ಶೀಷ್ ಮಹಲ್ ಪಟಿಯಾಲಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಮೋತಿ ಮಹಲ್ ಹಿಂಬದಿಯಲ್ಲಿರುವ ಶೀಶ್ ಮಹಲ್ ಅನ್ನು ಮಹಾರಾಜಾ ನರೇಂದ್ರ ಸಿಂಗನು 1847 ರಲ್ಲಿ ನಿರ್ಮಿಸಿದನು. ಇದು ಅಂದಿನ ಪಟಿಯಾಲಾ ರಾಜರ ಮುಖ್ಯ ವಾಸಸ್ಥಾನವಾಗಿತ್ತು. ಈ ಒಂದು ಸ್ಮಾರಕವನ್ನು ಕನ್ನಡಿಗಳ ಅರಮನೆ ಅಥವಾ 'ಪ್ಯಾಲೇಸ್ ಆಫ್ ಮಿರರ್‍ಸ್' ಎಂದು ಕರೆಯಲಾಗುತ್ತದೆ. ಏಕೆಂದರೆ ಇದರ ನಿರ್ಮಾಣದಲ್ಲಿ ಬಣ್ಣದ ಗಾಜುಗಳು ಹಾಗು ಕನ್ನಡಿಗಳು ಬಹುವಾಗಿ ಬಳಸಲ್ಪಟ್ಟಿವೆ. ಆದ್ದರಿಂದಲೆ ಇದನ್ನು ಶೀಶ್(ಹಿಂದಿಯಲ್ಲಿ ಶೀಶಾ ಎಂದರೆ ಕನ್ನಡಿ ಅಥವಾ ಗಾಜು ಎಂದಾಗುತ್ತದೆ) ಮಹಲ್ ಎನ್ನುತ್ತಾರೆ. ಈ ಅರಮನೆಯ ಮುಂದಿರುವ ಸುಂದರವಾದ ಕೆರೆ ಮತ್ತು ಅದಕ್ಕೆ ಕಟ್ಟಲಾಗಿರುವ ಸೇತುವೆ ಈ ಪರಿಸರದ ಒಟ್ಟಾರೆ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಈ ಸೇತುವೆಯನ್ನು ಲಕ್ಷ್ಮಣ್ ಝೂಲಾ ಎಂದು ಕರೆಯುತ್ತಾರೆ. ಈ ಅರಮನೆಯಲ್ಲಿ ಒಂದು ಸಂಗ್ರಹಾಲಯವಿದ್ದು, ಜಗತ್ತಿನ ಹಲವು ಭಾಗಗಳ ಪದಕಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಈ ಅರಮನೆಯ ಸೂಕ್ಷ್ಮವಾದ ಕೆತ್ತನೆಯ ಕೆಲಸ, ಸುಂದರವಾಗಿ ವಿನ್ಯಾಸಗೊಂಡ ಗೋಡೆಗಳು ಅಂದಿನ ರಾಜಸ್ಥಾನ ಹಾಗು ಕಾಂಗ್ರಾ ಭಾಗದ ಕುಶಲಕರ್ಮಿಗಳ ನೈಪುಣ್ಯತೆಯನ್ನು ತೋರುತ್ತದೆ. ಸಾಮಾನ್ಯವಾಗಿ ಪ್ರತಿ ವರ್ಷವೂ ಶೀಶ್ ಮಹಲ್ಲಿನಲ್ಲಿ ಸಾಂಪ್ರದಾಯಿಕ ಉತ್ಸವಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿರುತ್ತದೆ.

ಉಲ್ಲೇಖಗಳು[ಬದಲಾಯಿಸಿ]