ಆಡು ಸೋಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಡು ಸೋಗೆ
Scientific classification
ಸಾಮ್ರಾಜ್ಯ:
(ಶ್ರೇಣಿಯಿಲ್ಲದ್ದು):
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
ಗಣ:
ಕುಟುಂಬ:
ಕುಲ:
ಪ್ರಜಾತಿ:
J. adhatoda
Binomial name
Justicia adhatoda
Synonyms

Adhatoda vasica Nees

'ಆಡು ಸೋಗೆ'

'ಆಡುಸೋಗೆ' ಔಷಧೀಯ ಗುಣಗಳನ್ನು ಮೈತುಂಬಿಕೊಂಡಿರುವ ಸಸ್ಯ. ಉಷ್ಣಗುಣವನ್ನು ಹೊಂದಿದ ಈ ಸಸ್ಯ, ನೆಗಡಿ,ಕೆಮ್ಮು ಮುಂತಾದ ಸಾಮಾನ್ಯ ಕಾಯಿಲೆಗಳಿಗೆ ರಾಮಬಾಣದಂತಿದೆ. ಆಡುಸೋಗೆ ಸೊಪ್ಪನ್ನು ಉಪಯೋಗಿಸಿ ಕಷಾಯವನ್ನು ಮಾಡುತ್ತಾರೆ. ಸ್ವಲ್ಪ ಕಹಿಯಾಗಿ ಕಾಣಿಸುವ ಸೊಪ್ಪಿನ ರಸ, ಅಪಾರವಾದ ಔಷಧೀಯ ಖಜಾನೆಯನ್ನೇ ಹೊಂದಿದೆ. ಈ ಸೊಪ್ಪಿನ ವೈಜ್ಞಾನಿಕ ಹೆಸರು, ಅಡತೋಡ ಝೀಲಾನಿಕಾ (Adhatoda zeylanica), ಅಡತೋಡ ವಾಸಿಕ (Adhatoda vasica). ಈ ಸಸ್ಯದ ಸಾಮಾನ್ಯ ಹೆಸರು, ಮಲಬಾರ್ ನಟ್, ವಾಸಕ. ಸಂಸ್ಕೃತದಲ್ಲಿ ಶ್ವೇತಾವಾಸ, ವಾಸಕ, ಹಿಂದಿ ಭಾಷೆಯಲ್ಲಿ ಅರುಸ, ಮಲಯಾಳಂ ಭಾಷೆಯಲ್ಲಿ 'ಅಡಾಲೋದಕಂ'. ಇದು ’ಅಕಾಂತಕಿ' ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. ಒಂದರಿಂದ ನಾಲ್ಕು ಮೀಟರ್ ಎತ್ತರ ಬೆಳೆಯುವ ಹಸಿರು ಕಾಂಡದ ಗಿಡ. ಇದರ ಎಲೆಗಳು ಮಾವಿನೆಲೆಯನ್ನು ಹೋಲುತ್ತದೆ. ಆದರೆ ಮೃದು ಮತ್ತು ನುಣುಪಾಗಿರುತ್ತದೆ. ಎಲೆಗಳು ಕೆಳಗಡೆ ವಾಲಿರುತ್ತವೆ. ಎಲೆಗಳ ತೊಟ್ಟು ಕಾಂಡಕ್ಕೆ ಸೇರುವ ತ್ರಿಕೋನದಲ್ಲಿ ಹೂ ಗೊಂಚಲು ಬಿಡುವುದು. ಪುಷ್ಪಪಾತ್ರೆ ಹೂವಿನ ತೊಟ್ಟಿನ ತುದಿಯಲ್ಲಿರುವುದು. ಇದರ ಮೇಲೆ ಹೂವುಗಳು ಗುಂಪಾಗಿ ತೆನೆಯಂತಿರುತ್ತದೆ. ಹೂವಿನ ಗುಚ್ಛವು ಬಿಳಿವರ್ಣದ್ದಾಗಿದ್ದರೂ ಅಲ್ಲಲ್ಲಿ ತಿಳಿ ನೇರಳೆ ಅಥವಾ ತಿಳಿ ಗುಲಾಬಿ ಬಣ್ಣವಿರುವುದು. ಕಾಯಿ ಚಪ್ಪಟೆಯಾಗಿರುತ್ತದೆ. ಇದರ ಒಳಗಡೆ ನಾಲ್ಕು ಬೀಜಗಳು ಇರುತ್ತವೆ. ಸಾಮಾನ್ಯವಾಗಿ ಪ್ರತಿ ಹಳ್ಳಿಯಲ್ಲಿಯೂ ಈ ಗಿಡವನ್ನು ಕಾಣಬಹುದಾಗಿದೆ. ಇದು ಬಹಳ ಉಪಯುಕ್ತವಾದುದು. ಇದರ ಎಲೆಗಳು ಸಿಂಹದ ಹಸ್ತದಂತಿರುತ್ತವೆ. ಆದುದರಿಂದ ಈ ಮೂಲಿಕೆಗೆ ಸಿಂಹ ಪರ್ಣಿ ಎಂದು ಸಂಸ್ಕ್ರತ ಗ್ರಂಥದಲ್ಲಿ ತಿಳಿಸುತ್ತವೆ. ಇದರಲ್ಲಿ ‘ವ್ಯಾಸಿಸೈನ್’ ಎನ್ನುವ ಕಟು ಕಹಿ ಕ್ಷಾರವಿರುತ್ತದೆ. ಇದು ಉಸಿರಾಟದ ಶ್ವಾನನಾಳಗಳ ವ್ಯಾಧಿಯನ್ನು ಗುಣಪಡಿಸುವುದರಲ್ಲಿ ಗಮನಾರ್ಹ ಪಾತ್ರವನ್ನು ವಹಿಸುತ್ತದೆ. ವಸಾಕ ಅನ್ನುವುದು ಮತ್ತೊಂದು ಹೆಸರು. ಜೇನು ದುಂಬಿಗಳು ಅತಿಯಾಗಿ ಬಯಸುವ ಮಕರಂದ ಭರಿತ ಪುಷ್ಪ ಬಿಡುವ ಗಿಡ.

'ಆಡು ಸೋಗೆ ಗಿಡ' ದ ಮೇಲ್ಮೈಭಾಗ[ಬದಲಾಯಿಸಿ]

ಕವಲುಗಳಿಂದ ತುಂಬಿರುತ್ತದೆ. ಸದಾ ಹಸುರಾಗಿರುವ ದಟ್ಟವಾದ ಪೊದೆಯಂತಿರುವ ಸಸ್ಯರಾಶಿ. ಗಿಡದ ಎಲೆಗಳು ಅಗಲವಾಗಿದ್ದು ತುದಿಯಲ್ಲಿ ಚೂಪಾಗಿರುವುದು ಇದರ ವಿಶೇಷ. ಎರಡು ದಳಗಳ ಬಿಳಿಹೂಗಳು ಒತ್ತೊತ್ತಾಗಿ ಕವಲುಗಳ ತುದಿಯಲ್ಲಿ ಕಾಣಿಸುತ್ತವೆ. ನಮ್ಮದೇಶದ ಉಷ್ಣವಲಯ ಹಾಗೂ ಸಮಶೀತೋಷ್ಣವಲಯದಲ್ಲಿ ವರ್ಶವಿಡೀ ಸ್ವಾಭಾವಿಕವಾಗಿ ಬೆಳೆಯುತ್ತವೆ. ಪೊದೆಯಂತೆ ದಟ್ಟವಾಗಿ ಬೆಳೆಯುವ ಗುಣವುಳ್ಳ ಈ ಸಸ್ಯವನ್ನು ಹೊಲದ ಬೇಲಿಯಲ್ಲೂ, ಮನೆಯ ಕಾಂಪೌಂಡ್ ಬಳಿಯಲ್ಲೂ ಬೆಳೆಸಬಹುದಾದ ಸಸ್ಯ. ಸಾಮಾನ್ಯವಾಗಿ ೨ ಮೀ ಎತ್ತರ. ಒಂಟಿ ಸಸ್ಯವಾಗಿ ಬೆಳಸಿದರೆ, ೧.೫ ಚ.ಮೀ ಸ್ಥಳಾವಕಾಶ ಇರಬೇಕು. ಕುಂಡದಲ್ಲಿ ಬೆಳೆಸುವಹಾಗಿದ್ದರೆ, ೨೫-೩೦ ಸೆಂ. ಮೀ.ಸುತ್ತಳತೆಯ ವಾಗಿದ್ದರೆ ಉತ್ತಮ. ಎಲ್ಲಾ ಸಸ್ಯಗಳು ಬಯಸುವ ಸೂರ್ಯಬೆಳಕು ಇದಕ್ಕೂ ಅಗತ್ಯ. ಆದರೂ ನೆರಳಿನಲ್ಲೂ ಬೆಳೆಸಲು ಅಡ್ಡಿಯಿಲ್ಲ. ಮನೆಯ 'ವರಾಂಡ'ದಲ್ಲಿ ಅಥಾ ದೊಡ್ಡ ಮರಗಳ ನೆರಳಿನಲ್ಲೂ ಬೆಳೆಸಬಹುದು.

'ಆಡು ಸೋಗೆ ಗಿಡ'ದ ಆರೈಕೆ[ಬದಲಾಯಿಸಿ]

ಈ ಸಸ್ಯಕ್ಕೆ ಸಹಜವಾದ ಗಡಸುಗುಣವಿದೆ. ಆಗಾಗ್ಯೆ ನೀರು ಚುಮುಕಿಸಿದರೆ ಸಾಕು. ಒಂದುವೇಳೆ ಕುಂಡದಲ್ಲಿ ಬೆಳೆಸಿದರೆ, ವಾರಕ್ಕೆರಡು ಬಾರಿಯಾದರೂ ನೀರು ಉಣಿಸುವುದು ಒಳ್ಳೆಯದು. ಸಸ್ಯವನ್ನು ಸೊಂಪಾಗಿ ಬೆಳೆಸಲು ಮತ್ತು ಅದರ ಆಕಾರವನ್ನು ನಿಯಂತ್ರಿಸಲು ಕೊಂಬೆಗಳನ್ನು ಆಗಾಗ ಕಡಿಯುವುದು ಒಳ್ಳೆಯದು. ಬಲಿತ ಎಲೆಗಳನ್ನು ನಮಗೆ ಬೇಕಾದಾಗ ಕಿತ್ತು ಬಳಸಬಹುದು. ಸರಿಯಾಗಿ ಪೋಷಿಸಿದರೆ ಗಿಡ ಹೆಚ್ಚು ಕಾಲ ಎಲೆಗಳನ್ನು ಬಿಡುತ್ತಾ ಹೋಗುತ್ತದೆ. ಸೋಗೆ ಗಿಡದ ಎಲೆಗಳನ್ನು ಅಗತ್ಯವಿದ್ದಾಗ ಕಿತ್ತುನೆರಳಿನಲ್ಲಿ ಚೆನ್ನಾಗಿ ಒಣಗಿಸಿ ಪುಡಿಮಾಡಿ ಡಬ್ಬಿಗಳಲ್ಲಿ ತುಂಬಿಟ್ಟುಕೊಳ್ಳಬಹುದು.

ಈ ವನಸ್ಪತಿಯ ಉಪಯೋಗ[ಬದಲಾಯಿಸಿ]

'ಸೋಗೆ ಗಿಡ'ದ ಎಲೆಗಳಲ್ಲದೆ, ತೊಗಟೆ, ಬೇರು, ಹೂವುಗಳೆಲ್ಲವೂ ಉಪಯೋಗಕ್ಕೆ ಬರುವುದರಿಂದ ಪುಡಿ ತಯಾರಿಸಿ ಶೇಖರಿಸಿಡಬಹುದು. ಎಲೆ ಪುಡಿಯ ಕಷಾಯ ಗಾಯವನ್ನು ಗುಣಪಡಿಸುತ್ತದೆ. ಅಸ್ತಮಾ, ನೆಗಡಿ, ಕೆಮ್ಮು, ಮುಂತಾದ ರೋಗಗಳಿಗೆ ದಿವ್ಯೌಷಧಿಯೆಂದು ನಂಬುತ್ತಾರೆ. ಹೆಚ್ಚಾಗಿ ದಮ್ಮು ಕೆಮ್ಮು ಇದ್ದಾಗ, ಎಲೆಗಳನ್ನು ಬಾಡಿಸಿ ಸ್ವಲ್ಪ ಜೇನುತುಪ್ಪವನ್ನು ಸೇರಿಸಿ ಕುಡಿದರೆ ಬೇಗನೆ ವಾಸಿಯಾಗುತ್ತದೆಯೆಂದು ಆಯುರ್ವೇದ ವೈದ್ಯರು ಹೇಳುತ್ತಾರೆ. ಇದು ಭೇದಿಗೆ ಅತ್ಯುತ್ತಮ ಮದ್ದು ಸಹಿತ. ಮನೆಯಲ್ಲಿ ಬೇರೆಗಿಡಗಳ ಜೊತೆಗೆ ಈ ಗಿಡವನ್ನೂ ನೆಡುವುದು ಒಳ್ಳೆಯದು. ಈ ವನಸ್ಪತಿಯನ್ನು 'ಆಡುಮುಟ್ಟದ ಸೊಪ್ಪು' ಎಂದು ಕರೆಯುತ್ತಾರೆ ಸಹಿತ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ದಮ್ಮು, ಶ್ವಾಸವಿಕಾರದಲ್ಲಿ[ಬದಲಾಯಿಸಿ]

ಬೆಳ್ಳುಳ್ಳಿ, ಹಿಪ್ಪಲಿ, ಮೆಣಸು, ಕಟುಕರೋಹಿಣಿ ಮತ್ತು ಆಡುಸೋಗೆ ಎಲೆಗಳನ್ನು ಸಮತೂಕದಷ್ಪು ಬಿಸಿನೀರಿನಲ್ಲಿ ಅರೆದು ಸ್ವಲ್ಪ ಜೇನು ತುಪ್ಪ ಸೇರಿಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಉಪಯೋಗಿಸುವುದು ಅಥವಾ ಆಡುಸೋಗೆ ಎಲೆಯ ಒಣಗಿದ ಚೂರ್ಣದ ಗೊಗೆಯನ್ನು ಬೀಡಿ ರೂಪದಲ್ಲಿ ಸೇದುವುದರಿಂದ ದಮ್ಮು ವ್ಯಾಧಿ ಉಪಶಮನವಾಗುತ್ತದೆ.

ಕೆಮ್ಮು[ಬದಲಾಯಿಸಿ]

ಸುಮಾರು 5ಗ್ರಾಂ ಆಡುಸೋಗೆ, 5ಗ್ರಾಂ ಹಸಿರು ಅಮೃತಬಳ್ಳಿಯ ಕಷಾಯ ಮಾಡಿ ಆರಿಸಿ ಶೋಧಿಸಿಟ್ಟುಕೊಳ್ಳುವುದು. ಇದನ್ನು ದಿವಸಕ್ಕೆರಡು ಬಾರಿ 10 ಗ್ರಾಂ ನಷ್ಟು ಶುದ್ಧ ಜೇನಿನಲ್ಲಿ ಕುಡಿಸುವುದು. ಇದು ಒಂದು ಉಪಯುಕ್ತವಾದ ವನೌಷಧಿ. ಮಕ್ಕಳಿಗಾದರೆ ಆಡುಸೋಗೆ ಎಲೆಗಳ 5ಗ್ರಾಂ ರಸವನ್ನು ಸ್ವಲ್ಪ ಜೇನಿನಲ್ಲಿ ಸೇರಿಸಿ, ಸ್ವಲ್ಪ ಬಿಸಿಮಾಡಿ ದಿವಸಕ್ಕೆ 4 ರಿಂದ 5 ಬಾರಿ ಕುಡಿಸುವುದು.

ಅಸ್ತಮ, ಗೂರಲು[ಬದಲಾಯಿಸಿ]

ಜ್ಯೇಷ್ಠಮಧು 10ಗ್ರಾಂ, ಹಿಪ್ಪಲಿ 20ಗ್ರಾಂ ಹಾಗೂ 5 ಗ್ರಾಂ ಆಡುಸೋಗೆ ಎಲೆಗಳನ್ನು ಚೆನ್ನಾಗಿ ಅರೆದು ಅಷ್ಟಾಂಶ ಕಷಾಯವನ್ನು ಮಾಡಿ ದಿವಸಕ್ಕೆ ಮೂರು ಬಾರಿ ಸ್ವಲ್ಪ ಜೇನು ಸೇರಿಸಿ ಕುಡಿಯುವುದು. ಅಥವಾ ಆಡುಸೋಗೆ ಎಲೆಯ ರಸ ಮತ್ತು ಸಮಭಾಗ ಸಕ್ಕರೆ ಸೇರಿಸಿ ರಸಾಯನ ಮಾಡಿ ಬೆಳಿಗ್ಗೆ, ಮಧ್ಯಾಹ್ನ, ಸಾಯಂಕಾಲ ರಾತ್ರಿ ನೆಕ್ಕಿಸುವುದು. ಅಥವಾ 10-12 ಆಡುಸೋಗೆ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯವನ್ನು ಮಾಡಿ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಸುವುದು.

ರಕ್ತಕಾಸ[ಬದಲಾಯಿಸಿ]

ಆಡುಸೋಗೆ ಎಲೆ ಮತ್ತು ಹಿಪ್ಪಲಿ ಚೂರ್ಣ ಸೇರಿಸಿ ಮಾಡಿದ ಕಷಾಯವನ್ನು ಪ್ರತಿ ದಿವಸ ಬೆಳಿಗ್ಗೆ ಮತ್ತು ಸಂಜೆ ಕುಡಿಸುವುದು. ಪ್ರಮಾಣ ಎರಡು ಟೀ ಚಮಚ ಅಥವಾ ಆಡುಸೋಗೆ ಮತ್ತು ಕೊತ್ತಂಬರಿ ಬೀಜ ನುಣ್ಣಗೆ ರುಬ್ಬಿ ಕಷಾಯವನ್ನು ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಸ್ವಲ್ಪ ಕುಡಿಸುವುದು.

ಮೂತ್ರಾಶಯದ ಭಾದೆ, ನೋವು[ಬದಲಾಯಿಸಿ]

20ಗ್ರಾಂ ಆಡುಸೋಗೆ ಎಲೆಗಳ ರಸಕ್ಕೆ 20ಗ್ರಾಂ ಜೇನು ತುಪ್ಪವನ್ನು ಸೇರಿಸಿ ದಿವಸಕ್ಕೆ ಎರಡು ವೇಳೆ ಸೇವಿಸುವುದು ಹಾಗೂ ಬೇವಿನ ಎಲೆ ಮತ್ತು ಆಡುಸೋಗೆ ಎಲೆಗಳನ್ನು ಜಜ್ಜಿ ಸ್ವಲ್ಪ ಬಿಸಿ ಮಾಡಿ ಕಿಬ್ಬೊಟ್ಟೆಗೆ ಕಟ್ಟುವುದು ಅಥವಾ ಬಟ್ಟೆಯಲ್ಲಿ ಕಟ್ಟಿ ಶಾಖ ಕೊಡುವುದು ಇದರಿಂದ ಮೂತ್ರಾಶಯದ ನೋವು ನಿಲ್ಲುವುದು.

ಹಳುಕಡ್ಡಿ, ತುರಿ, ನವೆ[ಬದಲಾಯಿಸಿ]

ಆಡುಸೋಗೆಯ ಚಿಗುರೆಲೆಗಳ ಜೊತೆಗೆ ಸ್ಪಲ್ಪ ಅರಿಷಿಣ ಸೇರಿಸಿ ಗೋಮೂತ್ರದಲ್ಲಿ ನುಣ್ಣಗೆ ಅರೆದು ಲೇಪಿಸುವುದು. ಎಣ್ಣೆ ಪದಾರ್ಥಗಳನ್ನು ವರ್ಜಿಸುವುದು. ಸೋಪನ್ನು ಬಳಸದೆ ಶೀಗೆಕಾಯಿ ಹಚ್ಚಿ ಸ್ನಾನ ಮಾಡುವುದು.

ರಕ್ತಪಿತ್ತ[ಬದಲಾಯಿಸಿ]

ಶರೀರದ ಯಾವುದೇ ಭಾಗದಿಂದ ವಿನಾಕಾರಣ ರಕ್ತ ಬೀಳುವ ಕಾಯಿಲೆ ಅಂದರೆ ಕಿವಿ, ಕಣ್ಣು, ಮೂಗು, ಬಾಯಿ, ಮಲದ್ವಾರ ಹಾಗೂ ದೇಹದ ಒಳಗಡೆ ಅಂದರೆ ಕರಳು ಜಠರ ಇವುಗಳಿಂದ ರಕ್ತ ಬೀಳುವುದು. ಆಡುಸೋಗೆ ಹಸಿ ಎಲೆರಸ ಸುಮಾರು 15 ಗ್ರಾಂನಷ್ಟುನ್ನು ಸ್ವಲ್ಪ ಜೇನುತುಪ್ಪ ಸೇರಿಸಿ ದಿನಕ್ಕೆರಡು ವೇಳೆ ಐದು ದಿವಸ ಕುಡಿಸುವುದು ಅಥವಾ ಪರ್ಪಾಷ್ಠಕ ಆಡುಸೋಗೆ ಸೊಪ್ಪು, ಕೊತ್ತಂಬರಿ, ಒಣಗಿದ ದ್ರಾಕ್ಷಿ ಇವುಗಳ ಸಮತೂಕದಷ್ಟನ್ನು ಚೆನ್ನಾಗಿ ಕಿವುಚಿ 30 ಗ್ರಾಂ ನಷ್ಷು ಕುಡಿಯುವುದು. ದಿನಕ್ಕೆ ಮೂರುಬಾರಿ ಬಳಸುವುದು ಅಥವಾ ಮೇಲಿನ ವಸ್ತುಗಳ ನಯವಾದ ಚೂರ್ಣ ಮಾಡಿ ಒಂದು ಟೀ ಚಮಚದಷ್ಟು ಚೂರ್ಣವನ್ನು ಒಂದು ಬಟ್ಟಲು ಶುದ್ಧವಾದ ತಣ್ಣೀರಿನಲ್ಲಿ ರಾತ್ರಿ ಹಾಕಿ ಬೆಳಿಗ್ಗೆ ಈ ನೀರನ್ನು ಕುಡಿಯುವುದು.

ಕೆಮ್ಮು, ಜ್ವರ, ಉಬ್ಬಸ[ಬದಲಾಯಿಸಿ]

ಅಮೃತಬಳ್ಳಿ ಗುಳ್ಳದ ಬೇರು ಮತ್ತು ಆಡುಸೋಗೆ ಬೇರು ಇವುಗಳ 30 ಗ್ರಾಂ ಗಳಷ್ಟು ಕಷಾಯವನ್ನು ಮಾಡುವುದು, ಕಷಾಯವನ್ನು ಎರಡು ಭಾಗ ಮಾಡಿ, ಬೆಳಿಗ್ಗೆ ಸಾಯಂಕಾಲ ಕುಡಿಸುವುದು. ಈ ಮೂಲಿಕೆಗೆ ಶ್ವಾಸಕೋಶಗಳ ಬಾಧೆ ನೀಗಿ ಕೆಮ್ಮು, ದಮ್ಮು, ಉಬ್ಬಸ, ಗೂರಲು ವಾಸಿ ಮಾಡುವ ಮಹಾ ಗುಣವಿದೆ. ಶ್ವಾಶಕೋಶ ಶ್ವಾಸನಾಳದಲ್ಲಿರುವ ಕಫವನ್ನು ಕರಗಿಸಿ ಹೊರ ಹಾಕಿ ರಕ್ತ ಶುದ್ಧ ಮಾಡಿ ಜ್ವರವನ್ನು ತಗ್ಗಿಸಿ ರಕ್ತ ಉಗುಳುವ ವ್ಯಾಧಿಯನ್ನು ವಾಸಿ ಮಾಡುವ ಅಪೂರ್ವ ಶಕ್ತಿ ಇದೆ.

ವಾಸಾದಿಘೃತ(ಚರಕ ಸಂಹಿತ)[ಬದಲಾಯಿಸಿ]

ಆಡುಸೋಗೆ ಎಲೆಗಳ ರಸ ತ್ರಿಕಟು, ಹಿಪ್ಪಲಿ, ಜೀರಿಗೆ ಅಜಮೋದ, ಚಿತ್ರಮೂಲ, ಕಾಡು ಮೇಣಸಿನ ಬೇರು, ಇವುಗಳ ಕಲ್ಕದಿಂದ ತಯಾರಿಸಿದ ಮತ್ತು ಹಸುವಿನ ತುಪ್ಪದಿಂದ ಮಾಡಿದ ಘೃತವನ್ನು ಅರ್ಧ ಚಮಚದಷ್ಟಕ್ಕೆ ಒಂದು ಟೀ ಚಮಚ ಅಪ್ಪಟ ಜೇನು ಸೇರಿಸಿ ಸೇವಿಸುವುದು. ಕಫದ ಕೆಮ್ಮು ವಾಸಿಯಾಗುವುದು. ಇದು ಚರಕ ಮಹರ್ಷಿಗಳ ಅಮೂಲ್ಯ ಕೊಡುಗೆ.

ಉಲ್ಲೇಖ[ಬದಲಾಯಿಸಿ]

ಹೊರಸಂಪರ್ಕ[ಬದಲಾಯಿಸಿ]

  • ಸುಧಾ ವಾರಪತ್ರಿಕೆ, ಉಮಾ, ೧೧, ಆಗಸ್ಟ್, ೨೦೧೧, ಪು.೬೧.
  • ಆಡು ಸೋಗೆ ಸೊಪ್ಪಿನ ಚಿತ್ರ
  • MONOGRAPH BY Dr AJAY PADMAWAR Archived 2008-06-20 ವೇಬ್ಯಾಕ್ ಮೆಷಿನ್ ನಲ್ಲಿ.
  • Flora of Nepal: Justicia adhatoda
  • Caldecott, Todd (2006). Ayurveda: The Divine Science of Life. Elsevier/Mosby. ISBN 0-7234-3410-7. Contains a detailed monograph on Justicia adhatoda syn. Adhatoda vasica (Vasa; Vasaka), as well as a discussion of health benefits and usage in clinical practice. Available online at http://www.toddcaldecott.com/index.php/herbs/learning-herbs/342-vasaka Archived 2011-06-16 ವೇಬ್ಯಾಕ್ ಮೆಷಿನ್ ನಲ್ಲಿ.