ಶಿರಸಂಗಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶಿರಸಂಗಿ
ಗ್ರಾಮ
ದೇಶ ಭಾರತ
ರಾಜ್ಯಕರ್ನಾಟಕ
ಜಿಲ್ಲೆಬೆಳಗಾವಿ
Languages
 • Officialಕನ್ನಡ
Time zoneUTC+5:30 (IST)

ಶಿರಸಂಗಿಯು ಕರ್ನಾಟಕಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮವಾಗಿದೆ. ಇದು ಸುಕ್ಷೇತ್ರ ಶಕ್ತಿ ಪೀಠವಾಗಿದ್ದು, ಪುರಾತನ ವಿಶ್ವಕರ್ಮ ಕುಲದೇವತೆ ಶ್ರೀ ಕಾಳಿಕಾ ಮಾತೆಯ ದೇವಸ್ಥಾನವಿದೆ. ವಿಜಯನಗರ ಸಾಮ್ರಾಜ್ಯದ ಶ್ರೀ ಕೃಷ್ಣ ದೇವರಾಯನ ಕಾಲದಲ್ಲಿ ಅವನ ಸಾಮಂತರು ಶಿರಸಂಗಿಯಲ್ಲಿ ಕೋಟೆ ಕಟ್ಟಿ ತಮ್ಮ ಕಾರ್ಯಸ್ಥಾನವಾಗಿಕೊಂಡಿದ್ದರು ಎಂದು ಇತಿಹಾಸದಲ್ಲಿ ಬರುತ್ತದೆ


ಬೆಳಗಾವಿ ಜಿಲ್ಲೆಯ ಶಿರಸಂಗಿಯ ಕಾಳಿಕಾ ದೇವಿಯ ದೇವಸ್ಥಾನ ರಾಜ್ಯದ ಪ್ರಮುಖ ಶಕ್ತಿ ಕ್ಷೇತ್ರಗಳಲ್ಲಿ ಒಂದು. ಶಿರಸಂಗಿಗೆ ಸಾವಿರಾರು ವರ್ಷಗಳ ಇತಿಹಾಸವಿದೆ.

ರಾಮಾಯಣ ಕಾಲದಲ್ಲಿ ದಶರಥ ಮಹಾರಾಜ ಪುತ್ರಕಾಮೇಷ್ಠಿ ಯಾಗ ಮಾಡಲು ನಿಶ್ಚಯಿಸಿದಾಗ ಮುಖ್ಯ ಅಗ್ನಿಹೋತ್ರಿಯಾಗಿ ಶಿರಸಂಗಿಯಲ್ಲಿ ತಪಸ್ಸು ಮಾಡುತ್ತಿದ್ದ ವಿಶ್ವಕರ್ಮ ವಂಶಸ್ಥನಾದ ಕಾಶ್ಯಪ ಗೋತ್ರದ ವಿಭಾಂಡಕ ಮುನಿಯ ಮಗನಾದ ಶೃಂಗ ಋಷಿಯನ್ನು ಆಹ್ವಾನಿಸಿದನೆಂಬ ಐತಿಹ್ಯವಿದೆ.

ರಾಮ, ಲಕ್ಷ್ಮಣರು ಇಲ್ಲಿಗೆ ಭೇಟಿ ನೀಡಿದ್ದರು ಎನ್ನಲಾಗಿದೆ. ಈ ಮಾಹಿತಿ ಕ್ರಿ.ಶ 1148ರಲ್ಲಿ ಕಲ್ಯಾಣ ಚಾಲುಕ್ಯ ಅರಸು ಇಮ್ಮಡಿ ಜಗದೇಕಮಲ್ಲನ ಕಾಲದಲ್ಲಿ ಕಾಳಿಕಾ ದೇವಸ್ಥಾನದ ಬಳಿ ನೆಟ್ಟ ಶಿಲಾ ಶಾಸನಗಳಿಂದ ತಿಳಿದುಬರುತ್ತದೆ.

ಪುರಾಣ ಕಾಲದಲ್ಲಿ ಶಿರಸಂಗಿಯಲ್ಲಿ ಋಷಿಗಳು ಮಾಡುತ್ತಿದ್ದ ಯಜ್ಞ ಯಾಗಗಳಿಗೆ ರಾಕ್ಷಸರಿಂದ ಆಗಾಗ ಭಂಗ ಉಂಟಾಗುತ್ತಿತ್ತು. ಅದನ್ನು ತಪ್ಪಿಸಲು ಕಾಳಿಕಾ ದೇವಿ ಇಲ್ಲಿ ನೆಲೆಸಿ ರಾಕ್ಷಸರನ್ನು ಸಂಹರಿಸಿದಳು ಎಂಬ ಐತಿಹ್ಯವಿದೆ. ಕಾಳಿಕಾ ದೇವಿ ವಿಶ್ವಕರ್ಮ ಸಮಾಜದವರ ಕುಲದೇವತೆ. ದೇವಿಯ ದರ್ಶನಕ್ಕೆ ಎಲ್ಲಾ ಸಮಾಜದ ಜನರೂ ಬರುತ್ತಾರೆ.

ಪ್ರತಿ ವರ್ಷದ ಯುಗಾದಿಯಂದು ಇಲ್ಲಿಗೆ ಬಂದು ತಾವು ಬೆಳೆದ ಹೊಸ ಗೋಧಿ ಧಾನ್ಯವನ್ನು ಕಾಳಿಕಾ ದೇವಿಗೆ ಅರ್ಪಿಸಿ, ಅದರಿಂದ ತಯಾರಿಸಿದ ಪ್ರಸಾದವನ್ನು ಚೈತ್ರ ಶುದ್ಧ ಪ್ರತಿಪದೆಯಂದು ಸ್ವೀಕರಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂಬುದು ಇಲ್ಲಿಗೆ ಬರುವ ವಿಶ್ವಕರ್ಮ ಸಮಾಜದ ಭಕ್ತರ ನಂಬಿಕೆ.

ಪ್ರತಿ ಯುಗಾದಿ ಸಂದರ್ಭದಲ್ಲಿ ಇಲ್ಲಿ ಐದು ದಿನಗಳ ಜಾತ್ರೆ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ. ಯುಗಾದಿ ಅಮವಾಸ್ಯೆಯ ಬೆಳಿಗ್ಗೆ ದೇವಿಯ ಅಭಿಷೇಕದೊಂದಿಗೆ ಜಾತ್ರಾ ಕಾರ್ಯಕ್ರಮಗಳು ಆರಂಭವಾಗುತ್ತವೆ.

ಧ್ವಜಾರೋಹಣ, ದೇವಿಗೆ ಹೊಸ ಗೋಧಿಯ (ನಿಧಿ) ಅರ್ಪಣೆ, ನಂತರ ಚೈತ್ರಶುದ್ಧ ಪ್ರತಿಪದೆಯ ಬೆಳಿಗ್ಗೆ 5 ಘಂಟೆಗೆ ಬುತ್ತಿ ಹಾರಿಸುವ ಕಾರ್ಯಕ್ರಮ ನಡೆಯುತ್ತದೆ. ಕಾಳಿಕಾದೇವಿ ರಾಕ್ಷಸರ ಸಂಹಾರ ಮಾಡಿದ ಸಂದರ್ಭದ ಸಂಕೇತವಾಗಿ ಈ ಆಚರಣೆ ನಡೆಯುತ್ತದೆ.

ಅನ್ನವನ್ನು ರುಂಡದ ಆಕಾರದಲ್ಲಿ ಮಾಡಿ ಹಾರಿಸಲಾಗುತ್ತದೆ. ಈ ಬುತ್ತಿ ಯಾರಿಗೆ ಸಿಗುತ್ತದೋ ಅವರ ಜೀವನದಲ್ಲಿ ಅನ್ನ ಮತ್ತು ವಸ್ತ್ರಕ್ಕೆ ಕೊರತೆ ಇರುವುದಿಲ್ಲ ಎಂಬ ನಂಬಿಕೆ ಇದೆ. ಬುತ್ತಿ ಸಿಕ್ಕವರಿಗೆ ಭಾಗ್ಯದ ಬಾಗಿಲು ತೆರೆಯುತ್ತದೆ ಎಂಬ ನಂಬಿಕೆ ಇದೆ.

ದೇವಸ್ಥಾನದ ಹಿಂದೆ ಇರುವ ಬೆಟ್ಟದಲ್ಲಿ ಭೀಮಾರತಿ ಹೊಂಡವಿದೆ. ರಾಕ್ಷಸರ ಸಂಹಾರದ ನಂತರ ಕಾಳಿಕಾದೇವಿ ತನ್ನ ಖಡ್ಗವನ್ನು ಈ ಹೊಂಡದಲ್ಲಿ ತೊಳೆದಿದ್ದರಿಂದ ಅದಕ್ಕೆ ಖಡ್ಗತೀರ್ಥವೆಂಬ ಹೆಸರು ಬಂತು ಎಂಬ ಐತಿಹ್ಯವಿದೆ. ಆದರೆ ಈ ಹೊಂಡದ ನಿರ್ವಹಣೆಯನ್ನು ಸರಿಯಾಗಿ ಮಾಡುತ್ತಿಲ್ಲ.

ಸಾಕಷ್ಟು ಇತಿಹಾಸವಿರುವ ಶಿರಸಂಗಿ ಕ್ಷೇತ್ರ ಅಭಿವೃದ್ಧಿಯಿಂದ ವಂಚಿತವಾಗಿದೆ. ಸವದತ್ತಿಯ ರೇಣುಕಾದೇವಿ ಕ್ಷೇತ್ರದ ಮಾದರಿಯಲ್ಲಿ ಶಿರಸಿಂಗಿಯನ್ನು ಸರ್ಕಾರ ಅಭಿವೃದ್ಧಿ ಪಡಿಸಬೇಕು ಎಂಬುದು ಭಕ್ತರ ಆಗ್ರಹ. ಶಿರಸಂಗಿಗೆ ಬರಲು ಉತ್ತಮ ರಸ್ತೆ, ಪ್ರವಾಸಿಗರಿಗೆ ವಸತಿ ವ್ಯವಸ್ಥೆ ಸೌಲಭ್ಯ ಕಲ್ಪಿಸಿದರೆ ಈ ಕ್ಷೇತ್ರ ಇನ್ನೂ ಹೆಚ್ಚು ಅಭಿವೃದ್ಧಿಯಾಗಲಿದೆ.

ಶಿರಸಂಗಿ ರಾಮದುರ್ಗದಿಂದ 18 ಕಿ.ಮೀ, ಸವದತ್ತಿಯಿಂದ 20 ಕಿ.ಮೀ. ದೂರವಿದೆ. ಬೆಳಗಾವಿ ಕಡೆಯಿಂದ ಬರುವವರು ಯರಗಟ್ಟಿ, ಮುನವಳ್ಳಿ ಮಾರ್ಗವಾಗಿ ಶಿರಸಂಗಿಗೆ ತಲುಪಬಹುದು. ಅಲ್ಲಿಗೆ ಹೋಗಿ ಬರಲು ಬಸ್ ವ್ಯವಸ್ಥೆ ಇದೆ.

ಈ ಕ್ಷೇತ್ರದಲ್ಲಿ ಮದುವೆ, ಉಪನಯನ, ಜಾವಳ ಇತ್ಯಾದಿ ಕಾರ್ಯಗಳನ್ನು ಮಾಡಲು ಅನುಕೂಲವಿದೆ. ಇಲ್ಲಿ ನಿತ್ಯ ಅನ್ನ ಸಂತರ್ಪಣೆ ನಡೆಯುತ್ತದೆ. ಭಕ್ತರಿಗೆ ವಸತಿ ವ್ಯವಸ್ಥೆ ಇದೆ. ವಸತಿ ಸೌಲಭ್ಯಕ್ಕೆ ಮೊದಲೇ ಅನುಮತಿ ಪಡೆಯಬೇಕು.

ದೇವಸ್ಥಾನದಲ್ಲಿ ಬೆಳಗಿನ 4 ಗಂಟೆಯಿಂದ ರಾತ್ರಿ ಹತ್ತು ಗಂಟೆಯವರೆಗೆ ಪೂಜೆ, ಅಭಿಷೇಕ, ಆರತಿ, ಪಂಚಾರತಿಗಳ ಸೇವೆಗಳು ನಡೆಯುತ್ತವೆ. ಶುಕ್ರವಾರ, ಮಂಗಳವಾರ, ಹುಣ್ಣಿಮೆ, ಅಮಾವಾಸ್ಯೆ, ಹಬ್ಬ ಹರಿದಿನಗಳಂದು ವಿಶೇಷ ಪೂಜೆ ಇರುತ್ತದೆ. ಇಲ್ಲಿ ಹರಕೆಗಳನ್ನು ತೀರಿಸಲು, ವಿವಿಧ ಅರ್ಚನೆಗಳನ್ನು ಮಾಡಿಸಲು ಅವಕಾಶವಿದೆ.

ದೇವಿಗೆ ಕುಂಕುಮಾರ್ಚನೆ, ಪಂಚಾಮೃತ ಅಭಿಷೇಕ, ಮಹಾಭಿಷೇಕ, ಸಂಕಲ್ಪ, ಸಹಸ್ರನಾಮಾರ್ಚನೆ, ನೈವೇದ್ಯ, ಅಲಂಕಾರ, ತೊಟ್ಟಿಲುಸೇವೆ ಇತ್ಯಾದಿ ಸೇವೆಗಳು ನಡೆಯುತ್ತವೆ.

"https://kn.wikipedia.org/w/index.php?title=ಶಿರಸಂಗಿ&oldid=756665" ಇಂದ ಪಡೆಯಲ್ಪಟ್ಟಿದೆ