ಕಚೇರಿಯ ಯಂತ್ರೋಪಕರಣಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕಚೇರಿಯ ಯಂತ್ರೋಪಕರಣಗಳು : ಆಧುನಿಕ ಕಚೇರಿಗಳಲ್ಲಿ ತೀವ್ರವಾಗಿ ಅಧಿಕವಾಗುತ್ತಿರುವ ವಿವಿಧ ಕಾರ್ಯಗಳನ್ನು ಶೀಘ್ರವಾಗಿಯೂ ಸಮರ್ಪಕವಾಗಿಯೂ ನಿರ್ವಹಿಸಲು ಬಳಸಲಾಗುತ್ತಿರುವ ಸಾಧನಗಳು (ಆಫೀಸ್ ಮಷೀನ್ಸ್‌ ಅಂಡ್ ಅಪ್ಲೈಯೆನ್ಸಸ್). ದೊಡ್ಡ ಕಚೇರಿಗಳಲ್ಲಿ ನಡೆಯುವ ಅನೇಕ ದಿನಚರಿಯ ಕೆಲಸಗಳು ಪುನರಾವರ್ತಿಸುವಂಥವು. ಇವನ್ನೆಲ್ಲ ಮಾನವನೇ ಮಾಡುವ ಬದಲು ಇವಕ್ಕೆ ತಕ್ಕುವಾದ ಯಂತ್ರೋಪಕರಣಗಳನ್ನು ಬಳಸುವುದರಿಂದ ದೊರಕುವ ಸೌಲಭ್ಯಗಳು ಮುಖ್ಯವಾಗಿ ಎರಡು.[೧]

ಯಂತ್ರೋಪಕರಣ[ಬದಲಾಯಿಸಿ]

ಇತರ ಎಲ್ಲ ಯಂತ್ರೋಪಕರಣಗಳಂತೆ ಇವುಗಳ ಉದ್ದೇಶವಾದರೂ ಶ್ರಮ ಮತ್ತು ಸಮಯದ ಉಳಿತಾಯವೇ ಆಗಿದೆ. ಶೀಘ್ರತೆ, ಆಯಾಸನಿವಾರಣೆ, ಸ್ಪಷ್ಟತೆ, ನಿಷ್ಕೃಷ್ಟತೆ-ಇವು ಇದರ ನಾಲ್ಕು ಮುಖ್ಯ ಸೌಲಭ್ಯಗಳು, ಇವುಗಳನ್ನು ಕಚೇರಿಯಲ್ಲಿ ಅಳವಡಿಸುವಾಗ ಕೆಲವು ಮುಖ್ಯ ವಿಚಾರಗಳನ್ನು ಪರಿಗಣಿಸುವುದು ಆವಶ್ಯ. ಒಂದು ಯಂತ್ರವನ್ನು ಸ್ಥಾಪಿಸುವುದರಿಂದ ಅದರ ಜೀವಿತಕಾಲದಲ್ಲಿ ಉಳಿತಾಯವಾಗುವ ವೇತನದ ಮೊತ್ತವನ್ನೂ ಯಂತ್ರಕ್ಕಾಗಿಯೇ ತಗಲುವ ವೆಚ್ಚವನ್ನೂ ತೂಗಿ ನೋಡಬೇಕಾಗುತ್ತದೆ. ಇದು ಮುಖ್ಯವಾದ ಅಂಶ, ಯಂತ್ರ ಸ್ಥಾಪನೆಯಿಂದ ಉಳಿತಾಯವಾದ ಶ್ರಮವನ್ನೂ ಸಮಯವನ್ನೂ ಉದ್ಯಮದ ಇತರ ವಿಚಾರಗಳಿಗೆ ವಿನಿಯೋಗಿಸುವುದು ಸಾಧ್ಯವಾಗಿ, ಅದರಿಂದ ಹೆಚ್ಚು ಲಾಭ ಅಥವಾ ಪ್ರಯೋಜನ ದೊರಕುವುದೇ ಎಂಬುದನ್ನು ಪರಿಶೀಲಿಸಬೇಕು. ಯಂತ್ರಗಳನ್ನು ಸ್ಥಾಪಿಸಿದಾಗ ಕಾರ್ಯವಿಧಾನದಲ್ಲೇ ಅನೇಕ ಬದಲಾವಣೆಗಳನ್ನು ಮಾಡಬೇಕಾಗಿ ಬರಬಹುದು. ನೌಕರರಿಗೆ ಇದಕ್ಕೆ ತಕ್ಕಂತೆ ತರಬೇತಿ ನೀಡುವುದೂ ಅಗತ್ಯವಾಗಬಹುದು. ಯಂತ್ರಾಗಮನದಿಂದ ತಮ್ಮ ದುಡಿಮೆಗೆ ಬೇಡಿಕೆ ತಪ್ಪಬಹುದೆಂಬ ಭಯ ನೌಕರರಲ್ಲಿ ಸಂಭವಿಸಬಹುದು. ಇದರಿಂದಲೂ ಇಂಥ ಹಲವು ಕಾರಣಗಳಿಂದಲೂ ಉದ್ಭವಿಸುವ ನೈತಿಕ ಸಮಸ್ಯೆಗಳನ್ನು ಪರಿಶೀಲಿಸಬೇಕು. ಹಲವರ ಕೆಲಸವನ್ನು ಶೀಘ್ರವಾಗಿ ಮಾಡಿ ಮುಗಿಸುವ ಯಂತ್ರ ಒಂದು ದೃಷ್ಟಿಯಲ್ಲಿ ನಿರ್ದಾಕ್ಷಿಣ್ಯಪರ. ಇದನ್ನು ನಡೆಸುವಾಗ ನಿಷ್ಕೃಷ್ಟತೆಗೆ ಹೆಚ್ಚಿನ ಗಮನಕೊಡುವುದು ಆವಶ್ಯ. ಅತ್ಯಂತ ಸಂಕೀರ್ಣವಾದ ಯಂತ್ರದ ಸಮ್ಮುಖದಲ್ಲಿ ಒಮ್ಮೆ ಒಂದು ತಪ್ಪು ಮಾಡಿದರೂ ಅದು ಹಲವು ಮುಖವಾಗಿ ಹಲವು ಮಡಿಯಾಗಿ ಮುಂದುವರಿಯಬಹುದು; ಆವರ್ತಿಸಬಹುದು. ಇದರಿಂದ ಸಂಸ್ಥೆಯ ಗ್ರಾಹಕರಿಗೆ ಅಸಮಾಧಾನವುಂಟಾಗಿ ವ್ಯವಹಾರಕ್ಕೆ ಧಕ್ಕೆ ಒದಗಬಹುದು. ಆದ್ದರಿಂದ ಯಂತ್ರೋಪಕರಣಗಳನ್ನು ಬಳಸುವುರಿಂದ ಎಷ್ಟು ಸೌಲಭ್ಯಗಳುಂಟೋ ಅಷ್ಟೇ ಹೊಣೆಗಾರಿಕೆಯೂ ಇರುವುದೆಂಬುದು ಮುಖ್ಯವಾಗಿ ಗಮನಿಸಬೇಕಾದ ಅಂಶ. ನಾವೀನ್ಯದಿಂದಲೇ ಆಕರ್ಷಿತರಾಗಿ ಒಂದು ಯಂತ್ರ ಸ್ಥಾಪಿಸುವುದು ಸರಿಯಲ್ಲ. ಅದೂ ಒಂದು ಉಪಕರಣ. ಕೆಲಸಕ್ಕೆ ತಕ್ಕಂತೆ ಉಪಕರಣವಿರಬೇಕೇ ವಿನಾ, ಉಪಕರಣಕ್ಕೆ ತಕ್ಕಂತೆ ಕೆಲಸ ಹೊಂದಿಸುವುದು ಅವಾಸ್ತವಿಕ. ಒಂದು ಯಂತ್ರ ಲಭ್ಯವಿದೆಯೆಂದೇ ಕಾರ್ಯದ ಯಾಂತ್ರೀಕರಣ ಮಾಡುವುದು ಸೂಕ್ತವಲ್ಲ.[೨]

ಕಚೇರಿಯ ಕಾರ್ಯ[ಬದಲಾಯಿಸಿ]

ಕಚೇರಿಯ ಕಾರ್ಯಗಳನ್ನು ನಿರ್ವಹಿಸಲು ಒದಗಿಬರುವ ಯಂತ್ರಗಳು ವೈವಿಧ್ಯಮಯ. ಗೊತ್ತಾದ ಒಂದೊಂದು ಕೆಲಸಗಳಿಗೂ ಅನುಗುಣವಾದ ಯಂತ್ರಗಳನ್ನು ಆರಿಸಿಕೊಳ್ಳುವುದು ಬಹಳ ಕಷ್ಟ. ಆದ್ದರಿಂದ ಹಂತಹಂತವಾಗಿ ಯಂತ್ರಗಳನ್ನು ಬಳಸುವುದು ಸರಿಯಾದ ವಿಧಾನ. ಈ ದೃಷ್ಟಿಯಿಂದ ಯಂತ್ರಗಳನ್ನು ಸರಳ ಮತ್ತು ಸಂಕೀರ್ಣವೆಂದು ಎರಡು ಬಗೆಯಾಗಿ ವಿಂಗಡಿಸಬಹುದು. ಒಮ್ಮೆಗೆ ಒಂದೇ ಕ್ರಿಯೆಯನ್ನು ನಡೆಸುವುದು ಸರಳಯಂತ್ರ, ಬೆರಳಚ್ಚು ಯಂತ್ರದ್ದು (ಟೈಪ್ರೈಟರ್) ಅಚ್ಚಿಸುವ ಕ್ರಿಯೆಯೊಂದೇ. ಕೂಡುವ ಯಂತ್ರದ್ದು ಕೂಡುವ ಕೆಲಸ ಮಾತ್ರ. ಛಾಯಾನಕಲು ಯಂತ್ರದ್ದು ಪ್ರತಿಮಾಡುವುದಷ್ಟೇ ಕೆಲಸ. ಇವನ್ನು ಗುಮಾಸ್ತರು ಬಳಸುತ್ತಾರೆ. ಗೊತ್ತಾದ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಅಚ್ಚುಕಟ್ಟಾಗಿ ಮಾಡಲು ಇವು ಸಹಾಯಕ. ಇವನ್ನು ಬಳಸುವವರಿಗೆ ತಾವು ಮಾಡುವ ಕೆಲಸ ಗೊತ್ತಿರಬೇಕು. ಬೆರಳಚ್ಚುಯಂತ್ರ ಬಳಸುವವರಿಗೆ ಕಾಗುಣಿತವಾಗಲಿ ವಿರಾಮ ಚಿಹ್ನೆಗಳಾಗಲಿ ಗೊತ್ತಿಲ್ಲದಿದ್ದರೆ ಯಂತ್ರವನ್ನು ಬೈದು ಫಲವಿಲ್ಲ. ಅವರು ಮಾಡುವ ಲೋಪದೋಷಗಳನ್ನು ಯಂತ್ರವೂ ಯಥಾವತ್ತಾಗಿ ಪ್ರತಿಬಿಂಬಿಸುತ್ತದೆ. ಲೆಕ್ಕದ ನಾಲ್ಕು ನಿಯಮಗಳನ್ನು ಬಲ್ಲದವನು ಗಣಕವನ್ನು ಬಳಸಿದರೆ ಅದು ಸರಿಯಾದ ಫಲ ನೀಡಲಾರದು.ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಕ್ರಿಯೆಗಳನ್ನು ನಿರ್ವಹಿಸುವವು ಸಂಕೀರ್ಣ ಯಂತ್ರಗಳು. ಇವು ಭಾಗಶಃ ಸ್ವಯಂಚಾಲಿತವಾಗಿರಬಹುದು. ಎಂದರೆ ಪ್ರಜ್ಞಾಪುರ್ವಕ ಮಾರ್ಗದರ್ಶನವಿಲ್ಲದಿದ್ದರೂ ಅದು ತನಗೆ ತಾನೇ ಕೆಲವು ಕ್ರಿಯೆಗಳನ್ನು ನಿರ್ವಹಿಸುತ್ತದೆ. ಲೇಖಾ (ಅಕೌಂಟಿಂಗ್) ಯಂತ್ರಗಳು, ವಿಶ್ಲೇಷಕ (ಅನಾಲಿಸಿಸ್) ಯಂತ್ರಗಳು, ರಂಧ್ರರಟ್ಟಿನ (ಪಂಚ್ಡ್ ಕಾರ್ಡ್) ಯಂತ್ರಗಳು, ಎಲೆಕ್ಟ್ರಾನಿಕ್ ಗಣಕಯಂತ್ರಗಳು ಈ ಜಾತಿಯವು.

ಬೆರಳಚ್ಚು ಯಂತ್ರ[ಬದಲಾಯಿಸಿ]

ಬೆರಳಚ್ಚು ಯಂತ್ರ

ಸು. ನೂರು ವರ್ಷಗಳಿಂದ ಸೇವಾನಿರತವಾಗಿರುವ ಬೆರಳಚ್ಚುಯಂತ್ರ ಇಂದು ಸಾರ್ವತ್ರಿಕವಾಗುತ್ತಿದೆ. ಇದರಿಂದ ಅಕ್ಷರಗಳನ್ನು ವೇಗವಾಗಿ, ಅಂದವಾಗಿ ಮತ್ತು ತಪ್ಪಿಲ್ಲದೆ ಮುದ್ರಿಸಬಹುದು, ಕಾರ್ಬನ್ ಕಾಗದದ ಸಹಾಯದಿಂದ ಕೆಲವು ಪ್ರತಿಗಳನ್ನು ಪಡೆಯಬಹುದು. ಇದು ಜನ್ಮತಳೆದಾಗಿನಿಂದ ಇದರಲ್ಲಿ ಅನೇಕ ಸುಧಾರಣೆಗಳಾಗಿವೆ. ವಿದ್ಯುತ್ ಬೆರಳಚ್ಚು ಯಂತ್ರಗಳೂ ಬಂದಿವೆ. (ನೋಡಿ- ಬೆರಳಚ್ಚು-ಯಂತ್ರ) ಇತ್ತೀಚಿನ ದಿನಗಳಲ್ಲಿ ಸ್ವಕೀಯ ಗಣಕಯಂತ್ರ (ಪರ್ಸನಲ್ ಕಂಪ್ಯುಟರ್) ಬಹಳ ಜನಪ್ರಿಯವಾಗಿ ಬೆರಳಚ್ಚು ಯಂತ್ರವನ್ನು ಬಹುವಾಗಿ ಸ್ಥಾನಪಲ್ಲಟಗೊಳಿಸಿದೆ. ಪಿ.ಸಿ.ಗಳಲ್ಲಿ ವರ್ಡ್ ಪ್ರಾಸೆಸರ್ ಎಂಬ ಲಿಪಿ ತಂತ್ರಾಂಶವನ್ನು ಒದಗಿಸಿರುತ್ತಾರೆ. ಈ ತಂತ್ರಾಂಶವು, ಸಹಾಯದಿಂದ ಗಣಕಯಂತ್ರವನ್ನು ಬಳಸುವವರು ತಮಗೆ ಬೇಕಾದ ಬರೆವಣಿಗೆಯ ಆವಶ್ಯಕತೆಗಳನ್ನು ತಾವೇ, ಕಸಬುದಾರ ಬೆರಳಚ್ಚುಗಾರರ ಸಹಾಯವಿಲ್ಲದೇ, ಪುರೈಸಿಕೊಳ್ಳುವುದು ಸಾಧ್ಯ. ಈ ತಂತ್ರಾಂಶವು, ಎಲ್ಲ ಭಾಷೆಗಳಲ್ಲೂ ಲಭ್ಯವಾಗಿ, ಆ ಭಾಷೆಗಳ ಕೀಲಿಮಣೆಗಳನ್ನು ಒದಗಿಸುವದರಿಂದ, ಗಣಕ ಸಾಕ್ಷರತೆ ಹೊಂದಿದ ಎಲ್ಲರೂ, ಸೂಕ್ತ ತಂತ್ರಾಂಶದ ಸಹಾಯದಿಂದ ತಮ್ಮ ವ್ಯವಹಾರದ ಬರೆವಣಿಗೆಗಳನ್ನು ಮಾಡಿಕೊಳ್ಳ ಬಹುದು ಅಥವಾ ಕಸಬುದಾರರ ಮುಖಾಂತರವೂ ಗಣಕಗಳಿಂದ ಮಾಡಿಸಿಕೊಳ್ಳಬಹುದು. ಬೆರಳಚ್ಚು ಯಂತ್ರಗಳು ಈ ಕಾರಣದಿಂದಾಗಿ ಕ್ರಮೇಣ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತಿವೆ.

ನಕಲುಯಂತ್ರ[ಬದಲಾಯಿಸಿ]

ಕಾರ್ಬನ್ ಹಾಳೆಗಳ ನಡುಜೋಡಣೆಯಿಂದ ಬೆರಳಚ್ಚು ಯಂತ್ರವೇ ನಕಲುಯಂತ್ರವಾಗಬಹುದು. ಆದರೆ ಈ ವಿಧಾನದಿಂದ ಪಡೆಯಬಹುದಾದ ಪ್ರತಿಗಳ ಸಂಖ್ಯೆ ಅಮಿತವಲ್ಲ. ಮಾನವಚಾಲಿತ ಸಾಧಾರಣ ಬೆರಳಚ್ಚು ಯಂತ್ರದಿಂದ ಸು. 8 ಪ್ರತಿಗಳನ್ನು ಪಡೆಯಬಹುದು. ವಿದ್ಯುತ್ಚಾಲಿತವಾದರೆ 18 ಪ್ರತಿಗಳವರೆಗೂ ಪಡೆಯುವುದು ಸಾಧ್ಯ. ಇದಕ್ಕಿಂತ ಹೆಚ್ಚಿನ ಪ್ರತಿಗಳು ಬೇಕಾದರೆ ಪ್ರತ್ಯೇಕವಾದ ನಕಲುಯಂತ್ರವನ್ನೇ ಬಳಸಬೇಕು. ಇದರಲ್ಲಿ ನಾನಾ ವಿಧಗಳುಂಟು. ಆರಂಭಿಕ ಪ್ರತಿಯೊಂದನ್ನು (ಮಾಸ್ಟರ್ ಕಾಪಿ) ಸಿದ್ಧಪಡಿಸಿಕೊಂಡು ಇದರಿಂದ ನಕಲುಗಳನ್ನು ಪಡೆಯುವುದು ಎಲ್ಲ ಯಂತ್ರಗಳ ಸಾಮಾನ್ಯ ವಿಧಾನ.

ಕೊರೆಯಚ್ಚಿನಿಂದ (ಸ್ಟೆನ್ಸಿಲ್) ನಕಲು ತೆಗೆಯುವ ವಿಧಾನ[ಬದಲಾಯಿಸಿ]

ಕೊರೆಯಚ್ಚಿನಿಂದ (ಸ್ಟೆನ್ಸಿಲ್) ನಕಲು ತೆಗೆಯುವ ವಿಧಾನ ಸಾಮಾನ್ಯವಾಗಿ ಬಳಕೆಯಲ್ಲಿದೆ. ರಿಬ್ಬನ್ ಸಹಾಯವಿಲ್ಲದೆ ಬೆರಳಚ್ಚುಯಂತ್ರದಿಂದ ಕೊರೆಯಚ್ಚು ಹಾಳೆಯ ಮೇಲೆ ಅಕ್ಷರಗಳ ಆಕಾರದಲ್ಲಿ ರಂಧ್ರಗಳು ಸಂಭವಿಸುತ್ತವೆ. ಈ ಹಾಳೆಯ ಮೇಲೆ ಕೊರೆಲೇಖನಿಯಿಂದ ಬರೆಯುವುದೂ ಸಾಧ್ಯ. ಟೊಳ್ಳಾದ ತಿರುಗುವ ಉರುಳೆಯ ಹೊರಮೈಗೆ ದ್ರವರೂಪೀಮಸಿ ಹಚ್ಚಿ, ಅದಕ್ಕೆ ಈ ಕೊರೆಯಚ್ಚು ಹಾಳೆಯನ್ನು ಸಿಕ್ಕಿಸಬೇಕು. ಉರುಳೆಯನ್ನು ತಿರುಗಿಸಿದಾಗ ಕೊರೆಯಚ್ಚು ಹಾಳೆಯಲ್ಲಿಯ ರಂಧ್ರದ ಮೂಲಕ ಶಾಯಿ ಹೊರಕ್ಕೆ ಹಾಯುತ್ತದೆ. ಅದೇ ಕಾಲಕ್ಕೆ ಖಾಲಿ ಹಾಳೆಗಳನ್ನು ಕೊರೆಯಚ್ಚಿನ ಹಾಳೆಗೆ ಒತ್ತಿದಂತೆ ಉರುಳೆಯ ಅಡಿಯಲ್ಲಿ ಹಾಯ್ದು ಸಾಗುವಂತೆ ಮಾಡುವುದರಿಂದ ರಂಧ್ರಗಳ ಆಕಾರದಲ್ಲಿ ಕಾಗದದ ಮೇಲೆ ಅಕ್ಷರ ಅಚ್ಚಾಗುತ್ತದೆ. ಈ ವಿಧಾನದಿಂದ ಸು. 5,000 ಪ್ರತಿಗಳನ್ನು ತೆಗೆಯಬಹುದು. ಕೊರೆಯಚ್ಚು ಹಾಳೆಗಳನ್ನು ಇಟ್ಟಿದ್ದು ಆವಶ್ಯವಿದ್ದಾಗ ನಕಲುಗಳನ್ನು ಪಡೆಯಬಹುದು.

ನೂರಚ್ಚು ನಕಲುಯಂತ್ರವನ್ನೂ (ಹೆಕ್ಟೋಗ್ರಾಫ್)[ಬದಲಾಯಿಸಿ]

ಇದಲ್ಲದೆ ನೂರಚ್ಚು ನಕಲುಯಂತ್ರವನ್ನೂ (ಹೆಕ್ಟೋಗ್ರಾಫ್) ಬಳಸುವುದುಂಟು. ಇದರಲ್ಲಿ ಎರಡು ವಿಧ: ವಿಶಿಷ್ಟವಾದ ಕಾಗದದ ಮೇಲೆ ವಿಶೇಷವಾದ ಮಸಿಯಿಂದ ಆರಂಭಿಕ ಪ್ರತಿಯನ್ನು ತಯಾರಿಸಲಾಗುವುದು. ಇದನ್ನು ಇನ್ನೊಂದು ವಿಶಿಷ್ಟ ಕಾಗದಕ್ಕೆ ಒತ್ತಿದಾಗ ಅದರಲ್ಲಿ ಇದರ ತಿರಗಮುರುಗ ಪ್ರತಿ ದೊರಕುತ್ತದೆ. ಇದರ ಮೇಲೆ ಕಾಗದದ ಹಾಳೆಗಳನ್ನು ಒತ್ತಿ ತದ್ವತ್ ನಕಲುಗಳನ್ನು ಪಡೆಯಬಹುದು. ಇದಕ್ಕೆ ವಿವಿಧ ವರ್ಣಗಳ ಮಸಿ ಬಳಸುವುದೂ ಸಾಧ್ಯ. ಇದರಿಂದ 200ರ ವರೆಗೂ ಪ್ರತಿಗಳನ್ನು (ಸಾಮಾನ್ಯವಾಗಿ) ಪಡೆಯುವುದು ಸಾಧ್ಯ.ರಾಸಾಯನಿಕ ಪ್ರಯೋಗದಿಂದ ಲೋಹದ ಅಥವಾ ವಿಶಿಷ್ಟ ಕಾಗದದ ಹಾಳೆಯ ಮೇಲೆ ಆರಂಭಿಕ ಪ್ರತಿ ರಚಿಸಿ ಅದನ್ನು ರಬ್ಬರಿನ ಸಮತಲ ಪ್ರದೇಶದ ಅಥವಾ ಉರುಳೆಯ ಮೇಲೆ ತಕ್ಕಂತೆ ಒತ್ತಿ, ಪ್ರತಿಗಳನ್ನು ಎತ್ತಿ ತೆಗೆಯುವ ಆಫ್ಸೆಟ್ ನಕಲು ವಿಧಾನ ದೊಡ್ಡ ಸಂಸ್ಥೆಗಳಲ್ಲಿ ಬಳಕೆಯಲ್ಲಿದೆ. ಇದಲ್ಲದೆ, ಮುದ್ರಣಾಲಯದ ಮೊಳೆ ಜೋಡಿಸುವ ಯಂತ್ರದ ಮಾದರಿಯ ಯಂತ್ರದಿಂದ ಉಬ್ಬು ಚಿತ್ರಣ (ರೇಸ್ಟ್‌ ಇಮೇಜ್) ವಿಧಾನದಲ್ಲಿ ಆರಂಭಿಕಪ್ರತಿ ತಯಾರಿಸಿ ನಕಲು ಪಡೆಯುವುದೂ ಉಂಟು.

ಛಾಯಾನಕಲು ಯಂತ್ರ[ಬದಲಾಯಿಸಿ]

ಈಚೆಗೆ ನಾನಾ ಬಗೆಯ ಛಾಯಾನಕಲು ಯಂತ್ರಗಳನ್ನು ಮುಂದುವರಿದ ದೇಶಗಳಲ್ಲಿ ವಿಶೇಷವಾಗಿ ಬಳಸಲಾಗುತ್ತಿದೆ. “ಕ್ಸೇರಾಕ್ಸ್‌” ಎಂಬ ಅಮೆರಿಕದ ಸಂಸ್ಥೆ ನಕಲು ಮಾಡುವ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದುದರಿಂದ, ಈಗ ಮೇಲೆ ವಿವರಿಸಿದ ತಂತ್ರಜ್ಞಾನದ ಬಳಕೆ ಬಹುಮಟ್ಟಿಗೆ ಕಣ್ಮರೆಯಾಗಿ ಕ್ಸೇರಾಕ್ಸ್‌ ವಿಧಾನದ ನಕಲುಪ್ರತಿಗಳೇ ಪ್ರಮುಖವಾಗಿವೆ. ಛಾಯಾನಕಲು ಯಂತ್ರದಲ್ಲಿ ಒಂದು ತಿರುಗುವ ವಿಶಿಷ್ಟರೀತಿಯ ಪೀಪಾಯಿ (ಡ್ರಮ್) ಇರುತ್ತದೆ. ಯಂತ್ರದ ಮೇಲೆ ಪಾರದರ್ಶಕ ಗಾಜಿನ ತಟ್ಟೆಯಿರುತ್ತದೆ. ಈ ಗಾಜಿನ ಮೇಲೆ ನಾವು ನಕಲು ಪಡೆಯಬೇಕೆಂದಿರುವ ಮೂಲ ಪ್ರತಿಯನ್ನು ಇಟ್ಟು, ಯಂತ್ರದ ವಿದ್ಯುದ್ದೀಪವನ್ನು ಬೆಳಗಿಸಿದಾಗ,ಪೀಪಾಯಿಯು ಎಲೆಕ್ಟ್ರೋಸ್ಟಾಟಿಕ್ ಆಗಿ ಛಾರ್ಜ್ ಆಗುತ್ತದೆ. ಯಂತ್ರದ ಒಳಗೆ “ಟೋನರ್” ಪುಡಿಯು ಇರುತ್ತದೆ. ಮೂಲ ಪ್ರತಿಯಲ್ಲಿ ಇರುವ ಬರೆವಣಿಗೆ ಅಥವಾ ಚಿತ್ರ ಕಪ್ಪಾಗಿದ್ದು, ದೀಪದ ಬೆಳಕನ್ನು ತಡೆಹಿಡಿಯುತ್ತದೆ. ಇದು ಛಾರ್ಜ್ ಆದ ಪೀಪಾಯಿಯ ಮೇಲೆ ಮೂಲಪ್ರತಿಯ ಮೇಲಿರುವ ಬರೆವಣಿಗೆ ಅಥವ ಚಿತ್ರದ ಪ್ರತಿಕೃತಿಯನ್ನು ಪೀಪಾಯಿಯ ಮೇಲೆ ನಿರ್ಮಿಸುತ್ತದೆ. ಈಗ ನಕಲಿಗಾಗಿ ಯಂತ್ರದಲ್ಲಿ ಹಾಯಿಸುವ ಕಾಗದವು ಛಾರ್ಜ್ ಆಗಿ ಪೀಪಾಯಿನಿಂದ ಟೋನರ್ ಪುಡಿಯನ್ನು ತನ್ನ ಮೇಲೆ ಎಳೆದುಕೊಳ್ಳುತ್ತದೆ. ಶಾಖಕ್ಕೆ ಕರಗುವ ಟೋನರ್ ಪುಡಿಯು, ಕಾಗದ ಡ್ರಮ್ ಬಿಡುವಾಗ ಅದಕ್ಕೆ ಅಂಟಿಕೊಳ್ಳುತ್ತದೆ. ನಕಲು ಪ್ರತಿ ಹೊರಬರುತ್ತದೆ.

ಉಕ್ತಲೇಖನ ಪ್ರತಿವಾಣಿ ಯಂತ್ರಗಳು[ಬದಲಾಯಿಸಿ]

ಬೆರಳಚ್ಚು ಮಾಡಬೇಕಾದ ವಿಷಯವನ್ನು ಅಥವಾ ಪತ್ರವನ್ನು ಉಕ್ತಲೇಖನಯಂತ್ರದ ಮೂಲಕ ಧ್ವನಿಮುದ್ರಿಸಿಟ್ಟು ಯಥಾಕ್ರಮದಲ್ಲಿ ಇದನ್ನು ಸಂಬಂಧಪಟ್ಟು ಗುಮಾಸ್ತರಿಗೆ ಕಳಿಸಿ ಪ್ರತಿ ರಚಿಸುವ ವಿಧಾನವನ್ನು ಅನೇಕ ಕಚೇರಿಗಳಲ್ಲಿ ಅನುಸರಿಸಲಾಗುತ್ತಿದೆ. ಮುದ್ರಿತ ಧ್ವನಿಯ ತಟ್ಟೆ, ಟೇಪು ಅಥವಾ ಉರುಳೆಯನ್ನು ಪ್ರತಿವಾಣಿಯಂತ್ರಕ್ಕೆ ಜೋಡಿಸಿ ಅದರಿಂದ ಧ್ವನಿಯನ್ನು ಕೇಳಿ ಅಂತೆಯೇ ಬೆರಳಚ್ಚು ಮಾಡುವುದು ಸಾಧ್ಯ. ಸಂಸ್ಥೆಯ ಅಧಿಕಾರಿ ತನಗೆ ಅನುಕೂಲವಾದಾಗ ಪತ್ರಗಳನ್ನು ಅಥವಾ ಸಂದೇಶಗಳನ್ನು ಈ ರೀತಿ ಮುದ್ರಿಸಿಡುವುದರಿಂದ ಆತನ ಮತ್ತು ಬೆರಳಚ್ಚುಗಾರನ ಸಮಯದಲ್ಲಿ ಎಷ್ಟೋ ಉಳಿತಾಯ ಮಾಡಬಹುದು. ಬೆರಳಚ್ಚುಗಾರ ಮುದ್ರಿತ ಸಾಮಗ್ರಿಯನ್ನು ಬಳಸಿಕೊಂಡಾದ ಮೇಲೆ ಮುದ್ರಣವನ್ನು ಅಳಿಸಿಹಾಕಿ ಮತ್ತೆ ಆ ಟೇಪು, ತಟ್ಟೆ ಅಥವಾ ಉರುಳೆಯನ್ನು ಉಪಯೋಗಿಸಬಹುದು. ಒಂದು ಸಂಸ್ಥೆಯಲ್ಲಿ ಉಕ್ತಲೇಖನ ಯಂತ್ರವನ್ನು ಬಳಸಬೇಕಾದ ಅಧಿಕಾರಿಗಳು ಅನೇಕರಿದ್ದರೆ ಅವರಲ್ಲೊಬ್ಬೊಬ್ಬರಿಗೂ ಪ್ರತ್ಯೇಕವಾದ ಯಂತ್ರ ಬೇಕಾದುದಿಲ್ಲ. ಉಕ್ತಲೇಖನ ಯಂತ್ರದ ಕೇಂದ್ರಕ್ಕೆ ನಾನಾ ಅಧಿಕಾರಿಗಳ ಕೊಠಡಿಗಳಿಂದ ವರ್ಧಕ ವ್ಯವಸ್ಥೆ ಏರ್ಪಡಿಸಬಹುದು. ಇದು ಈಚಿನ ಬೆಳೆವಣಿಗೆ.

ವಾಕ್ಯಭಿಙ್ಞ ತಂತ್ರಾಂಶ[ಬದಲಾಯಿಸಿ]

ಇತ್ತೀಚಿನ ಬೆಳೆವಣಿಗೆಯೆಂದರೆ, ಗಣಕಯಂತ್ರಗಳಲ್ಲಿ, ಮಾತು ಗುರುತಿಸುವ ತಂತ್ರಾಂಶ ಅಥವಾ ‘ವಾಕ್ಯಭಿಙ್ಞ ತಂತ್ರಾಂಶ (ಸ್ಪೀಚ್ ರೆಕಗ್ನಿಷನ್ ಸಾಫ್ಟ್‌ವೇರ್) ಲಭ್ಯವಾಗಿರುತ್ತದೆ. ಇದರ ಮೂಲಕ, ಬಳಕೆದಾರರು, ಗಣಕಯಂತ್ರದಲ್ಲಿ ಇರುವ ಧ್ವನಿವರ್ಧಕಕ್ಕೆ, ತಾವು ಬರೆಯಬೇಕೆಂದಿರುವ ಸಾಮಗ್ರಿಯನ್ನು ಹೇಳಿದರೆ, ಅದು ರೆಕಾರ್ಡ್ ಆಗಿ, ತಂತ್ರಾಂಶದ ಮೂಲಕ, ಬರೆವಣಿಗೆಗೆ ಮಾರ್ಪಟ್ಟು, ಗಣಕದ ಹಾರ್ಡ್ ಡಿಸ್ಕ್‌ನಲ್ಲಿ ಸಂಗ್ರಹಿತವಾಗುತ್ತದೆ. ಇದನ್ನು ಅನಂತರ ಮುದ್ರಕದ ಮುಖಾಂತರ, ಅಚ್ಚಿಗೆ ಇಳಿಸಬಹುದು. ತಂತ್ರಾಂಶ ಸದುಪಯೋಗವಾಗುವ ಮುಂಚೆ, ಬಳಕೆದಾರನು, ತನ್ನ ಮಾತು ಮತ್ತು ಧ್ವನಿಗಳನ್ನು, ತಂತ್ರಾಂಶ ಸರಿಯಾಗಿ ಗ್ರಹಿಸುವಂತೆ, ತರಬೇತಿಯನ್ನು ಪಡೆಯಬೇಕು. ಪ್ರತಿಯೊಬ್ಬ ವ್ಯಕ್ತಿಗೂ ಅವನ ಸ್ವಂತಿಕೆಯ ಉಚ್ಚಾರವಿರುತ್ತದೆ. ಮೇಲೆ ಹೇಳಿದ ತಂತ್ರಾಂಶವನ್ನು ಬಳಸಿ ಬಳಕೆದಾರನು ತನ್ನ ವಾಕ್ಕಿಗೆ ಸರಿಹೊಂದುವಂತೆ ಮಾಡಬಹುದು.

ವಿಳಾಸಮುದ್ರಣ ಯಂತ್ರಗಳು[ಬದಲಾಯಿಸಿ]

ವಿಮಾಸಂಸ್ಥೆ, ಪತ್ರಿಕಾಸಂಸ್ಥೆ ಮುಂತಾದವು ತಮ್ಮ ಗ್ರಾಹಕರಿಗೆ ಪದೇ ಪದೇ ಪತ್ರಗಳನ್ನು ಕಳುಹಿಸುತ್ತಿರಬೇಕಾಗುತ್ತದೆ. ಇವಕ್ಕೆ ವಿಳಾಸ ಮುದ್ರಣಯಂತ್ರ ಬಹಳ ಉಪಯುಕ್ತ. ಪದಾರ್ಥದಿಂದ ಅಚ್ಚಿಸಿ ಕೊಂಡ ಆರಂಭಿಕ ಕಾರ್ಡುಗಳನ್ನೊ ಕೊರೆಯಚ್ಚು ಕಾರ್ಡುಗಳನ್ನೊ ಉಬ್ಬಕ್ಷರದ ಲೋಹದ ತಗಡುಗಳನ್ನೊ ತಯಾರಿಸಿಕೊಂಡು ಇವನ್ನು ವಿಶಿಷ್ಟ ಯಂತ್ರವೊಂದಕ್ಕೆ ಜೋಡಿಸಿ ಕಾಗದದ ಮೇಲೋ ಲಕೋಟೆಯ ಮೇಲೋ ಇವನ್ನು ಅಚ್ಚಿಸಿಕೊಳ್ಳಬಹುದು. ಅಗತ್ಯಕ್ಕೆ ತಕ್ಕಂತೆ ಈ ವಿಧಾನದಲ್ಲಿ ನಾನಾ ವೈಶಿಷ್ಟ್ಯಗಳನ್ನು ಸಾಧಿಸಿಕೊಳ್ಳಬಹುದಾಗಿದೆ. ಸ್ವಕೀಯ ಗಣಕಗಳಲ್ಲಿ ಪದಸಂಸ್ಕಾರ(ವರ್ಡ್ ಪ್ರಾಸೆಸರ್) ತಂತ್ರಾಂಶವು ವಿಳಾಸ ಮುದ್ರಣ ಸೌಲಭ್ಯವನ್ನೂ ಒದಗಿಸುತ್ತದೆ. ಮೋಸದಿಂದ ಬದಲಾವಣೆ ಮಾಡುವುದು ಸಾಧ್ಯವಾಗದಂತೆ ಚೆಕ್ಕುಲೇಖನ ಯಂತ್ರಗಳೂ ಲಕೋಟೆಗಳನ್ನು ಅಂಟಿಸಿ ಅಂಚೆಹಾಸಲು ಹಚ್ಚುವ ಯಂತ್ರಗಳೂ ಆಧುನಿಕ ಕಚೇರಿಗಳಲ್ಲಿ ಬಳಕೆಯಲ್ಲಿರುವ ಇನ್ನೆರಡು ಮುಖ್ಯ ಉಪಕರಣಗಳು.

ಗಣನ ಮತ್ತು ಲೇಖಾಯಂತ್ರಗಳು[ಬದಲಾಯಿಸಿ]

ಲೆಕ್ಕಮಾಡುವ ಕಷ್ಟವನ್ನು ಕಳೆದುಕೊಳ್ಳುವುದೂ ಮಾನವನ ಅತ್ಯಂತ ಪ್ರಾಚೀನ ಕನಸುಗಳಲ್ಲೆÆಂದು. ಮಣಿ ಚೌಕಟ್ಟು ನಮ್ಮ ಅತ್ಯಂತ ಪ್ರಾಚೀನ ಗಣನೋಪಕರಣ, ಲೆಕ್ಕಮಾಡುವ ಯಂತ್ರಗಳನ್ನು ರಚಿಸುವ ಆಸಕ್ತಿ ವಿಶೇಷವಾಗಿ ಹಬ್ಬಿದ್ದು 17ನೆಯ ಶತಮಾನದಲ್ಲಿ, ವಿಜ್ಞಾನಕ್ಷೇತ್ರದಲ್ಲಿ ಕಂಡುಹಿಡಿಯಲಾದ ನಾನಾ ಸಿದ್ಧಾಂತಗಳನ್ನು ಪ್ರಯೋಗಿಸಲು ಗುಣಿಸುವ ವಿನೂತನ ವಿಧಾನಗಳನ್ನಳವಡಿಸಿಕೊಳ್ಳುವುದು ಅವಶ್ಯವಾಯಿತು. ಜಾನ್ ನೇಪಿಯರ್ ಲಾಗರಿದಮನ್ನು ಕಂಡುಹಿಡಿದ. ಇದನ್ನು ಯಂತ್ರೀಕರಿಸಲು ಯತ್ನ ನಡೆಸಿದಾಗ ಅನೇಕ ಗಣನಯಂತ್ರಗಳು ಉದ್ಭವವಾದುವು. 1642ರಲ್ಲಿ ಬ್ಲೇಸ್ ಪ್ಯಾಸ್ಕಲ್ ಕೂಡುವ ಯಂತ್ರವನ್ನು ಕಂಡುಹಿಡಿದ. ಕೂಡುವ, ಕಳೆಯುವ, ಗುಣಿಸುವ, ಭಾಗಿಸುವ ವ್ಯಾಪಾರಗಳನ್ನು ಮಾಡಬಲ್ಲ ತಃಖ್ತಾಗಣನಯಂತ್ರಗಳು ಸೃಷ್ಟಿಯಾದದ್ದು 19ನೆಯ ಶತಮಾನದ ಅಂತ್ಯದಲ್ಲಿ. ಅತ್ಯಂತ ಸಂಕೀರ್ಣವಾದ ಗಣಕ ಕಾರ್ಯವನ್ನೆಲ್ಲ ಮಾಡಬಲ್ಲ ಎಲೆಕ್ಟ್ರಾನಿಕ್-ಯಾಂತ್ರಿಕ ಗಣಕಗಳು ಇಪ್ಪತ್ತನೆಯ ಶತಮಾನದ ನಡುಗಾಲದ ಅದ್ಭುತ ಸಾಧನಗಳು (ನೋಡಿ- ಗಣಕಯಂತ್ರ).

ದಾಖಲೆಯಂತ್ರ ,ಲೇಖಾಯಂತ್ರ ವರ್ಗಕಾರಕ ಮತ್ತು ಯಾದಿರಚಕ ಯಂತ್ರ[ಬದಲಾಯಿಸಿ]

ಆಧುನಿಕ ಕಚೇರಿಗಳಲ್ಲಿ ಸಾಮಾನ್ಯವಾಗಿ ಬಳಕೆಯಲ್ಲಿರುವವೆಂದರೆ ನಗದು ದಾಖಲೆಯಂತ್ರ (ಕ್ಯಾಷ್ ರಿಜಿಸ್ಟರ್), ಲೇಖಾಯಂತ್ರ (ಅಕೌಂಟಿಂಗ್ ಮಷೀನ್), ವರ್ಗಕಾರಕ ಮತ್ತು ಯಾದಿರಚಕ ಯಂತ್ರ (ಕ್ಲಾಸಿಫೈಯಿಂಗ್ ಅಂಡ್ ಟ್ಯಾಬ್ಯುಲೇಟಿಂಗ್ ಮಷೀನ್) ಮುಂತಾದವು, ನಗದು ದಾಖಲೆಯಂತ್ರ ವರ್ತಕನಿಗೆ ಬಹಳಮಟ್ಟಿಗೆ ಸಹಾಯಕವಾಗಿದೆ. ಪ್ರತಿಯೊಂದು ವ್ಯವಹಾರವನ್ನೂ ಅದು ದಾಖಲುಮಾಡುತ್ತದೆ. ಪ್ರಮಾದ, ದ್ರೋಹ ಇವುಗಳನ್ನು ತಪ್ಪಿಸುತ್ತದೆ. ವ್ಯವಹಾರದ ಮೊಬಲಗನ್ನು ನಮೂದಿಸುವುದಲ್ಲದೆ ವಿವಿಧ ವರ್ಗಗಳಲ್ಲಿ ಆದ ಮಾರಾಟದ ಮೊತ್ತಗಳನ್ನೂ ಉಲ್ಲೇಖಿಸುತ್ತದೆ. ನಗದುವ್ಯವಹಾರದ ರಸೀದಿಯನ್ನೂ ಇದು ಮುದ್ರ್ರಿಸಬಲ್ಲುದು. ಅಲ್ಲದೆ ಪ್ರತಿಯೊಂದು ವ್ಯವಹಾರದ ಸಂಪುರ್ಣ ದಾಖಲೆಯನ್ನಿಟ್ಟು ಲೆಕ್ಕಶೋಧಕನಿಗಾಗಿ ಪ್ರತ್ಯೇಕವೂ ಸಮಗ್ರವೂ ಆದ ಮಾಹಿತಿಯನ್ನು ಇಡುತ್ತದೆ.ಲೇಖಾಯಂತ್ರದ್ದು ಬಲು ಸಂಕೀರ್ಣ ರಚನೆ. ಗಣಕಯಂತ್ರದ ಸೌಲಭ್ಯಗಳ ಜೊತೆಗೆ ಲೆಕ್ಕ ಬರೆಯುವ ಕೆಲಸವನ್ನೂ ಇದು ಮಾಡುತ್ತದೆ. ಬಿಕರಿಪಟ್ಟಿ ತಯಾರಿಕೆಯ ಜೊತೆಗೆ ಖಾತೆ ಕಾರ್ಡು ಮತ್ತು ರೋಜು ಲೇಖನಗಳೆರಡನ್ನೂ ಏಕಕಾಲದಲ್ಲಿ ಮಾಡುತ್ತದೆ. ಬ್ಯಾಂಕುಗಳಲ್ಲಿ ಬಳಸಲಾಗುವ ಯಂತ್ರಗಳು ಗ್ರಾಹಕರ ಪಾಸ್ಪುಸ್ತಕಗಳನ್ನು ಅಥವಾ ತಃಖ್ತೆಗಳನ್ನು ಮತ್ತು ಲೆಕ್ಕಶೋಧನಪ್ರತಿಯನ್ನು ತಯಾರಿಸುವುದಲ್ಲದೆ ಶಿಲ್ಕುಗಳನ್ನೂ ಲೆಕ್ಕಹಾಕಿ ತೋರಿಸುತ್ತದೆ.ಸಂಗ್ರಹಿಸಲಾದ ಅಂಕಿಗಳನ್ನೂ ವಿವರಗಳನ್ನೂ ಆವಶ್ಯಕತೆಗೆ ಅನುಗುಣವಾಗಿ ವರ್ಗೀಕರಿಸಿ ತಾಳೆನೋಡಿ ವರದಿ ತಯಾರಿಸುವುದೇ ಮುಂತಾದ ನಾನಾ ಯಂತ್ರಗಳು ಬೃಹತ್ ಆಧುನಿಕ ಕಚೇರಿಗಳಿಗೆ ಬಲು ಉಪಯುಕ್ತವಾಗಿವೆ. ಮೂಲಸಾಮಗ್ರಿಯನ್ನೊದಗಿಸಿ, ಮಾಡಬೇಕಾದ ಕೆಲಸವನ್ನು ಸೂಚಿಸಿಕೊಟ್ಟರೆ ಸಾಕು, ಉದ್ದೇಶಿತ ಪರಿಣಾಮ ನೀಡುವ ಸ್ವಯಂಚಲೀ ಯಂತ್ರಗಳಿವು. ಚಿಲ್ಲರೆ ಎಣಿಸುವ, ಕಾಗದ ಸುತ್ತುವ, ಕಚೇರಿಯ ಸಿಬ್ಬಂದಿಯವರು ತಂತಮ್ಮ ಕೋಣೆಗಳಿಂದಲೇ ಪರಸ್ಪರವಾಗಿ ಸಂಭಾಷಿಸುವ, ಕಾಗದ ಕತ್ತರಿಸುವ, ರಂಧ್ರ ಕೊರೆಯುವ, ರಟ್ಟುಕಟ್ಟುವ, ಮಡಿಸುವ, ಲಕೋಟೆ ತೆರೆಯುವ ದಿನವಹಿ ಸಂಭವಿಸುವಂಥ ಘಟನಾವಳಿಗಳ ಸಮಯಗಳನ್ನು ಗುರುತಿಸಿಡುವ-ಹೀಗೆ ನಾನಾ ಬಗೆಯ ಯಂತ್ರಗಳನ್ನು ಆಧುನಿಕ ಕಚೇರಿಯ ಉಪಕರಣಗಳ ಪಟ್ಟಿಯಲ್ಲಿ ಸೇರಿಸಬಹುದಾಗಿದೆ.

ಉಲ್ಲೇಖಗಳು[ಬದಲಾಯಿಸಿ]