ಆರ್ಯಪುದ್ಗಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂಧರ್ಮದಲ್ಲಿ ಮಹಾತ್ಮರು ಎಂಬ ಪದವನ್ನು ಯಾವ ಅರ್ಥದಲ್ಲಿ ಬಳಸುತ್ತೇವೋ ಆ ಅರ್ಥದಲ್ಲಿ ಆರ್ಯಪುದ್ಗಲ ಎಂಬ ಪದವನ್ನು ಬೌದ್ಧರು ಬಳಸಿದ್ದಾರೆ. ರಾಜಾ ಆರ್ಯ ಪುದ್ಗಲಾನಾಂ ಇತ್ಯಾದಿ ಮಹಾವ್ಯುತ್ಪತ್ತಿ ಎಂಬ ಗ್ರಂಥದಿಂದ ಗೊತ್ತಾಗುತ್ತದೆ. ಜೈನರ ಪುದ್ಗಲವಾದಕ್ಕೂ ಬೌದ್ಧರ ಪುದ್ಗಲವಾದಕ್ಕೂ ಮಹದಂತರವಿದೆ. ಬೌದ್ಧರಲ್ಲಿ ಪುದ್ಗಲವೆಂದರೆ ಜೀವ. ಅಂದರೆ ಬೌದ್ಧರು ಆತ್ಮತತ್ತ್ವವನ್ನು ಒಪ್ಪದಿದ್ದರೂ ವ್ಯವಹಾರವನ್ನು ಕೈಬಿಡುವಂತಿಲ್ಲ. ರೂಪ, ವಿಜ್ಞಾನ, ವೇದನಾ, ಸಂಜ್ಞಾ, ಸಂಸ್ಕಾರವೆಂಬ ಐದು ಸ್ಕಂಧಗಳಿಗಿಂತಲೂ ಆತ್ಮ ಬೇರೆ ಅಲ್ಲ ಎಂಬುದು ಅವರ ವಾದ. ಆದರೆ ವಾತ್ಸೀ ಪುತ್ರೀಯರೆಂಬ ಬೌದ್ಧ ಏಕದೇಶಿಗಳು ಇದಕ್ಕಿಂತಲೂ ಹೆಚ್ಚಿನದು ಒಂದು ಉಂಟೆಂದು ಅಂಗೀಕರಿಸುವರು. ಇದಕ್ಕೇ ಪುದ್ಗಲವೆಂದು ಹೆಸರು. ಎಂದರೆ ಹಿಂದೂಗಳಲ್ಲಿ ಒಪ್ಪಿರುವ ಜೀವ ಎಂಬ ಚೇತನದ ಸ್ಥಾನದಲ್ಲಿ ಪುದ್ಗಲವನ್ನು ಅವರು ಒಪ್ಪಿರುವರು.