ಉಮೇರಿಯಾ ಸ್ತರಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉಮೇರಿಯಾ ಸ್ತರಗಳು: ಮಧ್ಯಪ್ರದೇಶದ ರೇವಾಜಿಲ್ಲೆಯಲ್ಲಿರುವ ಉಮೇರಿಯಾ ಎಂಬ ಹಳ್ಳಿಯ ಸಮೀಪದಲ್ಲಿ ಹೊರ ಕಂಡಿರುವ ಸಾಗರ ಶಿಲಾ ಪದರಗಳು. ಮಂದ ಸುಮಾರು ೩.೦೪೮ ಮೀ. ಶೋಧಿಸಿದವನ ಹೆಸರು ಕೆ. ಪಿ. ಸಿನಾರ್. ಉಮೇರಿಯಾಕ್ಕೆ ಪೂರ್ವದಲ್ಲಿರುವ ಅನೂಕ್ಪುರದಲ್ಲಿ ಇಂಥದೇ ಸಾಗರಶಿಲಾಪದರವಿರುವುದನ್ನು ಘೋಷ್ ಎಂಬಾತ ವರದಿ ಮಾಡಿದ(೧೯೫೪). ಉಮೇರಿಯಾ ಸಾಗರಶಿಲಾಪದರ ತಾಲ್ಚೀರ್ ಗುಂಡು ಶಿಲೆಯ ಮೇಲೂ ಬರಕಾರ್ ಶಿಲೆಗಳ ಕೆಳಗೂ ನಿಕ್ಷೇಪಗೊಂಡಿದೆ. ತಾಲ್ಚೀರ್ ಗುಂಡುಶಿಲೆಗೂ ಉಮೇರಿಯಾಸ್ತರಕ್ಕೂ ಮಧ್ಯೆ ನಿರ್ದಿಷ್ಟ ಅನನುರೂಪತೆ ಇದ್ದರೂ ಉಮೇರಿಯಾ ಸ್ತರ ಮತ್ತು ಬರಕಾರ್ ಶಿಲೆಗಳು ಅನುರೂಪವಾಗಿರುವುದು ವ್ಯಕ್ತವಾಗಿದೆ. ಉಮೇರಿಯಾ ಸ್ತರಗಳಲ್ಲಿ ಸಾಗರವಾಸಿಗಳಾದ ಸ್ಪಿರಿಫೆರ, ಪ್ರೊಡಕ್ಟಸ್, ರಿಟಿಕ್ಯುಲೇರಿಯ ಮತ್ತು ಕೆಲವು ಚಿಕ್ಕ ಶಂಖ ಜಾತಿಯ ಪ್ರಾಣಿಗಳ ಚಿಪ್ಪುಗಳು ಸಾಮಾನ್ಯವಾಗಿ ದೊರೆಯುತ್ತವೆ. ಬ್ರೇಕಿಯೋಪೊಡ ಪ್ರಾಣಿಗಳ ಜೀವಾವಶೇಷಗಳೇ ಹೆಚ್ಚು. ಅವೆಲ್ಲ ಹೊಸಜಾತಿಯವು ಮತ್ತು ವೈಶಿಷ್ಟ್ಯಪುರಿತ ವಾದವು. ಕೌಪರ್ ರೀಡ್ ಎಂಬಾತ ಇದನ್ನು ಪರೀಕ್ಷಿಸಿ ಇವು ಕಾರ್ಬಾನಿಫೆರಸ್ ಮತ್ತು ಪರ್ಮಿಯನ್ ಯುಗಗಳ ಜೀವಾವಶೇಷಗಳ ಮಿಶ್ರ ಎಂಬ ಅಭಿಪ್ರಾಯಕ್ಕೆ ಬಂದಿದ್ದಾನೆ. ಈ ಜೀವಾವಶೇಷಗಳು ಹಿಮಾಲಯ ಪ್ರದೇಶ ಮತ್ತು ರಷ್ಯಗಳಲ್ಲಿರುವ ಪರ್ಮೊಕಾರ್ಬಾನಿಫೆರಸ್ ಯುಗವನ್ನು ಹೋಲುತ್ತವೆ ಎಂದಿದ್ದಾನೆ, ಡೈನೊಕ್ರೈನಸ್ ಎಂಬ ಜೀವಾವಶೇಷವಂತೂ ನಿರ್ದಿಷ್ಟವಾಗಿ ಪರ್ಮಿಯನ್ ಯುಗದ ಆದಿಭಾಗವನ್ನು ಸೂಚಿಸುತ್ತದೆ. ಆದ್ದರಿಂದ ಉಮೇರಿಯಾ ಪ್ರದೇಶ ಪರ್ಮಿಯನ್ ಯುಗದ ಆದಿಭಾಗದಲ್ಲಿ ಟೆತಿಸ್ ಸಾಗರದ ಆಕ್ರಮಣಕ್ಕೊಳಗಾಗಿರಬೇಕು. ಆಕ್ರಮಣಾವಧಿ ಮಾತ್ರ ಅತ್ಯಲ್ಪ. ಆದರೆ ಉಮೇರಿಯಾ ಸ್ತರಗಳು ಗೊಂಡವಾನಾ ಶಿಲಾನಿಕ್ಷೇಪದ ಪ್ರಾರಂಭಕಾಲದ ಪರಿಮಿತಿಯನ್ನು ನಿರ್ಣಯಿಸಲು ಬಲು ಸಹಾಯವಾಗಿವೆ. ಈ ಕಾರಣದಿಂದ ಅವುಗಳ ಪ್ರಾಮುಖ್ಯ ಇಮ್ಮಡಿಸಿದೆ. ಉಮೇರಿಯಾ ಸ್ತರಗಳು, ಗಿರಿಧಿಯ ಕಿರ್ಹಾರ್ಬಾರಿ ಶಿಲಾಪದರಗಳು, ಸಾಲ್ಟ್‌ರೇಂಜಿನ ಯೂರಿಡೆಸ್ಮ ಮತ್ತು ಕಾನ್ಯುಲೇರಿಯಾ ಪದರ ಮತ್ತು ಕಾಶ್ಮೀರದ ಗಂಗಮಾಪ್ಟರಿಸ್ ಶಿಲಾಪದರ ಏಕಕಾಲೀನವಾದವುಗಳೆಂದು ಪರಿಗಣಿಸಲ್ಪಟ್ಟಿವೆ. ಉಮೇರಿಯಾ ಸ್ತರಗಳಲ್ಲಿನ ಕೆಲವು ಜೀವಾವಶೇಷಗಳನ್ನು ಇಲ್ಲಿ ಕೊಟ್ಟಿದೆ: ಬ್ರೇಕಿಯೋಪೊಡ - ಪ್ರೊಡಕ್ಟಸ್ ಉಮೇರಿಯನ್ಸಿಸ್ (ಹೇರಳವಾಗಿವೆ); ಪ್ರೊ. ಉವಾಯೆನ್ಸಿಸ್, ಸ್ಫಿರಿಫೆರನರ್ಸರೆನ್ಸಿಸ್, ರಿಟಿಕ್ಯುಲೇರಿಯ ಬರ್ಕಾರೆನ್ಸಿಸ್; ಅಥಿಸ್ ಪ್ರೊಟಿಯ. ಶಂಖಗಳು - ಪ್ಲೊರೊಟೋಮೇರಿಯ ಉಮೇರಿಯನ್ಸಿಸ್. ಇವಲ್ಲದೆ ಕೆಲವು ಮೀನುಗಳ ಮತ್ತು ಕ್ರೈನಾಯಿಡ್ ಪ್ರಾಣಿಗಳ ಜೀವಾವಶೇಷಗಳೂ ಇವೆ. (ಡಿ.ಆರ್.)