೆ ಹಾರವಾಗುವ ಸಂದರ್ಭದಲ್ಲಿ ಆಕೆಯ ಗಂಡ ಸೈನ್ಯದಲ್ಲಿರುತ್ತಾನೆ. ದಂಡಿನಲ್ಲಿರುವ ಆತನಿಗೆ ಭಾಗೀರಥಿ ಕೆರೆಗೆ ಹಾರವಾದ ಆ ರಾತ್ರಿ ಒಂದು ದುಸ್ವಪ್ನ ಬೀಳುತ್ತದೆ-"ಸೆಲ್ಯ ಸುಟ್ಟಂಗಾಯ್ತು , ಕೋಲು ಮುರಿದಂಗ್ಹಾತು, ಕಟ್ಟಿಸಿದ ಮಾಲೆಲ್ಲ ತಟ್ಟನೆ ಬಿದ್ದಂಗ್ಹಾಗಿ "ಆತ ಸಹಜವಾಗಿ ವ್ಯಾಕುಲಗೊಳ್ಳುತ್ತಾನೆ.
- ಕನಸಿನ ಈ ಮೂರು ಆಶಯಗಳು ಆತನ ಬದುಕಿನಲ್ಲಾದ ಅನಾಹುತದ ಅಂತರಾರ್ಥವನ್ನು ಅರ್ಥಪೂರ್ಣವಾಗಿ ವ್ಯಂಜಿಸಿವೆ. ಕನಸಿನಿಂದ ದುಗುಡಗೊಂಡ ಮಾದೇವರಾಯ ಆತಂಕದಿಂದ 'ಬತ್ತಲುಗುದುರಿ' ಹತ್ತಿ ತನ್ನ ಮನೆಗೆ ಧಾವಿಸಿ ಬರುವನು. ಇಲ್ಲಿ 'ಬತ್ತಲುಗುದುರೆ' ಎಂಬುದು ಅವನ ಮನೋವೇಗ, ಮಾನಸಿಕ ಉದ್ವೇಗ, ಜೀವನದ ಬಗೆಗಿನ ತಲ್ಲಣವನ್ನು ತಿಳಿಸುತ್ತದೆ. ತಾಯಿ ಮನೆಯಲ್ಲಿ, ತನ್ನ ಅತ್ತೆ ಮನೆಯಲ್ಲಿ ಮಡದಿ ಭಾಗೀರಥಿಯನ್ನು ಕಾಣದೆ ವಿಹ್ವಲಕ್ಕೆ ಒಳಗಾಗುತ್ತಾನೆ.
- ಪಟ್ಟು ಬಿಡದ ಮಾದೇವರಾಯ ಬತ್ತಲುಗುದುರೆ ಹತ್ತಿ ಗೆಳತಿ ಮನೆಗೆ ಧಾವಿಸುವನು. ಅಲ್ಲಿ ಗೆಳತಿ ಸತ್ಯ ಸಂಗತಿಯನ್ನು ಮಾದೇವರಾಯನಿಗೆ ಅರುಹುವಳು. ಇದರಿಂದ ಹತಾಶಗೊಂಡ ಮಾದೇವರಾಯ ಕಡು ದು:ಖಿತನಾಗಿ, ನಂಜನ್ನು ಕುಡಿದ ನಂಜುಂಡನಂತೆ ಸ್ಥಿತ ಪ್ರಜ್ಞನಾಗಿ, ಇಡೀ ವ್ಯವಸ್ಥೆಯ ಬಗ್ಗೆ ಮೌನ ತಾಳುತ್ತಾನೆ. ಯಾರ ಬಳಿಯು ಹೋಗದೆ, ಯಾರನ್ನು ಏನೂ ಪ್ರಶ್ನಿಸದೆ ಅಂತರ್ಮುಖಿಯಾಗುತ್ತಾನೆ.
- ಕೆರೆಯ ದಂಡೆಯ ಬಳಿಗೆ ಬಂದು ಸತ್ತ ಮಡದಿಯ ಸ್ಮರಿಸಿ ಕೊಳ್ಳುತ್ತಾ, ಪ್ರಶಂಸಿಸುತ್ತಾ ಮನಸಾರೆ ಅಳುತ್ತಾನೆ. ಒಂದು ಸುಂದರ ದಾಂಪತ್ಯದ ಬಾಂಧವ್ಯವನ್ನು ಮಾದೇವರಾಯ ಮಾತುಗಳು ವ್ಯಕ್ತ ಪಡಿಸುತ್ತವೆ. 'ನನ ಬಿಟ್ಟು ಎಲ್ಲಿಗ್ಹೋದೆ ?' ಎಂಬ ಮಾತಿನ ದಾರುಣತೆ ಮುಗಿಲು ಮುಟ್ಟಿ, ಅವನ "ಸತಿಭಕ್ತಿ"ಯನ್ನು ಜಗಜ್ಜಾಹೀರು ಮಾಡುತ್ತದೆ. ಸಾವಿನಲ್ಲಿ ಹೆಂಡತಿಯನ್ನು ಕೂಡುತ್ತಾನೆ. ಮಾದೇವರಾಯನ ನಿಷ್ಕಲ್ಮಶ ಪ್ರೀತಿ ಭಾಗೀರತಿಗೆ ಸಂದ ಅತ್ಯಂತ ಮೇರು ಗೌರವ.
ಮೌಢ್ಯ, ಸ್ಥಿತ್ಯಂತರ
[ಬದಲಾಯಿಸಿ]- ಕೆರೆಗೆ ಹಾರ ಕಥನಗೀತೆಯ ಸನ್ನಿವೇಶ, ಸಂದರ್ಭಗಳು ಓದುಗರನ್ನು ಆಕರ್ಷಿಸಿ, ಪ್ರತಿ ದೃಶ್ಯವೂ ಕಣ್ಣಿಗೆ ಕಟ್ಟುವಂತಾಗಿ ಮನವನ್ನು ತೇವಗೊಳಿಸುತ್ತವೆ. ಇಲ್ಲಿ ಭಾಗೀರಥಿ ಭೂಮಿ ತೂಕದ ಹೆಣ್ಣಾಗಿ, ಕ್ಷಮಯಾ ಧರಿತ್ರಿಯಾಗಿ, ಆದರ್ಶನಾರಿಯಂತೆ ಪೂಜನೀಯಳಾಗುವಳು. ಅವಳ ಉದಾತ್ತ ಮನೋದಾರ್ಢ್ಯ, ಮಾದೇವರಾಯನ ಅಪರಿಮಿತ ಪ್ರೇಮ ಸ್ಮರಣೀಯ.
- ಸಾಧಾರಣವಾಗಿ ಜನಪದ ಗೀತೆಗಳಲ್ಲಿ ಹಿರಿತನ, ವಿಧಿ-ವಿಧಾನ, ಸಂಸ್ಕಾರ-ಸಂಸ್ಕೃತಿ, ಸಂಪ್ರದಾಯ, ಅನುಷ್ಠಾನ, ಆಚರಣೆ, ಕೌಟುಂಬಿಕ ಹಿನ್ನೆಲೆ, ನಂಬಿಕೆ, ಮೂಢನಂಬಿಕೆ, ಕೆಲವು ಸಂಖ್ಯೆಗಳಿರುತ್ತವೆ. ಅವುಗಳಲ್ಲಿ ಹೆಚ್ಚಾಗಿ ಎರಡು, ಮೂರು, ಐದು, ಏಳು ಸಂಖ್ಯೆಗಳು ಹೆಚ್ಚಾಗಿ ಬಳಸಲ್ಪಡುತ್ತವೆ. ಈ ಗೀತೆಯಲ್ಲೂ ಅಂತಹುದನ್ನು ಗುರ್ತಿಸಬಹುದಾಗಿದೆ.
- ಎರಡು ನಂಬಿಕೆ- ಜ್ಯೋತಿಷ್ಯ /ದುಸ್ವಪ್ನ
- ಎರಡು ಪದ್ದತಿ-ಆಹಾರ(ಭಾಗೀರಥಿ)/ಆತ್ಮಬಲಿ(ಮಾದೇವರಾಯ)
- ಎರಡು ಬಾರಿ ಕೆರೆಯ ಪ್ರವೇಶ-ಪೂಜಾ ಸಂಧರ್ಭ/ಬಟ್ಟಲು ತರುವ ಸಮಯ
- ಎರಡು ಸಾವು- ಒಂದೇ ಕೆರೆಯಲ್ಲಿ
- ಮೂರು ಮನೆತನ/ಮನೆ-ಗಂಡನ ಮನೆ, ತೌರುಮನೆ, ಗೆಳತಿಮನೆ.
ಪರಿಸಮಾಪ್ತಿ
[ಬದಲಾಯಿಸಿ]- ಈ ಸಮಾಜ ವ್ಯವಸ್ಥೆಯಲ್ಲಿ ಹೆಣ್ಣು ಕೇವಲ ಒಂದು ಪರಿಕರವೆಂದು ಪರಿಗಣಿಸಲ್ಪಟ್ಟಿದ್ದಾಳೆ. "ಅತ್ತೆ-ಮಾವರಿಗಂಜುವ, ಸುತ್ತೇಳು ನೆರೆಗಂಜುವ" ಹೆಣ್ಣು ಹುಟ್ಟಿದ ಮನೆಗೂ, ಮೆಟ್ಟಿದ ಮನೆಗೂ ಹೆಸರನ್ನು ತರುವ ನಿಟ್ಟಿನಲ್ಲಿ ಎಷ್ಟೋ ಸಲ ತನ್ನ ಅಸ್ತಿತ್ವ ವನ್ನೇ ಕಳೆದುಕೊಳ್ಳುತ್ತಾಳೆ. ಆಡು, ಕುರಿ, ಕೋಳಿ,ಕೋಣಗಳನ್ನು ದೇವರಿಗೆ ಬಲಿಕೊಡುವಂತೆ, ಹೆಣ್ಣನ್ನು "ಬಲಿಪಶು" ವೆಂದು ಈ ಸಮಾಜ ಪರಿಗಣಿಸಿದೆ.
- ನಾಡಿನ, ಊರಿನ, ಗ್ರಾಮದ ಏಳಿಗೆಗೆ, ಅಭಿವೃದ್ಧಿಗೆ ಹೆಣ್ಣು ಬಲಿಯಾಗಿರುವಷ್ಟು ಬೇರಾವುದೇ ಪ್ರಾಣಿಗಳು ಪ್ರಾಯಶ: ಬಲಿಯಾಗಿಲ್ಲ. ಭಾಗೀರತಿಯ ಒಂಟೀಭಾವ, ಅನಾಥ ಪ್ರಜ್ಞೆ, ಪ್ರತಿಭಟಿಸಲಾರದ ಅಶಕ್ತತೆ, ಅಸಹಾಯಕತೆ, ಆತಂಕ, ನರಳಿಕೆ ಶೋಕ ನದಿಯಾಗಿ ಪ್ರವಹಿಸಿದೆ. ಜನಪದ ಸಮಾಜದ ಅಸಮಾನತೆ, ಅಪಮೌಲ್ಯಗೊಂಡ ಸಾಮಾಜಿಕ ಆಚರಣೆಯಲ್ಲಿನ ದೋಷ ಎದ್ದು ಕಾಣುತ್ತದೆ. ಈ ಘಟನೆ ತ್ಯಾಗ, ಬಲಿದಾನದ ಹೆಸರಿನಲ್ಲಿ ನಡೆದಿರುವ ಹೆಣ್ಣಿನ ಶೋಷಣೆಯಾಗಿದೆ.
ಆಕರ ಗಂಥಗಳು
[ಬದಲಾಯಿಸಿ]- ಕೆರೆಗೆ ಹಾರ- ಎಸ್.ಜಿ.ಸಿದ್ಧರಾಮಯ್ಯ
- ಕೆರೆಗೆ ಹಾರ- ಕನ್ನಡ ವಿಶ್ವಕೋಶ
- ಕೆರೆಗೆ ಹಾರ- ಕನ್ನಡ ವಿಷಯ ವಿಶ್ವಕೋಶ
- ಕೆರೆಗೆ ಹಾರ- ಭಾಗೀರಥಿಯ ಸಾವಿನ ಸುತ್ತ ಮುತ್ತ-ತಿ.ನಂ.ಶ್ರೀ
ಉಲ್ಲೇಖ
[ಬದಲಾಯಿಸಿ]
<Reference /> [೧] [೨] [೩] [೪] [೫] [೬] [೭]
- ↑ "ಆರ್ಕೈವ್ ನಕಲು". Archived from the original on 2016-03-06. Retrieved 2013-10-25.
- ↑ "ಆರ್ಕೈವ್ ನಕಲು". Archived from the original on 2016-06-29. Retrieved 2015-05-28.
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2015-05-28.
- ↑ "ಆರ್ಕೈವ್ ನಕಲು". Archived from the original on 2016-03-05. Retrieved 2015-05-28.
- ↑ http://www.bvkarantha.org/2014/03/blog-post_8.html
- ↑ http://kannadajaanapada.blogspot.in/2011/11/blog-post_16.html
- ↑ http://avadhimag.com/2012/06/30/%E0%B2%AC%E0%B2%BE%E0%B2%AF%E0%B2%BF-%E0%B2%87%E0%B2%A6%E0%B3%8D%E0%B2%A6%E0%B3%8B%E0%B2%B0%E0%B3%81-%E0%B2%9C%E0%B3%80%E0%B2%B5-%E0%B2%95%E0%B3%87%E0%B2%B3%E0%B3%8D%E0%B2%A4%E0%B2%BE%E0%B2%B0/