ವಿಷಯಕ್ಕೆ ಹೋಗು

ಕರ್ನಾಟಕದ ಭೂವೈಜ್ಞಾನಿಕ ವಿಸ್ಮಯಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕದ ಭೂ ವೈಜ್ಞಾನಿಕ ವಿಸ್ಮಯಗಳು

[ಬದಲಾಯಿಸಿ]
  • ಜಗತ್ತಿನ ಪೀಠ ಭೂಮಿಗಳ ಪೈಕಿ ಕರ್ನಾಟಕವು ಒಂದು. ಭೂಮಿಯ ಆದಿಮ ಸ್ಥಿತಿಯಲ್ಲಿ ರೂಪುಗೊಂಡ ಅತ್ಯಂತ ಪುರಾತನ ಶಿಲೆಗಳು ಇಲ್ಲಿವೆ. ಮುನ್ನೂರು ಕೋಟಿ ವರ್ಷಗಳಿಗೂ ಹಿಂದೆ ಹುಟ್ಟಿದ ಶಿಲೆಗಳು ರಾಜ್ಯಾದ್ಯಂತ ವ್ಯಾಪಕವಾಗಿ ಹರಡಿವೆ. ಈ ಸುದೀರ್ಘ ಅವಧಿಯಲ್ಲಿ ಈ ನೆಲ ನಿರಂತರವಾಗಿ ಬದಲಾವಣೆ ಹೊಂದಿದೆ. ಅಗ್ನಿ ಶಿಲೆಗಳು ಕೊಚ್ಚಿ ಹೋಗಿ, ಸಾಗರ ತಳ ಸೇರಿ, ಸಂಚಯನ ಶಿಲೆಯಾಗಿ ಪುರ್ನರ್ವಿಸಿವೆ. ನೆಲದಾಳಕ್ಕೆ ಕುಸಿದು ಅಧಿಕ ಒತ್ತಡ, ಉಷ್ಣತೆಯಲ್ಲಿ ರೂಪಾಂತರಣ ಗೊಂಡಿವೆ. ಮಳೆ, ಗಾಳಿ, ಬಿಸಿಲು, ನದಿ, ಒಂದೊಂದೊ ಭೂ ಮೇಲ್ಮೈನ ಚಹರೆಯನ್ನೇ ಬದಲಾಯಿಸಿವೆ. ಈ ಎಲ್ಲ ಪ್ರಕ್ರಿಯೆಯಲ್ಲಿ ನೆಲದ ಮೇಲ್ಮೈಯಲ್ಲಿ ವೈವಿಧ್ಯಮಯ ರೂಪಗಳು ಮೈದಳೆಯುತ್ತವೆ. ಹೀಗೆ ಮೊಡುವ ಆಕೃತಿಗಳು ಮಾನವನ ಅನುಕರಣೆಗೆ ಮೀರಿವೆ.
  • ಕರ್ನಾಟಕದ ಅನೇಕ ಭಾಗಗಳಲ್ಲಿ ಭೂಮಿಯಲ್ಲಿ ಉಂಟಾಗಿರುವ ಅಸಂಖ್ಯಾತ ಬದಲಾವಣೆಗಳು ನೈಸರ್ಗಿಕ ಕಲಾಶಿಲ್ಪವಾಗಿ ಉಳಿದಿವೆ. ಮೈಸೂರಿನ ಚಾಮುಂಡಿಬೆಟ್ಟ ನೆಲದಿಂದ ಮೇಲೆದ್ದು ೭೯ ಕೋಟಿ ವರ್ಷಗಳಾಗಿವೆ. ಆಗ ಹಿಮಾಲಯದ ಪರ್ವತವೇ ಹುಟ್ಟಿರಲಿಲ್ಲ. ಭಾರತ ಉಪಖಂಡ ದಕ್ಷಿಣ ಗೊಳಾರ್ಧದ ಖಂಡಗಳೊಡನೆ ಬೆಸುಗೆ ಯಾಗಿತ್ತು. ದೈತ್ಯ ಪೆಡಂಭೂತಗಳು ಭೊಮಿಯ ಮೇಲೆ ಹುಟ್ಟುತ್ತವೆಂಬ ಸೂಚನೆಗಳು ಆಗ ಇರಲಿಲ್ಲ. ಈ ನೆಲದ ಒಂದೊಂದು ಬಗೆಯ ಶಿಲೆಯಲ್ಲೂ ಭೂಮಿಯ ರೋಚಕ ಚರಿತ್ರೆಯ ಪುಟಗಳು ಅಡಗಿವೆ.ಅವುಗಳಲ್ಲಿ ಕೆಲವನ್ನು ವಿವರಿಸಿದೆ.

ಉಳವಿಯ ಸುಣ್ಣ ಶಿಲಾಗುಹೆಗಳು

[ಬದಲಾಯಿಸಿ]
  • ಬೆಟ್ಟ ಗುಡ್ಡಗಳಲ್ಲಿ ಶಿಲೆಗಳು ಸರಿದು ದೊಡ್ಡ ದೊಡ್ಡ ಗುಹೆಗಳಾಗಿರುವುದನ್ನು ಕರ್ನಾಟಕದ ಅನೇಕ ಭಾಗಗಳಲ್ಲಿ ನೋಡಬಹುದು. ಮಳೆ, ಬಿಸಿಲು,ಗಾಳಿಯ ಕಾರ್ಯಾಚರಣೆ ಯಿಂದಾಗಿ ಶಿಲೆ ಶಿಥೀಲಿಕರಣವಾಗಿ ದುರ್ಬಲ ಭಾಗ ಕಳಚಿ ಬೀಳುವುದುಂಟು. ಅಂತಹ ಭಾಗದಲ್ಲಿ ಸವೆತ ಮತ್ತಷ್ಟು ತೀವ್ರವಾಗಿ ಕಾಲಾಂತರದಲ್ಲಿ ಆ ಪೊಳ್ಳು ಭಾಗ ಗುಹೆ ಯಾಗಿ ಮಾರ್ಪಡುತ್ತದೆ. ಸಾಗರದಲೆಗಳು ತೀರಕ್ಕೆ ಅಪ್ಪ್ಪಳಿಸಿದಾಗಲೂ ಗುಹೆಗಳಾಗಲು ಸಾಧ್ಯ. ಮಾನವನಿಗೆ ವಿಕಾಸದ ಪ್ರಾರಂಭಿಕ ಘಟ್ಟದಲ್ಲಿ ಗುಹೆಗಳೇ ಆಶ್ರಯ ತಾಣ ವಾಗಿದ್ದುವು.
  • ಉತ್ತರ ಕನ್ನಡ ಜಿಲ್ಲೆಯ ಉಳವಿ ಎಂಬಲ್ಲಿ ಮೈದಳೇದಿರುವ ಗುಹೆಗಳಿಗೆ ಅವುಗಳದೇ ಆದ ವೈಶಿಷ್ಟವಿದೆ. ಇವು ಕೂಡ ನಿಸರ್ಗದಿಂದ ಉಂಟಾಗಿರುವ ಪರಿಯೇ ಬೇರೆ. ದಾಂಡೇಲಿ ಕುಂಬಾರವಾಡಿಯ ಮಾರ್ಗದಲ್ಲಿರುವ ಚಿಕ್ಕ ಗ್ರಾಮ ಉಳವಿ. ದಾಂಡೇಲಿಯಿಂದ ೫೭ ಕಿಮಿ ದೂರವಿದೆ. ಉಳವಿಯ ಸುತ್ತ ಮುತ್ತ ಸುಮಾರು ೨೫೦ ಕೂಟೀ ವರ್ಷಗಳ ಹಿಂದಿನ ಸುಣ್ಣ ಶಿಲೆಗಳಿವೆ. ಗುಹೆಗಳು ನೆಲೆಯಾಗಿರುವುದು ಈ ಶಿಲೆಗಳಲ್ಲೆ.
  • ಅಂತರಜಾಲ ನೆಲದಾಳದಲ್ಲಿ ಸುಣ್ಣಶಿಲೆಯನ್ನು ವಿಲೀನವಾಗಿಸಿ ಪೊಳ್ಳುಗಳೂ ಭೂಗತ ಗುಹೆಗಳಾಗಿ ವಿಸ್ತರಿಸುತ್ತವೆ. ಮೇಲ್ಮೈ ನೀರು ಬಿರುಕುಗಳಲ್ಲಿ ಜಿನುಗಿ ಗುಹೆಯಿಂದ ತೊಂಗಲು ರೂಪದಲ್ಲಿ ನಿಲ್ಲುತ್ತದೆ. ಇವು ಆಲಮರದ ಬಿಳಲಿನಂತೆ ಗುಹೆಯ ಚಾವಣಿಯಿಂದ ತೂಗು ಬಿಟ್ಟಂತೆ ಕಾಣುತ್ತವೆ. ಇವನ್ನು ತೊಗು ತೊಂಗಲು ಎನ್ನುತ್ತಾರೆ. ಇದೆ ಪ್ರಕ್ರಿಯೆಯಲ್ಲಿ ಗುಹೆಯ ನೆಲದ ಮೇಲಿಂದ ಮೇಲ್ಮುಖವಾಗಿ ಬೆಳೆಯುವ ಸುಣ್ಣದ ಹೆಪ್ಪೆ ನೆಲ ತೊಂಗಲು. ಇಂಥ ತೊಂಗಲುಗಳು ಬಗೆ ಬಗೆಯ ಆಕಾರವನ್ನು ಪಡೆಯುತ್ತವೆ. ಉಳವೆಯ ಸುಣ್ಣ ಶಿಲಾ ಗುಹೆಗಳಲ್ಲಿ ವಿವಿಧ ರೂಪು ತಳೆದ ತೊಂಗಲುಗಳಿವೆ.
  • ಹನ್ನೆರಡನೆಯ ಶತಮಾನದ ಪ್ರಸಿದ್ದ ವಚನಕಾರ ಬಸವಣ್ಣನ ಸೋದರಳಿಯ ಚೆನ್ನಬಸವಣ್ಣ ಉಳವಿಯಲ್ಲಿ ಬಂದು ನೆಲಸಿದ ಮೆಲೆ ಇಲ್ಲಿಯ ಗುಹೆಗಳಿಗೆ ಶಿವಸಂಸ್ಕೃತಿಯ ಹೆಸರುಗಳು ಸ್ಥಿರವಾದವು. ಅಕ್ಕನಾಗಮ್ಮನ ಗವಿ. ವಿಭೂತಿ ಕಣಜದ ಗವಿ. ಮಹಾಮನೆ ಗವಿ. ರುದ್ರಾಕ್ಷಿ ಗವಿ ಇಲ್ಲಿನ ಗುಹೆಗಳಲ್ಲಿ ಹೆಚ್ಛು ಪ್ರಸಿದ್ದ. ಆಕಳಗವಿಯಲ್ಲಿ ಹಸುವಿನ ಕೆಚ್ಚಲನ್ನು ಹೋಲುವಂತೆ ತೊಂಗಲುಗಳು ಚಾವಣೆಯಿಂದ ತೂಗಿ ಬಿದ್ದಿವೆ. ನಿಸರ್ಗದ ಕುಶಲ ಕಲೆಗೆ ಇಲ್ಲಿನ ಗುಹೆಗಳು ಜೀವಂತ ಸಾಕ್ಷಿಯಾಗಿವೆ.

ಸಂತ ಮೇರಿ ದ್ವೀಪದ ಶಿಲಾ ಕಡಲ ತೀರ

[ಬದಲಾಯಿಸಿ]

ದಕ್ಷಿಣ ಕನ್ನಡ ಜಿಲ್ಲೆಯ ಮಲ್ಪೆಯ ಕಡಲ ತೀರ ಸುಂದರ ತಾಣಗಳಲೊಂದು. ತೀರದಿಂದ ಸುಮಾರು ೫ ಕಿಮಿ. ಪಶ್ಚಿಮಕ್ಕೆ ಸಮುದ್ರದಲ್ಲಿ ಪುಟ್ಟ ಪುಟ್ಟ ನಾಲ್ಕು ದ್ವೀಪಗಳು ಕಾಣುತ್ತವೆ. ಈ ಎಲ್ಲಾ ದ್ವೀಪಗಳನ್ನೂ ಒಟ್ಟಿಗೆ ಸಂತಮೇರಿ ದ್ವೀಪ ಎಂದು ಹೆಸರಿಸಲಾಗಿದೆ. ಇವುಗಳ ಪೈಕಿ ತೆಂಗಿನ ದ್ವೀಪವೆಂಬುದು ಉಳೀದವುಗಳಿಗಿಂತ ತುಸು ದೊಡ್ಡದು. ವಾಸ್ಕೋ-ಡಿ-ಗಾಮ ೧೫ನೆ ಶತಮಾನದಲ್ಲಿ ಜಲಮಾರ್ಗ ಅನುಸರಿಸಿ ಬಂದಾಗ ಈ ದ್ವೀಪಗಳಲ್ಲಿ ಉಳಿದು ಕೊಂಡಿದ್ದುದಾಗಿ ದಾಖಲೆಗಳಿವೆ. ನಾಗರಿಕರಿಂದ ದೂರವಿರುವ ಸಂತಮೇರಿ ದ್ವೀಪದ ಶಿಲಾಕಂಭಗಳು ಧ್ವಂಸಗೊಳ್ಳದೆ ಉಳಿದಿವೆ. ಈ ವಿರಳ ಶಿಲೆಗಳನ್ನು ಭಾರತ್ತಿಯ ಭೂ ವೈಜ್ಞಾನಿಕ ಸರ್ವೆ ರಾಷ್ಟ್ರೀಯ ಭೂ ವೈಜ್ಞಾನಿಕ ಸ್ಮಾರಕವೆಂದು ಘೋಷಿಸಿ ಸಂರಕ್ಷಿಸಿದೆ. ಮಲ್ಪೆ ಮೀನುಗಾರಿಕೆಗೆ ಹೆಸರಾಗಿದೆ. ಸಂತ ಮೇರಿ ದ್ವೀಪಗಳು ಪ್ರವಾಸಿಗಳಿಗೆ ಇಲ್ಲಿನ ಪ್ರಮುಖ ಆಕರ್ಷಣೆಯ ಕೇಂದ್ರ.

ಲಾಲ್ ಬಾಗಿನ ಪೆನಿನ್ ಸುಲಾರ್ ನೈಸ್ ಶಿಲೆ

[ಬದಲಾಯಿಸಿ]

ಬೆಂಗಳೂರಿನ ಸ್ಥಾಪಕ ಕೆಂಪೇಗೌಡ. ನಗರದ ನಾಲ್ಕೂ ದಿಕ್ಕಿನಲ್ಲಿ ನಾಲ್ಕು ಗೋಪುರಗಳನ್ನು ನಿರ್ಮಿಸಿ ನಗರದ ಗುಡಿಯನ್ನು ಗುರುತಿಸಿದ್ದ. ಇವುಗಳ ಪೈಕಿ ಬೆಂಗಳೂರಿನ ಸುಂದರದ ಉದ್ಯಾನವಾದ ಲಾಲ್ ಬಾಗಿನಲ್ಲಿದೆ. ಈ ಗೋಪುರ ನಿಂತಿರುವುದು ಅತ್ಯಂತ ಪ್ರಾಚೀನ ಶಿಲೆಗಳಲ್ಲಿ ಒಂದೆನಿಸಿರುವ ನೈಸ್ ಎಂಬ ರೂಪಾಂತರಿತ ಶಿಲೆಯ ಮೇಲೆ. ಹಿಂದೆ ಈ ಬಂಡೆಯನ್ನು ನಗರದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಗಣಿ ಮಾಡಿದ ಗುರುತುಗಳು ಈಗಲೂ ಇವೆ. ಕರ್ನಾಟಕದ ರಾಜ್ಯದ ಸುಮಾರು ಮೊಕ್ಕಾಲು ಭಾಗವನ್ನು ಆಕ್ರಮಿಸಿದ ಈ ಬಗೆಯ ಶಿಲೆ ಮುಖ್ಯವಾಗಿ ಬಯೊಟೈಟ್. ಈ ಶಿಲೆ ರೂಪುಗೊಂಡು ಸುಮಾರು ೨೯೫ ಕೋಟಿ ವರ್ಷಗಳಾಗಿವೆ ಎಂದು ಭಾರತಿಯ ವಿಜ್ಞಾನ ಮಂದಿರದ ವಿಜ್ಞಾನಿಗಳು ರೇಡಿಯೊ ಮಾಪಕ ಕಾಲಗಣನೆಯಿಂದ ನಿರ್ಧರಿಸಿದ್ದಾರೆ. ಈ ಶಿಲೆ ರೂಪುಗೊಂಡಾಗ ಪಶ್ಚಿಮ ಘಟ್ಟವಾಗಲೀ, ವಿಂಧ್ಯಾ, ಹಿಮಾಲಯ ಪರ್ವತ ಶ್ರೇಣಿಗಳಾಗಲೀ ಹುಟ್ಟಿರಲಿಲ್ಲ. ದಕ್ಷಿಣ ಭಾರತದ ಪೀಠ ಭೂಮಿಯೆನಿಸಿರುವುದು ಈ ಗಡಸು ಶಿಲೆ ರೂಪುಗೊಂಡು ಬಹುತೇಕ ಮಟ್ಟದಲ್ಲೆ ಹರಡಿ, ಉಳಿದ ಕಿರಿಯ ಪ್ರಾಯದ ಶಿಲೆಗಳಿಗೆ ಪೀಠವಾಗಿರುವುದರಿಂದ. ಭೂಮಿಯ ವಿಕಾಸದ ಪ್ರಾರಂಭ ಘಟ್ಟದಲ್ಲಿ ರೂಪುಗೊಂಡ ಈ ಶಿಲೆಗಳನ್ನು ಭೂ ವಿಜ್ಞಾನಿಗಳು ವ್ಯಾಪಕವಾಗಿ ಅಧ್ಯಯನ ಮಾಡಿದ್ದಾರೆ. ಇದು ಕೂಡ ಸಂರಕ್ಷಿತ ಭೂ ವೈಜ್ಞಾನಿಕ ಸ್ಮಾರಕ.

ಮೇಕೆದಾಟು

[ಬದಲಾಯಿಸಿ]

ಮೇಕೆ ದಾಟು ವಿಹಾರ ಸ್ಥಳ. ಬೆಂಗಳೂರಿನಿಂದ ೯೦ ಕಿ.ಮೀ. ದೂರದಲ್ಲಿದೆ. ಕನ್ನಡ ಭಾಷೆಯಲ್ಲಿ, ಮೇಕೆ ಹಾರುವಷ್ಟು ಸ್ಥಳ. ಕಾವೇರಿ ನದಿ, ಆಳವಾದ ಕಂದರಕ್ಕೆ ಧುಮುಕುತ್ತದೆ. ಅದರ ಅಗಲ ಅಷ್ಟೇನು ಹೆಚ್ಚಾಗಿಲ್ಲ. ಕೇವಲ ಮೇಕೆ ಹಾರಿ ದಾಟುವಷ್ಟು ಜಾಗ ಮಾತ್ರ ಇಲ್ಲಿದೆ. ಕಾವೇರಿ-ಅರ್ಕಾವತಿ ನದಿಯ ಸಂಗಮದ ಹತ್ತಿರದವರೆಗೆ ಕಾರ್-ಡ್ರೈವ್ ಮಾಡಿಕೊಂಡು ಹೋಗಬಹುದು. ಇದರ ನಂತರ ನದಿಯನ್ನು 'ತೆಪ್ಪ'ದಲ್ಲಿ ದಾಟಬಹುದು. ನೀರು ಆಳವಿಲ್ಲದಿದ್ದರೆ ನಡೆದೇ ಹೋಗಬಹುದು. ಇಲ್ಲಿಂದ ಮೇಕೆದಾಟು ೪ ಕಿ. ಮೀ ದೂರವಿದೆ. ಮೇಕೆದಾಟುವಿನವರೆಗೆ, ಹೋಗಲು ಕೇವಲ ೧ ಬಸ್ ಇದೆ. 'ಮಾನ್ಸೂನ್,' ಸಮಯದಲ್ಲಿ ಅಲ್ಲಿನ ಬಂಡೆಗಳ ಮೇಲೆ ಹತ್ತಲು ಬಹಳ ಕಷ್ಟ. ಜಾರುತ್ತವೆ. ಮತ್ತೊಂದು ಫಾಲ್ಸ್ 'ಚುಂಚಿ ಜಲಪಾತ,' ಹತ್ತಿರದಲ್ಲಿದೆ. ಸಂಗಮದ ಹತ್ತಿರದಿಂದ ಸ್ವಲ್ಪ ಬೇರೆ ದಿಕ್ಕಿಗೆ, ಹೋಗಬೇಕು.

ಜೋಗ ಅಥವಾ ಗೇರುಸೊಪ್ಪು ಜಲಪಾತ ಪ್ರಪಂಚದ ಪ್ರಸಿದ್ಧ ಜಲಪಾತಗಳಲ್ಲೊಂದು. ಇದು ಭಾರತದ ಎರಡನೆಯ ಅತಿ ಎತ್ತರದ ಜಲಪಾತ.[೧][೨] ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ದಟ್ಟವಾದ ಕಾಡು ಹಾಗೂ ಗುಡ್ಡಗಳಿಂದ ಆವೃತ್ತವಾದ ಜೋಗ ಕರ್ನಾಟಕದ ಒಂದು ಪ್ರಮುಖ ಪ್ರವಾಸೀ ತಾಣ. ಇಲ್ಲಿ ಸುಮಾರು ೨೯೨ ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುತ್ತದೆ. ವೈಭವದಿಂದ ಅವ್ಯಾಹತವಾಗಿ ಧುಮುಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮುಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಹೀಗೆ ನಾಲ್ಕು ಜಲ ಭಾಗಗಳಾಗಿವೆ. ಮಳೆಗಾಲದಲ್ಲಿ ಅತ್ಯ೦ತ ರಮಣೀಯ ರೂಪ ತೊಡುವ ಈ ಜಲಪಾತಗಳು ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತಾ ನೋಡುಗರ ಕಣ್ಮನ ಸೆಳೆಯುವುದು. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದು ಕೊಂಡಿದೆ ಎಂದು ಅನೇಕರು ಹೇಳುತ್ತಾರೆ.