ಕರಪಾಲ ಮೇಳ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರಪಾಲ ಮೇಳವು ಹವ್ಯಾಸಿ ಕಲೆಯೂ ಹೌದು, ಉದ್ಯೋಗಿ ಕಲೆಯೂ ಹೌದು.ಇದರಲ್ಲಿ ವೀರಶೈವರು ಅದರಲ್ಲಿಯೂ ಜಂಗಮರು ಪಾಲ್ಗೊಳ್ಳವರು. ಕರಪಾಲ ಮೇಳವನ್ನು ನಡೆಸುವವರಿಗೆ ’ಕರಪಾಲದವರು’ ಎಂದೂ ಮುಖ್ಯ ಕಲಾವಿದರನ್ನು ’ಕರಪಾಲದಯ್ಯ’ನೆಂದೂ ಕರೆಯುವರು. ಕರಪಾಲವು ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕಕ್ಕೆ ಬಂದುದೆಂದು ಕಲಾವಿದರು ಹೇಳುವರು.ಈ ಮೇಳದಲ್ಲಿ ಸಾಹಿತ್ಯ, ಸಂಗೀತ, ನೃತ್ಯ ಎಲ್ಲವು ಮುಖ್ಯವಾಗಿರುವುದು.ಮೂರು ಮಂದಿಯಿದ್ದರೆ ಈ ಮೇಳವನ್ನು ನಡೆಸಬಹುದು. ಒಬ್ಬ ಪ್ರಧಾನ ನಾಯಕನಾದರೆ, ಮತ್ತಿಬ್ಬರೂ ಸಹಾಯಕರಾಗಿರುತ್ತಾರೆ. ಇವರನ್ನು ಶಿಷ್ಯರೆಂದು ಕರೆಯುತ್ತಾರೆ. ಡಾ.ಎಂ.ಚಿದಾನಂದಮೂರ್ತಿಯವರು ಕರಪಾಲವು ಕರಪಲ್ಲವ(ಬೆರಳು)ದಿಂದ ಬಂದಿರಬಹುದು ಎನ್ನುವರು. ’ಕರಪಲ್ಲವ’ ಕರಪಲ್ಲವಾಗಿ ಕರಪಾಲ ಎಂದಾಗಿರಬಹುದು ಎಂಬ ವಿಶ್ಲೇಷಣೆಯು ನಡೆದಿರುವುದಾಗಿದೆ. ಕರಪಲ್ಲವ ಎಂದರೆ ಸಂಸ್ಕೃತದಲ್ಲಿ ’ಕೈಸಂಜ್ಞೆ’ ಎಂದರ್ಥ.

ಕರಪಾಲದವರ ವೇಷಭೂಷಣ[ಬದಲಾಯಿಸಿ]

ಕರಪಾಲ ಕಲಾವಿದರು ವೀರಗಚ್ಚೆ ಹಾಕಿ ಬಿಳಿಯ ಜುಬ್ಬ ತಲೆಗೆ ’ಅವಚವಿ’, ಸುನ್ನಾರಿ, ಅಂಬೆಸರ, ಕಿರೀಟ, ಕಾಲಿಗೆ ಗೆಜ್ಜೆ, ಹಣೆಗೆ ವಿಭೂತಿ, ಕೊರಳಿಗೆ ರುದ್ರಾಕ್ಷಿ ಮಾಲೆ, ಸೊಂಟಕ್ಕೆ ಕೆಂಪು ವಸ್ತ್ರಗಳನ್ನು ಧರಿಸುತ್ತಾರೆ. ಪೌರಾಣಿಕ ನಾಟಕಕಾರರು ಧರಿಸುವಂತಹ ರೀತಿಯಲ್ಲಿ ಹಾಕಿರುತ್ತಾರೆ. ಮೇಳದಲ್ಲಿ ಐದು ಜನ ಕಲಾವಿದರಿರುತ್ತಾರೆ. ಅವರಲ್ಲಿ ಒಬ್ಬ ಮುಖ್ಯ ಕಥೆಗಾರನಿರುತ್ತಾನೆ. ಜೊತೆಯಲ್ಲಿ ಇಬ್ಬರು ಸಹ ನೃತ್ಯದವರಿದ್ದು, ಉಳಿದವರು ಹಿಮ್ಮೆಳದವರಿರುವರು.

ಕರಪಾಲ ಮೇಳದ ರಂಗಸಜ್ಜಿಕೆ[ಬದಲಾಯಿಸಿ]

ರಂಗಸ್ಥಳವು ನಾಲ್ಕು ಕಂಬಗಳಿಂದ ಸಿದ್ಧವಾದ ಒಂದು ವೇದಿಕೆ. ರಂಗವು ಪ್ರೇಕ್ಷಕನ ಕಡೆಗೆ ಇದ್ದು, ಉಳಿದ ಮೂರು ಭಾಗವನ್ನು ಸೋಗೆಯಿಂದ ಮುಚ್ಚಲಾಗಿರುತ್ತದೆ.ಕೆಲವು ಕಡೆ ಚಿಕ್ಕದಾದ ಹಸಿರು ಚಪ್ಪರವನ್ನು ಹಾಕಿರುತ್ತಾರೆ. ರಂಗದ ಎತ್ತರವು ಸುಮಾರು ಎಂಟು ಅಡಿಯಿದ್ದು ಇದರಲ್ಲಿ ನಿರೂಪಕ ಮತ್ತು ಸಹ ನೃತ್ಯದವರಿರುತ್ತಾರೆ.ರಂಗದ ಮುಂಭಾಗದಲ್ಲಿ ಹಿಮ್ಮೇಳನದವರಿಬ್ಬರು ಕುಳಿತಿರುತ್ತಾರೆ.

ಕರಪಾಲ ಮೇಳದ ವಾದ್ಯ ವಿಶೇಷತೆ[ಬದಲಾಯಿಸಿ]

ಈ ಮೇಳದ ವಾದ್ಯದ ವಿಶೇಷತೆಯೆಂದರೆ ಗುಮ್ಮಟೆ ಮತ್ತು ತಾಳಗಳು. ಗುಮ್ಮಟೆಯನ್ನು ಮಣ್ಣಿನಿಂದ ತಯಾರಿಸಿದ ಕುಂಭಾಕಾರವಾಗಿದ್ದು ಅದರ ಒಂದು ಭಾಗವನ್ನು ಉಡದ ಚರ್ಮದಿಂದ ಮುಚ್ಚಲಾಗಿರುತ್ತದೆ. ಇನ್ನೊಂದು ಭಾಗ ಹಾಗೆಯೇ ತೆರೆದಿರುತ್ತದೆ. ಇದು ಕರಪಾಲ ಮೇಳದ ಕುಣಿತಕ್ಕೆ ವಿಶೇಷವಾದ ಹಿಮ್ಮೇಳವಾಗಿರುವುದು. ಇಂದಿನ ಆಧುನಿಕ ಯುಗದಲ್ಲಿ ಗುಮ್ಮಟೆ ಮತ್ತು ತಾಳಗಳೊಂದಿಗೆ ಹಾರ್ಮೊನಿಯಂ ಮತ್ತು ಮದ್ದಳೆಗಳನ್ನು ನುಡಿಸಲಾಗುತ್ತದೆ.

ಕರಪಾಲ ಮೇಳದ ನವೀನತೆ[ಬದಲಾಯಿಸಿ]

ಕರಪಾಲದ ಯಶಸ್ಸು ಮುಖ್ಯ ಕಥೆಗಾರನನ್ನು ಅವಲಂಬಿಸಿರುತ್ತದೆ. ಈತನ ಬಳಿಯಲ್ಲಿ ಇಬ್ಬರು ಸಹ ನೃತ್ಯಗಾರರಿರುತ್ತಾರೆ. ಒಬ್ಬ ಕಲಾವಿದನು ಕಥೆಯನ್ನು ನಿರೂಪಿಸುತ್ತಿರಬೇಕಾದರೆ ಉಳಿದ ಕಲಾವಿದರು ’ಹೂಂ’ ಗುಟ್ಟುತ್ತ ಇಲ್ಲವೇ ಪ್ರಶ್ನಿಸುತ್ತ ಹೋಗುತ್ತಾರೆ. ಅದಕ್ಕೆ ತಕ್ಕ ಹಾಗೆ ನಿರೂಪಕನು ಜಾಣ್ಮೆಯಿಂದ ಉತ್ತರವನ್ನು ನೀಡುತ್ತಾನೆ.ಕಥೆಯ ಮಧ್ಯೆ ಮಧ್ಯೆ ಬರುವ ಹಾಡನ್ನು ಆರಂಭಿಸಿ, ಸಹಕಲಾವಿದರಿಗೆ ಎತ್ತಿಕೊಡುತ್ತಾನೆ. ಇದು ಒಂದು ರೀತಿಯ ಮೇಳವಾದರೆ ಮತ್ತೊಂದು ಪ್ರಕಾರವಿದ್ದು ಅದನ್ನು ಕರಪಲ್ಲವೆಂದೇ ಕರೆಯಲಾಗುತ್ತದೆ. ಇವರು ಶರಣರಿಗೆ ಸಂಬಂಧಿಸಿದಂತಹ ಕಾಲಜ್ಞಾನದ ಹಾಡುಗಳನ್ನು ಹಾಡುತ್ತಾರೆ. ಹಾಡುವ ಸಮಯದಲ್ಲಿ ಸುತ್ತಲೂ ನಿಂತಿರುವಂತಹ ಜನರಲ್ಲಿ ಹಣ ಕೊಡಲು ಸಿದ್ದವಿರುವವರ ಹೆಸರನ್ನು ಹೇಳದೆ, ತಮ್ಮ ಶಿಷ್ಯರಿಗೆ ಕೈ ಸನ್ನೆಯಿಂದಲೇ ಹೇಳುವುದು ಇವರ ವಿಶೇಷವಾಗಿದೆ. ಕರಪಲ್ಲದಲ್ಲಿ ಸಂಜ್ಞೆಗಳು ಬಹುಮುಖ್ಯವಾದವು. ಸಂಜ್ಞೆಗಳ ಸಂದರ್ಭದಲ್ಲಿ ಬಲಗೈಯನ್ನು ಮಾತ್ರ ಬಳಸುವರು. ಉದಾಹರಣೆಗೆ: ಸ್ವರ ಸಂಜ್ಞೆಗಳು ಅ - ಐದೂ ಬೆರಳುಗಳನ್ನು ಅಂಗೈ ಮೇಲಾಗಿ ಚಾಚುವುದು
ಆ - ’ಆ’ ದಂತೆ ಮತ್ತು ಬಲಕಿವಿಯ ಕೆಳಭಾಗವನ್ನು ಮುಟ್ಟುವುದು.
ಇ - ಹೆಬ್ಬರಳನ್ನು ಒಂದನೇ ಬೆರಳಿಗೆ ಸೇರಿಸಿ ಮುಂದೆ ಹಿಡಿಯುವುದು.
ಈ - ’ಇ’ ಯಂತೆ ಮತ್ತು ದೀರ್ಘತ್ವ
ಎ - ಹೆಬ್ಬರಳನ್ನು ಒಂದನೇ ಬೆರಳಿಗೆ ಸೇರಿಸಿ ಭುಜದತ್ತ ಒಯ್ಯುವುದು.
ಏ - ’ಏ’ ಯಂತೆ ಮತ್ತು ದೀರ್ಘತ್ವ
ಐ - ’ಎ’ ಯಂತೆ ಮತ್ತು ’ಇ’ ಯಂತೆ ವ್ಯಂಜನಗಳು.
ಕ - ಎಲ್ಲ ಬೆರಳುಗಳನ್ನು ಮೇಲೆತ್ತಿ ಹಾಗೇ ಅಂಗೈಯನ್ನು ಮುಂದಕ್ಕೆ ಚಾಚುವುದು.
ಖ - ’ಕ’ದಂತೆ ಮತ್ತು ಮೊದಲ ನಾಲ್ಕು ಬೆರಳುಗಳನ್ನು ಮೇಲೆತ್ತಿ ನಾಲ್ಕನೇ ಬೆರಳಿನ ಕೆಳಭಾಗಕ್ಕೆ ಹೆಬ್ಬೆರಳನ್ನು ಒತ್ತಿ ಹಿಡಿದು ತೋರಿಸಬೇಕು. ಎರಡನೆಯದು ಮಹಾಪ್ರಾಣದ ಸಂಜ್ಞೆ.
ಗ - ಕೈ ಬೆರಳುಗಳನ್ನೆಲ್ಲ ಮಡಿಸಿ ನಂತರ ಅಲ್ಲೇ ಅಲುಗಿಸಬೇಕು.
ಘ - ’ಗ’ ದಂತೆ ಮತ್ತು ಮಹಾಪ್ರಾಣತ್ವದ ಸಂಜ್ಞೆ.

ಒಂದು ಕಲೆಯಲ್ಲಿ ಚಮತ್ಕಾರ, ಜಾಣ್ಮೆಯು ಪ್ರಧಾನವಾದರೆ, ಮತ್ತೊಂದರಲ್ಲಿ ಸಂಗೀತ ಸಾಹಿತ್ಯ ಹಾಗೂ ನೃತ್ಯಗಳಿರುತ್ತವೆ.ಕರಪಾಲವು ಮೊದಲಿಗೆ ಗಣಪತಿಯ ಸ್ತುತಿಯಿಂದ ಆರಂಭವಾಗುತ್ತದೆ.

"ಗಜಮುಖನೆ ಗಣನಾಥ| ಭುಜಗ ಭೂಷಣ ಪ್ರೀತ
ಈಶನ ಪುತ್ರನೇ ಸ್ವಾಮಿ ಗಣನಾಥ| ಸ್ವಾಮಿ ಗಣನಾಥ

ಎಂದು ಸ್ತುತಿಸಿದರೆ, ನಂತರ

"ಶಾರದಾಂಬಿಕೆಯ ನಿಮಗೆ ಶರಣೆಂಬೆವು ನಾವಿನ್ನು
ಬ್ರಹ್ಮನ ಸತಿ ರಾಣಿ | ಗೂಡಾಂಬಿಕೆಯೇ
ಶಾರದಾಂಬಿಕೆಯೆ||
ಎಂಬುದು ಶಾರದಾ ಸ್ತುತಿ. ಈ ಸ್ತುತಿಗಳ ಬಳಿಕ
"ನಾವು ಬಲ್ಲವರಲ್ಲ ನಾವು ತಿಳಿದವರಲ್ಲ
ಯಾವ ತಪ್ಪಿದ್ದರೂ ತಿದ್ದಿಕೊಡಬೇಕು| ತಿದ್ದಿಕೊಡಬೇಕು|

ಎಂಬ ವಿನಯತೆಯಿಂದ ಹಾಡುತ್ತ ಕಥೆಯನ್ನು ಮುಂದುವರೆಸಿಕೊಂಡು ಹೋಗುವರು.

ಕರಪಾಲ ಮೇಳದ ಕಥಾ ನಿರೂಪಣೆ[ಬದಲಾಯಿಸಿ]

ಇಲ್ಲಿನ ಕಥಾ ನಿರೂಪಣೆಯ ಧಾಟಿಯು ವಿಶಿಷ್ಟವಾದುದು. ಚಂಪೂ ಶೈಲಿಯ ಗದ್ಯಪದ್ಯ ಮಿಶ್ರಿತವಲ್ಲದೇ ಸಂಭಾಷಣೆಯ ಉದ್ದಕ್ಕೂ ಪ್ರಾಮುಖ್ಯತೆಯನ್ನು ಪಡೆದಿರುವುದು. ಜೊತೆಗೆ ಹಾಡಿನ ಬಳಕೆಯು ಉಂಟು. ಕರಪಾಲ ಮೇಳದಲ್ಲಿ ಬರುವಂತಹ ಕಥೆಯ ಆರಂಭವನ್ನು ಉದಾಹರಣೆಗೆ ಗಮನಿಸಬಹುದು. ನಿರೂಪಕ : ಅಯ್ಯಾ ಮಗು ಕೇಳು! ಇದೇ ಮಧುರಾವತಿ, ಮಧುರಾವತಿಯೆಂಬ ಪಟ್ಟಣವು ಯಾವ ರೀತಿ ಶೋಭಾಯಮಾನವಾಗಿದೆಯಪ್ಪ ಅಂದರೆ ಹಿಮ್ಮೇಳ : ಯಾವ ರೀತಿಯಿಂದ ಸ್ವಾಮಿ ನಿರೂಪಕ : ಕೆತ್ತುಗಲ್ಲಿನ ಕೋಟೆ... ಹಿಮ್ಮೇಳ : ಕೆತ್ತುಗಲ್ಲಿನ ಕೋಟೆ ಮುತ್ತಿನಲ ತೆನೆಗಳು. ಕೊತ್ತಳ ಸೌರಭ ಬಿತ್ತರಿಸಲಳವೇ ಬಿತ್ತರಿಸಲಳವೇ||ಕೊತ್ತಳ|| ನಿರೂಪಕ : ಮಧುರಾವತಿ ಪಟ್ಟಣಕ್ಕೆ ಕಲ್ಲಿನಿಂದ ಕೋಟೆಯನ್ನು ಕಟ್ಟಿ ಕೆತ್ತುಗಲ್ಲಿನಿಂದ ಅಲಂಕರಿಸಿ ಮತ್ತೂ ಹೇಗಿದೆಯಪ್ಪ? ಹಿಮ್ಮೇಳ : ಹೇಗಿದೆ ಗುರುವೆ? ನಿರೂಪಕ : ಹಾಲು ಮಾರುವ ಬೀದಿ ಹಿಮ್ಮೇಳ : ಹಾಲು ಮಾರುವ ಬೀದಿ ನೂಲು ಮಾರುವ ಬೀದಿ ಶಾಲು ಸಕಲಾತಿಗಳ ಮಾರುವ ಬೀದಿ ಮಾರುವ ಬೀದಿ ||ಶಾಲು|| ಈ ಸಾಲಿನಲ್ಲಿ ಪಟ್ಟಣವನ್ನು ವರ್ಣನೆಯನ್ನು ಮಾಡುವುದರ ಜೊತೆಗೆ ಹಾಡುವ ಧಾಟಿ ಹಾಗೂ ನಿರೂಪಣೆಯ ಶೈಲಿಯು ವಿಶಿಷ್ಟತೆಯಿಂದ ಕೂಡಿರುವುದನ್ನು ಗಮನಿಸಬಹುದಾಗಿದೆ.

ಕರಪಾಲದವರ ಕಥಾ ರೂಪಗಳು[ಬದಲಾಯಿಸಿ]

  1. ಕಾಡಸಿದ್ದಮ್ಮನ ಕತೆ
  2. ರುದ್ರೇಶ್ವರ ಮಹಾತ್ಮೆ
  3. ಕಾಳಿಂಗ ಕುಮಾರ

ಕಾಡುಸಿದ್ದಮ್ಮನ ಕತೆ[ಬದಲಾಯಿಸಿ]

ಒಂದಾನೊಂದು ಕಾಲದಲ್ಲಿ ಚದುರಂಗನೆಂಬ ಮಹಾರಾಜನು ಇದ್ದನು. ಇವನಿಗೆ ನಾಲ್ಕು ಜನ ಹೆಂಡತಿಯರು ಇದ್ದರು ಕೂಡ ಮಕ್ಕಳಿರುವುದಿಲ್ಲ. ನಂತರ ಸೂರ‍್ಯಕಾಂತಿ ಎಂಬ ಹೆಣ್ಣನ್ನು ಐದನೇಯವಳಾಗಿ ವಿವಾಹವಾಗುತ್ತಾನೆ. ಒಮ್ಮೆ ಶಿವನು ಜಂಗಮ ವೇಷದಲ್ಲಿ ಚದುರಂಗನ ಮನೆಗೆ ಭಿಕ್ಷೆಗೆಂದು ಬರುತ್ತಾನೆ. ಆಗ ರಾಜನ ಐದನೇ ಮಡದಿಯು ಭಿಕ್ಷೆ ನೀಡಲು ಹೋದಾಗ ನೀನು ಬಂಜೆ ಎಂದು ನಿರಾಕರಿಸುತ್ತಾನೆ. ರಾಣಿಯು ಮನನೊಂದು ರಾಜನಿಗೆ ತಿಳಿಸಿದಾಗ ಆತ ಶಿವನನ್ನು ತಪಸ್ಸು ಮಾಡಿ ಒಲಿಸಿಕೊಳ್ಳುವುದಾಗಿ ಹೇಳಿ ಹೋದಾಗ, ಆ ಪ್ರದೇಶದ ಋತುಪರ್ಣ ಎಂಬ ರಾಜ ದಂಪತಿಗಳಿಗೆ ಕಾಡಸಿದ್ದಮ್ಮ ಎಂಬ ಹೆಣ್ಣು ಮಗಳು ಜನಿಸಿರುತ್ತಾಳೆ. ಆಕೆಯು ಬೆಳೆದು ಶಿವನನ್ನು ತಪಸ್ಸು ಮಾಡುತ್ತ ಪೂಜಿಸುತ್ತಿರುತ್ತಾಳೆ. ಅಲ್ಲಿಗೆ ಬಂದ ಚದುರಂಗ ನಿನ್ನನ್ನು ಮದುವೆಯಾಗುತ್ತೇನೆ ಎಂದಾಗ ಆಕೆಯ ಶಿವನನ್ನು ಸ್ಮರಿಸಿದಾಗ ಶಿವನು ಪ್ರತ್ಯಕ್ಷವಾಗಿ ಈಕೆಯನ್ನು ಸುಖವಾಗಿ ನೋಡಿಕೊಂಡರೆ ಮಾತ್ರ ಹೆಣ್ಣು ಕೊಡುವೆನು ಎಂದು ಹೇಳಿದಾಗ, ರಾಜನು ಇದಕ್ಕೆ ಸಮ್ಮತ್ತಿಸುತ್ತಾನೆ. ಆದರೆ ರಾಜನ ಐದು ಮಡದಿಯರು ಈಕೆಗೆ ಕಿರುಕುಳ ನೀಡುತ್ತಾರೆ. ಕಾಡುಸಿದ್ದಮ್ಮ ಗರ್ಭಧರಿಸಿ ಮಕ್ಕಳನ್ನುಹಡೆದಾಗ, ಸೂಲಗಿತ್ತಿಯ ಮೂಲಕ ಮಕ್ಕಳನ್ನು ಸಾಯಿಸುತ್ತಾರೆ, ಅಲ್ಲದೇ ’ಆಕೆ ಗುಂಡುಕಲ್ಲು, ಒನಕೆ ಹಡೆದಳು’ ಎಂದು ಹೇಳುತ್ತಾರೆ. ಶಿವನ ದಯೆಯಿಂದ ಆ ಮಕ್ಕಳು ಸತ್ತಿರುವುದಿಲ್ಲ. ಆ ಮಕ್ಕಳು ಹೂಗಾರ ಮುದ್ದಣ್ಣನ ಮನೆಯಲ್ಲಿ ಬೆಳೆಯುತ್ತಿರುತ್ತವೆ. ಮುಂದೆ ಕಾಡುಸಿದ್ದಮ್ಮನ ಶಿರಚ್ಛೇದನ ಮಾಡಲಾಗುತ್ತದೆ. ಮಕ್ಕಳು ಶಿವನನ್ನು ಬೇಡಿಕೊಂಡಾಗ ಭಕ್ತಿಗೆ ಮೆಚ್ಚಿ ಚದುರಂಗ ರಾಜ, ಕಾಡುಸಿದ್ದಮ್ಮ ಮತ್ತು ಅವರ ಮಕ್ಕಳನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವನು.

ಉಲ್ಲೇಖಗಳು[ಬದಲಾಯಿಸಿ]

  1. ಕರ್ನಾಟಕ ಜನಪದ ಕಲೆಗಳ ಕೋಶ: ಸಂಪಾದಕ-ಹಿ.ಚಿ.ಬೋರಲಿಂಗಯ್ಯ, ಪ್ರಸಾರಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ ೧೯೯೬
  2. ಕರ್ನಾಟಕ ಜನಪದ ಕಲೆಗಳು: ಸಂಪಾದಕ-ಗೊ.ರು.ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ತು,೧೯೭೭