ವಿಷಯಕ್ಕೆ ಹೋಗು

ಗುರು ಗೋಪೀನಾಥ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುರು ಗೋಪೀನಾಥ್
ಕೇರಳ ನಟನಂ ೧೯೩೨ರ ವರ್ಷದಲ್ಲಿ - ರಾಗಿಣಿ ದೇವಿ ಮತ್ತು ಗುರು ಗೋಪೀನಾಥರಿಂದ ಲಕ್ಷ್ಮೀನಾರಾಯಣ ನೃತ್ಯ
ಜನನಜೂನ್ ೨೪, ೧೯೦೮
ಕೇರಳದ ಅಲೆಪ್ಪಿ ಜಿಲ್ಲೆಯ ಚಂಪಾಕ್ಕುಳಂ
ಮರಣಅಕ್ಟೋಬರ್ ೯, ೧೯೮೭
ವೃತ್ತಿ(ಗಳು)ಕಥಕ್ಕಳಿ ನೃತ್ಯ ಪ್ರವರ್ತಕರು, ಪ್ರಸಿದ್ಧ ನೃತ್ಯ ಕಲಾವಿದರು, ನೃತ್ಯ ಗುರು

ಭಾರತದ ನೃತ್ಯ ಕ್ಷೇತ್ರದಲ್ಲಿ ಗುರು ಗೋಪೀನಾಥ್ (ಜೂನ್ ೨೪, ೧೯೦೮ - ಅಕ್ಟೋಬರ್ ೯, ೧೯೮೭) ಅವರದು ಅಚ್ಚಳಿಯದ ಹೆಸರು. ಅದ್ಭುತ ನೃತ್ಯಪಟುವಾಗಿದ್ದ ಅವರು ಶಾಸ್ತ್ರೀಯ ನರ್ತನ ಕ್ಷೇತ್ರದ ಸರಿಸಾಟಿಯಿಲ್ಲದ ಪ್ರತಿಭೆಯಾಗಿದ್ದರು. ಕಥಕ್ಕಳಿ ನೃತ್ಯ ಪ್ರಾಕಾರಕ್ಕೆ ಹೆಚ್ಚಿನ ಬೆಳಕು ತಂದರು. ಅತ್ಯುತ್ತಮ ನಟ, ಕೋರಿಯೋಗ್ರಾಫರ್ ಕೂಡ ಆಗಿದ್ದ ಗುರು ಗೋಪೀನಾಥ್ ಅವರು ೩೦-೪೦ರ ದಶಕದಲ್ಲಿ ಹಿಂದಿಯ ಖ್ಯಾತ ನೃತ್ಯ ನಿರ್ದೇಶಕ ಉದಯ ಶಂಕರ್ ಅವರಿಗೆ ಸಾಟಿಯಾಗಿದವರು ಎಂಬ ಖ್ಯಾತಿ ಪಡೆದಿದ್ದರು. ದೆಹಲಿಯ ರಾಮ್‌ಲೀಲಾ ಉತ್ಸವಕ್ಕೆ ಈಗಿನ ರೂಪ ಬಂದಿರುವುದು ಗೋಪೀನಾಥ್ ಅವರ ನೃತ್ಯ ನಿರ್ದೇಶನದಿಂದಾಗಿಯೇ ಎಂಬ ಹೆಗ್ಗಳಿಕೆಯಿದೆ.

1908ರ ಜೂನೇ 24ರಂದು ಪೆರುಮನ್ನೂರ್ ತರವಾಡು ಮನೆತನದ ಮಾಧವಿ ಅಮ್ಮ ಮತ್ತು ಕೈಪ್ಪಿಲ್ಲಿ ಶಂಕರ ಪಿಳ್ಳೈ ಪುತ್ರರಾಗಿ ಕೇರಳದ ಅಲೆಪ್ಪಿ ಜಿಲ್ಲೆಯ ಚಂಪಾಕ್ಕುಳಂನಲ್ಲಿ ಜನಿಸಿದ ಗೋಪೀನಾಥ್ ಅವರ ಮನೆತನ ಕಥಕ್ಕಳಿ ಮತ್ತು ಕೃಷಿಗೆ ಹೆಸರಾಗಿತ್ತು. ಅವರ ಮನೆತನಕ್ಕೆ ಕಥಕ್ಕಳಿಯಲ್ಲಿ ಸುಮಾರು 200 ವರ್ಷಗಳ ಇತಿಹಾಸವಿತ್ತು. 13ರ ವಯಸ್ಸಿಗೇ ಕಥಕ್ಕಳಿ ಆರಂಭಿಸಿದ ಅವರು 12 ವರ್ಷಗಳ ಕಾಲ ಶ್ರೇಷ್ಠ ಕಥಕ್ಕಳಿ ಗುರುಗಳಾದ ಚಂಪಾಕ್ಕುಳಂ ಪರಮು ಪಿಳ್ಳೈ, ಮತ್ತೂರು ಕುಂಜುಪಿಳ್ಳ ಪಣಿಕ್ಕರ್, ತಕಾಳಿ ಕೇಶವ ಪಣಿಕ್ಕರ್ ಅವರಿಂದ ಕಲಿತರು. ಮೋಹಿನಿಯಾಟ್ಟಂನ ಶ್ರೇಷ್ಠ ಕಲಾವಿದೆ ಮತ್ತು ಕೇರಳ ನಟನಂ ಪ್ರವೀಣೆ ಮುತಕ್ಕಳ್ ತಂಗಮಣಿ ಅಮ್ಮ ಅವರನ್ನು ವಿವಾಹವಾದ ಅವರಿಗೆ ನಾಲ್ವರು ಮಕ್ಕಳಿದ್ದಾರೆ.

ಶ್ರೇಷ್ಠ ಕಥಕ್ಕಳಿ ಕಲಾವಿದ ಚಂಪಾಕ್ಕುಳಂ ಪಾಚು ಪಿಳ್ಳೈ ಅವರು ಗೋಪೀನಾಥರ ಹಿರಿಯ ಸಹೋದರ. ಕಥಕ್ಕಳಿಯ ದಕ್ಷಿಣಾದಿ ಮತ್ತು ಉತ್ತರಾದಿ ಚಿಟ್ಟ (ಶೈಲಿ)ಗಳೆರಡರಲ್ಲೂ ಅವರು ಪಳಗಿದವರು. ಕೇರಳ ಕಲಾಮಂಡಲಂ ಸ್ಥಾಪಕ ವಲ್ಲತೋಳ್ ನಾರಾಯಣ ಮೆನನ್ ಅವರಿಂದ ಉನ್ನತ ಶಿಕ್ಷಣ ಪಡೆಯಲು ಆಹ್ವಾನಿತರಾದ ಗೋಪೀನಾಥರು ಪಟ್ಟಿಕ್ಕಾಮ್ ತೋಡಿ ರವುನ್ನಿ ಮೆನನ್, ಗುರು ಕುಂಚು ಕುರುಪ್ ಮತ್ತು ಗುರು ಕವಲಪ್ಪರ ನಾರಾಯಣನ್ ನಾಯರ್ ಮುಂತಾದವರಿಂದ ಹೆಚ್ಚಿನ ನೃತ್ಯ ಶಿಕ್ಷಣ ಪಡೆದರು. ರಸಾಭಿನಯ ತರಬೇತಿಯನ್ನು ಪದ್ಮಶ್ರೀ ಪುರಸ್ಕೃತ ನಾಟ್ಯಾಚಾರ್ಯ ಮಣಿ ಮಾಧವ ಚಕ್ಕಿಯರ್ ಅವರಿಂದ ಪಡೆದರು. ಅಮೆರಿಕದ ಮಿಚಿಗನ್ ಪ್ರದೇಶದಿಂದ ಬಂದು ಪ್ರಸಿದ್ಧ ನೃತ್ಯಗಾತಿ ಎನಿಸಿದ್ದ ಎಸ್ತರ್ ಲ್ಯುಯೆಲ್ಲಾ ಶೆರ್ಮನ್ ಎಂ ಪೂರ್ವ ಹೆಸರಿನ ರಾಗಿಣಿ ದೇವಿ ಅವರೊಂದಿಗೆ ಡಿಸೆಂಬರ್ ೧೯೩೨ರಲ್ಲಿ ಮುಂಬೈನಲ್ಲಿ ಪ್ರಥಮ ಪ್ರಥಮ ಪ್ರದರ್ಶನ ನೀಡಿದವರು ಗುರು ಗೋಪೀನಾಥರು.

ಕಥಕ್ಕಳಿಗೆ ಮೆರುಗು

[ಬದಲಾಯಿಸಿ]

ಗೋಪೀನಾಥ್ ಅವರ ಪ್ರಾರಂಭಿಕ ಪ್ರಯತ್ನದ ಫಲವಾಗಿ ಕೇರಳದ ಕಥಕ್ಕಳಿಯು ಅತ್ಯಂತ ಜನಪ್ರಿಯ ಮಟ್ಟಕ್ಕೇರಿತು. ಪಾರಂಪರಿಕ ಕಥಕ್ಕಳಿಗೆ ಹೊಸತನ ನೀಡಿ, ಕಥಕ್ಕಳಿ ನಟನಂ ಮತ್ತು ಬಳಿಕ ಕೇರಳ ನಟನಂ ಎಂಬ ಶೈಲಿಯನ್ನು ನೀಡಿದವರು ಅವರು. ಆದರೆ ಕಥಕ್ಕಳಿಯ ಮೂಲ ಆಶಯ ಮತ್ತು ಸಾರಕ್ಕೆ ಧಕ್ಕೆ ಬಾರದಂತೆ ಜಾಗೃತವಾಗಿರುವುದು ಅವರ ಪ್ರಯೋಗಶೀಲತೆಗೆ ಸಾಕ್ಷಿಯಾಗಿತ್ತು. 30ರ ದಶಕದ ಆದಿಭಾಗದಲ್ಲೇ ಭಾರತೀಯ ನೃತ್ಯ ಶೈಲಿಯನ್ನು ವಿದೇಶದಲ್ಲೂ ಪ್ರಚುರ ಪಡಿಸಿದವರಲ್ಲಿ ಗೋಪಿನಾಥ್ ಪ್ರಮುಖರು. ಅವರು ತಮ್ಮದೇ ಆದ ಕಥಕ್ಕಳಿ ಶೈಲಿಯಿಂದ ಪ್ರಸಿದ್ಧರಾಗಿದ್ದು, ಇದನ್ನು ಸರಳೀಕೃತ ಕಥಕ್ಕಳಿ ಎಂದೂ ಕರೆಯಬಹುದಾಗಿದೆ. ಸಾಂಪ್ರದಾಯಿಕತೆಗೆ ಭಂಗ ತಾರದೆ, ಕಥಕ್ಕಳಿಯನ್ನು ಹಾಳುಗೆಡಹದೆ, ಹೊಸತನ ಬಿಂಬಿಸುವ ಶೈಲಿಯ ಮೂಲಕ ಅದನ್ನು ಪ್ರಸಿದ್ಧಿಗೆ ತಂದಿರುವುದು ಗೋಪೀನಾಥರ ಹೆಗ್ಗಳಿಕೆ.

ಪ್ರಶಸ್ತಿ ಗೌರವಗಳು

[ಬದಲಾಯಿಸಿ]

ಚೆನ್ನೈಯಲ್ಲಿ ನಟನ ನಿಕೇತನ ಎಂಬ ನೃತ್ಯ ಶಾಲೆಯನ್ನೂ ಸ್ಥಾಪಿಸಿರುವ ಅವರಿಗೆ ಬಂಗಾಳದ ರವೀಂದ್ರ ಭಾರತಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಗೋಪಿನಾಥ್ ಅವರಿಗೆ 1934ರಲ್ಲಿ ಕಲ್ಕತ್ತಾದಲ್ಲಿ ನಡೆದ ಬಂಗಾಳಿ ಸಂಗೀತ ಸಮಾವೇಶದಲ್ಲಿ ಅಭಿನವ ನಟರಾಜ ಬಿರುದು ದೊರೆತಿತ್ತು. ತಿರುವಾಂಕೂರು ಮಹಾರಾಜರ ಆಸ್ಥಾನ ನರ್ತಕರೂ ಆಗಿದ್ದ ಅವರು ಮದ್ರಾಸ್ ಮಲಯಾಳಂ ಸಮಾವೇಶದಲ್ಲಿ ನಟನ ಕಲಾನಿಧಿ ಬಿರುದು, ಕಲಾ ತಿಲಕಂ, ಡಿ.ಲಿಟ್ ಪದವಿ, ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಫೆಲೋಶಿಪ್ ಮುಂತಾದ ಸನ್ಮಾನ, ಬಿರುದು, ಗೌರವಗಳು ಸಂದಿವೆ.

ಮಹತ್ವದ ಕೊಡುಗೆಗಳು

[ಬದಲಾಯಿಸಿ]

ತಿರುವನಂತಪುರದ ಚಿತ್ರೋದಯ ನರ್ತಕಾಲಯಂನ ಪ್ರಾಂಶುಪಾಲರಾಗಿ, ತಿರುವಾಂಕೂರು ಆಸ್ಥಾನ ವಿದ್ವಾಂಸರಾಗಿ, ನವದೆಹಲಿಯ ಕೇರಳ ಕಲಾ ಕೇಂದ್ರ ಪ್ರಾಂಶುಪಾಲರಾಗಿ, ಮದ್ರಾಸ್ ನಟನ ನಿಕೇತನದ ನಿರ್ದೇಶಕರಾಗಿ, ನವದೆಹಲಿಯ ರಾಮ ಲೀಲಾ ನಿರ್ದೇಶಕರಾಗಿ, ಮದ್ರಾಸ್ ಸಂಗೀತ ನಾಟಕ ಸಂಘದ ಸದಸ್ಯರಾಗಿ, ಕೇಂದ್ರೀಯ ಸಂಗೀತ ನಾಟಕ ಅಕಾಡೆಮಿ ಸದಸ್ಯರಾಗಿ ಮತ್ತು ಇನ್ನೂ ಹಲವು ಸಾಂಸ್ಕೃತಿಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದರು.

ಗ್ರಂಥ ರಚನೆ

[ಬದಲಾಯಿಸಿ]

ಗುರು ಗೋಪೀನಾಥರು ಮಲಯಾಳಂ ಮತ್ತು ಇಂಗ್ಲಿಷಿನಲ್ಲಿ ಕೇರಳದ ನೃತ್ಯ ಪ್ರಾಕಾರಗಳನ್ನೊಳಗೊಂಡಂತೆ ಭಾರತೀಯ ನೃತ್ಯ ಶಾಸ್ತ್ರಗಳನ್ನು ಕುರಿತಾದ ಮಹದ್ಗ್ರಂಥಗಳನ್ನು ರಚಿಸಿದ್ದಾರೆ. ಸಂಸ್ಕೃತ ಶ್ಲೋಕಗಳನ್ನು ಒಳಗೊಂಡಂತೆ ಅವರು ರಚಿಸಿರುವ ‘The classical Dance poses of India and Abinaya Prakashika’ ಅತ್ಯಂತ ಪ್ರಸಿದ್ಧಿ ಪಡೆದಿದೆ.

ಹಿರಿಯರಿಂದ ಪ್ರಶಂಸೆ

[ಬದಲಾಯಿಸಿ]

ವಿಶ್ವಾದ್ಯಂತ ಪ್ರವಾಸ ಮಾಡಿ ನೃತ್ಯ ಕಲೆಯನ್ನು ಪ್ರಚುರಪಡಿಸಿರುವ ಅವರ ಬಗ್ಗೆ ರಾಷ್ಟ್ರಕವಿ ರವೀಂದ್ರನಾಥ ಟಾಗೋರ್ ಹೇಳಿದ್ದು ಹೀಗೆ: "ಗೋಪೀನಾಥ್ ಅವರೊಬ್ಬ ನೈತ ಕಲಾವಿದ. ದೇಶದಲ್ಲಿ ನೃತ್ಯವು ಅತ್ಯಂತ ಶ್ರೇಷ್ಠ ಕಲೆ ಎಂಬುದನ್ನು ತಮ್ಮ ಪ್ರದರ್ಶನಗಳ ಮೂಲಕ ಅವರು ಜಗತ್ತಿಗೇ ತೋರಿಸಿಕೊಟ್ಟಿದ್ದಾರೆ."

ರಂಗದಲ್ಲೇ ಕೊನೆಯುಸಿರು

[ಬದಲಾಯಿಸಿ]

ಗುರು ಗೋಪೀನಾಥರಿಗೆ ಕಲೆಯಲ್ಲಿ ಅಪಾರ ಪ್ರೀತಿ, ಭಕ್ತಿ, ಗೌರವಗಳು. ತಾವು ಅಭಿನಯಿಸುತ್ತಿರುವಾಗಲೇ ಕೊನೆಯುಸಿರೆಳೆಯಲು ಇಚ್ಚಿಸಿದ್ದ ಅವರು ಅಕ್ಟೋಬರ್ ೯, ೧೯೮೭ರಂದು ಏರ್ನಾಕುಲಂನ ಫೈನ ಆರ್ಟ್ಸ್ ಹಾಲಿನಲ್ಲಿ ತಮ್ಮ ಪ್ರಸಿದ್ಧ ‘ರಾಮಾಯಣ ನೃತ್ಯ ರೂಪಕ’ವು ಜರುಗುತ್ತಿರುವಾಗಲೇ ರಂಗದ ಮೇಲೆಯೇ ತಮ್ಮ ಕೊನೆಯುಸಿರೆಳೆದರು. ಕೇರಳ ಸರ್ಕಾರವು ಗುರು ಗೊಪೀನಾಥರ ಗೌರವಾರ್ಥ ‘ಗುರು ಗೋಪೀನಾಥ ನಟನಗ್ರಾಮಂ’ ಸ್ಥಾಪಿಸಿದೆಯಲ್ಲದೆ ತಿರುವನಂತಪುರದಲ್ಲಿ ಅವರ ಸ್ಮಾರಕವನ್ನು ನಿರ್ಮಿಸಿದೆ. ೨೦೦೮ರ ವರ್ಷದಲ್ಲಿ ಅವರ ಜನ್ಮ ಶತಾಬ್ಧಿ ವರ್ಷವನ್ನು ಸಾಂಸ್ಕೃತಿಕ ವಿಜ್ರಂಭಣೆಯಿಂದ ಆಚರಿಸಿತು.