ಉಮರ್ ಖಯ್ಯಾಮ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಮರ್ ಖಯ್ಯಾಮ್
ಉಮರ್ ಖಯ್ಯಾಮ್
عمر خیام
ಜನನ18 May 1048[೧]
ನಿಶಾಪುರ, ಖೊರಸಾನ್
ಮರಣ4 December 1131 (aged 82/83)[೧]
ಖೊರಸಾನ್
ಪರಂಪರೆPersian mathematics, Persian poetry, Persian philosophy
ಮುಖ್ಯ  ಹವ್ಯಾಸಗಳುSufism, Mathematics, Philosophy, Astronomy, Poetry
ಪ್ರಭಾವಕ್ಕೋಳಗಾಗು
ಪ್ರಭಾವ ಬೀರು
  • ಉಮರ್ ಖಯ್ಯಾಮ್ ರುಬಾಯ್ಯತ್ ಎಂದು ಪ್ರಸಿದ್ಧವಾಗಿರುವ ರುಬಾಯಿ ಛಂದಸ್ಸಿನ ಚೌಪದಿಗಳ ಮೂಲಕ ಪ್ರಪಂಚಕ್ಕೆ ಪ್ರಸಿದ್ಧನಾದ ಕವಿ. ಪರ್ಷಿಯ ದೇಶದವ. ಖೊರಾಸಾನ್ ಪ್ರಾಂತ್ಯಕ್ಕೆ ಸೇರಿದ ನೀಷಾಪುರ ಎನ್ನುವ ಗ್ರಾಮದಲ್ಲಿ ಜನ್ಮ ತಾಳಿದ. ಈತನ ಕಾಲದ ವಿಚಾರದಲ್ಲಿ ತಜ್ಞರಲ್ಲಿ ಭಿನ್ನಾಭಿಪ್ರಾಯಗಳಿವೆ. ಹಲವರ ಪ್ರಕಾರ ಈತ 1915 ಮತ್ತು 1020ರ ಮಧ್ಯೆ ಜನಿಸಿ 1123ರ ವರೆಗೂ ಜೀವಿಸಿದ್ದನೆಂದೂ ಮತ್ತೆ ಹಲವರ ಪ್ರಕಾರ 1050ರಲ್ಲಿ ಜನಿಸಿ 1132ರವರೆಗೂ ಇದ್ದನೆಂದೂ ತಿಳಿದುಬರುತ್ತದೆ.
  • ಉಮರ್ ಗುಡಾರಗಳನ್ನು (ಡೇರೆ) ಮಾಡುವವರ ಮನೆತನಕ್ಕೆ ಸೇರಿದವ. ಖಯ್ಯಾಮ್ ಎಂದರೆ ಗುಡಾರವೆಂದರ್ಥ. ಉಮರ್ ಇದರಿಂದಾಗಿ ಉಮರ್ ಖಯ್ಯಾಮ್ ಎಂದೇ ಆದ. ಈತನ ಪೂರ್ಣ ಹೆಸರು ಹೀಗಿದೆ: ಫಿಯಾತ್ ಉದ್ದೀನ್ ಅಬುಲ್ ಫಾತ್ ಒಮರ್ ಬಿನ್ ಇಬ್ರಾಹಿಂ ಅಲ್ ಖಯ್ಯಾಮಿ. ಆದರೆ ಉಮರ್ ಖಯ್ಯಾಮ್ ಎಂದೇ ಆತ ಸುಪ್ರಸಿದ್ಧ. ಚಿಕ್ಕಂದಿನಿಂದಲೇ ಬುದ್ಧಿ ಸಂಪನ್ನನಾದ ಈತ ಕವಿ ಮಾತ್ರ ಆಗಿರದೆ ಜ್ಯೋತಿಷ್ಯ, ಬೀಜಗಣಿತ, ಕ್ಷೇತ್ರಗಣಿತ, ಭೌತವಿಜ್ಞಾನದಲ್ಲೂ ಪಾರಂಗತನಾಗಿದ್ದ. ಅಂತಃಸ್ಫೂರ್ತಿಯನ್ನು ಅಪಾರವಾಗಿ ಪಡೆದಿದ್ದ ಈತ ದಾರ್ಶನಿಕನಾಗಿಯೂ ಇದ್ದು ಸೂಫಿಗಳಂತೆ ಅನುಭಾವಿಯೂ ಆಗಿದ್ದ. ಬಹುಮುಖ ಪ್ರತಿಭೆಯಿಂದ ಕೂಡಿದ್ದ ಈತ ತನ್ನ ಸಮಾಜದಲ್ಲಿ ಹೆಸರುವಾಸಿಯಾಗಿದ್ದರೂ ಈತನ ಜೀವಿತಕಾಲದ ಅನೇಕ ವಿವರಗಳು ಸಿಕ್ಕಿಲ್ಲದುದು ಅಚ್ಚರಿಯ ಸಂಗತಿ.
  • ಉಮರ್ ಖಯಾಮ್ ಎಷ್ಟು ವಿದ್ವಾಂಸನಾಗಿದ್ದನೋ ತನ್ನ ಜೀವನಕ್ರಮದಲ್ಲಿ ಅಷ್ಟೇ ಸರಳವಾಗಿಯೂ ಅನಾಸಕ್ತನಾಗಿಯೂ ಇದ್ದನೆಂಬುದಕ್ಕೆ ನಿದರ್ಶನ ಸಿಗುತ್ತದೆ. ಅಧಿಕಾರಕ್ಕೆ ಬಂದ ಬಾಲ್ಯಸ್ನೇಹಿತ ನಿಜಾಮ್ ಉಲ್ ಮುಲ್ಕ್‌ನ ಮೊದಲು ಮಾಡಿಕೊಂಡಿದ್ದ ಮಾತಿನ ಪ್ರಕಾರ ಉಮರನಿಗೆ ಪದವಿ, ಬಿರುದು, ಧನ ಇತ್ಯಾದಿ ನೀಡಲು ಬಂದಾಗ ಅವೆಲ್ಲವನ್ನೂ ನಿರಾಕರಿಸಿ ರಾಜ್ಯದ ಯಾವುದೋ ಒಂದು ಮೂಲೆಯಲ್ಲಿ ನೆಲೆಸಿಕೊಂಡು ಜ್ಞಾನಸಂಪತ್ತನ್ನು ಜನರಲ್ಲಿ ಹರಡಲು ಬೇಕಾದ ಸೌಕರ್ಯಗಳನ್ನು ಮಾಡಿಕೊಟ್ಟರೆ ಸಾಕೆಂದು ಕೇಳಿಕೊಂಡನಂತೆ. ಇದೇ ಆತನಿಗೆ ಇದ್ದ ಆಶಯ; ತನ್ನ ವ್ಯಾಸಂಗಕ್ಕೆ ವಿಚಾರವಿನಿಮಯಕ್ಕೆ ಬೇಕಾದ ಅವಕಾಶ ಕಲ್ಪನೆಯೇ ಆತ ಕೋರಿದ ಸಹಾಯ.
  • ಉಮರನ ಕೃತಿಗಳಲ್ಲಿ ಜೀಝ ಮಲ್ಲಿಕ್ಷಾಹಿ ಎನ್ನುವ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಟಿಪ್ಪಣಿಗಳೂ ಪ್ರಕಟಗೊಂಡಿದ್ದು ವಿದ್ವಾಂಸರಿಂದ ಮನ್ನಣೆ ಪಡೆದಿವೆ. ಹಾಗೆಯೇ ಬೀಜಗಣಿತದ ಮೇಲಿನ ಕೃತಿ ಈತನ ಬುದ್ಧಿಶಕ್ತಿಯ ಅಳತೆಗೋಲಾಗಿದೆಯೆಂದು ಇಂದಿಗೂ ಹೇಳುತ್ತಾರೆ. ಯೂಕ್ಲಿಡನ ಕ್ಷೇತ್ರಗಣಿತದ ನಿರೂಪಣೆಗಳಲ್ಲಿರುವ ತೊಡಕುಗಳು ಎಂಬ ಗ್ರಂಥ ಉಮರನಿಗೆ ಅಪಾರ ಕೀರ್ತಿಯನ್ನು ತಂದಿತ್ತು. ಎಲ್ಲದಕ್ಕಿಂತ ಹೆಚ್ಚಾಗಿ ಈತನ ಖ್ಯಾತಿ ಉಳಿದಿರುವುದು ಇವನ ಕವನಗುಚ್ಛದಿಂದ.
  • ಉಮರ್ ಖಯ್ಯಾಮನನ್ನು ಸಹಿಸದ ಅನೇಕರು ಈತನನ್ನು ತೆಗಳಿದ್ದುಂಟು. ನಿಝಾಮುದ್ದೀನ್ ರಾಸಿ ಎಂಬಾತ ಉಮರನನ್ನು ನಿರ್ಭಾಗ್ಯತಾತ್ತ್ವಿಕ, ನಾಸ್ತಿಕ, ಚಾರ್ವಾಕ ಎಂದು ಜರೆದಿದ್ದಾನೆ. ಆದರೆ ಉಮರನ ಧರ್ಮಪ್ರಜ್ಞೆ. ಧರ್ಮಶಾಸ್ತ್ರದಲ್ಲಿನ ನಿಪುಣತೆ ಎಷ್ಟಿತ್ತೆಂದರೆ ಅಬೂ ಹಮೀದ್ ಘಸಾಲಿ ಎಂಬ ಶಿಷ್ಯ ಮಸೀದಿಗಳಲ್ಲಿ ಉಮರನನ್ನು ಕುತರ್ಕಿ, ನಾಸ್ತಿಕ ಎಂದು ಬಹಿರಂಗವಾಗಿ ಬತ್ತಿದ್ದರೂ ಗುಪ್ತವಾಗಿ ಉಮರನ ಹತ್ತಿರವೇ ಹೋಗಿ ಧರ್ಮದ ಅಂತರಂಗವನ್ನು ಕಲಿಯುತ್ತಿದ್ದನಂತೆ.
  • ರುಬಾಯತ್ ಎನ್ನುವುದು ನಾಲ್ಕು ಪಾದಗಳುಳ್ಳ ಸಣ್ಣ ಪದ್ಯ. ಮೂರನೆ ಪಾದವನ್ನು ಬಿಟ್ಟರೆ ಉಳಿದ ಪಾದಗಳ ಅಂತ್ಯಾಕ್ಷರಗಳು ಪ್ರಾಸಬದ್ಧವಾಗಿರುವ ಕವಿತಾರಚನೆ. ಈ ರೀತಿಯ ಪದ್ಯಗಳನ್ನು ಪರ್ಷಿಯದಲ್ಲಿ ಜಾರಿಗೆ ತಂದವ ಷೇಕ್ ಅಬುಲ್ ಸೈಯದ್ ಬಿನ್ ಅಬುಲ್ ಖಯಿರ್ ಎನ್ನುವ ಸೂಫಿ. ಈ ರಚನೆ ಸೂಕ್ಷ್ಮರೀತಿಯ ಭಾವಪ್ರಕಾಶಕ್ಕೆ ಅನುಕೂಲ ವೆಂಬುದನ್ನು ಅರಿತ ಉಮರ್ ಅದನ್ನೇ ತನ್ನ ಮಾಧ್ಯಮವನ್ನಾಗಿ ಬಳಸಿಕೊಂಡ, ರಚನೆ ಹೇಗಿದ್ದರೇನು. ಅಂತರಂಗವನ್ನು ಕಲಕುವ, ಬುದ್ಧಿಯನ್ನು ಕೆರಳಿಸುವ ಭಾವಶಕ್ತಿ ಕವಿಗಿದ್ದರಲ್ಲವೇ ತಂತ್ರವೂ ಅಮರವಾಗುವುದು? ರುಬಾಯುತ್ ಎನ್ನುವುದು ಖ್ಯಾತಿ ಪಡೆಯಲು ಭಾವಸಂಪನ್ನನಾದ ಉಮರನೇ ಕಾರಣ.
  • ಉಮರ್ ರಚಿಸಿದ ರುಬಾಯತ್ಗಳು ಎಷ್ಟೆಂದು ಖಚಿತವಾಗಿ ಗೊತ್ತಿಲ್ಲ. ಹಲವರು 1,200 ಎಂದರೆ, ಮತ್ತೆ ಕೆಲವರು 500 ಎಂದು ಹೇಳುತ್ತಾರೆ. ಫಿಟ್ಸ್‌ಜರಲ್ಡ್‌ನ ಇಂಗ್ಲಿಷ್ ಅನುವಾದದಲ್ಲಿನ ಅನೇಕವು ಉಮರನವಲ್ಲವೆಂದು ಹಲವರ ಅಭಿಪ್ರಾಯ, ಇಂಗ್ಲೆಂಡಿನ ಕೇಂಬ್ರಿಜ್ ವಿಶ್ವವಿದ್ಯಾನಿಲಯದ ಎ.ಜೆ. ಆರ್ಬರಿ ಸಂಶೋಧಿಸಿ ಸಂಪಾದಿಸಿದ ಉಮರನ ಕೃತಿಗಳಲ್ಲಿ ಮೊದಲ ಸಂಸ್ಕರಣದಲ್ಲಿ 172 ಪದ್ಯಗಳೂ ಎರಡನೆಯ ಸಂಸ್ಕರಣದಲ್ಲಿ 252 ಪದ್ಯಗಳೂ ಇವೆ. ಇವು ಉಮರನ ಬಹು ಹತ್ತಿರ ಕಾಲದ ಮೂಲ ಪ್ರತಿಗಳಿಂದ ಸಂಪಾದಿತ ವಾದುದರಿಂದ ನಂಬುಗೆಗರ್ಹವೆಂದು ಹೇಳಲಾಗಿದೆ.
  • ಉಮರನ ರುಬಾಯತ್ಗಳಲ್ಲಿ ವಿಚಾರಗಳು ಏಕಸೂತ್ರವಾಗಿ ಹರಿದಿಲ್ಲ. ಅನೇಕ ವಿಚಾರಗಳು ಅಲ್ಲಿ ಹಂಚಿಕೊಂಡಂತೆ ಬಂದಿವೆ. ಹಲವುಸಲ ಒಂದೇ ರುಬಾಯತ್ ಸ್ವಯಂಪೂರ್ಣವೆನಿಸುವುದೂ ಉಂಟು. ಅನೇಕ ಸಲ ಹತ್ತು ಹನ್ನೆರಡು ರುಬಾಯತ್ಗಳಿಂದ ಒಂದು ಅಭಿಪ್ರಾಯ ಸ್ಪಷ್ಟಗೊಳ್ಳುತ್ತದೆ. ಹೀಗೆ ಭಾವಕ್ಕೆ, ವಿಚಾರಕ್ಕೆ ಅನುಗುಣವಾಗಿ ರುಬಾಯತ್ಗಳ ಸಂಖ್ಯೆ, ದೇವರು, ಜಗತ್ತು, ಸಂಸಾರ, ಬಂಧನ, ಮುಕ್ತಿ, ಸೃಷ್ಟಿ, ಸ್ಥಿತಿ, ಲಯ, ಜಗಳ, ಸ್ನೇಹ, ಪ್ರೇಮ, ಕೋಪ, ಹೆಂಡ, ಹೆಂಡದಂಗಡಿ, ಸೂರ್ಯೋದಯ, ಕತ್ತಲು ಇತ್ಯಾದಿ ಅನೇಕ ವಿಚಾರಗಳು ಕವಿಯ ಭಾವವೆಂಬ ಮೂಸೆಯಲ್ಲಿ ಕರಗಿ ಒಡವೆಗಳಾಗಿ ಹೊರಗೆ ಬಂದಿವೆ. ಎಷ್ಟೋ ವೇಳೆ ಕವನದ ವ್ಯಾಚ್ಯಾರ್ಥ ಇಹಲೋಕದ್ದಾದರೆ ವ್ಯಂಗ್ಯಾರ್ಥ ಪರಲೋಕದಾಗುತ್ತದಾಗಿ ಉಮರನ ಸ್ಪಷ್ಟೋದ್ದೇಶ ಏನು ಎಂದು ತಿಳಿಯುವುದು ಕಷ್ಟಸಾಧ್ಯ.
  • ಯಾವ ಪಂಥಕ್ಕೂ ನಿರ್ದಿಷ್ಟವಾಗಿ ಸೇರಿಸಲಾಗದ ಈತನ ಕವನಗಳಲ್ಲಿ ಅತ್ಯಮೂಲ್ಯವಾದ ಅನುಭವ ಸಿದ್ಧಾಂತ ನಮಗೆ ಕಾಣುತ್ತದೆ. ಆತ್ಮಪ್ರತ್ಯಾನುಬೋಧದಿಂದ ಚೋದಿತವಾದ ಈತನ ಕವನಗಳು ಲೋಕದ ಅನುಭವವನ್ನೇ ಹೆಚ್ಚಿಸಿವೆ ಎಂದರೆ ತಪ್ಪಾಗಲಾರದು. ಸಂಜ್ಞೆ ಅಥವಾ ಪ್ರತಿಮೆಗಳ ಮೂಲಕ ತನ್ನ ಅನುಭವವನ್ನು ವ್ಯಕ್ತಪಡಿಸುವಾಗ ಅದರ ಅಂತರಾರ್ಥ ನಮಗಾಗದೆ ಹೋಗಬಹುದು. ಬಹಳ ಕೀಳುಮಟ್ಟದ ಮೌಲ್ಯಗಳೇ ಅವುಗಳಲ್ಲಿವೆ ಎಂದೆನಿಸ ಬಹುದು. ಆದರೆ ಆತನ ಅನುಭವ ಮತ್ತು ಜ್ಞಾನಪರಿಶುದ್ಧತೆ ನಮ್ಮನ್ನು ಸೆಳೆಯುತ್ತವೆ. ಸೂಫಿ ಅನುಭಾವಿಗಳ ಜಾಡಿನಲ್ಲೇ ನಡೆಯುತ್ತ ಆತ ಹಾಡಿದ್ದೂ ಉಂಟು. ಮದ್ಯ, ಬಟ್ಟಲು, ಅರವಟ್ಟಿಗೆ ಮುಂತಾದ ಪ್ರತಿಮೆಗಳನ್ನು ಉಪಯೋಗಿಸಿದ್ದೂ ಉಂಟು. ಮದ್ಯವೆಂದರೆ ಭಗವಂತನ ಉಪಾಸನೆಯಿಂದ ಲಭ್ಯವಾಗುವ ಆನಂದ, ಬಟ್ಟಲೆಂದರೆ ಮಾನವ ಹೃದಯ, ಅರವಟ್ಟಿಗೆ ಎಂದರೆ ಭಕ್ತರ ಗುಂಪು. ಪ್ರಿಯತಮ ಎಂದರೆ ಬುದ್ಧಿ, ಗಂಧರ್ವ ಎಂದರೆ ದೇವರನ್ನು ಸಾಕ್ಷಾತ್ಕಾರ ಮಾಡಿಕೊಂಡವರು. ಹೀಗೆ ಇನ್ನೂ ಅನೇಕ, ಇವು ಸೂಫಿಗಳ ಮಾತು. ಇವುಗಳ ಹಿಂದೆ ಅಡಗಿದೆ ಉಮರನ ಅಂತರಂಗ, ಆತ್ಮದರ್ಶನ, ಜೀವನದ ಆಕಾಂಕ್ಷೆ. ಉಮರ್ ವಿನೋದಪ್ರಿಯನಾಗಿದ್ದ ರಸಿಕ, ಲಜ್ಜಾಹೀನನಾದ ಇಂದ್ರಿಯಾಸಕ್ತನಲ್ಲ. ಲೋಕವ್ಯವಹಾರದಲ್ಲಿಯೇ ಇದ್ದರೂ ಅನಾಸಕ್ತ. ವಿಶ್ವದ ಎಲ್ಲ ಅಂಶಗಳಲ್ಲೂ ಅಖಂಡವಾಗಿ ಮತ್ತು ಗುಪ್ತವಾಗಿರುವ ತತ್ತ್ವವನ್ನು ಅರಸುತ್ತಿದ್ದ ಸಾಧಕ. ಪ್ರಪಂಚದ ವಿಚಾರದಲ್ಲಿ ಅಭಿಮಾನವನ್ನು ತೋರಿಸುತ್ತಾನೆ. ಅದನ್ನು ಅಪಾರ್ಥ ಮಾಡಿಕೊಂಡವರಲ್ಲಿ ಮರುಕವನ್ನೂ ತೋರಿಸುತ್ತಾನೆ. ಪ್ರಪಂಚದ ಅನುಭವ ಆತನಿಗೆ ತಿರಸ್ಕೃತವಲ್ಲ. ಅದನ್ನು ಲೋಕಹಿತಕ್ಕಾಗಿ ಸಂಗ್ರಹಿಸುವಲ್ಲಿ ಜನರ ಸುಖ ಸಂತೋಷಗಳಿವೆ. ಮೋಕ್ಷ ಇದರಲ್ಲಿಯೇ ಇದೆ ಎಂಬುದು ಕವಿಯ ಮತ. ಪ್ರಪಂಚಕ್ಕೆ ಮೂಲವಾದ ಪರಾತ್ಪರ ವಸ್ತು ಒಂದಿದೆ ಎನ್ನುವುದರಲ್ಲಿ ನಾಸ್ತಿಕನೆಂದೆನಿಸಿಕೊಂಡ ಈ ಕವಿಗೆ ಸ್ವಲ್ಪವೂ ಸಂದೇಹವಿರಲಿಲ್ಲ. ಆ ದೇವನನ್ನು ಅರಿಯಲು ಮಾನವಗುಣವಾದ ಪ್ರೇಮವೇ ಸಾಧನವೆಂಬುದರಲ್ಲಿ ಈ ಮಾನವದ್ವೇಷಿ ಎಂದೆನಿಸಿಕೊಂಡವನಿಗೆ ಪೂರ್ಣ ವಿಶ್ವಾಸವಿತ್ತು. ಈತ ಹಾಕಿಕೊಂಡ ಸೋಗು ಇತರರನ್ನು ವಂಚಿಸಿತ್ತೇ ಹೊರತು ಈತ ನಂಬಿದ್ದ ದೈವವನ್ನಲ್ಲ. ಜೀವನಕ್ಕೆ ಬೇಕಾಗಿದ್ದ ಸುಖ, ಶಾಂತಿ ಸಮಾಧಾನಗಳ ರೂಪದಲ್ಲಿ ದೇವರು ಈತನನ್ನು ಅನುಗ್ರಹಿಸಿದ್ದುದನ್ನು ಬಲ್ಲವರೇ ಬಲ್ಲರು. ಸಾಯುವಾಗಲೂ ಅಷ್ಟೇ ಸಮಾಧಾನದಿಂದ ಸತ್ತನಂತೆ. ಮಹಾಗರ್ವಿ ಎಂದು ಇತರರಿಗೆ ತೋರಿದರೂ ತನ್ನ ದೇವರನ್ನು ಅರಸುವುದರಲ್ಲಿ ತಾನು ಗೆದ್ದನೆಂಬ ಜಂಬ ಲೇಶಮಾತ್ರವೂ ಕವಿಗೆ ಇಲ್ಲದಿದ್ದುದು ಅವನ ವಿನೀತ ತಾತ್ತ್ವಿಕ ದೃಷ್ಟಿಗೆ ನಿದರ್ಶನ. ಓ ದೇವನೇ ನನ್ನ ಶಕ್ತಿ ಇದ್ದಷ್ಟೂ ನಿನ್ನನ್ನು ಅರಿಯಲು ವಿಫಲನಾಗಿದ್ದರೆ ನನ್ನನ್ನು ಕ್ಷಮಿಸು. ಏಕೆಂದರೆ ನಾನು ಹೊಂದಿರತಕ್ಕ ಅಲ್ಪ ಶಕ್ತಿಯೇ ನಿನ್ನನ್ನು ಅರಿಯಲು ನನ್ನಲ್ಲಿ ಉಳಿದಿರುವ ಏಕೈಕ ಸಾಧನ-ಇದು ಆತನ ಹೃದಯ ನಿವೇದನೆ. ಈ ಜೀವನ ರಹಸ್ಯಮಯ, ಇದರ ಮೊದಲು ಗೊತ್ತಿಲ್ಲ. ಇದರ ಭವಿಷ್ಯವೂ ಗೊತ್ತಿಲ್ಲ. ಈ ಎರಡು ಗೊತ್ತಿರದ ಅಂಕಗಳ ಮಧ್ಯೆ ನಾನು ಇರುವುದಾದರೂ ಎರಡೇ ದಿನ. ಇದ್ದಾಗ ಮಾಡಬಹುದಾದರೂ ಏನು? ಇದು ಉಮರನ ಪ್ರಶ್ನೆ, ಕವಿಯೇ ಉತ್ತರಿಸುತ್ತಾನೆ: ಕುಡಿ, ಕುಡಿದು ಸತ್ತರೆ, ನೀನಿತ್ತ ಬರಲಾರೆ! ಈ ಕುಡಿಯುವ ಅರ್ಥವಾದರೂ ಏನು? ಭಗವಂತನೆಂಬ ಮಧುವನ್ನು. ಕುಡಿದವ ಅಮರನಲ್ಲವೇ? ಹಿಂತಿರುಗಿ ಹೇಗೆ ಬರಬಲ್ಲ? ಉಮರನ ಮಾತು ಹೀಗೆ, ಅರ್ಥ ಹೀಗೆ.
  • ತಾನಿದ್ದ ಪ್ರಪಂಚಕ್ಕೆ ವಿಚಿತ್ರ ಒಗಟಿನಂತೆ ಕಂಡಿದ್ದರೂ ಕಾಲ ಗತಿಸಿದಂತೆಲ್ಲ ಉಮರನ ನಿಜಸ್ವರೂಪ ಅರ್ಥವಾಗುತ್ತಿದೆ ಇಂಥ ಹುಚ್ಚ, ನಾಸ್ತಿಕ, ಗರ್ವಿಯ ರುಬಾಯತ್ಗಳು ನಾನಾ ಭಾಷೆಗಳಲ್ಲಿ ಅನುವಾದಗೊಂಡಿವೆ. ಇಂಗ್ಲಿಷ್, ಫ್ರೆಂಚ್, ಜರ್ಮನ್, ರಷ್ಯ ಮತ್ತಿತರ ಯುರೋಪಿನ ಭಾಷೆಗಳಲ್ಲಿ, ಸಂಸ್ಕೃತ, ಮರಾಠಿ, ತೆಲುಗು ಮತ್ತು ಕನ್ನಡ ಮೊದಲಾದ ಭಾರತೀಯ ಭಾಷೆಗಳಲ್ಲಿ ಉಮರನ ಅಮರನ್ ಅಮರವಾಣಿ ಕೇಳಿಬರುತ್ತಿದೆ. ಡಿ.ವಿ.ಗುಂಡಪ್ಪ ನವರ ಉಮರನ ಒಸಗೆಯಂತೂ ಖ್ಯಾತ ಅನುವಾದವೆನಿಸಿದೆ.

ಇಷ್ಟಪೂರ್ತಿಯನರಿತ ಮೊಗದೆಸಕಮದೆ ನಾಕ
ಕಷ್ಟವೆಂದಳುವವನ ನೆಳಲದುವೆ ನರಕ.

  • ಇದು ಉಮರ್ ಖಯ್ಯಾಮ್ ಅವರ ಒಂದು ಕವಿತೆಯ ಕುರಿತು ಡಿ ವಿ ಜಿ ಅವರ ಮಹಾನ್ ಕೃತಿ ‘ಉಮರನ ಒಸಗೆ’ಯಲ್ಲಿನ ಅನುವಾದ.

ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ;
ಕರೆವುದಿನ್ನೊಂದು ನಿಮಿಷದಲಿ ಸುಡುಗಾಡು;
ರವಿ ಶಶಿಗಳೋಡುತಿಹರೆಲ್ಲ ಶೂನ್ಯೋದಯಕೆ;
ಸಾಗುತಿಹರಟಕ! ಬಾ, ಸೊದೆಯುಣುವ ಬೇಗ.

  • ಇದು ಉಮರನ ಒಸಗೆಯ ಒಂದು ರುಬೈಯಾತ್. ಹೀಗೆ ಇಡೀ ಜಗತ್ತಿಗೇ ಬದುಕಿನ ಬಗ್ಗೆ ಬರೆದ ಮಹಾ ತತ್ವಜ್ಞಾನಿ ಉಮರ್ ಖಯ್ಯಾಮ್ (ಪೂರ್ಣ ಹೆಸರು: ಘಿಯಾತ್ ಅಲ್-ದಿನ್ ಅಬುಲ್ ಫಥಹ್ ಉಮರ್ ಇಬ್ನ್ ಇಬ್ರಾಹಿಮ್ ಅಲ್-ನಿಶಾಪುರಿ ಅಲ್-ಖಯ್ಯಾಮಿ ) ಒಬ್ಬ ಶ್ರೇಷ್ಠ ಗಣಿತಜ್ಞನೂ ಆಗಿದ್ದರು. ಉಮರ್ ಖಯ್ಯಾಮ್ ಕ್ರಿ. ಶ. 1048ರ ವರ್ಷದ ಮೇ ತಿಂಗಳ 18ರಂದು ಈಗಿನ ಇರಾನಿನಲ್ಲಿರುವ ಅಂದಿನ ಪರ್ಷಿಯಾ ದೇಶದ ನಿಷಾಪುರ್ ಎಂಬಲ್ಲಿ ಜನಿಸಿದರು. (ಈ ನಿಷಾಪುರದಲ್ಲಿನ ‘ಪುರ’ ಎಂಬುದು ಭಾರತೀಯ ಉಚ್ಛಾರದಂತಿದೆ ಅಲ್ಲವೆ!)
  • ಪರ್ಷಿಯಾ ದೇಶವೂ ಭಾರತದ ಗಣಿತಜ್ಞರ ಸಂಶೋಧನೆಗಳನ್ನು ಅದಾಗಲೇ ತಿಳಿದುಕೊಂಡಿದ್ದ ಕಾಲ. ಭಾರತದ ಗಣಿತವನ್ನೂ ಗಣನೆಗೆ ತೆಗೆದುಕೊಂಡು, ಯೂಕ್ಲಿಡನ ಗಣಿತದ ಸಿದ್ಧಾಂತಗಳನ್ನೂ ಅರಗಿಸಿಕೊಂಡು ಉಮರ್ ಖಯ್ಯಾಮ್ ಬರೆದ ಗಣಿತದ ಪುಸ್ತಕಗಳು ಜಗತ್ತಿನ ಪ್ರಮುಖ ಗಣಿತ ಗ್ರಂಥಗಳೆಂದು ಹೆಸರಾಗಿವೆ.
  • Treatise on Demonstration of Problems of Algebra ಇದು ಉಮರ್ ಖಯ್ಯಾಮರ ಗಣಿತದ ಮೇಲಿನ ಮಹಾನ್ ಗ್ರಂಥ. ಮಧ್ಯಯುಗದ ಮಹಾನ್ ಗಣಿತಜ್ಞರಲ್ಲಿ ಒಬ್ಬರೆಂದು ಪ್ರಖ್ಯಾತರಾದ ಖಯ್ಯಾಮ್ ಈ ಗ್ರಂಥದಲ್ಲಿ ಹೈಪರ್‌ಬೋಲಾವನ್ನು ವೃತ್ತದಿಂದ ಕತ್ತರಿಸಿ ಕ್ಯೂಬಿಕ್ ಸಮೀಕರಣಗಳನ್ನು ಪರಿಹರಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. x2+200x=20x2+2000 ಕ್ಯೂಬಿಕ್ ಸಮೀಕರಣವನ್ನು ಪರಿಹರಿಸಿದವರು ಉಮರ್. ಈ ಸಮಸ್ಯೆಯ ಪರಿಹಾರವನ್ನು ರೂಲರ್ ಮತ್ತು ಕಂಪಾಸ್‌ಗಳಿಂದ ಹುಡುಕಲು ಅಸಾಧ್ಯ. ಹೀಗಾಗಿ ಈ ವಿಷಯವನ್ನು 750ವರ್ಷಗಳ ನಂತರ ಅರಿಯಲಾಯಿತು! ಮತ್ತೊಮ್ಮೆ ಇದು ನಾವು ಏನೇನನ್ನು ಇಂದು ಬುದ್ಧಿವಂತಿಕೆಯಿಂದ ಮಾತಿನ ರೂಪದಲ್ಲಿ ವಿಶ್ವದಲ್ಲಿ ನಿರೂಪಿಸುತ್ತಿದ್ದೇವೆಯೋ ಇದೆಲ್ಲಾ ಮಾನವನ ಅಂತರಚಕ್ಷುವಿಗೆ ಹೊಳೆಯದ ವಿಚಾರವೇನಲ್ಲ ಎಂಬ ಭಾರತೀಯ ಋಷಿಮುನಿಗಳು ಪ್ರಸ್ತುತಪಡಿಸಿದ ಸತ್ಯವನ್ನೇ ಸುಸ್ಪಷ್ಟವಾಗಿ ತಿಳಿಸುತ್ತಿದೆ.
  • ಇದಲ್ಲದೆ ಉಮರ್ ಮತ್ತು ಆ ಕಾಲದ ಅರಬ್ ಗಣಿತಜ್ಞರು ಅಂಕಗಣಿತದಲ್ಲಿ ಸ್ಕ್ವೇರ್ ರೂಟ್, ಕ್ಯೂಬ್‌ರೂಟ್‌ಗಳನ್ನು ಕಂಡುಹಿಡಿಯುವ ಗಣಿತಕ್ಕಿಂತ ಮುಂದೆ ಹೋಗಿ ಐದು ಮತ್ತು ಆರನೆಯ ರೂಟ್‌ಗಳನ್ನು ಹುಡುಕುವ ವಿಧಾನಗಳನ್ನು ಸಹಾ ರೂಪಿಸಿದ್ದರು. ಪ್ಯಾಸ್ಕಲ್‌ನ ತ್ರಿಕೋನ ಎಂಬ ಪ್ರಖ್ಯಾತ ಗಣಿತ ಸಂಗತಿಯನ್ನೂ ಉಮರ್ ಹನ್ನೊಂದನೇ ಶತಮಾನದಲ್ಲೇ ಪ್ರತಿಪಾದಿಸಿದ್ದರು ಎಂದು ವಿದ್ವಾಂಸರ ಅಭಿಪ್ರಾಯವಿದೆ. ಇದೆಲ್ಲವನ್ನೂ ಆರ್ಯಭಟರೂ ಇದಕ್ಕೆ ಮುಂಚೆಯೇ ತಿಳಿಸಿದ್ದರು ಎಂಬುದು ಭಾರತೀಯ ಚಿಂತನೆಗಳಲ್ಲಿದೆ.
  • ಉಮರ ಖಯ್ಯಾಮರ ಮನೆಯವರು ಗುಡಾರ (ಟೆಂಟ್) ನಿರ್ಮಿಸುವ ವೃತ್ತಿಯವರು. ಅಲ್ ಖಯ್ಯಾಮ್ ಎಂದರೆ ಟೆಂಟ್ ಮೇಕರ್ ಎಂದೇ ಅರ್ಥ. ತನ್ನ ಈ ಹಿನ್ನೆಲೆಯನ್ನೇ ಖಯ್ಯಾಮ್ ಒಂದು ರುಬೈಯಾತ್‌ನಲ್ಲಿ ಹೀಗೆ ಹೇಳಿದ್ದಾರೆ:

ವಿಜ್ಞಾನದ ಗುಡಾರವ ಹೊಲೆದ ಖಯ್ಯಾಮ್
ಯಾತನೆಯ ತಿದಿಯೊಳಗೆ ಬಿದ್ದಿರುವನು;
ಹಠಾತ್ತನೆ ಸುಟ್ಟುಹೋಗಿರುವನು
ಅವನ ಬದುಕಿನ ಗುಡಾರದ ಹಗ್ಗಗಳನ್ನು
ವಿಧಿಯಲುಗು ಕತ್ತರಿಸಿರುವುದು
ಆಸೆಗಳ ದಲ್ಲಾಳಿಯು ಅವನನ್ನು ಕಾಸಿಲ್ಲದೆ ಮಾರಿರುವನು!

  • ಯುವ ವಯಸ್ಸಿನಲ್ಲೇ ಸಮರಖಂಡಕ್ಕೆ ಹೋಗಿ ಶಿಕ್ಷಣ ಪಡೆದ ಖಯ್ಯಾಮ್ ನಂತರ ಬುಖಾರಾಗೆ ಹೋಗಿ ನೆಲೆಸಿ ವಿಶ್ವಖ್ಯಾತ ಗಣಿತಜ್ಞ, ಖಗೋಳಶಾಸ್ತ್ರಜ್ಞ ಎಂದೇ ಪ್ರಸಿದ್ಧರಾದರು. ಹಲವು ದಶಕಗಳ ಕಾಲ ತತ್ವಶಾಸ್ತ್ರವನ್ನು ಬೋಧಿಸಿದ ಖಯ್ಯಾಮ್‌ ಅವರ ಸಮಾಧಿಸ್ಥಳವು ಈಗ ವಿಶ್ವಖ್ಯಾತ ವಾಸ್ತುಶಿಲ್ಪದ ಅದ್ಭುತವೆಂದೇ ಪ್ರಸಿದ್ಧವಾಗಿದೆ. ಪ್ರತಿವರ್ಷವೂ ಸಾವಿರಾರು ಜನ ಇಲ್ಲಿಗೆ ಭೇಟಿ ನೀಡುತ್ತಾರೆ.
  • ಉಮರರ ಬದುಕಿನಲ್ಲಿ 11ನೇ ಶತಮಾನದ ರಾಜಕೀಯ ಸ್ಥಿತ್ಯಂತರಗಳು ಭಾರೀ ಪ್ರಭಾವ ಬೀರಿದವು. ಅಂದಿನ ಚಿತ್ರ ವಿಚಿತ್ರ ರಾಜಕೀಯ ಘಟನೆಗಳ ಸಮಯದಲ್ಲಿ ತಮಗೆ ಎದುರಾದ ಎಲ್ಲ ಕಷ್ಟಗಳನ್ನೂ ಉಮರರು ಬೀಜಗಣಿತದ ಪುಸ್ತಕದಲ್ಲಿ ಬರೆಡಿದ್ದಾರೆ. 25ರ ಹರೆಯದ ಹೊತ್ತಿಗೇ ಅಂಕಗಣಿತ, ಬೀಜಗಣಿತ ಮತ್ತು ಸಂಗೀತದ ಮೇಲೆ ಪುಸ್ತಕಗಳನ್ನು ಬರೆದಿದ್ದ ಉಮರ್ 1070ರಲ್ಲಿ ಉಜ್ ಬೆಕಿಸ್ತಾನದ ಸಮರಖಂಡಕ್ಕೆ ಹೋದರು. ಇದು ಮಧ್ಯ ಏಷ್ಯಾದ ಅತಿ ಪ್ರಾಚೀನ ನಗರ. ಅಲ್ಲೇ ಉಮರರು ಬೀಜಗಣಿತದ ಮಹಾಗ್ರಂಥವನ್ನು ಬರೆದಿದ್ದು.
  • ಆ ದೇಶದ ಅಂದಿನ ರಾಜ ಉಮರರಿಗೆ ಆಹ್ವಾನ ನೀಡಿ ಅಲ್ಲಿ ಒಂದು ಖಗೋಳ ವೀಕ್ಷಣಾಲಯವನ್ನು ಸ್ಥಾಪಿಸಲು ಕೇಳಿಕೊಂಡರು. ಅಲ್ಲಿ ಎಂಟು ವರ್ಷಗಳ ಕಾಲ ತನ್ನ ಸಹ ವಿಜ್ಞಾನಿಗಳೊಂದಿಗೆ ಸಂಶೋಧನೆ ನಡೆಸಿದ ಉಮರ್ ಒಂದು ವರ್ಷ ಎಂದರೆ ಇಷ್ಟೇ ದಿನಗಳು ಎಂಬ ಕರಾರುವಾಕ್ ಲೆಕ್ಕವನ್ನು ಹಾಕಿ ತೋರಿಸಿದರು. ಗಣಿತಜ್ಞನಾಗುವುರ ಜೊತೆಗೆ ಖಗೋಳಶಾಸ್ತ್ರಜ್ಞರಾಗಿದ್ದ ಉಮರ್ ಒಂದು ಸೌರ ವರ್ಷ ಎಂದರೆ 365.24219858156 ದಿನಗಳು ಎಂದು ಘೋಷಿಸಿದರು. 500ವರ್ಷಗಳ ನಂತರ ಬಂದ ಗ್ರೆಗೊರಿಯನ್ ಕ್ಯಾಲೆಂಡರಿಗಿಂತ ಖಯ್ಯಾಮರ ಕ್ಯಾಲೆಂಡರ್ ಹೆಚ್ಚು ಖಚಿತವಾಗಿತ್ತು. ಈಗಲೂ ಮುಸ್ಲಿಮರು ಉಮರ್ ರೂಪಿಸಿದ ಕ್ಯಾಲೆಂಡರನ್ನೇ ಜಲಾಲಿ ಶಕೆ ಎಂದು ಕರೆದು ಬಳಸುತ್ತಿದ್ದಾರೆ.
  • ಕವಿಯಾಗಿ ಖಯ್ಯಾಮ್ ಸುಮಾರು ಒಂದು ಸಾವಿರ ರುಬೈಯಾತ್‌ಗಳನ್ನು ಬರೆದಿದ್ದಾರೆ. ಅವರ ಕಾವ್ಯವೇ ಈಗ ಅವರ ಗಣಿತದ ಸಂಶೋಧನೆಗಳಿಗಿಂತ ಹೆಚ್ಚು ಪ್ರಸಿದ್ಧ!
  • ಖಯ್ಯಾಮ್ ಸಂಗೀತಜ್ಞರೂ ಆಗಿದ್ದರು. ಸಂಗೀತದ ಕುರಿತೂ ಅವರು ಗ್ರಂಥ ರಚಿಸಿದ್ದಾರೆ. ಮುಂದೆ ವಿಶ್ವಕಂಡ ಯಾಂತ್ರಿಕ ಶಾಸ್ತ್ರದ ಪರಿಧಿಗೆ ಬರುವ ‘ಜ್ಞಾನದ ಸಮತೋಲನ’ದ ಕುರಿತಾಗಿ ಸಹಾ ಅವರು ಗ್ರಂಥ ರಚಿಸಿದ್ದರು.
  • `ದಿ ಜೀನಿಯಸ್ ಆಫ್ ಉಮರ್ ಖಯ್ಯಾಮ್’ ಎಂಬ ಡಾಕ್ಯುಮೆಂಟರಿಯನ್ನು ಬಿಬಿಸಿಯು ರೂಪಿಸಿದೆ. ಉಮರರ ಬದುಕಿನ ಆಳಗಳನ್ನು ಈ ವಾರ್ತಾಚಿತ್ರವು ದಾಖಲಿಸಿದೆ. ಉಮರರ ಕಾವ್ಯದಷ್ಟೇ ಗಟ್ಟಿಯಾದ ಅವರ ವಿಜ್ಞಾನ ಸಂಶೋಧನೆಗಳ ಬಗ್ಗೆ ಈ ಡಾಕ್ಯುಮೆಂಟರಿ ವಿವರ ನೀಡುತ್ತದೆ. ಎಡ್ವರ್ಡ್ ಫಿಟ್‌ಜೆರಾಲ್ಡ್ ಅವರು ಉಮರರ ಒಸಗೆಯನ್ನು ಇಂಗ್ಲಿಷಿನಲ್ಲಿ ಪ್ರಕಟಿಸಿದಾಗ ಅದನ್ನು ಯಾರೂ ಕಣ್ಣೆತ್ತಿಯೂ ನೋಡಲಿಲ್ಲವಂತೆ.
  • ಆದರೆ ಮುಂದಿನ ದಿನಗಳಲ್ಲಿ ಉಮರರ ಒಸಗೆಗಳ ಪ್ರಭಾವ ಎಷ್ಟಿತ್ತೆಂದರೆ ಅಮೆರಿಕಾ, ಇಂಗ್ಲೆಂಡುಗಳಲ್ಲಿ ಈಗಲೂ ನೂರು ವರ್ಷ, ಎಂಬತ್ತು ವರ್ಷ ದಾಟಿದ ಉಮರ್ ಖಯ್ಯಾಮ್ ಕ್ಲಬ್‌ಗಳಿವೆ. ಈ ಕ್ಲಬ್‌ಗಳಿಗೆ ಥಾಮಸ್ ಹಾರ್ಡಿಯಿಂದ ಹಿಡಿದು, ಅರ್ ಆರ್ಥರ್ ಕಾನನ್ ಡಾಯಲ್‌ ಅವರವರೆಗೆ ಹಲವು ಪ್ರಸಿದ್ಧರು ಸದಸ್ಯರಾಗಿದ್ದರು. 1957ರಲ್ಲಿ ಉಮರ್ ಖಯ್ಯಾಮ್ ಎಂಬ ಹಾಲಿವುಡ್ ಸಿನೆಮಾ ಕೂಡ ಬಂದಿದೆ.
  • ಕವಿಯಾಗಿ ಬದುಕಿನ ನಶ್ವರತೆ ಮತ್ತು ಸಾಫಲ್ಯದ ಬಗ್ಗೆ ತತ್ವಪೂರ್ಣವಾದ ಪದ್ಯಗಳನ್ನು ಬರೆದ ಉಮರ್ ಖಯ್ಯಾಮ್ ವಿಜ್ಞಾನಿಯಾಗಿ, ಗಣಿತಜ್ಞನಾಗಿ ಮನುಕುಲಕ್ಕೆ ನೀಡಿದ ಕೊಡುಗೆಯೂ ಅತ್ಯಪೂರ್ವ.

ನೋಡಿ[ಬದಲಾಯಿಸಿ]

ಕೊಂಡಿಗಳು[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. ೧.೦ ೧.೧ Professor Seyyed Hossein Nasr and Professor Mehdi Aminrazavi. “An Anthology of Philosophy in Persia, Vol. 1: From Zoroaster to ‘Umar Khayyam”, I.B. Tauris in association with The Institute of Ismaili Studies, 2007.