ಎರಿಯೋಪ್ಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎರಿಯೋಪ್ಸ್‌: ಪ್ರಾಚೀನ ಜೀವಕಲ್ಪದ ಉತ್ತರಾರ್ಧದ ಕೊನೆಯಲ್ಲಿದ್ದ ಒಂದು ದ್ವಿಚರ ನೆಲವಾಸಿ ಪ್ರಾಣಿ. ಸ್ವಲ್ಪಮಟ್ಟಿಗೆ ಮೊಸಳೆಯನ್ನು ಹೋಲುತ್ತಿತ್ತು. ಅಮೆರಿಕದ ಟೆಕ್ಸಾಸ್ ಮತ್ತು ನೈರುತ್ಯ ಅಮೆರಿಕ ಸಂಯುಕ್ತ ಸಂಸ್ಥಾನದ ಪ್ರದೇಶದಲ್ಲಿ ಸಿಕ್ಕಿರುವ ಪಳೆಯುಳಿಕೆಯ ಆಧಾರದಿಂದ ಇದು 1.5 ಮೀ ಅಡಿಗಳಷ್ಟು ಉದ್ದವಿದ್ದಿರಬೇಕೆಂದು ಊಹಿಸಲಾಗಿದೆ. ಸ್ಟೀಗೋಕಿಫಾಲಿಯ ಗುಂಪಿಗೆ ಸೇರಿದ್ದರಿಂದ ಇದನ್ನು ಸ್ಟೀಗೋಕಿಫಾಲಿಯನ್ ಎಂದು ಕರೆವುದೂ ಉಂಟು. ಬಹುಶಃ ಇದು ಪ್ರಾಚೀನ ಜೀವ ಕಲ್ಪದ ಪರ್ಮಿಯನ್ ಯುಗದಲ್ಲಿ ಸು. 250 ದಶಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಪ್ರಾಣಿಯೆಂದು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಇದರ ತಲೆಭಾಗ ಮೂಳೆಯ ಫಲಕಗಳಿಂದ ಕೂಡಿದ್ದು ಚರ್ಮದ ಕವಚದಿಂದ ರಕ್ಷಿಸಲ್ಪಟ್ಟಿದ್ದಿರಬಹುದು. ದೇಹದ ಹೊರಭಾಗ ಹುರುಪೆ ಮತ್ತು ಫಲಕಗಳಿಂದ ಆವೃತವಾಗಿದ್ದಿರಬೇಕು. ತಲೆಬುರುಡೆಯ ಮೇಲ್ಚಾವಣಿಯಲ್ಲಿ ಪೈನಿಯಲ್ ಕಂಡಿ ತೆರೆದಿದ್ದಿತು. ಇದರ ಅಗಲವಾದ ಬಾಯಲ್ಲಿ ಬುಗುರಿ ಆಕಾರದ ಹಲ್ಲುಗಳಿದ್ದವು. ಇದರ ಪ್ರಧಾನ ಆಹಾರ ಮೀನುಗಳಾಗಿತ್ತೆಂದು ಜೊತೆಗೆ ನೆಲವಾಸಿ ಪ್ರಾಣಿಗಳಾಗಿತ್ತೆಂದು ಊಹಿಸಲಾಗಿದೆ. ಈ ಜೀವಿಯು ಜಡಸ್ವಭಾವದ್ದಾಗಿದ್ದರಿಂದ ಚಲನಾಂಗಗಳು, ಕೈ-ಕಾಲುಗಳು ಕ್ಷೀಣಿಸಿರಬೇಕು. ನೀರಿನಲ್ಲಿ ಮೊಟ್ಟೆಯಿಡುತ್ತಿತ್ತೆಂದು ಹೇಳಲಾಗಿದೆ. (ಎಚ್.ಎಸ್.ಎನ್.)