ವಿಷಯಕ್ಕೆ ಹೋಗು

ಸದಸ್ಯ:Rudreshwara S

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ದೀಪಾವಳಿ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ


ರಾಗಿ ರೊಟ್ಟಿ, ಹುಚ್ಚೆಳ್ಳು ಚಟ್ನಿ ಕಾಂಬಿನೇಷನ್ ಹಿಂದಿನಿಂದ ಇಂದಿನವರೆಗೆ ಜನಪ್ರಿಯವಾಗಿದೆ. ಆದರೆ ಹೊಲದಲ್ಲಿ ಹುಚ್ಚೆಳ್ಳು ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ಹುಚ್ಚೆಳ್ಳಿನ ಲಭ್ಯತೆ ಪ್ರಮಾಣ ಕಡಿಮೆಯಾಗಿದೆ.

ಹಿಂದೆ ಸಾಂಪ್ರದಾಯಿಕ ರಾಗಿ ಹೊಲ ಪದ್ಧತಿಯಲ್ಲಿ ಹುಚ್ಚೆಳ್ಳು ಪ್ರಮುಖ ಪಾತ್ರ ವಹಿಸಿತ್ತು. ಹೊಲ ಬಿತ್ತುವಾಗ ಸಾಲಿನಲ್ಲಿ ಅವರ ಬೀಜ ಬಿತ್ತನೆ ಮಾಡುವ ಸಂದರ್ಭದಲ್ಲಿ ಜೋಳ, ಅರಸಾಮೆ, ಸಜ್ಜೆ, ತೊಗರಿ ಜತೆಗೆ ಹುಚ್ಚೆಳ್ಳು ಸೇರಿಸಿ ಬಿತ್ತನೆ ಮಾಡುತ್ತಿದ್ದರು. ರಾಗಿಯೊಂದಿಗೆ ಸಾಸಿವೆ ಸೇರಿಸಿ ಚೆಲ್ಲುತ್ತಿದ್ದರು. ಅದರೆ ಮಳೆ ಕೊರತೆಯಿಂದ ರಾಗಿ ಬೇಸಾಯ ಅನಿಶ್ಚಿತವಾದ ಮೇಲೆ, ಮೇಲೆ ಹೇಳಿದ ಎಲ್ಲ ಬೀಜಗಳ ಬಿತ್ತನೆಗೆ ಹಿನ್ನಡೆ ಉಂಟಾಯಿತು.  

ಹೊಲದಲ್ಲಿ ಹುಚ್ಚೆಳ್ಳು ಗಿಡ ಹೂ ಬಿಟ್ಟಾಗ ಹೊದಲ ಚೆಲುವು ಇಮ್ಮಡಿಯಾಗುತ್ತದೆ. ಸಾಸಿವೆ ಹಾಗೂ ಹುಚ್ಚೆಳ್ಳು ಹೊಲದ ಉಪ ಉತ್ಪನ್ನಗಳು ಅವುಗಳನ್ನು ಪ್ರತ್ಯೇಕವಾಗಿ ಕೊಯಿಲು ಮಾಡಿ, ದೊಣ್ಣೆಯಿಂದ ಬಡಿದು ಬೀಜ ತೆಗೆದು ಚೆನ್ನಾಗಿ ಒಣಗಿಸಿ ಮಾರುವ ಮೂಲಕ ಮನೆ ಖರ್ಚಿಗೆ ಹಣ ಗಳಿಸುತ್ತಿದ್ದರು.

ಹುಚ್ಚೆಳ್ಳು ಗ್ರಾಮೀಣ ಜನರ ಜೀವನದಲ್ಲಿ ಹಾಸುಹೊಕ್ಕಾಗಿದೆ. ಪರಿಷಿಗೆ ಎತ್ತುಗಳನ್ನು ಮಾರಲು ಹೋಗುವವರು, ಒತ್ತಾಗಿ ಅಕ್ಕಿ ಹಾಕಿ ಮಾಡಿದ ರಾಗಿ ಮುದ್ದೆ ಹಾಗೂ ಹುಚ್ಚೆಳ್ಳು ಚಟ್ನಿ ತಮ್ಮೊಂದಿಗೆ ಕೊಂಡೊಯ್ಯುತ್ತಿದ್ದರು. ಎರಡು ಮೂರು ದಿನ ಅದನ್ನೇ ಸೇವಿಸುತ್ತಿದ್ದರು. ಶಾವಿಗೆ ಮಾಡಿದಲ್ಲಿ, ಪಾನಕ ಹಾಗೂ ಹುಚ್ಚೆಳ್ಳು ಪುಡಿ ಇರಲೇ ಬೇಕಾಗಿತ್ತು. ಬಸ್ಸಾರು ಮಾಡಿದಾಗ ಪಲ್ಯಗಳಿಗೆ ಹುಚ್ಚೆಳ್ಳು ಪುಡಿ ಹಾಕಿದರೆ ರುಚಿ ಹೆಚ್ಚುತ್ತಿತ್ತು. ಇನ್ನು ರಾಗಿ ರೊಟ್ಟಿಗೆ ಹುಚ್ಚೆಳ್ಳು ಪುಡಿ ಹಾಕಿ ತಿಂದರೆ ಅದರ ರುಚಿಯೇ ಬೇರೆ.

ಇಷ್ಟು ಮಹತ್ವ ಹೊಂದಿರುವ ಹುಚ್ಚೆಳ್ಳು ಈಗ ರೈತರ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಈ ಬಗ್ಗೆ ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿ ಹೊಸ ತಲೆಮಾರಿನ ಜನರಿಗೆ ಹುಚ್ಚೆಳ್ಳು ಚಟ್ನಿ ರುಚಿಯೇ ಗೊತ್ತಿಲ್ಲ ಎಂದರೆ ಅತಿಶಯೋಕ್ತಿಯಾಗದು. ಈಗ ಕೆಲವರಷ್ಟೇ ಅಪರೂಪಕ್ಕೆ ಈ ಬೆಳೆಯನ್ನು ಬೆಳೆಯುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಹುಚ್ಚೆಳ್ಳಿನ ಬೆಲೆ ರೂ 80. ಹತ್ತಾರು ಅಂಗಡಿಗಳಲ್ಲಿ ಹುಡಕಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 

ಹುಚ್ಚೆಳ್ಳು ಬೆಳೆ ಹೊಲಕ್ಕೆ ಓಲೆ ಇದ್ದಂತೆ, ಅದಕ್ಕೆ ದುಂಬಿಗಳನ್ನು ಆಕಷರ್ಿಸುವ ಶಕ್ತಿ ಇದೆ. ಇದನ್ನು ಮಿಶ್ರ ಬೆಳೆಯಾಗಿ ಬಿತ್ತುವುದರಿಂದ ಪರಾಗಸ್ಪರ್ಶ ಕ್ರಿಯೆ ಸರಾಗವಾಗಿ ನಡೆದು ಇಳುವರಿ ಹೆಚ್ಚುತ್ತದೆ. ಇದನ್ನು ಬಡವರ ತುಪ್ಪ ಎಂದು ಕರೆಯಲಾಗುತ್ತದೆ. ಇದರಲ್ಲಿ ಇರುವ 'ಕ್ರೂಸ್ ಆಸಿಡ್ ಹಾಗೂ ಗ್ಲೂಕೋಸೈನಲೇಟ್' ಬಾಣಂತಿಯರಿಗೆ ಉಪಯೋಗಕಾರಿ. ಜೋಳ ಮತ್ತು ರಾಗಿ ರೊಟ್ಟಿ ಜತೆ ಹುಚ್ಚೆಳ್ಳು ಚಟ್ನಿ ಸವಿಗೆ ಸಾಟಿ ಇಲ್ಲ. ಇದಕ್ಕೆ ಪ್ರಪಂಚದ ಮೊದಲ ಖಾದ್ಯ ಎಂಬ ಹೆಗ್ಗಳಿಕೆ ಇದೆ.

 ಹುಚ್ಚೆಳ್ಳು ಮಾಯ!? : ‘ದೀಪದ ಹಬ್ಬಕ್ಕೆ ಹುಚ್ಚೆಳ್ಳು ಅಬ್ಬರಿಸಿ ಬರುತ್ತೆ’ ಎನ್ನುವ ರೈತರ ಪಾರಂಪರಿಕ ತಿಳಿವಳಿಕೆ ಈಚೆಗೆ ಸುಳ್ಳಾಗುತ್ತಿದೆ. ರೈತರ ಹೊಲಗಳಲ್ಲಿ ಈ ಹಳದಿ ಸುಂದರಿ ಮಾಯವಾಗಿದ್ದಾಳೆ.

ಹಲವು ಅಪರೂಪದ ಗುಣ ಮೈಗೂಡಿಸಿಕೊಂಡಿರುವ ಈ ಎಣ್ಣೆ ಕಾಳು ಬೆಳೆ ಕೇವಲ ಇಬ್ಬನಿ ಕುಡಿದು ಬೆಳೆಯಬಲ್ಲದು. ಜಿಲ್ಲೆಯ ಕೆಲ ರಾಗಿ ತಾಕುಗಳಲ್ಲಿ ಜೋಳ, ಅಲಸಂದೆ, ಅವರೆಗಳ ಮಧ್ಯೆ ವಿರಳವಾಗಿ ಹುಚ್ಚೆಳ್ಳು ಇಣಕುತ್ತಿತ್ತು. ಈ ಬಾರಿ ತಡವಾಗಿ ಮಳೆ ಬಂದಿದ್ದರಿಂದ ಬಿತ್ತನೆ ಕೆಲವು ಕಡೆ ತಡವಾಗಿದೆ. ಆದ್ದರಿಂದ ಇರುವ ಹುಚ್ಚೆಳ್ಳು ಗಿಡಗಳು ಸಹ ಈವರೆಗೆ ಹೂವು ಮುಡಿದಿಲ್ಲ.

‘ಹುಚ್ಚೆಳ್ಳು ಬೆಳೆ ಹೊಲಕ್ಕೆ ಓಲೆ ಇದ್ದಂತೆ. ಅದಕ್ಕೆ ದುಂಬಿಗಳನ್ನು ಆಕರ್ಷಿಸುವ ಶಕ್ತಿ ಇದೆ. ಇದನ್ನು ಮಿಶ್ರ ಬೆಳೆಯಾಗಿ ಬಿತ್ತುವುದರಿಂದ ಪರಾಗಸ್ಪರ್ಶ ಕ್ರಿಯೆ ಸರಾಗವಾಗಿ ನಡೆದು ಇಳುವರಿ ಹೆಚ್ಚುತ್ತದೆ. ಆದರೆ ಇಂದು ಹುಚ್ಚೇಳು ಬಿತ್ತುವವರೇ ಕಡಿಮೆಯಾಗಿದ್ದಾರೆ. ಜತೆಗೆ ಇಂದಿನ ಜನರಿಗೆ ಹುಚ್ಚೇಳ್ಳಿನ ಬಗ್ಗೆ ತಿಳಿದಿಲ್ಲ’ ಎನ್ನುತ್ತಾರೆ ರೈತರು.

–ಎಸ್. ರುದ್ರೇಶ್ವರ, ಸಂಶೋಧನಾ ವಿದ್ಯಾರ್ಥಿ, ಬೆಂಗಳೂರು ವಿಶ್ವವಿದ್ಯಾಲಯ