ಕಾಳಸಂತೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಕಪ್ಪು ಹಣ ಇಂದ ಪುನರ್ನಿರ್ದೇಶಿತ)

ಕಾಳಸಂತೆ ಎಂದರೆ ಸರ್ಕಾರದ ನಿಯಂತ್ರಣಕ್ಕೊಳಪಟ್ಟ ವಸ್ತುಗಳ ನ್ಯಾಯ ಸಮ್ಮತವಲ್ಲದ ರೀತಿಯ ವ್ಯಾಪಾರ. ಮುಕ್ತಪೇಟೆಯಲ್ಲಿ ಬೇಡಿಕೆ ಹಾಗೂ ಪೂರೈಕೆಗಳು ಸಂಧಿಸುವೆಡೆಯಲ್ಲಿ ಬೆಲೆಯ ನಿರ್ಧಾರವಾಗುತ್ತದೆ. ಅತಿ ಬೇಡಿಕೆಯ ಪರಿಣಾಮವಾಗಿ ಬೆಲೆಯಲ್ಲಿ ಹೆಚ್ಚಳ ಕಂಡುಬಂದಲ್ಲಿ, ಕೊಂಡುಕೊಳ್ಳಲು ಸಮರ್ಥರಾದವರಿಗೆ ಮಾತ್ರ ಸರಕುಗಳು ದೊರೆಯುತ್ತವೆ. ಉಳಿದವರು ಬರಿಗೈಯಿಂದ ಹೋಗಬೇಕಾಗುತ್ತದೆ. ಸರ್ಕಾರ ಸಾಮಾನ್ಯ ಜನತೆಯ ಹಿತದೃಷ್ಟಿಯಿಂದ ಕೆಲವು ಅನುಭೋಗ ವಸ್ತುಗಳನ್ನು ನಿಯಂತ್ರಿಸಬೇಕಾಗುತ್ತದೆ. ಉತ್ಪಾದಕ ವಸ್ತುಗಳಾದ ಕಲ್ಲಿದ್ದಲು, ಉಕ್ಕು, ಪೆಟ್ರೋಲಿಯಂ, ಮೊದಲಾದವುಗಳ ಕೊರತೆಯುಂಟಾದಲ್ಲಿ ಸರ್ಕಾರ ಆರ್ಥಿಕ ಅಭಿವೃದ್ಧಿ ಕಾರ್ಯಕ್ರಮಗಳು ನಿರಾತಂಕವಾಗಿ ಸಾಗುವಂತೆ ಆ ವಸ್ತುಗಳನ್ನು ಕೂಡ ನಿಯಂತ್ರಿಸುತ್ತದೆ. ಕೊರತೆಯ ವಸ್ತುಗಳ ನ್ಯಾಯವಾದ ವಿತರಣೆ ಸಾಧಿಸುವುದು ನಿಯಂತ್ರಣದ ಉದ್ದೇಶ. ನಿಯಂತ್ರಿತ ಬೆಲೆ ಸಹಜ ಬೆಲೆಗಿಂತ ಕಡಿಮೆಯಿದ್ದರೆ ಸರಕುಗಳು ಗುಟ್ಟಾಗಿ ಮಾರಾಟವಾಗುತ್ತವೆ. ಏಕೆಂದರೆ ಕಾಯಿದೆಯ ಪ್ರಕಾರ ನಿಯಂತ್ರಿತವಾದ ಸರಕುಗಳು ಸರ್ಕಾರ ನಿರ್ಧರಿಸಿದ ಬೆಲೆಗೆ ಮಾರಾಟವಾಗಬೇಕು. ಸಾಮಾನ್ಯವಾಗಿ ಇವುಗಳ ಪಡಿತರವೂ ಇರುವುದುಂಟು. ಪಡಿತರದ ಮೂಲಕ ಲಭ್ಯವಾದ ಪರಿಮಾಣ ಸಾಲದಿದ್ದಾಗ ಅನುಭೋಗಿಗಳು ಅಥವಾ ಬಳಕೆದಾರರು ಅಧಿಕ ಪರಿಮಾಣವನ್ನು ಪಡೆಯಲು ಅಧಿಕ ಬೆಲೆ ಕೊಡಲು ಮುಂದೆ ಬರುವರು. ಇದರಿಂದ ವಸ್ತುಗಳ ಗುಪ್ತ ಮಾರಾಟವಾಗುತ್ತದೆ. ಕಾಳಸಂತೆ ನಿರ್ಮಾಣವಾಗುವುದು ಹೀಗೆ. ಸರ್ಕಾರದ ಮೇಲ್ವಿಚಾರಣೆ ಹಾಗೂ ಆಡಳಿತ ಬಿಗಿಯಾಗದಿದ್ದರೆ ಕಾಳಸಂತೆಯ ಕ್ಷೇತ್ರ ವಿಸ್ತಾರವಾಗುವುದುಂಟು. ಕಾಳಸಂತೆಯಲ್ಲಿ ಬೆಲೆಗಳು ಹೇಗೆ ನಿರ್ಧಾರವಾಗುವುವೆಂಬುದನ್ನು ಬೌಲ್ಡಿಂಗ್ ವಿವರಿಸಿದ್ದಾನೆ. ಕಾಳಸಂತೆಯಲ್ಲಿ ಸಾಮಾನುಗಳನ್ನು ಕೊಂಡುಕೊಳ್ಳುವವರ ಮೇಲೆ ನಿರ್ಬಂಧಗಳನ್ನು ಹೇರಿದಾಗ ಬೆಲೆಗಳು ಇಳಿಯಲಾರಂಭಿಸುವುವು. ನಿರ್ಬಂಧಗಳನ್ನು ಮಾರಾಟಗಾರರ ಮೇಲೆ ಹೇರಿದಾಗ ಬೆಲೆಗಳು ಮತ್ತಷ್ಟು ಹೆಚ್ಚುತ್ತ ಹೋಗುತ್ತವೆ. ಆದ್ದರಿಂದ ಕಳ್ಳಪೇಟೆಯ ಬೆಲೆ ಸಹಜಬೆಲೆಯ ಸಮೀಪದಲ್ಲಿರಬೇಕಾದರೆ ಗ್ರಾಹಕರನ್ನು ದಂಡಿಸುವುದು ಹೆಚ್ಚು ಪರಿಣಾಮಕಾರಿ.

ಕಾಳಸಂತೆಯ ಕ್ಷೇತ್ರ ಅತ್ಯಧಿಕ ಬೇಡಿಕೆಯನ್ನು ಅವಲಂಬಿಸಿದುದರಿಂದ ಪರಸ್ಪರ ಪತ್ರವ್ಯವಹಾರಗಳ ಅನುಕೂಲವಿಲ್ಲದಾಗ ಮಾರಾಟಗಾರರು ತಮಗೆ ಲಾಭವೆನಿಸಿದ ರೀತಿಯಲ್ಲಿ ಬೆಲೆಗಳನ್ನು ನಿರ್ಧರಿಸುತ್ತಾರೆ. ಈ ಬೆಲೆಗಳ ಸರಾಸರಿ ಬೆಲೆ ಮುಕ್ತಪೇಟೆಯ ಸರ್ವಸಾಧಾರಣ ಬೆಲೆಗಿಂತ ಅಧಿಕವಾಗಿರುತ್ತದೆ. ಕಾಳಸಂತೆಯ ವ್ಯವಹಾರದ ಮೇಲೆ ಸರ್ಕಾರದ ಆಡಳಿತದ ಬಿಗಿ ಕಡಿಮೆಯಾದರೆ ಉತ್ಪಾದನೆ ಹೆಚ್ಚಬಹುದು. ಆದರೆ ಉತ್ಪಾದಿತ ವಸ್ತುವಿನ ಪೂರೈಕೆಯ ಪರಿಮಾಣ ನಿಯಂತ್ರಿತ ಪೇಟೆಗಿಂತ ಕಾಳಸಂತೆಯಲ್ಲಿಯೇ ಹೆಚ್ಚಾಗಿ ಕಂಡುಬರುತ್ತದೆ. ಸರ್ಕಾರದ ನಿರ್ಬಂಧಗಳು ಹೆಚ್ಚಾದಾಗ ನಿಯಂತ್ರಿತ ಪೇಟೆಯಲ್ಲಿಯ ಪೂರೈಕೆ ಹೆಚ್ಚಾಗಿ, ಉತ್ಪಾದನೆಯಲ್ಲಿ ಇಳಿಮುಖ ಕಂಡುಬರುವುದುಂಟು. ಸರ್ಕಾರ ಜನತೆಯ ಹಿತ ಹಾಗೂ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಅನುಕೂಲವಾದ ಧೋರಣೆಯನ್ನು ಅನುಸರಿಸಬೇಕಾಗುತ್ತದೆ. ಆದರೆ ಕಾಳ ಸಂತೆಯ ವ್ಯವಹಾರ ನ್ಯಾಯಸಮ್ಮತವಾಗಲಾರದು ಯುದ್ಧ ಹಾಗೂ ಆರ್ಥಿಕ ಅಭಿವೃದ್ಧಿ ಸಮಯಗಳಲ್ಲಿ ಸರಕುಗಳ ಸರಿಯಾದ ವಿತರಣೆಯಾಗಬೇಕಾದರೆ ನಿಯಂತ್ರಣ ಕ್ರಮಗಳ ಅವಶ್ಯಕತೆ ಹೆಚ್ಚು. ಕಾಳಸಂತೆಯ ವ್ಯವಹಾರವನ್ನು ಸಂಪೂರ್ಣವಾಗಿ ನಿರ್ಮೂಲಗೊಳಿಸಬೇಕಾದರೆ ಸರ್ಕಾರ ಯಾವ ಭೇದಭಾವವೂ ಇಲ್ಲದೆ ಕೊಂಡುಕೊಳ್ಳುವವರ ಹಾಗೂ ಮಾರುವವರ ಮೇಲೆ ತೀವ್ರ ಕ್ರಮಗಳನ್ನು ಕೈಕೊಳ್ಳಲೇಬೇಕಾಗುತ್ತದೆ.

ಸಾಮಾಜಿಕ ವ್ಯವಸ್ಥೆಯಲ್ಲಿನ ಯಾವುದೇ ರೀತಿಯ ಸೂಕ್ತ ನೀತಿಗಳಿಗೆ ಒಳಪಡದೇ ಗಳಿಸಲಾದ ಹಣವನ್ನು ಕಪ್ಪುಹಣವೆಂದು ಗುರುತಿಸಲಾಗುತ್ತದೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ತಾನಿರುವ ಸ್ಥಳೀಯ ಸರ್ಕಾರಿ ವ್ಯವಸ್ಥೆಯ ಕಾನೂನುಗಳಿಗೆ ವಂಚಿಸುತ್ತ ಯಾವುದೇ ರೀತಿಯ ತೆರಿಗೆ ಕಟ್ಟದೇ ಸಂಪಾದಿಸಿದ ಹಣ ಇದಾಗಿದೆ. ವ್ಯಕ್ತಿ ಅಥವಾ ಸಂಸ್ಥೆಯೊಂದು ಕಪ್ಪುಹಣ ಹೊಂದಿದ್ದರೆ ಅಂಥವರಿಗೆ ಮೇಲೆ ಕಾನೂನಾತ್ಮಕ ಶಿಕ್ಷೆ ವಿಧಿಸಬಹುದಾಗಿದೆ. ಜಗತ್ತಿನ ಅನೇಕ ಕಡೆ ಸಮಾಜ ಬಾಹಿರ ಚಟುವಟಿಕೆಗಳಲ್ಲಿ ಇದೇ ಕಪ್ಪುಹಣದ ಕೈವಾಡವಿರುವದನ್ನು ಕಾಣಬಹುದು.

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ:
"https://kn.wikipedia.org/w/index.php?title=ಕಾಳಸಂತೆ&oldid=1205615" ಇಂದ ಪಡೆಯಲ್ಪಟ್ಟಿದೆ