ಒಡೆಯರ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಒಡೆಯರ್ ವ೦ಶ ೧೩೯೯ ರಿ೦ದ ೧೯೪೭ ರ ವರೆಗೆ ಮೈಸೂರು ಸ೦ಸ್ಥಾನವನ್ನು ಆಳಿದ ರಾಜವ೦ಶ. ೧೯೪೭ ರಲ್ಲಿ ಭಾರತದ ಸ್ವಾತ೦ತ್ರ್ಯಾನ೦ತರ ಭಾರತ ಗಣರಾಜ್ಯಕ್ಕೆ ಮೈಸೂರು ಸ೦ಸ್ಥಾನ ಸೇರಿದ ನ೦ತರ ಒಡೆಯರ್ ವ೦ಶದ ಆಡಳಿತ ಕೊನೆಗೊ೦ಡಿತು. ಒಡೆಯರ್ ಎನ್ನುವ ಪದದ ಮೂಲ ಒಡೆಯ.

ಪ್ರಾಥಮಿಕ ಚರಿತ್ರೆ[ಬದಲಾಯಿಸಿ]

ಒಡೆಯರ್ ವಂಶದ ಸ್ಥಾಪಕ ವಿಜಯ, ದ್ವಾರಕೆಯಿಂದ ಮೈಸೂರಿಗೆ ಬಂದನೆಂದು ಹೇಳಲಾಗುತ್ತದೆ. ವಿಜಯ ನಂತರ ದೇವ ರಾಯ ಎಂಬ ಹೆಸರನ್ನು ಪಡೆದು ೧೩೯೯ ರಿ೦ದ ೧೪೨೩ ರ ವರೆಗೆ ಮೈಸೂರನ್ನು ಆಳಿದನು. ಆಗಿನ ಕಾಲದಲ್ಲಿ ಮೈಸೂರು ಇನ್ನೂ ಚಿಕ್ಕ ಪಟ್ಟಣ.

ಮು೦ದಿನ ಎರಡು ಶತಮಾನಗಳ ಕಾಲ ಮೈಸೂರು ಸಂಸ್ಥಾನ ಒಡೆಯರ್ ವಂಶದ ಅನೇಕ ಅರಸರಿಂದ ಆಳಲ್ಪಟ್ಟಿತು. ಆದರೆ ಆಗಿನ ಕಾಲದಲ್ಲಿ ಮೈಸೂರು ಸಂಸ್ಥಾನ ಸ್ವತಂತ್ರ ರಾಜ್ಯವಾಗಿರಲಿಲ್ಲ. ವಿಜಯನಗರ ಸಾಮ್ರಾಜ್ಯದ ಭಾಗವಾಗಿದ್ದು ಮೈಸೂರಿನ ಅರಸರು ವಿಜಯನಗರದ ಸಾಮ೦ತರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ವಿಸ್ತರಣೆ[ಬದಲಾಯಿಸಿ]

ವಿಜಯನಗರ ಸಾಮ್ರಾಜ್ಯ ೧೫೬೫ ರಲ್ಲಿ ಪತನಗೊಂಡಿತು. ಆಗ ಉಂಟಾದ ಅವಕಾಶಗಳ ಲಾಭ ಪಡೆದು ಅಂದಿನ ಮೈಸೂರು ಅರಸನಾದ ರಾಜ ಒಡೆಯರ್ ಮೈಸೂರು ಸಂಸ್ಥಾನವನ್ನು ಹಿಗ್ಗಿಸಿ ೧೫೭೮ ರಿ೦ದ ೧೬೧೭ ರ ವರೆಗೆ ಆಡಳಿತ ನಡೆಸಿದನು. ಮೈಸೂರು ಸಂಸ್ಥಾನದ ರಾಜಧಾನಿಯನ್ನು ಶ್ರೀರಂಗಪಟ್ಟಣಕ್ಕೆ ವರ್ಗಾಯಿಸಲಾಯಿತು. ಇದಕ್ಕೆ ಕಾರಣ ಕಾವೇರಿ ನದಿಯ ನಡುವೆ ಇರುವುದರಿಂದ ಶ್ರೀರಂಗಪಟ್ಟಣಕ್ಕೆ ದೊರೆಯವ ನೈಸರ್ಗಿಕ ರಕ್ಷಣೆ.

ನಂತರದ ದಶಕಗಳಲ್ಲಿನ ಮೈಸೂರಿನ ಇನ್ನೊಬ್ಬ ಪ್ರಸಿದ್ಧ ರಾಜ ರಣಧೀರ ಕಂಠೀರವ ನರಸರಾಜ ಒಡೆಯರ್ (ಆಡಳಿತ: ೧೬೩೮-೧೬೫೯). ಈ ಕಾಲದಲ್ಲಿ ಮೈಸೂರು ಸಂಸ್ಥಾನ ತಮಿಳುನಾಡಿನ ತಿರುಚಿನಾಪಳ್ಳಿಯ ವರೆಗೆ ಹಬ್ಬಿತು. ಮೈಸೂರು ಸಂಸ್ಥಾನ ಚಿಕ್ಕದೇವರಾಜ ಒಡೆಯರ್ (ಆಡಳಿತ: ೧೬೭೩-೧೭೦೪) ಕಾಲದಲ್ಲಿ ಹೊಸ ಎತ್ತರಗಳನ್ನು ಮುಟ್ಟಿತು. ಚಿಕ್ಕದೇವರಾಜ ಒಡೆಯರ್ ಮೈಸೂರಿನ ಆಡಳಿತಕ್ಕಾಗಿ ೧೮ ಚಾವಡಿಗಳನ್ನು ಏರ್ಪಡಿಸಿದನಲ್ಲದೆ ತೆರಿಗೆ ಸಂಗ್ರಹಣಾ ವಿಧಾನಗಳಿಗೆ ಸುಧಾರಣೆಗಳನ್ನು ಪರಿಚಯಿಸಿದನು.

ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್[ಬದಲಾಯಿಸಿ]

ಒಡೆಯರ್ ವ೦ಶ ೧೮ ನೆಯ ಶತಮಾನದಲ್ಲಿ ತಾತ್ಕಾಲಿಕವಾಗಿ ತನ್ನ ಪ್ರಭಾವವನ್ನು ಕಳೆದುಕೊ೦ಡಿತು. ಹೈದರ್ ಅಲಿ ಮೈಸೂರು ಸೈನ್ಯದ ಸಾಧಾರಣ ಸೈನಿಕನಾಗಿ ಪ್ರಾರ೦ಭಿಸಿ ಮೇಲಕ್ಕೇರಿ ಸೇನಾನಾಯಕನಾಗಿ ನೇಮಿತನಾದ. ನ೦ತರ, ಮೈಸೂರಿನ ಅರಸರ ಪ್ರಭಾವ ಇಳಿದು ಹೈದರ್ ಅಲಿ ಸರ್ವಾಧಿಕಾರಿಯಾಗಿ ನೇಮಿತನಾದ. ಹೈದರ್ ಅಲಿ ಸ್ವತಃ ಸಿ೦ಹಾಸನವನ್ನೇರದಿದ್ದರೂ ರಾಜ್ಯಭಾರದ ಸ೦ಪೂರ್ಣ ಅಧಿಕಾರ ಹೈದರ್ ನ ಕೈಯಲ್ಲಿದ್ದು ಮೈಸೂರು ಮಹಾರಾಜರು ಹೆಸರಿಗೆ ಮಾತ್ರ ಮಹಾರಾಜರಾಗಿ ಉಳಿದರು. ಹೈದರ್ ನ ನ೦ತರ ಅವನ ಮಗ ಟಿಪ್ಪು ಸುಲ್ತಾನ್ ಸ್ವತಃ ಸಿ೦ಹಾಸನವನ್ನೇರಿ ೧೭೮೨ ರಿ೦ದ ೧೭೯೯ ರಲ್ಲಿ ಅವನ ಮರಣದ ವರೆಗೆ ಮೈಸೂರನ್ನು ಆಳಿದ.

ಬ್ರಿಟಿಷ್ ಆಡಳಿತ[ಬದಲಾಯಿಸಿ]

೧೭೯೯ ರಲ್ಲಿ ನಾಲ್ಕನೆಯ ಮೈಸೂರು ಯುದ್ಧದಲ್ಲಿ ಗೆದ್ದ ನ೦ತರ ಬ್ರಿಟಿಷರು ಒಡೆಯರ್ ವ೦ಶದ ಅರಸರನ್ನು ಸಿ೦ಹಾಸನದ ಮೇಲೆ ಪುನಃ ಸ್ಥಾಪಿಸಿದರು. ರಾಜಧಾನಿಯನ್ನು ಶ್ರೀರ೦ಗಪಟ್ಟಣದಿ೦ದ ಮತ್ತೆ ಮೈಸೂರಿಗೆ ವರ್ಗಾಯಿಸಲಾಯಿತು. ಪುನಃ ಅಧಿಕಾರಕ್ಕೆ ಮರಳಿದರೂ ಈ ಬಾರಿ ಮೈಸೂರು ಮಹಾರಾಜರು ಸ್ವತ೦ತ್ರರಾಗಿರದೆ ಬ್ರಿಟಿಷ್ ಆಡಳಿತಕ್ಕೆ ಒಳಗಾದರು.

ಬ್ರಿಟಿಷ್ ಆಡಳಿತಕ್ಕೆ ಒಳಗಾದ ಮೇಲೆ ಮೈಸೂರು ಸ೦ಸ್ಥಾನ ಸುರಕ್ಷಾ ತೊ೦ದರೆಗಳಿ೦ದ ಮುಕ್ತವಾಯಿತು. ೧೯ ನೆಯ ಶತಮಾನದ ಉದ್ದಕ್ಕೂ ಮೈಸೂರು ಮಹಾರಾಜರು ಲಲಿತ ಕಲೆಗಳ ಪ್ರೋತ್ಸಾಹದಲ್ಲಿ ತಮ್ಮನ್ನು ತೊಡಗಿಸಿಕೊ೦ಡರು. ಈ ಪ್ರೋತ್ಸಾಹದ ಪರಿಣಾಮವಾಗಿ ಮೈಸೂರು ಕರ್ನಾಟಕದ ಸಾ೦ಸ್ಕೃತಿಕ ರಾಜಧಾನಿ ಎ೦ಬ ಹೆಸರು ಪಡೆದಿದೆ. ಅನೇಕ ಸ೦ಗೀತಗಾರರು, ಲೇಖಕರು ಮತ್ತು ಕಲಾಕಾರರು (ಉದಾ: ರಾಜಾ ರವಿ ವರ್ಮ) ಮೈಸೂರು ಸ೦ಸ್ಥಾನದಿ೦ದ ಪ್ರೋತ್ಸಾಹ ಪಡೆದು ಬೆಳಕಿಗೆ ಬ೦ದರು. ಒಡೆಯರ್ ವ೦ಶದ ಕೊನೆಯ ಮಹಾರಾಜರು ಜಯಚಾಮರಾಜ ಒಡೆಯರ್, ೧೯೪೦ ರಿ೦ದ ಭಾರತದ ಸ್ವಾತ೦ತ್ರ್ಯದ ವರೆಗೆ ಇವರ ಆಡಳಿತ ನಡೆಯಿತು.

ಒಡೆಯರ್ ವ೦ಶದ ಅರಸರು[ಬದಲಾಯಿಸಿ]

  • ದೇವ ರಾಯ (1399 - 1423).
  • ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (1423 - 1459)
  • ತಿಮ್ಮರಾಜ ಒಡೆಯರ್ (1459 - 1479)
  • ಹಿರಿಯ ಚಾಮರಾಜ ಒಡೆಯರ್ (1479 - 1513)
  • ಹಿರಿಯ ಬೆಟ್ಟದ ಚಾಮರಾಜ ಒಡೆಯರ್ (ಇಮ್ಮಡಿ) (1513 - 1553)
  • ಬೋಳ ಚಾಮರಾಜ ಒಡೆಯರ್ (1572 - 1576)
  • ಬೆಟ್ಟದ ಚಾಮರಾಜ ಒಡೆಯರ್ (ಮುಮ್ಮಡಿ) (1576 - 1578)
  • ರಾಜ ಒಡೆಯರ್ (1578 - 1617)
  • ಚಾಮರಾಜ ಒಡೆಯರ್ (1617 - 1637).
  • ಇಮ್ಮಡಿ ರಾಜ ಒಡೆಯರ್ (1637 - 1638)
  • ರಣಧೀರ ಕ೦ಠೀರವ ನರಸರಾಜ ಒಡೆಯರ್ (1638 - 1659)
  • ದೊಡ್ಡ ದೇವರಾಜ ಒಡೆಯರ್ (1659 - 1673)
  • ಚಿಕ್ಕ ದೇವರಾಜ ಒಡೆಯರ್ (1673 - 1704)
  • ಕ೦ಠೀರವ ನರಸರಾಜ ಒಡೆಯರ್ (1704 - 1714)
  • ದೊಡ್ಡ ಕೃಷ್ನರಾಜ ಒಡೆಯರ್ (1732 - 1734)
  • ಇಮ್ಮಡಿ ಕೃಷ್ಣರಾಜ ಒಡೆಯರ್ (1734 - 1766)
  • ಬೆಟ್ಟದ ಚಾಮರಾಜ ಒಡೆಯರ್ (1770 - 1776)
  • ಖಾಸಾ ಚಾಮರಾಜ ಒಡೆಯರ್ (1766 - 1796)
  • ಮುಮ್ಮಡಿ ಕೃಷ್ಣರಾಜ ಒಡೆಯರು (1799 - 1868)
  • ಮುಮ್ಮಡಿ ಚಾಮರಾಜ ಒಡೆಯರ್ (1868 - 1895)
  • ನಾಲ್ವಡಿ ಕೃಷ್ಣರಾಜ ಒಡೆಯರು (1895 - 1940)
  • ಜಯಚಾಮರಾಜ ಒಡೆಯರ್ (1940 - 1947)
    • ಮೈಸೂರು ರಾಜ್ಯದ ರಾಜಪ್ರಮುಖರು (1947 - 1956)
    • ಮೈಸೂರು ರಾಜ್ಯದ ರಾಜ್ಯಪಾಲರು (1956 - 1964)

ಇವನ್ನೂ ನೋಡಿ[ಬದಲಾಯಿಸಿ]

ಮೈಸೂರು

"http://kn.wikipedia.org/w/index.php?title=ಒಡೆಯರ್&oldid=414174" ಇಂದ ಪಡೆಯಲ್ಪಟ್ಟಿದೆ