ಮಲ್ಲಕಂಬ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
A mallakhamba team of Bombay Sappers performs on the pole.
Performing mallakhamb

ಮಲ್ಲಕಂಬ - ಈ ನೆಲದಲ್ಲಿ ಹುಟ್ಟಿದ ಅಪ್ಪಟ ದೇಶೀಯ ಕ್ರೀಡೆ. ಕೆಲ ಮೀಟರ್ಸ್ ಎತ್ತರದ ಕಟ್ಟಿಗೆ ಕಂಬವನ್ನು ಕುಸ್ತಿ ಪಟ್ಟುಗಳ ಸಾಧನೆಗಾಗಿ ಬಳಸಲಾಗುತ್ತಿತ್ತು. ಈ ಹೆಸರೇ ಸೂಚಿಸುವಂತೆ (ಮಲ್ಲ+ಕಂಬ) ಮಲ್ಲರು ಉಪಯೋಗಿಸುವ ಕಂಬ. ಆದರೆ ನಂತರದ ವರ್ಷಗಳಲ್ಲಿ ಇದೇ ಒಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು.

ಇತಿಹಾಸ[ಬದಲಾಯಿಸಿ]

ಮಲ್ಲಕಂಬವು ಯುದ್ಧ ತರಬೇತಿ ಅಂಗವಾಗಿಯೇ ರೂಪುಗೊಂಡಿರಬಹುದು. ಪುರಾಣದ ಭೀಮ, ದುರ್ಯೋಧನ, ಜರಾಸಂಧ, ವಾಲಿ ಸುಗ್ರೀವ, ಹನುಮಂತ ಮುಂತಾದ ಮಲ್ಲರು ಕುಸ್ತಿ ಪಟ್ಟುಗಳನ್ನು ಅಭ್ಯಸಿಸಲು ದಪ್ಪ ಕಂಬದ (ಡೆಮಿ) ಬಳಸುತ್ತಿದ್ದರಂತೆ. ಶ್ರೀ ಕೃಷ್ಣ ಚಪಲತೆಗಾಗಿ ತೆಳುವಾದ ಕಂಬದ ಮೇಲೆ ಕಸರತ್ತು ಮಾಡಿದನಂತೆ. ಆದರೆ ಮಲ್ಲಕಂಬ ಕುರಿತು ನಿರ್ದಿಷ್ಟ ದಾಖಲೆ ಸಿಗುವುದು-ಕ್ರಿ.ಶ. 1135ರಲ್ಲಿ, ಕಲ್ಯಾಣ ಚಾಲುಕ್ಯ ಸೋಮೇಶ್ವರ ರಚಿಸಿದ 'ಮಾನಸೋಲ್ಲಾಸ ಎಂಬ ವಿಶ್ವಕೋಶದಲ್ಲಿ; ಮಲ್ಲರು ಕಟ್ಟಿಗೆ ಕಂಬದ ಮೇಲೆ ಪಟ್ಟಗಳನ್ನು ಅಭ್ಯಸಿಸುತ್ತಿದ್ದರು ಎಂಬ ಉಲ್ಲೇಖವಿದೆ.

ಏಳು ಶತಮಾನಗಳ ನಂತರ ಮರಾಠಾ ದೊರೆ ಎರಡನೇ ಪೇಶ್ವೇ ಬಾಜಿರಾವ್‍ನ ಕಾಲದಲ್ಲಿ ಈ ಕ್ರೀಡೆಗೆ ವಿಶೇಷ ಪ್ರಾಧಾನ್ಯ ಲಭ್ಯವಾಯಿತು. ಇವನ ಆಶ್ರಿತ ಹಾಗೂ ಆಸ್ಥಾನ ಗುರು ಶ್ರೀ ಬಾಳಂಭಟ್ಟ ದಾದಾ ದೇವಧರ (1780-1840) ಉತ್ತಮ ಕುಸ್ತಿಪಟುವಲ್ಲದೆ ರಾಜ್ಯಾಂಗದ ದಕ್ಷ ಶಿಕ್ಷಕನೂ ಆಗಿದ್ದ. ಅಗಾಧ ಶಕ್ತಿ ಪ್ರದರ್ಶನ ಮಾಡುತ್ತಿದ್ದ ಈತನನ್ನು ಅವತಾರ ಪುರುಷನೆಂದು ಜನ ನಂಬಿದ್ದರು. ಶಕ್ತಿಯ ಜೊತೆಗೆ ಚಪಲತೆ, ಚಾಕಚಕ್ಯತೆ ಮೂಲಕ ಎದುರಾಳಿಗಳನ್ನು ಸದೆಬಡಿಯುವುದು ಸುಲಭವೆಂದು ನಂಬಿದ್ದ ಈತ, ಅಂಥ ವ್ಯಾಯಾಮಕ್ಕಾಗಿ ಬಳಸಿಕೊಂಡಿದ್ದು ಮಲ್ಲಕಂಬವನ್ನು.

ಮುಂದೆ ಬಾಳಂಭಟ್ಟ ಬನಾರಸದಲ್ಲಿ ಒಂದು ಕುಸ್ತಿ ಅಖಾಡಾ ಪ್ರಾರಂಭಿಸಿದರು. ಇದರಿಂದ ಉತ್ತೇಜಿತರಾದ ಅವರು ಅಮೃತಸರದಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಚರಿಸಿ, ಕುಸ್ತಿಯಲ್ಲಿ ಅನೇಕ ಪ್ರಶಸ್ತಿ ಪಡೆಯುವುದರ ಜೊತೆಗೆ ಮಲ್ಲಕಂಬಕ್ಕೆ ಜನಪ್ರಿಯತೆಯನ್ನೊದಗಿಸಿಕೊಟ್ಟರು. ಆಗ ಮಲ್ಲಕಂಬದಲ್ಲಿ ಸ್ಥಿರ, ನೇತಾಡುವ, ಬಾಟಲಿ ಮೇಲಿನ ಬೆತ್ತದ ಹಾಗೂ ಹಗ್ಗದ ಹೀಗೆ ಅನೇಕ ಪ್ರಕಾರಗಳನ್ನು ಆವಿಷ್ಕರಿಸಿ ಪ್ರಚುರಪಡಿಸಿದರು. ಅವರ ಪ್ರಖ್ಯಾತಿಯಿಂದ ಮಲ್ಲಕಂಬ ಗರಡಿಮನೆಯ ಅವಿಭಾಜ್ಯ ಅಂಗವಾಯಿತು.

ಬಾಲಗಂಗಾಧರ ತಿಲಕರು ನಂತರ ಇದಕ್ಕೆ ಆಶ್ರಯದಾತರಾದರು. ಅವರೇ ಸ್ಥಾಪಿಸಿದ ಅಮರಾವತಿಯ ಹನುಮಾನ್ ವ್ಯಾಯಾಮಶಾಲೆಯಲ್ಲಿ ಮಲ್ಲಕಂಬದ ತರಬೇತಿಗೆ ಅವಕಾಶ ಕಲ್ಪಿಸಲಾಯಿತು. ಆಗ ಇದೊಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು. 1936ರ ಒಲಿಂಪಿಕ್ ಕ್ರೀಡೆಗಳಲ್ಲಿ, ಹಿಟ್ಲರನ ಎದುರು, ಈ ಶಾಲೆ ಮಲ್ಲಕಂಬ ಪ್ರದರ್ಶನ ನೀಡಿ ಮೆಚ್ಚುಗೆ ಪಡೆಯಿತು. ಇದರ ನಂತರ ಮಿರಜ್ ದೊರೆ ಪಟವರ್ಧನ ಮಹಾರಾಜ 'ವ್ಯಾಯಾಮ ಜ್ಞಾನಕೋಶ ಎಂಬ ಒಂಬತ್ತು ಬೃಹತ್ ಕ್ರೀಡಾ ಕೋಶಗಳನ್ನು ಪ್ರಕಟಿಸಿದ. ಅದರಲ್ಲಿ ಆರನೇ ಕೋಶ ಮಲ್ಲಕಂಬಕ್ಕೆ ಮೀಸಲಾಗಿದ್ದು, ಪೂರ್ಣ ಮಾಹಿತಿಯನ್ನೊದಗಿಸುತ್ತದೆ.

ಅಲ್ಲಿಂದ ಸಾವಕಾಶವಾಗಿ ಕಣ್ಮರೆಯಾಗುತ್ತ ಸಾಗಿದ್ದ ಈ ಕ್ರೀಡೆಗೆ ಪುನರ್ಜನ್ಮ ನೀಡಲು 1981ರಲ್ಲಿ ರಾಷ್ಟ್ರೀಯ ಮಲ್ಲಕಂಬ ಮಹಾಮಂಡಳ ಸ್ಥಾಪಿಸಲಾಯಿತು. ಅಲ್ಲಿಂದ ಇದು ಪ್ರತಿವರ್ಷ ರಾಷ್ಟ್ರೀಯ ಮಲ್ಲಕಂಬ ಪಂದ್ಯಾವಳಿ ನಡೆಸುತ್ತ ಬಂದಿದೆ. ಕರ್ನಾಟಕ ರಾಜ್ಯ ಮಲ್ಲಕಂಬ ಸಂಸ್ಥೆ ಆಗಿನಿಂದಲೇ ಕಾರ್ಯ ನಿರ್ವಹಿಸಿ, ಮಲ್ಲಕಂಬದ ಜನಪ್ರಿಯತೆಗೆ ಪ್ರಯತ್ನಿಸುತ್ತಲಿದೆ.

ಮಲ್ಲಕಂಬದ ಬಗೆಗಳು ಮತ್ತು ನಿಯಮಾವಳಿಗಳು[ಬದಲಾಯಿಸಿ]

ಮಲ್ಲಕಂಬ ಮಹಾಮಂಡಳ ರೂಪಿಸಿರುವ ನಿಯಮಾವಳಿಗಳಲ್ಲಿ ಕೇವಲ ಮೂರು ಬಗೆಯ ಮಲ್ಲಕಂಬಗಳಲ್ಲಿ ಸ್ಪರ್ಧೆ ನಡೆಯುತ್ತಲಿವೆ. ಅವುಗಳೆಂದರೆ- ಸ್ಥಿರ, ನೇತಾಡುವ ಹಾಗೂ ಹಗ್ಗದ ಮಲ್ಲಕಂಬಗಳು.

ಸ್ಥಿರ ಮಲ್ಲಕಂಬ 70-80 ಸೆಂಟಿಮೀಟರ್‍ನಷ್ಟು ಭೂಮಿಯಲ್ಲಿ ಹೂತಿದ್ದು, ಮೇಲ್ಭಾಗದಲ್ಲಿ 260-280 ಸೆಂಟಿಮೀಟರ್ ಎತ್ತರ, ತುದಿಯಲ್ಲಿ 18-10 ಸೆಂಟಿಮೀಟರ್, ಕುತ್ತಿಗೆ ಹಾಗೂ ಮೇಲ್ಭಾಗದಲ್ಲಿ 18-20 ಸೆಂಟಿಮೀಟರ್‍ನ ನಾಬ್ ಇರುತ್ತದೆ. ತೇಗದ ಕಟ್ಟಿಗೆಯಿಂದ ವೃತ್ತಾಕಾರವಾಗಿ ಮಾಡಲಾದ ಈ ಕಂಬದ ಕೆಳಗಿನ ಸುತ್ತಳತೆ 53-55 ಸೆಂಟಿಮೀಟರ್ ಮೇಲೆ ಹೋದಂತೆ ಕಡಿಮೆಯಾಗುತ್ತ ಕುತ್ತಿಗೆಯ ಕೆಳಭಾಗದಲ್ಲಿ ಇದರ ಸುತ್ತಳತೆ 30-35 ಸೆಂಟಿಮೀಟರ್ ಇರುತ್ತದೆ. ತುಂಬಾ ನುಣುಪಾಗಿದ್ದು ಇದಕ್ಕೆ ಔಡಲ ಎಣ್ಣೆ ಸವರಲಾಗುತ್ತದೆ. ಸ್ಥಿರ ಮಲ್ಲಕಂಬವನ್ನು ಮೇಲಿನಿಂದ 170-190 ಸೆಂಟಿಮೀಟರ್‍ನಷ್ಟು ಕತ್ತರಿಸಿದರೆ ಅದು ನೇತಾಡುವ ಮಲ್ಲಕಂಬವಾಗುತ್ತದೆ. ಮೇಲ್ತುದಿಯಲ್ಲಿ ಒಂದು ಕಬ್ಬಿಣದ ಹುಕ್ ಹಾಕಿ ನೇತುಬಿಡಲಾಗುವುದು. ಆಗ ಇದರ ಕೆಳ ತುದಿ ನೆಲದಿಂದ 65-70 ಸೆಂಟಿಮೀಟರ್ ಮೇಲಿರಬೇಕು.

ಹಗ್ಗದ ಮಲ್ಲಕಂಬವನ್ನು ವಿಶೇಷ ನೂಲಿನಿಂದ ತಯಾರಿಸಿದ್ದು, 5 ರಿಂದ 5.5 ಮೀ. ಉದ್ದವಲ್ಲದೆ 18-20 ಮಿಲಿಮೀಟರ್ ಸುತ್ತಳತೆಯನ್ನು ಹೊಂದಿರುತ್ತದೆ.

ಸ್ಪರ್ಧೆಗಳು ನಾಲ್ಕು ವಯೋಮಾನಗಳ ಗುಂಪಿನಲ್ಲಿ (12 ವರ್ಷದೊಳಗೆ, 14ರೊಳಗೆ, 18ರೊಳಗೆ ಹಾಗೂ 18 ವರ್ಷ ಮೇಲ್ಪಟ್ಟು) ನಡೆಯುತ್ತಲಿದ್ದು, ಪ್ರತಿ ಗುಂಪಿನಲ್ಲಿ ತಂಡದ ನಾಲ್ಕು ಸ್ಪರ್ಧಿಗಳಿಗೆ ಮಾತ್ರ ಅವಕಾಶವಿದೆ. ಪುರುಷರಿಗೆ (ಸೀನಿಯರ್ ವಿಭಾಗ) ಸ್ಥಿರ ಹಾಗೂ ನೇತಾಡುವ ಮಲ್ಲಕಂಬವಾದರೆ ಕಿರಿಯರಿಗೆ ಸ್ಥಿರ ಮಲ್ಲಕಂಬದಲ್ಲಿ ಮಾತ್ರ ಸ್ಪರ್ಧೆ. ಮಹಿಳೆಯರಿಗೆ ಕೇವಲ ಹಗ್ಗದ ಮಲ್ಲಕಂಬ ಸ್ಪರ್ಧೆಗಳು.

ಇದರಲ್ಲಿ ಕಡ್ಡಾಯ ಹಾಗೂ ಐಚ್ಛಿಕ ಎಂಬ ಎರಡು ಸೆಟ್‍ಗಳಿವೆ. ಪ್ರತಿ ಸೆಟ್‍ನಲ್ಲಿ ಹತ್ತು ಚಟುವಟಿಕೆಗಳಿದ್ದು 90 ಸೆಕೆಂಡುಗಳಲ್ಲಿ ಮುಗಿಸಬೇಕು. ಇದಕ್ಕೆ 10 ಅಂಕಗಳು. ಎರಡೂ ಸೆಟ್‍ನ ಒಟ್ಟು ಅಂಕಗಳನ್ನು ಸೇರಿಸಿ ಸ್ಥಾನ ನೀಡಲಾಗುವುದು. ಚಟುವಟಿಕೆಗಳಲ್ಲಿ ದಶರಂಗ, ವೇಲ್, ತಿರುವು, ಯೋಗಾಸನ ಮುಂತಾದವುಗಳಿದ್ದು ವಿಶೇಷ ಚಾಕಚಕ್ಯತೆ, ಚಪಲತೆ, ವೇಗ ಹಾಗೂ ಮೈಮಣಿತದ ಆಧಾರಗಳನ್ನು ಹೊಂದಿರುತ್ತದೆ.

ದೇಶವಿದೇಶಗಳಲ್ಲಿ[ಬದಲಾಯಿಸಿ]

ಮಲ್ಲಕಂಬಕ್ಕೆ ಅತ್ಯಂತ ಶ್ರೇಷ್ಠ ಪ್ರದರ್ಶನ ಮೌಲ್ಯವಿದೆ. ನೋಡುಗರನ್ನು ಮಂತ್ರಮುಗ್ಧರನ್ನಾಗಿಸಬಲ್ಲ ಇದು ಉಳಿದೆಲ್ಲ ಕ್ರೀಡೆಗಳಿಗೂ ಸಹಕಾರಿ. ರಷ್ಯದಲ್ಲಿ ಜರುಗಿದ 'ಭಾರತ ಉತ್ಸವ ಕಾರ್ಯಕ್ರಮದಲ್ಲಿ ಮಲ್ಲಕಂಬ ಸಾಕಷ್ಟು ಜನಪ್ರಿಯತೆ ಪಡೆಯಿತು. ರಾಜಕಪೂರ್, ನೆಹರೂ, ನಂತರ ರಷ್ಯನ್ನರ ಮನಗೆದ್ದ ಸಂಗತಿಯೆಂದರೆ ಈ ಮಲ್ಲಕಂಬ ಎಂದು ಅಲ್ಲಿನ ಪತ್ರಿಕೆ ಹಾಡಿ ಹೊಗಳಿವೆ. ಈಗೀಗ ವಿದೇಶಗಳಲ್ಲೂ ಸಾಕಷ್ಟು ಪ್ರದರ್ಶನಗಳು ನಡೆಯುತ್ತಲಿದ್ದು ವಿದೇಶಿಯರನ್ನು ಆಕರ್ಷಿಸುತ್ತಲಿದೆ. ಇದರ ಪರಿಣಾಮ ಮಲ್ಲಕಂಬವನ್ನು ಇತರ ಕ್ರೀಡೆಗಳ ಚಟುವಟಿಕೆಯ ತರಬೇತಿಗಾಗಿ ಆಯ್ಕೆಮಾಡಿಕೊಳ್ಳುವಂಥ ಸಂಶೋಧನೆಗಳು ಪ್ರಾರಂಭವಾಗಿವೆ.

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಮಲ್ಲಕಂಬ&oldid=1161812" ಇಂದ ಪಡೆಯಲ್ಪಟ್ಟಿದೆ