ಕುರುವೆಗಿಡ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಕುರುವೆಗಿಡ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
A. indicum
Binomial name
Abutilon indicum
Synonyms

Sida indica L.

ಕುರುವೆಗಿಡಉಷ್ಣ ಮತ್ತು ಉಪೋಷ್ಣವಲಯಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಒಂದು ಜಾತಿಯ ಸಸ್ಯ.

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಮಾಲ್ವೇಸೀ ಕುಟುಂಬಕ್ಕೆ ಸೇರಿದ ಅಬ್ಯುಟಿಲಾನ್ ಎಂಬ ಶಾಸ್ತ್ರೀಯ ಹೆಸರಿನ ಸಸ್ಯಜಾತಿ. ಇದರಲ್ಲಿ 120 ಪ್ರಭೇದಗಳೂ . ಆವಿಸೆನ್ನಿ, ಇಂಡಿಕಮ್ ಮತ್ತು ಏಷ್ಯಾಟಿಕಮ್ ಪ್ರಭೇದಗಳು ಭಾರತದಲ್ಲಿ ಕಾಣಬರುತ್ತವೆ. ಇಂಡಿಕಮ್ ಪ್ರಭೇದಕ್ಕೆ ಕನ್ನಡದಲ್ಲಿ ತುತ್ತಿ, ಶ್ರೀಮುದ್ರೆಗಿಡ ಮುಂತಾದ ಹೆಸರುಗಳೂ ಇವೆ.

ಲಕ್ಷಣಗಳು[ಬದಲಾಯಿಸಿ]

Abutilon indicum.

ಇಂಡಿಕಮ್ ಪ್ರಭೇದದ ಕುರುವೆಗಿಡ ಸುಮಾರು 4'-6' ಎತ್ತರಕ್ಕೆ ಬೆಳೆಯುವ ಪೊದೆ ಸಸ್ಯ. ಸಸ್ಯದ ಮೇಲೆಲ್ಲ ಸಣ್ಣ ಕೂದಲುಗಳಿವೆ. ಎಲೆಗಳು ಸರಳ ; ಪರ್ಯಾಯವಾಗಿ ಜೋಡಣೆಗೊಂಡಿವೆ. ಅವುಗಳ ಆಕಾರ ಹೃದಯದಂತೆ, ತೊಟ್ಟು ಉದ್ದ ಮತ್ತು ಅಂಚು ಗರಗಸದಂತೆ. ಹೂಗಳು ಒಂಟೊಂಟಿಯಾಗಿ ಎಲೆಗಳ ಕಂಕುಳಲ್ಲಿ ಮೂಡುತ್ತವೆ. ಅವುಗಳ ಬಣ್ಣ ಹಳದಿ ಅಥವಾ ಕಿತ್ತಳೆ. ಒಂದೊಂದು ಹೂವಿನಲ್ಲೂ ಬಿಡಿಯಾದ 5 ಪುಷ್ಪ ಪತ್ರಗಳೂ 5 ದಳಗಳೂ ಅಸಂಖ್ಯಾತ ಕೇಸರುಗಳೂ 5ರಿಂದ ಹಲವಾರು ಕಾರ್ಪೆಲುಗಳನ್ನೊಳಗೊಂಡ ಉಚ್ಚಸ್ಥಾನದ ಅಂಡಾಶಯವೂ ಇವೆ. ಕಾಯಿ ಒಣಗಿದಾಗ ಹಲವಾರು ವಿಭಾಗಗಳಾಗಿ ಒಡೆಯುತ್ತದೆ. ಇದಕ್ಕೆ ಕ್ಯಾರ್‍ಸೆರುಲಸ್ ಎಂಬ ಶಾಸ್ತ್ರೀಯ ಹೆಸರಿದೆ. ಈ ಸಸ್ಯದ ಎಲ್ಲ ಭಾಗಗಳಲ್ಲೂ ಲೋಳೆಯಂಥ ರಸ ಇದೆ.

ಉಪಯೋಗಗಳು[ಬದಲಾಯಿಸಿ]

ಕುರುವೆ ಗಿಡದ ಕಾಂಡದಿಂದ ಒಂದು ಬಗೆಯ ನಾರನ್ನು ತೆಗೆಯಬಹುದು. ಇದರಿಂದ ಬರುವ ನಾರು ಉತ್ತಮದರ್ಜೆಯದೆಂದು ಹೆಸರಾಗಿದೆ. ರೇಷ್ಮೆಯನ್ನು ಹೋಲುವ ಈ ನಾರು ಬಲು ಉದ್ದವೂ ಹೌದು. ಸಸ್ಯಕ್ಕೆ 4 ಅಥವಾ 5 ತಿಂಗಳು ವಯಸ್ಸಾದಾಗ ಕಾಂಡವನ್ನು ಕತ್ತರಿಸಿ ನೀರಿನಲ್ಲಿ ಕೊಳೆಸಿ ನಾರನ್ನು ಹೊರತೆಗೆಯುತ್ತಾರೆ. ನಾರನ್ನು ಹಗ್ಗಮಾಡಲು ಉಪಯೋಗಿಸುತ್ತಾರೆ.

ಔಷಧವಾಗಿ[ಬದಲಾಯಿಸಿ]

ಔಷಧಿರೂಪದಲ್ಲಿ ಸಹ ಈ ನಾರು ಸಸ್ಯ ಬಹಳ ಉಪಯುಕ್ತ. ಜ್ವರಬಂದಾಗ ಶರೀರವನ್ನು ತಂಪುಗೊಳಿಸಲು ಇದರ ರಸವನ್ನು ಕೊಡುತ್ತಾರೆ. ಸುಮಾತ್ರದಲ್ಲಿ ಈ ಸಸ್ಯದಿಂದ ಒಂದು ರೀತಿಯ ರಸವನ್ನು ತಯಾರಿಸಿ ಸಂಧಿವಾತಕ್ಕೆ ಬಳಸುತ್ತಾರೆ. ಭಾರತದಲ್ಲಿ ಇದರ ಬೇರಿನ ರಸವನ್ನು ತಂಪುಕಾರಕ ಔಷಧಿಯಾಗಿ ಉಪಯೋಗಿಸುವುದುಂಟು.

ಉಲ್ಲೇಖಗಳು[ಬದಲಾಯಿಸಿ]

  1. "Abutilon indicum". Pacific Island Ecosystems at Risk. Archived from the original on 2023-04-26. Retrieved 2008-06-18.

ಬಾಹ್ಯ ಸಂಪರ್ಕಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: