ಶಾಂತಾ ಹುಬ್ಳೀಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಾಂತಾ ಹುಬ್ಳೀಕರ್
Born
ರಾಜಮ್ಮ

೧೪ ಏಪ್ರಿಲ್, ೧೯೧೪
Died೧೭ ಜುಲೈ, ೧೯೯೨
(೭೮ ವರ್ಷ)
Occupations
  • ನಟಿ
  • ಗಾಯಕಿ
Spouseಬಾಪುಸಾಹೇಬ್ ಗಿತೆ
Children

ರಾಜಮ್ಮ (೧೪ ಏಪ್ರಿಲ್, ೧೯೧೪ - ೧೭ ಜುಲೈ, ೧೯೯೨), ತಮ್ಮ ತೆರೆಮೇಲಿನ ಶಾಂತಾ ಹುಬ್ಳೀಕರ್ ಎಂಬ ಹೆಸರಿನಿಂದ ಖ್ಯಾತರಾದ ಚಿತ್ರನಟಿ ಮತ್ತು ಗಾಯಕಿ.[೧] ಸ್ವಾತಂತ್ರ್ಯಪೂರ್ವದ ಭಾರತೀಯ ಚಿತ್ರರಂಗದ ಅಭಿನೇತ್ರಿಯಾಗಿ ಹಿಂದಿ ಮತ್ತು ಮರಾಠಿ ಚಿತ್ರಗಳಲ್ಲಿನ ತಮ್ಮ ಅಭಿನಯಕ್ಕೂ ಮತ್ತು ಹಾಡುಗಾರಿಕೆಗೂ ಹೆಸರಾದ ಶಾಂತಾ ಕನ್ನಡ ಮೂಲದವರು.

ಆರಂಭಿಕ ಜೀವನ[ಬದಲಾಯಿಸಿ]

೧೯೧೪–೧೯೩೦[ಬದಲಾಯಿಸಿ]

ಬಾಲ್ಯ

ಶಾಂತಾ ಹುಟ್ಟಿದ್ದು ಹುಬ್ಬಳ್ಳಿ ಬಳಿಯ ಅದರಗುಂಚಿ ಎಂಬ ಊರಿನಲ್ಲಿ ೧೯೧೪ರ ಏಪ್ರಿಲ್ ೧೪ರಂದು. ಅವರ ಹುಟ್ಟುಹೆಸರು ರಾಜಮ್ಮ.[೨] ಶಾಂತಾ ಮೂರನೇ ವಯಸ್ಸಿನಲ್ಲಿದ್ದಾಗ ಅವರ ತಂದೆ ತಾಯಿ ನಿಧನರಾಗಿ, ಅಜ್ಜಿಯ ಆಶ್ರಯದಲ್ಲಿ ಬೆಳೆದರು. ಮೂವರು ಅಕ್ಕತಂಗಿಯರಲ್ಲಿ ಮಧ್ಯದವರಾದ ಶಾಂತಾ ಮತ್ತು ಅವರ ತಂಗಿಯನ್ನು ಹುಬ್ಬಳ್ಳಿಯ ಹತ್ತಿರದ, ಮಕ್ಕಳಿಲ್ಲದ ಸಂಬಂಧಿಕರೊಬ್ಬರಿಗೆ ದತ್ತು ಕೊಟ್ಟು ಸಾಕುವ ವ್ಯವಸ್ಥೆಯಾಗಿ, ದತ್ತುತಾಯಿಯ ಕಟ್ಟುನಿಟ್ಟಿನ ಪರಿಸರದ ಮಧ್ಯೆಯೇ ಪ್ರೌಢಶಾಲೆಯ ತನಕ ಶಾಂತಾ ಓದಿದರು.

ಸಂಗೀತಾಭ್ಯಾಸ

ಎಳವೆಯಿಂದ ಹಾಡುವ ಆಸಕ್ತಿ ಹೊಂದಿದ್ದ ಶಾಂತಾ, ಪ್ರಸಿದ್ಧ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರರಾದ ಅಬ್ದುಲ್ ಕರೀಂ ಖಾನ್ ಸಾಹೇಬರ ಬಳಿ ನಾಲ್ಕು ವರ್ಷ ಹಿಂದೂಸ್ತಾನಿ ಸಂಗೀತಾಭ್ಯಾಸ ಮಾಡಿದರು. ಅಜ್ಜಿಯಿಂದ ಜನಪದ ಗೀತೆ ಮತ್ತು ವಚನಗಳನ್ನು ಕಲಿತಿದ್ದ ಅವರಿಗೆ ಮುಂದೆ ಗಾಯಕಿಯಾಗುವ ಅವಕಾಶಗಳಲ್ಲಿ ಈ ಸಂಗೀತಾಭ್ಯಾಸ ನೆರವಾಯಿತು.

ನಟಿಯಾಗಿ[ಬದಲಾಯಿಸಿ]

ರಂಗಭೂಮಿ ನಟಿಯಾಗಿ

ಶಾಂತಾ ಮೊದಲು ರಂಗನಟಿಯಾಗಿ ಹುಬ್ಬಳ್ಳಿ ಧಾರವಾಡದಾದ್ಯಂತ ಹೆಸರು ಮಾಡಿದರು. ಗುಬ್ಬಿ ವೀರಣ್ಣನವರ ಗುಬ್ಬಿ ಕಂಪನಿ ಸೇರಿದ ಶಾಂತ, ರಂಗಲೋಕದಲ್ಲಿ ಚಿಕ್ಕ ಚಿಕ್ಕ ಪಾತ್ರಗಳನ್ನು ಮಾಡುತ್ತಾ ಮುಂದೆ ಪ್ರಮುಖ ಪಾತ್ರಗಳನ್ನು ಪಡೆದರು ಮಾತ್ರವಲ್ಲ, ಒಳ್ಳೆಯ ಗಾಯಕಿ ಎಂದೂ ಹೆಸರಾದರು.

ಶಾಂತಾ ಅವರ ಹೆಸರು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಸಿದ್ಧಿಗೆ ಬರುತ್ತಲೇ ಪುಣೆಯ ಚಿತ್ರನಿರ್ಮಾಪಕರಿಂದ ಶಾಂತಾ ಅವರಿಗೆ ಅವಕಾಶಗಳು ಬಂದವು. ತಮ್ಮ ೧೮ನೇ ವಯಸ್ಸಿನಲ್ಲಿ ಕರ್ನಾಟಕ ಬಿಟ್ಟು, ಸಿನಿಮಾ ಅವಕಾಶಗಳಿಗೆ ಪುಣೆಗೆ ಶಾಂತಾ ಬಂದರು.

ಸಿನಿಮಾ ನಟಿಯಾಗಿ

೧೯೩೪ರಲ್ಲಿ ನಿರ್ಮಾಣಗೊಂಡ, ಮರಾಠಿ ಮತ್ತು ಹಿಂದಿ ಎರಡರಲ್ಲೂ ತೆರೆಕಂಡ ಭೇಡಿ ರಾಜಕುಮಾರ/ತಾಕ್ಸೇನ್ ರಾಜಪುತ್ರ ಶಾಂತಾ ಅವರ ಮೊದಲ ಸಿನಿಮಾ. ಇಲ್ಲಿ ಸಣ್ಣ ಪಾತ್ರ ಮಾಡಿದ್ದ ಅವರಿಗೆ ಸಿಕ್ಕ ಮೊದಲ ಗಮನಾರ್ಹ ಸಿನಿಮಾ ಎಂದರೆ ೧೯೩೭ರಲ್ಲಿ ಬಂದ ಮರಾಠಿ ಚಿತ್ರ ಕನ್ಹೋಪಾತ್ರ. ಇದು ಮಠಾರಿ ಸಂತೆ ಕನ್ಹೋಪಾತ್ರಳ ಮೇಲೆ ಮಾಡಿದ ಸಿನಿಮಾವಾಗಿತ್ತು. ಇಲ್ಲಿ ಶಾಂತಾರ ನಟನೆ ಮತ್ತು ಹಾಡುಗಾರಿಕೆ ಹೆಚ್ಚಿನ ಪ್ರಶಂಸೆ ಗಳಿಸಿತು. ಇದು ಪುಣೆಯ ಅತಿದೊಡ್ಡ ಚಿತ್ರಸಂಸ್ಥೆಯಾಗಿದ್ದ 'ಪ್ರಭಾತ್ ಫಿಲ್ಮ್ ಕಂಪನಿ'ಯವರ ಗಮನ ಸೆಳೆಯಿತು.

ಪ್ರಭಾತ್ ಫಿಲ್ಮ್ ಕಂಪನಿಯ, ಖ್ಯಾತ ಮರಾಠಿ ಚಿತ್ರ ನಿರ್ದೇಶಕ ವಿ. ಶಾಂತಾರಾಂ ಅವರು ತಮ್ಮ ಮಝ ಮುಳ್ಗ/ಮೇರಾ ಲಡ್ಕ (೧೯೩೮) ಚಿತ್ರದ ನಾಯಕಿಯಾಗಿ ಶಾಂತಾರನ್ನು ಆಯ್ಕೆ ಮಾಡಿದರು.[೩] ಕಂಪನಿಯ ಒಳಗೆ ಮತ್ತು ಹೊರಗೆ ಶಾಂತಾರಾಂ ಅವರ ಈ ನಿರ್ಧಾರ ಅಚ್ಚರಿಗೆ, ಚರ್ಚೆಗೆ ಕಾರಣವಾಗಿತ್ತು. ಅದಾಗಲೇ ಕಂಪನಿಯ ಬಹುಪಾಲು ಎಲ್ಲಾ ಚಿತ್ರಗಳ ಯಶಸ್ವೀ ನಾಯಕಿಯಾಗಿ ಹೆಸರು ಮಾಡಿದ್ದ ಖ್ಯಾತ ಮರಾಠಿ ನಟಿ ಶಾಂತಾ ಆಪ್ಟೆ ಇದ್ದರು. ಅವರನ್ನು ಬಿಟ್ಟು ಹೊಸ ಮತ್ತು ಮರಾಠಿ ಬಾರದ ಕನ್ನಡದ ಹುಡುಗಿಯನ್ನು ಆರಿಸಿಕೊಂಡಿದ್ದು ಚಿತ್ರದ ಮೇಲೆ ಹೆಚ್ಚಿನ ನಿರೀಕ್ಷೆ , ಗಮನ ಬರುವಂತಾಯಿತು. ಶಾಂತಾರಾಂ ನೀಡಿದ ಈ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡ ಶಾಂತಾ ಒಳ್ಳೆಯ ಅಭಿನಯ ಮತ್ತು ಹಾಡುಗಳನ್ನು ಹಾಡಿ ಶಾಂತಾರಾಂ ಅವರನ್ನೂ ಸೇರಿದಂತೆ ಎಲ್ಲಾ ಮರಾಠಿ ಮತ್ತು ಹಿಂದಿ ಪ್ರೇಕ್ಷಕರ ಅಪಾರ ಮೆಚ್ಚುಗೆ ಗಳಿಸಿದರು.

೧೯೩೯ರಲ್ಲಿ ಶಾಂತಾರಾಂ ನಿರ್ದೇಶಿಸಿದ ಮಹತ್ವಪೂರ್ಣ ಸಿನಿಮಾ 'ಮನೂಸ್/ಆದ್ಮಿ'.[೪] ಇದು ವೇಶ್ಯೆಯೊಬ್ಬಳ ಜೀವನವನ್ನು ಕುರಿತಾದ ಸಿನಿಮಾವಾಗಿದ್ದು, ವಸ್ತು-ವಿಷಯ ಮತ್ತು ನಿರೂಪಣೆಗಳೆರಡೂ ಸವಾಲಿನಿಂದ ಕೂಡಿದ್ದಾಗಿತ್ತು. ಬಿಡುಗಡೆಗೊಂಡ ಆ ಚಿತ್ರ ಶಾಂತಾ ಹುಬ್ಳೀಕರರಿಗೆ ಬ್ರಿಟಿಷ್ ಭಾರತದಾದ್ಯಂತ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಆ ಚಿತ್ರದಲ್ಲಿ ಶಾಂತಾ ಹಾಡಿದ ಕಶಲ ಉದ್ಯಾಚಿ ಬಾತ್/ಕಿಸಿಲಿಯೇ ಕಲ್ಕಿ ಬಾತ್ ಹಾಡು ಜನಜನಿತವಾಯಿತು.[೫] ಇದಾದ ಬಳಿಕ ಸಾಲು ಸಾಲಾಗಿ ಮರಾಠಿ ಚಿತ್ರಗಳಲ್ಲಿ ಶಾಂತಾ ನಟಿಸಿದರು.

ಕನ್ನಡ ಚಿತ್ರರಂಗದಲ್ಲಿ

ಭಾರತದಾದ್ಯಂತ ಶಾಂತಾ ಹುಬ್ಳೀಕರ್ ಹೆಸರು ಮುನ್ನೆಲೆಗೆ ಬರುತ್ತಿದ್ದಂತೆ ಕನ್ನಡದ ಹಲವರು ಶಾಂತಾ ಅವರನ್ನು ಕರೆತರುವ ಯತ್ನ ಮಾಡಿದರಾದರೂ ಬಿಡುವಿಲ್ಲದ ಶಾಂತಾ ಮರಾಠಿಯಲ್ಲೇ ಮಗ್ನರಾದರು. ಆದರೆ ಗುಬ್ಬಿ ವೀರಣ್ಣ ಅವರು ಸ್ವತಂತ್ರ ನಿರ್ಮಾಪಕರಾಗಿ ನಿರ್ಮಾಣ ಮಾಡುತ್ತಿದ್ದ ಜೀವನ ನಾಟಕ (೧೯೪೨) ಚಿತ್ರಕ್ಕೆ ಶಾಂತಾ ಅವರನ್ನು ಕರೆತಂದು ಚಿತ್ರ ಮಾಡಿದರು. ಈ ಚಿತ್ರದಲ್ಲಿ ಕೆಂಪರಾಜ ಅರಸ್ ಮೊದಲ ಬಾರಿಗೆ ನಾಯಕನಾಗಿ ನಟಿಸಿದ್ದರು. ಇವರೊಂದಿಗೆ ಎಂ. ವಿ. ರಾಜಮ್ಮ, ಬಿ. ಜಯಮ್ಮ ಮತ್ತು ಶಾಂತಾ ಹುಬ್ಳೀಕರ್ ನಟಿಸಿದರು. ಇದು ಶಾಂತಾ ನಟಿಸಿದ ಏಕೈಕ ಕನ್ನಡ ಚಲನಚಿತ್ರ.[೬]

ಆತ್ಮಕಥೆ[ಬದಲಾಯಿಸಿ]

ಶಾಂತಾ ತಮ್ಮ ಆತ್ಮಕಥೆ ‛ಕಶಲ ಉದ್ಯಾಚಿ ಬಾತ್’ ಮರಾಠಿಯಲ್ಲಿ ಬರೆದಿದ್ದಾರೆ.[೭] ಇದರ ಕನ್ನಡಾನುವಾದ ‛ನಾಳೀನ ಚಿಂತ್ಯಾಕ ’ ಪುಸ್ತಕವನ್ನು ಅಕ್ಷತಾ ಹುಂಚದಕಟ್ಟೆ ಅವರು ತಮ್ಮ ಅಹರ್ನಿಶಿ ಪ್ರಕಾಶನದಿಂದ ಪ್ರಕಟಿಸಿದ್ದಾರೆ.

ನಿಧನ[ಬದಲಾಯಿಸಿ]

ತಮ್ಮ ಕೊನೆಯ ದಿನಗಳನ್ನು ಪುಣೆಯ ವೃದ್ಧಾಶ್ರಮದಲ್ಲಿ ಕಳೆದ ಶಾಂತಾ ಜುಲೈ ೧೯, ೧೯೯೨ರಂದು ನಿಧನವಾದರು.

ಚಿತ್ರಗಳ ಪಟ್ಟಿ[ಬದಲಾಯಿಸಿ]

ಶಾಂತಾ ನಟಿಸಿದ ಆಯ್ದ ಚಿತ್ರಗಳು:

  • ಭೇಡ್ಕ ರಾಜಕುಮಾರ್ (೧೯೩೪)
  • ಕನ್ಹೋಪಾತ್ರ (೧೯೩೭)
  • ಮೇರಾ ಲಡ್ಕ (೧೯೩೮)
  • ಮನೂಸ್/ಆದ್ಮಿ (೧೯೩೯)
  • ಜೀವನ ನಾಟಕ (೧೯೪೨)

ಉಲ್ಲೇಖಗಳು[ಬದಲಾಯಿಸಿ]

  1. Shukla, Rupali (7 September 2014). "V Shantaram's revolutionary film 'Manoos' completes 75 years". Bennett, Coleman & Co. Ltd. Times of India. Retrieved 16 April 2021.
  2. "Imprints and Images of Indian Film Music". facebook.com.
  3. "Prabhat Films List". Prabhat films.com. Archived from the original on 2012-07-22. Retrieved 2021-04-16.
  4. "Still of Shanta Hublikar". Arts and Culture.google.com.
  5. "Shantaram's 'Aadmi'". indiavideo.org.
  6. "Celebrity Shanta Hublikar". Chiloka.com.
  7. "Shanta Hublikar's autobiography "Kashala Udyachi Baat"". Srividya publication(Amazon.in). Jan 1, 2017.