ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಅಕ್ಕದಾಸ ಗಣಪತಿ ಭಟ್ಟರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಅಕ್ಕದಾಸ ಗಣಪತಿ ಭಟ್ಟರು ಮೂಲತಃ ವ್ಯಾಪಾರಿಗಳು. ಸಿರಸಿಯ ಹತ್ತಿರದ `ಅಗಸಾಲ' ಎಂಬ ಹಳ್ಳಿಯಿಂದ ಅವರ ತಂದೆ ವ್ಯಾಪಾರ ನಿಮಿತ್ತ ಪಟ್ಟಣಕ್ಕೆ ಬಂದವರಾಗಿದ್ದರು. `ಅಗಸಾಲ' ಎಂಬ ಹೆಸರೇ ಕಾಲ ಕ್ರಮೇಣ ಜನರ ಬಾಯಿಯಲ್ಲಿ `ಅಕದಾಸ'ಎಂದಾಯಿತು. ಭಟ್ಟರು ತಮ್ಮನ್ನು `ಅಕದಾಸ' ಅಂದರೆ `ಅಜನ ಕಮಲದಲ್ಲಿ ಹುಟ್ಟಿದ ಆ ವಿಷ್ಣುವಿನ ದಾಸ' ಎಂದು ಕರೆದುಕೊಳ್ಳಲು ಅಭಿಮಾನ ಪಟ್ಟುಕೊಳ್ಳುತ್ತಿದ್ದರು. ಭಟ್ಟರು ಉಚ್ಚ ಶಿಕ್ಷಣ ಪಡೆದವರಲ್ಲ. ಆದರೆ ಪ್ರಾರಂಭದಿಂದಲೂ ಅವರಿಗೆ ಪರೋಪಕಾರ ಬುದ್ಧಿ ಹಾಗೂ ಜನಸಾಮಾನ್ಯರ ಕಷ್ಟ-ನಷ್ಟಗಳಿಗೆ ಸ್ಪಂದಿಸುವ ಸೂಕ್ಷ್ಮ ಸಂವೇದನಾಶೀಲತೆ ಅವರಲ್ಲಿತ್ತು. ಅವರು ಹೊಸ ವಿಚಾರಗಳಿಂದ ಪ್ರಭಾವಿತರಾಗಿದ್ದರು. ಬ್ರಿಟಿಷ ಕಾಲದ ದಬ್ಬಾಳಿಕೆಗೆ ಅವರು ಸಂಪೂರ್ಣ ವಿರೋಧಿಯಾಗಿದ್ದರು. ಆ ಕಾಲದಲ್ಲಿ ತಮ್ಮ ಕೆಲಸಗಳಿಗಾಗಿ `ಬಿಟ್ಟಿಯಾಗಿ ಗಾಡಿ' ಹೊಡೆಸುತ್ತಿದ್ದ ಬ್ರಿಟಿಷ್ ಅಧಿಕಾರಿಗಳ ವಿರುದ್ಧ ಅವರು ಸಿಡಿದೆದ್ದರು. ಸಿರಸಿಯಲ್ಲಿ ಬಿಟ್ಟಿ ಗಾಡಿ ವಿರೋಧಿ ಚಳವಳಿಯನ್ನೇ ಆರಂಭಿಸಿದ್ದರು.ಈ ಪ್ರಕರಣ ಬ್ರಿಟಿಷ್ ಪ್ರಾವಿ ಕೌನ್ಸಿಲ್ ವರೆಗೂ ಹೋಗಿತ್ತೆಂದು, ಅಲ್ಲಿ ಭಟ್ಟರಿಗೆ ಜಯವಾಯಿತೆಂದು ತಿಳಿದು ಬರುತ್ತದೆ. ಭಟ್ಟರು ಕ್ರಮೇಣ ತಮ್ಮ ಮನಸ್ಸನ್ನು ಸಮಾಜ ಸುಧಾರಣೆಗೆ ತಿರುಗಿಸಿದರು. ಹಿಂದೂ ಸಮಾಜದಲ್ಲಿ ಆಗ ಹೆಚ್ಚಾಗಿದ್ದ ಹಾಗೂ ಅದೆಷ್ಟೋ ಕಾಲದಿಂದ ನಡೆದು ಬಂದಿದ್ದ ಬಾಲ್ಯ ವಿವಾಹ ಹಾಗೂ ಬಾಲ ವಿಧವೆಯರ ಸಮಸ್ಯೆಗಳನ್ನು ಪರಿಹರಿಸಲು ಅವರು ಹೇತ್ಪೂರ್ವಕವಾಗಿ ಶ್ರಮಿಸಿದರು. ಹಲವಾರು ಮೂಢ ನಂಬಿಕೆಗಳಿಂದ ಜಿಡ್ಡುಗಟ್ಟಿದ್ದ ಸನಾತನ ಧರ್ಮದಲ್ಲಿ ಬೇರುಬಿಟ್ಟಿದ್ದ ನತದೃಷ್ಟ ಬಾಲವಿಧವೆಯರ ಸಮಸ್ಯೆಯನ್ನು ಬಗೆಹರಿಸಲು ವಿಧವಾ ಪುನರ್ವಿವಾಹ ಅಗತ್ಯವೆಂಬುದನ್ನು ಅವರು ಪ್ರತಿಪಾದಿಸಿದರು.ಭಟ್ಟರ ಪ್ರಗತಿಪರವಾದ ಹೊಸ ವಿಚಾರಗಳು ಸನಾತನಿಗಳಿಗೆ ತಲುಪದೇ ಕೆಲವು ಕಾಲ ಅವರು ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಈ ವಿರೋಧಗಳಿಂದ ಅಕದಾಸರು ಕೆಲಮಟ್ಟಿಗೆ ಧೃತಿಗೆಡಬೇಕಾಯಿತು. ಆದರೆ ಅವರು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯಲಿಲ್ಲ. ಅದಕ್ಕೆ ಬದಲಾಗಿ ಕೆಲವು ಕ್ರಾಂತಿಕಾರಕ ಕಾರ್ಯಗಳನ್ನೇ ಮಾಡಿದರು. ಅದರಲ್ಲಿ ಮೊದಲನೆಯದಾಗಿ ತಾವೇ ಸ್ವತಃ ಬಾಲ ವಿಧವೆಯೆಯಾದ ನಂದಿತಳೆಯ ಮಹಾಕಾಳಮ್ಮನವರನ್ನು ವಿವಾಹವಾಗಿ, ವಿಧವಾ ವಿವಾಹಕ್ಕೆ ನಾಂದಿ ಹಾಡಿದರು. ತಮ್ಮ ಆಪ್ತ ಸ್ನೇಹಿತರೊಡಗೂಡಿ ವಿವಾಹ ಸಂಘವನ್ನೇ ಸ್ಥಾಪಿಸಲು ಯತ್ನಿಸಿದರು ಹಾಗೂ ನೂರಾರು ವಿಧವಾ ವಿವಾಹಗಳನ್ನು ನೆರವೇರಿಸಿ ಅದರಲ್ಲಿ ಯಶಸ್ವಿಯಾದರು. ೧೯೩೩ರಲ್ಲಿ ಸಿರ್ಸಿ ತಾಲೂಕು ಮುಂಡಿಗೇಸರದ ದೇವಸ್ಥಾನದಲ್ಲಿ ಅಕ್ಷತಾ ವಿಧವಾ ಪುನರ್ವಿವಾಹದ ವಿಮರ್ಶೆ, ಆ ಕುರಿತು ಧಾರ್ಮಿಕ ಮುಖಂಡರ ನೇತೃತ್ವದಲ್ಲಿ ಮುಕ್ತ ಚರ್ಚೆ ನಡೆಸಿ ಅದು ಯುಕ್ತವಾದದ್ದು ಎಂದು ಸನಾತನಿಗಳಿಗೆ ಮನಗಾಣಿಸಿದರು. ವಿಧವಾ ವಿವಾಹಕ್ಕೆ ಸಂಬಂಧಪಟ್ಟಂತೆ ಭಟ್ಟರು ಹಿಂದು ವಿಧವಾ ವಿವಾಹದಲ್ಲಿ ವೇದ ಶಾಸ್ತ್ರಾಧಾರಗಳು ಹಾಗೂ ಬಾಲ ವಿಧವಾ ವಿವಾಹದ ಪ್ರಚಾರಕ್ಕೆ ವಿಜ್ಞಾಪನೆ ಮತ್ತು ಮಹನೀಯರ ಅಭಿಪ್ರಾಯಗಳು ಎಂಬ ಹೊತ್ತಿಗೆಯನ್ನು ಸಂಪಾದಿಸಿ ಪ್ರಕಟಿಸಿದರು. ಹಾಗೂ ಅವುಗಳನ್ನು ವಿಧವಾ ವಿವಾಹ ಪ್ರಚಾರ ಕಾರ್ಯದಲ್ಲಿ ಉಪಯೋಗಿಸಿಕೊಂಡರು. ಈ ರೀತಿ ಭಟ್ಟರು ವಿಧವೆಯೋರ್ವಳನ್ನು ಶಾಸ್ತ್ರ ರೀತ್ಯಾ ಲಗ್ನವಾಗಿ ಸ್ವಜಾತಿಯಿಂದ ಬಹಿಷ್ಕಾರಕ್ಕೊಳಗಾದರೂ ಧೃತಿಗೆಡದೆ ತಮ್ಮ ಕಾರ್ಯದಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡರು. ತಮ್ಮ ಜೀವಿತದ ಕೊನೆಯವರೆಗೂ ತಾವು ಕೈಕೊಂಡ ಕೆಲಸವನ್ನು ದಿಟ್ಟತನದಿಂದ ಅಪಾರ ಮಾನವೀಯ ಕಳಕಳಿಯಿಂದ ಮಾಡಿದರು. ೧೯೪೪ರಲ್ಲಿ ಭಟ್ಟರು ಹೃದಯ ಸ್ಥಂಬನದಿಂದ ಆಕಸ್ಮಿಕ ಮರಣಕ್ಕೆ ತುತ್ತಾದಾಗ ಜಾತಿ, ಮತ, ವರ್ಗ ಬೇಧವಿಲ್ಲದೇ ಅದೇನು ಅವರ ವಿರೋಧಿಗಳೂ ಸಹಸ್ರ ಸಂಖ್ಯೆಯಲ್ಲಿ ಅವರ ಅಂತ್ಯ ಕ್ರಿಯೆಯಲ್ಲಿ ಭಾಗವಹಿಸಿದ್ದು, `ಶರಣರ ಸಾವನ್ನು ಮರಣದಲ್ಲಿ ನೋಡು' ಎಂಬುದಕ್ಕೆ ಉತ್ತಮ ನಿದರ್ಶನವೆನ್ನಬಹುದು.