ವಿಷಯಕ್ಕೆ ಹೋಗು

ಇಸ್ಮತ್ ಚುಗತಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಇಸ್ಮತ್ ಚುಗಾಟೈ
ಜನನ೧೫ ಆಗಸ್ಟ್ ೧೯೧೫
ಬಡಾಯುನ್ ಗ್ರಾಮ, ಬ್ರಿಟಿಶ್ ಇಂಡಿಯಾ (ಈಗಿನ ಉತ್ತರ ಪ್ರದೇಶ)
ವೃತ್ತಿಬರಹಗಾರ್ತಿ
ರಾಷ್ಟ್ರೀಯತೆಭಾರತೀಯ
ಪ್ರಕಾರ/ಶೈಲಿಸಣ್ಣ ಕಥೆಗಳು
ವಿಷಯಸ್ತ್ರೀ ಸಮಾನತೆ, ಕ್ರಾಂತಿಕಾರಿ ವಿಷಯಗಳು

ಪ್ರಭಾವಗಳು
  • ರಶೀದ್ ಜಹಾನ್

ಸಹಿ

ಇಸ್ಮತ್ ಚುಗತಾಯಿ ಅವರು ಭಾರತ ಕಂಡ ಅತ್ಯಂತ ಉನ್ನತವಾದ ಉರ್ದು ಬರಹಗಾರ್ತಿಯರಲ್ಲಿ ಒಬ್ಬರು. ಇವರು ಸ್ತ್ರೀಸಮಾನತಾವಾದಿ ಎಂದೇ ಪ್ರಸಿದ್ಧರಾದವರು. ಬ್ರಿಟಿಷ್ ಇಂಡಿಯಾದ ಬದಾಯುನ್ (ಈಗಿನ ಉತ್ತರ ಪ್ರದೇಶ) ನಲ್ಲಿ ಮಧ್ಯಮ ವರ್ಗದ ಮುಗಲ್ ಮುಸ್ಲಿಮ್ ಕುಟುಂಬದಲ್ಲಿ ಜನಿಸಿದ ಇವರು ಹತ್ತು ಮಕ್ಕಳಲ್ಲಿ ಒಂಬತ್ತನೆಯ ಮಗಳು. ಆಗಿನ ಪ್ರಮುಖ ಲೇಖಕ ಹಾಗೂ ಕ್ರಾಂತಿಕಾರಿಯಾದ ರಶೀದ್ ಜಹಾನ್‍‍ರ ಪ್ರಭಾವದಿಂದಾಗಿ ತನ್ನ ಕೃತಿಗಳಲ್ಲಿಯೂ ಸಹ ಅವರ ರೀತಿಯೇ, ನಾಯಕಿಯರನ್ನು ರಚಿಸಿದರು. ಇಸ್ಮತ್ ಚುಗತಾಯಿ ಅವರನ್ನು ಕೆಚ್ಚೆದೆಯ ಹಾಗು ಧೀರ ಮಹಿಳೆ ಎಂದು ಹೇಳಲಾಗುತ್ತದೆ. ಅವರು ತಮ್ಮ ಪುಸ್ತಕಗಳ ಮೂಲಕ ಕ್ರಾಂತಿಕಾರಿ, ಸ್ತ್ರೀವಾದಿ ರಾಜಕಾರಣದ ಹುಟ್ಟಿಗೆ ನಿಂತವರು. ಅವರು ಸ್ತ್ರೀ ಲಿಂಗ ಲೈಂಗಿಕತೆ, ಮಧ್ಯಮ ವರ್ಗದ ದೊಡ್ಡಸ್ಥಿಕೆ ಮತ್ತು ಆಧುನಿಕ ಭಾರತದ ಇತರ ಕಾಲಕ್ಕೆ ಅಭಿವೃದ್ಧಿ ಘರ್ಷಣೆಗಳನ್ನು ಪರಿಶೋಧಿಸಿದರು. ಮುಖ್ಯವಾಗಿ ಮುಸ್ಲಿಂ ಮಹಿಳೆಯರ ಒಳ ಜೀವನದ ವರ್ಗ ಭಿನ್ನಾಭಿಪ್ರಾಯಗಳು, ಮಹಿಳಾ ವಿಮೋಚನೆಯ ಸಂಗತಿಗಳು, ಕಲ್ಪನೆ ಸೇರಿ ಕೃತಿಯನ್ನು ನಿರೂಪಿಸುತ್ತಿದ್ದರು.

ಸಾದತ್ ಹಸನ್ ಮಂಟೊ, ಕೃಷ್ಣಚಂದರ್, ರಾಜಿಂದರ್ ಸಿಂಗ್ ಬೇಡಿ, ಅಲಿ ಸರ್ದಾರ್ ಜಾಫ್ರಿ, ಅಖ್ತರ್ ಉಸ್ಮಾನ್, ಕೈಫಿ ಅಜ್ಮಿ, ಜಾನ್ ನಿಸಾರ್ ಅಖ್ತರ್ ಈಕೆಯ ಸಮಕಾಲೀನರು.

ಇಸ್ಮತ್ ಚುಗತಾಯಿ ಅವರು ಆಗಸ್ಟ್ ೧೫, ೧೯೧೫ ರಲ್ಲಿ ಉತ್ತರ ಪ್ರದೇಶದ ಬದಾಯುನ್ನಲ್ಲಿ ಜನಿಸಿದರು. ಇವರ ಪೋಷಕರು ಮಿರ್ಜಾ ಖಾಸಿಮ್ ಚುಗತಾಯಿ ಮತ್ತು ನುಸ್ರತ್ ಖಾನಮ್. ಇವರ ತಂದೆ ಮಿರ್ಜಾ ಖಾಸಿಮ್ ಚುಗತಾಯಿ ಆಗ್ರಾ, ಬರಹರ್ವೆಚ್, ಜೈಪುರ, ಕಾನ್ಪುರ, ಲಕ್ನೋ ಮತ್ತು ನಂತರ ಜೋದಪುರದಲ್ಲಿ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಆಗಿ ಸೇವೆ ಸಲ್ಲಿಸಿದ್ದಾರೆ. ಇದರಿಂದಾಗಿ ಇಸ್ಮತ್ ಹೆಚ್ಚಾಗಿ ಜೋದಪುರದಲ್ಲಿ ಬೆಳೆದರು. ಸ್ತ್ರೀ ಸಮಾನತೆ ಮತ್ತು ಲಿಂಗ ಸಮಾನತೆಗೆ ಹೆಚ್ಚು ಪ್ರಾಮುಖ್ಯತೆಯನ್ನು ನೀಡುತ್ತಿದ್ದ ಇವರು, ಹದಿನೈದನೆಯ ವಯಸ್ಸಿಗೆ ಮದುವೆಯಾಗಲು ನಿರಾಕರಿಸಿದರೂ ಸಹ, ಕುಟುಂಬದ ಒತ್ತಾಯಕ್ಕಾಗಿ ತನ್ನ ಸೋದರ ಸಂಬಂಧಿಯೊಂದಿಗೆ ನಿಶ್ಚಿತಾರ್ಥಕ್ಕೆ ಒಪ್ಪಿಕೊಂಡರು.[] ನಂತರ ೧೯೪೧ ರಲ್ಲಿ ಚಿತ್ರಕಥೆ ಬರಹಕಾರ ಮತ್ತು ನಿರ್ದೇಶಕ ಶಾಹಿದ್ ಲತಿಫ಼್ ಎಂಬುವರೊಂದಿಗೆ ಮನೆಯವರ ವಿರೋಧದ ನಡುವೆಯೇ ವಿವಾಹವಾದರು. ಇವರಿಗೆ ಸೀಮಾ ಮತ್ತು ಸಬ್ರಿನಾ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ೧೯೬೭ ರಲ್ಲಿ ಇವರ ಪತಿ ನಿಧನರಾದರು.

ವಿದ್ಯಾಭ್ಯಾಸ ಮತ್ತು ವೃತ್ತಿ

[ಬದಲಾಯಿಸಿ]

ಪ್ರಾರಂಭದಲ್ಲಿ ಸಹೋದರ ಅಝೀಮ್ ಬಾಯಿ ಚುಗತಾಯಿ ಅವರಿಂದ ಪ್ರಾಭಾವಿತರಾದ ಇಸ್ಮತ್‌ರವರು, ಅವರಿಂದ ಇಂಗ್ಲಿಷ್, ಇತಿಹಾಸ, ಖುರಾನ್ ಮತ್ತು ಹಾದಿತ್ ಕಲಿತರು. ಮನೆಯವರ ವಿರೋಧದ ನಡುವೆಯೇ ಲಕ್ನೋದ ಇಸಾಬೆಲ್ಲಾ ತೋಬರ್ನ್ ಕಾಲೇಜಿನಲ್ಲಿ ಪದವಿ ಪಡೆದರು. ಮುಂದೆ ಆಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ ಶಿಕ್ಷಕರ ತರಬೇತಿಯನ್ನು ಪಡೆಯುವ ಮುನ್ನ ಬರೇಲಿಯಲ್ಲಿರುವ ಬಾಲಕಿಯರ ಶಾಲೆಯಲ್ಲಿ ಬೋಧಿಸಿದರು. ೧೯೩೧-೧೯೪೧ ರವರಗೆ ಜೋದ್‍ಪುರದ ರಾಜ್ ಮಹಲ್ ಬಾಲಕಿಯರ ಶಾಲೆಯಲ್ಲಿ ಸೇವೆ ಸಲ್ಲಿಸಿದರು. ಬಾಂಬೆಯ ಶಾಲೆಗಳಲ್ಲಿ ಇನ್ಸ್ಪೆಕ್ಟರ್‍ ಆಗಿ ಕಾರ್ಯ ನಿರ್ವಹಿಸಿದರು. ಬಿ.ಎ. ಮತ್ತು ಬಿ.ಎಡ್. ಪದವಿಯನ್ನು ಪಡೆದುಕೊಂಡು ಎರಡೂ ಪದವಿಗಳ ಕ್ರೆಡಿಟ್‍ ಅನ್ನು ಸಾಧಿಸಿದ ಮೊದಲ ಮುಸ್ಲಿಂ ಮಹಿಳೆ ಎಂಬ ಖ್ಯಾತಿ ಇವರದ್ದು. ಇವರು ಹಲವು ಚಿತ್ರಗಳಿಗೆ ಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದಾರೆ. ಪತಿಯ ಮರಣದ ನಂತರವೂ ಇಸ್ಮತ್ ಆರು ಚಿತ್ರಗಳನ್ನು ಸಹ ನಿರ್ದೇಶನ ಮಾಡಿದರು.

ಇಸ್ಮತ್ ಚುಗತಾಯಿ ಅವರನ್ನು ಮಹಿಳಾ ಉರ್ದೂ ಬರಹಗಾರರಲ್ಲಿ ಮೊದಲ ಮತ್ತು ಅಗ್ರಗಣ್ಯ ಎಂದು ಪರಿಗಣಿಸಲಾಗುತ್ತದೆ. ಉರ್ದೂ ಸಾಹಿತ್ಯದ ಹಿರಿಯಜ್ಜಿಯೆಂದೇ ಖ್ಯಾತಿ.೧೯೪೩ರಿಂದ ತಮ್ಮ ಬದುಕನ್ನು ಬರವಣಿಗೆಗೆ ಅರ್ಪಿಸಿಕೊಂಡರು. ಪ್ರಗತಿಶೀಲ ಬರಹಗಾರರ ಗುಂಪಿಗೆ ಸೇರಿಕೊಂಡರು ಸಮಯದಲ್ಲಿ ಮುಸ್ಲಿಂ ಸಮುದಾಯದ ಮಹಿಳೆಯರಿಗೆ ಸಾಮಾನ್ಯವಾಗಿ ವಿದ್ಯಾವಂತೆಯಾಗಲು ಅನುಮತಿ ಇಲ್ಲದಿದ್ದರ ಕಾರಣ ಇಸ್ಮತ್ ಚುಗಾಟೈ ಗುಪ್ತಹೆಸರಿನಲ್ಲಿ ಬರೆಯಬೇಕಾಯಿತು. ಇಸ್ಮತ್ ಚುಗತಾಯಿ ಅವರ ಬಂಡಾಯ ಸಾಹಿತ್ಯ, ಮುಚ್ಚು ಮರೆಯಿಲ್ಲದ, ಮತ್ತು ಅವರ ವಿವಾದಾತ್ಮಕ ಬರವಣಿಗೆಯ ಶೈಲಿಯ ಕಾರಣ ಅನೇಕ ವಿರೋಧವನ್ನು ಎದುರಿಸಬೇಕಾಯಿತು. ಆದರೆ ಇದೇ ಗುಣಗಳು ಬರಹಗಾರರ ಬಗ್ಗೆ ಓದುಗರು, ಬುದ್ಧಿಜೀವಿಗಳು ಮತ್ತು ಯುವ ಜನತೆಯಲ್ಲಿ ಖ್ಯಾತಿಯನ್ನು ಗಳಿಸಿಕೊಟ್ಟಿತು. ಚುಗತಾಯಿ ಅವರು ಹೆಚ್ಚಾಗಿ ಅಂದಿನ ಮುಸ್ಲಿಂ ಸಮಾಜದಲ್ಲಿ ಹೇರಲಾಗಿದ್ದ ನಿಷೇದಗಳ ಬಗ್ಗೆ ಬರೆಯಲು ಪ್ರಾರಂಭಿಸಿದರು. ಇದಕ್ಕೆ ಉದಾಹರಣೆ ಎಂದರೆ ಉರ್ದು ಸಾಹಿತ್ಯಿಕ ಪತ್ರಿಕೆ ಆದಾಬ್-ಐ-ಲತೀಫ಼್‍ನಲ್ಲಿ ೧೯೪೨ ರಲ್ಲಿ ಪ್ರಕಟವಾದ ಇಂದಿಗೂ ಅತ್ಯಂತ ಪ್ರಸಿದ್ಧವಾಗಿರುವ ಕಥೆ- ಲಿಹಾಫ್(ಕ್ವಿಲ್ಟ್) . ಒಬ್ಬ ಶ್ರೀಮಂತ ಜಮೀನುದಾರನ ಸುಂದರ ಪತ್ನಿ ಮತ್ತು ಮನೆಯ ಕೆಲಸದವಳ ನಡುವಿನ ಸಲಿಂಗಕಾಮದ ಸಂಬಂಧವನ್ನು ಒಳಗೊಂಡಿರುವ ಲಿಹಾಫ಼್ ಅಂದಿನ ಬ್ರಿಟಿಷ್ ಸರ್ಕಾರವು ಇದನ್ನು ಕಾಮಪ್ರಚೋದಕ ಎಂದು ಪರಿಗಣಿಸಿತು. ೧೯೯೪ರಲ್ಲಿ ಲಾಹೋರ್ ಕೋರ್ಟ್‍ನಲ್ಲಿ ಲೀಹಾಫ಼್ ಕಥೆಯು ಅಶ್ಲೀಲ ಎಂದು ಇಸ್ಮತ್ ಚುಗತಾಯಿ ಅವರ ವಿರುದ್ಧ ಆದೇಶ ಹೊರಡಿಸಿತು. ನಂತರ ಕ್ಷಮೆಯಾಚಿಸುವ ಬದಲು ಹೋರಾಡಿ ಅಂತಿಮವಾಗಿ ಉಚ್ಚ ನ್ಯಾಯಾಲಯದಲ್ಲಿ ಕೇಸು ಗೆದ್ದರು. ೧೯೪೩ರಲ್ಲಿ ಚುಗತಾಯಿ ಅವರು ಬರವಣಿಗೆಯನ್ನು ತನ್ನ ವೃತ್ತಿ ಜೀವನವನ್ನಾಗಿ ತೆಗೆದುಕೊಂಡು ಪ್ರಗತಿಪರ ಗುಂಪಿನ ಸದಸ್ಯೆಯಾಗಿ ಕಾರ್ಯ ನಿರ್ವಹಿಸಿದರು. ಭಾರತೀಯ ಸಾಹಿತ್ಯದ ದಿಗಂತದಲ್ಲಿ ಪ್ರಬಲವಾದ ಮಹಿಳೆಯರ ಧ್ವನಿಯಾಗಿದ್ದಾರೆ.[]

ಚಳುವಳಿ

[ಬದಲಾಯಿಸಿ]

ಇಸ್ಮತ್ ಪ್ರೊಗ್ರೆಸಿವ್ ರೈಟರ್ಸ್ ಮೂಮೆಂಟ್ ನಲ್ಲಿ ಭಾಗವಾಗಿದ್ದರು. ಇಂಗ್ಲೆಂಡಿನಲ್ಲಿ ೧೯೩೬ ರಲ್ಲಿ ಔಪಚಾರಿಕವಾಗಿ ಪ್ರಾರಂಭವಾದ ಈ ಚಳುವಳಿ ಭಾರತಕ್ಕೂ ಕಾಲಿಟ್ಟಿತು. ಫ಼ೈಜ್ ಅಹ್ಮದ್ ಫ಼ೈಜ್, ಸಜ್ಜದ್ ಜಹೀರ್, ಕೈಫ಼ಿ ಅಜ್ಮಿ ಮತ್ತು ರಶೀದ್ ಜಹಾನ್ ನಂತಹ ಬರಹಗಾರರನ್ನು ಸೆಳೆಯಿತು. ಇಸ್ಮತ್ ಚುಗತಾಯಿ ಅವರು ಮಹಿಳೆಯರ ದೈನಂದಿನ ಜೀವನದ ವಿಷಯಗಳ ಬಗ್ಗೆ ಬರೆಯ ತೊಡಗಿದರು. ಸಾದತ್ ಹಸನ್ ಮೆಂಟೋ (೧೯೧೨-೧೯೫೫) ಸೇರಿದಂತೆ ಹಲವರ ಬಗ್ಗೆ ಬರೆದಿದ್ದಾರೆ. ಅಲಿಗಢದ ಮುಮ್ತಾಜ್ ಜಹಾನ್ ಮತ್ತು ರಶೀದ್ ಜಹಾನ್ ಇವರ ಗುರುಗಳು.

ಇಸ್ಮತ್ ಚುಗತಾಯಿ ಅವರ ಸಂಗ್ರಹಗಳು

[ಬದಲಾಯಿಸಿ]
  • ಕಾದಂಬರಿ: ತೆಹರಿ ಲಕೀರ್, ಏಕ್ ಖತರಾ ಕಿ ಖೂನ್ (೧೯೮೯)
  • ಆತ್ಮಕಥೆ: ಕಾಗಜ಼ಿ ಹೈ ಪೆಹ್ರಾನ್ (೧೯೯೪)
  • ಚಿತ್ರಕಥೆ: ಜಿದ್ಧಿ (೧೯೪೮), ಆರ್ಜೂ (೧೯೫೦), ಗರಮ್ ಹವಾ(೧೯೭೪), ಜುನೂನ್ (೧೯೭೯), ಮೈ ಡ್ರೀಮ್ಸ್ - ಸಾಕ್ಷ್ಯ ಚಿತ್ರ(೧೯೭೫), ಜವಾಬ್ ಆಯೆಗಾ (೧೯೬೮), ಸೋನೆ ಕಿ ಚಿಡಿಯಾ (೧೯೫೮), ಫ಼ಾರಿಬ್ (೧೯೫೩), ಮಹಫ಼ಿಲ್ (೧೯೮೧)
  • ಸಣ್ಣ ಕಥೆಗಳು: ಚುಯಿ ಮುಯಿ, ಕಾಲಿಯಾಂ, ಚೋಟಾನ್

ಪ್ರಶಸ್ತಿ ಮತ್ತು ಪುರಸ್ಕಾರ

[ಬದಲಾಯಿಸಿ]
  • ೧೯೭೪ ರಲ್ಲಿ ಉರ್ದು ನಾಟಕಕ್ಕೆ ಘಾಲಿಭ್ ಪ್ರಶಸ್ತಿ,
  • ತೆಹ್ರಿ ಲಕೀರ್- ಅತ್ಯುತ್ತಮ ಕಥೆಗೆ ೧೯೭೫ ರಲ್ಲಿ ಫಿಲ್ಮ್ ಫೇರ್ ಪ್ರಶಸ್ತಿ,
  • ೧೯೯೦ ರಲ್ಲಿ ಉರ್ದು ಸಾಹಿತ್ಯ ಸಮ್ಮಾನ್ ಪ್ರಶಸ್ತಿ,
  • ಸೋವಿಯಟ್ ಲ್ಯಾಂಡ್ ನೆಹರು ಪ್ರಶಸ್ತಿ.

ಮರಣ: ಇಸ್ಮತ್ ಚುಗಾಟೈ ಅವರು ೧೯೯೧ ರಲ್ಲಿ ಅಕ್ಟೋಬರ್ ೨೪ ರಂದು ತನ್ನ ೬೭ನೇ ವಯಸ್ಸಿಗೆ ನಿಧನರಾದರು. ಅವರ ಇಚ್ಛೆಯ ಪ್ರಕಾರ ಅವರನ್ನು ಮುಸ್ಲಿಂ ಸಂಪ್ರದಾಯದ ಪ್ರಕಾರ ಹೂಳುವ ಬದಲು ಚಂದನವಾಡಿ ಚಿತಗಾರದಲ್ಲಿ ಅವರ ದೇಹವನ್ನು ದಹನ ಮಾಡಲಾಯಿತು.[]

ಹೊರಗಿನ ಸಂಪರ್ಕಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಇಸ್ಮತ್‌ರವರ ಜೀವನ ಹಾಗು ಆದರ್ಶಗಳು http://www.milligazette.com/Archives/2005/01-15Feb05-Print-Edition/011502200561.htm
  2. ಸಾಹಿತ್ಯಕ್ಕೆ ಇಸ್ಮತ್‌ರವರ ಕೊಡುಗೆ http://www.deccanherald.com/content/152366/womens-transition-literature.html
  3. http://www.urdustudies.com/pdf/08/08Ismat.pdf