ಸಿರಿಭೂವಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರಿಭೂವಲಯ[೧][೨][೩]ವು ಕುಮುದೇಂದು ಮುನಿ ಎಂಬ ಜೈನ ಮುನಿಯು ರಚಿಸಿದ ಸಾಹಿತ್ಯದ ವಿಶಿಷ್ಟ ಬಹುಭಾಷಾಕೃತಿಯಾಗಿದೆ. " ಸಿರಿಭೂವಲಯ " ಗ್ರಂಥದಲ್ಲಿ ಕನ್ನಡದ ಪ್ರಾಚೀನತೆಯ ಬಗ್ಗೆ ಖಚಿತವಾದ ಹೇಳಿಕೆಗಳಿವೆ. 24ನೇ ತೀರ್ಥಂಕರ ಮಹಾವೀರರು ಕನ್ನಡ ಭಾಷೆಯಲ್ಲಿ ನೀಡಿರುವ ಉಪದೇಶಗಳ ಸಾರವೇ ಈ ಗ್ರಂಥದ ಮೂಲವೆಂದು ಕವಿ ಕುಮದೇಯಮುನಿ ಸ್ಪಷ್ಟವಾಗಿ ಸೂಚಿಸಿದ್ದು, ಇದು ಕನ್ನಡ ಭಾಷೆಯು 2300 ವರ್ಷಗಳ ಹಿಂದಿನ ಇತಿಹಾಸ ಹೊಂದಿರುವುದಕ್ಕೆ ಸಾಕ್ಷಿಯಾಗಿದೆ. ಆದಿ ತೀರ್ಥಂಕರ ವೃಷಭ ದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸೌಂದರಿಯರಿಗೆ ಕನ್ನಡ ಆಂಕಾಕ್ಷರ ಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ "ಬ್ರಾಹ್ಮೀ ಲಿಪಿ "ಎಂದೂ , ಅಂಕ ಲಿಪಿಗೆ "ಸೌಂದರಿ ಲಿಪಿ "ಎಂದೂ ಹೆಸರಾಗಿದೆ . ಈ ಖಚಿತವಾದ ಮಾಹಿತಿಯನ್ನು "ಸಿರಿಭೂವಲಯ"ವು ಬಹಳ ಸ್ಪಷ್ಟವಾಗಿ ತಿಳಿಸಿದೆ .

ಪರಿಚಯ[ಬದಲಾಯಿಸಿ]

ಕುಮುದೇಂದು ಮುನಿಯ ಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ ಬಳಿಯ ಯಲವಳಿ. ಇದರಲ್ಲಿ ಅಕ್ಷರಗಳನ್ನು ಬಳಸದೇ ಸಂಪೂರ್ಣವಾಗಿ ಕನ್ನಡ ಅಂಕಿಗಳ ನ್ನು ಬಳಸಿ ರಚಿಸಿರುವುದು ಈ ಕೃತಿಯ ವೈಶಿಷ್ಟ್ಯವಾಗಿದೆ.[೪] ಕನ್ನಡ ಸಾಹಿತ್ಯದ "ಸಾಂಗತ್ಯ" ಛಂದಸ್ಸು ಈ ಕೃತಿಯಲ್ಲಿ ಬಳಕೆಯಾಗಿದೆ.

  • ೭೨೯ ( ೨೭x೨೭) ಚೌಕ(ಮನೆ)ಗಳ ಚೌಕಟ್ಟಿನಲ್ಲಿ ೧೮ ಲಿಪಿಗಳು ಮತ್ತು ೭೦೦ ಭಾಷೆಗಳನ್ನು ಪ್ರತಿನಿಧಿಸುವಂತೆ ಒಂದರಿಂದ ಅರವತ್ನಾಲ್ಕರವರೆಗಿನ ಸಂಖ್ಯೆಗಳನ್ನು ಅನೇಕ ವಿನ್ಯಾಸಗಳಲ್ಲಿ ಅಥವಾ "ಬಂಧ"ಗಳಲ್ಲಿ ಉಪಯೋಗಿಸಲಾಗಿದೆ. [೫] ಇಲ್ಲಿ ಬಳಸಲಾದ ಬಂಧಗಳಲ್ಲಿ ಚಕ್ರಬಂಧ', ಹಂಸಬಂಧ', ವರಪದ್ಮಬಂಧ, ಸಾ(ಸ?)ಗರಬಂಧ, ಸಾ(ಸ?)ರಸಬಂಧ, ಕ್ರೌಂಚಬಂಧ, ಮಯೂರಬಂಧ, ರಾಮಪ(ಪಾ?)ದಬಂಧ, ನಕ್ಷಾಬಂಧ ಮುಂತಾದವು ಸೇರಿವೆ. ಪ್ರತಿಯೊಂದರ ಬಂಧವನ್ನು ಗುರುತಿಸಿ ಸಂಕೇತಗಳನ್ನು ಬಿಡಿಸಿದಾಗ ಅಡಕವಾದ ಮಾಹಿತಿಯನ್ನು ಓದಬಹುದು.

ಸಿರಿಭೂವಲಯದ ವಿಶೇಷತೆ[ಬದಲಾಯಿಸಿ]

  • ಈ ಕೃತಿಯಲ್ಲಿ ಆರು ಲಕ್ಷ ಶ್ಲೋಕಗಳು ಇವೆ ಎಂದು ಹೇಳಲಾಗಿದೆ ಅಂದರೆ ಭಾರತದ ಮಹಾಕಾವ್ಯವಾದ ಮಹಾಭಾರತದಲ್ಲಿ ಇರುವುದರ ಆರು ಪಟ್ಟು!. ಇದರಲ್ಲಿ ಒಟ್ಟು ೨೬ ಅಧ್ಯಾಯಗಳಿದ್ದು ಅದರಲ್ಲಿ ಮೂರು ಅಧ್ಯಾಯಗಳನ್ನು ಮಾತ್ರ ವಿಸಂಕೇತೀಕರಿಸಲಾಗಿದೆ. ರಚನಕಾರನು ಹೇಳುವಂತೆ ಜೈನ ಗ್ರಂಥಗಳಲ್ಲಿನ ಅನೇಕ ತತ್ವಗಳನ್ನು ಇಲ್ಲಿ ವಿವರಿಸಲಾಗಿದೆ.
  • ಕನ್ನಡವಷ್ಟೇ ಅಲ್ಲದೆ ಮರಾಠಿ, ತೆಲುಗು, ಮಲಯಾಳಂ, ಪ್ರಾಕೃತ, ಸಂಸ್ಕೃತ, ಸೇರಿ ದಂತೆ ಅನೇಕ ಭಾಷೆಗಳಲ್ಲಿನ ಕೃತಿಗಳನ್ನೂ ಒಳಗೊಂಡಿದೆ ಎಂದು ಹೇಳಲಾಗಿದೆ. ಬೇರೆ ಬೇರೆ ಅಂಕಿಗಳ ಬದಲಾಗಿ ಬೇರೆ ಬೇರೆ ಅಕ್ಷರಗಳನ್ನು ಹಾಕುವುದರಿಂದ ಬೇರೆಬೇರೆ ಭಾಷೆಗಳ ಪಠ್ಯಗಳನ್ನು ಪಡೆಯಬಹುದು.
  • ರಾಮಾಯಣ, ಮಹಾಭಾರತ, ವೇದಗಳು ಮತ್ತು ಉಪನಿಷತ್ತುಗಳಂತಹ ಸಂಸ್ಕೃತದ ಎಲ್ಲಾ ಪ್ರಮುಖ ಕೃತಿಗಳು ಇಲ್ಲಿದ್ದು ಗೂಢಲಿಪಿಯನ್ನು ಬಿಡಿಸುವುದರಿಂದ ಅವನ್ನು ಪಡೆಯಬಹುದು ಎನ್ನಲಾಗಿದೆ. ಭೌತಶಾಸ್ತ್ರ, ಖಗೋಳ ಶಾಸ್ತ್ರ, ವೈದ್ಯಕೀಯ, ಇತಿಹಾಸ, ಆಕಾಶಯಾನ, ಮುಂತಾದ ವಿಜ್ಙಾನಗಳ ಮಹತ್ವದ ಮಾಹಿತಿಯೂ ಇಲ್ಲಿದೆ ಎನ್ನಲಾಗಿದೆ.
  • ಮೊದಲ ಆವೃತ್ತಿಯ ಸಂಪಾದಕರಾದ ಕರ್ಲಮಂಗಲಂ ಶ್ರೀಕಂಠಯ್ಯನವರು ಇದರಲ್ಲಿ ನೀರಿನಲ್ಲಿ ಮತ್ತು ಆಗಸದಲ್ಲಿ ಪಯಣಿಸುವುದರ ಬಗೆಗೆ ನಿರ್ದೇಶನಗಳು ಇವೆ ಎಂದಿದ್ದಾರೆ. ಆಧುನಿಕ ಅಸ್ತ್ರಗಳ ತಯಾರಿಕೆಯ ಮಾಹಿತಿಯೂ ಇಲ್ಲಿದೆ ಎಂದು ಹೇಳ ಲಾಗಿದೆ. ಈ ಗ್ರಂಥ ಕನ್ನಡದಲ್ಲಿ ಬರೆದಿ ರುವುದಾದರೂ ಅಂಕಿಗಳ ರೂಪದಲ್ಲಿರುವುದರಿಂದ ಬೇರೆ ಭಾಷೆಯ ಜನರೂ ಕೂಡ ಇದನ್ನು ಸುಲಭವಾಗಿ ಗ್ರಹಿಸಬಲ್ಲರು. ಒಟ್ಟು ೭೧೮ ಭಾಷೆಗಳಲ್ಲಿ ಎಲ್ಲಾ ಸಾಹಿತ್ಯ ಮತ್ತು ಕಲೆಗಳು ವೈಜ್ಙಾನಿಕವಾಗಿ ಗಣಿತ ಸ್ವರೂಪದಲ್ಲಿದ್ದು ಈ ಕೃತಿಯನ್ನು ಮಹೋನ್ನತವಾಗಿಯೂ ಮಹಾನ್ ಆಶ್ಚರ್ಯಕರವಾಗಿಯೂ ಮಾಡಿವೆ.

ಅಣುವಿಜ್ಞಾನದ ಮಾಹಿತಿ[ಬದಲಾಯಿಸಿ]

  • ಕುಮುದೇಂದುಮುನಿಯು ತನ್ನ ಸಿರಿಭೂವಲಯದಲ್ಲಿ ಅಣುವಿಜ್ಞಾನದ ಮಾಹಿತಿಯನ್ನು ಕನ್ನಡದಲ್ಲಿ ಬಹಳ ಸರಳವಾಗಿ ವಿವರಿಸಿದ್ದಾನೆ. (ಊ೨o) ಎಂಬ ಆಧುನಿಕ ವಿಜ್ಞಾನ ಸೂತ್ರದ ಕನ್ನಡ ಅವತರಣಿಕೆಯನ್ನು ನಾವು ಸಿರಿಭೂವಲಯದಲ್ಲಿ ಸ್ಪಷ್ಟವಾಗಿ ಕಾಣಬಹುದು! ಅಣುವು ನೀರೊಳಗೆಷ್ಟು |ಅನಲವಾಯುಗಳೆಷ್ಟು| ನೆನೆದು ಸುಡದ ಅಣುವೆಷ್ಟು| ಮುಂತಾಗಿ ವಿವರಿಸಿದ್ದಾನೆ.
  • ತನುವನು ಆಕಾಶಕೆ ಹಾರಿಸಿ ನಿಲಿಸುವ ಘನವೈಮಾನಿಕ ಕಾವ್ಯ ಎಂಬಲ್ಲಿ ಬಾಹ್ಯಾಕಾಶ ತಂತ್ರಜ್ಞಾನದ ವಿಚಾರವನ್ನು ಸೂಚಿಸಿದ್ದಾನೆ. ಇಂದಿನ ಜಗತ್ತಿನ ಅತ್ಯಾಧುನಿಕವಾದ ಗಣಕಯಂತ್ರ ಕ್ರಮ ಹಾಗೂ ಮೊಬೈಲ್ ತಂತ್ರಜ್ಞಾನವೂ ಕುಮುದೇಂದುವಿಗೆ ಕರತಲಾಮಲಕವಾಗಿದ್ದ ವಿಚಾರ. ಯವೆಯಕಾಳಿನ ಕ್ಷೇತ್ರದಳತೆಯೊಳಡಗಿಸಿ. ; ಜೋಡಿಯಂಕದ ಕೂಟದಂಗ ಎಂಬಲ್ಲಿ ಈ ವಿಚಾರವು ನಿರೂಪಿತವಾಗಿದೆ.
  • ಕಟ್ಟಡ ನಿರ್ಮಾಣ ತಂತ್ರಜ್ಞಾನ ಹಾಗೂ ಭೂಮಾಪನ ವಿಜ್ಞಾನಕ್ಕೆ (ಸರ್ವೆ) ಸಂಬಂಧಿಸಿದ ವಿವರಗಳು ಗ್ರಂಥದಲ್ಲಿ ಅಡಗಿವೆಎಂದು ಸಿರಿಭೂವಲಯಸಾರದಲ್ಲಿ ಸುಧಾರ್ಥಿ ಪರಿಚಯಿಸಿರುವುದಿದೆ. ಪ್ರಕೃತ ಸಿರಿಭೂವಲಯ ಸಾಗರರತ್ನಮಂಜೂಷದಲ್ಲಿ ಇನ್ನೂ ಮುಂದುವರೆದು ದೂರವಾಣಿ, ಆಕಾಶವಾಣಿ, ದೂರದರ್ಶನ, ಮುಂತಾದ ಸಮೂಹಮಾಧ್ಯಮಗಳು ಆಧುನಿಕ ವಿಜ್ಞಾನದ ಸಾಧನೆಗಳು ಎಂಬ ತಪ್ಪುಗ್ರಹಿಕೆಯು ಜಗತ್ತಿನಲ್ಲಿ ತುಂಬಿದೆ!
  • ಆದರೆ ಈ ತಂತ್ರಜ್ಞಾನದ ನೈಪುಣ್ಯವನ್ನು ಹೊಂದಿದ್ದ ಕುಮುದಚಂದ್ರನ (ಕುಮುದೆಂದುವಿನ) ಪ್ರತಿಭೆಗೆ ತಲಕಾಡಿನ ಗಂಗರಸ ಸೈಗೊಟ್ಟ ಶಿವಮಾರನೂ, ರಾಷ್ಟ್ರಕೂಟ ಅಮೋಘವರ್ಷ ನೃಪತುಂಗನೂ ಮೆಚ್ಚುಗೆ ಸೂಚಿಸಿದ್ದ ಸಂಗತಿ. ಈ ರೀತಿಯ ಯಶಸ್ಸು ಹಾಗೂ ಕೀರ್ತಿಯಿಂದ ಪಡೆಯಬಹುದಾದ ಅಪಾರ ಸಂಪತ್ತನ್ನು ಕಾಲಿನಿಂದ ಒದೆಯುವ ಮುನಿವಂಶದವರ ಭೂವಲಯ ಎಂಬುದಾಗಿ ಸಿರಿಭೂವಲಯವು ಸೂಚಿಸಿದೆ!
  • ೩೬ನೇ ಅಧ್ಯಾಯದ ಪೂರ್ಣಪದ್ಯಗಳ ಅಶ್ವಗತಿಯ ಅಂತರ್ಸಾಹಿತ್ಯ ಪದ್ಯಸಂಖ್ಯೆ ೫೨-೫೪. ಪಾರಮಾರ್ಥಿಕವಾಗಿ ನಿರುಪಯೋಗಿಯಾದ ಇಂಥ ಲೌಕಿಕ ಸಂಪತ್ತನ್ನು ಕುಮುದೆಂದುಮುನಿಯು ಕಾಲಿನಿಂದ ಒದ್ದು, ಪರಮಾರ್ಥದೆಡೆಗೆ ಸಾಗಿದ್ದಾನೆ ಎಂಬ ವಿಚಾರವನ್ನೂ, ಆಧುನಿಕ ವೈದ್ಯಕೀಯ ವಿಜ್ಞಾನವು ವ್ಯಾಸೆಕ್ಟಮಿ ಟ್ಯೂಬೆಕ್ಟಮಿ ಎಂಬ ಸಂತಾನಹರಣ ಶಸ್ತ್ರಚಿಕಿತ್ಸೆಯನ್ನು ನೂತನವಾಗಿ ರೂಪಿಸಿದೆ ಎಂಬ ವಿಚಾರವು ಲೋಕ ಪ್ರಸಿದ್ಧಿ ಪಡೆದಿದೆ.

ಶೋಧ[ಬದಲಾಯಿಸಿ]

  • ೨೦ನೇ ಶತಮಾನದ ಆರಂಭದಲ್ಲಿ ಎಲ್ಲಪ್ಪಶಾಸ್ತ್ರಿ ಎಂಬ ಆಯುರ್ವೇದಪಂಡಿತರಿಗೆ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿಬೆಟ್ಟದ ಸಮೀಪ ಯಲವಳಿ ಎಂಬ ಊರಿನ ಧರಣೇಂದ್ರಪಂಡಿತ ಎಂಬ ಜೈನ ವಿದ್ವಾಂಸರ ಬಳಿ ಇರುವ ಪುರಾತನ ಹಸ್ತಪ್ರತಿಗಳ ಬಗೆಗೆ ತಿಳಿಯಿತು. ಆ ಕೃತಿಗಳಿಗಾಗಿ ಅವರು ಧರಣೇಂದ್ರಪಂಡಿತರ ಸೋದರ ಸೊಸೆಯನ್ನು ಮದುವೆಯಾದನು.
  • ಪಂಡಿತನ ಮರಣದ ನಂತರ ಅವರ ಮಕ್ಕಳು ಅವರ ವಸ್ತುಗಳನ್ನು ಮಾರಾಟಕ್ಕೆ ಹಚ್ಚಿದರು. ಎಲ್ಲಪ್ಪಶಾಸ್ತ್ರಿಯವರು ಕೂಡಲೇ ತಮ್ಮ ಹೆಂಡತಿಯ ಬಂಗಾರದ ಬಳೆಗಳನ್ನು ಒತ್ತೆ ಇಟ್ಟು ಆ ಹಸ್ತಪ್ರತಿಗಳನ್ನು ತನ್ನ ಕೈವಶ ಮಾಡಿಕೊಂಡರು. [೬]ಆ ಹಸ್ತಪ್ರತಿಯಲ್ಲಿದ್ದ ೧೨೦೦ ಪುಟಗಳಷ್ಟು ಬರವಣಿಗೆ ಅವನನ್ನು ಕಂಗೆಡಿಸಿತು. ಆದಾಗ್ಯೂ ಮೂವತ್ತು ವರುಷಗಳ ಸುದೀರ್ಘ ಶ್ರಮದಾಯಕ ಸಂಶೋಧನೆಯ ನಂತರ ಅವನು ಅದನ್ನು ಅಂಶಿಕವಾಗಿ ಅರ್ಥೈಸಲು ಸಾಧ್ಯವಾಗಿ ೧೯೫೩ರಲ್ಲಿ ಆ ಪುಸ್ತಕದ ಮೊದಲ ಸಂಪುಟವನ್ನು ಹೊರತಂದರು.

ಇತ್ತೀಚೆಗೆ ೫ ಸೆಪ್ಟೆಂಬರ್ ೨೦೧೦ ರಂದು ಸರ್ವ ಭಾಷಾಮಯೀಭಾಷಾ ಸಿರಿಭೂವಲಯ ಗ್ರಂಥ ಸಾರ ಎಂಬ ಪುಸ್ತಕವು ಹುಬ್ಬಳ್ಳಿಯಲ್ಲಿ ಬಿಡುಗಡೆ ಆಯಿತು. ಅದರ ಪ್ರಕಾಶಕರು : ಶ್ರೀ ಕಾಶಿ ಶೇಷ ಶಾಸ್ತ್ರಿ ಚಾರಿಟೇಬಲ್ ಟ್ರಸ್ಟ್, ಬೆಂಗಳೂರು . ಈ ಪುಸ್ತಕದಲ್ಲಿ ಸುಧಾರ್ಥಿ ಹಾಸನ ಅವರು ಮೂಲ ಸಂಶೋಧನೆಯನ್ನು ನಿಜಕ್ಕೂ ಕರ್ಲಮಂಗಲಂ ಶ್ರೀಕಂಠಯ್ಯನವರು ಮಾಡಿದ್ದಾರೆಂದು ತಿಳಿಸಿದ್ದಾರೆ.

ರಚನೆಕಾರ[ಬದಲಾಯಿಸಿ]

  • ಈ ಕೃತಿಯನ್ನು ಜೈನಮುನಿಯಾದ ಕುಮುದೇಂದುಮುನಿಯು ರಚಿಸಿದ್ದಾನೆಂದು ನಂಬಲಾಗಿದೆ. ಕುಮುದೇಂದುಮುನಿಯು ತಾನು ಮಾನ್ಯಖೇಟ(ಮಳಖೇಡ)ದ ಅಮೋಘವರ್ಷನ ಗುರು, ವೀರಸೇನ ಮತ್ತು ಜಿನಸೇನರ ಶಿಷ್ಯ ಎಂದು ಹೇಳಿಕೊಂಡಿದ್ದಾನೆ. ಆದಾಗ್ಯೂ ಈ ಮುನಿಯ ಬಗೆಗೆ ಹೆಚ್ಚೇನೂ ತಿಳಿದುಬಂದಿಲ್ಲ. ಅವನು ಜೀವಿಸಿದ ಕಾಲಾವಧಿಯ ಬಗೆಗೆ ವಿದ್ವಾಸರಲ್ಲಿ ಒಮ್ಮತ ಹೊಂದಿಲ್ಲ.
  • ಮೊದಲ ಆವೃತ್ತಿಯ ಸಂಪಾದಕರಾದ ಕರ್ಲಮಂಗಲಂ ಶ್ರೀಕಂಠಯ್ಯನವರು ಈ ಕೃತಿಯು ಕ್ರಿ.ಶ.೮೦೦ ರ ಹೊತ್ತಿಗೆ ರಚನೆಯಾಗಿದೆ ಎನ್ನುತ್ತಾರೆ. ಆದರೆ ಡಾ|| ವೆಂಕಟಾಚಲ ಶಾಸ್ತ್ರಿಯವರು ಆತನ ಹಾಗೂ ಕೃತಿಯ ಕಾಲವನ್ನು ೧೫ನೇ ಶತಮಾನ ಎಂದು ನಿರ್ಣಯಿಸಿದ್ದಾರೆ. ಅಷ್ಟೇ ಅಲ್ಲ, ಕುಮುದೇಂದು ಮುನಿಯು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿದುರ್ಗದ ಬಳಿಯ ಯಲವಳ್ಳಿ ಎಂಬ ಹಳ್ಳಿಯವನು ಎಂದೂ ಹೇಳುತ್ತಾರೆ. ಅವರು ಈ ಕೃತಿಯು ೧೫೫೦ (೧೯೫೦ ?)-೧೬೦೦ರ ನಡುವಿನ ಅವಧಿಯದು ಎನ್ನುವುದಲ್ಲದೆ ಅದಕ್ಕಿಂತ ಈಚಿನದೂ ಇರಬಹುದು ಎಂದು ಸೂಚಿಸುತ್ತಾರೆ.

ಪ್ರಕಟಣೆ[ಬದಲಾಯಿಸಿ]

  • ಈ ಕೃತಿಯು ಮೊದಲಿಗೆ ಬೆಂಗಳೂರಿನಲ್ಲಿ ಯುಗಾಂತರ ಮುದ್ರಣಾಲಯದಿಂದ ೧೯೫೩ರಲ್ಲಿ ಪ್ರಕಟವಾಯಿತು. ಅದನ್ನು ಬರೆದು ಸಂಪಾದಿಸಿದ್ದು ಆಯುರ್ವೇದ ಪಂಡಿತರಾದ ಎಲ್ಲಪ್ಪಶಾಸ್ತ್ರಿಗಳು, ಸ್ವಾತಂತ್ರ್ಯ ಹೋರಾಟಗಾರರಾದ ಕರ್ಲಮಂಗಲಂ ಶ್ರೀಕಂಠಯ್ಯ ಮತ್ತು ಕನ್ನಡ ಬೆರಳಚ್ಚುಯಂತ್ರದ ಸಂಶೋಧಕರಾದ ಅನಂತಸುಬ್ಬರಾಯರು. ಇದು [[ಕನ್ನಡ ಸಾಹಿತ್ಯ ಪರಿಷತ್|ಕನ್ನಡ ಸಾಹಿತ್ಯ ಪರಿಷತ್ತಿನ] ಆಶ್ರಯದಲ್ಲಿ ಬಿಡುಗಡೆಯಾಯಿತು.
  • ಎರಡನೇ ಅವೃತ್ತಿಯು ೯ ಮಾರ್ಚ್ ೨೦೦೩ರಂದು ಪುಸ್ತಕಶಕ್ತಿ ಪ್ರಕಾಶನವು ಕರ್ನಾಟಕ ದ ರಾಜ್ಯಪಾಲ ಶ್ರೀ ಟಿ.ಎನ್. ಚತುರ್ವೇದಿ ಮತ್ತು ಡಾ.ಸಾ.ಶಿ. ಮರುಳಯ್ಯ, ಬರಹಗಾರ ವ್ಯಾಸರಾಯ ಬಲ್ಲಾಳ, ಪ್ರೊ ಎಸ್. ಕೆ. ರಾಮಚಂದ್ರ ರಾಯರು ಮುಂತಾದ ದಿಗ್ಗಜಗಳ ಸಮ್ಮುಖದಲ್ಲಿ ಬಿಡುಗಡೆ ಆಯಿತು. ಇದನ್ನು ಸಂಪಾದಿಸಿದವರು ಡಾ||ಟಿ.ವಿ.ವೆಂಕಟಾಚಲಶಾಸ್ತ್ರಿ ಮತ್ತು ಎಲ್ಲಪ್ಪಶಾಸ್ತ್ರಿಗಳ ಮಗ ಧರ್ಮಪಾಲರು.

ಪ್ರತಿಕ್ರಿಯೆಗಳು[ಬದಲಾಯಿಸಿ]

ಈ ಕೃತಿಯು ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತ , ಪ್ರಾಕೃತ,ತಮಿಳು ಮತ್ತು ತೆಲುಗು ಸಾಹಿತ್ಯಗಳ ಅಧ್ಯಯನಗಳಲ್ಲಿ ಬಹಳ ಮಹತ್ವ ಹೊಂದಿದೆ. ಇದು ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸದ ಮೇಲೆ ಬೆಳಕು ಬೀರುವಂಥದ್ದು. ಭಾರತೀಯ ಗಣಿತಶಾಸ್ತ್ರದ ಅಭ್ಯಾಸಕ್ಕೆ ಕ್ಕೆ ಇದು ಮಹತ್ವದ ಆಕರಗ್ರಂಥ. ಭಾರತದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಜೀವವಿಜ್ಙಾನಗಳ ಬೆಳವಣಿಗೆಯ ಅಧ್ಯಯನಕ್ಕೆ ಸಹಾಯಕಾರಿಯಾಗಿದೆ. ಶಿಲ್ಪಶಾಸ್ತ್ರದ ಅಧ್ಯಯನಕ್ಕೆ ಸಹಾಯಮಾಡುತ್ತದೆ. ರಾಮಾಯಣ , ಮಹಾಭಾರತ, ಭಗವದ್ಗೀತೆ, ಋಗ್ವೇದ ಮತ್ತು ಇತರ ಪುರಾತನ ಪಠ್ಯಗಳ ವಿಸಂಕೇತೀಕಣ ಸಾಧ್ಯವಾಗುವುದಾದಲ್ಲಿ ಸದ್ಯದಲ್ಲಿ ಬಳಕೆಯಲ್ಲಿರುವ ಆವೃತ್ತಿಗಳೊಂದಿಗೆ ಈ ಆವೃತ್ತಿಗಳ ಹೋಲಿಕೆ ತುಂಬ ಪ್ರಯೋಜನಕಾರಿಯಾದೀತು. ಕಳೆದುಹೋಗಿರುವ ಕೆಲವು ಜೈನಕೃತಿಗಳು ಇಲ್ಲಿ ನಮಗೆ ಮತ್ತೆ ಸಿಕ್ಕಲೂಬಹುದು.

ಕುತೂಹಲಕಾರಿ ಸಂಗತಿಗಳು[ಬದಲಾಯಿಸಿ]

  • ಒಟ್ಟು ೧೬೦೦೦ ಚಕ್ರಗಳು ಇದ್ದು ಅವುಗಳಲ್ಲಿ ೧೨೭೦ ಚಕ್ರಗಳು ಮಾತ್ರ ಸಿಕ್ಕಿವೆ
  • ಒಟ್ಟು ೯ ಕಾಂಡಗಳು ಇವೆ. ದೊರೆತಿರುವ ೧೨೭೦ ಚಕ್ರಗಳು ಮಂಗಲ ಪ್ರಭೃತ ಎಂಬ ಮೊದಲ ಕಾಂಡದಲ್ಲಿವೆ.
  • ಉಳಿದ ೮ ಕಾಂಡಗಳು ದೊರೆತಿಲ್ಲ.
  • ೧೨೭೦ರಲ್ಲಿ ೯೦ ಚಕ್ರಗಳ ವಿಸಂಕೇತೀಕರಣ ಸಾಧ್ಯವಾಗಿದೆ.
  • ಅಂಕೆಗಳ ರೂಪದಲ್ಲಿರುವ ಅಕ್ಷರಸಂಖ್ಯೆ ಹದಿನಾಲ್ಕು ಲಕ್ಷ.
  • ೬ ಲಕ್ಷ ಶ್ಲೋಕಗಳ ವಿಸಂಕೇತಿಕರಣ ಸಾಧ್ಯ ಎಂದು ಹೇಳಲಾಗಿದೆ.
  • ಈ ಕೃತಿಯಲ್ಲಿ ಬಳಸಿದ ಛಂದಸ್ಸನ್ನು ಬಲ್ಲ ಸಮಕಾಲೀನ ಪಂಡಿತರಾರೂ ಇಲ್ಲದ ಕಾರಣ ವಿಸಂಕೇತೀಕರಣವನ್ನು ಗಣಕಯಂತ್ರಗಳ ಸಹಯದಿಂದ ಮಾಡಲಾಗುತ್ತಿದೆ<r>http://csidl.org/bitstream/handle/123456789/549/NCILC-15.pdf Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ.</ref>.
  • ಇನ್ನುಳಿದ ೧೪೭೩೦ ಚಕ್ರಗಳು ಎಲ್ಲಿವೆ ಎಂಬ ಬಗ್ಗೆ ಮಾಹಿತಿ ಇಲ್ಲ. ಅವುಗಳನ್ನು ಪತ್ತೆ ಮಾಡಬೇಕಿದೆ.

ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. http://veda-vijnana.blogspot.in/2014/11/blog-post_12.html
  2. http://veda-vijnana.blogspot.in/2017/09/blog-post_9.html
  3. http://veda-vijnana.blogspot.in/2017/09/blog-post_12.html
  4. "Introduction to Siribhoovalaya, from Deccan Herald". Archived from the original on 2007-09-28. Retrieved 2007-03-07.
  5. "Usage of Saangathya and frame of 729, from The Hindu newspaper". Archived from the original on 2008-02-13. Retrieved 2007-03-07.
  6. Deccan Herald Archived 2010-11-03 ವೇಬ್ಯಾಕ್ ಮೆಷಿನ್ ನಲ್ಲಿ..