ಐನ್ ಮನೆ
ಕೊಡವರಲ್ಲಿ ಹಿಂದೆ ಅವಿಭಕ್ತ ಕುಟುಂಬ ಪದ್ಧತಿಯಿತ್ತು. ಮುನ್ನೂರು-ನಾನೂರು ಜನರಿದ್ದ ಮನೆತನಗಳಿದ್ದವು. ಪ್ರತಿಯೊಬ್ಬರೂ ಒಂದೇ ದೊಡ್ಡದಾದ ಮನೆಯಲ್ಲಿರುತ್ತಿದ್ದರು. ಕೊಡವ ತಕ್ಕ್ನಲ್ಲಿ ದೊಡ್ಡಮನೆಗೆ ಬಲ್ಯಮನೆ ಎನ್ನುತ್ತಾರೆ. ಹಿರಿಯರು ಕಟ್ಟಿಸಿದ ಈ ಮನೆಗಳಲ್ಲಿ ಹಿರಿಯ ಪುರುಷನೇ ಮುಖ್ಯಸ್ಥ; ಅಯ್ಯ. ಅಯ್ಯನ ಮನೆ ಐನ್ ಮನೆ. ಕೊಡವರಿಗೆ ಕೊಡಗಿನಲ್ಲಿ ಮಾತ್ರ ಐನ್ ಮನೆಗಳಿವೆ. ಸಾಮಾನ್ಯವಾಗಿ ಹಳೆಯ ಎಲ್ಲಾ ಮನೆತನಕ್ಕೂ ಕಡಿಮೆ ಪಕ್ಷ ಒಂದು ಐನ್ ಮನೆಯಿರುತ್ತದೆ.
ಪ್ರಸ್ತಾವನೆ
[ಬದಲಾಯಿಸಿ]ಅವಿಭಕ್ತ ಕುಟುಂಬದಲ್ಲಿದ್ದ ಜನರ ಸಂಖ್ಯೆ ಹೆಚ್ಚಾದಂತೆಲ್ಲಾ ಐನ್ ಮನೆಯ ಸುತ್ತಲಲ್ಲಿ ಸಣ್ಣ ಸಣ್ಣ ವಸತಿಗಳನ್ನು ನಿರ್ಮಿಸಿಕೊಂಡು ಕೆಲವರು ಅಲ್ಲಿರುತ್ತಿದ್ದರೂ, ಅಡುಗೆ, ಊಟ, ಮೊದಲಾದವೂ, ಶುಭಾಶುಭ ಕಾರ್ಯಗಳೂ, ಹಬ್ಬ-ಹುಣ್ಣಿಮೆಗಳೂ ಐನ್ ಮನೆಯಲ್ಲೇ ನಡೆಯುತ್ತಿದ್ದವು. ಆ ಕಾಲದಲ್ಲಿ ಆಸ್ತಿ-ಪಾಸ್ತಿಗಳು ಕುಟುಂಬಕ್ಕೆ ಸೇರಿರುತ್ತಿದ್ದವಲ್ಲದೆ ವ್ಯಕ್ತಿಗಳಿಗಲ್ಲ. ಯಾವ ವ್ಯಕ್ತಿಯ ಏನೇ ಸಂಪಾದನೆಯೂ ಕುಟುಂಬಕ್ಕೇ ಸೇರುತ್ತಿತ್ತು. ಆಂಗ್ಲರ ಆಡಳಿತ ಕೊಡಗಿಗೆ ಬಂದ ಮೇಲೆ ವ್ಯವಸಾಯದ ಅಭಿವೃದ್ಧಿ ಮತ್ತು ವ್ಯಕ್ತಿಗಳ ವಿಕಾಸದ ಸಲುವಾಗಿ ಆಸ್ತಿಗಳನ್ನು ಮನೆತನದ ಸದಸ್ಯರಲ್ಲಿ ಹಂಚಿಕೊಳ್ಳುವದನ್ನು ಪ್ರೋತ್ಸಾಹಿಸಲು ಆರಂಭವಾಯಿತು. ಕಾಲಕ್ರಮೇಣ ಐನ್ ಮನೆಯ ಸುತ್ತಲಿನ ಪ್ರದೇಶವನ್ನು ಬಿಟ್ಟು ದೂರದ ಸ್ಥಳಗಳಲ್ಲಿ ಸ್ಥಿರಾಸ್ತಿಗಳನ್ನು ರೂಪಿಸಿಕೊಳ್ಳುವಾಗ, ಅಲ್ಲೇ ತಮ್ಮ ವಸತಿಗಳನ್ನು ಕಟ್ಟಿಕೊಳ್ಳಲಾರಂಭಿಸಿದರು. ಅವಿಭಕ್ತ ಕುಟುಂಬಗಳು ವಿಭಜನೆಗೊಳ್ಳತೊಡಗಿದವು. ಈಗ ಅವಿಭಕ್ತ ಕುಟುಂಬಗಳೇ ಇಲ್ಲದಂತಾಗಿದೆ.
ಆದರೂ ಹಬ್ಬ, ಹುಣ್ಣಿಮೆಗಳನ್ನು, ಶುಭಾಶುಭ ಕಾರ್ಯಗಳನ್ನು, ಕಾರಣ ಕೊಡುವ ಸಂದರ್ಭಗಳನ್ನು ಮನೆತನದ ಎಲ್ಲಾ ಸದಸ್ಯರೂ ಬಲ್ಯಮನೆಗೇ ಬಂದು ಒಟ್ಟಾಗಿ ಆಚರಿಸುತ್ತಾರೆ. ಮುಖ್ಯವಾಗಿ ಪುತ್ತರಿ ಹಬ್ಬಕ್ಕೆ ಮತ್ತು ಕಾರಣ ಕೊಡುವದಕ್ಕೆ ಎಲ್ಲರೂ ಬಲ್ಯಮನೆಗೆ ಬರಲೇ ಬೇಕು.
ಶಬ್ದಾರ್ಥ ಮತ್ತು ವ್ಯುತ್ಪತ್ತಿ
[ಬದಲಾಯಿಸಿ]‘ಐನ್ ಮನೆ’ಯೆಂಬುದು ‘ಅಯ್ಯನ ಮನೆ’ ಎಂಬುದರ ರೂಪಾಂತರ. ಅಯ್ಯ ಎಂದರೆ ಹಿರಿಯ ಎಂದರ್ಥ. ‘ಆರ್ಯ’ ಎಂಬ ಪದದಿಂದ ಹುಟ್ಟಿದ ಶಬ್ದ ಅಯ್ಯ. ಹೀಗೆ ‘ಶ್ರೇಷ್ಠ’ ಎಂದೂ ಅರ್ಥ. ಆ ಮನೆತನದ ಕಾರಣ ಪುರುಷ ಇಲ್ಲವೆ ಹಿರಿಯ ಕಟ್ಟಿಸಿದ ಮನೆ. ಆತನ ಬಳಿಕ ಅವನ ಪ್ರತೀಕವಿರುವ ಮನೆ.
ಅವಿಭಕ್ತ ಕುಟುಂಬದ ಎಲ್ಲಾ ಸದಸ್ಯರೂ ವಾಸವಿರಲು ಕಟ್ಟಿಸಿದ ದೊಡ್ಡಮನೆ - ‘ಬಲ್ಯಮನೆ’. ಎತ್ತರವಾಗಿ ವಿಶೇಷ ರೂಪ-ಲಕ್ಷಣಗಳಿಂದ ನಿರ್ಮಿತವಾದ ಮನೆ. ಹೆಚ್ಚಿನ ಜನರಿರುವ ಮನೆತನದವರು ಬಲ್ಯಮನೆಯ ಸುತ್ತಲಲ್ಲಿ ಮನೆಗಳನ್ನು ಕಟ್ಟಿಸಿಕೊಂಡಿದ್ದರೂ, ಅವು ಯಾವವೂ ಬಲ್ಯಮನೆಗಿಂತ ಎತ್ತರವಾಗಿಯೂ, ದೊಡ್ಡದಾಗಿಯೂ ಇರಬಾರದು.
ವಿನ್ಯಾಸ ಮತ್ತು ರಚನೆ
[ಬದಲಾಯಿಸಿ]ಐನ್ ಮನೆಯನ್ನು ಅಂಗಳದಿಂದ ಸುಮಾರು ಒಂದು-ಒಂದೂವರೆ ಮೀಟರ್ ಎತ್ತರದಲ್ಲಿ ರಚಿಸಿದ ತಳಹದಿಯ ಮೇಲೆ ಪೂರ್ವಾಭಿಮುಖವಾಗಿ ಕಟ್ಟಲಾಗಿರುತ್ತದೆ. ಮನೆಯನ್ನು ಪ್ರವೇಶಿಸಲು ಕಲ್ಲಿನ ಮೆಟ್ಟಲುಗಳಿರುತ್ತವೆ. ಮೆಟ್ಟಲುಗಳ ಎರಡೂ ಬದಿಗಳಲ್ಲಿ ಕಲ್ಲಿನಿಂದ ಕಡೆದ ವಿವಿಧ ಆಕೃತಿ(ಸಿಂಹದ ಮುಖ, ಇತ್ಯಾದಿ)ಗಳಿಂದ ಕೂಡಿದ ಕಟ್ಟೆಗಳಿರುತ್ತವೆ. ಮೆಟ್ಟಲೇರಿ ಹೋದಾಗ ವಿಶಾಲ ಕೈಸಾಲೆ ಸಿಗುತ್ತದೆ. ಇದಕ್ಕೆ ಕೊಡವ ತಕ್ಕ್ ನಲ್ಲಿ ‘ಕಯ್ಯಾಲೆ’ ಎನ್ನುತ್ತಾರೆ. ಇದರ ಮಾಡನ್ನು ಆಧರಿಸುವ ಕಂಬಗಳನ್ನು ಕಲ್ಲಿನಿಂದ ಅಥವಾ ಬೃಹತ್ ಮರದ ಕಾಂಡದಿಂದ ರಚಿಸಿದ್ದು, ದೇವರ ಇಲ್ಲವೇ ಪ್ರಾಣಿ-ಪಕ್ಷಿಗಳ ರೂಪಗಳ ಕೆತ್ತನೆಯಿಂದ ಮಾಡಿರಲಾಗುತ್ತದೆ. ಮೆಟ್ಟಲಿನ ಪಕ್ಕದಲ್ಲಿರುವ ಕಂಬಕ್ಕೆ ‘ಕನ್ನಿ ಕಂಬ’ ಎನ್ನುತ್ತಾರೆ. ಇದನ್ನು ಮನೆಯ ಶ್ರೇಷ್ಠ ಕಂಬವೆಂದು ಪರಿಗಣಿಸಲಾಗುತ್ತದೆ. ಈ ಕಂಬಗಳ ನಡುವೆ ಕಟ್ಟೆ ಕಟ್ಟಿ, ಅದರ ಮೇಲೆ ದಪ್ಪನೆಯ ಮರದ ಹಲಗೆಯನ್ನು ಕುಳಿತುಕೊಳ್ಳುವ ಸಲುವಾಗಿ ಇಟ್ಟಿರುತ್ತಾರೆ. ಈ ಆಸನಕ್ಕೆ ‘ಐಮರ’ ಎಂದು ಹೆಸರು.
ಕಯ್ಯಾಲೆಯ ಎರಡೂ ಕೊನೆಗಳಲ್ಲಿ ಒಂದೊಂದು ಕೋಣೆಯಿದ್ದು, ಇದನ್ನು ಕಯ್ಯಾಲೆ ಕೋಂಬರೆ (ಕೋಣೆ)ಎನ್ನುತ್ತಾರೆ. ಇದನ್ನು ಉಗ್ರಾಣದಂತೆ ಬಳಸಬಹುದು.
ಕಯ್ಯಾಲೆಯಿಂದ ಮನೆಯ ಒಳಭಾಗಕ್ಕೆ ಪ್ರವೇಶಿಸಲು ಕಲಾತ್ಮಕವಾಗಿ ಕಡೆದು ನಿರ್ಮಿಸಿದ ಮರದ ದೊಡ್ಡ ಬಾಗಿಲಿರುತ್ತದೆ. ಒಳ ಹೊಕ್ಕರೆ ವಿಶಾಲವಾದ ಹಜಾರ ಸಿಗುತ್ತದೆ. ಇದಕ್ಕೆ ‘ನೆಲ್ಲಕ್ಕಿ ನಡುಬಾಡೆ’ಯೆಂದು ಹೆಸರು. ಹೆಬ್ಬಾಗಿಲಿಗೆ ಎದುರಿನ ಗೋಡೆಗೆ ಹತ್ತಿರದಲ್ಲಿ ನೇತಾಡುವಂತೆ ಮಾಡಿನಿಂದ ತೂಗುದೀಪವೊಂದನ್ನು ಇಳಿಬಿಟ್ಟಿರುತ್ತಾರೆ. ಕೊಡವ ತಕ್ಕ್‌ನಲ್ಲಿ ‘ತೂಕ್೦ಬೊಳಿಚ’ ಎಂದು ಹೆಸರು. ಕೆಲವು ಮನೆಗಳಲ್ಲಿ ಈ ಗೋಡೆಯಲ್ಲಿ ಆಳೆತ್ತರಕ್ಕೆ ಸ್ವಲ್ಪ ಮೇಲೆ ತ್ರಿಕೋನಾಕಾರದ ಗೂಡೊಂದಿದ್ದು ಅದರಲ್ಲಿ ಒಂದು ಹಣತೆಯನ್ನಿಟ್ಟಿರುತ್ತಾರೆ.
ಕೆಲವು ಬಲ್ಯಮನೆಗಳು ನಾಲ್ಕಂಕಣದ ಮನೆಯಾಗಿರುತ್ತವೆ. ನಾಲ್ಕಂಕಣದ ಮನೆಯನ್ನು ಕೊಡವತಕ್ಕ್‌ನಲ್ಲಿ ‘ನಾಲ್ ಕಟ್ಟ್ ಮನೆ’ ಅಥವಾ ‘ಮುಂದ್ ಮನೆ’ ಎನ್ನುತ್ತಾರೆ. ಹಜಾರದ ನಡು ಭಾಗವು ಸುಮಾರು ಮೂರು ಮೀಟರ್ ಬದಿಯಿರುವ ಚೌಕಾಕಾರದಲ್ಲಿದ್ದು, ಮಾಡಿಲ್ಲದೆ ಆಕಾಶಕ್ಕೆ ತೆರೆದುಕೊಂಡಿರುತ್ತದೆ. ಇದನ್ನು ‘ಮುಂದ್’ ಎಂದು ಕರೆಯುತ್ತಾರೆ. ಇದರ ನೆಲ ತುಸು ಕೆಳಕ್ಕಿರುತ್ತದೆ. ಇದರ ನಾಲ್ಕೂ ಮೂಲೆಗಳಲ್ಲಿ ದೊಡ್ಡ ಕಂಬ ಗಳಿದ್ದು ಅವುಗಳ ಮಧ್ಯೆ ಐಮರಗಳಿರುತ್ತವೆ. ‘ಮುಂದ್’ನ ಸುತ್ತಲಿನ ಪ್ರದೇಶವನ್ನು ‘ಒಳ ಕಯ್ಯಾಲೆ’ಯೆಂದು ಕರೆಯುತ್ತಾರೆ. ಇದರ ಪೂರ್ವಾಭಿಮುಖವಾದ ಗೋಡೆಯೆದುರು ತೂಕ್‌೦ಬೊಳಿಚವಿರುತ್ತದೆ. ಒಳ ಕಯ್ಯಾಲೆಗೆ ಹೊಂದಿಕೊಂಡು ಮನೆಯ ಮುಖ್ಯಸ್ಥನಿಗೊಂದು, ಮಕ್ಕಳಿಗೊಂದು, ಅತಿಥಿಗಳಿಗೊಂದು, ಕುಟುಂಬದ ಇತರ ಸದಸ್ಯರಿಗೊಂದೊಂದು, ಎಂದೆಲ್ಲಾ ಹಲವು ಕೋಣೆಗಳಿರುತ್ತವೆ. ಪ್ರಾರ್ಥನೆಗೊಂದು ‘ಮೀದಿ ಕೋಂಬರೆ’ಯೂ ಇರುತ್ತದೆ. ಹಿಂಭಾಗದಲ್ಲಿ ಊಟದ ಮನೆ, ಅಡುಗೆ ಮನೆ, ಇತ್ಯಾದಿಗಳಿದ್ದರೆ ಮನೆಯಿಂದ ಬೇರ್ಪಟ್ಟು ಅನತಿ ದೂರದಲ್ಲಿ ಸ್ನಾನೇತ್ಯಾದಿಗಳ ಮನೆಯಿರುತ್ತದೆ.
ಹಿಂದೆ ಮನೆಗಳಲ್ಲಿ ಮದುವೆ, ನಾಮಕರಣ ಮುಂತಾದ ಶುಭ ಕಾರ್ಯಗಳು ನಾಲ್ ಕಟ್ಟ್ ಮನೆಯ ಮುಂದ್‌ನಲ್ಲಿ ನಡೆಯುತಿತ್ತು. ನಾಲ್ ಕಟ್ಟ್ ಮನೆಯಲ್ಲದಿದ್ದರೆ ಮನೆಯೆದುರಿನ ಅಂಗಳದಲ್ಲಿ ಮಂಟಪ ಕಟ್ಟಿ ನಡೆಸುತ್ತಿದ್ದರು.
ವಿವಿಧ ಭಾಗಗಳ ಪಾವಿತ್ರ್ಯ
[ಬದಲಾಯಿಸಿ]ಐನ್ ಮನೆಯು ಕೊಡವರ ಜೀವನಾದರ್ಶ ಮತ್ತು ಸಂಸ್ಕೃತಿ ಸಭ್ಯತೆಗಳ ಪ್ರತೀಕ. ತಮ್ಮ ವಂಶದ ಮೂಲ ಕಾರಣಪುರುಷರನ್ನು ತಮ್ಮ ಐನ್ ಮನೆಯಲ್ಲಿ ನೆಲೆಗೊಳಿಸಿ ಪೂಜಿಸುವದರಿಂದ ಇಡೀ ಮನೆಯೇ ಪೂಜನೀಯ. ಮನೆಯ ಕೈಸಾಲೆಯ ಕನ್ನಿ ಕಂಬಕ್ಕೆ ಹೊಂದಿಕೊಂಡಿರುವ ಐಮರವನ್ನೂ ಶ್ರೇಷ್ಠವೆಂದು ಪರಿಗಣಿಸುತ್ತಾರೆ. ಇದರ ಮೇಲೆ ಮನೆತನದ ಹಿರಿಯರು ಮಾತ್ರ ಕುಳಿತುಕೊಳ್ಳಬಹುದಲ್ಲದೆ ಹೆಂಗಸರು ಮತ್ತು ಮಕ್ಕಳು ಕುಳಿತುಕೊಳ್ಳಬಾರದು. ಇದರ ಪಕ್ಕದಲ್ಲಿರುವ ಐಮರಗಳ ಮೇಲೆ ಕುಳಿತಿರಬಹುದಾದರೂ ಹಿರಿಯರು ಬಂದಾಗ ಎದ್ದು ನಿಂತು ಗೌರವಿಸಬೇಕು.
ಮನೆಯ ಮುಖ್ಯಸ್ಥನಿಲ್ಲದಿದ್ದಾಗ ಕನ್ನಿಕಂಬವನ್ನೇ ಅವನಂತೆ ಭಾವಿಸಿ, ಅದನ್ನು ಮುಟ್ಟಿ ನಮಸ್ಕರಿಸಿ, ಹೊಸ ಹಾಗೂ ವಿಶೇಷ ಕಾರ್ಯಗಳಲ್ಲಿ ತೊಡಗಬೇಕು.
ಪದ್ಧತಿ ಮತ್ತು ಕರ್ತವ್ಯಗಳು
[ಬದಲಾಯಿಸಿ]ಪ್ರತಿ ಐನ್ ಮನೆಯಲ್ಲೂ ಒಂದು ದೇವರ ಕೋಣೆಯಿರುತ್ತದೆ. ಇದಕ್ಕೆ ‘ಕನ್ನಿ ಕೋಂಬರೆ’ ಅಥವಾ ‘ಮೀದಿ ಕೋಂಬರೆ’ ಎನ್ನುವರು. ಮೀದಿ ಕೋಂಬರೆಯ ಪೂರ್ವಾಭಿಮುಖವಾಗಿರುವ ಗೋಡೆಗೆ ಸಮೀಪದಲ್ಲಿ ನೇತಾಡುವಂತೆ ಮಾಡಿನಿಂದ ತೂಕ್೦ಬೊಳಿಚವನ್ನು ಇಳಿಬಿಡಲಾಗಿರುತ್ತದೆ. ಪ್ರತಿ ಬೆಳ್ಳಂಬೆಳಗ್ಗೆ ಎದ್ದ ಕೂಡಲೇ ಮನೆಯಾಕೆ ಮುಖ ತೊಳೆದು ಮನೆಯ ಕಯ್ಯಾಲೆ, ನೆಲ್ಲಕ್ಕಿ ನಡುಬಾಡೆ ಅಥವಾ ಒಳಕಯ್ಯಾಲೆ ಹಾಗೂ ಮೀದಿಕೋಂಬರೆಯನ್ನು ಗುಡಿಸಬೇಕು. ಬಳಿಕ ಮನೆಯ ಎರಡೂ ತೂಕ್೦ಬೊಳಿಚಗಳನ್ನು ಹಚ್ಚಬೇಕು. ಹಾಗೆಯೇ ಸಂಜೆಯ ಬಳಿಕ ಆಕೆ ಕೈಕಾಲು ಮುಖ ತೊಳೆದು, ಪುನಃ ಮನೆಯ ಕಯ್ಯಾಲೆ, ನೆಲ್ಲಕ್ಕಿ ನಡುಬಾಡೆ ಅಥವಾ ಒಳಕಯ್ಯಾಲೆ ಹಾಗೂ ಮೀದಿಕೋಂಬರೆಯನ್ನು ಗುಡಿಸಿ, ತೂಕ್೦ಬೊಳಿಚಗಳನ್ನು ಹಚ್ಚಬೇಕು. ಕೆಲವೆಡೆ ಮೀದಿಕೋಂಬರೆಯ ತೂಕ್೦ಬೊಳಿಚವು ನಂದಾದೀಪವಾಗಿ ಯಾವತ್ತೂ ಉರಿಯುತ್ತಿರುವದು.
ಮೀದಿ ಕೋಂಬರೆಯ ತೂಕ್೦ಬೊಳಿಚದ ಹಿಂದೆ ಗೋಡೆಯಲ್ಲಿ ಒಂದು ಗೂಡಿರುತ್ತದೆ. ಇಲ್ಲಿ ಒಂದು ಸಣ್ಣ ಮಣೆಯಿದ್ದು ಅದರ ಮೇಲೆ ಬೆಳ್ಳಿಯ ಒಂದು ಸಣ್ಣ ಗಿಂಡಿಯನ್ನೂ ಬೆಳ್ಳಿಯದೇ ಒಂದು ಸಣ್ಣ ಆಳಕ್ಕಿರುವ ಬಟ್ಟಲನ್ನೂ ಇಟ್ಟಿರುತ್ತಾರೆ. ‘ಮೀದಿ’ಯೆಂದರೆ ನೈವೇದ್ಯ. ಪ್ರತಿದಿನವೂ ರಾತ್ರಿ ದೀಪ ಹಚ್ಚಿದ ಬಳಿಕ ಮನೆಯಲ್ಲಿ ಮಾಡಿದ ಭಕ್ಷ್ಯ ಪದಾರ್ಥಗಳನ್ನು ಸಣ್ಣ ಬಟ್ಟಲುಗಳಲ್ಲಿಟ್ಟು ಇಲ್ಲಿ ಮೀದಿಯಿಡಬೇಕು. ಅಲ್ಲದೆ ಬೇರೆ ವಿಶೇಷ ಔತಣದ ಅಡುಗೆ ಮಾಡಿದಾಗಲೂ ಹೀಗೆ ಮೀದಿ ಇಡುವರು. ಮೀದಿಯಿಟ್ಟ ನಂತರವೇ ಊಟ ಮಾಡಬೇಕು.
ಮದುವೆ ನಿಶ್ಚಯ, ಹರಕೆ ಕಟ್ಟುವದು, ಹೊಸ ಕೆಲಸದ ಆರಂಭ, ದೂರಪ್ರಯಾಣಕ್ಕೆ ಹೊರಡುವದು, ಮೊದಲಾದ ಮನೆತನದ ಯಾವದೇ ಮುಖ್ಯ ಕೆಲಸಗಳು ನೆಲ್ಲಕ್ಕಿ ನಡುಬಾಡೆಯ ತೂಕ್೦ಬೊಳಕನ್ನು ಹಚ್ಚಿ, ಅದರ ಸಮ್ಮುಖದಲ್ಲಿ ನಡೆಯುತ್ತವೆ. ಹಿಂದೆ ಬರೆವಣಿಗೆಯ ಬಳಕೆ ಹೆಚ್ಚಾಗಿಲ್ಲದ ಕಾಲದಲ್ಲಿ, ಯಾವದೇ ಲೇವಾದೇವಿಯಂಥ ಒಪ್ಪಂದಗಳೂ ಸಹ ಈ ದೀಪದೆದುರು ನಡೆದು ಮನೆತನದ ಕಾರಣರನ್ನು ಸಾಕ್ಷಿಗಳನ್ನಾಗಿಸಿ ನಡೆದು, ಅವನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದರು.
ಕುಟುಂಬದ ಪ್ರತಿ ಸದಸ್ಯನೂ ಐನ್ ಮನೆಗೆ ಹಬ್ಬ-ಹುಣ್ಣಿಮೆಗಳಲ್ಲಿ ಪಾಲ್ಗೊಳ್ಳಲು ಬರಬೇಕು. ಎಲ್ಲಾ ಹಬ್ಬಗಳಿಗ ಬರಲಾಗದಿದ್ದರೂ ಪುತ್ತರಿ ಹಬ್ಬಕ್ಕೆ ಬಂದೇ ಬರಬೇಕು. ಮನೆತನಕ್ಕೆ ಸೇರಿದ ಆಳುಕಾಳುಗಳು, ದೂರ ಮೇಯಲು ಬಿಟ್ಟ ದನಕರುಗಳು ಕೂಡಾ ಪುತ್ತರಿಗೆ ಐನ್ ಮನೆಯಲ್ಲಿ ಬಂದು ಸೇರಬೇಕೆಂಬ ಕಟ್ಟಳೆಯಿದೆ.
ಈಗ ಅವಿಭಕ್ತ ಕುಟುಂಬಗಳು ಇಲ್ಲವಾಗಿ, ಜನರು ಕೊಡಗಿನಿಂದ ಹೊರಗೇ ನೆಲೆನಿಂತಿರುವದರಿಂದ ಈ ಎಲ್ಲಾ ಪದ್ಧತಿಗಳು ಬಹಳ ಮಟ್ಟಿಗೆ ಮರೆತಿದ್ದು, ಇವುಗಳನ್ನು ಪಾಲಿಸುವದರಲ್ಲಿ ಹೆಚ್ಚಿನ ನಿರ್ಬಂಧವಿಲ್ಲದಿರುವದರಿಂದ ಇವನ್ನು ನೋಡುವದೂ ದುರ್ಲಭವಾಗಿದೆ.
ಆಧಾರ
[ಬದಲಾಯಿಸಿ]೧. ಕೊಡಗು ಮತ್ತು ಕೊಡವರು - ಶ್ರೀ ಬಿ ಡಿ ಗಣಪತಿ - ‘ಕೊಡಗು’ ಕಂಪೆನಿ, ಮಡಿಕೇರಿ - ೧೯೬೨.